ಪಂಚಾಮೃತದ ಮಹತ್ವ
ಪಂಚ ಎಂದರೆ ಐದು.ಗೋವಿನ ಹಾಲು, ಮೊಸರು,ತುಪ್ಪ ಜೇನುತುಪ್ಪ,ಬೆಲ್ಲ(ಸಕ್ಕರೆ) ಈ ಐದು ವಸ್ತುಗಳು ಅಮೃತಕ್ಕೆ ಸರಿಸಮಾನವಾದವು. ಈ ಎಲ್ಲಾ ವಸ್ತುಗಳನ್ನು ಕೂಡಿಸಿ ತಯಾರಿಸಿದ್ದೇ ಪಂಚಾಮೃತ.
ಪಂಚಾಮೃತದ ಸೇವನೆಯಿಂದ ದೀರ್ಘಾಯುಷ್ಯ ಪ್ರಾಪ್ತಿಯಾಗುತ್ತದೆಂದು ಹೇಳಲಾಗುತ್ತದೆ. ಪುರಾಣಗಳ ಪ್ರಕಾರ ಪಂಚಾಮೃತದಲ್ಲಿರುವ ಪಂಚವಸ್ತುಗಳು ಈ ತತ್ವವನ್ನು ತಿಳಿಸುತ್ತವೆ.. ಹಾಲು ಶುದ್ಧತೆ ಹಾಗೂ ಧಾರ್ಮಿಕತೆಯ ದ್ಯೋತಕವಾಗಿದೆ.ಮೊಸರು ಸಮೃದ್ಧಿ ಹಾಗೂ ಸಂತಾನದ ಪ್ರತೀಕವಾಗಿದೆ. ಮಧು (ಜೇನುತುಪ್ಪ) ಮಧುರವಾದ ಮಾತು ಹಾಗೂ ಏಕತೆಯನ್ನು ಸಮರ್ಥಿಸುತ್ತದೆ.ಸಕ್ಕರೆ ಅಥವಾ ಬೆಲ್ಲ ಮಾಧುರ್ಯ ಹಾಗೂ ಆನಂದವನ್ನು ತಿಳಿಸುತ್ತದೆ.ತುಪ್ಪ ಜ್ಞಾನ ಹಾಗೂ ವಿಜಯವನ್ನು ಸಮರ್ಥಿಸುತ್ತದೆ.
ಧಾರ್ಮಿಕ ಪೂಜಾವಿಧಾನಗಳು ಪಂಚಾಮೃತವಿಲ್ಲದೇ ಪರಿಪೂರ್ಣತೆಯನ್ನು ಪಡೆಯುವುದಿಲ್ಲ.ದೇವರ ಪ್ರತಿಮೆಗೆ ಹಾಲು,ಮೊಸರು,ತುಪ್ಪ ಜೇನುತುಪ್ಪ ಸಕ್ಕರೆಗಳಿಂದ ಪಂಚಾಮೃತದ ಅಭಿಷೇಕ ಮಾಡಲಾಗುತ್ತದೆ.ಕೊನೆಯಲ್ಲಿ ಅದನ್ನು ಪಂಚಾಮೃತ ತೀರ್ಥವೆಂದು ಪ್ರಸಾದ ರೂಪದಲ್ಲಿ ಭಕ್ತರಿಗೆ ಹಂಚಲಾಗುತ್ತದೆ.
ಪಂಚಾಮೃತವನ್ನು ಪ್ರತಿನಿತ್ಯವೂ ಸೇವಿಸುವುದರಿಂದ ದೇಹದಲ್ಲಾಗುವ ಪರಿಣಾಮಗಳು..
ದೈಹಿಕ ಆರೋಗ್ಯದ ವೃದ್ಧಿ.ಶರೀರ ಆರೋಗ್ಯ ಹಾಗೂ ಬಲದಿಂದ ಕೂಡಿರುತ್ತದೆ.ಶೀತ ಹಾಗೂ ತಲೆನೋವಿನ ನಿವಾರಣೆಯಾಗುತ್ತದೆ.ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.ನೆನಪಿನ ಶಕ್ತಿಯ ವೃದ್ಧಿಯಾಗುತ್ತದೆ. ಕ್ರಿಯಾಶೀಲತೆ ಹಾಗೂ ಚರ್ಮದ ಕಾಂತಿ ಹೆಚ್ಚುತ್ತದೆ.ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಖಾಲಿಹೊಟ್ಟೆಯಲ್ಲಿ ಪಂಚಾಮೃತವನ್ನು ಸೇವಿಸಿದರೊಳಿತು. ಇನ್ನು ಗರ್ಭಿಣಿ ಸ್ತ್ರೀಯರು ಪಂಚಾಮೃತವನ್ನು ಪ್ರತಿನಿತ್ಯವೂ ಸೇವಿಸಿದರೆ ಉತ್ತಮವಾಗಿ ಮಗುವಿನ ಬೆಳವಣಿಗೆಯಾಗುತ್ತದೆ ಹಾಗೂ ತಾಯಿ,ಮಗುವಿಗೆ ಒಳ್ಳೆಯ ಶಕ್ತಿ (Energy Booster) ಸಿಗುತ್ತದೆಂದು ಆಯುರ್ವೇದದಲ್ಲಿ ತಿಳಿಸಲಾಗಿದೆ. ಪಂಚಾಮೃತವನ್ನು ತಯಾರಿಸುವ ವಿಧಾನ – ಹಾಲು ೫ ಪ್ರಮಾಣ (ಕಾಯಿಸಿದ ಹಾಲನ್ನು ಬಳಸಬಾರದು) ಮೊಸರು ೪ ಪ್ರಮಾಣ ಸಕ್ಕರೆ ಅಥವಾ ಬೆಲ್ಲ ೩ ಪ್ರಮಾಣ ಗೋವಿನ ತುಪ್ಪ ೨ ಪ್ರಮಾಣ ಜೇನುತುಪ್ಪ ೧ ಪ್ರಮಾಣ ದಲ್ಲಿ ಪಂಚವಸ್ತುಗಳನ್ನೂ ಸರಿಯಾಗಿ ಮಿಶ್ರಣ ಮಾಡಿ ಕದಡಬೇಕು.ಆಗ ಮಧುರವಾದ ಪಂಚಾಮೃತ ಸಿದ್ಧವಾಗುತ್ತದೆ. ಇನ್ನು ಎಳನೀರುಗಳನ್ನು ತುಳಸಿ,ಡ್ರೈಪ್ರೂಟ್ಸಗಳನ್ನೂ ಪಂಚಾಮೃತಕ್ಕೆ ಸೇರಿಸುತ್ತಾರೆ. ಪಂಚಾಮೃತ ಭುವಿಯಲ್ಲಿನ ಅಮೃತವೆಂಬುದಂತೂ ಸತ್ಯ.
ಲೋಕಾಃ ಸಮಸ್ತಾಃ ಸುಖಿನೋ ಭವಂತು.