ಕರ್ನಾಟಕ ರಾಜ್ಯದ ಯಕ್ಷಗಾನ ಮತ್ತು ಹರಿಕಥೆ ಗಳಲ್ಲಿ ವಿಕ್ರಮಾದಿತ್ಯನ ಕಥೆ ಬೆರೆತ ಶನಿ ಮಹಾತ್ಮನ ಕಥಾಪ್ರಸಂಗಗಳನ್ನು ಮಂಡಿಸಲಾಗುತ್ತದೆ. ಈ ಕಥೆಯ ಪ್ರಕಾರ, ವಿಕ್ರಮ ಅದ್ಧೂರಿಯಾಗಿ ನವರಾತ್ರಿಯನ್ನು ಆಚರಿಸುತ್ತಿದ್ದನು ಮತ್ತು ಪ್ರತಿ ದಿನ ಒಂದೊಂದು ಗ್ರಹದ ಬಗ್ಗೆ ಮಥನವನ್ನು ಏರ್ಪಡಿಸುತ್ತಿದ್ದನು. ಕೊನೆಯ ದಿನ ಅದು ಶನಿ ಮಹಾತ್ಮನ ಬಗೆಯದಾಗಿತ್ತು. ಬ್ರಾಹ್ಮಣನು ಶನಿ ಮಹಾತ್ಮನ ಬಗ್ಗೆ ವಿವರಿಸುತ್ತ ಶನಿ ಮಹಾತ್ಮನ ಶಕ್ತಿಯ ಬಗ್ಗೆ ಮತ್ತು ಧರಣಿಯಲ್ಲಿ ಧರ್ಮ ಸ್ಥಾಪಿಸುವುದರಲ್ಲಿ ಆತನ ಪಾತ್ರದ ಬಗ್ಗೆ ಹೇಳುತ್ತಾನೆ. ಆ ಬ್ರಾಹ್ಮಣನು ಆ ಸಮಾರಂಭದಲ್ಲಿ ವಿಕ್ರಮನ ಜಾತಕದ ಪ್ರಕಾರ ಶನಿ ಗ್ರಹವು 12ನೇ ಹಂತದಲ್ಲಿ ಪ್ರವೇಶಿಸುತ್ತಿದೆ ಇದು ಬಹಳ ಕೆಡುಕಿಗೆ ಕಾರಣವಾಗುತ್ತದೆ ಎಂದನು. ಆದಾಗ್ಯೂ ವಿಕ್ರಮನಿಗೆ ತೃಪ್ತಿ ಆಗಲಿಲ್ಲ; ಶನಿ ಕೇವಲ ತೊಂದರೆ ಮಾಡುವವನಷ್ಟೇ ತನ್ನ ಸ್ವಂತ ತಂದೆ (ಸೂರ್ಯನಿ)ಗೂ, ಗುರು (ಬೃಹಸ್ಪತಿ)ಗೂ ತೊಂದರೆ ಕೊಟ್ಟವನೆಂದ. ಆದುದರಿಂದ ತನ್ನ ಪೂಜೆ ಸ್ವೀಕರಿಸಲು ಶನಿಗೆ ಅರ್ಹತೆಯಿಲ್ಲವೆಂದು ಬಿಟ್ಟ ವಿಕ್ರಮ. ಶ್ರೀ ದೇವಿಯ ಸಂಪೂರ್ಣ ಆಶೀರ್ವಾದವು ತನಗಿದೆಯೆಂದು ವಿಕ್ರಮನಿಗೆ ಬಹಳ ಹೆಮ್ಮೆ ಇತ್ತು. ನವರಾತ್ರಿಯ ಆಚರಣೆಯ ಈ ಸಂದರ್ಭದಲ್ಲಿ ಜನಸಮೂಹದ ಮುಂದೆ ತನಗೆ ಅವಮಾನವಾಯಿತೆಂದು ಶನಿ ಮಹಾತ್ಮನಿಗೆ ಕೋಪವುಂಟಾಯಿತು. ವಿಕ್ರಮ ತನ್ನನ್ನು ಪೂಜಿಸುವಂತೆ ಮಾಡುವುದಾಗಿ ಶನಿ ಮಹಾತ್ಮ ಸವಾಲನ್ನೆಸೆದ. ಶನಿ ಮಹಾತ್ಮ ಆಕಾಶದಲ್ಲಿ ಮಾಯವಾದಾಗ ವಿಕ್ರಮ ಅದೊಂದು ಆಕಸ್ಮಿಕವಷ್ಟೆ ಮತ್ತು ತನಗಿರುವ ಆಶೀರ್ವಾದದಿಂದ ತನಗೊದಗುವ ಎಲ್ಲಾ ಸವಾಲುಗಳನ್ನು ಎದುರಿಸುವುದಾಗಿ ಹೇಳಿದ. ಬ್ರಾಹ್ಮಣನು ಜಾತಕದ ಪ್ರಕಾರ ಹೇಳಿರುವುದು ಸರಿಯಿರಬಹುದು ಆದರೆ ಶನಿ ಅಷ್ಟೊಂದು ದೊಡ್ದವನೆಂದು ತಾನು ಒಪ್ಪಿಕೊಳ್ಳಲು ಸಿದ್ಧನಿಲ್ಲ ಎಂದನು ವಿಕ್ರಮ. “ಏನು ನಡೆಯಬೇಕೋ ಅದು ನಡೆದೇ ತೀರುತ್ತದೆ, ಏನು ನಡೆಯುವುದಿಲ್ಲವೋ ಅದು ನಡೆಯುವುದೇ ಇಲ್ಲಾ” ಆದುದರಿಂದ ತಾನು ಶನಿಯ ಸವಾಲನ್ನು ಸ್ವೀಕರಿಸುವುದಾಗಿಯೂ ಹೇಳಿದ.
ಒಂದು ದಿನ ಕುದುರೆ ಮಾರಾಟಗಾರನೊಬ್ಬ ಅರಮನೆಗೆ ಬಂದು ವಿಕ್ರಮನ ಸಾಮ್ರಾಜ್ಯದಲ್ಲಿ ಯಾರೂ ತನ್ನ ಕುದುರೆಯನ್ನು ಕೊಳ್ಳಲಾರರು ಎಂದು ಹೇಳಿದನು. ಈ ಕುದುರೆ ಕ್ಷಣಾರ್ಧದಲ್ಲಿ ಆಕಾಶಕ್ಕೆ ನೆಗೆದು ಮರು ಕ್ಷಣವೇ ಭೂಮಿಗೆ ಮರಳುವ ವಿಶೇಷಣವನ್ನು ಹೊಂದಿರುವುದಾಗಿ ಹೇಳಿದ. ಈ ರೀತಿ ಅದು ಹಾರಬಹುದು ಅಥವಾ ಭೂಮಿಯ ಮೇಲೆ ಓಡಬಹುದು. ವಿಕ್ರಮನಿಗೆ ಇದನ್ನು ನಂಬಲು ಸಿದ್ಧನಿರಲಿಲ್ಲ ಅದಕ್ಕಾಗಿ ಒಮ್ಮೆ ಆ ಕುದುರೆಯ ಮೇಲೆ ಸವಾರಿ ಮಾಡಿ ಆನಂತರ ಕೊಂಡುಕೊಳ್ಳುವುದಾಗಿ ಹೇಳಿದನು. ಮಾರಾಟಗಾರನು ಇದಕ್ಕೆ ಒಪ್ಪಿದ ಮೇಲೆ ವಿಕ್ರಮನು ಆ ಕುದುರೆ ಮೇಲೆ ಕುಳಿತು ಅದಕ್ಕೊಂದು ಚಾಟಿ ಏಟು ಕೊಟ್ಟನು. ಮಾರಾಟಗಾರನು ಹೇಳಿದ ಹಾಗೆ ಆ ಕುದುರೆ ಅವನನ್ನು ಆಕಾಶಕ್ಕೆ ಎಳೆದುಕೊಂಡು ಹೋಯಿತು. ಎರಡನೆಯ ಏಟಿಗೆ ಅದು ಭೂಮಿಗೆ ಬರಬೇಕಿತ್ತು ಆದರೆ ಬರಲಿಲ್ಲ. ಬದಲಾಗಿ ವಿಕ್ರಮನನ್ನು ದೂರಕ್ಕೆ ಕರೆದುಕೊಂಡು ಹೋಗಿ ಕಾಡಿನೊಳಕ್ಕೆ ಎಸೆಯಿತು. ವಿಕ್ರಮನಿಗೆ ಗಾಯಗಳಾದವು ಮತ್ತು ಮರಳಿ ಬರಲು ದಾರಿ ಹುಡುಕುತ್ತಿದ್ದನು. ಇದೆಲ್ಲಾ ವಿಧಿಯಷ್ಟೇ ಇನ್ನೇನೂ ಇರಲಾರದು ಎನ್ನುತ್ತ ಕುದುರೆ ಮಾರಾಟಗಾರನ ರೂಪದಲ್ಲಿ ಬಂದ ಶನಿ ಮಹಾತ್ಮನನ್ನು ಕಾಣಲು ವಿಫಲಗೊಂಡ. ಕಾಡಿನಲ್ಲಿ ದಾರಿಯನ್ನು ಅರಸುತ್ತಿದ್ದಾಗ ಡಕಾಯಿತರು ವಿಕ್ರಮನನ್ನು ದಾಳಿಮಾಡಿದರು. ಅವನನ್ನು ಥಳಿಸಿ ಅವನು ಧರಿಸಿದ್ದ ಆಭರಣಗಳನೆಲ್ಲಾ ದೋಚಿದರು. ಇನ್ನೂ ಪರಿಸ್ಥಿಯ ಅರಿವಿಲ್ಲದ ವಿಕ್ರಮ ಕಳ್ಳರು ತನ್ನ ಕಿರೀಟವನಷ್ಟೇ ಒಯ್ದರು ತನ್ನ ತಲೆಯನ್ನಲ್ಲವಲ್ಲಾ ಎಂದನು. ಬಾಯಾರಿಕೆಗೆ ಹತ್ತಿರ ಕಂಡ ನದಿಯೊಂದರ ಬಳಿ ಸಾಗಿದ್ದಾಗ ಕಾಲು ಜಾರಿ ವಿಕ್ರಮನನ್ನು ಎಷ್ಟೋ ದೂರಕ್ಕೆ ಎಳೆದುಕೊಂಡು ಹೋಗಿಬಿಟ್ಟಿತು.
ವಿಕ್ರಮನು ಬಹು ಕಷ್ಟದಿಂದ ಒಂದು ಪಟ್ಟಣದ ಬಳಿಗೆ ಬಂದನು, ಹಸಿದುಕೊಂಡು ಮರದ ನೆರಳಲ್ಲಿ ಕುಳಿತನು. ವಿಕ್ರಮ ಕುಳಿತ ಮರದ ಎದುರಿಗೆ ಒಂದು ಅಂಗಡಿ ಇತ್ತು, ಆ ಅಂಗಡಿ ಒಡೆಯನಿಗೆ ಸದಾ ಹಣದ್ದೇ ಚಿಂತೆ. ವಿಕ್ರಮನು ಆ ಮರದ ಕೆಳಗೆ ಕುಳಿತ್ತದ್ದೇ ತಡ ಆ ಅಂಗಡಿಗೆ ಅಧಿಕ ಜನರು ಬಂದು ಒಳ್ಳೆ ವ್ಯಾಪಾರವಾಯಿತು. ಹಣದ ದುರಾಸೆಯ ಆ ವರ್ತಕ ಇದನ್ನು ಗ್ರಹಿಸಿ, ವಿಕ್ರಮನನ್ನು ಮನೆಗೆ ಆಹ್ವಾನಿಸಿ ಊಟ ಬಡಿಸಿಸಿದನು. ಅಂಗಡಿಯಲ್ಲಿ ಒಳ್ಳೆ ವ್ಯಾಪಾರ ಕಂಡ ವರ್ತಕನು ಇದನ್ನು ಮುಂದುವರೆಸುವ ದೆಸೆಯಿಂದ ವಿಕ್ರಮನನ್ನು ತನ್ನಲ್ಲೇ ಉಳಿಸಿಕೊಳ್ಳುವ ಯೋಜನೆಯನ್ನು ಹೂಡಿದನು ಅದರ ಪ್ರಕಾರ ತನ್ನ ಮಗಳನ್ನು ವಿಕ್ರಮನನ್ನು ಮದುವೆಯಾಗಲು ಹೇಳುತ್ತಾನೆ. ಊಟವಾದ ನಂತರ ವಿಕ್ರಮನು ಕೋಣೆಯೊಂದರಲ್ಲಿ ವಿಶ್ರಮಿಸುತ್ತಿದ್ದಾಗ ವರ್ತಕನ ಮಗಳು ಆ ಕೋಣೆಯನ್ನು ಪ್ರವೇಶಿಸಿದಳು. ವಿಕ್ರಮನು ಪವಡಿಸಿದ ಹಾಸಿಗೆಯ ಬಳಿ ವಿಕ್ರಮನು ಎಚ್ಚರಗಗೊಳುವುದನ್ನೇ ಕಾಯುತ್ತಿದ್ದಳು. ನಿಧಾನಕ್ಕೆ ಅವಳಿಗೂ ನಿದ್ದೆ ಆವರಿಸಿದಂತಾಯಿತು. ತನ್ನ ಒಡವೆಗಳನೆಲ್ಲಾ ತೆಗೆದು ಬಾತುಕೋಳಿಯ ಚಿತ್ರಪಟ ನೇತು ಹಾಕಿದ್ದ ಮೊಳೆಗೆ ತಗುಲಿಹಾಕಿದಳು. ಆನಂತರ ನಿದ್ದೆಗೆ ಶರಣಾದಳು. ಎಚ್ಚರಗೊಂಡ ವಿಕ್ರಮನು ನೋಡುತ್ತಾನೆ, ಚಿತ್ರಪಟದಲ್ಲಿ ಮೂಡಿದ್ದ ಬಾತುಕೋಳಿ ಆ ಪಟಕ್ಕೆ ತಗುಲಿಹಾಕಿದ್ದ ಒಡವೆಗಳನ್ನು ನುಂಗುತ್ತಿತ್ತು. ಆಶ್ಚರ್ಯದಿಂದ ನೋಡುತ್ತಿರುವಂತೆಯೇ ನಿದ್ದೆಯಿಂದೆದ್ದ ವರ್ತಕನ ಮಗಳು ತಾನಿಟ್ಟಿದ್ದ ಸ್ಥಳದಲ್ಲಿ ಒಡವೆಗಳು ಕಾಣೆಯಾಗಿರುವುದನ್ನು ಕಂಡು ತನ್ನ ತಂದೆಯನ್ನು ಕೂಗಿ ವಿಕ್ರಮನೇ ಅದನ್ನು ಕದ್ದಿರುವುದಾಗಿ ಹೇಳಿದಳು.
ವಿಕ್ರಮನನ್ನು ರಾಜನ ಬಳಿಗೆ ಕರೆದೊಯ್ಯಲಾಯಿತು. ವರ್ತಕನ ಆರೋಪವನ್ನು ಆಲಿಸಿದ ರಾಜನು ವಿಕ್ರಮನ ಕೈ-ಕಾಲುಗಳನ್ನು ಕತ್ತರಿಸಿ ಕಾಡಿಗೆ ಬಿಟ್ಟುಬಿಡಬೇಕೆಂದು ಆಜ್ಞಾಪಿಸಿದನು. ನಡೆದಾಡಲು ಸಾಧ್ಯವಾಗದೆ ರಕ್ತ ಸುರಿಸಿಕೊಂಡು ನರಳುತ್ತಿದ್ದ ವಿಕ್ರಮನನ್ನು, ಆ ದಾರಿಯಲ್ಲಿ ಉಜ್ಜಯಿನಿಯ ತನ್ನ ತವರು ಮನೆಯಿಂದ ಗಂಡನ ಮನೆಗೆ ಹಾದು ಹೋಗುತ್ತಿದ್ದ ಮಹಿಳೆಯೊಬ್ಬಳು ಗುರುತಿಸಿದಳು. ಆತನ ಬಗ್ಗೆ ವಿಚಾರಿಸಿ, ಕುದುರೆ ಸವಾರಿ ಮಾಡುತ್ತ ಮಾಯವಾದ ರಾಜನ ಬಗ್ಗೆ ಉಜ್ಜಯಿನಿಯ ಜನರು ಆತಂಕಗೊಂಡಿದ್ದಾರೆ ಎಂದು ಹೇಳಿದಳು. ಆಕೆಯ ಭಾವ-ಮೈದುನರಿಗೆ ವಿಕ್ರಮನನ್ನು ತನ್ನ ಮನೆಯಲ್ಲಿ ಉಳಿಸಿಕೊಳ್ಳಬೇಕೆಂದು ವಿನಂತಿಸಿಕೊಂಡಳು. ಅವಳ ಕುಟುಂಬವು ನೌಕರರ ವರ್ಗದವರಾಗಿದ್ದು; ವಿಕ್ರಮನು ಕೆಲಸ ಕೇಳಿದನು. ತಾನು ಹೊಲದಲ್ಲಿ ಕುಳಿತು ಎತ್ತುಗಳು ಕಾಳುಗಳನ್ನು ಬೇರ್ಪಡಿಸುವುಕ್ಕಾಗಿ ತಿರುಗುವುದಕ್ಕೆ ಕೂಗಿ-ಕೂಗಿ ಅದನ್ನು ಮಾಡಿಸುತ್ತೇನೆ ಎಂದನು. ಬಹು ಕಾಲದವರೆಗು ಇನೊಬ್ಬರ ಮನೆಯಲ್ಲಿ ಅತಿಥಿಯಾಗಿ ಉಳಿಯಲು ತನಗಷ್ಟವಿಲ್ಲ ಎಂದನು.
ಒಂದು ಸಂಜೆ ವಿಕ್ರಮನು ಕಾರ್ಯನಿರತನಾಗಿದ್ದಾಗ ಜೋರಾಗಿ ಬೀಸಿದ ಗಾಳಿಗೆ ದೀಪ ಹಾರಿತು. ಆಗ ದೀಪಕ ರಾಗವನ್ನು ಹಾಡಿ ದೀಪಗಳನ್ನು ಹೊತ್ತಿಸಿದನು. ಈ ರಾಗವು ಪಟ್ಟಣದ ಎಲ್ಲಾ ದೀಪಗಳನ್ನು ಹೊತ್ತಿಸಿತು-ಆ ಪಟ್ಟಣದ ರಾಜಕುಮಾರಿ ದೀಪಕ ರಾಗವನ್ನು ಹಾಡಿ ದೀಪವನ್ನು ಹೊತ್ತಿಸಿದವರು ಯಾರೇ ಆಗಿರಲಿ ಅವರನ್ನು ತಾನು ಮದುವೆಯಾಗುವುದಾಗಿ ಘೋಶಿಸಿದಳು. ಅಂಗವಿಕಲನಾದ ವಿಕ್ರಮನಿಂದಾಗಿ ದೀಪ ಹೊತ್ತಿದ್ದನ್ನು ಕಂಡು ಚಕಿತಳಾದರೂ ರಾಜಕುಮಾರಿ ಅವನನ್ನೇ ಮದುವೆಯಾಗುವುದಾಗಿ ನಿರ್ಧರಿಸಿದಳು. ವಿಕ್ರಮನನ್ನು ನೋಡಿದ ರಾಜನಿಗೆ ತಾನು ಕಳ್ಳತನದ ಅಪರಾಧಕ್ಕೆ ಕೈ-ಕಾಲು ಮುರಿಸಿ ಕಾಡಿಗಟ್ಟಿದ್ದ ವ್ಯಕ್ತಿ ಈತನೇ ಎಂದು ನೆನಪಾಗಿ ಈಗ ತನ್ನ ಮಗಳನ್ನೇ ಮದುವೆಯಾಗಲು ಪ್ರಯತ್ನಿಸುತ್ತಿದ್ದಾನೆಂದು ಕೋಪೋದ್ರೇಕಗೊಂಡ. ತನ್ನ ಕತ್ತಿಯನ್ನು ಹೊರತೆಗೆದು ವಿಕ್ರಮನ ತಲೆಯನ್ನು ತೆಗೆಯಲು ಮುಂದಾದ. ಆ ಸಮಯದಲ್ಲಿ ವಿಕ್ರಮನಿಗೆ ಇದೆಲ್ಲಾ ಶನಿ ಮಹಾತ್ಮನ ಶಕ್ತಿಯಿಂದ ಉಂಟಾಗುತ್ತಿದೆ ಎಂದು ಅರಿವಾಗುತ್ತದೆ. ಇನ್ನೇನು ಸಾಯುವ ಕ್ಷಣ ಸಮೀಪವಿದೆ ಎನ್ನುವಾಗ ಶನಿ ಮಹಾತ್ಮನನ್ನು ಪ್ರಾರ್ಥಿಸುತ್ತಾನೆ. ತನ್ನ ತಪ್ಪುಗಳನ್ನು ಒಪ್ಪಿಕೊಂಡು ಶನಿ ಮಹಾತ್ಮನ ಶಕ್ತಿಯ ಬಗ್ಗೆ ಹೆಮ್ಮೆ ಪಡುವುದಾಗಿ ಪ್ರಾರ್ಥಿಸುತ್ತಾನೆ. ಶನಿ ಮಹಾತ್ಮ ಪ್ರತ್ಯಕ್ಷನಾಗಿ ವಿಕ್ರಮನ ಕೈ-ಕಾಲುಗಳನ್ನು ಮೊದಲಿನ ರೀತಿಯಲ್ಲೇ ಮಾಡಿ ಒಡವೆಗಳನ್ನು ಮತ್ತು ಆತನಿಗೆ ಸೇರಿದ್ದ ಎಲ್ಲವನ್ನು ಮರಳಿ ಕೊಟ್ಟನು. ವಿಕ್ರಮನು ತಾನು ಅನುಭವಿಸಿದ ಹಿಂಸೆಯನ್ನು ಸಾಮಾನ್ಯರಿಗೆ ಕೊಡದಿರಲು ಪ್ರಾರ್ಥಿಸಿದನು. ತನ್ನಂಥ ಬಲಿಷ್ಠನೇ ತಾಳುವುದಕ್ಕೆ ಆಗದಿದ್ದ ಮೇಲೆ ಇನ್ನು ಸಾಮಾನ್ಯರು ತಡೆದುಕೊಳ್ಳಲಾರರು ಎಂದನು. ಸಾಮಾನ್ಯರಿಗೆ ನೋವು ಕೊಡದಿರಲು ಶನಿ ಮಹಾತ್ಮ ಒಪ್ಪಿದನು. ರಾಜನಿಗೆ ಇದೆಲ್ಲಾ ಗೊತ್ತಾಗಿ ತನ್ನ ರಾಜ್ಯವನ್ನು ವಿಕ್ರಮನ ಸಾಮ್ರಾಜ್ಯಕ್ಕೆ ಒಪ್ಪಿಸಿ ತನ್ನ ಮಗಳನ್ನು ಮದುವೆ ಮಾಡಿ ಕೊಡುವುದಾಗಿ ಹೇಳಿದನು. ಇದೇ ಸಮಯಕ್ಕೆ ಹಿಂದೆ ಉಲ್ಲೇಖಿಸಿರುವ ವರ್ತಕನು ಅರಮನೆಗೆ ಓಡೋಡಿ ಬಂದು ಆಭರಣಗಳನ್ನು ನುಂಗಿದ ಚಿತ್ರ ಪಟದಲ್ಲಿದ್ದ ಬಾತು ಕೋಳಿ ತನ್ನ ಬಾಯಿಂದ ಆಭರಣಗಳನ್ನು ಕಕ್ಕಿತು ಎಂದು ಹೇಳಿದನು. ವರ್ತಕನೂ ತನ್ನ ಮಗಳನ್ನು ರಾಜ ವಿಕ್ರಮನಿಗೆ ಧಾರೆ ಎರೆದು ಕೊಡುವುದಾಗಿ ಹೇಳುತ್ತಾನೆ. ವಿಕ್ರಮನು ಉಜ್ಜಯಿನಿಗೆ ಮರಳಿ ಶನಿ ಮಹಾತ್ಮನ ಆಶೀರ್ವಾದದಿಂದ ಶ್ರೇಷ್ಠ ಸಾಮ್ರಾಟನೆನ್ನಿಸಿಕೊಂಡರು……
ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ! ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ!!
ಎಲ್ಲರಿಗೂ ಆ ಧರ್ಮದೇವತೆ ಶನೈಶ್ವರನ ಆಶೀರ್ವಾದ ಇರಲಿ.
“ನಾವು ತಿಳಿದುಕೊಂಡಿದ್ದನ್ನ ಬೇರೆಯವರಿಗೆ ತಿಳಿಸುವುದು ಒಂದು ದೇವರ ಸೇವೆ
ಆದ್ಯಾತ್ಮ ವನ್ನು ನಂಬಬೇಕು ದೇವರು ಇದ್ದಾನೆ ಎಂದು ನಂಬಬೇಕು ಭಕ್ತಿ ಇದ್ದಾರೆ ದೇವರು ದಾರಿ ತೋರಿ ರಿಸುತ್ತರೆ
Thank you
ನಮ್ಮ ಮನಕ್ಕೆ ಶಾಂತಿ ಸಿಗಲು ಪರಮಾತ್ಮನ ಭಕ್ತಿಯಿಂದ ಮಾತ್ರ ಸಾಧ್ಯ. ಓಂ ನಮಃ ಶಿವಾಯ 🙏🙏🙏