ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಅಷ್ಟಮಿ ದಿನ ಶೀತಲಾ ದೇವಿ ಪೂಜೆ

ಶೀತಲಾ ದೇವೀ ..!

ಭೂಲೋಕದಲ್ಲಿರುವ ಎಲ್ಲಾ ಜೀವಿಗಳಿಗೂ ಹಾಗೂ ವೃಕ್ಷ , ಪ್ರಾಣಿ, ಪಶು- ಪಕ್ಷಿ, ಹಾಗೆ ಸೇವಿಸುವ ಆಹಾರ, ನೀರು, ಹಣ್ಣು ಹಂಪಲು ತರಕಾರಿಗಳಿಂದ ಸೇರಿ, ಪ್ರತಿಯೊಂದು ಒಬ್ಬೊಬ್ಬ ಅಧಿಪತಿ ದೇವತೆಗಳು ಇರುತ್ತಾರೆ. ಅದೇ ರೀತಿ ತಣ್ಣಗಿರುವ ಪದಾರ್ಥಕ್ಕೂ ಒಬ್ಬ ದೇವತೆ ಇದ್ದಾಳೆ. ಅವಳನ್ನು ‘ಶೀತಲಾ’ ಮಾತೆ ಎಂದು ಕರೆಯುತ್ತಾರೆ. ದೇವಲೋಕದ ‘ಶೀತಲಾದೇವಿ’ಗೆ ಒಮ್ಮೆ ಯೋಚನೆ ಬಂದಿತು. ಭೂಲೋಕದ ಜನರು ನನ್ನನ್ನು ಹೇಗೆ ಪೂಜಿಸುತ್ತಾರೆ, ಗೌರವಿ ಸುತ್ತಾರೆ, ಯಾವ ರೀತಿ ಸನ್ಮಾನ ಮಾಡುತ್ತಾರೆ, ಇದನ್ನೆಲ್ಲಾ ತಿಳಿದುಕೊಂಡು ಬರಬೇಕೆಂಬ ಮನಸ್ಸಾಯಿತು. ಆದ್ದರಿಂದ ಅವಳು ಆಕಾಶ ಮಾರ್ಗದಿಂದ ಇಳಿದು ಭೂಲೋಕದ ‘ಮಧ್ಯ ಪ್ರದೇಶದ’ ಒಂದು ಹಳ್ಳಿಗೆ ಮುದುಕಿ ವೇಷ ಧರಿಸಿ ಬಂದಳು.
ಬೆಳ್ಳಂ ಬೆಳಿಗ್ಗೆನೇ ಬಂದ ಅವಳು ಹಳ್ಳಿಯ ಸುತ್ತ ತಿರುಗುತ್ತಾ ರಸ್ತೆಯಲ್ಲಿ ಬರುತ್ತಿದ್ದಳು. ಡಿಸೆಂಬರ್ ತಿಂಗಳ ಚಳಿಗಾಲವದು. ಶೀತಲಾಮಾತೆಗೂ ಅಸಾಧ್ಯ ಚಳಿಯಾಗುತ್ತಿತ್ತು.
ಹಾಗೆಯೇ ಆ ಕಡೆ ಈ ಕಡೆ ಮನೆಗಳನ್ನು ನೋಡುತ್ತಾ ಬರುತ್ತಿರುವಾಗ, ಒಂದು ಮನೆಯ, ಮೇಲಿನ ಮನೆಯಲ್ಲಿದ್ದ (ಫಸ್ಟ್ ಫ್ಲೋರ್) ಮಹಿಳೆಯೊಬ್ಬಳು ಅಕ್ಕಿ, ತರಕಾರಿ , ತೊಳೆದ , ಕಲಗಚ್ಚಿನ ನೀರನ್ನು ಮೇಲಿನಿಂದಲೇ ದಭಾರೆಂದು ಕೆಳಗೆ ಚೆಲ್ಲಿದಳು. ಆ ನೀರು ಬರುತ್ತಿದ್ದ ಶೀತಲ ಮಾತೆ ತಲೆ ಹಾಗೂ ಮೈಮೇಲೆ ಬಿದ್ದಿತು.
ಮೊದಲೇ ಚಳಿ, ಈಗ ತಣ್ಣಗಿರುವ ಕಲಗಚ್ಚು ಬೇರೆ ಮೈಮೇಲೆ ಬಿದ್ದಿತು. ಇದರಿಂದ ಅವಳಿಗೆ ಮೈಯೆಲ್ಲಾ ಗಲೀಜಾಗುವುದರ ಜೊತೆಗೆ, ಗಡ ಗಡ ನಡುಗುವಷ್ಟು ಚಳಿಯಾಗ ತೊಡಗಿತು.

ಶೀತಲಾದೇವಿ ನೀರು ಹಾಕಿದ್ದು ಯಾರೆಂದು ಮೇಲೆ ನೋಡಲು ಆಗಲಿಲ್ಲ ಅವಳ ಮುಖ ತುಂಬಾ ತರಕಾರಿ ಸಿಪ್ಪೆ ,ಹಣ್ಣಿನ ಬೀಜ ಬಿದ್ದಿತ್ತು. ಮುಂದೆ ನೋಡುತ್ತಾ ಹಳ್ಳಿಯಲ್ಲಿರುವ ಆ ಕಡೆ ಈ ಕಡೆ ಮನೆಗಳ ಕಡೆ ತಿರುಗಿ ಹೀಗೇ ಕೂಗುತ್ತಿದ್ದಳು. ಅಮ್ಮ ಯಾರಾದರೂ ಸ್ವಲ್ಪ ನೀರು ಕೊಡಿ ಮೈ ತೊಳೆದುಕೊಳ್ಳುತ್ತೇನೆ. ಯಾರಾದರೂ ಸ್ವಲ್ಪ ಸಹಾಯ ಮಾಡಿ ಎಂದು ಕೂಗಿ ಕೂಗಿ ಹೇಳುತ್ತಿದ್ದಳು. ಆದರೆ ಹಳ್ಳಿಯ ಜನರಾರು ಅವಳಿಗೆ ಸಹಾಯ ಮಾಡಲಿಲ್ಲ. ಹೀಗೆ ಮುಂದೆ ಮುಂದೆ ಹೋದಾಗ ಕುಂಬಾರನ ಮನೆಯ ಮುಂದೆ ಮಡಿಕೆಗಳನ್ನು ಮಾರಲು ಇಟ್ಟುಕೊಂಡ ಕುಂಬಾರ ಮಹಿಳೆ, ಕುಳಿತಿದ್ದಳು. ಅಲ್ಲಿಗೆ ಬಂದ ಮಾತೆ, ಮಗಳೇ ಸ್ವಲ್ಪ ನೀರು ಕೊಡು ನನ್ನ ಮೈಯೆಲ್ಲ ತಪಗುಟ್ಟಿ ಚಳಿಯಾಗುತ್ತಿದೆ. ಮೈಯೆಲ್ಲಾ ಕಡಿತ ಶುರುವಾಗಿದೆ ಎಂದಳು. ಆಗ ಕುಂಬಾರನ ಬಡ ಮಹಿಳೆ ಎದ್ದು ಬಂದು, ಅಮ್ಮ ಇಲ್ಲೇ ಸ್ವಲ್ಪ ಹೊತ್ತು ಕುಳಿತಿರಿ ನಾನು ನನ್ನ ಮನೆಯಲ್ಲಿ ಮಡಿಕೆಯಲ್ಲಿರುವ ತಣ್ಣೀರು ತಂದು ನಿಮ್ಮನ್ನು ಶುಚಿಗೊಳಿಸುತ್ತೇನೆ ಎಂದು ಒಳಗೆ ಹೋಗಿ ಮಡಿಕೆಯಲ್ಲಿದ್ದ ತಣ್ಣೀರನ್ನೇ ತಂದು ಶೀತನಲಾಮಾತೇಯ, ತಲೆ ಕೂದಲನ್ನು, ಮೈಯನ್ನು ತಾನೇ ಶುಚಿಗೊಳಿಸಿದಳು. ಒಳಗೆ ಕರೆದುಕೊಂಡು ಹೋಗಿ, ಉಡಲು ತನ್ನ ಬಳಿ ಇದ್ದ ಹರಿದ ಕೊಳೆಯ ಸೀರೆಯನ್ನು ಕೊಟ್ಟಳು. ಕೂರಿಸಿ ಒಂದು ಬಟ್ಟಲಿನಲ್ಲಿ ತಂಗಳು ಅನ್ನವನ್ನು ತಂದು ಆಕೆಗೆ ಕೊಟ್ಟು, ಅಮ್ಮ ನನ್ನ ಮನೆಯಲ್ಲಿ ಇರುವುದು ಈ ತಂಗಳು ಆಹಾರ ಮಾತ್ರ, ಇದನ್ನೇ ಕೊಡುತ್ತೇನೆ ಎಂದು ಪ್ರೀತಿಯಿಂದ ಕೊಟ್ಟಳು. ಶೀತಲಾದೇವಿ ಅದನ್ನು ಪ್ರೀತಿಯಿಂದ ಸಂತೋಷವಾಗಿ ತಿಂದಳು. ನಂತರ ಶೀತಲಾ ದೇವಿ ಕುಂಬಾರನ ಮಹಿಳೆಗೆ ಮಗಳೇ ನನ್ನ ತಲೆ ಕೂದಲು ತುಂಬಾ ಒದ್ದೆಯಾಗಿದೆ, ಅದನ್ನು ಒರೆಸಿ ನನಗೆ ಕೂದಲ ಸಿಕ್ಕನ್ನು ಬಿಡಿಸಿ ಸರಿಯಾಗಿ ಕಟ್ಟುವೆಯಾ ಎಂದಳು. ಕುಂಬಾರನ ಮಹಿಳೆ ಹಳೆಯ ವಸ್ತ್ರವನ್ನು ತಂದು ಆಕೆಯ ತಲೆ ಕೂದಲನ್ನು ಬಿಡಿಸಿ ಬಿಡಿಸಿ ಶುಭ್ರವಾಗಿ ಒರೆಸುತ್ತಿರುವಾಗ ಮಾತೆಯ ತಲೆಯ ಹಿಂಭಾಗ ದಲ್ಲಿ ಒಂದು ಕಣ್ಣು ಅವಳನ್ನೇ ನೋಡುತ್ತಿತ್ತು. ಇದನ್ನು ನೋಡಿದ ಕುಂಬಾರನ ಮಹಿಳೆ ಗಾಬರಿಯಿಂದ ಇದೇನಿದು ತಲೆಯೊಳಗೆ ‘ಕಣ್ಣು’ ಎಂದು ಹೆದರಿ ಎದ್ದು ಓಡತೊಡಗಿದಳು. ಆಗ ಮಾತೆ ಹೇಳಿದಳು, ಮಗಳೇ ಹೆದರಬೇಡ, ನಾನು ಭೂತ, ಪ್ರೇತ, ಪಿಶಾಚಿ, ಅಲ್ಲ. ನಾನು ‘ಶೀತಲಾದೇವಿ’ ಎಂದು ತನ್ನ ನಿಜರೂಪ ವನ್ನು ತೋರಿಸಿದಳು. ತಾಯಿ ಶೀತಲಮಾತೆಯ ದರ್ಶನದಿಂದ ಸಂತೋಷಗೊಂಡ ಕುಂಬಾರನ ಮಹಿಳೆ ಅಳುತ್ತಾ ಅವಳಿಗೆ ನಮಸ್ಕರಿಸಿದಳು.

  Don't underestimate the power of kudukas! - kannada whatsapp messages

ಆಗ ಮಾತೆಯು ಮಗಳೇ ಏಕೆ ಅಳುವೆ ಎಂದು ಕೇಳಿದಳು. ಅಮ್ಮ ನಾನು ಏನು ಹೇಳಲಿ, ನನ್ನ ಮನೆಯಲ್ಲಿ ದರಿದ್ರವೇ ತುಂಬಿದೆ. ನಿಮಗೆ ಕುಳಿತುಕೊಳ್ಳಲು ಸರಿಯಾದ ಸ್ಥಳವಿಲ್ಲ, ಕೂರಿಸಲು ಒಂದು ಕಂಬಳಿ, ಚಾಪೆಯು ಇಲ್ಲ, ಕೊಡಲು ಬಿಸಿ ಬಿಸಿ ಆಹಾರ, ಉಡಲು ಮಡಿ ಮಾಡಿದ ಬಟ್ಟೆ ಇಲ್ಲ. ಅದಕ್ಕಾಗಿ ಬೇಸರವಾಯಿತು ಎಂದಳು. ಕೂಡಲೇ ಶೀತಲಾದೇವಿ ಹೊರಗೆ ಹೋಗಿ, ಒಂದು ಕತ್ತೆಯ ಮೇಲೆ ಕುಳಿತಳು ಬಲಗಡೆ ಕೈಯಲ್ಲಿ ಕಸ ಗುಡಿಸುವ ಹಿಡಿ , ಎಡಗಡೆ ಕೈಯಲ್ಲಿ ಕಸ ತುಂಬುವ ಬಾಂಡ್ಲಿ ತಂದಳು.‌ ಕುಂಬಾರನ ಮನೆಯ ಮೇಲೆ, ಕೆಳಗೆ ಗುಡಿಸಿ, ಕಟ್ಟಿದ ಬಲೆ ಕಸವನ್ನೆಲ್ಲ ಜಾಡಿಸಿ ಜಾಡಿಸಿ ಕಟ್ಟಿದ್ದ ದರಿದ್ರವನ್ನೆಲ್ಲಾ ಒಟ್ಟು ಮಾಡಿ ಬಾಂಡ್ಲಿಯಲ್ಲಿ ತುಂಬಿ ಹೊರಗೆ ಬಿಸಾಕಿದಳು. ಕತ್ತಲು ತುಂಬಿದ್ದ ಮನೆ ಬೆಳಕಾಯಿತು. ನಂತರ ಕತ್ತೆಯ ಮೇಲೆ ಕುಳಿತ ದೇವಿ, ಮಗಳೇ ನಿನ್ನ ಉಪಚಾರದಿಂದ ನಾನು ಸಂತುಷ್ಟ ಳಾಗಿದ್ದೇನೆ ನಿನಗೆ ಯಾವ ವರಬೇಕು ಕೇಳಿಕೋ ಎಂದಳು. ಕುಂಬಾರನ ಮಡದಿ ದೇವಿಗೆ ಕೈ ಮುಗಿದು, ಅಮ್ಮಾ ನನ್ನ ಮನೆಯಲ್ಲಿರುವ ಕಸ, ಧೂಳನ್ನೆಲ್ಲಾ ಜಾಡಿಸಿ ಹೊರಹಾಕಿ ಬಡತನ ಹೋಗಿಸಿದೆಯೋ ಅದೇ ರೀತಿ, ನಮ್ಮ ಇಡೀ ಹಳ್ಳಿಯಲ್ಲಿರುವ ಧೂಳು ಕಸಗಳೆಲ್ಲ ಹೊರಟು ಹೋಗಲಿ, ಹಾಗೆ, ಇಂದು ಪಾಲ್ಗುಣ ಮಾಸದ ಅಷ್ಟಮಿ ದಿನ ನೀನು ಬಂದಿರುವೆ ಇನ್ನು ಮುಂದೆ, ಪ್ರತಿಯೊಬ್ಬ ವ್ಯಕ್ತಿಯೂ ಪಾಲ್ಗುಣ ಮಾಸದ ಅಷ್ಟಮಿ ದಿನ ಶೀತಲಾದೇವಿಯ ವ್ರಥವನ್ನು ಮಾಡಿ, ತಣ್ಣನೆ ನೀರು ತಣ್ಣನೆ ಆಹಾರವನ್ನೇ ನಿನಗೆ ನೈವೇದ್ಯ ಮಾಡಿ ಅದನ್ನೇ ಎಲ್ಲರೂ ಸೇವಿಸಲಿ ಇದರಿಂದ ಅವರ ಮನೆಗಳಲ್ಲಿರುವ ಬಡತನ, ದಾರಿದ್ರ , ಅಜ್ಞಾನ ಅಳಿದು ಹೋಗಲಿ,ಎಂದು ಬೇಡಿದಳು.
ಶೀತಲ ಮಾತೆ ತಥಾಸ್ತು ಎಂದು ಕೇಳಿದ ವರಗಳನ್ನು ಕರುಣಿಸಿ ಅಂತರ್ಧಾನವಾದಳು.

  ಭೋಕ್ತಾ ಎಂದರೆ ಏನು? ಭಗವಂತ ಹೇಗೆ ಭೋಕ್ತ?

ಮರುದಿನ ಬೆಳಿಗ್ಗೆ, ಕುಂಬಾರನ ಮನೆಯ ಬಾವಿ ತುಂಬಾ ತಿಳಿ ನೀರು ತುಂಬಿತ್ತು. ಆದರೆ ಊರಿನಲ್ಲಿರುವ ಜಲವನ್ನೆಲ್ಲ ಬತ್ತಿಸಿದಳು. ಅದೇ ದಿನ ರಾತ್ರಿ ಇಡೀ ಹಳ್ಳಿಗೆ ಹಳ್ಳಿ ಬೆಂಕಿ ಹತ್ತಿ ಉರಿವಂತೆ ಮಾಡಿದಳು. ಕುಂಬಾರನ ಮನೆ ಮಾತ್ರ ಸುರಕ್ಷಿತ ವಾಗಿತ್ತು. ಮರುದಿನ ಈ ವಿಚಾರ ತಿಳಿದ ರಾಜನು ಕುಂಬಾರನ ಮಡದಿಗೆ ಹೇಳಿ ಕಳಿಸಿದನು. ಇಡೀ ಹಳ್ಳಿಗೆ ಹಳ್ಳಿಯೇ, ಸುಟ್ಟು ಹೋಯಿತಂತೆ, ನಿನ್ನ ಮನೆ ಮಾತ್ರ ಸುಭದ್ರವಾಗಿದ್ದು ಬಾವಿ ತುಂಬಾ ನೀರು ಇದೆಯಂತೆ ಇದಕ್ಕೆ ಕಾರಣವೇನು ಎಂದು ಕೇಳಿದನು. ಆಗ ಕುಂಬಾರನ ಮಡದಿ ರಾಜನಿಗೆ ಶೀತಲ ಮಾತೆಯ ವಿಚಾರವನ್ನೆಲ್ಲ ಹೇಳಿದಳು. ಶೀತಲಾಮಾತೆಗೆ ಈ ಹಳ್ಳಿಯಲ್ಲಿ ಅವಮಾನವಾಗಿದೆ. ಆದ್ದರಿಂದ ಅವಳನ್ನು ಪೂಜಿಸಿ ಬೇಡಿಕೊಂಡರೆ, ಎಲ್ಲವೂ ಸರಿ ಹೋಗುತ್ತದೆ ಎಂದು ಹೇಳಿದಳು.
ಅದೇ ಪ್ರಕಾರ ರಾಜನು ಊರಿನವರೆಲ್ಲ ಶೀತಲಾಮಾತೆಯ ಅಷ್ಟಮಿ ಪೂಜೆಯನ್ನು ಆಚರಿಸಬೇಕೆಂದು ಡಂಗುರ ಹೊಡೆಸಿದನು. ಊರವರೆಲ್ಲ ಶೀತಲಾದೇವಿಯ ಪೂಜೆಯ ವ್ರಥ ವನ್ನು ಭಕ್ತಿಯಿಂದ ಮಾಡಿ ತಮ್ಮ ತಪ್ಪನ್ನು ಕ್ಷಮಿಸುವಂತೆ ಬೇಡಿಕೊಂಡರು. ಅವರ ಮನೆಗಳೆಲ್ಲ ಧನ ಧಾನ್ಯದಿಂದ ತುಂಬಿ, ಜಲ- ನೆಲೆಗಳೆಲ್ಲ ತುಂಬಿತು. ಶೀತಲ ಮಾತೆ ದಯೆಯಿಂದ ಜನರು ಸುಖ ಸಮೃದ್ಧಿ, ಸಂತೋಷದಿಂದ ಇರತೊಡಗಿದರು. ಅಂದಿನಿಂದ ಪ್ರತಿ ವರ್ಷ ಪಾಲ್ಗುಣ ಮಾಸದ ಅಷ್ಟಮಿ ದಿನ ಶೀತಲಾ ದೇವಿಯನ್ನು ಪೂಜೆ ಮಾಡ ಬೇಕೆಂದು ರಾಜನು ಆದೇಶ ಹೊರಡಿಸಿದನು ಆಗಿನಿಂದ ಈ ಪದ್ಧತಿ ರೂಢಿಯಲ್ಲಿ ಬಂದಿತು.
( ಈ ಪದ್ಧತಿ ರಾಜಸ್ಥಾನ, ಗುಜರಾತ್ ಕಡೆಗಳಲ್ಲಿ ಇದೆ. ನಮ್ಮಲ್ಲಿ ಉಯ್ಯಾಲೆ ಗೌರಿ, ಮೌನ ಗೌರಿ, ಚಿತ್ರಾ ಪೂರ್ಣಿಮೆ, ವಸಂತನವರಾತ್ರಿ, ಲಕ್ಷ್ಮಿ ವ್ರತಗಳು ಇರುವಂತೆ ಅಲ್ಲಿಯೂ ಇದನ್ನು ಆಚರಿಸುತ್ತಾರೆ.)

  'ಹೇಳಿಕೊಳ್ಳದಿದ್ದರೆ ಅದೆಂತಹ ಪ್ರೀತಿ?' ಸುಂದರವಾದ ಕನ್ನಡ ಕಥೆ

ಶ್ರೀ ಶೀತಲಾ ದೇವಿ ಸ್ತೋತ್ರಂ:-
ವಂದೇಹಂ ಶೀತಲಾಂ ದೇವೀಂ ರಾಸಬಸ್ಥಾಂ ದಿಗಮ್ಬರಾಮ್ !
ಮಾರ್ಜನೀಕಲಶೋಪೇತಾಂ ಶೂರ್ಪಾಲಂಕೃತಮಸ್ತಕಾಮ್ !!
ಏತಾನಿ ಖರನಾಮಾನಿ ಶೀತಲಾಗ್ರೇ ತು ಯಹ ಪಠೇತ್ !
ತಸ್ಯ ಗೇಹೇ ಶಿಶೂನಾಂ ಚ ಶೀತಲಾರುಡ್ ನ ಜಾಯತೇ !
ಶೀತಲಾಷ್ಟಕಮೇವೇದಂ ನ ದೇಯಂ ಯಸ್ಯ ಕಸ್ಯಚಿತ್ !
ದಾತವ್ಯಂ ಚ ಸದಾ ತಸ್ಮೈ ಶ್ರದ್ಧಾ ಭಕ್ತಿ ಯುತಾಯ ವೈ!
ಇತಿಶ್ರೀ ಶೀತಲಾಷ್ಟಕಂ!!

ವಂದನೆಗಳೊಂದಿಗೆ,
ಬರಹ :- ಆಶಾ ನಾಗಭೂಷಣ.

Leave a Reply

Your email address will not be published. Required fields are marked *

Translate »