ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಮಾರ್ಕಂಡೇಯ ಪುರಾಣ ಬಗ್ಗೆ ತಿಳಿಯಿರಿ

18 ಪುರಾಣಗಳು : ಮಾರ್ಕಂಡೇಯ ಪುರಾಣ ಏನು ಹೇಳುತ್ತದೆ?

ಮಾರ್ಕಂಡೇಯ ಪುರಾಣ
ಹಳೆಯ ಮಹಾಪುರಾಣಗಳಲ್ಲೊಂದು. ಪ್ರ.ಶ.ಪು. 2ನೆಯ ಶತಮಾನದ ಆದಿಭಾಗದಲ್ಲಿ ಇದರ ಪ್ರಾಚೀನವೆನ್ನಿಸುವ ಮೂಲಭಾಗದ ರಚನೆಯಾಯಿತು. ಪ್ರಸ್ತುತ ಪುರಾಣದಲ್ಲಿ ಅರ್ವಾಚೀನ ಅಂಶಗಳೆಷ್ಟೋ ಇವೆ. ಏಕಸೂತ್ರತೆ ಇಲ್ಲವೇ ಇಲ್ಲ. ಮಾರ್ಕಂಡೇಯ ಮುನಿ ನಿತ್ಯತರುಣ. ಆತ ತನ್ನ ಶಿಷ್ಯನಾದ ಕ್ರೌಷ್ಟುಕಿಗೆ ವಿಶ್ವಸೃಷ್ಟಿ, ಯುಗಮಾನ, ವಂಶಾವಳಿ-ಮುಂತಾದ ಶುದ್ಧ ಪೌರಾಣಿಕಾಂಶಗಳನ್ನು ಅರುಹುವ ಭಾಗವನ್ನು ಪ್ರಾಚೀನವೆನ್ನಬಹುದು. ವಿಷ್ಣು, ಶಿವರಿಗಿಲ್ಲಿ ಪ್ರಧಾನ್ಯವಿಲ್ಲ. ಇಂದ್ರ, ಬ್ರಹ್ಮ, ಅಗ್ನಿ, ಸೂರ್ಯಾದಿ ವೈದಿಕ ದೇವತೆಗಳಿಗಿಲ್ಲಿ ಅಗ್ರಸ್ಥಾನ.
ವ್ಯಾಸಶಿಷ್ಯನಾದ ಜೈಮಿನಿ ಮಹಾಭಾರತದಲ್ಲಿಯ ನಾಲ್ಕು ಸಮಸ್ಯೆಗಳಿಗೆ ಉತ್ತರ ಪಡೆಯುತ್ತಾನೆ. ದ್ರೌಪದಿ ಪಂಚಪಾಂಡವರ ಪತ್ನಿಯಾದುದು ಹೇಗೆಂಬುದು ಮೊದಲ ಪ್ರಶ್ನೆ. ಅವಳ ಪಂಚಪುತ್ರರು ಕೌಮಾರ ದಶೆಯಲ್ಲೇ ಹತರಾದುದೇಕೆಂದು ಕೊನೆಯ ಪ್ರಶ್ನೆ. ಕೊನೆಯ ಪ್ರಶ್ನೆಯನ್ನು ಉತ್ತರಿಸುವ ಸಂದರ್ಭದಲ್ಲಿ, ಹರಿಶ್ಚಂದ್ರನನ್ನು ಕ್ರೂರವಾಗಿ ನಡೆಸಿಕೊಂಡ ಬಗ್ಗೆ ಐವರು ವಿಶ್ವೇದೇವರು ವಿಶ್ವಾಮಿತ್ರನನ್ನು ತಪ್ಪಿತಸ್ಥನೆಂದಾಗ ಆತ ಅವರನ್ನು ಮನುಷ್ಯರಾಗಿ ಜನಿಸಿರಿ ಎಂದು ಶಪಿಸಿದನೆಂದೂ ಶಾಪವಿಮೋಚನೆ ಬೇಗ ಆಗಲೆಂದು ಕೌಮಾರದಶೆಯಲ್ಲೇ ಸಾಯುವಂತೆ ಆತ ಅವರಿಗೆ ಅನುಗ್ರಹಿಸಿದನೆಂದೂ ಹೇಳುವ ಪ್ರಕರಣ ಹರಿಶ್ಚಂದ್ರ ರಾಜನ ಹೃದಯವಿದ್ರಾವಕ ಕಥೆಗೆಡೆಮಾಡಿಕೊಡುತ್ತದೆ.
ಆಮೇಲೆ ತಂದೆಮಕ್ಕಳ ಸಂವಾದವೊಂದು ಬರುತ್ತದೆ. ಮಹಾಭಾರತದಲ್ಲಿ ಬರುವ ಮೇಧಾವಿ ಮತ್ತು ಅವನ ತಂದೆ-ಇವರಿಬ್ಬರ ಸಂವಾದವನ್ನೇ ಇಲ್ಲಿ ಮತ್ತೂ ವಿಸ್ತರಿಸಿ ಹೇಳಲಾಗಿದೆ. ಅಲ್ಲಿಯ ಮೇಧಾವಿ ಇಲ್ಲಿ ಜಡ ಎನ್ನಿಸಿಕೊಂಡ ವಿವೇಕಿಯಾದ ಮಗನಾಗಿದ್ದಾನೆ. ಬ್ರಾಹ್ಮಣ್ಯದ ಪವಿತ್ರಜೀವನದ ಆದರ್ಶವನ್ನು ತನ್ನೆದುರಿಟ್ಟ ತಂದೆಗೆ ಅದನ್ನು ಖಂಡಿಸಿ, ಸಂಸಾರದಿಂದ ಮುಕ್ತಿ ಹೊಂದುವುದೊಂದೇ ಪರಮಧರ್ಮ-ಎಂದು ಈತ ಬೋಧಿಸುವ ಸಂದರ್ಭದಲ್ಲಿ ಅತ್ಯಂತ ಹೃದಯಂಗಮವಾದ ವಿಪಶ್ಮಿನ್ ಮಹಾರಾಜನ ಕಥೆ ಬಂದಿವೆ.
ಇದರಲ್ಲಿ ಪಾಪಿಗಳಿಗೆ ವಿಧಿಸುವ ವಿವಿಧ ಶಿಕ್ಷೆಗಳ ವರ್ಣನೆಯಿದೆ. ಆ ಬಳಿಕೆ ಅಷ್ಟೇನೂ ಸ್ವಾರಸ್ಯವಿಲ್ಲದ ಅನಸೂಯಾ ವೃತ್ತಾಂತವೂ ಶುದ್ಧವಾದ ನೀತಿಕಥೆಗಳೂ ಗೃಹಸ್ಥಧರ್ಮ, ಶ್ರಾದ್ಧ ಉತ್ಸವ, ಯೋಗ ಮುಂತಾದ ವಿಷಯಗಳೂ ಪ್ರ.ಶ. 6ನೆಯ ಶತಮಾನದೊಳಗೇ ಪ್ರಕ್ಷಿಪ್ತವಾಗಿ ರಬಹುದಾದ ದೇವೀಮಾಹಾತ್ಮ್ಯವೂ ವಿವೃತವಾಗಿವೆ. ಜ್ಞಾನದ ಮೂಲಕ ಅಜ್ಞಾನ ಅಳಿಯುವುದನ್ನು ಯೋಗವೆನ್ನಲಾಗಿದೆ. ಬಂಧ ವಿಮೋಚನೆ ಎಂದರೆ ಇದರ ಪ್ರಕಾರ ಬ್ರಹ್ಮನಲ್ಲಿ ಒಂದಾಗುವುದು ಮತ್ತು ಪ್ರಕೃತಿಯ ಗುಣತ್ರಯದಿಂದ ಪ್ರತ್ಯೇಕವಾಗುವುದು.
ಚಿತ್ತವೃತ್ತಿನಿರೋಧವನ್ನೇ ಯೋಗವೆಂದು ಲಕ್ಷಣಿಸಿಲ್ಲ. ವಾಸುದೇವನಿಲ್ಲಿ ಪರಬ್ರಹ್ಮ. ಅವನ ಸರ್ಜನೇಚ್ಛೆ ಕಾಲದಿಂದ ಪ್ರಧಾನ-ಪುರುಷರನ್ನು ತನ್ನೊಳಗಿಂದ ಪ್ರತ್ಯೇಕಿಸಿ ತೆಗೆದು ಒಂದುಗೂಡಿಸಿದ್ದರಿಂದ ಮಹತ್ತೂ ಮಹತ್ತಿನಿಂದ ಅಹಂಕಾರವೂ ಅಹಂಕಾರದಿಂದ ಸತ್ತ್ವ, ರಜಸ್, ತಮಸ್ಸುಗಳೂ ಉದಯಿಸಿದವು. ಅನಂತರ ತಮಸ್ಸಿನಿಂದ ಪಂಚತನ್ಮಾತ್ರ, ಪಂಚಭೂತಗಳೂ ರಜಸ್ಸಿನಿಂದ ದಶೇಂದ್ರಿಯಗಳು, ಬುದ್ಧಿಯೂ ಹುಟ್ಟಿದುವು.
ವಾಸುದೇವ ಸರ್ವಾಂತರ್ಯಾಮಿ ಮತ್ತು ಸರ್ವಾತೀತ. ಸರ್ವದುಃಖಗಳೂ ಸಂಗಜನ್ಯ, ಸಂಗತ್ಯಾಗದಿಂದ ಮಹತ್ತ್ವವಳಿದಾಗ ನಿಜ ಸುಖ ಹಸ್ತಗತವಾಗುತ್ತದೆ. ಮೋಕ್ಷಾನುಕೂಲವಾದುದೇ ನಿಜವಾದ ಜ್ಞಾನ. ಮಿಕ್ಕಿದ್ದೆಲ್ಲ ಅಜ್ಞಾನ. ವಿಷ್ಣು ಪುರಾಣದಂತೆ ಮಾರ್ಕಂಡೇಯ ಪುರಾಣವೂ ಪ್ರಜೆಗಳನ್ನು ಚೆನ್ನಾಗಿ ಪಾಲಿಸುವ ಅರಸನಿಗೆ ಅವರ ಪುಣ್ಯಭಾಗ ಸಲ್ಲುವುದೆನ್ನುತ್ತದೆ. ದುಷ್ಟದಮನ, ಶಿಷ್ಟಪಾಲನಗಳಲ್ಲಿ ನಿತ್ಯನಿರತನಾದ ದೊರೆಗೆ ಶಿಷ್ಟಾರ್ಜಿತ ಪುಣ್ಯದ ಆರನೆಯ ಒಂದು ಅಂಶ ಲಭಿಸುತ್ತದೆ.
ಶಿಷ್ಟರನ್ನು ರಕ್ಷಿಸದಿದ್ದಲ್ಲಿ ದುಷ್ಟರ ಎಲ್ಲ ಪಾಪಗಳೂ ಅವನಿಗಂಟಿಕೊಳ್ಳುತ್ತವೆ ಎಂಬ ಅಂಶವನ್ನು ಮರುತ್ತರಾಯನಿಗೆ ಅವನ ಅಜ್ಜಿ ಹೇಳುವ ಸಂದರ್ಭ ಸ್ವಾರಸ್ಯವಾಗಿದೆ. ಕ್ಷತ್ರಿಯನಾದ ಮನುಷ್ಯ ಸಪ್ತದುರ್ವಸನಗಳನ್ನು ಬಿಟ್ಟು, ಅನುಕ್ರಮವಾಗಿ ಮೊದಲು ತನ್ನನ್ನು, ಆಮೇಲೆ ತನ್ನ ಮಂತ್ರಿಗಳ ನ್ನು, ಬಳಿಕ ತನ್ನ ಸೇವಕ ಅಥವಾ ನೌಕರರನ್ನು, ಅನಂತರ ತನ್ನ ಪ್ರಜೆಗಳನ್ನು ಮತ್ತು ಕೊನೆಯಲ್ಲಿ ತನ್ನ ಹಗೆಗಳನ್ನು ನಿಯಂತ್ರಿಸಿದರೆ ಮಾತ್ರ ಯಶಸ್ವಿಯಾಗಬಲ್ಲನೆಂದು ರಾಣಿಯಾದ ಮದಾಲಸೆ ತನ್ನ ಮಗನಿಗಿಲ್ಲಿ ಉಪದೇಶಿಸುವುದು ಬಹಳ ಮಾರ್ಮಿಕವಾದ ರಾಜಶಿಕ್ಷಣಸೂತ್ರ. ಇದರ ಆಧುನಿಕ ಸ್ವರೂಪದ ಕಾಲ ಪ್ರ.ಶ. 8ನೆಯ ಶತಮಾನ. ಶ್ಲೋಕ ಸಂಖ್ಯೆ 9000.

Leave a Reply

Your email address will not be published. Required fields are marked *

Translate »