ಸಿಗಂದೂರು ಶ್ರೀ ಚೌಡೇಶ್ವರಿ ಪುರಾಣ ಹಾಗೂ ಕ್ಷೇತ್ರ ಮಹಾತ್ಮೆ

ಸಿಗಂದೂರು ಶ್ರೀ ಚೌಡೇಶ್ವರಿ

ಸರ್ವಸ್ಯ ರೂಪೇ ಸರ್ವೇಶೇ
ಸರ್ವಶಕ್ತಿಸಮನ್ವಿತೇ |
ಭಯೇಭ್ಯಸ್ತ್ರಾಹಿನೋ ದೇಹೀ
ದುರ್ಗೇ ದೇವೀ ನಮೋಽಸ್ತು ತೇ ||

ಸಹ್ಯಾದ್ರಿ ತಪ್ಪಲಲ್ಲಿ ಶರಾವತಿ ನದಿ ತಟದಲ್ಲಿ, ರಮ್ಯ- ಮನೋಹರವಾದ ಪ್ರಕೃತಿಯ ಮಡಿಲಲ್ಲಿ ಸುಂದರ, ಭವ್ಯ, ಮನೋಹರವಾದ ಮೂರ್ತಿಯಾಗಿ ಕಂಗೊಳಿಸುತ್ತಿರುವ ತಾಯಿ, ಮಾತೆ ಸಿಗಂದೂರು ಶ್ರೀ ಚೌಡೇಶ್ವರಿ. ಕರ್ನಾಟಕದ ಸುಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಇದು ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನಲ್ಲಿದೆ. ಈ ದೇವಾಲಯ ಸಾಗರದಿಂದ 40 ಕಿ.ಮೀ. ದೂರದಲ್ಲಿದೆ. ಸಾಗರದಿಂದ ಬಂದರೆ, ಶರಾವತಿ ನದಿಯನ್ನು ಲಾಂಚ್ ನಲ್ಲಿ ದಾಟಬೇಕಾಗುತ್ತದೆ. ಇದು ಲಿಂಗನಮಕ್ಕಿಯ ಹಿನ್ನೀರು. ಸಿಗಂದೂರಿನ ಈ ವ್ಯಾಪ್ತಿಗೆ ಬರುವ ಎಲ್ಲಾ ಪ್ರದೇಶಗಳು ಲಿಂಗನಮಕ್ಕಿಯ ಹಿನ್ನೀರಿನಿಂದ ಕೂಡಿದೆ. ಈ ದೇವಿಯ ಕೃಪೆಯಿಂದ ಈಗ ಶರಾವತೀ ನದಿಯ ಹಿನ್ನೀರಿಗೆ ಸೇತುವೆಯಾಗುತ್ತಿದೆ. ಇದು ದೇಶದಲ್ಲೇ ಎರಡನೆಯ ಅತೀ ಉದ್ದದ ಕೇಬಲ್ ಬ್ರಿಡ್ಜ್.

ಮಾತೆ ಸಿಗಂದೂರು ಚೌಡೇಶ್ವರಿಯ ಮಹಿಮೆ ಅಪಾರ. ನಂಬಿ ಬಂದವರನ್ನು ಚೌಡೇಶ್ವರಿ ಕೈ ಬಿಡುವುದಿಲ್ಲ ಎಂಬ ನಂಬಿಕೆಯಿಂದ, ತಾಯಿಯ ಸನ್ನಿಧಿಗೆ ನಿತ್ಯ ಸಹಸ್ರಾರು ಭಕ್ತರು ಬರುತ್ತಾರೆ. ತಮಗೆ ಬಂದ ಕಷ್ಟ – ನೋವುಗಳನ್ನು ದೇವಿಯಲ್ಲಿ ಪರಿಹರಿಸುವಂತೆ ಕೇಳಿಕೊಂಡು ತಮ್ಮ ದುಗುಡ- ದುಮ್ಮಾನಗಳಿಂದ ನಿರಾಳರಾಗುತ್ತಾರೆ.

  ನಾಗದೇವತೆಯ ಪೂಜೆಯನ್ನು ಮನೆಯಲ್ಲಿಯೇ ಹೇಗೆ ಮಾಡಬೇಕು ?

ಮೂಲಸ್ಥಾನದಲ್ಲಿ ಈ ಶಿಲೆಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದರು. ಈ ಶಿಲೆ ಒಂದು ದೊಡ್ಡ ಸಂಪಿಗೆ ಮರದಡಿಯಿತ್ತು. ಈಗ ಮೂಲಸ್ಥಾನವು ನೀರಿನಿಂದ ಮುಳುಗಿದ್ದು ನೀರು ಕಡಿಮೆಯಾದಾಗ ನೋಡಬಹುದು. ಈ ಮಾತೆ ವನದೇವತೆಯಾಗಿ ಸಂಚಾರಿಸುತ್ತಾಳೆ ಎಂಬ ನಂಬಿಕೆ ಇಟ್ಟುಕೊಂಡಿದ್ದರು. ಇದು ಒಂದು ಕಡೆ ಗುಡ್ಡ ಮತ್ತೊಂದು ಕಡೆ ನೀರು ಇರುವ ಶೀಗೇ ಕಣಿವೆ ಎನ್ನುವ ದಟ್ಟ ಕಾಡು. ಇದಕ್ಕೆ ದೇವೀಕಾನು ಎನ್ನುತ್ತಿದ್ದರು. ಸುತ್ತಮುತ್ತಲ ಹಳ್ಳಿಯವರು ಜಾನುವಾರು ಕಳೆದು ಹೋದರೆ, ವಸ್ತು ಕಳುವಾದರೆ, ಫಸಲುಗಳಿಗೆ ಪ್ರಾಣಿಗಳ ಉಪಟಳ ಆಗದಂತೆ ಚೌಡಮ್ಮನಲ್ಲಿ ಕೇಳಿಕೊಳ್ಳುತ್ತಿದ್ದರು. ಹರಕೆಗಳನ್ನು ಹುಣ್ಣಿಮೆ, ಅಮಾವಾಸ್ಯೆಯಲ್ಲಿ ತೀರಿಸುತ್ತಿದ್ದರು. ಕಳ್ಳತನ ಪ್ರಕರಣದಲ್ಲಿ, ‘ಸಿಗಂದೂರಿಗೆ ಹರಕೆ ಮಾಡಿದ್ದಾರೆ’ ಎನ್ನುವ ಸುದ್ದಿ ಕೇಳಿದರೆ, ಕದ್ದ ವಸ್ತುಗಳನ್ನು ಮನೆಯ ಬಾಗಿಲಿಗೆ ತಂದಿಟ್ಟ ಪ್ರಕರಣಗಳು ಸಾಕಷ್ಟು ಇವೆ. ಈಗಲೂ ಕೂಡಾ ಕೆಲವು ಕಡೆ “ಚೌಡೇಶ್ವರಿ ಕಾಯುತ್ತಿದ್ದಾಳೆ” ಎನ್ನುವ ಫಲಕಗಳನ್ನು ಕಾಣಬಹುದು.

ಮಲೆನಾಡ ಭಾಗದಲ್ಲಿ ಬೇಟೆಯಾಡುವ ಪದ್ಧತಿಯ ಒಂದು ಹವ್ಯಾಸ ಇತ್ತು. ನಾಲ್ಕೈದು ಜನರು ಸೇರಿ ತಲೆಗೆ ಬ್ಯಾಟರಿ ಕಟ್ಟಿ, ಕೈಯಲ್ಲಿ ಬಂದೂಕು ಹಿಡಿದು ಪ್ರಾಣಿಗಳನ್ನು ಹೊಡೆಯುತ್ತಿದ್ದರು. ಶೇಷಪ್ಪ ನಾಯಕರು ಒಮ್ಮೆ ಬೇಟೆಗೆ ಹೋದಾಗ, ದಟ್ಟ ಅಡವಿ, ಕರಿಗತ್ತಲಲ್ಲಿ ಅವರು ಒಬ್ಬರೇ ದೂರವಾಗಿ ಹೋದರು. ಆಗ ಕೂಗಿಕೊಳ್ಳಲೂ ಆಗದ ಆ ಸ್ಥಿತಿಯಲ್ಲಿ ತಾವು ನಂಬಿದ ದೈವವನ್ನು ಪ್ರಾರ್ಥಿಸಿದರು. ಮಂಪರು ಬಂದು ಮರದ ಬುಡದಲ್ಲಿ ಕುಳಿತಾಗ ನಿಃಶಬ್ದ ವಾತಾವರಣದಲ್ಲಿ ಘಂಟಾನಾದ ಕೇಳಿಸಿತು ಹಾಗೂ ದಿವ್ಯಪ್ರಭೆ ಗೋಚರಿಸಿತು. ಆಗ ದಿವ್ಯವಾಣಿ ಕೇಳಿಸಿತು ; “ವನದೇವತೆಯಾದ ನಾನು ಒಂದೆಡೆ ನೆಲೆನಿಂತು, ನಂಬಿದವರ ಇಷ್ಟಾರ್ಥ ಕರುಣಿಸುವ ಇಚ್ಛೆ ಹೊಂದಿದ್ದೇನೆ” ಎಂದು.

  ಗರುಡ ಪುರಾಣ ಮತ್ತು ವಾಮನ ಪುರಾಣ ಏನು ಹೇಳುತ್ತದೆ?

ಈಗ ಮೂಲಸ್ಥಾನದಿಂದ 2 ಕಿ.ಮೀ. ದೂರದಲ್ಲಿ ಸಿಗಂದೂರಿನಲ್ಲಿ 1990 ಫೆಬ್ರುವರಿ ತಿಂಗಳಲ್ಲಿ ಪ್ರತಿಷ್ಠಾಪಿಸಿ ನಿತ್ಯಪೂಜೆಗೆ ವವಸ್ಥೆಗೊಳಿಸಲಾಯಿತು. 2005 ನೇ ಇಸವಿಯವರೆಗೆ ಸ್ಥಳೀಯರಿಗಷ್ಟೇ ಗೊತ್ತಿದ್ದ ಸಿಗಂದೂರು ಪವಾಡ ಸದೃಶವಾಗಿ ರಾಜ್ಯಾದ್ಯಂತ ಹೆಸರುವಾಸಿಯಾಗಿದೆ. ಇಲ್ಲಿ ನವರಾತ್ರಿ ಉತ್ಸವ ವೈಭವದಿಂದ ನಡೆಯುತ್ತದೆ. ನಿತ್ಯ ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ನಡೆಯುತ್ತದೆ. ಪಂಚಾಮೃತ ಅಭಿಷೇಕ ಪೂಜೆ, ಹೂವಿನ ಅಲಂಕಾರ ಪೂಜೆ, ದೇವೀ ಪಾರಾಯಣ, ಚಂಡೀಹೋಮ, ಮತ್ತೆ ರಾತ್ರಿಯಲ್ಲಿ ಪೂಜೆ, ಅಷ್ಟಾವದಾನ ಸೇವೆ, ಮಹಾಮಂಗಳಾರತಿ ಅನ್ನದಾಸೋಹ ಹಾಗೆಯೇ ನಿತ್ಯ ತ್ರಿಕಾಲಪೂಜೆ, ಧಾರ್ಮಿಕ ಕಾರ್ಯ ನಡೆಯುತ್ತದೆ. ಮಕರ ಸಂಕ್ರಾಂತಿಯದು ಜಾತ್ರಾ ಮಹೋತ್ಸವ ನೆರವೇರುತ್ತದೆ. ಭೋಜನ ಶಾಲೆ, ಕಲ್ಯಾಣ ಮಂಟಪ, ಅಂಗಡಿ ಮುಗ್ಗಟ್ಟು ಇತ್ಯಾದಿ ಹೊಂದಿದ್ದು ಕುಗ್ರಾಮವಾಗಿದ್ದ ಈ ಹಳ್ಳಿಯು ಇಂದು ಎಲ್ಲಾ ಸೌಕರ್ಯಗಳನ್ನು ಒಳಗೊಂಡಿದೆ. ಸಂತತಿ, ಆರೋಗ್ಯ, ಕಂಕಣಬಲ ಮೊದಲಾದ ಇಚ್ಛೆಯುಳ್ಳವರು ಸನ್ನಿಧಿಗೆ ಬಂದು ಹರಕೆ ಹೊರುತ್ತಾರೆ. ತೊಟ್ಟಿಲ ಪೂಜೆ, ತುಲಾಭಾರ ಮುಂತಾದ ಹರಕೆಯನ್ನು ಹೊರುತ್ತಾರೆ. ಹಾಗಾಗಿ ಇಲ್ಲಿ ನಿತ್ಯವೂ ಸಹಸ್ರಾರು ಜನರು ಬಂದು, ದೇವಿಯ ದರ್ಶನ ಪಡೆದು ತಮ್ಮ ಇಷ್ಟಾರ್ಥ ಪೂರೈಸಿಕೊಳ್ಳುತ್ತಾರೆ. ನಂಬಿದ ಭಕ್ತರನ್ನು ಕಾಪಾಡುತ್ತಿರುವ ಭಕ್ತರ ಹೃದಯದಲ್ಲಿ ನೆಲೆಸಿರುವ ಜಗನ್ಮಾತೆ ಸಿಗಂದೂರು ಚೌಡೇಶ್ವರಿಯ ಪಾದಾರವಿಂದಕ್ಕೆ ಶಿರಸಾಷ್ಟಾಂಗ ಪ್ರಣಾಮಗಳು.

                

Leave a Reply

Your email address will not be published. Required fields are marked *

Translate »