ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

*! ಆತ್ಮವಿಶ್ವಾಸ !*

ವ್ಯವಹಾರದಲ್ಲಿ ತುಂಬಲಾರದ ನಷ್ಟ ಕಂಡ ಬಿಜಿನೆಸ್‌ಮ್ಯಾನ್ ಒಬ್ಬ ಪಾರ್ಕಿನ ಕಲ್ಲುಬೆಂಚಿನ ಮೇಲೆ ಕುಳಿತಿದ್ದ. ಇನ್ನೇನು ಆಕಾಶವೇ ಕಳಚಿ ತಲೆಮೇಲೆ ಬೀಳುತ್ತದೆ ಎಂಬಂತಿತ್ತು ಅವನ ಮುಖ. ಸಾಲಗಾರರು ಬೆನ್ನ ಹಿಂದೆ ಬಿದ್ದಿದ್ದರು, ಪಾಲುದಾರರು ಹಣ ಕೇಳುತ್ತಿದ್ದರು, ಕೆಲಸಗಾರರಿಗೆ ಸಂಬಳ ಕೊಡಬೇಕಿತ್ತು….ಹೀಗೆ ಸಮಸ್ಯೆಗಳ ಸರಮಾಲೆ ಆತನ ಕುತ್ತಿಗೆಗೆ ಸುತ್ತಿಕೊಂಡಿತ್ತು. 
ಆಗ ಅಲ್ಲಿಗೆ ಮುದುಕನೊಬ್ಬ ಬಂದ. ಬಿಜಿನೆಸ್‌ಮ್ಯಾನ್‌ನ ಮುಖ ನೋಡಿದರೆ ಆತ ಕಷ್ಟದಲ್ಲಿದ್ದಾನೆಂದು ಯಾರು ಬೇಕಾದರೂ ಸುಲಭವಾಗಿ ಹೇಳಬಹುದಿತ್ತು. ‘ಏನಪ್ಪಾ ನಿನ್ನ ಸಮಸ್ಯೆ?’ ಅಂತ ಮುದುಕ ನೇರವಾಗಿ ವಿಷಯಕ್ಕೆ ಬಂದ. ಈತ ತನ್ನೆಲ್ಲ ಕಷ್ಟಗಳನ್ನು ಹೇಳಿಕೊಂಡ. ಸಾಯುವುದೊಂದೇ ಈಗ ಕಾಣಿಸುತ್ತಿರುವ ದಾರಿಯೆಂದು ಹೇಳಿ ಕಣ್ಣೀರಾದ.
ಆಗ ಮುದುಕ ‘ನಾನು ನಿನಗೆ ಸಹಾಯ ಮಾಡುತ್ತೇನೆ. ಯೋಚಿಸಬೇಡ’ ಎಂದು ಹೇಳಿ ಈತನ ಹೆಸರಿನಲ್ಲಿ ಚೆಕ್ ಒಂದನ್ನು ಬರೆದುಕೊಟ್ಟ. ‘ಈ ಹಣ ತೆಗೆದುಕೋ. ನಿನ್ನ ಆರ್ಥಿಕ ಸಮಸ್ಯೆಗಳನ್ನೆಲ್ಲ ಮೊದಲು ಬಗೆ ಹರಿಸಿಕೋ. ಒಂದು ವರ್ಷದ ನಂತರ ಇದೇ ದಿನ, ಇದೇ ಜಾಗಕ್ಕೆ ಬಾ. ಆಗ ನನಗೆ ಹಣ ವಾಪಸ್ ಮಾಡು. ಒಂದು ವರ್ಷ ಸಮಯವಿದೆ, ಬೇಕಾದಷ್ಟು ಹಣವಿದೆ. ನೋಡು ಏನು ಮಾಡ್ತೀಯ’ ಅಂತ ಹೇಳಿ ಬೆನ್ನು ತಿರುಗಿಸಿ ಹೊರಟೇ ಬಿಟ್ಟ!
ಬಿಜಿನೆಸ್‌ಮ್ಯಾನ್ ಚೆಕ್ ತೆಗೆದು ನೋಡಿ ಅವಾಕ್ಕಾದ. 5,00,000 ಡಾಲರ್‌ನ ಚೆಕ್‌ನ ಕೊನೆಗೆ ಅತ್ಯಂತ ಶ್ರೀಮಂತನಾಗಿದ್ದ ಜಾನ್ ಡಿ ರಾಕ್ಫೆಲ್ಲರ್‌ನ ಸಹಿ ಇತ್ತು!  ಅರೇ, ಅವರನ್ನು ನಾನು ಗುರುತಿಸಲೇ ಇಲ್ಲವಲ್ಲ ಎಂದು ಬಿಜಿನೆಸ್‌ಮ್ಯಾನ್ ಕೈ ಕೈ ಹಿಸುಕಿಕೊಂಡ. ನನ್ನೆಲ್ಲ ಕಷ್ಟಗಳು ಒಂದೇ ಕ್ಷಣದಲ್ಲಿ ನಿವಾರಣೆಯಾದವೆಂದು ಹಿಗ್ಗಿದ. ಆದರೂ ಆ ಚೆಕ್‌ ಅನ್ನು ನಗದು ಮಾಡಿಸಿಕೊಳ್ಳಬಾರದೆಂದು ನಿರ್ಧರಿಸಿದ. 
ಅಷ್ಟೊಂದು ದೊಡ್ಡ ಚೆಕ್ ಇದೆ ಎಂಬುದೇ ಆತನಿಗೆ ಬೆಟ್ಟದಷ್ಟು ಆತ್ಮವಿಶ್ವಾಸ ನೀಡಿತ್ತು. ಆತ ಹೊಸ ಹುರುಪಿನೊಂದಿಗೆ ವ್ಯವಹಾರ ಶುರುಮಾಡಿದ. ಹೊಸ ಸಾಲಗಳನ್ನು ಮಾಡಿ, ಹಳೆಯ ಬಾಕಿಗಳನ್ನು ತೀರಿಸಿದ. ಕೆಲವೊಂದಿಷ್ಟು ಮಹತ್ವದ ನಿರ್ಧಾರಗಳ ಮೂಲಕ ವ್ಯವಹಾರವನ್ನು ಹಂತ ಹಂತವಾಗಿ ಮೇಲಕ್ಕೆ ತಂದ. ಮೂರು-ನಾಲ್ಕು ತಿಂಗಳುಗಳಲ್ಲಿ ಆತ ಸಾಲದ ಹೊರೆಯಿಂದ ಮುಕ್ತನಾದ. ವ್ಯವಹಾರ ಸುಗಮವಾಗಿ ನಡೆಯತೊಡಗಿತು.
ಕೊಟ್ಟ ಮಾತಿನಂತೆ ಸರಿಯಾಗಿ ಒಂದು ವರ್ಷದ ಬಳಿಕ ಬಿಜಿನೆಸ್‌ಮ್ಯಾನ್ ಅದೇ ಪಾರ್ಕ್‌ಗೆ ಹೋದ. ಕೈಯಲ್ಲಿ ನಗದು ಮಾಡಿಸಿಕೊಳ್ಳದ ಚೆಕ್ ಇತ್ತು. ಹೇಳಿದ ಸಮಯಕ್ಕೆ ಆ ಶ್ರೀಮಂತ ಮುದುಕನೂ ಬಂದ. ಇನ್ನೇನು ಚೆಕ್ ವಾಪಸ್ ಮಾಡಿ, ತನ್ನ ಯಶಸ್ಸಿನ ಕಥೆ ಹೇಳಬೇಕೆನ್ನುವಷ್ಟರಲ್ಲಿ ಹಿಂದಿನಿಂದ ನರ್ಸ್ ಒಬ್ಬಳು ಓಡಿ ಬರುತ್ತಿರುವುದು ಕಾಣಿಸಿತು. ಆಕೆ ಏದುಸಿರು ಬಿಡುತ್ತಾ ಓಡಿ ಬಂದು ಮುದುಕನನ್ನು ಗಟ್ಟಿಯಾಗಿ ಹಿಡಿದುಕೊಂಡಳು. ‘ಅಬ್ಬಾ ದೇವರೇ ಕೊನೆಗೂ ಈತನನ್ನು ಹಿಡಿದುಬಿಟ್ಟೆ!’ ಎಂದು ಜೋರಾಗಿ ಉಸಿರಾಡುತ್ತಾ ಉದ್ಘರಿಸಿದಳು. ‘ನಿಮಗೆ ಈತ ಏನೂ ತೊಂದರೆ ಕೊಟ್ಟಿಲ್ಲ ಎಂದು ಭಾವಿಸಿದ್ದೇನೆ. ಅಯ್ಯೋ ಈತನೊಬ್ಬ ಹುಚ್ಚು ಮುದುಕ. ಪದೇ ಪದೆ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಹೋಗುವ ಚಟ. ತನ್ನನ್ನು ತಾನು ಜಾನ್ ಡಿ. ರಾಕ್ಫೆಲ್ಲರ್ ಅಂತ ಕಂಡವರಿಗೆಲ್ಲ ಪರಿಚಯಿಸಿಕೊಳ್ಳುತ್ತಾನೆ. ಅದನ್ನು ಹೌದು ಎಂದು ನಂಬುವ ಹುಚ್ಚರೂ ಇದ್ದಾರೆ’ ಎಂದು ಹೇಳಿ ಮುದುಕನನ್ನು ಎಳೆದು ಕರೆದುಕೊಂಡು ಹೋದಳು.
ಈ ಬಿಜಿನೆಸ್‌ಮ್ಯಾನ್ ತನ್ನ ಮುಂದೆ ನಡೆದಿದ್ದು ಕನಸೋ, ನಿಜವೋ ಎಂದು ತಿಳಿಯದೆ ಬೆಪ್ಪನಂತೆ ನಿಂತಿದ್ದ. ಒಂದಿಡೀ ವರ್ಷ ಆತ ತನ್ನ ಬಳಿ ಅರ್ಧ ಮಿಲಿಯನ್ ಡಾಲರ್ ಹಣ ಇದೆ ಎಂದು ಭ್ರಮಿಸಿ ವ್ಯಾಪಾರ- ವ್ಯವಹಾರವನ್ನು ವಿಸ್ತರಿಸುತ್ತಾ, ಸಾಲ ಮಾಡಿ, ಸಾಲ ತೀರಿಸುತ್ತಾ ಹೋದ. ಆದರೀಗ ಗೊತ್ತಾಗಿದ್ದೇನೆಂದರೆ ಇವನ ಬಳಿ ಇದ್ದದ್ದು ಅರ್ಧ ಮಿಲಿಯನ್ ಡಾಲರ್ ಚೆಕ್ ಅಲ್ಲ, ಯಾವನೋ ಒಬ್ಬ ಹುಚ್ಚ ಕೊಟ್ಟಿದ್ದ ಕಾಗದದ ಚೂರು! 
ಹಾಗಾದರೆ ತನ್ನ ಕೈಯಲ್ಲಿ ಇನ್ನೇನೂ ಮಾಡಲು ಸಾಧ್ಯವಿಲ್ಲ ಅಂದುಕೊಂಡಿದ್ದವನಿಂದ ಅಭೂತಪೂರ್ವ ಕೆಲಸಗಳನ್ನು ಮಾಡಿಸಿದ ಆ ಶಕ್ತಿ ಯಾವುದು? ಅದುವೇ ಆತ್ಮವಿಶ್ವಾಸ! ಅದೊಂದು ನಿಮ್ಮ ಜತೆಯಿದ್ದರೆ ಎಂಥ ಅಸಾಧ್ಯವನ್ನೂ ಸಾಧ್ಯಗೊಳಿಸಬಹುದು.

Leave a Reply

Your email address will not be published. Required fields are marked *

Translate »