ಪ್ರತಿಕ್ಷಣವನ್ನೂ ಆನಂದದಾಯಕ ವಾಗಿಸಿಕೊಳ್ಳುವ ಕಲೆ
ವ್ಯಕ್ತಿಯೊಬ್ಬ ದಾರಿಯಲ್ಲಿ ನಡೆದು ಹೋಗುತ್ತಿದ್ದಾಗ, ವಯಸ್ಸಾದ ಭಿಕ್ಷುಕನೊಬ್ಬ ಭಿಕ್ಷೆಗಾಗಿ ಅವನ ಎದುರು ಕೈಚಾಚಿದ. ಆ ಭಿಕ್ಷುಕನಿಗೆ ಕಣ್ಣು ಅಷ್ಟಾಗಿ ಕಾಣುತ್ತಿರಲಿಲ್ಲ, ಸಾಕಷ್ಟು ವಯಸ್ಸು ಬೇರೆ ಆಗಿತ್ತು. ಈ ವ್ಯಕ್ತಿ ತನ್ನ ಕಿಸೆಯೊಳಗೆ ಕೈ ಹಾಕಿ ಕಾಸಿಗಾಗಿ ತಡಕಾಡಿದ. ಪರ್ಸನ್ನು ಮನೆಯಲ್ಲಿಯೇ ಮರೆತು ಬಿಟ್ಟು ಬಂದಿರುವುದು ಅವನಿಗೆ ನೆನಪಾಯ್ತು. ತಕ್ಷಣ ಆ ಭಿಕ್ಷುಕನ ಕೈಹಿಡಿದು, “ನಿನಗೆ ಕೊಡಲು, ನನ್ನ ಜೇಬಿನಲ್ಲಿ ಏನೂ ಇಲ್ಲ, ಪರ್ಸನ್ನು ಮನೆಯಲ್ಲೇ ಮರೆತು ಬಿಟ್ಟು ಬಂದಿದ್ದೇನೆ, ಇನ್ನೊಮ್ಮೆ ಯಾವಾಗಲಾದರೂ ನೀನು ಸಿಕ್ಕಾಗ ಕೊಡುವೆ, ದಯವಿಟ್ಟು ಕ್ಷಮಿಸು” ಎಂದು ಹೇಳಿದ.
ಆಗ ಭಿಕ್ಷುಕ, "ಹೋಗಲಿ ಬಿಡಿ ಅಪ್ಪಾರೆ, ಈಗ ಪರ್ಸಿನ ಮಾತೇಕೆ? ನೀವು ನನಗೆ ಬೇರೆ ಯಾರೂ ಕೂಡದೇ ಇದ್ದಿದ್ದನ್ನು ಕೊಟ್ಟಿದ್ದೀರಿ, ನನಗೆ ಅದೇ ತೃಪ್ತಿಯಾಯಿತು, ನೀವು ನನ್ನ ಕೈಯನ್ನು ನಿಮ್ಮ ಕೈಯಲ್ಲಿ ಹಿಡಿದಿರಿ, ನಮ್ಮಂತವರ ಕೈಯನ್ನು ಯಾರು ಮುಟ್ಟುತ್ತಾರೆ? ಈ ದಾರಿಯಲ್ಲಿ ಇನ್ನೊಮ್ಮೆ ನೀವು ಯಾವಾಗಲಾದರೂ ಸಿಕ್ಕಾಗ, ಕ್ಷಣ ಮಾತ್ರವಾದರೂ ನನ್ನ ಕೈಯನ್ನು ಇದೇ ರೀತಿಯಲ್ಲಿ ಹಿಡಿದುಕೊಳ್ಳಿ, ಅದೇ ನನಗೆ ದೊಡ್ಡ ಭಿಕ್ಷೆ"..ಎಂದ.
ಹೀಗೆ ಭಿಕ್ಷುಕರ ಕೈಯನ್ನು ಯಾರು ತಾನೆ ಹಿಡಿಯುತ್ತಾರೆ ? ನಾವು ಭಿಕ್ಷೆ ಹಾಕುವುದೇ ದೊಡ್ಡ ವಿಷಯವಾಗಿರುವಾಗ, ಅವನ ಭಾವನೆಯ ಬಗ್ಗೆ, ಯಾರು ಯಾಕೆ ತಲೆಕೆಡಿಸಿಕೊಳ್ಳುತ್ತೇವೆ ? ಆ ವ್ಯಕ್ತಿಯ ಹಾಗೆ, ಕೊಡಲು ಏನಿಲ್ಲ ಕಣಪ್ಪಾ, ಎಂದು ಸಮಾಧಾನವಾಗಿ ಹೇಳುವಷ್ಟು ಮನಸ್ಸಾದರೂ ನಮ್ಮಲ್ಲಿ ಎಲ್ಲಿದೆ? ಮುಂದಕ್ಕೆ ಹೋಗು, ಎಂದು ತಾತ್ಸಾರದಿಂದ ಧಿಮಾಕಿನಲ್ಲಿ ಹೇಳುತ್ತೇವೆ. ಇನ್ನು ಭಿಕ್ಷುಕನ ಕೈ ಹಿಡಿದು ಪ್ರೇಮ ಪೂರ್ಣತೆಯಿಂದ ಮಾತನಾಡಿಸುವ ಮನಸ್ಥಿತಿ ನಮಗೆ ಹೇಗೆ ಬರಲು ಸಾಧ್ಯ? ಈತ ಯಾರೋ ಬಹಳ ಅಪರೂಪದ ವ್ಯಕ್ತಿ.
ಯಾರಿಗಾದರೂ, ಏನನ್ನಾದರೂ ಕೊಡುವುದಕ್ಕಿಂತ, ಪ್ರೇಮ ಪೂರ್ಣತೆಯಿಂದ ಎರಡು ಮಾತನಾಡಿಸಿದರೆ, ಅದರಿಂದ ಸಿಗುವ ಸಂತೋಷ ಅಪಾರವಾದದ್ದು.
ದಾರಿಯಲ್ಲಿ ಯಾರಾದರೂ ನಮ್ಮ ಗುರುತಿನವರೇ ಸಿಕ್ಕಾಗ ಕೂಡಾ ಒಂದು ಮುಗುಳ್ನಗೆ ಹರಿಸಲು ಎಷ್ಟೋ ಜನ ಹಿಂಜರಿಯುತ್ತಾರೆ. ಮೊದಲು ಅವರೇ ನಗಲಿ, ಎಂದು ಕಾಯುತ್ತಾರೆ. ಒಂದು ಕಿರುನಗೆಯನ್ನು ಹರಿಸಲು ಕೂಡಾ, ಕೆಲವರ ಮನಸ್ಸು ಕಂಜೂಸು ತನವನ್ನು, ಅಹಂಕಾರವನ್ನು ತೋರಿಸುತ್ತದೆ. ಅಷ್ಟೇ ಯಾಕೆ? ಅಕ್ಕ ಪಕ್ಕದ ಮನೆಯ ಕೆಲವರು ಕೂಡಾ, ಮುಖ ನೋಡಿದರೆ ಎಲ್ಲಿ ಮಾತನಾಡಿಸ ಬೇಕಾಗಬಹುದು ಎಂದುಕೊಂಡು, ನೋಡಿಯೂ ನೋಡದವರಂತೆ ನಟಿಸುತ್ತ ಮುಖ ಆಚೆ ತಿರುಗಿಸುವ ಜನರೂ ಇರುತ್ತಾರೆ. ಒಮ್ಮೆ ನಾವು, ಯಾರನ್ನಾದರೂ ನೋಡಿದ ತಕ್ಷಣ ಒಂದು ಮುಗುಳ್ನಗೆ ತೋರಿಸಿದರೆ, ನಾವು ಏನನ್ನೂ ಕಳೆದುಕೊಳ್ಳುವುದಿಲ್ಲ. ಹಾಗೆ ಮುಗುಳ್ನಗುವುದರಿಂದ ಅವರ ಮನಸ್ಸಿನಲ್ಲಿ ಎಂಥಾ ಬದಲಾವಣೆ ಉಂಟಾಗುತ್ತದೆ, ನಮ್ಮ ಬಗ್ಗೆ ಅವರಲ್ಲಿ ಎಂಥ ಪ್ರೇಮ ಪೂರ್ಣ ಭಾವ, ಬಾಂಧವ್ಯ, ಗೌರವ ಉಂಟಾಗುತ್ತದೆ ಎಂದು ನಾವು ಯೋಚಿಸುವುದೇ ಇಲ್ಲ. ಇದರಿಂದ ನಾವು ಕಳೆದುಕೊಳ್ಳುವುದಾದರೂ ಏನನ್ನು? ಏನೂ ಖರ್ಚಿಲ್ಲದೆ , ಬೇರೆಯವರಿಗೆ ಒಂದು ಮುಗುಳ್ನಗೆಯನ್ನು ಹರಿಸಲು ಕೂಡಾ, ನಮ್ಮ ಮನಸ್ಸು ಕೆಲವು ಸಲ ಎಷ್ಟು ಹಿಂಜರಿಯುತ್ತದೆ, ಅದರಿಂದ ಎನೂ ಮಹತ್ತರವಾದದ್ದನ್ನು ಕಳೆದುಕೊಂಡು ಬಿಡುವೆವೆಂಬ ಭಾವದಿಂದ ಇರುತ್ತೇವೆ.
ಹೀಗೆ ಪ್ರೇಮ ಪೂರ್ಣತೆಯಿಂದ ಇರಲು ನಮಗೆ ಸಿಕ್ಕ ಸಣ್ಣ ಸಣ್ಣ ಅವಕಾಶವನ್ನು ನಾವು ಎಂದೂ ಕಳೆದುಕೊಳ್ಳಬಾರದು. ಅದಕ್ಕೆ ನಾವೇನೂ ಹಣವ್ಯಯ ಮಾಡಬೇಕಿಲ್ಲ, ಒಂದು ಸಣ್ಣ ಮುಗುಳ್ನಗೆ ಸಾಕು. ಚೆನ್ನಾಗಿದ್ದೀರಾ, ಎಂದು ಕೇಳಿದರೆ ಸಾಕು. ಹಾಗಿಲ್ಲದೇ ಹೋದರೆ, ನಾವು ಜೀವನದಲ್ಲಿ ಎಲ್ಲಾ ಸಣ್ಣ ಸಣ್ಣ ಸಂತೋಷವನ್ನೂ ಕಳೆದುಕೊಳ್ಳುವ ಅಭ್ಯಾಸವೇ ಬಲವಾಗಿ ಬಿಡುವುದು. ನಾವು ಪ್ರತೀಕ್ಷಣವನ್ನೂ ಪ್ರೇಮದ ಕ್ಷಣವಾಗಿಸಿಕೊಂಡಾಗ, ಸಹಜವಾಗಿ ನಮ್ಮಲ್ಲಿ ಒಂದು ವಿಧವಾದ, ನವ ಚೈತನ್ಯ , ಆನಂದ ಹೊರಸುಸುತ್ತಿರುತ್ತದೆ.