ವಿಶ್ವಕರ್ಮ ಯಾರು..?
ದೇವತೆಗಳಲ್ಲಿ ಪೂಜ್ಯನಾದ ಬ್ರಹ್ಮನ ಮರಿಮಗನೇ, ಬ್ರಹ್ಮಾತ್ಮನಾದ ವಾಸ್ತುದೇವನ ಮಗನೇ ಶ್ರೀ ವಿಶ್ವಕರ್ಮ ಭಗವಂತ. ವಿಶ್ವಕರ್ಮ ಎಂಬ ಹೆಸರೇ ಪರಮೋಚ್ಚತೆಯನ್ನು ಸಾರುತ್ತದೆ. ನಿರುಕ್ತಕಾರರಾದ ಯಾಸ್ಕಾಚಾರ್ಯರು ವಿಶ್ವಕರ್ಮ ಎಂದರೆ, ಸರ್ವಸ್ಯ ಕರ್ತಾ ಎಂಬ ವ್ಯಾಖ್ಯೆಯನ್ನು ನೀಡಿದ್ದಾರೆ. ನಿರುಕ್ತಕ್ಕೆ ಭಾಷ್ಯವನ್ನು ಬರೆದಿರುವ ದುರ್ಗಾಚಾರ್ಯರು, ವಿಶ್ವಕರ್ಮ ಪದಕ್ಕೆ ಯದಿದಂ ಕಿಂಚಿದ್ಬೂತಂ, ಭವಿಷ್ಯಮಾಣಂ, ಕ್ರಿಯಮಾಣಂ ಚ ತಸ್ಯ ಸರ್ವಸ್ಯ ಕರ್ತಾ, ಎಂದರೆ, ಈ ವರೆಗೆ ಏನೇನು ಆಗಿದೆಯೋ, ಮುಂದೆ ಆಗುವುದು, ಈಗ ಆಗುತ್ತಿರುವುದು, ಈ ಎಲ್ಲದರ ಕರ್ತಾ ಶ್ರೀ ವಿಶ್ವಕರ್ಮ ಎಂದಿದ್ದಾರೆ.
ದೇವಶಿಲ್ಪಿ ವಿಶ್ವಕರ್ಮ
ಪ್ರಾಚೀನ ಕಾಲದಲ್ಲಿ ರಾಜಧಾನಿಗಳೆಲ್ಲ ವಿಶ್ವಕರ್ಮ ನಿರ್ಮಿತ ಎಂದೇ ಹೇಳುತ್ತಾರೆ. ಪ್ರಪ್ರಥಮವಾಗಿ ವಿಶ್ವಕರ್ಮನಿಂದ ಸ್ವರ್ಗಲೋಕದ ರಚನೆಯಾಗಿದೆ. ತ್ರೇತಾಯುಗದ ಲಂಕೆ, ದ್ವಾಪರಯುಗದ ದ್ವಾರಕೆ – ಹೀಗೆ ಮುಂತಾದ ಪುರಗಳ ನಿರ್ಮಾಣವನ್ನು ದೇವಲೋಕದ ಶಿಲ್ಪಿ ವಿಶ್ವಕರ್ಮನೇ ಮಾಡಿದ್ದಾನೆ. ಪುರೂರವನ ರಾಜ್ಯದಲ್ಲಿ 12 ವರ್ಷಗಳು ಸತತವಾಗಿ ಯಜ್ಞವು ನಡೆದಾಗ, ಆ ಯಜ್ಞ ಶಾಲೆಯ ನಿರ್ಮಾಣವನ್ನು ಶ್ರೀ ವಿಶ್ವಕರ್ಮನು ಮಾಡಿದ್ದನು. ಅಂತಯೇ ಕಾಶೀಪಟ್ಟಣದಲ್ಲಿ ಒಂದು ಶಿವಲಿಂಗದ ಸ್ಥಾಪನೆ ಮಾಡಿದ್ದನು.
ದುರ್ಗಾಸಪ್ತಶತಿಯ 2ನೇ ಅಧ್ಯಾಯದಲ್ಲಿ ವಿಶ್ವಕರ್ಮನು, ವಿವಿಧ ದೇವತೆಗಳಿಗೆ ಸರಿಸಮಾನಳಾದ ದುರ್ಗಾದೇವಿಗಾಗಿ ಅನೇಕಾನೇಕ ಭೂಷಣಗಳು, ಪರಶು ಮೊದಲಾದ ಶಸ್ತ್ರಗಳನ್ನು ನಿರ್ಮಿಸಿ ನೀಡಿದ ವಿಚಾರವಿದೆ. ವಿಶ್ವಕರ್ಮನು ದೇವರಿಗಾಗಿ ವಿಮಾನಗಳನ್ನು ನಿರ್ಮಿಸಿದನು. ನಗರ ರಚನೆ ಮಾಡಿದನು. ವಿಷ್ಣುವಿನ ಶಂಖ, ಶಿವನ ತ್ರಿಶೂಲ, ಇಂದ್ರನ ವಜ್ರ ಸಿದ್ಧ ಪಡಿಸಿದನು… ತಿಲೋತ್ತಮೆ ಎಂಬ ಅಪ್ಸರೆಯನ್ನು ಸೃಷ್ಠಸಿದ ಕಥೆ ಇದೆ.
ಪುರಾಣಗಳಲ್ಲಿ ವಿಶ್ವಕರ್ಮ
ರಾಮಾಯಣದ ಪ್ರಕಾರ, ಶ್ರೀರಾಮನು ಲಂಕೆಗೆ ಹೋಗಲು ಸೇತುವೆ ನಿರ್ಮಿಸಲು ಪ್ರಾರಂಭಿಸಿದ. ಈ ವೇಳೆ ಸಮುದ್ರದೊಳಕ್ಕೆ ಎಷ್ಟೇ ಬೆಟ್ಟಗಳನ್ನು ತಂದು ಹಾಕಿದರೂ ಅವೆಲ್ಲ ಮುಳುಗಿ, ಸೇತುವೆ ಕಟ್ಟಲು ಅಸಾಧ್ಯವಾಯಿತು. ಆಗ ಲಕ್ಷಣನ ಸಲಹೆಯ ಮೇರೆಗೆ ಬಕದಾಲ್ಭ್ಯರಲ್ಲಿ ಉಪಾಯವನ್ನು ಕೇಳಿದರು. ಅವರು ನಳನನ್ನು ತೋರಿಸಿ ಅವನಿಂದ ವಿಶ್ವಕರ್ಮೋಪಾಸನೆಯನ್ನು ತಿಳಿದು, ಆಚರಿಸಲಾಯಿತು. ನಂತರ ಅವನು ಹಾಕಿಸಿದ ಗುಂಡುಗಳು ನೀರಿನಲ್ಲಿ ತೇಲಿ ಸೇತುವೆ ನಿರ್ಮಾಣವಾಯಿತು. ಇದರಿಂದ ರಾಮ ಲಂಕೆಗೆ ಹೋಗಿ ರಾವಣನನ್ನು ಜಯಿಸಿ ಸೀತೆಯನ್ನು ಪಡೆಯಲು ಸಾಧ್ಯವಾಯಿತು.
ಭಾಗವತದ ದಶಮಸ್ಕಂಧ 20ನೇ ಅಧ್ಯಾಯದ ಪ್ರಕಾರ ಯವನ ಮಾಗದರು ಮಥುರಾ ನಗರವನ್ನು ಆಕ್ರಮಿಸಿಕೊಂಡು, ಶ್ರೀ ಕೃಷ್ಣನಿಗೆ ನಿಲ್ಲಲು ನೆಲೆ ಇಲ್ಲಂತಾಯಿತು. ಆಗ ಅವನು ಪ್ರಾರ್ಥಿಸಿದಾಗ ದ್ವಾರಕಾ ನಗರವನ್ನು ಶ್ರೀ ವಿಶ್ವಕರ್ಮ ನಿರ್ಮಿಸಿಕೊಟ್ಟಿದ್ದಾರೆ ಎಂಬ ಉಲ್ಲೇಖಗಳಿವೆ.
ವಿಶ್ವಕರ್ಮ ಪೂಜಾ
ವಿಶ್ವಕರ್ಮ ಮತದ ಪ್ರಕಾರ ಯಜ್ಞಾರ್ಥವಾಗಿ ಮಾಡಿದ ಕರ್ಮವು ವಿಶ್ವಕರ್ಮವಾಗುವುದು. ವಿಶ್ವಕರ್ಮನು ವಿಶ್ವ ವೃದ್ಧಿಗೆ ಹೇಗೆ ಯಜ್ಞವನ್ನಾಚರಿಸಿದ, ಈತ ಯಾವ ಮಾರ್ಗ ತೋರಿಸಿನೋ ಅದೇ ಮಾರ್ಗವನ್ನು ನಾವು ಅನುಸರಿಸಬೇಕು. ಶ್ರೀ ಅರವಿಂದರು ಹೇಳುವಂತೆ ನಮ್ಮ ಎಲ್ಲಾ ಕರ್ಮಗಳೂ, ವಿಶ್ವಕರ್ಮನಿಗೆ ಅರ್ಪಿಸುವ ಯಜ್ಞವೆಂದೇ ಎಣಿಸಲ್ಪಡಬೇಕು.
ವಿಶ್ವಕರ್ಮನಿಗೆ ವೈದಕ ಕಾಲದಲ್ಲಿ ವಿಧಿ ವಿಧಾನಗಳಿಂದ ಪೂಜೆಯು ಸಲ್ಲುತ್ತಿತ್ತು. ಯಜ್ಞ ಹಾಗೂ ವಾಸ್ತು ವಿಧಾನಗಳಲ್ಲಿಯೂ ಈತನಿಗೆ ಅರ್ಚನೆ ನಡೆಯುತ್ತಿತ್ತು. ಆದರೆ ಕಾಲಾಂತರದಲ್ಲಿ ಇದು ನಿಂತು ಹೋಯಿತು. ಆದರೆ ಇತ್ತೀಚೆಗೆ ವಿದ್ವಾಂಸರ ಗಮನವು ಈ ಕಡೆ ಆಕರ್ಷಿತವಾದುದರ ಫಲವಾಗಿ ಶ್ರೀ ವಿಶ್ವಕರ್ಮ ಪೂಜಾ ಪದ್ದತಿಯು ಗೋಚರವಾಗಿದೆ. ವಿಶ್ವಕರ್ಮ ಪೂಜೆಯು ಹೊಸದಾಗಿದೆಯಲ್ಲ ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಆದರೆ ಇದು ಪ್ರಾಚೀನ ಕಾಲದಲ್ಲಿ ನಡೆಯುತ್ತಿದ್ದದಕ್ಕೆ ಉತ್ತರೇಶಾನಯೋರ್ಮಧ್ಯೇ ರಕ್ತಸ್ತುಭೇ ವಿಶ್ವಕರ್ಮಾಣಂ ಆವಾಹಯೇತ್ ಪೂಜಯಚ್ಚ. ವೇದಮಂತ್ರೋ ಯಥಾ… ಮಂತ್ರಗಳೇ ಸಾಕ್ಷಿ.
ವೇದಗಳಲ್ಲಿ ವಿಶ್ವಕರ್ಮ
ಋಗ್ವೇದ ಕಾಲಕ್ಕಿಂತ, ಹಿಂದಿನಿಂದಲೂ ವಿಶ್ವಕರ್ಮನನ್ನು ಸಪ್ತ ಋಷಿಗಳು ಪೂಜಿಸುತ್ತಿದ್ದಾರೆ ಎಂದು ಋಗ್ವೇದವೇ ಹೇಳುವಾಗ ವಿಶ್ವಕರ್ಮನು ಹೇಗೆ ಅನಾದಿ, ಪ್ರಾಚೀನ ಮತ್ತು ಸನಾತನತತ್ವವೆಂಬುದು ತಿಳಿಯುತ್ತದೆ. ಅಲ್ಲದೇ ಅವನು ಯಾವ ಕಾಲಕ್ಕೂ ನಿತ್ಯ, ಶಾಶ್ವತ. ಉಪನಿಷತ್ತ್‌ಗಳ ಪ್ರಕಾರ ವಿಶ್ವಕರ್ಮನು ಆದಿಪುರುಷ, ದಿವ್ಯನೂ, ರೂಪರಹಿತನೂ, ಒಳಗೆ-ಹೊರಗೆ ಎಲ್ಲೆಡೆ ಇರುವವನು. ಹುಟ್ಟಿಲ್ಲದವನು, ಪ್ರಾಣ ಮನಸ್ಸುಗಳಿಗೆ ಅತೀತನು, ಶುದ್ಧನೂ, ನಾಶರಹಿತನಾದ ಅಕ್ಷರನೂ, ಶ್ರೇಷ್ಠರಿಗಿಂತ ಶ್ರೇಷ್ಠನು. ಅವನಿಗಿಂತ ಹೆಚ್ಚಿನದು ಇನ್ನಾವುದೂ ಇಲ್ಲ. ದಾರದಲ್ಲಿ ಮಣಿಗಳನ್ನು ಪೋಣಿಸಿದಂತೆ ಎಲ್ಲವೂ ಇವನಲ್ಲಿದೆ. ಅವ್ಯಕ್ತನಾದ ಇವನಿಂದಲೇ ಜಗತ್ತು ವ್ಯಾಪ್ತವಾಗಿರುವುದು. ವಿಶ್ವಕರ್ಮನಿಂದ ರಚಿತವಾದ ಒಂದು ಸೂಕ್ತವು ಋಗ್ವೇದದ ಹತ್ತನೆಯ ಮಂಡಲದಲ್ಲಿದೆ. ವಿಶ್ವಕರ್ಮನು ಸೃಷ್ಟಿಕರ್ತನೆಂದೇ ವರ್ಣಿಸಲ್ಪಟ್ಟಿದೆ. ಇವನು ವಿಶ್ವತೋಮುಖನು. ಕಾಲಿನಿಂದ ಸ್ವರ್ಗವನ್ನು, ಕೈಗಳಿಂದ ಭೂಲೋಕವನ್ನು ನಿರ್ಮಿಸುತ್ತಾನೆ. ಈತನಿಗಾಗಿ ಹಲವು ಯಾಗಗಳು ಆಗುತ್ತಿದ್ದವು. ಎಂದು ವರ್ಣಿಸಲಾಗಿದೆ.