ಮಾತಾ ಅನ್ನಪೂರ್ಣೇಶ್ವರಿ..!
ಭಗವಂತನಾದ ಪರಮೇಶ್ವರ, ದೇವಿ ಪಾರ್ವತಿ ಸೃಷ್ಟಿಯ ಪ್ರತೀಕವಾಗಿದ್ದಾರೆ. ಹೀಗಾಗಿ ಇವರನ್ನು ಶಿವ-ಶಕ್ತಿಯರು ಎನ್ನುತ್ತಾರೆ. ಪ್ರಕೃತಿ ಸ್ವರೂಪಣೆ ಪಾರ್ವತಿ ದೇವಿಯ ‘ಅನ್ನಪೂರ್ಣೇಶ್ವರಿ’ ಉತ್ಪತ್ತಿ ಕುರಿತಾದ ಕಥೆ. ಜಗತ್ತಿನಲ್ಲಿ ಪ್ರತಿ ಯೊಂದು ಜೀವಿಗೂ ಆಹಾರ ಬೇಕು. ಆಹಾರವಿಲ್ಲದೆ ಯಾವ ಜೀವಿಯು ಜೀವಿಯುವುದಿಲ್ಲ. ಆಹಾರ ಎಂದರೆ ಅನ್ನ, ಈ ಅನ್ನವೆಂಬ ಆಹಾರ ಕೊಡುವ ತಾಯಿಯೇ ಮಾತ ಅನ್ನಪೂರ್ಣೇಶ್ವರಿ. ಅನ್ನಪೂರ್ಣೇಶ್ವರಿ ಪಾರ್ವತಿ ದೇವಿಯ ಪ್ರತಿ ರೂಪವೇ ಆಗಿದ್ದಾಳೆ. ಒಮ್ಮೆ ಕೈಲಾಸದಲ್ಲಿದ್ದ ಪಾರ್ವತಿ ಪರಮೇಶ್ವರರು ಪಗಡೆ ಆಟವನ್ನು ಆಡುತ್ತಿದ್ದರು. ಆಗ ಇವರಿಬ್ಬರ ನಡುವೆ ಒಂದು ವಿವಾದ ಏರ್ಪಡುತ್ತದೆ. ಪರಮೇಶ್ವರನು ಪುರುಷ ಶಕ್ತಿಯೇ ಹೆಚ್ಚು, ಈ ಲೋಕವೆಲ್ಲ ಒಂದು ಮಾಯೆ, ಇಷ್ಟೇ ಅಲ್ಲದೆ ಈ ಭೂಮಿಯಲ್ಲಿರುವ ಸಕಲ ಚರಾಚರಗಳು ಮಾಯೆ, ಭುಂಜಿಸುವ ಆಹಾರವು ಮಾಯೆ ಎಂದನು. ಇದರಿಂದ ಪಾರ್ವತಿಗೆ ನಾನಿಲ್ಲದೆ ಜಗತ್ತು ಹೇಗೆ ಇರಲು ಸಾಧ್ಯ. ಎಂದು ಯೋಚಿಸಿ ಪಾರ್ವತಿಯು ಕೈಲಾಸದಿಂದ ತಕ್ಷಣ ಮಾಯವಾದಳು. ದೇವಿ ಅದೃಶ್ಯನಾದ ಕ್ಷಣದಲ್ಲೇ ಆಹಾರ, ನೀರು, ಮಾಯವಾಗುತ್ತದೆ. ಇದರಿಂದ ಲೋಕದಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆ. ಆ ಕ್ಷಣದಿಂದಲೇ ಬ್ರಹ್ಮಾಂಡವೇ ಆಹಾರಕ್ಕಾಗಿ ಹಾಹಾಕಾರ, ನೀರಿಗಾಗಿ ಪರದಾಡಿ ತತ್ತರಿಸಿದರು. ಭೂಮಿಯ ಮೇಲಿನ ಮಾನವರಲ್ಲದೆ, ದೇವತೆಗಳು ಹಸಿವಿನಿಂದ ಕಂಗಾಲಾಗಿದ್ದರು. ಜೀವ ಸಂಕುಲಗಳು ಬದುಕುವುದೇ ಕಷ್ಟ ಎನ್ನುವಂತಾಯಿತು.
ಈ ಸ್ಥಿತಿಯಲ್ಲಿ ದೇವತೆಗಳೆಲ್ಲರೂ ಬ್ರಹ್ಮನೊಂದಿಗೆ ಮಾತನಾಡಿ, ವಿಷ್ಣು ವಿದ್ದಲ್ಲಿಗೆ ಬಂದರು. ಆನಂತರ ಋಷಿಮುನಿಗಳೊಂದಿಗೆ ಬ್ರಹ್ಮ, ವಿಷ್ಣು ದೇವತೆಗಳೆಲ್ಲಿ ಒಡಗೂಡಿ ಶಿವನಲ್ಲಿ ಬಂದರು. ಮಾಯೆ ಅದೃಶ್ಯವಾದ ಕಾರಣ ಪರಮೇಶ್ವರನಿಗೂ ಆಹಾರವನ್ನು ಸೃಷ್ಟಿಸಲಾಗಲಿಲ್ಲ. ಭೂಮಿಯ ಮೇಲೆ ಜನಗಳು ಆಹಾರವೇ ಇಲ್ಲದೆ, ನೈವೇದ್ಯವನ್ನು ಮಾಡಲಿಲ್ಲ. ಇದರಿಂದ ಶಿವನು ಹಸಿವಿನಿಂದ ಕಂಗೆಟ್ಟನು. ದೇವತೆಗಳ ಜೊತೆ ಬಂದ ಬ್ರಹ್ಮ ವಿಷ್ಣುವನ್ನು ಕುರಿತು ಪರಮೇಶ್ವರನು ಹೇಳಿದನು. ಇಂಥ ದುಸ್ಥಿತಿ ಹೋಗಲು ಪರಿಹಾರವೆಂದರೆ, ದೇವಿ ಪಾರ್ವತಿಯನ್ನು ಪ್ರಾರ್ಥಿಸಬೇಕು ಎಂದನು. ಆ ಕೂಡಲೇ ದೇವತೆಗಳು ಋಷಿಮುನಿಗಳು ಎಲ್ಲರೂ ಸೇರಿ ಮಾತೆ ಪಾರ್ವತಿ ದೇವಿಯನ್ನು ಪ್ರಾರ್ಥಿಸ ತೊಡಗಿದರು. ಅವರ ಪ್ರಾರ್ಥನೆಗೆ ಕರಗಿದ ದೇವಿ ಕನಿಕರಗೊಂಡು, ವಾರಣಾಸಿಯಲ್ಲಿ ಅನ್ನಪೂರ್ಣೇಶ್ವರಿಯಾಗಿ ಪ್ರಕಟಗೊಂಡು ಭೋಜನ ಶಾಲೆಯನ್ನು ತೆರೆದು ಎಲ್ಲರಿಗೂ ಅನ್ನವನ್ನು ಬಡಿಸುತ್ತಿದ್ದಳು. ಕಾಶಿಯಲ್ಲಿ ಆಹಾರ ದೊರೆಯುತ್ತದೆ ಎಂಬ ಮಾಹಿತಿ ಶಿವನಿಗೆ ತಿಳಿಯುತ್ತದೆ. ಹಸಿವಿನಿಂದ ಬಳಲುತ್ತಿದ್ದ ಪರಮೇಶ್ವರನು, ಆಹಾರ ಪಡೆಯಲು ಭಿಕ್ಷಾರ್ತಿಯಾಗಿ ಕಾಶಿಗೆ ಬಂದನು. ಅಲ್ಲಿ ಆಹಾರ ಸಿಗುತ್ತಿರುವ ತಾಣಕ್ಕೆ ಬಂದಾಗ ಮಾತಾ ಪಾರ್ವತಿ ದೇವಿಯು ಆಹಾರ ವಿತರಿಸುತ್ತಿರುವುದನ್ನು ನೋಡಿದನು. ಆದರೆ ಪಾರ್ವತಿ ದೇವಿಯು ಸಕಲಾಭರಣಗಳನ್ನು ಧರಿಸಿ ದಿವ್ಯ ಭೂಷಿತಳಾಗಿ ಚಿನ್ನದ ಸಿಂಹಾಸನದ ಮೇಲೆ ಕುಳಿತು ವೈಭವದಿಂದ ಪ್ರಜ್ವಲಿಸುತ್ತಾ ಅನ್ನವನ್ನು ಎಲ್ಲರಿಗೂ ಕೊಡುವ ಪಾರ್ವತಿಯನ್ನು ಕಂಡು ಮಾಯೆಯ ಸ್ವರೂಪದ ಅರಿವಾಗುತ್ತದೆ. ತನ್ನ ತಪ್ಪನ್ನು ಒಪ್ಪಿಕೊಂಡು
ಶಿವನೇ ಅವಳ ಮುಂದೆ ಬಂದು ಅನ್ನವನ್ನು ಬೇಡುತ್ತಾನೆ ಕನಿಕರಗೊಂಡ ಪಾರ್ವತಿ ದೇವಿ ಶಿವನಿಗೂ ಅನ್ನವನ್ನು ನೀಡುತ್ತಾಳೆ. ಪರಮೇಶ್ವರನಿಗೆ ಆಹಾರ ದೊರೆಯುತ್ತಿದ್ದಂತೆ ಜಗತ್ತಿನಲ್ಲಿ ಮಾಯವಾಗಿದ್ದ ಆಹಾರ ಪದಾರ್ಥಗಳೆಲ್ಲವೂ ಕಾಣಿಸಿಕೊಳ್ಳುತ್ತದೆ. ಎಲ್ಲರ ಹಸಿವು ಬಾಯಾರಿಕೆ ತಣಿಯುತ್ತದೆ. ಸಾಕ್ಷಾತ್ ಪಾರ್ವತಿ ದೇವಿ ಶಿವನ ಹಸಿವನ್ನು ನೀಗಿಸಿದ ಕಾರಣ ಅನ್ನಪೂರ್ಣೇಶ್ವರಿ ಆಗುತ್ತಾಳೆ.
ಈ ಘಟನೆ ಬಳಿಕ ಪರಮೇಶ್ವರನು ವಿಶ್ವನಾಥನಾಗಿಯೂ ಪಾರ್ವತಿ ದೇವಿ ಅನ್ನಪೂರ್ಣೇಶ್ವರಿಯಾಗಿಯೂ ಕಾಶಿಯಲ್ಲಿ ನೆಲೆಸಿದರು. ಅನ್ನಪೂರ್ಣೇಶ್ವರಿ ಕಾಶಿಯ ರಾಣಿಯಾದಳು. ಕಾಶಿಗೆ ಬಂದ ಯಾರೊಬ್ಬರೂ ಹಸಿವಿನಿಂದ ಬಳಲದಂತೆ ನೋಡಿಕೊಂಡಳು. ಪರಮೇಶ್ವರನು ಕಾಶಿ ವಿಶ್ವನಾಥನಾಗಿ ಬೇಡಿ ಬಂದ ಭಕ್ತರಿಗೆ ಮೋಕ್ಷವನ್ನು ಕರುಣಿಸುವ ಪ್ರತ್ಯಕ್ಷ ದೈವ ವಾದನು. ಮನುಷ್ಯನಿಗೆ ಜೀವ ರಕ್ಷಕ ಆಹಾರವಾದ ಅನ್ನದಾನಕ್ಕಿಂತ ಶ್ರೇಷ್ಠದಾನ ಯಾವುದು ಇಲ್ಲ ಎಂಬುದು ಪ್ರಖ್ಯಾತವಾಯಿತು ಅನ್ನಪೂರ್ಣೇಶ್ವರಿ ದೇವಾಲಯಗಳು ಅಪರೂಪ ಎಂದು ಕಂಡು ಬಂದರು, ನಮ್ಮ ಕರ್ನಾಟಕದ ಹೊರನಾಡಿನ ಕ್ಷೇತ್ರದಲ್ಲಿ ಪ್ರಸಿದ್ಧವಾದ ಅನ್ನಪೂರ್ಣೇಶ್ವರಿ ದೇವಾಲಯವಿದೆ. ಈ ದೇವಿಯ ಮೂಲ ನೆಲೆ ಪವಿತ್ರ ಕಾಶಿ ಕ್ಷೇತ್ರದಲ್ಲಿ ನೆಲೆಸಿದ ಪಾರ್ವತಿ ದೇವಿಯೇ, ಅನ್ನಪೂರ್ಣೇಶ್ವರಿ ಆಗಿದ್ದಾಳೆ
ಕಾಶಿ ಅಥವಾ ವಾರಣಾಸಿಯು, ‘ವಾರಾಣಸಿ ಪುರಪತಿಂ ಭಜ ವಿಶ್ವನಾಥಮ್’೧ ಮತ್ತು ‘ಕಾಶಿಪುರಾಧೀಶ್ವರಿ ಮಾತಾ ಅನ್ನಪೂರ್ಣೇಶ್ವರಿ’ ಎಂಬ ಹೆಸರಿನಲ್ಲಿ ಪುಣ್ಯ, ಪ್ರಸಿದ್ಧ ಕ್ಷೇತ್ರವಾಗಿದೆ.
ಅನ್ನಪೂರ್ಣೇ ಸದಾಪೂರ್ಣೆ ಶಂಕರ ಪ್ರಾಣವಲ್ಲಭಭೇ
ಜ್ಞಾನ ವೈರಾಗ್ಯ ಸಿದ್ದಾರ್ಥಂ ಭಿಕ್ಷಾಂ ದೇಹಿ ಚ ಪಾರ್ವತಿ !!
ಮಾತಾ ಚ ಪಾರ್ವತಿ ದೇವಿ ಪಿತಾದೇವೋ ಮಹೇಶ್ವರಃ
ಬಾಂಧವಾ ಶಿವ ಭಕ್ತಾಶ್ಚ ಸ್ವದೇಶೋ ಭುವನತ್ರಯಂ !!