ಧನುರ್ಮಾಸದಲ್ಲಿ ವಿಷ್ಣುವಿನ ಆರಾಧನೆಯನ್ನು ಹೀಗೆ ಮಾಡಿದರೆ ಶ್ರೇಷ್ಠ

ಧನುರ್ಮಾಸದಲ್ಲಿ ವಿಷ್ಣುವಿನ ಆರಾಧನೆಯನ್ನು ಹೀಗೆ ಮಾಡಿದರೆ ಶ್ರೇಷ್ಠ..!

🕉️ಧನುರ್ಮಾಸವೆಂದರೆ ಎಲ್ಲಾ ದೇವಾಲಯಗಳಲ್ಲೂ ಬ್ರಾಹ್ಮೀ ಮುಹೂರ್ತದಲ್ಲೇ ಪೂಜೆ ನಡೆಯುವುದು ಹಿಂದಿನಿಂದಲೂ ಪಾಲಿಸಿಕೊಂಡು ಬಂದ ಸಂಪ್ರದಾಯ, ಹಾಗಾದರೆ ಧನುರ್ಮಾಸದ ವಿಶೇಷತೆ ಏನು, ಮಹತ್ವವೇನು?

🕉️ಹಿಂದೂ ಧರ್ಮದಲ್ಲಿರುವ ಪ್ರತಿಯೊಂದು ತಿಂಗಳುಗಳು ಕೂಡಾ ಅತ್ಯಂತ ಮಹತ್ವವನ್ನು ಪಡೆದಿದೆ. ಆಯಾಯ ತಿಂಗಳಿಗೆ ಅನುಸಾರವಾಗಿ ಆಚರಣೆಗಳು, ಸಂಪ್ರದಾಯಗಳು, ದೇವರ ಪೂಜಾ ವಿಧಾನಗಳ ಮೂಲಕ ಜೀವನವನ್ನು ಹೇಗೆ ನಡೆಸಬೇಕೆನ್ನುವುದರ ಸಾರವನ್ನು ತಿಳಿಸಿಕೊಡುತ್ತದೆ. ಮಾಸಗಳು ಬದಲಾದಂತೆ ವಾತಾವರಣವೂ ಬದಲಾಗುತ್ತದೆ ಇದಕ್ಕೆ ಅನುಗುಣವಾಗಿ ಮನುಷ್ಯನ ದೇಹವೂ ಒಗ್ಗಿಕೊಳ್ಳಬೇಕೆನ್ನುವ ವೈಜ್ಞಾನಿಕ ಹಿನ್ನೆಲೆಯೂ ಮಾಸಗಳಲ್ಲಿ ಬರುವ ಆಚರಣೆಗಳ ಹಿಂದಿದೆ.

🕉️ಸೌರ ಮಂಡಲದ ರಾಜನಾದ ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚರಿಸುತ್ತಾನೆ. ಈ ಸಂಚಾರಕ್ಕೆ ತೆಗೆದುಕೊಳ್ಳುವ ಅವಧಿ ಒಂದು ತಿಂಗಳು. ಡಿಸೆಂಬರ್‌ 16ರಂದು ಸೂರ್ಯನು ಧನುರಾಶಿಯನ್ನು ಪ್ರವೇಶಿಸಲಿದ್ದು ಮಕರ ರಾಶಿಯನ್ನು ಪ್ರವೇಶಿಸಲು ಒಂದು ತಿಂಗಳ ಕಾಲಾವಕಾಶವನ್ನು ಪಡೆಯುತ್ತಾನೆ. ಈ ಅವಧಿಯನ್ನೇ ‘ಧನುರ್ಮಾಸ’ ಎಂದು ಕರೆಯುತ್ತಾರೆ. ಈ ಮಾಸವು ಶುಭಕರವಲ್ಲವೆಂದು ಮದುವೆ, ಗೃಹ ಪ್ರವೇಶ ಮುಂತಾದ ಕಾರ್ಯಕ್ರಮಗಳನ್ನೂ ಮಾಡುವುದಿಲ್ಲ. ಬದಲಾಗಿ ಈ ಮಾಸ ಪೂರ್ತಿ ವಿಷ್ಣುವಿನ ಆರಾಧನೆಯಲ್ಲೇ ಕಳೆಯುತ್ತಾರೆ. ಉತ್ಥಾನ ದ್ವಾದಶಿಯಂದು ಯೋಗ ನಿದ್ರೆಯಿಂದ ಏಳುವ ಮಹಾವಿಷ್ಣುವಿಗೆ ಧನುರ್ಮಾಸವು ಅರುಣೋದಯದ ಕಾಲವೆಂದು ಹೇಳಲಾಗುತ್ತದೆ. ಹಾಗಾಗಿ ಧನುರ್ಮಾಸವು ಶ್ರೀಹರಿಯ ಪೂಜೆಗೆ ಶ್ರೇಷ್ಠವಾದ ಕಾಲವೆನಿಸಿಕೊಂಡಿದೆ. ಶೈವ ಆರಾಧಕರು ಧನುರ್ಮಾಸದಲ್ಲಿ ಶಿವನ ಆರಾಧನೆಯನ್ನೂ ಮಾಡುತ್ತಾರೆ.

  ರಥಸಪ್ತಮಿ ಏನು? ಏಕೆ? ಹೇಗೆ?

🕉️ ಧನುರ್ಮಾಸದ ಮಹತ್ವ 🕉️

🕉️ಬ್ರಾಹ್ಮೀ ಮುಹೂರ್ತದಲ್ಲಿ ಚುಮುಚುಮು ಚಳಿಯಲ್ಲೇ ಎದ್ದು ಸ್ನಾನಾದಿಗಳನ್ನು ಮುಗಿಸಿ, ನಕ್ಷತ್ರಗಳು ಇನ್ನೂ ಹೊಳೆಯುತ್ತಿರುವಾಗಲೇ ದೇಗುಲಗಳಲ್ಲಿ ಮುಂಜಾನೆಯ ಪೂಜೆಯು ಆರಂಭವಾಗಿ, ಸೂರ್ಯೋದಯಕ್ಕಿಂತ ಮುನ್ನವೇ ಮುಕ್ತಾಯವಾಗುವ ಮಾಸವಿದು ಇದನ್ನು ಧನು ಪೂಜೆ ಎಂದೂ ಕರೆಯುತ್ತಾರೆ. ಇದರ ಹಿಂದೆ ಕಾರಣವೂ ಇದೆ. ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯ ಕಾಲ, ಉತ್ತರಾಯಣವು ಹಗಲಿನ ಕಾಲ, ಆದರೆ ಈ ಧನುರ್ಮಾಸವು ರಾತ್ರಿ ಮತ್ತು ಹಗಲು ಎರಡೂ ಸೇರಿದ ಸಮಯವೆಂದೂ, ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಯಾರು ಭಗವಂತನನ್ನು ಪೂಜಿಸಿ, ನೈವೇದ್ಯವನ್ನು ಅರ್ಪಿಸುತ್ತಾರೋ ಅವರ ಸಕಲ ಇಷ್ಟಾರ್ಥಗಳು ನೆರವೇರುತ್ತದೆ.

🕉️ಧನುರ್ಮಾಸದಲ್ಲಿ ವಿಶೇಷವಾಗಿ ಮುಂಜಾನೆ ವಿಷ್ಣು ಸಹಸ್ರನಾಮ ಪಾರಾಯಣ, ಪುರುಷ ಸೂಕ್ತಂ, ಶ್ರೀ ವಿಷ್ಣು ಸೂಕ್ತಂ ಅಥವಾ ನಾರಾಯಣ ಉಪನಿಷತ್ತನ್ನು ಪಠಣ ಮಾಡಲಾಗುತ್ತದೆ. ಕೆಲವರು ಮಹಾವಿಷ್ಣುವಿನೊಂದಿಗೆ ಮಹಾಲಕ್ಷ್ಮೀಯನ್ನು ಪೂಜಿಸುತ್ತಾರೆ, ಹೀಗೆ ಪೂಜಿಸುವುದರಿಂದ ಸಂಪತ್ತು ಒಲಿಯುವುದೆಂದು ಹೇಳಲಾಗುತ್ತದೆ. ಹಿಂದೆ ದೇವ ರಾಜನಾದ ಇಂದ್ರನು ರಾಜ್ಯವನ್ನು ಕಳೆದುಕೊಂಡಾಗ ಶಚೀದೇವಿಯು ಹುಗ್ಗಿಯ ನೈವೇದ್ಯ ಮಾಡಿ ವಿಷ್ಣುವಿಗೆ ಸಮರ್ಪಿಸಿ, ಶ್ರೀಹರಿಯೊಂದಿಗೆ ಮಹಾಲಕ್ಷ್ಮಿಯನ್ನೂ ದ್ವಾದಶನಾಮಗಳಿಂದ ಸ್ತುತಿಸಿದಳಂತೆ, ಇದರ ಫಲವಾಗಿ ಇಂದ್ರನು ರಾಜ್ಯವನ್ನು ಮರಳಿ ಪಡೆದನು ಎನ್ನುವ ಪುರಾಣ ಕಥೆಯಿದೆ.

🕉️ ಧನುರ್ಮಾಸದ ಆಚರಣೆ 🕉️

🕉️ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನಾದಿ ಕರ್ಮಗಳನ್ನು ಮುಗಿಸಬೇಕು.
ಸೂರ್ಯೋದಯಕ್ಕಿಂತ ಮೊದಲೇ ದೇವರ ಪೂಜೆ ಮುಗಿಸಬೇಕು. ಆಕಾಶದಲ್ಲಿ ನಕ್ಷತ್ರ ಕಾಣಿಸುವ ಸಮಯದಲ್ಲಿ ಮಾಡಿದ ಪೂಜೆ ಶ್ರೇಷ್ಠ, ನಂತರ ಮಧ್ಯಮ, ಸೂರ್ಯೋದಯದ ನಂತರ ಅಧಮ, ನಿಷ್ಪಲವೆಂದು ಹೇಳಲಾಗುತ್ತದೆ.
ಪ್ರತಿನಿತ್ಯ ದೇವರಿಗೆ ನೈವೇದ್ಯವಾಗಿ ಮುದ್ಗಾನ್ನ ಅಂದರೆ ಹುಗ್ಗಿಯನ್ನು ಅರ್ಪಿಸಬೇಕು.
ಪಾರಾಯಣವನ್ನು ನೈವೇದ್ಯ ಅರ್ಪಣೆಯ ನಂತರವೂ ಮಾಡಬಹುದು.
ಸಂಧ್ಯಾವಂದನೆ, ನಿತ್ಯಾಹ್ನಿಕವನ್ನು ಪೂಜಾನಂತರ ಮಾಡಿದರೂ ಯಾವುದೇ ದೋಷವಿರುವುದಿಲ್ಲ.
ಧನುರ್ಮಾಸದ ಒಂದು ದಿನ ವಿಷ್ಣುವಿಗೆ ಪೂಜೆ ಮಾಡಿದರೆ ಸಾವಿರ ವರ್ಷ ಪೂಜೆ ಮಾಡಿದ ಫಲ ದೊರೆಯುವುದು.

  ರಾಜದಂಡ ಸೆಂಗೋಲ್ ನ್ಯಾಯದಂಡ

🕉️ ಕಾತ್ಯಾಯಿನಿ ವ್ರತ🕉️

🕉️ಭಾಗವತ ಪುರಾಣದಲ್ಲಿ ಧನುರ್ಮಾಸದ ಮುಂಜಾನೆ ಮಾಡುವ ವ್ರತದ ಫಲವು ಭಕ್ತರಿಗೆ ಸರ್ವವಿಧದ ಫಲಗಳನ್ನು ನೀಡುತ್ತದೆ ಎನ್ನುವ ಉಲ್ಲೇಖವಿದೆ. ನಂದಗೋಪನ ಮಗನಾದ ಶ್ರೀಕೃಷ್ಣನನ್ನು ಪತಿಯಾಗಿ ವರಿಸಲು ಗೋಪಿಯರೆಲ್ಲ ಸೇರಿ ಈ ವ್ರತವನ್ನು ಮಾಡುತ್ತಾರೆ. ಅಂತಹ ಪರಮಾತ್ಮನನ್ನೇ ದೊರಕಿಸಿಕೊಡುವ ಪುಣ್ಯ ಮಾಸವಾದ್ದರಿಂದ ಧನು ಮಾಸದಲ್ಲಿ ಶೈವ, ವೈಷ್ಣವ, ಶಾಕ್ತರೆಲ್ಲರೂ ದೇಗುಲಗಳಲ್ಲಿ ಧನುರ್ಮಾಸದ ಆಚರಣೆಯನ್ನು ಮಾಡುತ್ತಾರೆ

🕉️ ಹುಗ್ಗಿಯ ಪ್ರಾಮುಖ್ಯತೆ🕉️

🕉️ಪಾಂಡವರು ರಾಜ್ಯವನ್ನು ಕಳೆದುಕೊಂಡು ವನವಾಸದಲ್ಲಿರಬೇಕಾದರೆ ಧರ್ಮರಾಯನು ನಾರದನನ್ನು ‘ ರಾಜ್ಯ, ಕೋಶಗಳನ್ನೆಲ್ಲಾ ಕಳೆದುಕೊಂಡಿದ್ದೇವೆ, ಸದ್ಯದಲ್ಲೇ ಕೌರವರೊಂದಿಗೆ ಯುದ್ಧವೂ ನಡೆಯಲಿದೆ. ಹಾಗಾಗಿ ಯುದ್ಧದಲ್ಲಿ ಜಯಶಾಲಿಯಾಗುವುದೋ? ಕಳೆದುಕೊಂಡ ರಾಜ್ಯ ಮರಳಿ ದೊರೆಯುವುದೋ’ ಎಂದು ಪ್ರಶ್ನಿಸುತ್ತಾನೆ. ಆಗ ನಾರದರು ‘ ಬ್ರಾಹ್ಮೀ ಮುಹೂರ್ತದಲ್ಲಿ ಹರಿಯನ್ನು ಪೂಜಿಸಿ, ಯಾರು ಹುಗ್ಗಿಯನ್ನು ಸಮರ್ಪಿಸುತ್ತಾರೋ ಅವನು ಕ್ಷಣ ಮಾತ್ರದಲ್ಲಿ ಶತ್ರುಗಳನ್ನು ಜಯಿಸುತ್ತಾನೆ. ಹಿಂದೆ ಇಂದ್ರನೂ ರಾಜ್ಯವನ್ನು ಕಳೆದುಕೊಂಡಾಗ ಶಚೀದೇವಿಯು ಹುಗ್ಗಿಯನ್ನು ವಿಷ್ಣುವಿಗೆ ಸಮರ್ಪಿಸಿದುದೂ, ಶ್ರೀಹರಿಯ ಅನುಗ್ರಹದಿಂದ ರಾಜ್ಯವನ್ನು ಮರಳಿ ಪಡೆದುದಾಗಿಯೂ’ ಯುಧಿಷ್ಟಿರನಿಗೆ ತಿಳಿಸುತ್ತಾರೆ.
‘ಧನುರ್ಮಾಸದಲ್ಲಿ ಪ್ರತಿನಿತ್ಯ ಉ‍ಷಾಃಕಾಲದಲ್ಲಿ ಶ್ರೀಹರಿಗೆ ಹುಗ್ಗಿಯನ್ನು ಸಮರ್ಪಿಸಿ,’ ಪೂಜಿಸಿದರೆ ಯುದ್ಧದಲ್ಲಿ ಜಯಶೀಲರಾಗುವಿರೆಂದು ತಿಳಿಸಿದರು. ಇದರಂತೆ ಪಾಂಡವರು ಶ್ರೀಕೃಷ್ಣನಿಗೆ ಧನುರ್ಮಾಸದ ಪೂಜೆಯನ್ನು ಮಾಡಿ ಅನುಗ್ರಹವನ್ನು ಪಡೆದು ಮಹಾಭಾರತ ಯುದ್ಧವನ್ನು ಜಯಿಸಿದರೆಂದು ಹೇಳಲಾಗುತ್ತದೆ. ಮಹಾಭಾರತ ಯುದ್ಧದ ಸಂದರ್ಭದಲ್ಲಿ ಶ್ರೀಕೃಷ್ಣನಿಗೆ ದ್ರೌಪದಿಯು ಪ್ರತಿನಿತ್ಯ ಬೆಳಗ್ಗೆ ಬೇಗ ಹುಗ್ಗಿಯನ್ನು ಮಾಡಿಕೊಡುತ್ತಿದ್ದಳು, ಅದನ್ನು ಶ್ರೀಕೃಷ್ಣನು ತಿಂದು ಹೋಗುತ್ತಿದ್ದನೆಂದೂ ಪುರಾಣ ಕಥೆಯಲ್ಲೂ ಉಲ್ಲೇಖಿಸಲಾಗಿದೆ.

  ದೇವಾಲಯಗಳಲ್ಲಿ ನಮಸ್ಕಾರ ಎಲ್ಲಿ, ಹೇಗೆ ಮಾಡಬೇಕು

ವೈಜ್ಞಾನಿಕ ಹಿನ್ನೆಲೆಯ ಪ್ರಕಾರ ಚಳಿಗಾಲದಲ್ಲಿನ ಒಣ ಹವೆಯಿಂದ ಚರ್ಮವು ಒಡೆದು ಹೊಸ ಚರ್ಮವು ರೂಪುಗೊಳ್ಳುವುದರಿಂದ ಚರ್ಮವನ್ನು ಪೋಷಿಸುವಂತಹ ಆಹಾರ ಅವಶ್ಯಕ. ಈ ಕಾಲದಲ್ಲಿ ದೇಹದಲ್ಲಿ ಕೊಬ್ಬಿನಂಶವು ಕಡಿಮೆಯಾಗುವುದರಿಂದ ಹುಗ್ಗಿಯನ್ನು ಸೇವಿಸಬೇಕೆಂದು ಹೇಳುತ್ತಾರೆ. ಹುಗ್ಗಿಯಲ್ಲಿ ಕೊಬ್ಬಿನಂಶ ಹೇರಳವಾಗಿರುವುದರಿಂದ ದೇಹದಲ್ಲಿ ಕೊಬ್ಬಿನಂಶ ಹೆಚ್ಚಾಗಿ ಶಾರೀರಿಕ ಸಮತೋಲನವನ್ನು ಕಾಪಾಡಿಕೊಳ್ಳಬಹುದು. 🙏

Leave a Reply

Your email address will not be published. Required fields are marked *

Translate »