ದೇವಸ್ಥಾನದಲ್ಲಿ ರಾಕ್ಷಸ ಮುಖದ ಹಿಂದಿದೆ ಅದ್ಭುತ ಜೀವನ ರಹಸ್ಯ..!
ಯಾವುದೇ ದೇಗುಲಕ್ಕೆ ಹೋಗಿ. ಗರ್ಭಗುಡಿಯಲ್ಲಿ ದೇವರ ಹಿಂಬದಿಯ ಪ್ರಭಾವಳಿಯಲ್ಲಿ ವಿಚಿತ್ರವಾದ ರಾಕ್ಷಸ ಮುಖವೊಂದನ್ನು ನೀವು ಕಾಣಬಹುದು. ಕೋರೆ ದಾಡೆ ಹಾಗೂ ನಾಲಿಗೆಯನ್ನ ಚಾಚಿದ ಈ ಭಯಂಕರ ದೈತ್ಯ ಮುಖ ಅದು. ಗರ್ಭಗುಡಿಗಳಲ್ಲಿ ಮಾತ್ರವಲ್ಲ, ಕೆಲವು ಪ್ರಾಚೀನ ದೇವಾಲಯಗಳ ವಾಸ್ತು ಹಾಗೂ ಶಿಲ್ಪಶಾಸ್ತ್ರದ ಭಾಗವಾಗಿ ಗೋಪುರಗಳಲ್ಲಿ ಈ ರಾಕ್ಷಸ ಮುಖವನ್ನು ಅಲಂಕಾರಿಕ ವಸ್ತುವಾಗಿ ಬಳಸಿರುವುದನ್ನು ನೋಡಬಹುದು. ಈ ರಾಕ್ಷಸ ಮುಖವನ್ನು ನಮ್ಮ ಸಂಸ್ಕೃತಿಯಲ್ಲಿ ‘‘ಕೀರ್ತಿಮುಖ’’ ಎಂಬ ಅದ್ಭುತ ಹೆಸರಿನಿಂದ ಕರೆಯಲಾಗಿದೆ. ಹಾಗೆ ನೋಡಿದರೆ ಭಾರತೀಯರ ದೇಗುಲಗಳಿಗೆ ಈ ಕೀರ್ತಿಮುಖ ಹೊಸದೇನೂ ಅಲ್ಲ. ಇಂಥದೊಂದು ವಿಚಿತ್ರ ಮುಖದ ಹಿಂದೆ ಬಹುದೊಡ್ಡ ಪರಂಪರೆ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಅದ್ಭುತ ಜೀವನ ಪಾಠವಿದೆ.ರಕ್ಕಸನೊಬ್ಬನ ಮುಖ, ದೇಗುಲಗಳ ಗೋಡೆ ಹಾಗೂ ಗರ್ಭಗುಡಿಯ ಪ್ರಭಾವಳಿಯಲ್ಲಿ ಸ್ಥಾನ ಪಡೆದಿದ್ದರ ಹಿಂದೆ ಒಂದು ಕುತೂಹಲಕಾರಿ ಕಥೆಯೂ ಇದೆ. ನಾವೆಲ್ಲ ಶಿವಪುರಾಣದಲ್ಲಿ ಬರುವ ಅಸುರರ ರಾಜ ಜಲಂಧರನ ಕಥೆಯನ್ನು ಓದಿರಬಹುದು. ರಾಕ್ಷಸರ ಗುರು ಶುಕ್ರಾಚಾರ್ಯರ ಪರಮ ಶಿಷ್ಯ ಆತ. ಸ್ವತಃ ಪಾರ್ವತಿಯನ್ನೇ ಮೋಹಿಸಲು ಮುಂದಾಗಿದ್ದ ಹಠಮಾರಿ ಅಸುರ ರಾಜ ಆತ. ಅದೊಂದು ದಿನ, ಈ ಅಸುರ ರಾಜ, ಶಿವನ ತಲೆಯ ಮೇಲೆ ಸದಾ ತಂಪು ಸೂಸುವ ಚಂದ್ರ ಮೇಲೆ ಕಣ್ಣು ಹಾಕುತ್ತಾನೆ. ಪರಮಶಿವನ ಆಭರಣವೇ ಆಗಿರುವ ಆ ಚಂದ್ರಮನನ್ನು ಕಿತ್ತು ತರುವಂತೆ ತನ್ನ ಪರಮ ಸ್ನೇಹಿತನಾಗಿದ್ದ ರಾಹುವಿಗೆ ಆದೇಶಿಸುತ್ತಾನೆ.ಜಲಂಧರನ ಆಜ್ಞೆಯಂತೆಚಂದ್ರನನ್ನು ತರಲು ಕೈಲಾಸಕ್ಕೆ ಹೊರಟ ರಾಹು, ಅದೇ ಚಂದ್ರನ ಬೆಳಕಿನಲ್ಲಿ ಧ್ಯಾನಸ್ಥನಾಗಿದ್ದ ಪರಮಶಿವನನ್ನು ನೋಡುತ್ತಾನೆ. ಶಿವನ ತಲೆಯ ಮೇಲಿರುವ ಚಂದ್ರನನ್ನು ಕಿತ್ತುಕೊಳ್ಳುವ ಅವಸರದಲ್ಲಿ ಶಿವನ ಧ್ಯಾನಕ್ಕೆ ಭಂಗವುಂಟುಮಾಡುತ್ತಾನೆ. ತನ್ನ ತಪೋಭಂಗಗೊಳಿಸಿದ ರಾಹುವಿನ ಕುಚೇಷ್ಟೆಗಳಿಂದ ಕುಪಿತನಾದ ಶಿವ, ತನ್ನ 3ನೇ ಕಣ್ಣಿನಿಂದ ಅಗ್ನಿಜ್ವಾಲೆಗಳನ್ನ ಸ್ಫೋಟಿಸಿಬಿಡುತ್ತಾನೆ. ಶಿವ ಸ್ಫೋಟಿಸಿದ ಆ ಅಗ್ನಿಜ್ವಾಲೆಗಳಿಂದ ಸಿಂಹಮುಖಿ ಎಂಬ ಭಯಾನಕ ರಕ್ಕಸನೊಬ್ಬ ಹುಟ್ಟಿಕೊಳ್ಳುತ್ತಾನೆ. ಆಗ ಶಿವ, ತನ್ನ ತಪಸ್ಸಿಗೆ ಭಂಗ ತಂದ ರಾಹುವನ್ನು ನುಂಗಿಹಾಕುವಂತೆ ಆ ಸಿಂಹಮುಖಿ ರಕ್ಕಸನಿಗೆ ಆದೇಶಿಸುತ್ತಾನೆ.ಇದರಿಂದ ನಡುಗಿ ಹೋದ ರಾಹು, ತನ್ನಿಂದಾದ ಪ್ರಮಾದವನ್ನ ಕ್ಷಮಿಸುವಂತೆ ಶಿವನನ್ನು ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ. ಶಿವನಿಂದ ಸೃಷ್ಟಿಯಾದ ಆ ಸಿಂಹಮುಖಿ ರಕ್ಕಸನಿಂದಲೂ ತನ್ನನ್ನು ರಕ್ಷಿಸುವಂತೆ ಕೇಳುತ್ತಾನೆ. ರಾಹುವಿನ ಕ್ಷಮಾಯಾಚನೆಯಿಂದ ತಣ್ಣಗಾದ ಶಿವ, ಆತನನ್ನು ಬಿಟ್ಟುಬಿಡುವಂತೆ ಸಿಂಹಮುಖಿಗೆ ಹೇಳುತ್ತಾನೆ. ಆದರೆ ಆ ಹೊತ್ತಿಗಾಗಲೇ ಭಯಾನಕ ಹಸಿವಿನಿಂದ ಕುದ್ದುಹೋಗಿದ್ದ ಆ ಸಿಂಹಮುಖಿ, ತನ್ನ ಹಸಿವು ನೀಗಿಸಿದರೆ ಮಾತ್ರ ರಾಹುವನ್ನು ಬಿಡುವುದಾಗಿ ಹೇಳುತ್ತಾನೆ. ಆಗ ಪರಶಿವ, ‘‘ನಿನ್ನನ್ನೇ ನೀನು ತಿಂದು ಹಸಿವು ನೀಗಿಸಿಕೋ..!’’ ಎನ್ನುತ್ತಾನೆ. ಶಿವನ ಆಜ್ಞೆಯಂತೆ ಆ ಸಿಂಹಮುಖಿ ಕಾಲಿನ ಭಾಗದಿಂದ ತನ್ನನ್ನು ತಾನೇ ತಿನ್ನಲು ಆರಂಭಿಸುತ್ತಾನೆ. ಮೊದಲು ಕಾಲು, ಆನಂತ್ರ ಹೊಟ್ಟೆ, ಎದೆಯ ಭಾಗ.. ಹೀಗೆ ಒಂದೊಂದಾಗಿ ತನ್ನೆಲ್ಲ ಅವಯವಗಳನ್ನು ತಾನೇ ತಿಂದು ಮುಗಿಸಿದ ಸಿಂಹಮುಖಿ, ಕೊನೆಗೆ ಉಳಿದಿದ್ದ ತನ್ನೆರಡು ಕೈಗಳನ್ನೂ ತಿನ್ನೋದಕ್ಕೆ ಶುರುವಿಟ್ಟುಕೊಳ್ಳುತ್ತಾನೆ. ಇನ್ನೇನು ಆ ರಕ್ಕಸ ತನ್ನೆರಡು ಕೈಗಳನ್ನು ತಿಂದು ಮುಗಿಸಬೇಕು ಎನ್ನುವಷ್ಟರಲ್ಲಿ ಶಿವ, ಆ ರಕ್ಕಸನಿಗೆ ತಿನ್ನೋದನ್ನು ನಿಲ್ಲಿಸುವಂತೆ ಸೂಚಿಸಿಸುತ್ತಾನೆ.ಕೊನೆಗೆ ತಿನ್ನದೇ ಉಳಿದಿದ್ದು ಸಿಂಹಮುಖಿ ರಕ್ಕಸನ ಮುಖ ಮಾತ್ರ. ಆ ಸಿಂಹಮುಖಿ ತಿನ್ನದೇ ಉಳಿಸಿದ ಆತನದ್ದೇ ಮುಖಕ್ಕೆ ಪರಶಿವ, ಕೀರ್ತಿಮುಖ ಅನ್ನೋ ಬಿರುದನ್ನು ನೀಡುತ್ತಾನೆ. ತನ್ನನ್ನು ತಾನು ಇಲ್ಲವಾಗಿಸಿಕೊಂಡ ಈ ರಕ್ಕಸನ ಮುಖ ದೇಗುಲಗಳಲ್ಲಿ ಕೀರ್ತಿಮುಖವಾಗಿ ವಿರಾಜಿಸಲಿ ಎಂದು ಆಶೀರ್ವದಿಸಿದನಂತೆ ಪರಶಿವ. ಇದು ಶಿವಪುರಾಣದಲ್ಲಿ ವರ್ಣಸಲ್ಪಟ್ಟಿರುವ ಕೀರ್ತಿಮುಖದ ಕಥೆ.ಗರ್ಭಗುಡಿಯ ಪ್ರಭಾವಳಿಯಲ್ಲಿ ರಾಕ್ಷಸ ಮುಖವನ್ನು ಕೇವಲ ಅಲಂಕಾರಕ್ಕಾಗಿ ಮಾಡಿದ್ದಲ್ಲ. ಈ ಕೀರ್ತಿಮುಖದ ಮೂಲಕ ನಮ್ಮ ಹಿರಿಯರು ಅದ್ಭುತ ಜೀವನ ಪಾಠವನ್ನು ಹೇಳೋದಕ್ಕೆ ಯತ್ನಿಸಿದ್ದಾರೆ. ಮನುಷ್ಯನ ಆತ್ಮೋನ್ನತಿಯಾಗಬೇಕಾದ್ರೆ, ತನ್ನೊಳಗಿರೋ ಅಹಂ ಇಲ್ಲವಾಗಿಸಿಕೊಳ್ಳಬೇಕು. ತನ್ನ ದೇಹವನ್ನು ತಾನೇ ತಿಂದು ಮುಗಿಸಿದ ಆ ಅಸುರನಂತೆ ನಮ್ಮೊಳಗಿನ ಅಹಂ ನೀಗಿಸಿಕೊಳ್ಳಬೇಕು. ಆಗ ಮಾತ್ರವೇ ಆತ್ಮೋತ್ನತಿ ಸಾಧ್ಯ ಎಂಬುದು ಈ ಕೀರ್ತಿಮುಖ ಹಿಂದಿರುವ ರಹಸ್ಯ ಮತ್ತು ಸಂದೇಶ.ಇಂಥ ಅದ್ಬುತ ಜೀವನ ಸಂದೇಶ ನೀಡುವ ಈ ಕೀರ್ತಿಮುಖ, ದೇಗುಲಗಳ ಗೋಡೆಯನ್ನ ಅಲಂಕರಿಸಿದ್ದು ಗುಪ್ತರ ಕಾಲದಲ್ಲಿ. ಸುಮಾರು 2500 ವರ್ಷಗಳ ಹಿಂದೆ. ಭಾರತೀಯ ವಾಸ್ತುಶಿಲ್ಪ ಮಾತ್ರವಲ್ಲ, ಬೌದ್ಧರ ವಾಸ್ತುಶೈಲಿಯಲ್ಲೂ ಈ ಕೀರ್ತಿಮುಖವನ್ನು ಬಳಸಲಾಗಿದೆ. ಚೀನಾದಿಂದ ಹಿಡಿದು ದಕ್ಷಿಣ ಏಷ್ಯಾದ ಹಲವು ರಾಷ್ಟ್ರಗಳಲ್ಲೂ ಈ ಕೀರ್ತಿಮುಖ, ದೇಗುಲಗಳ ವಾಸ್ತುವಿನ್ಯಾಸದ ಒಂದು ಭಾಗವಾಗಿ ಬಳಕೆಯಾಗಿದೆ. ಈ ಕೀರ್ತಿಮುಖವನ್ನ ಕಲ್ಯಾಣಿ ಚಾಲುಕ್ಯರು ತಾವು ನಿರ್ಮಿಸಿದ ದೇಗುಲಗಳಲ್ಲಿ ವಾಸ್ತು ಹಾಗೂ ಅಲಂಕಾರಿಕ ಭಾಗವಾಗಿ ಬಳಸೋದಕ್ಕೆ ಆರಂಭಿಸಿದರು. ಕೀರ್ತಿಮುಖದ ಹಿಂದಿರುವ ಪೌರಾಣಿಕ ಕಥೆಗಳು ಅದೇನೇ ಇರಲಿ, ಆದರೆ ಇದು ನೀಡುವ ಅದ್ಭುತ ಜೀವನ ಸಂದೇಶವನ್ನು ಜನರಿಗೆ ತಲುಪಿಸೋದೇ ನಮ್ಮ ಹಿರಿಯರ ಉದ್ದೇಶವಾಗಿತ್ತು.
🙏🙏
ಸಂಗ್ರಹ:- ಜಗದೀಶ ಬಳಿಗಾರ