ಕೋಪೇಶ್ವರ ದೇವಸ್ಥಾನ..!
ಕೋಪೇಶ್ವರ ದೇವಸ್ಥಾನ
ಶಿವನಿಗೆ ಕೋಪ ಬಂದಿದೆ….!!
ವಿಷ್ಣು ಸಮಾಧಾನ ಮಾಡುತ್ತಿದ್ದಾನೆ…!!
ಒಂದೇ ಗರ್ಭಗುಡಿಯಲ್ಲಿ ಕೋಪೇಶ್ವರನ ಜೊತೆ ಧೂಪೇಶ್ವರ..!!
ತನಗೆ ಆಹ್ವಾನವಿಲ್ಲದಿದ್ದರೂ ಸಹ ದಾಕ್ಷಾಯಿಣಿಯು ತನ್ನ ತಂದೆ ದಕ್ಷಬ್ರಹ್ಮನು ಮಾಡುತ್ತಿದ್ದ ಯಜ್ಞದಲ್ಲಿ ಪಾಲ್ಗೊಳ್ಳಲು ಹೋಗೋಣವೆಂದು ಪತಿ ಪರಮೇಶ್ವರನಾದ ಶಿವನನ್ನು ಒತ್ತಾಯಿಸುತ್ತಾಳೆ…!!
ಸತಿಯ ಒತ್ತಾಯಕ್ಕೆ ಮಣಿಯದೆ, ಆಹ್ವಾನವಿಲ್ಲದೆ ಯಜ್ಞ ಸಮಾರಂಭಕ್ಕೆ ಹೋಗುವುದು ತರವಲ್ಲ ಜೊತೆಗೆ ಆಹ್ವಾನವಿಲ್ಲದೆ ಸಮಾರಂಭಕ್ಕೆ ಹೋಗುವುದರಿಂದ ಅಪಮಾನವಾಗುವುದು ಆದ್ದರಿಂದ ಯಜ್ಞ ಸಮಾರಂಭಕ್ಕೆ ಹೋಗಬಾರದು ಎಂದು ಆಕೆಗೆ ತಿಳಿ ಹೇಳಿ ಶಿವನು ಸತಿಯ ಜೊತೆಗೆ ಸಮಾರಂಭಕ್ಕೆ ಹೋಗಲು ನಿರಾಕರಿಸುತ್ತಾನೆ…!!
ಆದರೆ ಸತಿಯು ಶಿವನ ಮಾತನ್ನು ಕೇಳದೆ ತನ್ನ ತಂದೆ ನಮಗೆ ಔಪಚಾರಿಕವಾಗಿ ಆಹ್ವಾನ ಕೊಡಲು ಮರೆತಿದ್ದಾರೆ ನಮಗೆ ಅವಮಾನ ಮಾಡುವ ಉದ್ದೇಶ ಅವರಿಗೆ ಇಲ್ಲ ಎಂದು ಹೇಳಿ ಶಿವನನ್ನು ಸಹ ತನ್ನ ತಂದೆಯು ನಡೆಸುತ್ತಿದ್ದ ಯಜ್ಞ ಸಮಾರಂಭಕ್ಕೆ ತನ್ನ ಜೊತೆ ಬರಲು ಒತ್ತಾಯಿಸುತ್ತಾಳೆ…!!
ಸತಿಯ ಮಾತುಗಳಿಗೆ ಜಗ್ಗದ ಶಿವನು ಆಹ್ವಾನವಿಲ್ಲದೆ ನಾನು ನಿನ್ನ ಜೊತೆ ಸಮಾರಂಭಕ್ಕೆ ಬರುವುದಿಲ್ಲ, ನಿನಗೆ ಹೋಗಲೇಬೇಕು ಎನಿಸಿದರೆ ನೀನೊಬ್ಬಳೇ ಹೋಗಿ ಬಾ ಎಂದು ಹೇಳಿ ಸತಿಯ ಜೊತೆ ನಂದಿಯನ್ನು ಕಳುಹಿಸಿಕೊಟ್ಟನು…!!
ಶಿವನು ಅಂದುಕೊಂಡಂತೆ ದಕ್ಷಬ್ರಹ್ಮನು ತನ್ನ ಮಗಳು ದಾಕ್ಷಾಯಿಣಿಗೆ ಯಜ್ಞ ಸಮಾರಂಭದ ವೇದಿಕೆಯಲ್ಲಿ ಅವಮಾನ ಮಾಡುತ್ತಾನೆ, ಅವಮಾನ ತಾಳಲಾರದೆ ದಾಕ್ಷಾಯಿಣಿಯು ಅದೇ ಯಜ್ಞ ಕುಂಡಕ್ಕೆ ಹಾರಿಬಿಡುತ್ತಾಳೆ…!!
ವಿಷಯವನ್ನು ತಿಳಿದು ಶಿವನು ಕೂಪೋದ್ರಿಕ್ತನಾಗಿ ದಕ್ಷಬ್ರಹ್ಮನ ಸಂಹಾರಕ್ಕಾಗಿ ವೀರಭದ್ರನನ್ನು ಕಳುಹಿಸಿಕೊಡುತ್ತಾನೆ…!! ವೀರಭದ್ರನು ದಕ್ಷಬ್ರಹ್ಮನ ಸಂಹಾರವೇನೋ ಮಾಡುತ್ತಾನೆ ಆದರೆ ಶಿವನ ಕೋಪವೇನು ಕಡಿಮೆಯಾಗುವುದಿಲ್ಲ ಶಿವನ ಕೋಪಕ್ಕೆ ಹೆದರಿ ನಂದಿಯೂ ಕೂಡ ಅವನ ಬಳಿ ಸುಳಿಯಲು ಹೆದರಿಕೊಂಡು ಬಹಳ ದೂರದಲ್ಲಿ ಕುಳಿತುಕೊಂಡು ಬಿಡುತ್ತಾನೆ…!!
ಇಂತಹ ಸಮಯದಲ್ಲಿ ವಿಷ್ಣು ದೇವನು ಶಿವನ ಬಳಿ ಬಂದು ಶಿವನನ್ನು ಸಮಾಧಾನ ಮಾಡುತ್ತಾನೆ ಆದುದರಿಂದ ಲಿಂಗರೂಪಿಯಾದ ಕೋಪೇಶ್ವರನಾದ ಶಿವನ ಪಕ್ಕದಲ್ಲಿ, ಲಿಂಗರೂಪಿ ಧೂಪೇಶ್ವರನಾಗಿ ವಿಷ್ಣುದೇವನು ಸಹ ಕುಳಿತಿದ್ದಾನೆ.
ಓಂ ನಮೋ ಭಗವತೇ ರುದ್ರಾಯ… ತಸ್ಮೈ ಶ್ರೀ ಕೋಪೇಶ್ವರಾಯ ನಮಃ…
ಓಂ ನಮೋ ಭಗವತೇ ವಾಸುದೇವಾಯ…. ತಸ್ಮೈ ಶ್ರೀ ಧೂಪೇಶ್ವರಾಯ ನಮಃ…
ಇಬ್ಬರಿಗೂ ದಿನಾಲು ಮೊಸರನ್ನವನ್ನು ಲೇಪಿಸಿ ಅವರನ್ನು ತಂಪು ಮಾಡುತ್ತಾರೆ…!!
ಜೊತೆಗೆ ಈ ದೇವಸ್ಥಾನದಲ್ಲಿ ಶಿವನ ಎದುರು ನಂದಿಯಿಲ್ಲ..!! ಈ ಜಾಗದಿಂದ ಸುಮಾರು ನಲವತ್ತು ಕಿಲೋಮೀಟರ್ ದೂರದಲ್ಲಿ ನಂದಿಯು ದಕ್ಷಿಣಾಭಿಮುಖವಾಗಿ ಕುಳಿತಿದ್ದಾನಂತೆ. ದೇವಸ್ಥಾನದ ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದ್ದರೂ ಕೂಡ ಇಬ್ಬರನ್ನು ಪೂಜಿಸುವುದು ಉತ್ತರಕ್ಕೆ.
ಈ ಕೋಪೇಶ್ವರ ದೇವಸ್ಥಾನ ಕೃಷ್ಣಾ ನದಿ ತೀರದ ಮೇಲೆ ಇಂದಿನ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿ ಕರ್ನಾಟಕದ ಗಡಿಭಾಗಕ್ಕೆ ಹೊಂದಿಕೊಂಡಂತೆ ಇರುವ ಕಿದ್ರಾಪುರ ಎನ್ನುವ ಪುಟ್ಟ ಗ್ರಾಮದಲ್ಲಿ ಇದೆ.
ಶಿಲಾಹಾರ ರಾಜ ಕುಟುಂಬದ ಗಂಧಾರಾದಿತ್ಯ ರಾಜ ಈ ದೇವಸ್ಥಾನವನ್ನು 12ನೇ ಶತಮಾನದಲ್ಲಿ ಕಟ್ಟಿಸಿದ್ದಾನೆ.
ಈ ದೇವಸ್ಥಾನವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದಾರೆ ಸ್ವರ್ಗ ಮಂಟಪ, ಸಭಾ ಮಂಟಪ, ಅಂತರಾಳಕಕ್ಷ ಮತ್ತು ಗರ್ಭಗೃಹ.
ಈ ದೇವಸ್ಥಾನದ ಮುಖ್ಯ ಆಕರ್ಷಣೆ ಸ್ವರ್ಗ ಮಂಟಪ ಈ ಸ್ವರ್ಗ ಮಂಟಪದ ಛಾವಣಿಯಲ್ಲಿ ವೃತ್ತಾಕಾರದ ಗವಾಕ್ಷಿಯನ್ನು ಬಹಳ ಅದ್ಭುತವಾಗಿ ನಿರ್ಮಿಸಿದ್ದಾರೆ ಮತ್ತು ಗವಾಕ್ಷಿಯ ಕೆಳಗೆ ಒಂದು ವೃತ್ತಾಕಾರವಾದ ರಂಗಸ್ಥಳವನ್ನು ಸಹ ನಿರ್ಮಿಸಿದ್ದಾರೆ… ಬಹುಶ ಪೌರ್ಣಮಿಯ ದಿನ ರಂಗಸ್ಥಳದಿಂದ ತಲೆಯೆತ್ತಿ ನೋಡಿದರೆ ಪೂರ್ಣಚಂದ್ರನ ಜೊತೆ ಸಹಸ್ರಾರು ತಾರೆಗಳು ಗವಾಕ್ಷಿಯಿಂದ ಕಂಡು ಬರುತ್ತಿದ್ದವು ಅದು ಸ್ವರ್ಗದಂತೆ ಕಾಣಿಸುತ್ತಿತ್ತು ಆದುದರಿಂದ ಇದನ್ನು ಸ್ವರ್ಗ ಮಂಟಪ ಎಂದು ಕರೆದಿರಬೇಕು.
ದೇವಸ್ಥಾನದ ಹೊರ ಗೋಡೆಯಲ್ಲಿ ಎಲ್ಲಾ ದೇವತೆಗಳು ಗಜಾರೂಢರಾಗಿದ್ದಾರೆ….. ಅಂದರೆ ಅವರ ವಾಹನ ಯಾವುದೇ ಇರಲಿ ಈ ದೇವಸ್ಥಾನದಲ್ಲಿ ಮಾತ್ರ ಅವರು ಆನೆಯ ಮೇಲೆ ಕುಳಿತಿದ್ದಾರೆ ದೂರದೃಷ್ಟವಶಾತ್ ಔರಂಗಜೇಬ್ ನ ದಾಳಿಗೆ ಸಿಲುಕಿ ಎಲ್ಲಾ ಆನೆಗಳು ಮತ್ತು ದೇವತೆಗಳು ಕುರೂಪಿಗಳಾಗಿದ್ದಾರೆ.
ದೇವಸ್ಥಾನದ ಒಳಗಡೆಯೂ ಸಹ ಕಪ್ಪುಬಸಾಲ್ಟ್ ಶಿಲೆಯಲ್ಲಿ ಸಹಸ್ರಾರು ಕೆತ್ತನೆಗಳನ್ನು ಮತ್ತು ಕುಸರಿ ಅಲಂಕಾರಗಳನ್ನು ಬಹಳ ಸುಂದರವಾಗಿ ಮತ್ತು ಅತ್ಯಾಕರ್ಷಕವಾಗಿ ಮಾಡಿದ್ದಾರೆ.
ದೇವಸ್ಥಾನದ ಒಳಗೆ ಕನ್ನಡದ ಶಿಲಾಶಾಸನವೂ ಇದೆ.
ಈ ದೇವಸ್ಥಾನದ ನಿರ್ಮಾಣಕ್ಕೆ ಉಪಯೋಗಿಸಿರುವ ಕಪ್ಪುಬಸಾಲ್ಟ್ ಶಿಲೆ ಈ ಜಾಗದಿಂದ ಒಂದು ನೂರು ಕಿಲೋಮೀಟರ್ ಸುತ್ತಳತೆಯಲ್ಲಿ ಎಲ್ಲೂ ಸಿಗುವುದಿಲ್ಲ ಮತ್ತು ಇಡೀ ದೇವಸ್ಥಾನವನ್ನು ಇಂಟರ್ಲಾಕ್ ಮಾದರಿಯಲ್ಲಿಯೇ ಕಟ್ಟಲಾಗಿದೆ.
ಈ ಜಾಗವನ್ನು ತಲುಪಲು ಇಂದಿಗೂ ನಮಗೆ ಒಂದು ಸರಿಯಾದ ರಸ್ತೆ ನಿರ್ಮಿಸಲು ಸಾಧ್ಯವಾಗಿಲ್ಲ ಆದರೆ ಒಂದು ಸಾವಿರ ವರ್ಷಗಳ ಹಿಂದೆ ನೂರಾರು ಕಿಲೋಮೀಟರ್ ಗಳ ದೂರದಿಂದ ಕಪ್ಪುಬಸಾಲ್ಟ್ ಶಿಲೆಯನ್ನು ಇಲ್ಲಿಗೆ ತಂದಿದ್ದು ಹೇಗೆ ಮತ್ತು ಆ ಕಠಿಣ ಶಿಲೆಯಲ್ಲಿ ಇಂತಹ ಅದ್ಭುತವಾದ ಕೆತ್ತನೆಗಳನ್ನು ಮತ್ತು ಅಲಂಕಾರಿಕ ಕುಸರಿ ಕೆಲಸಗಳನ್ನು ಮಾಡಲು ಅವರ ಬಳಿ ಇದ್ದ ಅತ್ಯಧುನಿಕ ಉಪಕರಣಗಳು ಯಾವುವು…?