ನಮ್ಮೊಳಗಿನ ಅಸುರೀಶಕ್ತಿಯೆಂದರೆ ಅದುವೇ ನಮ್ಮ ಅಹಂಕಾರ. ಈ ಶಕ್ತಿಯು ಮಿಕ್ಕೆಲ್ಲಾ ಶಕ್ತಿಯನ್ನು ಮೀರಿ ನಿಂತು ತನ್ನ ಶಕ್ತಿಯೇ ಮೇಲು ಎಂಬುದನ್ನು ಸಾಬೀತು ಮಾಡುತ್ತಲೇ ಹೋಗುತ್ತದೆ. ಈ ಅಹಂಕಾರ ಕೆಟ್ಟದ್ದು, ನಮಗೆ ದುಃಖ ತರುತ್ತದೆ, ಎಂದು ಹಲವು ಬಾರಿ ನಮಗೆ ಅನಿಸಿದರೂ,ಈ ಅಸುರೀಶಕ್ತಿ ನಮ್ಮ ಅರಿವಿಗೆ ಬಾರದಂತೆ , ನಮ್ಮೊಳಗೇ ಯಾವ ಸುಳಿವೂ ನೀಡದಂತೆ ನಮ್ಮನ್ನು ಅಪಹರಿಸಿಬಿಡುತ್ತದೆ. ಇಂತಹ ಕಠಿಣವಾದ ಅಸುರೀಶಕ್ತಿಯನ್ನು ಗೆಲ್ಲಲು ಅಪಾರವಾದ ಇಚ್ಛಾಶಕ್ತಿಯೊಂದಿಗೆ ದೈವೀಶಕ್ತಿಯೂ ನಮಗೆ ಬೇಕಾಗುತ್ತದೆ.
ನಮ್ಮೊಳಗೇ ಇರುವಂತಹ ಅಹಂಕಾರ ಎಂಬುವ ಕೋಟೆಯೊಳಗೆ ನಮಗೆ ನಾವೇ ಬಂಧಿಸಿಕೊಂಡು ಬಿಟ್ಟಿದ್ದೇವೆ. ಇದಕ್ಕೆ ಮುಖ್ಯ ಕಾರಣಗಳಲ್ಲಿ ಒಂದು ಎಂದರೆ, ನಾವು ಯಾವುದೇ ಕೆಲಸ ಮಾಡಿದರೂ, ಮಾಡುತ್ತಿದ್ದರೂ ಅದನ್ನು ನಾನೇ ಮಾಡುತ್ತಿದ್ದೇನೆ ಎನ್ನುವ ಕರ್ತೃತ್ವ ಭಾವದಿಂದ ಮಾಡುತ್ತಿದ್ದೇವೆ. ನಾವೇ ಮಾಡುತ್ತಿರುವುದು ಸತ್ಯವಾದರೂ, ನಮ್ಮ ದೇಹ, ಮನಸ್ಸು, ಬುದ್ಧಿಗಳನ್ನು ಸೃಷ್ಟಿಸಿದ ಭಗವತ್ ಚೈತನ್ಯ ಎಲ್ಲವನ್ನೂ ನಡೆಸುತ್ತಿದೆ ಎಂಬ ವಾಸ್ತವವನ್ನು ಮರೆತು ಬಿಡುತ್ತೇವೆ. ಆತ್ಮವೆಂಬ ಚೈತನ್ಯ ದೇಹವನ್ನೇನಾದರೂ ಬಿಟ್ಟುಬಿಟ್ಟರೆ ಆಗ ಉಳಿಯುವುದು ಕೇವಲ ಶವ ಮಾತ್ರ ಎಂಬ ಕಟು ಸತ್ಯವನ್ನು ನಾವು ಮರೆತು ಬಿಡುತ್ತೇವೆ. ಆಗ ನಮ್ಮ ಅಂತಸ್ತು, ಗೌರವ, ಶ್ರೀಮಂತಿಕೆ, ನಗು, ಅಳು, ಮಾತು, ಎಲ್ಲವೂ ತಟಸ್ಥವಾಗಿಬಿಡುತ್ತವೆ, ಎಂಬುದು ಜ್ಞಾಪಕಕ್ಕೆ ಬರುವುದಿಲ್ಲ. ಅಪ್ಪಿ ತಪ್ಪಿ ಏನಾದರೂ ಜ್ಞಾಪಕಕ್ಕೆ ಬಂದುಬಿಟ್ಟರೆ, ಆ ತಕ್ಷಣದಲ್ಲಿ ಸ್ವಲ್ಪ ಗಾಬರಿಯಾದರೂ ಮರುಕ್ಷಣದಲ್ಲಿ ನಾವು ಭ್ರಮಿತರಾಗಿಬಿಡುತ್ತೇವೆ, ಪುನಃ ನಮ್ಮನ್ನು ನಾವೇ ವಂಚಿಸಿಕೊಳ್ಳಲು ಪ್ರಾರಂಭ ಮಾಡುತ್ತವೆ. ಇದನ್ನೇ ಮಾಯೆ ಎನ್ನುವುದು.
ಈ ನಶ್ವರವಾದ ದೇಹ, ಮನಸ್ಸು, ಬುದ್ಧಿಯು ನಾನಲ್ಲ. ಎಲ್ಲವನ್ನು ಸೃಷ್ಟಿಮಾಡಿ, ಸಲಹಿ, ಪೋಷಿಸುತ್ತಿರುವ ದಿವ್ಯ ಚೈತನ್ಯ ವೇ ಎಂಬುದು ನಮಗೆ ಸಾಕ್ಷಾತ್ಕಾರವಾಗಬೇಕಾಗಿದೆ. ಈ ಅರಿವೇ ನಿಜವಾದ ಸಾಕ್ಷಾತ್ಕಾರ. ಒಮ್ಮೆ ಈ ಅರಿವು ನಮ್ಮ ಬದುಕಿನಲ್ಲಿ ಬೆರೆತರೆ, ನಮ್ಮ ಎಲ್ಲಾ ಕಷ್ಟ-ಸುಖಗಳು ನಮ್ಮ ಅಂತರಂಗದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಇದು ನಮ್ಮೊಳಗೆ ಹೇಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆಂದರೆ, ಹೊರನೋಟಕ್ಕೆ ನಾವು ಶ್ರದ್ಧೆಯಿಂದ ಜವಾಬ್ದಾರಿಗಳನ್ನು ನಿರ್ವಹಣೆ ಮಾಡಿದರೂ, ಜೀವನವೆಂಬ ನಾಟಕದಲ್ಲಿ ನಾವು ಕೇವಲ ಪಾತ್ರದಾರಿ ಎಂಬ ಅರಿವು ನಮ್ಮನ್ನು ಸದಾ ಕಾಲ ಎಚ್ಚರಿಸುತ್ತಲೇ ಇರುತ್ತದೆ. ಆಗ ನಮ್ಮ ಮನಸ್ಸು ಸ್ತಿಮಿತದಲ್ಲಿ ಇರುತ್ತದೆ. ಈ ಅರಿವನ್ನು ಹೊಂದಿರುವವರಿಗೆ ನೆಮ್ಮದಿ, ಶಾಂತಿ, ಆನಂದ ಎಂದಿಗೂ ಕಲುಷಿತವಾಗುವುದಿಲ್ಲ. ಬದಲಾಗಿ ನಮ್ಮಿಂದ ಹೊರಸೂಸುವ ಸ್ಪಂದನಗಳು ನಮ್ಮೊಂದಿಗೆ ಇರುವವರೆಲ್ಲರಲ್ಲೂ ನೆಮ್ಮದಿ, ಶಾಂತಿ, ಆನಂದವನ್ನು ಮೂಡಿಸುತ್ತದೆ. ನಮ್ಮೊಳಗೇ ಇರುವ ಅಸುರೀ ಶಕ್ತಿಯನ್ನು ಹೊಡೆದೋಡಿಸಲು ಇದೊಂದು ಅತ್ಯುತ್ತಮ ಸಾಧನ. ಆಗ ದೈವೀಶಕ್ತಿಯು ನಮ್ಮೊಡನೆ ನಿಲ್ಲುತ್ತದೆ. ಅಸುರೀಶಕ್ತಿ ಸೋಲುತ್ತದೆ, ಅಂತರ್ಶಕ್ತಿ ಗೆಲ್ಲುತ್ತದೆ, ಸದ್ಗತಿ ದೊರೆಯುತ್ತದೆ.