ಶ್ರೀ ಶಾರದಾಂಬೆ, ಶೃಂಗೇರಿ
ತುಂಗಾ ನಿವಾಸಿನಿ ಶೃಂಗೇರಿ ಪುರವಾಸಿನಿ ಶ್ರೀ ಶಾರದಾದೇವಿ ಯು ನೆಲೆಸಿರುವ ಶೃಂಗೇರಿ ಪುಣ್ಯಕ್ಷೇತ್ರವಾಗಿದೆ. ತುಂಗೆಯ ದಡದಲ್ಲಿ, ಮಲೆನಾಡ ತಡಿಯಲ್ಲಿ, ಸಹ್ಯಾದ್ರಿಯ ಮಡಿಲಲ್ಲಿ, ಪ್ರಕೃತಿದೇವಿಯ ರಮಣೀಯ ಸೌಂದರ್ಯದ ಗನಿಯಲ್ಲಿ ಮೈ ತಳೆದು ನಿಂತಿರುವ ಶೃಂಗೇರಿ, ಚಿಕ್ಕಮಂಗಳೂರು ಜಿಲ್ಲೆಯ ಹಲವಾರು ಧಾರ್ಮಿಕ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ.
ಶಂಕರಾಚಾರ್ಯರು ಅದ್ವೈತ ವೇದಾಂತ ಪ್ರತಿಪಾದಿಸುತ್ತಾ ಭಾರತಾದ್ಯಂತ ಸಂಚರಿಸುತ್ತಿದ್ದಾಗ, ಕಾಶ್ಮೀರಕ್ಕೆ ಬಂದು ತಲುಪುತ್ತಾರೆ. ಕಾಶ್ಮೀರದ ಶಾರದಾ ಸರ್ವಜ್ಞಪೀಠವು ಹಿಂದೂ ವೇದಾಧ್ಯಯನಕ್ಕೆ ಪ್ರಮುಖ ಕೇಂದ್ರವಾಗಿದ್ದು, ದೇಶ ವಿದೇಶಗಳಿಂದಲೂ ವೇದಾಧ್ಯಯನ ಮಾಡಲು ಅನೇಕ ಜನರು ಆಗಿನ ಕಾಲದಲ್ಲಿ ಆಗಮಿಸುತ್ತಿದ್ದರು. ಈ ನಿಟ್ಟಿನಲ್ಲಿ ಶ್ರೀ ಶಂಕರಾಚಾರ್ಯರು ಭಾರತದ ಉದ್ದಗಲಕ್ಕೂ ಪ್ರಯಾಣಿಸಿ, ದೇಶದ ನಾಲ್ಕು ದಿಕ್ಕುಗಳಲ್ಲಿ ಅಂದರೆ ಪೂರ್ವ ದಿಕ್ಕಿನ ಒರಿಸ್ಸಾದ ಪುರಿ, ಪಶ್ಚಿಮ ದಿಕ್ಕಿನ ಗುಜರಾತಿನ ದ್ವಾರಕಾ, ಉತ್ತರ ದಿಕ್ಕಿನ ಉತ್ತರಾಖಂಡದ ಬದರಿ, ದಕ್ಷಿಣ ದಿಕ್ಕಿನ ಕರ್ನಾಟಕದ ಶೃಂಗೇರಿ, ಹೀಗೆ ನಾಲ್ಕು ಮಠಗಳನ್ನು ಸ್ಥಾಪಿಸಿ, ಸನಾತನ ಧರ್ಮ ರಕ್ಷಣೆ ಮತ್ತು ಪ್ರಚಾರಕ್ಕಾಗಿ ತಮ್ಮ ಶಿಷ್ಯರನ್ನು ನೇಮಿಸಿದರು. ತಮ್ಮ ಪರಿಕ್ರಮ ಕಾಲದಲ್ಲಿ ಶೃಂಗೇರಿಗೆ ಬಂದಾಗ ತುಂಗಾ ನದಿಯ ದಂಡೆಯ ಮೇಲೆ ಒಂದು ಸರ್ಪವು ಬಿಸಿಲಿನ ಬೇಗೆಯಲ್ಲಿದ್ದ ಗರ್ಭಿಣಿ ಕಪ್ಪೆಗೆ ತನ್ನ ಹೆಡೆಯೆತ್ತಿ ನೆರಳನ್ನು ಕೊಡುತ್ತಿರುವ ದೃಶ್ಯವನ್ನು ನೋಡಿ, ಪ್ರಕೃತಿ ಸಹಜವಾಗಿ ವೈರಿಯಾದ ಪ್ರಾಣಿಗಳು ಸ್ನೇಹ ಮತ್ತು ಪ್ರೀತಿಯಿಂದ ಇರುವ ದೃಶ್ಯವನ್ನು ಕಂಡು, ಈ ಪವಿತ್ರ ಸ್ಥಳವೇ ಶಕ್ತಿಪೀಠ ಸ್ಥಾಪಿಸುವುದಕ್ಕೆ ಪ್ರಶಸ್ತವಾದ ಸ್ಥಳವೆಂದು ತಿಳಿದರು. ಕಾಶ್ಮೀರದಿಂದ ಶಾರದೆಯ ಮೂರ್ತಿಯನ್ನು ತಂದು ಇಲ್ಲಿ ಪ್ರತಿಷ್ಠಾಪಿಸಲಾಯಿತು.
ತ್ರೇತಾಯುಗದಲ್ಲಿ ಋಷ್ಯಶೃಂಗ ಎಂಬ ಮುನಿಯೊಬ್ಬರು ಇಲ್ಲಿ ತಪಸ್ಸು ಮಾಡುತ್ತಿದ್ದರು ಎಂಬ ಉಲ್ಲೇಖವಿದೆ. ಶ್ರೀಆದಿಶಂಕರರು ಬಂಡೆಯ ಮೇಲೆ ಕೆತ್ತಿದ ಶ್ರೀಚಕ್ರದ ಮೇಲೆ ಶ್ರೀಗಂಧದ ಮರದಿಂದ ಮಾಡಿದ ಮೂರ್ತಿಯನ್ನು ಸ್ಥಾಪಿಸಿದರು. ಅದನ್ನು 14ನೇ ಶತಮಾನದಲ್ಲಿ ವಿದ್ಯಾರಣ್ಯರು ಚಿನ್ನದಿಂದ ಮಾಡಲ್ಪಟ್ಟ ಶಾರದಾ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಕಾಲಕಾಲಕ್ಕೆ ಈ ದೇವಸ್ಥಾನವನ್ನು ಪುನರ್ನವೀಕರಣಗೊಳಿಸಲಾಗಿದೆ. ದೇವಾಲಯದ ಇನ್ನೊಂದು ಆಕರ್ಷಣೆ ಎಂದರೆ, ತುಂಗೆಯ ಒಡಲಲ್ಲಿ ದೊಡ್ಡ ದೊಡ್ಡ ಕಪ್ಪು ಬಣ್ಣದ ಸುಂದರ ಮೂಗುತಿ ಮೀನುಗಳನ್ನು ಕಾಣಬಹುದಾಗಿದೆ. ಈ ಮೀನುಗಳನ್ನು ನೋಡಿದರೆ ಅದೃಷ್ಟ ಒಲಿಯುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಭಕ್ತರು ಮೀನಿಗೆ ಮಂಡಕ್ಕಿಯನ್ನು ಹಾಕುವ ಪರಿಪಾಠವನ್ನು ಕಾಣಬಹುದಾಗಿದೆ.
ಶ್ರೀ ಶಾರದಾಲಯದ ಪಕ್ಕದಲ್ಲಿಯೇ ಶ್ರೀ ಸುರೇಶ್ವರಾಚಾರ್ಯರ ಅಧಿಷ್ಠಾನವನ್ನು ನಾವು ಕಾಣಬಹುದು. ಶ್ರೀ ಶಂಕರರು ಈ ಪೀಠದ ರಕ್ಷಣೆಗಾಗಿ ಅನೇಕ ದೇವತೆಗಳನ್ನು ಸ್ಥಾಪಿಸಿದ್ದಾರೆ. ವಿದ್ಯಾಶಂಕರ ಆಲಯ, ತೋರಣಗಣಪತಿ, ಸುಬ್ರಹ್ಮಣ್ಯ, ಬ್ರಹ್ಮ ಇತ್ಯಾದಿ ಇವೆ. ವಿದ್ಯಾಶಂಕರ ದೇವಾಲಯದ ಶಿಲ್ಪಕಲೆ ಬಹಳ ಚೆನ್ನಾಗಿದೆ. ಒಳಗಿನ ಪ್ರಾಕಾರದಲ್ಲಿ ರಾಶಿ ಕಂಬಗಳಿವೆ. ಮೇಷದಿಂದ ಮೀನದವರಿಗೆ ( ಸೌರಮಾನ ರೀತಿಯ) ಆಯಾಯ ಮಾಸಗಳಲ್ಲಿ ಸೂರ್ಯನ ಕಿರಣಗಳು ಬೀಳುವುದನ್ನು ನಾವು ಕಾಣಬಹುದು.
ನವರಾತ್ರಿ ಉತ್ಸವದ ಸಂದರ್ಭದಲ್ಲಿ ಇಲ್ಲಿ ಶಾರದೆಗೆ ಚಂಡಿಕಾ ಹೋಮ, ರಥೋತ್ಸವ, ವಿವಿಧ ಅಲಂಕಾರ ಪೂಜೆ ನಡೆಯುತ್ತದೆ. ಶಾರದಾದೇವಿ ನವರಾತ್ರಿ ಉತ್ಸವಗಳಲ್ಲಿ ಸರಸ್ವತಿ, ದುರ್ಗಾಲಕ್ಷ್ಮಿ ರೂಪದಲ್ಲಿ ಪೂಜಿಸಲ್ಪಡುತ್ತಾಳೆ. ಮಹಾಭಿಷೇಕ, ಶತರುದ್ರಾಭಿಷೇಕ ನಡೆಯುತ್ತದೆ. ಪ್ರತಿದಿನವೂ ಒಂದೊಂದು ಅಲಂಕಾರ ನಡೆಯುತ್ತದೆ. ಹಂಸವಾಹನ ಅಲಂಕಾರ, ವೃಷಭ ವಾಹನ ಅಲಂಕಾರ, ಮಯೂರವಾಹನ ಅಲಂಕಾರ, ಗರುಡವಾಹನ ಅಲಂಕಾರ, ಇಂದ್ರಾಣಿ ಅಲಂಕಾರ, ವೀಣಾ ಶಾರದ ಅಲಂಕಾರ, ಮೋಹಿನಿ ಅಲಂಕಾರ, ಗಜಲಕ್ಷ್ಮಿ ಅಲಂಕಾರಗಳನ್ನು ಮಾಡಲಾಗುತ್ತದೆ.
ಕ್ಷರವಿಲ್ಲದ ವಿದ್ಯೆ ಅಕ್ಷರ ವಿದ್ಯೆ. ಶೃಂಗೇರಿ ಶಾರದೆಯ ಮಡಿಲಲ್ಲಿ ಅಕ್ಷರಾಭ್ಯಾಸ ಮಂಟಪ ಎಂಬ ವಿಶೇಷ ಮಂಟಪವಿದೆ. ಬೇರೆಲ್ಲಾ ಕಡೆ ನವರಾತ್ರಿಯಲ್ಲಿ ಮಾತ್ರ ಅಕ್ಷರಾಭ್ಯಾಸ ಮಾಡಿದರೆ, ಇಲ್ಲಿ ಯಾವಾಗಲೂ ವಾರದ ನಿರ್ದಿಷ್ಟ ದಿನದಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡಿಸುತ್ತಾರೆ. ಕರ್ನಾಟಕದ ಮೂಲೆ ಮೂಲೆಗಳಿಂದ ಭಕ್ತರು ಇದಕ್ಕಾಗಿಯೇ ಆಗಮಿಸುತ್ತಾರೆ. ಅಲ್ಲದೇ ಇಲ್ಲಿಯ ಇನ್ನೊಂದು ವಿಶೇಷವೇನೆಂದರೆ, ಭಗವದ್ಗೀತೆಯ 18 ಅಧ್ಯಾಯಗಳ ಕಂಠಪಾಠ ಪರೀಕ್ಷೆಯಲ್ಲಿ ಹೆಸರು ದಾಖಲಾತಿ ಮಾಡಿ ಪಾಲ್ಗೊಂಡವರಿಗೆ, ಯಾವುದೇ ಅಧ್ಯಾಯದ ಯಾವುದೇ ಶ್ಲೋಕಗಳನ್ನು ಕೇಳಿದಲ್ಲಿ ಸ್ಪಷ್ಟ ಉಚ್ಚಾರದೊಂದಿಗೆ ಕಂಠಪಾಠ ಹೇಳಿದವರಿಗೆ, ಶ್ರೀ ಮಠದ ಗುರುಗಳ ದಿವ್ಯ ಹಸ್ತಗಳಿಂದಲೇ ಮಂತ್ರಾಕ್ಷತೆ, ಸನ್ಮಾನ ಪತ್ರ ಹಾಗೂ ನಿಗದಿತ ಮೊತ್ತವನ್ನು ನೀಡಿ ಗೌರವಿಸುತ್ತಾರೆ. ಗೀತಾಜ್ಞಾನ ಯಜ್ಞದ ಬಂಧುಗಳು ಈ ಗೌರವಕ್ಕೆ ಅರ್ಹರಾದಲ್ಲಿ ನಮ್ಮ ಈ ಯಜ್ಞಕ್ಕೆ ಸಾರ್ಥಕತೆಯ ಹೆಚ್ಚಿನ ಹೊಳವು ಬರುವುದು ಎಂಬ ನಿರೀಕ್ಷೆಯ ಹಾರೈಕೆಯೊಂದಿಗೆ ಈ ಶುಭದಿನದಂದು ದೇವಿ ಶಾರದೆಯನ್ನು ಭಕ್ತಿಯಿಂದ ಪೂಜಿಸಿ, ವಿದ್ಯಾಧಿದೇವತೆಯ ಕೃಪಾಶೀರ್ವಾದ ಪಡೆಯೋಣ.
ಬ್ರಹ್ಮಸ್ವರೂಪಾ ಪರಮಾ
ಜ್ಯೋತಿರೂಪಾ ಸನಾತನಿ |
ಸರ್ವವಿದ್ಯಾಧಿದೇವೀ ಯಾ
ತಸ್ಯೈ ವಾಣ್ಯೈ ನಮೋ ನಮಃ ||