ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶ್ರೀ ಕ್ಷೇತ್ರ ಹೂವಿನ ಹಡಗಲಿ – ಶ್ರೀ ವ್ಯಾಸರಾಜ ಗುರುಸಾರ್ವಭೌಮ ಪ್ರತಿಷ್ಠಿತ ಶ್ರೀ ನೃಸಿಂಹದೇವರು ಮತ್ತು ಶ್ರೀ ಮುಖ್ಯಪ್ರಾಣದೇವರು

” ಶ್ರೀ ವ್ಯಾಸರಾಜ ಗುರುಸಾರ್ವಭೌಮ ಪ್ರತಿಷ್ಠಿತ ಶ್ರೀ ನೃಸಿಂಹದೇವರು ಮತ್ತು ಶ್ರೀ ಮುಖ್ಯಪ್ರಾಣದೇವರು – ಶ್ರೀ ಕ್ಷೇತ್ರ ಹೂವಿನ ಹಡಗಲಿ “

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕು ಕೇಂದ್ರ.

ಸಾವಿರ ವರ್ಷ ಇತಿಹಾಸವಿರುವ ಈ ಊರು ಹಿಂದೆ ಬ್ರಾಹ್ಮಣರ ಅಗ್ರಹಾರವಾಗಿತ್ತು.

ಸುಮಾರು 2 ಕಿ.ಮಿ. ಅಂತರದಲ್ಲಿ ತುಂಗಭದ್ರ ನದಿಯನ್ನು ಹೊಂದಿರುವ ಈ ಊರು ವಿಜಯನಗರಕ್ಕೆ ನಿತ್ಯವೂ ಹಡಗಿನ ಮೂಲಕ ರಾಜಧಾನಿಗೆ ಸಾಕಗುವಷ್ಟು ಹೂವು, ಬಾಳೆಹಣ್ಣು ವೀಳೆದೆಲೆ ಇವುಗಳನ್ನು ಸಕಾಲಕ್ಕೆ ಸರಬರಾಜು ಮಾಡಿ ತನ್ನ ಹೆಸರನ್ನು ಅನವರ್ಥಕ ಗೊಳಿಸಿಕೊಂಡಿತ್ತು.

ಹೂವಿನಹಡಗಲಿ ಇಂದ ಹಂಪಿಯವರೆಗೆ ಹರಿಯುತ್ತಿರುವ ತುಂಗಭದ್ರನದಿಯ ಈ ಪ್ರದೇಶವನ್ನು ಹಂಪಿಹೊಳೆ ಎಂದು ಕರೆಯುತ್ತಾರೆ ಎಂದು ಡಾ.ಎಂ.ಚಿದಾನಂದಮೂರ್ತಿ ಅವರು ಗುರುತಿಸಿ ಇರುತ್ತಾರೆ.

ಶ್ರೀ ಪಂಪಾಪತಿ ದೇವರ ಪೂಜೆಗೆ ನಿತ್ಯವೂ ಹೂವು ಹಣ್ಣೂ ಸಮರ್ಪಣೆ ಮಾಡಿದ ಪುಣ್ಯ ವಿಶೆಷದ ಫಲವಾಗಿ ವಿಜಯನಗರದ ಷಟ್ ಚಕ್ರವರ್ತಿಗಳಿಗೆ ರಾಜಗುರುಗಳಾದ ಶ್ರೀ ವ್ಯಾಸರಾಯರು ತಮ್ಮ ಉಪಾಸ್ಯ ಮೂರ್ತಿಯಾದ ಶ್ರೀ ನೀಲಾದೇವಿ ಕರಾರ್ಚಿತ ಶ್ರೀ ಮೂಲಗೋಪಾಲಕೃಷ್ಣ ದೇವರೊಂದಿಗೆ ದಿಗ್ವಿಜಯ ಮಾಡಿದರು.

ಈ ಊರು ಪಂಪಾಕ್ಷೇತ್ರಕ್ಕೆ ಸಲ್ಲಿಸುತ್ತಿದ್ದ ಸೇವೆಯನ್ನು ಗುರುತಿಸಿ ಗೌರವಿಸುವ ಅವರ ಆರಾಧ್ಯ ದೇವರೊಂದಿಗೆ ದಿಗ್ವಿಜಯ ಮಾಡಿದಾಗ, ತಮ್ಮ ಪೂರ್ವಾವತಾರದ ಆರಾಧ್ಯ ದೇವರಾದ ಶ್ರೀ ನರಸಿಂಹದೇವರನ್ನು ಹಾಗು ಶ್ರೀ ಆಂಜನೇಯ ಸ್ವಾಮಿಯನ್ನು ಈ ಊರಿನ ಅಗಸೆ ಬಾಗಿಲಿನ ಸಮೀಪ ಈಶಾನ್ಯ ಭಾಗದಲ್ಲಿ ಪ್ರತಿಷ್ಟಾಪಿಸಿ ಈ ಊರನ್ನೇ ಉದ್ಧಾರ ಮಾಡಿದರು.

ಶ್ರೀ ಅಶ್ವತ್ಥ ವೃಕ್ಷದ ಕೆಳಗೆ ದಕ್ಷಿಣಾಭಿಮುಖವಾಗಿರುವ ಶ್ರೀ ನರಸಿಂಹದೇವರು ಪುಟ್ಟದಾಗುದ್ದರೂ ಮುಖವು ರುದ್ರಗಂಭೀರವಾಗಿದೆ.

4 ಕೈಗಳಲ್ಲಿ ಶಂಖ – ಚಕ್ರ – ಪಾಶ – ಅಂಕುಶಗಳನ್ನು ಧಾರಣೆ ಮಾಡಿದ್ದು ಉಳಿದೆರಡು ಕರಗಳಿಂದ ಹಿರಣ್ಯಕಶಿಪುವಿನ ಉದರವನ್ನು ಬಗೆಯುತ್ತಿದ್ದಾನೆ.

ಶ್ರೀ ಹನುಮಂತದೇವರು ಪಶ್ಚಿಮಾಭಿ ಮುಖವಾಗಿ ನಿಂತಿದ್ದು ದಕ್ಷಿಣದ ಕಡೆಗೆ ನೋಡುತ್ತ ಶ್ರೀ ರಾಮಚಂದ್ರದೇವರ ದರುಶನ ಮಾಡುತ್ತಿದ್ದಾರೆ.

ಬಿಂಬದಂತೆ ಪ್ರತಿಬಿಂಬ ಎಂಬ ಭಾವವನ್ನು ಅಭಿವ್ಯಕ್ತಗೊಳಿಸುವಂತೆ ಶ್ರೀ ಹನುಮಂತದೇವರಿಗೂ ಶ್ರೀ ನರಸಿಂಹದೇವರಂತೆ ನಖಗಳಿರುವುದು ಒಂದು ವಿಶೆಷ.

ಶ್ರೀಹರಿ ಪೂಜೆ ಇಲ್ಲದೆ ಶ್ರೀ ವಾಯುದೇವರ ಪೂಜೆ ಪರಿಪೂರ್ಣವಾಗದು ಎಂಬ ಪ್ರಾಚೀನ ಸಂಪ್ರದಾಯದಂತೆ ಶ್ರೀ ವ್ಯಾಸರಾಯರು ಶ್ರೀ ಹನುಮಂತನ ಮೇಲೆ ಶ್ರೀ ನರಸಿಂಹದೇವರ ಸಾಲಿಗ್ರಾಮವನ್ನಿರಿಸಿ ಪ್ರತಿಷ್ಥಾಪಿಸಿದ್ದಾರೆ.

  ವರ ಪ್ರದ ಹನುಮoತ ಕವಚ

ಶ್ರೀ ವಾಯುದೇವರು ಸುಮಾರು 6 ಅಡಿ ಎತ್ತರವಿದ್ದು ಅಜಾನುಬಾಹುಗಳೂ, ಅರವಿಂದದಳಾಯತಾಕ್ಷಕರೂ, ಸರ್ವಾಂಗ ಸುಂದರರೂ, ಸರ್ವಾಭರಣಭೂಷಿತರೂ ಆಗಿ ಭಕ್ತರ ಚಿತ್ತಾಪಹರಣವನ್ನು ಮಾಡುತ್ತಿದ್ದರೆ ಹಾಗೂ ಭಕ್ತರ ಅನಿಷ್ಟಗಳನ್ನು ಪರಿಹಾರಮಾಡಿ ಇಷ್ಟಾರ್ಥಗಳನ್ನು ಪೂರೈಸುತ್ತಿದ್ದಾರೆ.

ಶ್ರೀ ವ್ಯಾಸರಾಜರು ಶ್ರೀಹರಿವಾಯುಗಳ ಪೂಜೆ ನಿರಂತರವಾಗಿ ನೆರವೇರಿಸುವುದಕ್ಕಗಿ ಮೂಲತಃ ಬಿಜಾಪುರಜಿಲ್ಲೆಯ ” ಮುತ್ತಿಗಿ ” ಗ್ರಾಮಸ್ಥರಾದ ಅಗಸ್ತ್ಯ ಗೋತ್ರಜರಾದ ಶ್ರೀ ಕೆಂಚಣ್ಣನವರನ್ನು ನಿಯೋಜಿಸಿದರು. ಅಂದಿನಿಂದ ಇಂದಿನವರೆಗೆ ಈ ವಂಶದವರು ಇಲ್ಲೆ ಸೇವೆಯನ್ನು ಶ್ರೀ ವ್ಯಾಸರಾಜರ ಅನುಗ್ರಹ ಬಲದಿಂದ ನೆರವೇರಿಸಿಕೊಂಡು ಬರುತ್ತಿದ್ದಾರೆ.

ದಿನಾಂಕ : 23.04.1535 ಜಯನಾಮ ಸಂವತ್ಸರ ವೈಶಖ ಬಹುಳ ಷಷ್ಠಿ ಶುಕ್ರವಾರದಂದು ವಿಜಯನಗರದ ಅಚ್ಚುತದೇವರಾಯರ ಮಗ ಸಿರಿಯಪ್ಪನು ಪಾಲಿಸಿದ ಹೂವಿನಹಡಗಲಿ ಹನುಮಂತದೇವರ ನೈವೇದ್ಯಕ್ಕಗಿ ಕೆಂಚಣ್ಣನವರಿಗೆ 9 ಎಕರೆ ಭೂಮಿಯನ್ನು ದಾನಮಾಡಿ ಧನ್ಯನಾಗಿದ್ದನೆ.[Epigraphy of Karnataka 1 Ch]

ಕ್ರಿ.ಶ. 1682-1755 ಈ ಅವಧಿಯಲ್ಲಿ ಶ್ರೀ ವಿಜಯದಾಸರು ಹೂವಿನಹಡಗಲಿಗೆ ಭೇಟಿನೀಡಿ ಅಲ್ಲಿದ್ದ ಹನುಮಪ್ಪನ ಮೇಲೆ ರಚಿಸಿದ ” ಕಂಡೆ ಕಂಡೆ ಹೂವಿನಹಡಗಲಿ ಭೀಮಾ ” ಎಂಬ ಕೀರ್ತನೆ ದೊರೆಯುತ್ತದೆ.

ರಾಗ : ಮಧ್ಯಮಾವತಿ
ತಾಳ : ಕೇಹರವಾ

ಕಂಡೆ ಕಂಡೆ ಹೂವಿನ |
ಹಡಗಲಿ ಭೀಮಾ ನಿನ್ನಾ ।
ಮಂಡೆ ಬಾಗಿ ನಿಂದೆ ಕಾಯೋ |
ಗಂಡುಗಲಿ ಹನುಮಾ ।। ಪಲ್ಲವಿ ।।

ಬಂದೆ ಜಿಗಿಯುತ್ತ ಸಿಂಧು ಲಂಘಿಸಿ ।
ಇಂದುಮುಖಿಯಳ ಸಂದರ್ಶಿಸಿ ರಘು ।
ನಂದನಗಾನಂದ ವಾರ್ತೆಯ ನೀಡಿದ ।
ಸುಂದರ ಮೂರುತಿ ಮುಖ್ಯಪ್ರಾಣಾ || ಚರಣ ।।

ಚೆಲುವ ಯುವತಿಯ ವೇಷವ ಧರಿಸಿ ।
ಖುಲ್ಲ ಕೀಚಕನೊರಸಿ ಕೌರವರ ।
ಕುಲವ ಮುರಿದು ಫುಲ್ಲನಾಭನ |
ಒಲವಗಳಿಸಿದ ಬಲ್ಲವ ಭೀಮ || ಚರಣ ।।

ಯತಿಯೆನಿಸಿ ಪರತತ್ತ್ವವಾದ ಮತ ।
ಸೂತ್ರ ರಚಿಸಿ ತಾತ್ಪರ್ಯ ತಿಳಿಸುತ ।
ತತ್ಭೋದಿತ ಸಿರಿವಿಜಯವಿಠಲನ ।
ಭೃತ್ಯನೆನಿಪ ಗುರುಮರುತ ಮಹಾತ್ಮ || ಚರಣ ।।

ಸಾಧ್ವೀ ಹರಪನಹಳ್ಳೀ ಭೀಮವ್ವನವರು ಶ್ರೀ ರಾಮಾಯಣ ಮಹಾಭಾರತ ಭಾಗವತ ತತ್ಪರ್ಯ ನಿರ್ಣಯಗಳಲ್ಲಿನ ಗೂಡಾರ್ಥಗಳನ್ನು ಸರಳವಾದ ಶೈಲಿಯಲ್ಲಿ ನಿರೂಪಿಸಿ ಸಾಹಿತ್ಯ ಕೃತಿಗಳನ್ನು ರಚನೆ ಮಾಡಿದ್ದಾರೆ, ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಇವರು ಶ್ರೀ ರಾಯರ ಮೇಲೆ ಅನೇಕ ಕೃತಿಗಳನ್ನು ಮಾಡಿದಾರೆ.

  ಥಟ್ ಅಂತಾ ಹೇಳಿ ಕನ್ನಡ ಒಗಟಿನ ಉತ್ತರ

ತಮ್ಮ ಶ್ರವಣೇಂದ್ರಿಯ ಕಿವುಡಾದಾಗ, ಪರಗತಿಗೆ ಕಾರಣರಾದ ಶ್ರೀ ಹರಿ ವಾಯುಗಳ ಮಹಿಮೆ – ಸ್ತೋತ್ರ – ಪುರಾಣಗಳ ಶ್ರವಣ ಅಸಾಧ್ಯವೆಂದು ತಿಳಿದು ಶ್ರವಣೇಂದ್ರಿಯ ಜಾಗೃತಗೊಳಿಸುವಂತೆ ಈ ಶ್ರೀ ವಾಯುದೇವರಲ್ಲಿ ಪ್ರಾರ್ಥಿಸಿ, ಸೇವೆಮಾಡುತ್ತಿದ್ದ ಸಂದರ್ಭದಲ್ಲಿ ರಚಿಸಿದ ಕೀರ್ತನೆಯು….

ಕೊಡು ಕೊಡು ಕಿವಿಯ ಕಿಂಕರಳು ನಾನಲ್ಲೇ |
ಕೈ ಪಿಡಿ ಹೂವಿನ ಹಡಗಲಿ ಹನುಮಂತರಾಯಾ ||

ಈ ಸೇವೆಯಿಂದ ಸಂತೃಪ್ತರಾದ ಶ್ರೀ ವಾಯುದೇವರು ಅವರಿಗೆ ಕಿವಿ ಕೇಳುವಂತೆ ಅನುಗ್ರಹಿಸಿದರು.

ಇದರಿಂದ ಸಂತೋಷಗೊಂಡ ಭೀಮವ್ವನವರು ನನಗೆ ಶ್ರವೆಣೇಂದ್ರಿಯ ಸಮತ್ವ ನೀಡಿದ ಸ್ವಾಮಿಯೇ ನಿನ್ನಲ್ಲಿ ಶರಣಾಗತರಾದವರಿಗೆ ಯಾವ ವರಗಳನು ಬೇಡಿದರೂ ನೀಡ ಬಲ್ಲವ ನಾಗಿರುವೆ ಎಂದು ಅನುಭವಕ್ಕೆ ತಂದು ಕೊಟ್ಟಿರುವೆ.

ಆದ್ದರಿಂದ ನನ್ನ ಕೀರ್ತನೆಯ ಪಲ್ಲವಿಯನ್ನು ಬದಲು ಮಾಡುತ್ತೇನೆ ಎಂದು ಹೇಳಿ…..

ಕೊಡು ಕೊಡು ಕಿವಿಯ ಕಿಂಕರಳು ನಾನಲ್ಲೇ |
ಕೈ ಪಿಡಿ ಹೂವಿನ ಹಡಗಲಿ ಹನುಮಂತರಾಯಾ ||

ಎಂದು ಬದಲಾಯಿಸಿದರು ಎಂದು ನಮ್ಮ ಮನೆತನದ ಹಿರಿಯರು ಹೇಳುತ್ತಿದ್ದರು.

ಮೂರನೆಯದಾಗಿ ಅಗಸ್ತ್ಸ್ಯ ಗೋತ್ರಜರಾದ ಶ್ರೀ ಮುತ್ತಿಗಿ ಸ್ವಾಮಿರಾಯಾಚಾರ್ಯರು ಭಾಗವತ ಧರ್ಮವನ್ನಾಶ್ರಯಿಸಿಕೊಂಡು ಈ ದೇವಸ್ಥಾನದ ಧರ್ಮಧರ್ಶಿಗಳಾಗಿ ಹೂವಿನಹಡಗಲಿಯಲ್ಲಿ ನೆಲಸಿದ್ದರು.

ಇವರ ಸೇವಾ ತತ್ಪರುತೆಯಿಂದ ತೃಪ್ತನಾದ ಶ್ರೀ ವಾಯುದೇವರು ಕ್ರಿ.ಶ. 1860ರಲ್ಲಿ ಸಿದ್ಧಾರ್ಥಿನಾಮ ಸಂವತ್ಸರ ಆಶ್ವೀಜ ಕೃಷ್ಣ ಅಷ್ಟಮಿ ಬುದವಾರ ಪುನರ್ವಸು ನಕ್ಷತ್ರ 4ನೆ ಚರಣದಲ್ಲಿ ತನ್ನ ವಿಶೇಷ ಅನುಗ್ರಹ ವಿರುವ ಅಮೋಘ ಪುತ್ರರತ್ನವೊಂದನ್ನು ಕರುಣಿಸಿದನು. ಇವರೇ ಮುತ್ತಿಗಿ ಶ್ರೀನಿವಾಸಾಚಾರ್ಯರು.

ಗರ್ಭಸ್ಥ ಶಿಶುವಾದಾಗಿನಿಂದಲು ಈ ದೇವರ ಸನ್ನಿಧಾನದಲ್ಲಿ ಶ್ರಿಮದ್ ಭಾಗವತವನ್ನು ಶ್ರವಣ ಮಾಡಿದುದರ ಫಲವಾಗಿ ಶ್ರೀ ರಾಘವೇಂದ್ರ ಗುರುಸಾರ್ವಭೌಮಮರ ಅಂತರಂಗ ಭಕ್ತರಾದರು.

ಶ್ರೀಯಂತ್ರೋಧಾರಕ ಪ್ರಾಣದೇವರ ಸೂಚನೆಯಂತೆ ಅವಧೂತ ಚರ್ಯೆಯಿಂದ ಶ್ರೀ ವಾದರಾಜರ ತೀರ್ಥಪ್ರಭಂದಕ್ಕೆ ಅನುಸರಿಸಿ ತೀರ್ಥಯಾತ್ರೆ ಕೈಗೊಂಡರು.

ಶ್ರೀ ವಾಯುದೇವರ ವಿಶೇಶ ಅನುಗ್ರಹಕ್ಕೆ ಪಾತ್ರರಾದ ಇವರು ಶ್ರೀ ಜಮಖಂಡಿ ವಾದಿರಾಜಾಚರ್ಯರ ಸೇವೆಯನ್ನು ಮಾಡಿ ಅವರ ಸೂಚನೆಯಂತೆ ತಮ್ಮ ಸ್ವರೂಪೋದ್ಧಾರಕರಾದ ಶ್ರೀ ಹತ್ತಿಬೆಳಗಲ್ ನರಸಿಂಹಾಚರ್ಯರಲ್ಲಿ [ಬಿಲ್ಪತ್ರಿಆಚರ್ಯರು] ಶಿಷ್ಯತ್ವ ವಹಿಸಿದರು.

ಶ್ರೀ ವಾಯುದೇವರ ಉಪಾಸನಾಬಲದಿಂದ 3 ಬಾರಿ ಸರ್ವಸ್ವ ದಾನ ಮಾಡಿದರು.

  ಪುರಾತನ ಭಾರತೀಯ ಆರೋಗ್ಯ ಸಲಹೆಗಳು

ಶ್ರೀ ರಾಯರ ಹಾಗೂ ಶ್ರೀ ವಿಜಯದಾಸರ ಅಂತರಂಗ ಭಕ್ತರು ದಿನಾಂಕ 19.01.1918 ರಂದು ಶ್ರೀ ಪಿಂಗಳನಾಮ ಸಂವತ್ಸರ ಫಲ್ಗುಣ ಶುದ್ಧ ದ್ವಿತೀಯ ಬುದವಾರದಂದು ಶ್ರೀ ಸುಶೀಲೇಂದ್ರ ತೀರ್ಥರ ಬೆಂಬಲದೊಂದಿಗೆ ಅಪೂರ್ವವಾದ ಸೋಮಯಾಗವನ್ನು ಅಣುಮಂತ್ರಾಲಯದಲ್ಲಿ ನೆರವೇರಿಸಿದರು.

ಮುಂದೆ ಕ್ರಿ.ಶ.1920 ರೌದ್ರಿನಾಮ ಸಂವತ್ಸರ ಅಧಿಕ ಶ್ರಾವಣಮಾಸ ಕೃಷ್ಣ ಪಕ್ಷ ಸಪ್ತಮಿ ಶನಿವಾರದಂದು ಶ್ರೀ ಕೂಡ್ಲಿ ಆರ್ಯ ಅಕ್ಷೋಭ್ಯ ಮಠಾಧಿಶರಾದ ಶ್ರೀ ರಘುಕಾಂತತೀರ್ಥರು ತಮ್ಮ ಶಿಷ್ಯರಾದ ಶ್ರಿ ರಘುದಾಂತತೀರ್ಥರಿಂದ ಮುತ್ತಿಗಿ ಶ್ರೀನಿವಾಸಾಚಾರ್ಯರಿಗೆ ತುರ್ಯಾಶ್ರಮ ನೀಡಿ ಪ್ರಣವೋಪದೇಶದೊಂದಿಗೆ ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯ ಪಟ್ಟಾಭಿಷೇಕವನ್ನು ಮಾಡಿಸಿ ಶ್ರೀ ರಘುಪ್ರೇಮತೀರ್ಥರೆಂದು ನಾಮಕರಣ ಮಾಡಿದರು.

ಇವರು ತಮ್ಮ ತಪಃ ಶಕ್ತಿಯಿಂದ ಅನೇಕ ಶಿಷ್ಯ ಸಮೂಹಕ್ಕೆ ಅನುಗ್ರಹವನ್ನು ಮಾಡಿರುತ್ತರೆ / ಮಾಡುತ್ತಲೇ ಇದ್ದಾರೆ. ಕ್ರಿ.ಶ. 1943 ರಲ್ಲಿ ಸ್ವಭಾನುನಾಮ ಸಂವತ್ಸರ ಭಾದ್ರಪದ ಶುಕ್ಲ ಪ್ರತಿಪದ ಮಧ್ಯಾನದಲ್ಲಿ ಬೃಂದಾವನ ಪ್ರವೇಶ ಮಾಡಿದರು.

ಕಾಲ ಗರ್ಭದಲ್ಲಿ ಯಾವ ಯಾವ ಙ್ಞಾನಿಗಳು ಬಂದು ಇಲ್ಲಿ ಸೇವೆ ನೆರವೇರಿಸಿದ್ದಾರೆ ಎಂಬ ಮಾಹಿತಿ ದೇವರೇ ಬಲ್ಲ.

” ವಿಶೇಷ ಸೂಚನೆ “

ಈಗ ಶ್ರೀ ನೃಸಿಂಹದೇವರು ಮತ್ತು ಶ್ರೀ ಪ್ರಾಣದೇವರ ಗುಡಿಯನ್ನು ಶ್ರೀ ರಘುಪ್ರೇಮತೀರ್ಥರ ಪೂರ್ವಾಶ್ರಮ ಮೊಮ್ಮಕ್ಕಳು ಜೀರ್ಣೋದ್ಧಾರ ಮಾಡುತ್ತಿದ್ದು ಭಕ್ತರು ತನು – ಮನ – ಧನಗಳಿಂದ ಸೇವೆ ಸಲ್ಲಿಸಿ ಶ್ರೀ ಹರಿ ವಾಯು ಗುರುಗಳ ಪರಮಾನುಗ್ರಹಕ್ಕೆ ಪಾತ್ರರಾಗಲು ಕೋರುವ….

ಶ್ರೀ ಮುತ್ತಿಗಿ ಶ್ರೀನಿವಾಸಾಚಾರ್ಯರು!!

ಹೆಚ್ಚಿನ ವಿವರಗಳಿಗೆ :-

ಶ್ರೀ ಮುತ್ತಿಗಿ ಲಕ್ಷ್ಮಿನಾರಾಯಣಾಚರ್ಯ
( ಶ್ರೀ ರಘುಪ್ರೇಮತೀರ್ಥರ ಪೂರ್ವಾಶ್ರಮ ಮೊಮ್ಮಕ್ಕಳು )
ಆನುವಂಶಿಕ ಧರ್ಮದಶಿಗಳು
12, ” ಪಯೋನಿಧಿ “, ಮಂಜುನಾಥ ನಗರ, ಇಟ್ಟಮಡು
ಬನಶಂಕರಿ 3ನೇ ಹಂತ, ಬೆಂಗಳೂರು – 560 085.
Mob : 99860 28424, 96630 15544, 98862 78424

Leave a Reply

Your email address will not be published. Required fields are marked *

Translate »