ಎಂಜಲೆಲೆಯಾ ತೆಗದಾ ಶ್ರೀ ಕೃಷ್ಣ – ಮಹಾಭಾರತದಲ್ಲಿಯ ಆಶ್ಚರ್ಯಗಳು
ಪಾಂಡವರ ರಾಜಸೂಯ ಯಾಗ. ಜಗತ್ ಪ್ರಸಿದ್ಧ. ಜಗದ ತುಂಬೆಲ್ಲ ಮನೆ ಮಾತು.
ಯದುಕುಲನಂದನ ಶ್ರೀ ಕೃಷ್ಣನ ಅಧ್ಯಕ್ಷತೆ, ಹಿರಿತನ.
ಧರ್ಮರಾಜನ ಸದಿಚ್ಛೆ.
ಜರಾಸಂಧನನ ಕೊಂದ ಬಲಭೀಮನ ನಾಯಕತ್ವ.
ಮೂರುಲೋಕದ ಗಂಡ ಅರ್ಜುನನ ಸಾರಥ್ಯ.
ನಕುಲ, ಸಹದೇವರ ಸಹಕಾರ.
ಅಪಾರ ಸಂಪತ್ತು ತಂದು ಬೆಟ್ಟದಂತೆ ರಾಶಿ ಒಟ್ಟಿದ್ದಾರೆ ಯಾಗಕ್ಕಾಗಿ ಪಾಂಡವರು.
ಎಲ್ಲಿಲ್ಲದ ವೈಭವ ಅಲ್ಲಿದೆ. ಎಲ್ಲ ವೈಭವ ಅಲ್ಲಿದೆ.
ಯಾಗಕ್ಕ ಬೇಕಾಗುವ, ಸಾಧನಕ್ಕೆ ಸಲಕರಣೆಗಳಿಗೆ, ದಾನಕ್ಕೆ ದಕ್ಷಿಣೆಗೆ, ಅನ್ನದಾನ ಕ್ಕೆ, ಅತಿಥಿ ಸತ್ಕಾರಕ್ಕೆ ಕಿಂಚಿತ್ತೂ ಚ್ಯುತಿ ಬರಬಾ ರದು ಅಂತು ಸುವ್ಯವಸ್ಥೆ ಮಾಡಿದ್ದಾರೆ ಪಾಂಡವರು.
ಅಷ್ಟೇ ಅಲ್ಲ, ಇದೆಲ್ಲ ಶ್ರೀ ಕೃಷ್ಣನ ಕೃಪೆ ಎಂದು
ಅವನತ್ತ ಬೊಟ್ಟು ಮಾಡುತ್ತ, ಹೆಜ್ಜೆ ಹೆಜ್ಜೆಗೆ ಹೇಳುತ್ತ ಅಡ್ಡಾಡುತ್ತಿದ್ದಾರೆ ಪಾಂಡವರು.
ಯಾಗದಲ್ಲಿ ಅಗ್ರಪೂಜೆ ಯಾರಿಗೆ ಎಂಬುದು
ಯಕ್ಷ ಪ್ರಶ್ನೆ.
ಪರಿಹರಿಸಿದವರು ಕುರುಕುಲತಿಲಕ ಭೀಷ್ಮಾಚಾರ್ಯರು.
ಸರ್ವೋತ್ತಮ ಶ್ರೀಕೃಷ್ಣ. ದೇವರದೇವ. ದೇವ ಶಿಖಾಮಣಿ.
ಅಪರೂಪದ ವಸ್ತು. ದೊರೆತದ್ದೇ ನಮ್ಮ ಸೌಭಾಗ್ಯ. ಅವನ ಹೊರತು ಇನ್ನಾರಿಗೆ?
– ಭೀಷ್ಮ ಉವಾಚ.
ಪಾಂಡವರಿಗೂ ಇಷ್ಟೇ ಬೇಕಾಗಿತ್ತು. ಅಷ್ಟೇ ಸಾಕಾಗಿತ್ತು. ಮರುಕ್ಷಣದಲ್ಲಿ ಕೃಷ್ಣನಿಗೆ ಅಗ್ರಪೂ ಜೆ ನಡೆಯಿತು.
ಜಗದ ಜನವೆಲ್ಲ ಶಿರ ಬಾಗಿದರು. ತಲೆದೂಗಿದ ರು. ಆಕಾಶದಿಂದ ದೇವತೆಗಳ ಪುಷ್ಪವೃಷ್ಟಿ.
ದ್ವಾಪರದ ಸರ್ವಶ್ರೇಷ್ಠ ಪುರುಷೋತ್ತಮ ಶ್ರೀ ಕೃಷ್ಣನೆಂಬುದು ಸಾಬೀತಾಯಿತು.
ಇಂಥ ಪುರುಷೋತ್ತಮ ಶ್ರೀ ಕೃಷ್ಣ ಯಾಗದ ಸರ್ವ ಜವಾಬ್ದಾರಿ ಹೊತ್ತು ನಿಭಾಯಿಸುತ್ತಿದ್ದ.
ಎಂಥ ವೈಭವ ಶ್ರೀ ಕೃಷ್ಣನದು! ಕ್ಷಣಮಾತ್ರ ದಲ್ಲಿ ಸಮುದ್ರ ಮಧ್ಯೆ ದ್ವಾರಕೆಯ ನಿರ್ಮಾಣ
ಕಣ್ಣು ಮುಚ್ಚಿ ತೆಗೆಯುವದರಲ್ಲಿ ಮಥುರೆ ಯಿಂದ ಎಲ್ಲರನ್ನೂ ಅಲ್ಲಿಗೇ Shift*
ಮತ್ತೆ ಅಲ್ಲಿ ಸಕಲ ರಾಜವೈಭವ. ಇಂಥ ಯದುಕುಲನಂದನ ದ್ವಾರಕಾಧೀಶ.
ಈ ಪರಿಯ ಸೊಬಗಾವ ಮಿಕ್ಕ ದೇವರಲಿ ನಾ ಕಾಣೆ ಎನ್ನುತ್ತಿತ್ತು ಜಗ.
ಭಕ್ತರಾದ ಪಾಂಡವರು ತನ್ನ ಪ್ರಾಣ ಎಂದಿದ್ದ ಕೃಷ್ಣ. ರಾಜಸೂಯ ಯಾಗದಲ್ಲಿ ಭಕ್ತ ವತ್ಸಲ ಮಾಡದೇ ಇದ್ದ ಕೆಲಸವೇ ಉಳಿಯಲಿಲ್ಲ.
ರಾಜಾಧಿರಾಜರನ್ನು ಹಿಡಿದು ತಂದು, ಪಾಂಡವರೆದರು ಕಪ್ಪು ಕಾಣಿಕೆ ಇಟ್ಟು
ತಲೆ ಬಾಗಿಸುವಂತೆ ಮಾಡುವದರೊಂದಿಗೆ, ಬಂದ ಜನ ಉಂಡ ಎಲೆ ತೆಗೆಯುವವರೆಗಿನ ಕೆಲಸಗಳ – ಹಿರಿದು ಕಿರಿದು ಎನ್ನದೇ ತಡವಿಲ್ಲ ದೇ ಮಾಡಿದವ ಜಗದ ಒಡೆಯ ಶ್ರೀ ಕೃಷ್ಣ.
ಜ್ಞಾನ ಸತ್ರ, ಧರ್ಮಸತ್ರ, ಯಾಜ್ಞಿಕಸತ್ರ, ಅನ್ನಸತ್ರ, ಅತಿಥಿ ಸತ್ರ ಇವೆಲ್ಲದುರ ನಿರ್ದೇಶನ, ನಿರ್ಧಾರ, ನಿರ್ವಹಣೆಯ ಜವಾಬ್ದಾರಿ ಹಕ್ಕಿಯ ಹೆಗಲೇರಿದವನ ಹೆಗಲಿಗೆ.
ವಿಶಾಲವಾದ ಅನ್ನಸತ್ರ. ಸರತಿಗೆ ಲಕ್ಷ ಲಕ್ಷ ಜನರಿಗೆ ಭೂರಿಭೋಜನ.
ಒಂದು ಪಂಕ್ತಿ ಮುಗಿಯಿತು. ಅಷ್ಟು ಎಲೆ ತೆಗೆಯ ಬೇಕು. ಮುಸುರೆ ಬಳಿಯ ಬೇಕು. ಸ್ವಚ್ಛ ಮಾಡಬೇಕು. ಮತ್ತೆ ಮತ್ತೊಂದು ಪಂಕ್ತಿ.
ಹೀಗೆ ದಿನವಿಡೀ.
ಶ್ರೀ ಕೃಷ್ಣ ಬಂದ. ನೋಡಿದ. ಪಂಕ್ತಿಯ ಊಟ ಮುಗಿದು ಜನ ಎದ್ದು ಹೊರಟರು.
ತನ್ನ ಹಿರಣ್ಯಮಯ ಪೀತಾಂಬರ ಮೇಲಕ್ಕೆತ್ತಿ ಕಟ್ಟಿದ. ಗಂಗೆ ಜನಿಸಿದ ಪಾವನ ಕೋಮಲ ಪಾದಕಮಲಗಳು ಕೃಷ್ಣನವು ಕಂಡವು. ಪುಣ್ಯವಂತರು, ದೇವತೆಗಳು ಅಲ್ಲೇ ಮನಸಲ್ಲೇ
ಮನಸಾರೇ ನಮಿಸಿದರು
ಹೊತ್ತ ಹೊಂಬಣ್ಣದ ಉತ್ತರೀಯ ತೆಗೆದು ಸೊಂಟಕ್ಕೆ ಸುತ್ತಿ ಬಿಗಿದು ಕಟ್ಟಿಕೊಂಡ. ದಾಮೋದರನಲ್ಲವೇ ಆತ! ಇಡೀ ಬ್ರಹ್ಮಾಂಡ ಆತನ ಉದರದಲ್ಲಿ ಒಂದು ಸಾಸಿವೆ ಕಾಳು.
ಕೆಳಗೆ ಬಗ್ಗಿದ. ಎರಡೂ ಕೈ ನೆಲಕ್ಕೆ ಹಚ್ಚಿ ಉಂಡಿಟ್ಡ ಬಾಳೆಎಲೆ ತೆಗೆಯಲಾರಂಭಿಸಿದ.
ಎಲ್ಲ ಎಲೆ ತೆಗೆದು ಹಾಕಿದ ಕ್ಷಣದಲ್ಲಿ.
ಮುಂದಿನ ಕ್ಷಣ ಎರಡೂ ಕೈಗಳನ್ನು ನೆಲಕ್ಕೆ ಹಚ್ಚಿ ಮುಸುರೆ ಬಳಿದು ಮುಗಿಸಿದ.
ಮೇಲೆದ್ದು ಗೋಮಯ ತಂದ. ನೀರಿನ ಥಳಿ ಹೊಡೆದ. ಗೋಮಯದಿಂದ ಸಾರಿಸಿದ.
ಅಂದದ ರಂಗೋಲಿ ತಂದು ಚಂದದ ಚಿತ್ತಾರ
ಬಿಡಿಸಿದ.
ರುಕ್ಮಿಣಿ ನಸುನಕ್ಕಳು.
ಕೋಟಿಕೋಟಿ ಭೃತ್ಯರಿರಲು, ಭಕ್ತರ ಸೇವೆ ಸಾಟಿಯಿಲ್ಲದ ಹಾಟಕಾಂಬರ ಮಾಡುತಿ ರುವನು! ಜಗದೊಡೆಯ. ತನ್ನ ಹುಬ್ಬನ್ನು ಚಲಿಸುವ ಮೂಲಕ ಜಗತ್ತಿಗೇ ಹುಟ್ಟು ಸಾವು ಕೊಡುವ ಅಪಾರ ಸಾಮರ್ಥ್ಯದ ದೊರೆ ನನ್ನ ಪ್ರಭು! ಎಂತು ಈತನ ಭಕುತರ ಮೇಲಿನ ಪ್ರೀತಿ ಎಂದು ವಿಸ್ಮಿತಳಾದಳು ರಮಣಿ.
ಮತ್ತೆ
ಎಲೆ ಹಾಕಿಸಿದ ಶ್ರೀ ಕೃಷ್ಣ.
ಇಷ್ಟೆಲ್ಲ ನಡೆದಿದ್ದು ಕಣ್ಣು ಮುಚ್ಚಿ ತೆಗೆಯು ವಷ್ಟರಲ್ಲಿ. ಸಹಸ್ರ ಬಾಹು ಸರ್ವತ್ರ ವ್ಯಾಪ್ತ ಪ್ರಭುವಲ್ಲವೇ ಆತ! ಕಾಲಾತೀತ.
ಶ್ರೀ ಕೃಷ್ಣನ ಸಾಮರ್ಥವೇನು!
ಪ್ರಳಯಕಾಲದಲ್ಲಿ, ಈ ಪಾಂಡವರು,ಕೌರವರು
ಇಂದ್ರಪ್ತಸ್ಥ, ಹಸ್ತಿನಪುರಿ, ಭರತಖಂಡ ಅಷ್ಟೇ ಅಲ್ಲ, ಬ್ರಹ್ಮಾಂಡದ ಸಮಸ್ತ ಚರಾಚರ ವಸ್ತುಗಳನ್ನು ಲಕ್ಷ್ಮೀ ದೇವಿ ಬ್ರಹ್ಮಾಂಡವೆಂಬ ಬಂಗಾರದ ಬುಟ್ಟೆಯಲ್ಲಿಟ್ಟು ಅಡಿಗೆ ಮಾಡುವಳು. ಪರಮಾತ್ಮ ಸಕಲವನ್ನು ಲೀಲಯಾ ಉಂಡು ತೇಗುವ.
ಇಂಥಾ ಪ್ರಭುವ ಕಾಣೆನೋ ಎನ್ನುತ್ತಾರೆ ದಾಸವರೇಣ್ಯರು.
ಇಂಥ ಶ್ರೀ ಕೃಷ್ಣ – ಪುರುಂದರ ವಿಠಲಗೆ
ಶಿರ ಸಾಷ್ಟಾಂಗ ನಮಿಸೋಣ.
🙏ಶ್ರೀ ಕೃಷ್ಣಾರ್ಪಣ 🙏