ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ರಾಮರಾಜ್ಯದಲ್ಲಿ ನಾಯಿಗೂ ದೊರೆತ ನ್ಯಾಯದ ಕಥೆ

ರಾಮರಾಜ್ಯದಲ್ಲಿ ನಾಯಿಗೂ ದೊರೆತ ನ್ಯಾಯ:-

ರಾಮಾಯಣ ಬರೆದ ವಾಲ್ಮೀಕಿ, ಮಹಾಭಾರತ ಬರೆದ ವೇದವ್ಯಾಸರಂಥ,ಮಹಾನ್ ಕವಿಗಳು ಯುಗ, ಯುಗಗಳಲ್ಲೂ ಪ್ರಾಥಃಸ್ಮರಣೀಯರಾಗಿದ್ದಾರೆ ಎಂದರೆ, ಅವರು ಬರೆಯುವ ಕಾವ್ಯಶೈಲಿ. ದೊಡ್ಡ ದೊಡ್ಡ ಪ್ರಮುಖವಾದ ವಿಷಯಗಳ ನಡುವೆ ಸಣ್ಣ ಸಣ್ಣ ಸಂಗತಿಗಳನ್ನು ತಿಳಿಸುವ ಮೂಲಕ ಸಮಾಜಕ್ಕೆ ನೀತಿ ಪಾಠ ತಿಳಿಸುತ್ತಾರೆ. ರಾಮಾಯಣವನ್ನು ಬರೆದ ವಾಲ್ಮೀಕಿ ಮಹರ್ಷಿಗಳು ಆ ಕಾಲಘಟ್ಟದಲ್ಲಿ ನಡೆದ ಸಣ್ಣಸಣ್ಣ ಘಟನೆಗಳನ್ನು ನಮಗೆ ಮಾದರಿಯಾಗಿ ತೋರಿಸಿದ್ದಾರೆ. ರಾಮರಾಜ್ಯದಲ್ಲಿ, ಪ್ರಜೆಗಳಲ್ಲದೆ, ಆಹಾರ ಪದಾರ್ಥಗಳಾದ ಅಕ್ಕಿ- ರಾಗಿ ಗೆ ನ್ಯಾಯ, ಪ್ರಾಣಿ-ಪಕ್ಷಿಗಳಿಗೆ ಪ್ರೀತಿ (ಅಳಿಲು ಸೇವೆಗೆ ನ್ಯಾಯ), ನದಿಗಳು-ಪ್ರಕೃತಿ ಕುರಿತು ಕಾಳಜಿ, ಹೀಗೆ ಎಲ್ಲವನ್ನೂ ಓದುಗರ ಕಣ್ಣಮುಂದೆ ಚಿತ್ರಿಸಿದಂತೆ ರಂಜನೀಯವಾಗಿಯೂ, ಕಲಾತ್ಮಕವಾಗಿಯೂ, ಜೊತೆಗೆ ಸಮಾಜಕ್ಕೆ ಉಪಯುಕ್ತವಾದ ಸಂದೇಶಗಳನ್ನು ಕೊಡುವ ಮೂಲಕ ತಿಳಿಸುವ ಪರಿ ಅನನ್ಯವಾದದ್ದು.

ಈಗ ಹೇಳಹೊರಟಿರುವುದು ತ್ರೇತಾಯುಗದ ಶ್ರೀರಾಮನ ರಾಜ್ಯಾಡಳಿತದಲ್ಲಿ ನಾಯಿಯ ಕಷ್ಟಕ್ಕೂ ನ್ಯಾಯ ಒದಗಿಸಿದ ಒಂದು ಕಥೆ. ರಾಮನು ಸೀತಾ ಲಕ್ಷ್ಮಣ ಸಮೇತ ಹದಿನಾಲ್ಕು ವರ್ಷ ವನವಾಸವನ್ನು ಮುಗಿಸಿ ಬಂದ ಬಳಿಕ, ಶ್ರೀರಾಮಚಂದ್ರನಿಗೆ ಅಯೋಧ್ಯ ರಾಜನಾಗಿ ಪಟ್ಟಾಭಿಷೇಕವಾಯಿತು, ಭರತನನ್ನು ಯುವರಾಜನನ್ನಾಗಿ ಯೂ ಲಕ್ಷ್ಮಣನನ್ನು ಪ್ರಜೆಗಳ ಸಮಸ್ಯೆಗಳಿಗೆ ಪರಿಹಾರ ಮಾಡುವ ಜವಾಬ್ದಾರಿಯನ್ನು ವಹಿಸಿಕೊಡಲಾಯಿತು. ಲಕ್ಷ್ಮಣನ ಜವಾಬ್ದಾರಿ ಬಹಳ ಮುಖ್ಯವಾಗಿದ್ದು, ಅದನ್ನು ಯಶಸ್ವಿಯಾಗಿ ಮಾಡಿ ರಾಮರಾಜ್ಯ ಆಗಲು ಲಕ್ಷ್ಮಣನ ಪಾತ್ರವೂ ಇಲ್ಲಿ ಬಹಳ ಮುಖ್ಯವಾಯಿತು.

ಒಂದು ದಿನ ಅರಮನೆಯಲ್ಲಿ ಸಭೆ ನಡೆಯುತ್ತಿತ್ತು ಒಂದು ನಾಯಿ ಅರಮನೆಯ ದ್ವಾರದ ಬಳಿ ಬಂದು, ತನ್ನ ಮುಂದಿನ ಎರಡು ಕಾಲುಗಳನ್ನು ಎತ್ತಿ, ಹೋಓಓಓ, ಅಂತ ಹೊಯ್ಕೂತಿತ್ತು. ಅದರ ಕೂಗು ಅರಮನೆ ಸಭೆಗು ಕೇಳಿಸಿತು. ಲಕ್ಷ್ಮಣ ಹೊರಗೆ ಬಂದು ಯಾಕೆ ನೀನು ಗೋಳಾಡ್ತಾ ಇದೆ ನಿಂಗೇನು ಆಗಿದೆ ಎಂದು ಕೇಳಿದ. ಅದು ನಾಯಿನೆ ಆದರೂ ಅದರ ಬಿಗಿ ಅದು ಬಿಡಲಿಲ್ಲ. ನಾನು ನಿನಗೆ ಏನು ಹೇಳಲ್ಲ, ರಾಮನ ಹತ್ರಾನೇ ಹೇಳ್ತೀನಿ ಅಂತ ಹೇಳ್ತು. ಅದಕ್ಕೆ ಲಕ್ಷ್ಮಣ ನನ್ನ ಹತ್ತಿರ ಹೇಳು ನೀ ಏನ್ ಹೆದರಬೇಡ ನಾನ್ ಎಲ್ಲಾ ಸರಿ ಮಾಡುತ್ತೇನೆ ಅಂದ. ಹಾಗೆಲ್ಲ ಆಗಲ್ಲ ನನಗೆ ರಾಮನೇ ಬೇಕು ಅಂತ ಹಠ ಹಿಡೀತು. ಲಕ್ಷ್ಮಣ ಒಳಗೆ ಹೋಗಿ ರಾಮನಿಗೆ ತಿಳಿಸಲು, ರಾಮ ಅದನ್ನ ಒಳಗಡೆಗೆ ಕಳುಹಿಸು ಎಂದು ಲಕ್ಷ್ಮಣನಿಗೆ ಹೇಳಿದ. ನಾಯಿ ತಾನಾಗಿ ಅರಮನೆಯ ಸಭೆಗೆ ಬಂತು. ಬಂದಿದ್ದೇ, ಮೇಲೆ ಹೋಗಿ ರಾಮ ಸೀತೆಗೆ ನಮಸ್ಕಾರ ಮಾಡಿ ಕೆಳಗೆ ಬಂದು ನಿಂತಿತು. ಅದು ರಾಮರಾಜ್ಯದ ನಾಯಿ ಅದಕ್ಕೆ ಶಿಷ್ಟಾಚಾರ ಗೊತ್ತಿತ್ತು. ರಾಮನು ನಿನ್ನ ಸಮಸ್ಯೆ ಏನು, ಭಯ ಇಲ್ಲದೆ ಎಲ್ಲಾ ಹೇಳು ಅಂದ. ಅದಕ್ಕೆ ನಾಯಿಯು, ರಾಮ, ನೀನು ದಯಾಪರ, ಕರುಣಾಮಯಿ,ಇದೊಂದು ನಾಯಿ ಮುಂಡೇದು ಅಂತ ನಿರ್ಲಕ್ಷಿಸದೆ, ಹಾಗೂ ತಮಾಷೆಯಾಗಿ ತೆಗೆದುಕೊಳ್ಳದೆ, ಸರಿಯಾಗಿ ಗಮನಿಸಿ ನನಗೆ ನ್ಯಾಯ ಒದಗಿಸು ಅಂತ ಬೇಡಿತು.

  ತೆನಾಲಿ ರಾಮ ಮತ್ತು ನೆರೆಹೊರೆಯ ರಾಜನ ಸುಂದರ ಕಥೆ

ರಾಮನು ಭರವಸೆ ಕೊಟ್ಟ ಮೇಲೆ, ನೋಡು ರಾಮ ನಾನು ಯಾವ ತಪ್ಪನ್ನು ಮಾಡಿರಲಿಲ್ಲ. ದೇವಸ್ಥಾನದ ಮುಂದೆ ಮಲಗಿದ್ದೆ, ಅಲ್ಲಿಗೆ ಬಂದ ‘ಸರ್ವಸಿದ್ಧೀ’ ಕೆಂಪ ಸನ್ಯಾಸಿ ನನ್ನನ್ನು ಕೋಲಿನಿಂದ ಹಣೆಗೆ ರಕ್ತ ಬರುವಂತೆ ಹೊಡೆದಿದ್ದಾನೆ. ಯಾಕೆ ಅಂತ ನನಗೂ ಗೊತ್ತಿಲ್ಲ. ರಾಮ, ನಿನ್ನ ರಾಜ್ಯದಲ್ಲಿ ನಿರಪರಾಧಿಗಳಿಗೆ ಅನ್ಯಾಯ ಆಗಲು ನೀನು ಬಿಡಬಾರದು ನನಗೆ ನ್ಯಾಯ ಕೊಡು ಎಂದಿತು. ಶ್ರೀರಾಮನ ಸರ್ವಸಿದ್ದಿ ಸನ್ಯಾಸಿಯನ್ನು ಕರೆಸಿ ಕೇಳಿದ.
ಅವನು ನಾಯಿಗೆ ಹೊಡೆದೆ ಎಂಬುದನ್ನು ಒಪ್ಪಿಕೊಂಡ. ಇಂತಹ ಒಂದು ವಿಚಿತ್ರವಾದ ಅಪರಾಧ ಇರುವುದು ಇದೇ ಮೊದಲು, ಇದಕ್ಕೆನು ಶಿಕ್ಷೆ ಎಂದು ಕೊಂಡ ರಾಮನು, ಇವನಿಗೆ ಯಾವ ಶಿಕ್ಷೆ ಕೊಡಲಿ ನೀನೇ ಹೇಳು ಎಂದು ನಾಯಿಯನ್ನೇ ಕೇಳಿದ. ನಾಯಿ ಹೇಳಿತು, ಪ್ರಜಾ ಪರಿಪಾಲಕ ರಾಮಾ ನನ್ನ ಹತ್ತಿರ ಒಂದು ಉಪಾಯ ಇದೆ. ಎಂತಹ ಶಿಕ್ಷೆ ಕೊಡಬೇಕು ಎಂದರೆ, ಇಲ್ಲೇ ಹತ್ತಿರದಲ್ಲಿ ಕಾಲಂಜರಗಿರಿ ಎನ್ನುವ ಪ್ರಸಿದ್ಧವಾದ ದೇವಸ್ಥಾನವಿದೆ. ಅಲ್ಲಿನ ಧರ್ಮಾಧಿಕಾರಿಯಾಗಿ ಇವನನ್ನು ನೇಮಿಸಬೇಕು ಎಂದಿತು. ಈ ತೀರ್ಪನ್ನು ಕೇಳಿದ ಸಭಿಕರೆಲ್ಲರಿಗೂ ತುಂಬಾ ಆಶ್ಚರ್ಯವಾಯಿತು. ತಪ್ಪು ಮಾಡಿದವನಿಗೆ ಧರ್ಮದರ್ಶಕ ಸ್ಥಾನವೇ? ಎಂದುಕೊಡರೆ, ರಾಮ ಮರುಮಾತಾಡದೆ, ನಾಯಿ ಹೇಳಿದಂತೆ ಸರ್ವ ಸಿದ್ಧಿ ಸನ್ಯಾಸಿಗೆ ಧರ್ಮಾಧಿಕಾರಿ ಪಟ್ಟವನ್ನು ಕೊಟ್ಟು, ಗೌರವದಿಂದ ಆನೆಯ ಮೇಲೆ ಕೂರಿಸಿ ‘ಕಾಲಿಂಜರ್’ ಮಠಕ್ಕೆ ಕಳುಹಿಸಿದ. ಸರ್ವಸಿದ್ಧಿ ಸಂನ್ಯಾಸಿ ಇದರಿಂದ ಖುಷಿಯಾಗಿ ಒಳಗೊಳಗೆ ಸಂತೋಷಗೊಂಡು ಮಠಕ್ಕೆ ಹೋದನು.

  ತೆನಾಲಿ ರಾಮನ ವರ್ಣರಂಜಿತ ಸಿಹಿತಿಂಡಿಗಳ ಕಥೆ

ಆಮೇಲೆ ಸಭಿಕರ ಕುತೂಹಲಕ್ಕೆ, ನಿನಗೆ ಹೊಡೆದ ಆ ಸನ್ಯಾಸಿಗೆ ಗೌರವದ ಧರ್ಮಾಧಿಕಾರಿಯಾಗುವಂತ ಶಿಕ್ಷೆ ಕೊಟ್ಟ ಹಿಂದಿನ ಕಾರಣವನ್ನು ಕೇಳುತ್ತಾನೆ. ನಾಯಿ ಹೇಳಿತು. ಹಿಂದಿನ ಜನ್ಮದಲ್ಲಿ ಈ ಮಠಕ್ಕೆ ನಾನೇ ಮುಖ್ಯ ಮಹಂತನಾಗಿದ್ದೆ . ಇದರಿಂದಾಗಿಯೇ ನನಗೆ ನಾಯಿ ಜನ್ಮ ಬಂದಿದೆ ಎಂದಾಗ, ರಾಮ ಆಶ್ಚರ್ಯದಿಂದ ಯಾಕೆ ಎಂದು ಕೇಳಿದ.

ಅದಕ್ಕೆ ನಾಯಿ, ನನ್ನ ಮತ್ತು ಜನರ ಆಧ್ಯಾತ್ಮಿಕ ಕಲ್ಯಾಣ ಉದ್ದೇಶವಿಟ್ಟುಕೊಂಡು ನನ್ನನ್ನು ಕಾಲಿಂಜರ್ ಮಠದ ಧರ್ಮಾಧಿಕಾರಿಯಾಗಿ ಮಾಡಿದ್ದರು. ನಾನು ಸಹ ಒಳ್ಳೆಯ ಉದ್ದೇಶಕ್ಕೆ ಧರ್ಮಾಧಿಕಾರಿಯಾದೆ ಮತ್ತು ಮಠದ ಅಭಿವೃದ್ಧಿಗೆ ಜನಗಳು ಸಂತೋಷವಾಗಿರಲು ಶ್ರಮವಹಿಸಿ ಕೆಲಸ ಮಾಡಿದೆ. ಇದನ್ನೆಲ್ಲಾ ನೋಡಿದ ಜನ ನನ್ನನ್ನು ತಮ್ಮ ‘ಗುರು’ವೆಂದು ತಿಳಿದು ಅದೆಷ್ಟು ಮರ್ಯದೆ ಕೊಡುತ್ತಿದ್ದರು ಎಂದರೆ, ನಾನು ಹೇಳಿದ್ದೇ ವೇದವಾಕ್ಯ ವಾಯಿತು, ನಾನು ಮಾಡಿದ್ದೆ ಶಾಸನ ವಾಯಿತು. ನಾನೇನು ಅಂಥ ಘನಂದಾರಿ ಕೆಲಸ ಮಾಡಿಲ್ಲವೆಂದು ಕೊಂಡರು, ಜನ ಮಾತ್ರ ನಾನು ಹೇಳಿದ್ದನ್ನೇ ಕೇಳತೊಡಗಿದರು. ಇದರಿಂದ ನನ್ನ ಮನಸ್ಸು ವಿಚಲಿತವಾಯಿತು. ನಂತರದ ದಿನಗಳಲ್ಲಿ ನಾನು ಅಹಂಕಾರದಿಂದ ಮೆರೆದೆ. ನಾನು ಸರ್ವ ಶ್ರೇಷ್ಠ ವ್ಯಕ್ತಿ ಎಂದು ಬೀಗಿದೆ. ನನ್ನ ಅವಶ್ಯಕತೆಗೆ ಅನುಕೂಲವಾಗುವಂತೆ ಏನೇನು ಬೇಕು ಎಲ್ಲವನ್ನು ಜನಗಳಿಂದ ಕೇಳಿ ಪಡೆದುಕೊಂಡೆ.

  ಶೃಂಗೇರಿ ಪುರವಾಸಿನಿ ಶ್ರೀ ಶಾರದಾದೇವಿ ಕ್ಷೇತ್ರ ಮಹಾತ್ಮೆ ಕಥೆ

ದಿನೇ ದಿನೇ ಹೆಚ್ಚಾಗುತ್ತಿರುವ ಹೆಸರು, ಕೀರ್ತಿ, ಅಧಿಕಾರ, ನನ್ನನ್ನು ಮತಿ ಭ್ರಷ್ಟನನ್ನಾಗಿ ಮಾಡಿಸಿತು. ತಪ್ಪು ಮಾಡುತ್ತಿದ್ದೇನೆ ಎಂದು ಗೊತ್ತಿದ್ದರೂ. ಮಠದ ದೊಡ್ಡ ಮಹಾಂತನ ಸೋಗು ಹಾಕಿಕೊಂಡು ಓಡಾಡುತ್ತಿದ್ದೆ.
ನನ್ನ ನೈತಿಕತೆ ಕಾಲ ಕಸವಾಯಿತು. ದರ್ಪ, ಅಧಿಕಾರ, ಗೌರವ, ಮತ್ತು ಅಹಂಕಾರದಲ್ಲಿ ಮುಳಗಿ ದೂರ ಬಹು ದೂರ ಸಾಗಿ ಕೆಸರಿನ ಹೊಂಡದಲ್ಲಿ ಮುಳುಗಿಬಿಟ್ಟೆ. ಆದರೆ ಮತ್ತೆಂದೂ ಮೇಲೆ ಬರಲು ಆಗಲಿಲ್ಲ. ಹೋದ ಜನ್ಮದಲ್ಲಿ ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಈಗ ನಾಯಿಯಾಗಿ ಜನ್ಮತಾಳಿ ಶಿಕ್ಷೆ ಅನುಭವಿಸುತ್ತಿದ್ದೇನೆ. ಈಗ ನನಗೆ ಹೊಡೆದ ‘ಸರ್ವಸಿದ್ಧಿ’ ಸನ್ಯಾಸಿ ಕೂಡ ಈ ಜನ್ಮದಲ್ಲಿ ಧರ್ಮಾಧಿಕಾರಿಯಾಗಿ ಮೆರೆಯಲಿ ಮುಂದಿನ ಜನ್ಮದಲ್ಲಿ ನನ್ನ ಹಾಗೆ ನಾಯಿಯಾಗಿ ಹುಟ್ಟಿ ಶಿಕ್ಷೆ ಅನುಭವಿಸಲಿ ಎಂದಿತು. ರಾಮನು, ನೀನು ಅದು ಹೇಗೆ ಹೇಳುತ್ತಿ ? ಅವನು ಒಳ್ಳೆಯ ಕೆಲಸ ಮಾಡಬಹುದಲ್ಲವೇ? ಎಂದಾಗ, ಸಾಧ್ಯವೇ ಇಲ್ಲ ಅಧಿಕಾರ ಬರುವವರೆಗೆ ಹಾಗೆ, ಅಧಿಕಾರ ಬಂದಮೇಲೆ ಆಮೇಲೆ ನೆತ್ತಿಗೇರುತ್ತೆ. ಇದರಿಂದ ಯಾರು ಹೊರತಾಗಿರಲು ಸಾಧ್ಯವಿಲ್ಲ ಎಂದಿತು. ನಾಯಿ ಬುದ್ಧಿವಂತಿಕೆಯ ಮಾತು ಕೇಳಿ ರಾಮನು ಹಾಗೂ ಸಭಿಕರು ಜೋರಾಗಿ ನಕ್ಕರು.

ಮಧುಸಿಕ್ತೋ ನಿಂಬಖಂಡ, ದುಗ್ದ ಪುಸ್ಟೋ ಭುಜಂಗಮ!
ಗಂಗಾಸ್ನಾತೋಪಿ ದುರ್ಜನ, ಸ್ವಭಾವಂ ನೈವ ಮುಂಚತಿ !

ಬೇವಿನ ಕಾಂಡಕ್ಕೆ ಜೇನುತುಪ್ಪವನ್ನು ಹಚ್ಚಿದರೂ, ಹಾವಿಗೆ ಹಾಲನ್ನು ಎರೆದರೂ ದುರ್ಜನರು ಗಂಗೆಯಲ್ಲಿ ಸ್ನಾನ ಮಾಡಿದರೂ, ಯಾರ ಸ್ವಭಾವ ಕೂಡ ಬದಲಾಗದು.

ಬರಹ:- ಆಶಾ ನಾಗಭೂಷಣ.

Leave a Reply

Your email address will not be published. Required fields are marked *

Translate »