🔯 ಆಧ್ಯಾತ್ಮಿಕ ವಿಚಾರ.📖🔯
” ಶ್ರೀ ಸುಶಮೀಂದ್ರತೀರ್ಥರ ಮಹಿಮೆಗಳು “
ಪ್ರಾತಃ ಸ್ಮರಣೆಯ ಪರಮಪೂಜ್ಯ ಶ್ರೀ ಶ್ರೀ ಸುಶಮೀಂದ್ರತೀರ್ಥರ ಬಗ್ಗೆ ಏನು ಹೇಳಿದರೂ / ಏನು ಬರೆದರೂ ಅಲ್ಪವೇ ಸರಿ! ಅವರ ಅದ್ಭುತ ಮಹಿಮೆಗಳ ಕುರಿತು ಕಿರು ಪರಿಚಯ ಇಲ್ಲಿದೆ.
ಅವರ ಮಹಿಮೆಗಳನ್ನು ಬರೆಯುತ್ತಾ ಹೋದರೆ ಬೃಹತ್ ಗ್ರಂಥವೇ ಆಗುತ್ತದೆ.
ಒಂದೆರಡು ಮಹಿಮೆಗಳನ್ನು ಮಾತ್ರ ಅವರ ಆರಾಧನಾ ಶುಭ ದಿನದಲ್ಲಿ ಸ್ಮರಣೆಗಾಗಿ ಕೊಡಲಾಗಿದೆ.
” ಮಂತ್ರ ಸಿದ್ಧರು “
ಪರಮಪೂಜ್ಯ ಶ್ರೀ ಶ್ರೀ ಸುಶಮೀಂದ್ರತೀರ್ಥರು; ಮಂತ್ರ ಸಿದ್ಧಿ ಕ್ಷೇತ್ರಾಧಿಪತಿಗಳು – ಮಂತ್ರಾಲಯ ಪ್ರಭುಗಳೆಂದೆ ಜಗತ್ಪ್ರಸಿದ್ಧರಾದ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಕಾರುಣ್ಯಪಾತ್ರರು ಮತ್ತು ಶ್ರೀ ರಾಘವೇಂದ್ರ ಅಷ್ಟಾಕ್ಷರ ಮಂತ್ರವನ್ನು ಸಿದ್ಧಿ ಪಡೆದ ಸಿದ್ಧಿ ಪುರುಷರು.
” ತಪಸ್ವಿಗಳು ( ವಾಕ್ಸಿದ್ಧಿ ) “
ಪರಮಪೂಜ್ಯ ಶ್ರೀ ಶ್ರೀ ಸುಶಮೀಂದ್ರತೀರ್ಥರು; ತಮ್ಮ ಭಕ್ತಿ – ವೈರಾಗ್ಯದಿಂದ ಶ್ರೀ ರಾಯರನ್ನು ಒಲಿಸಿಕೊಂಡು ತಮ್ಮ ಹೃದಯ ಸಿಂಹಾಸನದಲ್ಲಿ ಕುಳ್ಳಿರಿಸಿಕೊಂಡು ತಮ್ಮನ್ನು ನಂಬಿ ಬಂದ ಭಕ್ತ ಜನರ ಪಾಲಿಗಂತೂ ಮಂದಾರವೇ ( ಕಲ್ಪವೃಕ್ಷ ) ಆಗಿದ್ದರು.
ಕಾರಣ ಇವರ ಪ್ರತಿಯೊಂದು ನುಡಿಮುತ್ತುಗಳನ್ನು ಇವರ ಅಂತರ್ಯಾಮಿ ಶ್ರೀ ರಾಯರು ಸತ್ಯವನ್ನು ಮಾಡುತ್ತಿದ್ದರು / ಮಾಡಿದ್ದಾರೆ.
ಇದು ಸತ್ಯ.
ಇವರು ಕೊಡುವ ” ಮಂತ್ರಾಕ್ಷತೆ ಫಲದ ಮಹತ್ವ ” ದ ವಿವರ ಇಲ್ಲಿದೆ.
- ” ಪೂಜ್ಯ ಶ್ರೀ ಹಾವೇರಿ ಗುಂಡಾಚಾರ್ಯರ ಮೇಲೆ ತೋರಿದ ಕಾರುಣ್ಯ “
ಮೇ 2007ರಲ್ಲಿ ನನ್ನ ತಂದೆಯವರಾದ ಪೂಜ್ಯ ಶ್ರೀ ಗುಂಡಾಚಾರ್ಯರು ” ಜಾಂಡೀಸ್ ” ವ್ಯಾಧಿಯಿಂದ ಬಳಲುತ್ತಿದ್ದಾಗ ಆಪತ್ಬಾಂಧವರಾದ ಶ್ರೀ ರಾಯರೂ, ಆಪತ್ಕಾಲದ ಮಿತ್ರರಾದ ಶ್ರೀ ವಿಜಯರಾಯರೂ ಅವರಲ್ಲಿ ನಿಂತು ಅದ್ಭುತ ಮಹಿಮೆಯನ್ನೇ ತೋರಿದರು.
ನನ್ನ ತಂದೆಯವರಿಗೆ ಜಾಂಡೀಸ್ ವ್ಯಾಧಿ ಆಗಿತ್ತು.
ಅವರ ನಖ ಶಿಖ ಪರ್ಯಂತ ಅರಿಶಿಣವನ್ನೂ ಮೀರಿಸುವ ಕಲರ್.
ಅವರ ತಲೆ ಕೂದಲೂ ಕೂಡಾ ಅರಿಶಿಣ ಬಣ್ಣಕ್ಕೆ ತಿರುಗಿತ್ತು.
ನಾನು ಮಂತ್ರಾಲಯಕ್ಕೆ ಹೋಗಿ ಶ್ರೀ ರಾಯರ ಮತ್ತು ಶ್ರೀ ಗುರುಗಳನ್ನೂ ಭೇಟಿ ಮಾಡಿ ಬುದ್ಧಿ! ನಮ್ಮ ಅಪ್ಪನನ್ನು ಬೆಂಗಳೂರಿಗೆ ಕರ್ಕೊಂಡು ಹೋಗುತ್ತಿದ್ದೇನೆ.
ಅವರಿಗೆ ಆರೋಗ್ಯ ಸುಧಾರಿಸಲಿ ಎಂದು ಪ್ರಾರ್ಥಿಸಿದಾಗ…
ಗುರುಗಳು ! ನಾಗರಾಜ ನಿಮ್ಮಪ್ಪನಿಗೆ ಏನೂ ಆಗಿಲ್ಲ. ಮಠದಲ್ಲಿ 2 – 3 ಘಂಟೆಗೆ ಪ್ರಸಾದ ಆಗುತ್ತದೆ ಅದಕ್ಕೆ ಗ್ಯಾಸ್ಟ್ರಿಕ್ ಆಗಿರಬಹುದು ಎಲ್ಲ ನಮ್ಮ ರಾಯರ ಸೇವೆ ಸುಮಾರು 75 ವರ್ಷ ನಿಸ್ವಾರ್ಥದಿಂದ ಸೇವೆ ಮಾಡಿದ್ದಾನೆ ಅವನಿಗೆ ಎಲ್ಲವೂ ಒಳ್ಳೇದು ಆಗುತ್ತೆ ಮತ್ತು ಅವನು ಮಂತ್ರಾಲಯಕ್ಕೆ ಪುನಃ ಬಂದು ಶ್ರೀ ರಾಯರ ಸೇವೆ ಮಾಡುತ್ತಾನೆಂದು ಹೇಳಿ ಫಲ ಮಂತ್ರಾಕ್ಷತೆ ಜೊತೆಗೆ 5000/- ಕೊಟ್ಟು ಕಳುಹಿಸಿದರು.
ಬೆಂಗಳೂರಿಗೆ ಬಂದು ಮಲ್ಯಾ ಆಸ್ಪತ್ರೆಗೆ ಸೇರಿಸಿದರೆ ಅಲ್ಲಿಯ ವೈದ್ಯರು ಕರೆದು ಇವರನ್ನು ಕರೆದು ಕೊಂಡು ಹೋಗಿ ಮುಂದಿನ ಏರ್ಪಾಟು ಮಾಡಿಕೊಳ್ಳಿ ಎಂದು ಹೇಳಿದರು.
ಮರುದಿನ ಅಕ್ಷಯ ತೃತೀಯ. ಶ್ರೀ ಶ್ರೀಗಳವರು ಬೆಂಗಳೂರಿನಲ್ಲಿದ್ದರು. ನಾನು ಗುರುಗಳನ್ನು ಭೇಟಿ ಮಾಡಿ ನನ್ನ ತಂದೆಯವರ ಪರಿಸ್ಥಿತಿ ವಿವರಿಸಿದಾಗ ಅವರು ತಮ್ಮ ಶಿಷ್ಯರಾದ ಪರಮಪೂಜ್ಯ ಶ್ರೀ ಸುಯತೀಂದ್ರತೀರ್ಥರ ಕೈಯಲ್ಲಿ ಮಂತ್ರಾಕ್ಷತೆ ಕೊಟ್ಟು ನೀವು ಆಸ್ಪತ್ರೆಗೆ ಹೋಗಿ ಗುಂಡನ ತಲೆಯ ಮೇಲೆ ಹಾಕಿ ಆಶೀರ್ವಾದ ಮಾಡಿ ಬನ್ನಿ. ಎಲ್ಲವೂ ಸರಿ ಹೋಗುತ್ತದೆ ಹೇಳಿ ಕಳುಹಿಸಿದರು.
ಪರಮಪೂಜ್ಯ ಶ್ರೀ ಸುಯತೀಂದ್ರತೀರ್ಥರು ಆಸ್ಪತ್ರೆಗೆ ಬಂದು ವೈದ್ಯರನ್ನು ವಿಚಾರಿಸಿದಾಗ ಆಚಾರ್ಯರು MICU ನಲ್ಲಿ ಇದ್ದಾರೆ. ಅವರನ್ನು ಆ ದೇವರು ಮತ್ತು ಶ್ರೀ ರಾಯರ ಪ್ರತಿನಿಧಿಗಳಾದ ನೀವೇ ರಕ್ಷಿಸಬೇಕು ಎಂದು ವೈದ್ಯ ಶ್ರೀ ಸುರೇಶ ಚೌಟೆ ಅವರು ಹೇಳಿದರು.
ಪರಮಪೂಜ್ಯ ಶ್ರೀ ಸುಯತೀಂದ್ರತೀರ್ಥರು ನೇರವಾಗಿ MICU ಗೆ ಬಂದು ಅಲ್ಲಿರುವ ಎಲ್ಲಾ ರೋಗಿಗಳ ಮೇಲೆ ಮಂತ್ರಾಕ್ಷತೆ ಹಾಕಿ ಹೊರಟು ಹೋದರು.
ಅಲ್ಲಿದ್ದ ರೋಗಿಗಳೆಲ್ಲ 2 – 3 ಘಂಟೆಗಳಲ್ಲಿ ಡಿಸ್ಚಾರ್ಜ್ ಆಗಿ ಮನೆಗೆ ಹೋದರು.
ಅಲ್ಲಿ ನಮ್ಮ ತಂದೆಯೂ ಸೇರಿ 4 ಜನ ಮಾತ್ರ. ಎಲ್ಲರೂ ವೆಂಟಿಲೇಟರ್ ನಲ್ಲಿದ್ದರು. ಸುಮಾರು ರಾತ್ರಿ 9.30ಕ್ಕೆ ಪರಮಪೂಜ್ಯ ಶ್ರೀ ಸುಯತೀಂದ್ರತೀರ್ಥರು ಪುನಃ ಆಸ್ಪತ್ರೆಗೆ ಬಂದರು.
ನಾನು ನನ್ನ ಪೂರ್ವಾಶ್ರಮ ಮಿತ್ರ – ನಾನು ಬೆಂಗಳೂರಿನಲ್ಲಿ ಓದುವಾಗ ನನಗೆ ಚಾಮರಾಜ ಪೇಟೆ ಶ್ರೀ ರಾಯರ ಮಠದಲ್ಲಿ ಮಡಿಯಲ್ಲಿ ಪ್ರಸಾದ ತೆಗೆದಿಟ್ಟು ನನಗೆ ಮಡಿಯಲ್ಲಿ ಶ್ರೀ ರಾಯರ ಪ್ರಸಾದ ಹಾಕಿದ ನಮ್ಮಣ್ಣ.
ಅವನು ಯಾವಾಗಲೂ ಚೆನ್ನಾಗಿ ಇರಬೇಕೆಂದು ಗುರುಗಳು ಕೊಟ್ಟ ಮಂತ್ರಾಕ್ಷತೆಯನ್ನು ನನ್ನ ತಂದೆಯ ತಲೆಯ ಮೇಲೆ ಹಾಕಿ ತಲೆಯ ಮೇಲೆ ಅವರ ಅಮೃತಮಯ ಹಸ್ತಗಳಿಟ್ಟು ಮತ್ತೆ ನೀನು ಮಂತ್ರಾಲಯಕ್ಕೆ ಬರ್ತೀಯಾ ಎಂದು ಹೇಳಿ ಹೊರಟರು.
ಸುಮಾರು ಮಧ್ಯರಾತ್ರಿ 12 – 1 ರ ಮಧ್ಯ ಡ್ಯೂಟಿ ಡಾಕ್ಟರ್ ಬಂದು ಪರೀಕ್ಷಿಸಿ ವೆಂಟಿಲೇಟರ್ ತೆಗೆದರು.
ನಂತರ 40ದಿನ MICU ನಲ್ಲಿ ಚಿಕಿತ್ಸೆ ಪಡೆದು ಮುಂದೆ ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಹೋಗಿ ಶ್ರೀ ರಾಯರ – ಶ್ರೀ ವಿಜಯರಾಯರ ಸೇವೆ ಮಾಡಿ 18.04.2014ರಲ್ಲಿ ವೈಕುಂಠ ಯಾತ್ರೆ ಮಾಡಿದರು.
ಪರಮಪೂಜ್ಯ ಶ್ರೀ ಸುಶಮೀ೦ದ್ರತೀರ್ಥರು ಕೊಡುವ ಮಂತ್ರಾಕ್ಷತೆಗೆ ಅದ್ಭುತವಾದ ಶಕ್ತಿಯಿತ್ತು.
2 ಚಿಕ್ಕಪೇಟೆ ವಾಸಿಗಳಾದ ಶ್ರೀ ರಾಜಕುಮಾರ ಎಂಬುವರು ತಮ್ಮ ವ್ಯಾಪಾರದಲ್ಲಿ ನಷ್ಟ ಹೊಂದಿದ್ದರು. ಆ ಸಂದರ್ಭದಲ್ಲಿ ಅವರು ಶ್ರೀ ರಾಯರ ದರ್ಶನಕ್ಕಾಗಿ ಮಂತ್ರಾಲಯಕ್ಕೆ ಹೋದಾಗ; ಶ್ರೀ ರಾಯರ ದರ್ಶನ ಪಡೆದು; ಶ್ರೀ ಮಠದಲ್ಲಿರುವ ದ್ವಾರಪಾಲಕರಾದ ಶ್ರೀ ಆನಂದರಾವ್ ಅವರನ್ನು ಭೇಟಿ ಮಾಡಿ ತಮ್ಮ ಕಷ್ಟಗಳನ್ನು ಹೇಳಿಕೊಂಡಾಗ, ಅವರು ಶ್ರೀ ರಾಜಕುಮಾರ್ ಅವರನ್ನು ಶ್ರೀಗಳ ಭೇಟೆ ಮಾಡಿಸಿದಾಗ; ಶ್ರೀ ಶ್ರೀಗಳು ಮಂತ್ರಾಕ್ಷತೆಯೊಂದಿಗೆ ಒಂದು ರೂಪಾಯಿ ಕಾಯಿನ್ ಕೊಟ್ಟು ಶ್ರೀ ರಾಯರು ನಿಮಗೆ ಅನುಗ್ರಹ ಮಾಡಿದ್ದಾರೆ ಎಂದು ನುಡಿದು ಮಂತ್ರಾಕ್ಷತೆ ಕೊಟ್ಟರು.
ಆ ಮಂತ್ರಾಕ್ಷತೆ ತಂದು ಅವರ ಮನೆಯಲ್ಲೂ ಮಾತು ತಮ್ಮ ಅಂಗಡಿಯಲ್ಲಿ ಇಟ್ಟು ಪೂಜೆ ಮಾಡುತ್ತಿದ್ದ ಅವರು ಕೆಲದಿನಗಳಲ್ಲಿಯೇ ಅವರ ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಿ ಇಂದು ಕೋಟ್ಯಾಧಿಪತಿಗಳು ಆಗಿದ್ದಾರೆ.
ಶ್ರೀ ರಾಯರ ಪರಮಾನುಗ್ರಹದಿಂದ ಅವರ ಪ್ರೀತಿಯ ಕಂದ ಕೊಟ್ಟ ಮಂತ್ರಾಕ್ಷತೆ ಮಹಿಮೆ.
- ಶ್ರೀ ವಾದಿರಾಜರು; ಶ್ರೀ ವ್ಯಾಸರಾಜರು ಮತ್ತು ಶ್ರೀ ವಿಜಯೀಂದ್ರರ ಚರಿತ್ರೆಯನ್ನು ಕೇಳಿ ಅವರ ಅವತಾರ ಮತ್ತು ಮಹಿಮೆಯನ್ನು ತಿಳಿದು ಕೊಂಡಿದ್ದೇವೆ.
ಆದರೇ ಈ ಶತಮಾನದಲ್ಲಿ ಅವತರಿಸಿ ಬಂದ ದೇವ ಸ್ವಭಾವದ ಯತಿವರೇಣ್ಯರ ಅದ್ಭುತ ವಾಕ್ಸಿದ್ಧಿಯನ್ನು ಕಣ್ಣಾರೆ ಕಂಡಿದ್ದೇವೆ.
ಇದು ನಡೆದಿದ್ದು 2004ರಲ್ಲಿ.
ಶ್ರೀ ಸುಶಮೀಂದ್ರತೀರ್ಥರು ಸಂಚಾರ ಕ್ರಮದಲ್ಲಿ ಬೆಂಗಳೂರಿಗೆ ದಿಗ್ವಿಜಯ ಮಾಡಿ ಜಯನಗರ 5ನೇ ಬಡಾವಣೆಯಲ್ಲಿರುವ ಶ್ರೀ ರಾಯರ ಮಠದಲ್ಲಿ ಇದ್ದಾರೆ.
ಆ ಸಂದರ್ಭದಲ್ಲಿ ಶ್ರೀ ರಾಜಾರಾಮಣ್ಣ ಎಂಬ ವೃದ್ಧ ದಂಪತಿಗಳು ( ಸುಮಾರು 50 – 60 ವಯಸ್ಸಿನ ಆಸುಪಾಸಿನವರು ) ಶ್ರೀ ರಾಯರ ಮತ್ತು ಶ್ರೀ ಸುಶಮೀಂದ್ರತೀರ್ಥರ ದರ್ಶನಕ್ಕೆ ಬಂದು ಶ್ರೀಗಳವರನ್ನು ಕಂಡು ನಮಗೆ ಭಗವಂತ ಎಲ್ಲವನ್ನೂ ಕೊಟ್ಟಿದ್ದಾನೆ.
ಆದರೆ ಅದನ್ನು ಅನುಭವಿಸಲು ನಮಗೆ ಮಕ್ಕಳಿಲ್ಲ ಎಂದು ಅಳುತ್ತಾ ಶ್ರೀಶ್ರೀಗಳವರ ಪಾದದ ಮೇಲೆ ಬಿದ್ದು ಕಣ್ಣೀರಿನಿಂದ ಪಾದ ತೊಳಿದರು.
ಮೊದಲೇ ಶ್ರೀಗಳವರು ಮುಗ್ದರು. ನೀವು ದುಃಖಿಸಬೇಡಿ. ಶ್ರೀ ರಾಯರು ನಿಮಗೆ ಒಳ್ಳೆಯದು ಮಾಡುತ್ತಾರೆ. ನಿಮಗೆ ಪುತ್ರ ಸಂತಾನ ಆಗುತ್ತದೆ ಎಂದು ಹೇಳಿ ಮಂತ್ರಾಕ್ಷತೆ ಕೊಟ್ಟರು.
ಆ ವೃದ್ಧ ದಂಪತಿಗಳಿಗೆ ಒಬ್ಬ ಮಗ ಇದ್ದಾನೆ. ಈಗಲೂ ಆ ವೃದ್ಧ ದಂಪತಿಗಳು ಜಯನಗರ ಮಠಕ್ಕೆ ಬರ್ತಾರೆ.
- ಶ್ರೀಯುತ ಹೆಚ್ ಜಿ ರಾಮುಲು, ಶ್ರೀಯುತ ಸೂರ್ಯನಾರಾಯಣ ರೆಡ್ಡಿ, ಶ್ರೀ ರಂಗನ ಗೌಡರು, ಶ್ರೀ ರಾಜಸಿಂಹ ( RTO ), ಸ್ನೇಹಿತ ಶ್ರೀ ಮಾರುತಿ ಗುರುಪ್ರಸಾದ್ ಮೊದಲಾದ ಮಹಿಮೆಗಳನ್ನು ಶ್ರೀ ರಾಯರು ಇವರಲ್ಲಿ ನಿಂತು ತೋರಿಸಿ, ತಮ್ಮ ಪೀಠದಲ್ಲಿ ಸುಮಾರು 25 ವರ್ಷಗಳು ಮೀರಿಸಿದರು.
ಇದೇ ರೀತಿ ಅನೇಕ ಮಹಿಮೆಗಳನ್ನು ಶ್ರೀ ರಾಯರು ಇವರ ಮುಖಾಂತರ ಜಗತ್ತಿನ ಸಜ್ಜನರಿಗೆ ತೋರಿಸಿದ್ದರೆ.
ಇದೇ ಶ್ರೀ ರಾಯರು, ಶ್ರೀ ಸುಶಮೀಂದ್ರರ ತೀರ್ಥರ ಮೇಲೆ ತೋರಿದ ಕಾರುಣ್ಯ.
ಇವರ ಅದ್ಭುತ ಮಹಿಮೆಗಳ ಕುರಿತು ಹೇಳುತ್ತಾ ಹೋದರೆ ಈ ಜನ್ಮವೇ ಸಾಕಾಗುವುದಿಲ್ಲ!
ಈ ನಗುಮೊಗದ ಯತಿವರೇಣ್ಯರಿಗೆ ಜಗತ್ತಿನಾದ್ಯಂತ ಪ್ರೀತಿಯ ಭಕ್ತರಿದ್ದಾರೆ.
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ