ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಸಂಕ್ರಾಂತಿಯಲ್ಲಿ ಎಳ್ಳಿಗೆ ಯಾಕೆ ಮಹತ್ವ ನೀಡುತ್ತಾರೆ?

ಮಕರ ಸಂಕ್ರಮಣದಂದು ಎಳ್ಳಿಗೆ ಯಾಕೆ ಪ್ರಾಧಾನ್ಯತೆ ನೀಡುತ್ತಾರೆ ಗೊತ್ತಾ?

ಸಂಕ್ರಾಂತಿ ಎಂದರೆ ಎಳ್ಳು ಬೆಲ್ಲ ಬೀರುವ ಹಬ್ಬ, ಈ ಸಂಕ್ರಾಂತಿಯಲ್ಲಿ ಎಳ್ಳಿಗೆ ಯಾಕೆ ಮಹತ್ವ ನೀಡುತ್ತಾರೆ? ಎಳ್ಳಿನ ಉಪಯೋಗವೇನು ಎನ್ನುವುದರ ಬಗ್ಗೆ ಮಾಹಿತಿ !!!

ಪ್ರಖರ ಬೆಳಕಿನಿಂದ ಉರಿವ ಸೂರ್ಯನು ಸಕಲ ಜೀವರಾಶಿಗಳಿಗೂ ಬೆಳಕನ್ನು ನೀಡುವ ದೇವ ಮಾತ್ರವಲ್ಲದೇ ಆರೋಗ್ಯವನ್ನು ನೀಡುವವನು. ಮಾಗಿಯ ಚಳಿಗೆ ಜಡವಾದ ದೇಹವನ್ನು ಉತ್ತರಾಯಣ ಕಾಲದಲ್ಲಿ ತನ್ನ ತೀಕ್ಷ್ಣವಾದ ಬೆಳಕಿನಿಂದ ಹುರಿಗೊಳಿಸುವವನು ಸೂರ್ಯ. ಸೂರ್ಯನು ತನ್ನ ಪಥವನ್ನು ಬದಲಾಯಿಸುವ ಪುಣ್ಯ ಕಾಲವೇ ಮಕರ

ಸಂಕ್ರಮಣ.

ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಚಲಿಸುವ ಈ ಪರ್ವಕಾಲದ ನಂತರ ಸೂರ್ಯನು ತೀಕ್ಷ್ಣವಾಗಿ ಉರಿಯುತ್ತಾನೆ. ಈ ಸಂಕ್ರಮಣ ಕಾಲದಿಂದ ಹಗಲಿನ ಸಮಯ ಹೆಚ್ಚಾಗುತ್ತದೆ, ರಾತ್ರಿಯ ಕಾಲಾವಧಿ ಕಡಿಮೆಯಾಗುತ್ತದೆ. ಇರುಳು ಕಡಿಮೆಯಾಗಿ ಸೂರ್ಯನ ಬೆಳಕು ದೀರ್ಘವಾಗಿರುತ್ತದೆ.
ಸಂಕ್ರಮಣವೆಂದರೆ ಸೂರ್ಯನ ಚಲನೆ, ‘ಕ್ರಮಣ’ವೆಂದರೆ ಸಂಸ್ಕೃತದಲ್ಲಿ ಹೆಜ್ಜೆ ಇಡುವುದು. ಅಂದರೆ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸೂರ್ಯನು ಕ್ರಮಿಸುವಂತಹ ಪ್ರಕ್ರಿಯೆಯೇ ಸಂಕ್ರಮಣ. ಪ್ರತಿಯೊಂದು ತಿಂಗಳಿನಲ್ಲಿ ಒಂದು ಸಂಕ್ರಮಣದಂತೆ ವರ್ಷದಲ್ಲಿ ಹನ್ನೆರಡು ಸಂಕ್ರಾಂತಿ ಬರುತ್ತವೆ. ಇದರಲ್ಲಿ ಪ್ರಮುಖವಾಗಿ ಎರಡು ಸಂಕ್ರಾಂತಿಗೆ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಅವುಗಳಲ್ಲಿ ಒಂದು ಕರ್ಕಾಟಕ ಸಂಕ್ರಾಂತಿ, ಅಂದರೆ ದಕ್ಷಿಣಾಯಣ ಕಾಲ, ಇನ್ನೊಂದು ಮಕರ ಸಂಕ್ರಾತಿ ಅಂದರೆ ಉತ್ತರಾಯಣ ಕಾಲ. ಉತ್ತರಾಯಣ ಕಾಲದಲ್ಲೇ ಸ್ವರ್ಗದ ಬಾಗಿಲು ತೆರೆಯುವುದೆಂದು ಹೇಳಲಾಗುತ್ತದೆ. ಹಾಗಾಗಿಯೇ ಮಹಾಭಾರತ ಕಾಲದಲ್ಲಿ ಶರಶಯ್ಯೆಯಲ್ಲಿ ಮಲಗಿದ್ದಂತಹ ಭೀಷ್ಮಪಿತಾಮಹ ಪ್ರಾಣತ್ಯಾಗ ಮಾಡಲು ಉತ್ತರಾಯಣ ಕಾಲವನ್ನೇ ಎದುರುನೋಡುತ್ತಿದ್ದರು.

ಸಂಕ್ರಾಂತಿ ಆಚರಣೆ
ದೇಶದ ವಿವಿಧ ಭಾಗಗಳಲ್ಲಿ ಆಯಾಯ ಪ್ರಾದೇಶಿಕ ಸಂಸ್ಕೃತಿಗೆ ತಕ್ಕಂತೆ ಸಂಪ್ರದಾಯಬದ್ಧವಾಗಿ ಸಂಕ್ರಾಂತಿಯನ್ನು ಆಚರಿಸುತ್ತಾರೆ. ತಮಿಳುನಾಡಿನಲ್ಲಿ ರೈತರು ತಾವು ಬೆಳೆದ ಬೆಳೆಯನ್ನು ಕಟಾವು ಮಾಡಿ, ಹೊಸ ಧಾನ್ಯದಿಂದ ‘ಪೊಂಗಲ್‌’ ತಯಾರಿಸಿ ಎಲ್ಲರಿಗೂ ಹಂಚಿ ಹಬ್ಬವನ್ನು ಆಚರಿಸುತ್ತಾರೆ. ಕರ್ನಾಟಕದಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಎಳ್ಳು ಬೆಲ್ಲ ಬೀರುವ ಮೂಲಕ ಸಂಕ್ರಾಂತಿಯನ್ನು ಆಚರಿಸುತ್ತಾರೆ.

ರೈತರು ತಾವು ಬೆಳೆದ ಧಾನ್ಯ, ಕಬ್ಬನ್ನು ಈ ದಿನ ದೇವಸ್ಥಾನಕ್ಕೆ, ತನ್ನ ನೆರೆಹೊರೆಯವರಿಗೆ ಹಂಚುತ್ತಾರೆ. ಜೊತೆಗೆ ಎಳ್ಳು ಬೆಲ್ಲವನ್ನು ಆತ್ಮೀಯರಿಗೆ ಹಂಚುವ ಮೂಲಕ ‘ಒಳ್ಳೆಯ ಮಾತಾಡಿ’ ಎಂದು ಬಾಂಧವ್ಯವನ್ನು ಇನ್ನಷ್ಟು ಸದೃಢಗೊಳಿಸುತ್ತೇವೆ. ಹೀಗೆ ಹಂಚುವ ಮನೋಭಾವವನ್ನು ಬೆಳೆಸುವುದರ ಮೂಲಕ ಕೋಪ, ದ್ವೇಷ, ಅಸಮಾಧಾನಗಳನ್ನು ಬದಿಗಿರಿಸಿ ಸಂತೋಷವನ್ನು ಹಂಚುತ್ತೇವೆ. ಇದರ ಹಿಂದಿರುವ ವೈಜ್ಞಾನಿಕ ಕಾರಣವೆಂದರೆ ಚಳಿಗಾಲದ ಶೀತ ವಾತಾವರಣದಲ್ಲಿ ದೇಹಕ್ಕೆ ಉಷ್ಣತೆಯನ್ನು ನೀಡುವುದರ ಜೊತೆಗೆ ಆರೋಗ್ಯಕ್ಕೂ ಪ್ರಯೋಜನಕಾರಿ.

  ಪ್ರಜಾಕೀಯ - POEM

ಕೆಲವೆಡೆ ಎಳ್ಳಿನ ಜೊತೆಗೆ ನೆಲಗಡಲೆ, ಕೊಬ್ಬರಿ, ಬೆಲ್ಲ, ಹುರಿಗಡಲೆ, ಬಿಳಿ ಎಳ್ಳನ್ನು ಸೇರಿಸಿ ಮನೆಯ ಹೆಣ್ಣುಮಕ್ಕಳು ತಮ್ಮ ಸ್ನೇಹಿತರಿಗೆ, ಬಂಧುಗಳಿಗೆ ಸಡಗರದಿಂದ ಹಂಚುವುದು ಕೂಡಾ ಸಂಪ್ರದಾಯ. ಸಾಮಾನ್ಯವಾಗಿ ಕೊಬ್ಬರಿ ಹಾಗೂ ನೆಲಗಡಲೆಯಲ್ಲಿ ಇರುವಂತಹ ಎಣ್ಣೆಯ ಅಂಶವು ಚಳಿಗಾಲದಲ್ಲಿ ತ್ವಚೆಯ ಆರೈಕೆಗೆ ಒಳ್ಳೆಯದು. ಹಾಗಾಗಿ ಈ ಸಿಹಿಯ ಮಿಶ್ರಣವನ್ನು ಹಂಚುವ ಸಂಪ್ರದಾಯವೂ ಇದೆ. ಕೆಲವೆಡೆ ಗಾಳಿಪಟ ಹಾರಿಸುವ ಆಚರಣೆಯೂ ಇದೆ. ಗಂಡು ಮಕ್ಕಳಿಗೆ ಗಾಳಿಯಲ್ಲಿ ಗಾಳಿಪಟ ಹಾರಿಸುವ ಧಾವಂತವಾದರೆ, ಹೆಣ್ಣುಮಕ್ಕಳಿಗೆ ಬಣ್ಣಗಳ ಮಿಶ್ರಣದಿಂದ ರಂಗೋಲಿಯನ್ನು ಹಾಕುವ ತವಕ ಹೆಚ್ಚಾಗುತ್ತದೆ. ಗ್ರಾಮೀಣ ಭಾಗದಲ್ಲಿ ಊರಿಗೆ ಊರೇ ಸುಗ್ಗಿ ಸಂಕ್ರಾಂತಿಯ ಸಡಗರದಲ್ಲಿ ಮಿಂದು ರಂಗೇರುತ್ತದೆ.

ಎಳ್ಳಿನ ದಾನ
ಮಕರ ಸಂಕ್ರಾತಿ ಬಂತೆಂದರೆ ಎಳ್ಳು ಬೆಲ್ಲದ ಘಮ ಎಲ್ಲೆಡೆಯೂ ಬೀರುತ್ತದೆ. ಸಂಕ್ರಾಂತಿಯ ಸಂದರ್ಭದಲ್ಲಿ ಪ್ರಾತಃಕಾಲದಲ್ಲಿ ಎದ್ದು ಮೈಗೆಲ್ಲಾ ಎಳ್ಳೆಣ್ಣೆಯನ್ನು ಹಚ್ಚಿ ಸ್ನಾನವನ್ನು ಮಾಡಿ, ದೇವರಿಗೆ ಎಳ್ಳೆಣ್ಣೆಯ ದೀಪ ಬೆಳಗಬೇಕು. ಎಳ್ಳು ಪಾಪಪರಿಹಾರದ ಸಂಕೇತವಾದುದರಿಂದ ಈ ದಿನ ಎಳ್ಳಿನ ದಾನ ಮಾಡಿದರೆ ಸಕಲ ಪಾಪಗಳು ತೊಡೆದು ಶ್ರೇಯಸ್ಸು ಪ್ರಾಪ್ತಿಯಾಗುವುದೆಂದು ಹೇಳಲಾಗುತ್ತದೆ.

ಕಿಚ್ಚು ಹಾಯಿಸುವುದು
ರಾಜ್ಯದ ಹಳೇ ಮೈಸೂರು ಪ್ರಾಂತ್ಯದಲ್ಲಿ ಸಂಕ್ರಾಂತಿಯಂದು ಆಚರಿಸುವ ವಿಭಿನ್ನ ಆಚರಣೆಯೇ ಕಿಚ್ಚು ಹಾಯಿಸುವುದು. ವರ್ಷವಿಡೀ ಬೆವರು ಸುರಿಸಿ ದುಡಿವ ರೈತನಿಗೆ ಹೆಗಲಾಗಿದ್ದುಕೊಂಡು ಶ್ರಮಿಸುವ ಹಸುಗಳಿಗೂ ಈ ದಿನ ಸ್ನಾನ ಮಾಡಿಸಿ ಸಿಂಗಾರ ಮಾಡಲಾಗುತ್ತದೆ. ಕಾಲಿಗೆ ಗೆಜ್ಜೆಗಳನ್ನು ಕಟ್ಟಿ, ಬಣ್ಣಗಳಿಂದ ಹಸುಗಳನ್ನು ಸಿಂಗಾರ ಮಾಡಿ ಪೂಜೆ ಮಾಡುತ್ತಾರೆ. ಸಂಜೆಯ ವೇಳೆ ಭತ್ತದ ಹುಲ್ಲಿನ ರಾಶಿ ಹಾಕಿ ಕಿಚ್ಚನ್ನು ಉರಿಸಲಾಗುತ್ತದೆ. ಈ ಕಿಚ್ಚು ಏಳುತ್ತಿದ್ದಂತೆ ರಾಸುಗಳನ್ನು ಹಾಯಿಸಲಾಗುತ್ತದೆ. ಇದರಲ್ಲೂ ಸ್ಪರ್ಧೆಯನ್ನು ಕೂಡಾ ಏರ್ಪಡಿಸಲಾಗುತ್ತದೆ. ಮೊದಲು ಕಿಚ್ಚು ಹಾಯ್ದ ಹಸುಗಳಿಗೆ ಬಹುಮಾನವನ್ನು ನೀಡಲಾಗುತ್ತದೆ. ಕಿಚ್ಚು ಹಾಯಿಸುವುದರಿಂದ ಹಸುಗಳ ಮೈಯಲ್ಲಿರುವ ಉಣ್ಣೆ ನಿಯಂತ್ರಣವಾಗುತ್ತದೆ ಎಂದೂ ಹೇಳಲಾಗುತ್ತದೆ.

  ಶ್ರೀ ಗುರು ರಾಘವೇಂದ್ರ ಮಹಿಮೆ ಶ್ರೀ ಸುಶಮೀಂದ್ರತೀರ್ಥರ ಮೂಲಕ ತೋರಿಸಿದ್ದು

ಕ್ಷೇತ್ರ ದರ್ಶನ
ಮಕರ ಸಂಕ್ರಾಂತಿಯಂದು ದಕ್ಷಿಣ ಭಾರತದ ಕೆಲವು ದೇವಾಲಯಗಳಲ್ಲಿ ಜಾತ್ರೆಯನ್ನೂ ಏರ್ಪಡಿಸುತ್ತಾರೆ. ಸಂಕ್ರಾಂತಿಯಂದು ಪುಣ್ಯ ನದಿಗಳ ಸಂಗಮ ಸ್ಥಾನದಲ್ಲಿ ಪವಿತ್ರ ಸ್ನಾನ ಮಾಡುವ ಪದ್ಧತಿಯೂ ಇದೆ. ಶರೀರದ ಕೊಳೆಯನ್ನು ನಿವಾರಿಸುವ ಜೊತೆಗೆ ಮನಸ್ಸಿನ ಕೊಳೆಯನ್ನೂ ಕಳೆಯುವುದೂ ಈ ಸ್ನಾನದ ಉದ್ದೇಶ. ಸರ್ವರೋಗ ನಿವಾರಣೆಗೆ, ಎಲ್ಲಾ ಅಭೀಷ್ಟಗಳ ನೆರವೇರಿಕೆಗಾಗಿಯೂ ಪವಿತ್ರ ಸ್ನಾನ ಮಾಡುವ ಸಂಪ್ರದಾಯವಿದೆ. ಮಂತ್ರ, ಧ್ಯಾನ, ಪೂಜೆ, ಉಪದೇಶ ದೀಕ್ಷೆಯನ್ನೂ ಈ ಕಾಲದಲ್ಲಿ ಮಾಡಿದರೆ ಒಳ್ಳೆಯದೆಂದು ಹೇಳಲಾಗುತ್ತದೆ.

ಎಳ್ಳು ಹಾಕಿದ ನೀರಿನ ಸ್ನಾನ, ಎಳ್ಳಿನ ತರ್ಪಣ, ಎಳ್ಳಿನ ಗೋವಿನ ದಾನ, ಎಳ್ಳು ಬೆಲ್ಲವನ್ನು ಹಂಚುವ ಮೂಲಕ ಎಳ್ಳಿಗೆ ಈ ಹಬ್ಬದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಹಾಗಾಗಿ ಮಕರ ಸಂಕ್ರಾಂತಿಯಂದು ಎಳ್ಳು ಬೆಲ್ಲ ಹಂಚಿ ಸಂತೋಷವನ್ನು ಇನ್ನಷ್ಟು ಹೆಚ್ಚಿಸಲು ಸಿದ್ಧರಾಗಿ. ಕೋಪ ತಾಪಗಳನ್ನು ಮರೆತು ಒಂದಾಗಿ ಸಂಭ್ರಮಿಸಲು ಮರೆಯದಿರಿ.

ಮಕರ ಸಂಕ್ರಾಂತಿ ಎಳ್ಳು ಬೆಲ್ಲ ಬೀರಿ ಹಿಗ್ಗುವ ಸಂಕ್ರಮಣ ಕಾಲ

ಸೂರ್ಯನು ಮಕರ ರಾಶಿಯನ್ನು ಪ್ರವೆಶಿಸುವ ದಿನವೇ ಮಕರ ಸಂಕ್ರಮಣ. ಸಂಕ್ರಾಂತಿಯ ಮಹತ್ವ ಹಾಗೂ ಸಂಕ್ರಮಣ ಕಾಲದ ಕುರಿತಾಗಿ ಮಾಹಿತಿ !!!

ಜಮೀನಲ್ಲಿ ಬೆವರು ಸುರಿಸಿ ಉಳುಮೆ ಮಾಡುವ ರೈತನಿಗೆ ಬೆಳೆ ಕಟಾವಿಗೆ ಬಂತೆಂದರೆ ಹಿಗ್ಗುವ ಕಾಲ. ಈ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲು ಬರುವಂತಹ ಹಬ್ಬವೇ ಸಂಕ್ರಾಂತಿ. ಸೂರ್ಯನು ತನ್ನ ಚಲನೆಯ ಮಾರ್ಗವನ್ನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಬದಲಾಯಿಸುವ ದಿನದಂದು ಈ

ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ.

ಕರ್ನಾಟಕದಲ್ಲಿ ಸಂಕ್ರಾಂತಿಯನ್ನು ಸುಗ್ಗಿಯೆಂದು ಕರೆದರೆ ತಮಿಳಿಗರಿಗೆ ‘ಪೊಂಗಲ್‌’ ಸಂಭ್ರಮದ ಹಬ್ಬ, ಕೇರಳಿಗರು ‘ಮಕರವಿಳಕ್ಕು’ವಿನ ಬೆಳಕಿಗೆ ಕಾತುರರಾಗಿರುತ್ತಾರೆ. ಆಂಧ್ರಪ್ರದೇಶದಲ್ಲಿ ‘ಭೋಗಿ’ಯ ಬೆಂಕಿ ಹಬ್ಬದ ಸಂಭ್ರಮವನ್ನು ಸಾರಿ ಹೇಳುತ್ತದೆ. ದಕ್ಷಿಣ ಭಾರತದಲ್ಲಿ ಸಂಕ್ರಾಂತಿಯನ್ನು ಈ ಎಲ್ಲಾ ಹೆಸರಿನಿಂದ ಕರೆದರೆ ಉತ್ತರ ಭಾರತದ ಗುಜರಾತ್‌ ನಲ್ಲಿ ಉತ್ತರಾಯಣವೆಂದೂ, ಪಂಜಾಬಿನಲ್ಲಿ ಲೊಹ್ರಿ, ಅಸ್ಸಾಂನಲ್ಲಿ ಮಾಘ ಬಿಹು, ಪಂಜಾಬ್‌ನಲ್ಲಿ ಸಿಖ್‌ ಸಮುದಾಯವು ವೈಸಾಖಿ ಎಂದು ಆಚರಿಸುತ್ತಾರೆ.

ಪ್ರತಿವರ್ಷ ಮಕರ ಸಂಕ್ರಾಂತಿಯನ್ನು ಜನವರಿ14ರಂದು ಆಚರಿಸಲಾಗುತ್ತದೆ. ಈ ದಿನ ಸೂರ್ಯನು ಜನವರಿ14 ಹಾಗೂ 15 ರ ಮಧ್ಯ ಕಾಲ ಅಂದರೆ ಮುಂಜಾನೆ 1. 45ಕ್ಕೆ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಸೂರ್ಯನು ಉತ್ತರಾಯಣವನ್ನು ನಡೆಸಿದರೆ, ಉತ್ತರ ಗೋಳಾರ್ಧವು ಸೂರ್ಯನ ಕಡೆಗೆ ತಿರುಗುತ್ತದೆ.

  ವಿಷ್ಣುವಿನ ಹತ್ತು ಅವತಾರಗಳು ಅಥವಾ ದಶಾವತಾರ

ಹೆಚ್ಚಾಗಿ ಹಿಂದೂ ಹಬ್ಬವನ್ನು ಚಂದ್ರನನ್ನು ಆಧರಿಸಿದ ಪಂಚಾಂಗದ ಮೂಲಕ ಲೆಕ್ಕ ಹಾಕಲಾಗುತ್ತದೆ. ಆದರೆ ಮಕರ ಸಂಕ್ರಾಂತಿಯನ್ನು ಸೂರ್ಯನನ್ನು ಆಧರಿಸಿದ ಪಂಚಾಂಗದ ಲೆಕ್ಕಾಚಾರದ ಮೂಲಕ ನಿರ್ಧರಿಸಲಾಗುತ್ತದೆ. ಸಂಕ್ರಾಂತಿ ಎಂದರೆ ಸೌರಮಾನದ ಪರ್ವ, ಮಕರ ಮಾಸದ ಆರಂಭದ ದಿನದಂದೇ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಮಣದಿಂದ ಋತುವಿನಲ್ಲಿ ಬದಲಾವಣೆ ಆಗುತ್ತದೆ. ಶರತ್ಕಾಲ ಕಳೆದು ವಸಂತ ಕಾಲದ ಆಗಮನವಾಗುತ್ತದೆ, ಇದರಿಂದಾಗಿ ದಿನಗಳು ಹೆಚ್ಚಾಗಿ, ರಾತ್ರಿಯ ಅವಧಿ ಕಡಿಮೆಯಾಗುತ್ತದೆ.

ಸಂಕ್ರಾಂತಿಯ ಮಹತ್ವ

ಮಕರವೆಂದರೆ ಹತ್ತನೇ ರಾಶೀ ಚಕ್ರ, ಮಕರ ಸಂಕ್ರಾಂತಿ ಎಂದರೆ ಬದಲಾವಣೆ. ಸೂರ್ಯನು ಮಕರ ರಾಶಿಗೆ ಪ್ರವೇಶವಾಗುವ ದಿನವನ್ನು ಸಂಕ್ರಾಂತಿ ಹಬ್ಬವಾಗಿ ಆಚರಿಸುತ್ತಾರೆ. ಜ್ಯೋತಿಷ್ಯದ ಪ್ರಕಾರ ಮಕರ ರಾಶಿಯನ್ನು ಆಳುವವನು ಶನೀಶ್ವರ. ಇವನು ಸೂರ್ಯಪುತ್ರ. ಈ ದಿನದಂದು ಸೂರ್ಯನು ತನ್ನ ಮಗನ ಆಡಳಿತಕ್ಕೊಳಪಟ್ಟ ಮನೆಯನ್ನು ಪ್ರವೇಶಿಸುತ್ತಾನೆ ಎಂದು ಹೇಳಲಾಗುತ್ತದೆ.

ಮಕರ ಸಂಕ್ರಮಣ

ಒಂದು ರೀತಿಯಲ್ಲಿ ಸ್ವತಃ ತಂದೆ ಮಗನಾದ ಸೂರ್ಯ ಶನೀಶ್ವರರು ಇಬ್ಬರೂ ವಿರುದ್ಧವಾದವರು. ಆದರೆ ಈ ಸಂಕ್ರಾಂತಿಯ ಸಂದರ್ಭದಲ್ಲಿ ತನ್ನ ಮಗನಾದ ಶನಿಯ ಬಳಿ ಸೂರ್ಯನು ಹೋಗುವುದರಿಂದಾಗಿ ಈ ಸಂದರ್ಭವು ಮನುಷ್ಯರಿಗೆ ದ್ವೇಷ ಹಾಗೂ ಜಗಳವನ್ನು ಬಿಟ್ಟು ಒಂದಾಗಿ ಎನ್ನುವ ಸಂದೇಶವನ್ನು ನೀಡುತ್ತದೆ.

ಯಾವುದೇ ಹಳೆಯ ಕಹಿ ನೆನಪು ಹಾಗೂ ಅಸಮಾಧಾನವನ್ನು ಬಿಟ್ಟು ಜಗತ್ತಿನ ಸೌಂದರ್ಯವನ್ನು ಆಸ್ವಾದಿಸುವ ಹಾಗೂ ಪ್ರೀತಿಸುವ ಅವಕಾಶವನ್ನು ಈ ಸಂಕ್ರಾಂತಿಯು ಹೊತ್ತು ತರುತ್ತದೆ. ಹಾಗಾಗಿ ಸೂರ್ಯನ ಶಕ್ತಿ ಹಾಗೂ ಹೃದಯವೈಶಾಲ್ಯತೆಯನ್ನು ಸ್ಮರಿಸಿ, ಅನಗತ್ಯ ವಾದ ವಿವಾದಗಳನ್ನು ಬದಿಗಿಟ್ಟು ಅರ್ಥಪೂರ್ಣ ಸಂಬಂಧಗಳನ್ನು ಸ್ಥಾಪಿಸಿ ಹಾಗೂ ಸಂತೋಷದ ಕ್ಷಣಗಳನ್ನು ಈ ಸಂಕ್ರಾಂತಿಯಂದು ಆನಂದಿಸಿ

Leave a Reply

Your email address will not be published. Required fields are marked *

Translate »