ಹನುಮಂತನ ಹುಟ್ಟು
ಗಂಧರ್ವ ಅಂದರೆ, ಗಂಧರ್ವ ಪುರುಷ ಮತ್ತು ಗಂಧರ್ವ ಸ್ತ್ರೀ ಅಂತ ಬೇರೆ ಬೇರೆ ಇರುತ್ತಾರೆ. ಇವರೆಲ್ಲ ದೇವರುಗಳ ಸೇವೆ ಮಾಡುತ್ತಾರೆ. ಕೈಲಾಸದಲ್ಲಿ ಈಶ್ವರ ಪಾರ್ವತಿಯರ ಸೇವೆ ಮಾಡಲು ಗಂಧರ್ವರು ಇದ್ದರು. ಅದೊಂದು ದಿನ ಒಬ್ಬ ಗಂಧರ್ವ ಸ್ತ್ರೀ ಕೈಲಾಸದಲ್ಲಿ ಸೇವೆಯಲ್ಲಿರುವಾಗ, ದೊಡ್ಡ ಸದ್ದಿನ ಗುಡುಗು ಬಂದಿತು. ಆಕೆ ಹೆದರಿ ಶಿವನ ಪಕ್ಕ ಬಂದು ಶಿವನ ಕೈ ಹಿಡಿದು ನಿಂತಳು. ಅದೇ ಹೊತ್ತಿಗೆ ಪಾರ್ವತಿ ಬಂದಳು. ಕೈ ಹಿಡಿದು ಶಿವನ ಪಕ್ಕವೇ
ಗಂಧರ್ವ ಸ್ತ್ರೀ ನಿಂತಿರುವುದನ್ನು ನೋಡಿ ಪಾರ್ವತಿಗೆ ಸಿಟ್ಟು ಬಂದು, ನಿನ್ನ ಸೌಂದರ್ಯದಿಂದ ಚಂಚಲ ಚಿತ್ತಳಾಗಿ ಶಿವನನ್ನು ಮರಳು ಮಾಡುವೆಯಾ? ಆದ್ದರಿಂದ ನೀನು ಭೂಲೋಕದಲ್ಲಿ ಕಪಿಯಾಗಿ ಜನಿಸು ಎಂದು ಶಾಪ ಕೊಟ್ಟಳು. ಶಿವನು ಪಾರ್ವತಿಗೆ, ಗೊತ್ತಿಲ್ಲದೆ ಹಾಗೆಲ್ಲ ಹೇಳಬಾರದು ಎಂದು ನಡೆದ ಸಂದರ್ಭ ಹೀಗೆ ಎಂದು ವಿವರಿಸಿದನು. ನಂತರ ಪಾರ್ವತಿಗೆ ತಪ್ಪಿನ ಆರಿವಾಯಿತು.
ಶಿವನು ಆಕೆಗೆ ನೀನು ಭೂಲೋಕದಲ್ಲಿ ಕಪಿಯಾಗಿ ಜನಿಸಿದಾಗ ನನ್ನ ಅಂಶ ದಿಂದ ಅಪ್ರತಿಮ ಸಾಹಸಿ, ಭಕ್ತನಾದ ಒಬ್ಬ ಮಗ ಜನಿಸುತ್ತಾನೆ ಎಂದು ವರ ಕೊಟ್ಟನು. ಅದೇ ರೀತಿ ಗಂಧರ್ವ ಸ್ತ್ರೀ ಭೂಮಿಯಲ್ಲಿ ಕಪಿಯಾಗಿ ಜನಿಸಿದಳು. ಅವಳೇ ಅಂಜನಾ. ಮಹಾರಾಜ ಕೇಸರಿ ಜೊತೆ ಅವಳ ವಿವಾಹವಾಯಿತು.
ವಿವಾಹವಾಗಿ ಬಹಳ ಕಾಲವಾದರೂ ಮಕ್ಕಳಾಗಲಿಲ್ಲ. ಆಗ ಗಂಡ ಹೆಂಡತಿ ಇಬ್ಬರೂ ಶಿವನ ಕುರಿತು ಕಠಿಣ ತಪಸ್ಸು ಮಾಡಿದರು. ಪ್ರತ್ಯಕ್ಷನಾದ ಶಿವನು
ನನ್ನ ಅಂಶವನ್ನು ಗರ್ಭದಲ್ಲಿ ಸೇರಿಸುವ ಶಕ್ತಿ ವಾಯುವಿಗೆ ಇರುತ್ತದೆ. ವಾಯು ದೇವನನ್ನು ಕುರಿತು ತಪಸ್ಸು ಮಾಡಿರಿ ಎಂದು ಅದೃಶ್ಯವಾದನು. ಮತ್ತೆ ಗಂಡ ಹೆಂಡತಿ ಇಬ್ಬರೂ ವಾಯು ಕುರಿತು ಎಷ್ಟೋ ವರ್ಷಗಳ ಕಾಲ ತಪಸ್ಸು ಮಾಡಿದರು. ಶಿವನು ತನ್ನ ಅಂಶವನ್ನು ಅಂಜನಾ ಗರ್ಭದಲ್ಲಿ ಸೇರಿಸಲು ವಾಯುವಿಗೆ ಕೊಟ್ಟನು. ಶಿವನ ಅಂಶವನ್ನು ಹಿಡಿಯುತ್ತಿದ್ದಂತೆ ವಾಯುವಿಗೆ ಮೈಪುಳಕವಾಗಿ ಅದು ತನ್ನದೇ ಮಗು ಎನಿಸಿ ಶಿವನಲ್ಲಿ ಹೇಳಿದ. ಶಿವನು, ನೀನು ನನ್ನ ಅಂಶವನ್ನು ಅವಳ ಗರ್ಭಕ್ಕೆ ಸೇರಿಸಿದ ಕಾರಣ ಕಾರಣ ಅವನ ತಂದೆ ಮತ್ತು ಅವನು ವಾಯುಪುತ್ರನಾಗುತ್ತಾನೆ ಎಂದು ಹೇಳಿದನು.
ಆನಂತರ ವಾಯು ದೇವ, ಅಂಜನಾದೇವಿ ಮತ್ತು ಕೇಸರಿಗೆ ಈ ವಿಷಯವನ್ನೆಲ್ಲ ತಿಳಿಸಿ ಶಿವನ ಅಂಶವನ್ನು ಅಂಜನಾ ಗರ್ಭದಲ್ಲಿ ಸೇರಿಸಿದನು. ಈ ರೀತಿಯಾಗಿ ಅಂಜನಾಪುತ್ರನಾಗಿ ಆಂಜನೇಯನಾದ. ವಾಯುದೇವನ ಅಂಶವಾಗಿ ವಾಯುಪುತ್ರನಾದ, ತಂದೆ ಕೇಸರಿ ಆದ್ದರಿಂದ ಕೇಸರಿನಂದನ ಆದನು. ಹೀಗಾಗಿ ಆಂಜನೇಯನಿಗೆ ಹುಟ್ಟುತ್ತಿದ್ದಂತೆ ಹಲವಾರು ಹೆಸರುಗಳು ಬಂದವು.
ಅಂಜನಾಗರ್ಭ ಸಂಭೂತೋ
ವಾಯುಪುತ್ರೋ ಮಹಾಬಲ:
ಕುಮಾರೋ ಬ್ರಹ್ಮಚಾರೀ ಚಿ
ತಸ್ಮೈ ಶ್ರೀ ಹನುಮಂತೇ ನಮಃ
ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.