ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕುಳಾಯಿ
ಇತಿಹಾಸ
ಕುಳಾಯಿ ಎಂಬ ಹಳ್ಳಿಯು ಈಗಿನ ಚಿತ್ರಾಪುರ. ಇದು ಮಂಗಳೂರು ತಾಲ್ಲೂಕಿನಲ್ಲಿರುವ ಪುಣ್ಯಕ್ಷೇತ್ರವಾಗಿದೆ. ಇಲ್ಲಿ ತಾಯಿ ದುರ್ಗಾಪರಮೇಶ್ವರಿಯನ್ನು ಪೂಜಿಸುತ್ತಾರೆ. ೧೩ ಶತಮಾನದಲ್ಲಿ ಮಧ್ವಾಮಠದ ಪೇಜಾವರ ಪೀಠವನ್ನು ವಿಜಯತೀರ್ಥ ಸ್ವಾಮೀಜಿಯವರು ಅಲಂಕರಿಸಿ ಇಲ್ಲಿ ದುರ್ಗಾ ಪರಮೇಶ್ವರಿಯನ್ನು ಲಿಂಗದ ರೂಪದಲ್ಲಿ ಪೂಜಿಸಿದರು. ಈ ದೇವಿಯು ಜಲದುರ್ಗೆಯ ಪುನರ್ಜನ್ಮ ಎಂಬ ನಂಬಿಕೆ ಇದೆ. ಈ ದೇವಿಯು ಅತಿ ಶಕ್ತಿಯುಳ್ಳ ದೇವತೆಯಾಗಿದ್ದಾಳೆ.
ಪುರಾಣಗಳ ಪ್ರಕಾರ ಸಪ್ತದುರ್ಗಾ ಅಕ್ಕತಂಗಿಯರು ಈ ಜಾಗಗಳಲ್ಲಿ ಶಕ್ತಿದೇವತೆಯಾಗಿ ನೆಲೆಸಿದ್ದಾರೆ. ಅವುಗಳೆಂದರೆ ಚಿತ್ರಾಪುರ, ಸಸಿಹಿತ್ಲು, ಪೊಳಲಿ, ಕಟೀಲು ಮುಂಡ್ಯೂರು, ಕುಂಜಾರು ಮತ್ತು ಬಪ್ಪನಾಡು ಸ್ಥಳಗಳಲ್ಲಿ ದಾರಿಗಾಸುರನನ್ನು ಕೊಂದ ನಂತರ ನೆಲೆಸಿದರು. ಈ ಸ್ಥಳಗಳು “ಶಕ್ತಿಕೇಂದ್ರ” ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿವೆ.
ಈ ಸ್ಥಳಕ್ಕೆ ಚಿತ್ರಾಪುರ ಎಂದು ಹೆಸರು ಬರಲು ಕಾರಣ ಸಪ್ತ ದುರ್ಗೆಯರಲ್ಲಿ ಅತಿ ಕಿರಿಯಳಾದ ಜಲದುರ್ಗೆ, ರಾಕ್ಷಸರಾದ ಚಿತ್ರಾಸುರ ಮತ್ತು ವಿಚಿತ್ರಸುರರನ್ನು ವಧಿಸಿದ್ದು. ರಾಕ್ಷಸರಾದ ಚಿತ್ರಾಸುರ ಮತ್ತು ವಿಚಿತ್ರಸುರರಿಗೆ ತಮ್ಮ ಗುರುಗಳನ್ನು ವಧಿಸಿದ ಜಲದುರ್ಗೆಯ ಮೇಲೆ ಸೇಡು ತೀರಿಸಿಕೊಳ್ಳುವ ಹಂಬಲವಿತ್ತು. ಈ ರಾಕ್ಷಸರ ಕಣ್ಣು ಓರ್ವ ಗಂಧರ್ವನ ಹೆಂಡತಿಯ ಮೇಲೆ ಇತ್ತು. ಗಂಧರ್ವನು ಇಲ್ಲದ ಸಮಯದಲ್ಲಿ ಈ ರಾಕ್ಷಸರು ಅವನ ಹೆಂಡತಿಯನ್ನು ಅಪಹರಿಸಿದರು. ಗಂಧರ್ವನು ಆ ರಾಕ್ಷಸರೊಂದಿಗೆ ಯುದ್ಧ ಮಾಡಲಾಗದೆ ಶ್ರೀ ಹರಿಯ ಮೊರೆ ಹೊಕ್ಕನು. ಆಗ ಶ್ರೀ ಹರಿಯು ಜಲದುರ್ಗೆಯನ್ನು ಈ ಇಬ್ಬರು ರಾಕ್ಷಸರನ್ನು ವಧಿಸಲು ಕಳುಹಿಸಿದನು. ಇಲ್ಲಿ ಮಹಾಕಾಳಿಯು ಉದ್ಭವಲಿಂಗವಾಗಿ ನೆಲೆಸಿದಳು.
ಇತಿಹಾಸದ ಪ್ರಕಾರ ದಂಪತಿಗಳಾದ ಕಾಂತು ಮತ್ತು ಕಲಾಡಿ ಎಂಬುವವರಿದ್ದರು. ಅವರು ತಮ್ಮ ಜೀವನವನ್ನು ಮೀನುಗಾರಿಕೆ ಮತ್ತು ಬಿದಿರು ಕೆಲಸದಿಂದ ಸಾಗಿಸುತ್ತಿದ್ದರು. ಒಂದು ಸಾರಿ ಕಲಾಡಿಯು ತನ್ನ ಚಾಕುವನ್ನು ಚೂಪು ಮಾಡಲು ಒಂದು ಬಂಡೆಗೆ ತಿಕ್ಕಿದಳು. ಆದರೆ ಆ ಬಂಡೆಯಿಂದ ರಕ್ತ ಹೊರ ಹೊಮ್ಮಿತು. ಆಶ್ಚರ್ಯಕರವಾಗಿ ನಡೆದ ಈ ಘಟನೆ ವಿಚಿತ್ರ ಸಂಗತಿ ಎಂದು ಕರೆದರು. ಇದರಿಂದ ಈ ಕಲ್ಲು ಉದ್ಭವಲಿಂಗ (ದೇವಿ ದುರ್ಗೆಯು) ಲಿಂಗದ ರೂಪದಲ್ಲಿ ಇದ್ದಾಳೆ ಎಂಬ ನಂಬಿಕೆ. ಈ ವಿಚಿತ್ರ ಘಟನೆಯಿಂದ ಚಿತ್ರಾಪುರ ಎಂಬ ಹೆಸರು ಬಂದಿತು.
ಮದ್ವಾಚಾರ್ಯರ ದ್ವೈತ ಸಿದ್ಧಾಂತವನ್ನು ಅನುಸರಿಸುವ ಮಾಧ್ವಪೀಠದ ಸ್ವಾಮೀಜಿಗಳಾದ ವಿಜಯತೀರ್ಥ ಸ್ವಾಮೀಜಿಗಳು ಪ್ರಯಾಣಿಸುವಾಗ ಆಕಸ್ಮಿಕವಾಗಿ ಜಲದುರ್ಗೆಯು ಇರುವ ಸ್ಥಳದ ಮುಖಾಂತರ ಹಾದು ಹೋಗುತ್ತಾರೆ. ಜಲದುರ್ಗೆಯ ವಿಷಯವು ಸ್ವಾಮೀಜಿಗಳ ಕನಸಿನಲ್ಲಿ ತಿಳಿದು ಜಲದುರ್ಗೆಯು ಸ್ವಾಮೀಜಿಯವರಿಗೆ ದೇವಸ್ಥಾನ ಸ್ಥಾಪಿಸಲು ಆದೇಶ ನೀಡುತ್ತಾಳೆ. ದುರ್ಗೆಯು ಕಲ್ಡಿ ಎಂಬ ಮಹಿಳೆಗೂ ಕೂಡ ದೇವಸ್ಥಾನ ನಿರ್ಮಿಸಲು ಅಪ್ಪಣೆ ಮಾಡುತ್ತಾಳೆ. ಮರುದಿನ ಸ್ವಾಮೀಜಿಯವರು ಆ ಸ್ಥಳವನ್ನು ಹುಡುಕುತ್ತ ಹೊರಡಲು ತುಂಬಿಹರಿಯುವ ನದಿಯನ್ನು ದಾಟಬೇಕಾಯಿತು. ಅದಕ್ಕಾಗಿ ಅಲ್ಲಿಯ ದೋಣಿಯು ಅಂಬಿಗನ ಸಹಾಯ ಕೇಳಲು ಆತನು ಸಹಾಯ ಮಾಡಲು ತಿರಸ್ಕರಿಸುತ್ತಾನೆ. ನಂತರ ಸ್ವಾಮೀಜಿಯು ತನ್ನ ದೈವ ಶಕ್ತಿಯಿಂದ ನದಿಯನ್ನು ದಾಟಿ ಅಂಬಿಗನಿಗೆ ಹುಳುವಾಗಲೆಂದು ಶಾಪ ನೀಡುತ್ತಾನೆ. ಅಂಬಿಗನಿಗೆ ತನ್ನ ತಪ್ಪಿನ ಅರಿವಾಗಿ ಸ್ವಾಮಿಜಿಯಲ್ಲಿ ಕ್ಷಮೆಯಾಚಿಸುತ್ತಾನೆ ಮತ್ತು ಕರುಣೆ ತೋರಲು ಕೇಳಿಕೊಳ್ಳುತ್ತಾನೆ. ಸ್ವಾಮೀಜಿಗೆ ಆತನ ಮೇಲೆ ಕರುಣೆಬಂದು ನೀನು ದೇವಸ್ಥಾನವನ್ನು ದುರ್ಗೆಯ ಇಚ್ಛೆಯಂತೆ ಸ್ಥಾಪಿಸಿದಲ್ಲಿ ಶಾಪ ವಿಮೋಚನೆ ಆಗಲಿ ಎಂದು ಹೇಳುತ್ತಾರೆ. ಆದ್ದರಿಂದ ಈ ದೇವಸ್ಥಾನವನ್ನು ಪುಲುವಿನಾಲಯ ಎಂದು ಕರೆಯುತ್ತಾರೆ. ಸ್ವಾಮೀಜಿಯವರು ದುರ್ಗೆ ನೆಲೆಸಿರುವ ಸ್ಥಳವನ್ನು ಕಂಡು ಪೂಜೆಗಳು, ಆರತಿ, ಸೇವೆಗಳನ್ನು ಸ್ಥಳಿಯರ ಸಮಕ್ಷಮದಲ್ಲಿ ನೆರವೇರಿಸುತ್ತಾರೆ.
ಸ್ಥಳೀಯ ಪಾಳೆಗಾರನು ದೇವಸ್ಥಾನದ ನಿರ್ಮಾಣಕ್ಕೆ ಸಹಕರಿಸಲು ನಿರಾಕರಿಸಿದ್ದರಿಂದ ಸ್ವಾಮೀಜಿಯವರು ವಿಜಯನಗರದ ರಾಜನಾದ ವೀರ ಪ್ರಧಿನ ಹರಿಹರರಾಯನ ಸಹಕಾರವನ್ನು ಕೋರಿದರು. ಅಂತೆಯೆ ಹರಿಹರರಾಯನು ಮಂಗಳಾಪುರಕ್ಕೆ ಆಗಮಿಸಿ ಸ್ಥಳೀಯ ಪಾಳೆಗಾರರಿಗೆ ದೇವಸ್ಥಾನದ ನಿರ್ಮಾಣಕ್ಕೆ ಸಹಾಯ ಮಾಡಲು ಆದೇಶಿಸಿದನು. ಅದರಂತೆ ಸ್ವಾಮೀಜಿಯ ಮಾರ್ಗದರ್ಶನದಲ್ಲಿ ಸ್ಥಳೀಯ ಪಾಳೆಗಾರನ ಸಹಕಾರದೊಂದಿಗೆ ದೇವಸ್ಥಾನವನ್ನು ನಿರ್ಮಿಸಿದರು. ವಿಜಯತೀರ್ಥ ಸ್ವಾಮೀಜಿಯವರು ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗು ಇತರೆ ಪೂಜಾ ಕಾರ್ಯಗಳನ್ನು ನೆರವೇರಿಸಿ ಮಠವನ್ನು ಸ್ಥಾಪಿಸಿ ಅದಕ್ಕೆ ಚಿತ್ರಾಪುರ ಮಠ ಎಂದು ಕರೆದರು. ತನ್ನ ಶಿಷ್ಯರೊಬ್ಬರನ್ನು ಆ ಮಠದ ಸ್ವಾಮೀಜಿಯನ್ನಾಗಿ ನೇಮಿಸಿ ಕೃಷ್ಣ ವಿಗ್ರಹವನ್ನು ನೀಡಿ ಅದಕ್ಕೆ ಕಾಲಿಯಮರ್ದನ ಕೃಷ್ಣ ಎಂದು ಕರೆಯುತ್ತಾರೆ. ದೇವಸ್ಥಾನದ ಶಿಲಾಶಾಸನವು ಸ್ಥಳೀಯ ಪಾಳೆಗಾರರು ದೇವಸ್ಥಾನಕ್ಕೆ ನೀಡಿರುವ ಕೊಡುಗೆಗಳನ್ನು ವಿವರಿಸುತ್ತದೆ. ಪಾಳೆಗಾರನಾದ ಮದರಸನು ೧೩೨೦ ರಲ್ಲಿ ದೇವಸ್ಥಾನಕ್ಕೆ ಮತ್ತು ಮಕ್ಕಳಾದ ಬಚ್ಚಪ್ಪಸೇನಾಬೋವನು ೧೩೨೬ ರಲ್ಲಿ ದೇವಸ್ಥಾನಕ್ಕೆ ಕೊಡುಗೆಯನ್ನು ನೀಡಿದ್ದು ದೇವಸ್ಥಾನವು ಆಗಿನಿಂದಲೂ ಇದೆಯೆಂಬುದಕ್ಕೆ ಶಿಲಾಶಾಸನವು ಸಾಕ್ಷಿಯಾಗಿದೆ.