ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಜುಲೈ 4. ಸ್ವಾಮಿ ವಿವೇಕಾನಂದರು ದೇಹತ್ಯಾಗ ಮಾಡಿದ ದಿನ.

ಜುಲೈ 4. ಸ್ವಾಮಿ ವಿವೇಕಾನಂದರು ದೇಹತ್ಯಾಗ ಮಾಡಿದ ದಿನ. ಜಗತ್ತು ಕಂಡ ಅತ್ಯದ್ಬುತ ಸಂತನೊಬ್ಬ ತನ್ನ ಸಾವಿನ ಮುನ್ಸೂಚನೆಗಳನ್ನು ನೀಡುತ್ತಾ ಕೊನೆಗೆ ತಾನೇ ಆರಿಸಿಕೊಂಡ ದಿನವೇ ದೇಹತ್ಯಾಗ ಮಾಡಿದ ಆ ರೋಮಹರ್ಷಕ ಘಟನಾವಳಿಗಳನ್ನು ಮೆಲುಕು ಹಾಕುವುದಕ್ಕಾಗಿ ಈ ಬರಹ. ಸ್ವಾಮಿ ಪುರುಷೋತ್ತಮಾನಂದ ಅವರು ಬರೆದಿರುವ ‘ವಿಶ್ವಮಾನವ ವಿವೇಕಾನಂದ’ ಪುಸ್ತಕದ ಕೊನೆಯ ಭಾಗದಿಂದ ಈ ಬರಹವನ್ನು ಆರಿಸಿಕೊಳ್ಳಲಾಗಿದೆ. ದಯವಿಟ್ಟು ಓದಿ…

ಸ್ವಾಮಿ ವಿವೇಕಾನಂದರೊಮ್ಮೆ ಮಿಸ್ ಮೆಕ್ ಲಾಡಳಿಗೆ ಹೇಳಿದ್ದರು, “ನಾನು ನನ್ನ ನಲವತ್ತನೇ ವರ್ಷವನ್ನು ನೋಡುವುದಿಲ್ಲ.”

ಆಗ ಅವರಿಗೆ 39 ವರ್ಷ ನಡೆಯುತ್ತಿತ್ತು. ಮಿಸ್ ಮೆಕಲಾಡ್ ಮರು ಪ್ರಶ್ನೆ ಹಾಕಿದಳು..

“ಸ್ವಾಮೀಜೀ ಬುದ್ಧ ತನ್ನ ಮಹಾಕಾರ್ಯವನ್ನು ಸಾಧಿಸಿದ್ದು ತನ್ನ 40-80 ರ ನಡುವಿನ ಅವಧಿಯಲ್ಲಲ್ಲವೇ.?”

“ನಾನು ನನ್ನ ಸಂದೇಶವನ್ನು ನೀಡಿಯಾಯಿತು ನಾನಿನ್ನು ಹೋಗಬೇಕು”

“ಏಕೆ ಹೋಗಬೇಕು ಎನ್ನುತ್ತೀರಿ?”

“ದೊಡ್ಡ ಮರದ ನೆರಳಲ್ಲಿ ಇತರ ಗಿಡಗಳು ಬೆಳೆದು ದೊಡ್ಡವಾಗಲಾರವು. ಚಿಕ್ಕವರಿಗೆ ಬೆಳೆಯಲು ಅವಕಾಶ ಮಾಡಿಕೊಡಬೇಕಾದರೆ ನಾನು ಹೋಗಬೇಕು.!”

1902 ಜುಲೈ 2 ರಂದು ಸೋದರಿ ನಿವೇದಿತಾ ಸ್ವಾಮೀಜಿಯವರನ್ನು ಭೇಟಿಯಾಗಲು ಬಂದಿದ್ದಳು. ಆಕೆಯ ವಾದವೊಂದಕ್ಕೆ ಉತ್ತರಿಸಿದ ವಿವೇಕಾನಂದರು “ಬಹುಶಃ ನೀನೆನ್ನುವುದೇ ಸರಿ ಮ್ಯಾರ್ಗಟ್, ಆದರೆ ಈಗ ನನ್ನ ಮನಸ್ಸು ಇತರ ಚಿಂತನೆಯಲ್ಲಿ ಮುಳುಗಿಹೋಗಿದೆ. ನಾನೀಗ ಸಾವಿಗೆ ಸಿದ್ಧನಾಗುತ್ತಿದ್ದೇನೆ.” ಇದನ್ನು ಕೇಳಿ ನಿವೇದಿತಾ ದುಃಖಿತಳಾದಳು.

ಆ ದಿನ ಸ್ವಾಮೀಜಿ ತಮ್ಮ ಕೈಯಾರೆ ಆಕೆಗೆ ಉಣಬಡಿಸಿದರು. ಊಟದ ನಂತರ ತಾವೇ ಆಕೆಗೆ ಕೈತೊಳೆಯಲು ನೀರು ಸುರಿದು ಟವೆಲ್ಲಿನಿಂದ ಕೈ ಒರೆಸಿದರು.! ನಿವೇದಿತಾ ಸಂಕೋಚದಿಂದ ಕುಗ್ಗಿ ಹೋದಳು. “ಸ್ವಾಮೀಜಿ, ಈ ರೀತಿಯ ಸೇವೆಯನ್ನು ನಾನು ನಿಮಗೆ ಮಾಡಬೇಕೇ ಹೊರತು ನೀವು ನನಗೆ ಮಾಡಬಾರದು.!” ಎಂದು ಆಕೆಯೆಂದಾಗ ಸ್ವಾಮೀಜಿ ಗಂಭೀರವಾಗಿ ನುಡಿದರು..

  ಪರಿವರ್ತಿನಿ ಏಕಾದಶಿ - ಪೂಜೆ ವಿಧಾನ, ಮಹತ್ವ

“ಏಸುಕ್ರಿಸ್ತ ತನ್ನ ಶಿಷ್ಯರ ಪಾದವನ್ನೇ ತೊಳೆದ.!”

“ಆದರೆ ಅದು ಅವನ ಜೀವನದ ಕಟ್ಟಕಡೆಯ ಬಾರಿ….” ಎಂಬ ಉತ್ತರ ನಿವೇದಿತೆಯ ನಾಲಿಗೆಯ ತುದಿಗೆ ಬಂದಿತ್ತು, ಆದರೆ ಅದೇನೋ ಒತ್ತಿ ಹಿಡಿದಂತಾಗಿ ಒಳಗೇ ಉಳಿದುಕೊಂಡಿತು.

“ನರೇಂದ್ರ ತನ್ನ ಕೆಲಸವನ್ನು ಮುಗಿಸಿದ ಮೇಲೆ, ತಾನು ಯಾರು, ಎಲ್ಲಿಂದ ಬಂದೆ ಎಂಬುದು ಅರಿವಾದಾಗ, ಅವನು ಶರೀರದಲ್ಲಿ ಒಂದು ಕ್ಷಣವೂ ಇರಬಯಸದೆ ನಿರ್ವಿಕಲ್ಪ ಸಮಾಧಿಯಲ್ಲಿ ಲೀನನಾಗಿಬಿಡುತ್ತಾನೆ”

..ಎಂಬ ಶ್ರೀರಾಮಕೃಷ್ಣರ ಮಾತುಗಳು ಸ್ವಾಮೀಜಿಯವರ ಗುರುಭಾಯಿಗಳ ಕಿವಿಯಲ್ಲಿ ಒಂದೇ ಸಮನೆ ಪ್ರತಿಧ್ವನಿಸುತ್ತಿತ್ತು. ಗುರುಭಾಯಿಗಳಲ್ಲೊಬ್ಬರು ಸುಮ್ಮನೆ ಕೇಳಿದರು…

“ಶ್ರೀರಾಮಕೃಷ್ಣರು ಹೀಗೆ ಹೇಳಿದ್ದರಲ್ಲಾ, ಈಗ ನಿಮಗೆ ನೀವು ಯಾರೆಂಬುದು ಗೊತ್ತಾಗಿದೆಯೇ..?!”

ಅತ್ಯಂತ ಗಂಭೀರ ದನಿಯಲ್ಲಿ ನುಡಿದರು ಸ್ವಾಮೀಜಿ..‌.

“ಹೌದು, ಈಗ ನನಗೆ ಗೊತ್ತಾಗಿದೆ.!”

ಸಿಡಿಲಿನಂತ ಉತ್ತರಕ್ಕೆ ಎಲ್ಲರೂ ಮೂಕವಿಸ್ಮಿತರಾದರು.

ಜೂನ್ ಕೊನೆಯ ವಾರ ಸ್ವಾಮೀಜಿಯವರು ಬಂಗಾಳಿ ಪಂಚಾಂಗವನ್ನು ತೆರೆದು ಯಾವುದೋ ಕಾರ್ಯಕ್ಕಾಗಿ ಶುಭಮುಹೂರ್ತವನ್ನು ಹುಡುಕುತ್ತಿದ್ದಂತೆ ತೋರಿತು. ಯಾವುದಿರಬಹುದು ಅಂತಹ ಕಾರ್ಯ? ಯಾರಿಗೂ ಏನೂ ತೋಚಲಿಲ್ಲ.  ಸ್ವಾಮೀಜಿಯವರ ಮಹಾಸಮಾಧಿಯ ನಂತರವೇ ಸೋದರ ಸಂನ್ಯಾಸಿಗಳಿಗೆಲ್ಲಾ ಅವರು ಪಂಚಾಂಗವನ್ನು ನೋಡುತ್ತಿದ್ದುದರ ರಹಸ್ಯ ಅರಿವಾದದ್ದು.!

ಅವರು ಹುಡುಕಾಡಿ ಆರಿಸಿಕೊಂಡ ದಿನ ಜುಲೈ 4, ಶುಕ್ರವಾರ..!

ಸ್ವಾಮೀಜಿಯವರ ಮಹಾಪ್ರಸ್ಥಾನಕ್ಕೆ ಮೂರು ದಿನಕ್ಕೆ ಮೊದಲು ಸ್ವಾಮಿ ಪ್ರೇಮಾನಂದರ ಜೊತೆ ಮಾತನಾಡುತ್ತಾ ಗಂಗೆಯ ದಡದ ಮೇಲೊಂದು ಸ್ಥಳದತ್ತ ಬೆರಳು ಮಾಡಿ ತೋರಿಸಿ ಗಂಭೀರವಾಗಿ ನುಡಿದರು….

“ನಾನು ಶರೀರ ಬಿಟ್ಟ ಮೇಲೆ ಇಲ್ಲಿ ದಹನ ಮಾಡಿ!”

ಅಂದು 1902 ಜುಲೈ 4. ಸ್ವಾಮೀಜಿಯವರ ಅಂತಿಮ ದಿನ. ಎಂದಿನಂತೆ ಬೇಗ ಎದ್ದ ಸ್ವಾಮೀಜಿ ತಮ್ಮ ಗುರುಭಾಯಿಗಳೊಂದಿಗೆ ಹಿಂದಿನ ದಿನಗಳ ಮಧುರ ಸ್ಮೃತಿಗಳನ್ನು ಮೆಲುಕು ಹಾಕಿದರು‌. ಎಂಟು ಗಂಟೆಯ ವೇಳೆಗೆ ದೇವಾಲಯಕ್ಕೆ ಹೋಗಿ ಕಿಟಕಿ ಬಾಗಿಲುಗಳನ್ನೆಲ್ಲಾ ಮುಚ್ಚಿ ಮೂರು ಗಂಟೆಗಳ ಕಾಲ ಅಪೂರ್ವ ಧ್ಯಾನದಲ್ಲಿ ಮುಳುಗಿಹೋದರು.! ಒಳಗೆ ಏನು ನಡೆಯುತ್ತಿದೆಯೆಂದು ಯಾರು ತಾನೇ ಅರಿಯಬಲ್ಲರು?

  ಅರ್ಜುನನ ಮಗ ಅರವಣನ ಮಹಾಭಾರತದ ಉಪ ಕತೆ

ದೇವಮಂದಿರದಿಂದ ಕೆಳಗಿಳಿದು ಬಂದು ವಿಶಾಲವಾದ ಹುಲ್ಲು ಹಾಸಿನ ಮೇಲೆ ಭಾರವಾದ ಹೆಜ್ಜೆಗಳನ್ನಿಡುತ್ತಾ ನಡೆದಾಡತೊಡಗಿದ ಸ್ವಾಮೀಜಿಯವರು ಇದ್ದಕ್ಕಿದ್ದಂತೆಯೇ ನಿಂತುಬಿಟ್ಟರು.! ಅವರ ಅಂತರಾಳದ ಭಾವನೆಯೊಂದು ಮೌನವನ್ನು ಸೀಳಿಕೊಂಡು ಪಿಸುದನಿಯಾಗಿ ಕೇಳಿಬಂದಿತು,

“ಇನ್ನೊಬ್ಬ ವಿವೇಕಾನಂದನಿದ್ದಿದ್ದರೆ ಅವನಿಗೆ ತಿಳಿಯುತ್ತಿತ್ತು ಈ ವಿವೇಕಾನಂದ ಏನು ಮಾಡಿದ್ದಾನೆ ಎಂದು..! ಇರಲಿ.. ಕಾಲಾಂತರದಲ್ಲಿ ಮತ್ತೆಷ್ಟು ಮಂದಿ ವಿವೇಕಾನಂದರು ಉದಿಸಲಿರುವರೋ..!?”

ಆ ದಿನ ಮಧ್ಯಾಹ್ನದ ವಿಶ್ರಾಂತಿಯ ನಂತರ ಬ್ರಹ್ಮಚಾರಿಗಳಿಗೆ ಮೂರು ಗಂಟೆಗಳಷ್ಟು ದೀರ್ಘಕಾಲ ಸಂಸ್ಕೃತ ವ್ಯಾಕರಣ ತರಗತಿ ನಡೆಸಿದರು. ಸಂಜೆಯಾಗುತ್ತಿದ್ದಂತೆ ಸ್ವಾಮೀಜಿಯವರ ಮನಸ್ಸು ಹೆಚ್ಚು ಹೆಚ್ಚು ಅಂತರ್ಮುಖವಾಗುತ್ತಾ ಬಂದಿತು. ಸಂಜೆಯ ಆರತಿಯ ಘಂಟಾನಾದ ಕೇಳುತ್ತಿದ್ದಂತೆಯೇ ಅವರು ತಮ್ಮ ಕೋಣೆಗೆ ತೆರಳಿ ಕಿಟಕಿ ಬಾಗಿಲುಗಳನ್ನೆಲ್ಲಾ ಮುಚ್ಚಿ ಜಪಮಾಲೆಯನ್ನು ಹಿಡಿದು ಗಂಗೆಗೆ ಅಭಿಮುಖವಾಗಿ (ಹಿಂದೆಂದೂ ಆ ರೀತಿ ಕುಳಿತಿರಲಿಲ್ಲ) ಜಪಕ್ಕೆ ಕುಳಿತರು. ಒಂದು ಗಂಟೆಯ ಬಳಿಕ ತಮ್ಮ ಪರಿಚರ್ಯೆ ಮಾಡುತ್ತಿದ್ದ ಬ್ರಹ್ಮಚಾರಿಯನ್ನು ಒಳಕರೆದು ಸ್ವಲ್ಪ ಗಾಳಿ ಹಾಕುವಂತೆ ಹೇಳಿ ಜಪಮಾಲೆ ಹಿಡಿದೇ ಮಲಗಿಕೊಂಡರು, ಸ್ವಲ್ಪ ಹೊತ್ತಾದ ಮೇಲೆ, “ಗಾಳಿ ಹಾಕಿದ್ದು ಸಾಕು, ಈ ಪಾದಗಳನ್ನು ಸ್ವಲ್ಪ ತಿಕ್ಕು” ಎಂದು ಹೇಳಿ ನಿದ್ರೆಯಲ್ಲಿ ಮುಳುಗಿದರು‌. ಹೀಗೆಯೇ ಮತ್ತೆ ಒಂದು ಗಂಟೆ ಕಳೆಯಿತು.  ಬಳಿಕ ಅವರ ಕೈ ಸ್ವಲ್ಪ ಮಾತ್ರ ಅಲುಗಿತು‌. ಆಗ ಅವರು ಒಂದು ದೀರ್ಘವಾದ ಉಸಿರೆಳೆದರು. ಮತ್ತೆರಡು ನಿಮಿಷಗಳ ಕಾಲ ನಿಶ್ಯಬ್ದ. ಮತ್ತೊಮ್ಮೆ ಅವರು ದೀರ್ಘವಾಗಿ ಉಸಿರೆಳೆಯುತ್ತಿದ್ದಂತೆ ಅವರ ದೃಷ್ಟಿ ಎರಡೂ ಹುಬ್ಬುಗಳ ನಡುವೆ ಕೇಂದ್ರಿತವಾಯಿತು. ಮುಖದಲ್ಲಿ ಅಲೌಕಿಕ ದಿವ್ಯತೆಯೊಂದು ಮೂಡಿ ಬರುತ್ತಿದ್ದಂತೆಯೇ ಅವರು ಇನ್ನಿಲ್ಲವಾದರು.!

ಸುದ್ದಿ ತಿಳಿದು ಬಂದ ‌ಸ್ವಾಮಿ ಬ್ರಹ್ಮಾನಂದರು ಬಿಕ್ಕುತ್ತಾ ನುಡಿದರು “ಓಹ್, ಹಿಮಾಲಯವು ನಮ್ಮಿಂದ ಕಣ್ಮರೆಯಾಯಿತು.!”

  ಸಂತೋಷದ ಧ್ವನಿ - ಝೆನ್ ಕಥೆ

ಅಂದಿಗೆ ಸ್ವಾಮೀಜಿಯವರ ವಯಸ್ಸು ಕೇವಲ 39 ವರ್ಷ, 5 ತಿಂಗಳು, 24 ದಿನ..!

“ನಾನು 40 ನೆಯ ವರ್ಷವನ್ನು ಕಾಣುವುದಿಲ್ಲ” ಎಂಬ ಅವರ ಭವಿಷ್ಯವಾಣಿ ಸತ್ಯವಾಗಿತ್ತು.!

ಸ್ವಾಮೀಜಿಯವರು ನಿರ್ದೇಶಿಸಿದ್ದ ಸ್ಥಳದಲ್ಲಿ ನಿರ್ಮಿಸಲಾದ ಚಿತಾವೇದಿಕೆಯಲ್ಲಿ ಅವರ ದೇಹವನ್ನಿರಿಸಿ ಅಗ್ನಿಸ್ಪರ್ಶ ಮಾಡಲಾಯಿತು. ಅಗ್ನಿದೇವ ತನ್ನ ಧಗಧಗಿಸುವ ಜ್ವಾಲೆಗಳಿಂದ ಚಿತೆಯನ್ನಾವರಿಸಿದ. ಸನಿಹದಲ್ಲೇ ನಿಂತಿದ್ದ ನಿವೇದಿತಾ ಮುಖವನ್ನು ಮುಚ್ಚಿಕೊಂಡಳು. ಅವಳ ಮನದಲ್ಲಿ ಒಂದೇ ಒಂದು ಆಸೆಯಿತ್ತು – ಅದು ‘ಸ್ವಾಮೀಜಿಯವರ ಮಂಚವನ್ನು ಮುಚ್ಚಿದ್ದ ಕಾಷಾಯವಸ್ತ್ರದ ಒಂದು ತುಂಡನ್ನು ತೆಗೆದಿರಿಸಿಕೊಳ್ಳಬೇಕು’ ಎಂಬುದು.! ಸ್ವಾಮಿ ಶಾರದಾನಂದರು ಅದನ್ನು ತೆಗೆದುಕೊಡಲು ಮುಂದಾಗಿದ್ದರು, ಆದರೆ ಅದೇಕೋ ಆಕೆ ಅದನ್ನು ತೆಗೆದುಕೊಳ್ಳಲು ಹಿಂಜರಿದಳು. ಈಗ ನಿವೇದಿತಾ ತನ್ನ ಮುಖವನ್ನು ಮುಚ್ಚಿಕೊಂಡು ನಿಂತಿದ್ದಾಗ ಆಕೆಯ ತೋಳಿಗೆ ಏನೋ ತಗುಲಿತು‌.! ಏನದು? ಅದು ‘ಚಿತಾಗ್ನಿಯಿಂದ ಹಾರಿಬಂದ ಅರ್ಧ ಸುಟ್ಟ ಕಾಷಾಯವಸ್ತ್ರದ ಒಂದು ತುಂಡು..!!’ ಅದನ್ನವಳು ಕಣ್ಣಿಗೊತ್ತಿಕೊಂಡು ಇಟ್ಟುಕೊಂಡಳು‌.

ಜುಲೈ 5 ರಂದು, ಅಂದರೆ ಸ್ವಾಮೀಜಿಯವರು ಶರೀರವನ್ನು ತ್ಯಜಿಸಿದ ಮರುದಿನ ಬೆಳಿಗ್ಗೆ ಇತ್ತ ಮದ್ರಾಸು ಮಠದಲ್ಲಿದ್ದ ಸ್ವಾಮಿ ರಾಮಕೃಷ್ಣಾನಂದರಿಗೆ ಬಾಗಿಲು ತಟ್ಟಿದ ಸದ್ದು ಕೇಳಿತು..!

“ಯಾರು..?”

ಎನ್ನುವಷ್ಟರಲ್ಲೇ ಒಂದು ಧ್ವನಿ ನುಡಿಯಿತು..

“…ಶಶಿ, ನಾನು ನನ್ನ ಶರೀರವನ್ನು ಉಗಿದುಬಿಟ್ಟೆ.‌!”

ರಾಮಕೃಷ್ಣಾನಂದರಿಗೆ ಈ ಧ್ವನಿಯ ಪರಿಚಯವಿದೆ..! ಹೌದು… ಇದು ತಮ್ಮ ಪರಮಪ್ರಿಯ ಸೋದರ ವಿವೇಕಾನಂದರದೇ ಸರಿ…!  ಆದರೆ ಏನಿರಬಹುದು ಇದರ ಅರ್ಥ..?

ಕೆಲವೇ ಗಂಟೆಗಳಲ್ಲಿ ತಂತಿ ವಾರ್ತೆ ತಲುಪಿತು.

‘ತಮ್ಮ ಪ್ರಿಯ ನಾಯಕ, ನೆಚ್ಚಿನ ನರೇನ್ ಇಹಲೋಕವನ್ನು ತ್ಯಜಿಸಿಬಿಟ್ಟಿದ್ದಾನೆ‌‍‌..!!’

Leave a Reply

Your email address will not be published. Required fields are marked *

Translate »