ನಾಗ ದೋಷ ಹೇಗೆ ಬರುತ್ತದೆ..?
ನಾನು ಯಾವುದೇ ಹಾವನ್ನು ಹೊಡೆದಿಲ್ಲ, ತೊಂದರೆ ಕೊಟ್ಟಿಲ್ಲ. ಆದರೂ ನನ್ನ ಜಾತಕದಲ್ಲಿ ಸರ್ಪದೋಷ ಬಂದಿದೆಯಲ್ಲಾ ಏಕೆ ಎಂದು ಕೆಲವರು ಕೇಳುತ್ತಾರೆ.
ಇಹ ಜನ್ಮನಿ, ಅನ್ಯ ಜನ್ಮನಿ ಎಂದು ಶಾಸ್ತ್ರ ಹೇಳುತ್ತದೆ. ಹಾಗೆಂದರೆ ಈ ಜನ್ಮದಲ್ಲಿ ಅಥವಾ ಕಳೆದ ಜನ್ಮದಲ್ಲಿ ಮಾಡಿದ ಕೃತ್ಯದ ಫಲ ಈಗ ಅನುಭವಿಸಬೇಕಾಗುತ್ತದೆ. ಒಂದು ವೇಳೆ ಮುತ್ತಾತ, ತಾತ-ಚಿಕ್ಕಪ್ಪ, ತಂದೆ ಅಥವಾ ದೊಡ್ಡಪ್ಪ ಹಾವಿಗೆ ತೊಂದರೆ ಕೊಟ್ಟಿದ್ದರೆ ಈ ರೀತಿ ದೋಷ ಬರುತ್ತದೆ. ಪಿತ್ರಾರ್ಜಿತ ಆಸ್ತಿಯಲ್ಲಿ ನಾವು ಹೇಗೆ ಹಕ್ಕು ಸಾಧಿಸುತ್ತೇವೆಯೋ ಅದೇ ರೀತಿ ಪಾಪ- ಪುಣ್ಯಗಳು ಸಹ ಪಿತ್ರಾರ್ಜಿತವಾಗಿ ಬರುತ್ತವೆ.
ನಾಗದೋಷಗಳಲ್ಲಿ ಹಲವು ವಿಧ. ಸರ್ಪವಧಾ (ಗೊತ್ತಿದ್ದೋ ಗೊತ್ತಿಲ್ಲದೆಯೋ ಹಾವನ್ನು ಹೊಡೆದು ಹಾಕುವುದು), ಸರ್ಪಾಂಡ (ಹಾವಿನ ಮೊಟ್ಟೆ ನಾಶ ಮಾಡುವುದು) ವಧಾ, ಸರ್ಪ ಕೇಲಿ ದರ್ಶನ (ಮಿಲನ ಕ್ರಿಯೆಯಲ್ಲಿ ತೊಡಗಿದ ಹಾವುಗಳನ್ನು ನೋಡುವುದು), ಸರ್ಪಗಳ ವಾಸಸ್ಥಾನವನ್ನು ನಾಶ ಮಾಡುವುದು…ಇತರ ಕೃತ್ಯಗಳು ದೋಷಗಳು ಎನಿಸಿಕೊಳ್ಳುತ್ತವೆ.
ನಾಗನ ದಾರಿಗೆ ಅಡ್ಡ ಮಾಡಬಾರದು ಎಂದು ಕೆಲವರು ಹೇಳುತ್ತಾರೆ. ಪದೇ ಪದೇ ನಮ್ಮ ಮನೆಗೆ ಹಾವುಗಳು ಬರುತ್ತವೆ. ಎಷ್ಟೋ ಸಲ ಹಿಡಿಸಿ, ದೂರ ಬಿಡಿಸಿದ್ದೇವೆ. ಆದರೂ ಬರುತ್ತಿದೆ ಎಂದರೆ ಅದಕ್ಕೆ ಕಾರಣ ನಾಗವೀಥಿನಿರೋದನ, ಮಲಿನೀಕರಣ ದೋಷ, ಗೃಹಗೋಷ್ಠ ನಿರ್ಮಾಣ. ಅಂದರೆ ಸರ್ಪಗಳು ಸಂಚರಿಸುವ ದಾರಿಗೆ ಅಡ್ಡ ಮಾಡಿದರೆ, ಮಲಿನ ಮಾಡಿದರೆ, ಆ ದಾರಿಯ ಶುದ್ಧತೆ ಹಾಳು ಮಾಡಿದರೆ ಅದು ದೋಷ.
ಮನೆ ನಿರ್ಮಿಸುವಾಗ ಎಲ್ಲರೂ ನಾಗನ ದಾರಿಗೆ ಒಂದಲ್ಲ ಒಂದು ಬಾರಿ ಅಡ್ಡ ಮಾಡಿಯೇ ಮಾಡಿರುತ್ತಾರೆ. ಹೀಗಾಗಿ ಗೃಹಪ್ರವೇಶದ ನಂತರ ಒಮ್ಮೆ ಸರ್ಪಶಾಂತಿ, ಆಶ್ಲೇಷ ಬಲಿ ಮಾಡಿಸಿಕೊಳ್ಳುವುದು ಒಳ್ಳೆಯದು.
ನಾಗಗಳ ಬಗ್ಗೆ ಇರುವ ನಂಬಿಕೆ ಹೀಗಿದೆ- ಎರಡು ಹಾವುಗಳು ಕಚ್ಚಾಡುವುದನ್ನು ನೋಡಿದರೆ ಹತ್ತಿರದವರು ಹಾಗೂ ಸಂಬಂಧಿಕರ ಮಧ್ಯೆ ಜಗಳಗಳಾಗುತ್ತವೆ. ಒಂದು ಹಾವು ಮತ್ತೊಂದು ಹಾವನ್ನು ನುಂಗುತ್ತಿರುವುದು ನೋಡಿದರೆ ಬೆಳೆ ನಾಶದ ಸೂಚನೆ. ಮನೆಯೊಳಗೆ ಹಾವು ಬಂದರೆ ಅದು ಆಸ್ತಿ ಬರುತ್ತದೆ ಎಂಬ ಸಂಕೇತ. ಅದೇ ಮನೆಯಿಂದ ಆಚೆ ಹೋಗುತ್ತಿರುವುದು ನೋಡಿದರೆ ಸಂಪತ್ತು ನಾಶವಾಗುವ ಸೂಚನೆ. ಹೆಡೆ ಎತ್ತಿಕೊಂಡು ಹಾವು ಎಡದಿಂದ ಬಲಕ್ಕೆ ಹೋದರೆ ಶುಭ.