“ಅಮ್ಮನ ಘಟ್ಟದ ಜೇನು ಕಲ್ಲಮ್ಮ”
ಅಮ್ಮನ ಘಟ್ಟ ಅಥವಾ ಜೇನು ಕಲ್ಲಮ್ಮ ಬೆಟ್ಟ ಎಂದೆಲ್ಲಾ ಕರೆಯುವ ಜಗನ್ಮಾತೆ ರೇಣುಕಾ ದೇವಿ ನೆಲೆಸಿರುವ ಪುಣ್ಯಕ್ಷೇತ್ರ ಇದಾಗಿದೆ.ಶ್ರೀ ಕ್ಷೇತ್ರವು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಕೋಡೂರು ಗ್ರಾಮದ ಬೆಟ್ಟದ ಮೇಲಿದೆ.ಬಾರಿ ಎತ್ತರದ ಬೆಟ್ಟವೇನಲ್ಲ ಒಂದಷ್ಟು ಮೆಟ್ಟಿಲುಗಳಿದೆ.ಇದೊಂದು ವಿಶೇಷವಾದ ಕ್ಷೇತ್ರವಾಗಿದ್ದು ಭಕ್ತರಿಗೆ,ಪ್ರಕೃತಿ ಪ್ರಿಯರಿಗೆ,ಛಾಯಾ ಚಿತ್ರಕಾರರಿಗೆ ಹಾಗೂ ಚಾರಣಿಗರಿಗೆ ಮನಸೊರೆಗೊಳ್ಳುವ ಸ್ಥಳವಾಗಿದೆ.
“ಸ್ಥಳ ಪುರಾಣ”
ಈಗಿರುವ ಜೇನುಕಲ್ಲಮ್ಮ ದೇವಾಲಯದ ಎದುರಿಗೆ ದೊಡ್ಡದಾದ ಗುಡ್ಡವಿದೆ.ಹಿಂದೆ ಇದು ಅಮ್ಮನ ಬೆಟ್ಟ ಆಗಿತ್ತು ಎಂದು ಗುರುತಿಸುತ್ತಾರೆ.ಗುಡ್ಡದ ಸಂದಿಯಲ್ಲಿ ಗುರುತಾಗಿ ವಿಶೇಷ ಜಾಗವಿದೆ.ಪುರಾಣ ಕಾಲದಲ್ಲಿ ಜಮದಗ್ನಿ ಮಹರ್ಷಿಗಳು ತಮ್ಮ ಪತ್ನಿ ರೇಣುಕಾದೇವಿಯ ಮೇಲೆ ವಿರಸಗೊಂಡು ಪುತ್ರ ಪರಶುರಾಮರಿಗೆ ತಾಯಿಯ ತಲೆಯನ್ನು ಕಡಿಯುವಂತೆ ಆಜ್ಞಾಪಿಸುತ್ತಾರೆ.ತಂದೆಯ ಮಾತಿಗೆ ಎದುರಾಡದ ಪರುಶು ರಾಮನು ತಾಯಿಯ ರುಂಡ ಕತ್ತರಿಸುವ ಸಮಯದಲ್ಲಿ ರೇಣುಕಾದೇವಿಯ ಅಗೋಚರವಾದ ಶಕ್ತಿಯೊಂದು ಹೊರಬಂದು ಹಳೆ ಅಮ್ಮನ ಘಟ್ಟದಲ್ಲಿ ಶಕ್ತಿ ರೂಪದಲ್ಲಿ ಸೇರಿತು ಎಂಬುದು ದಂತ ಕಥೆ.ಕ್ರಮೇಣ ಅಲ್ಲಿ ದೇವಿಗೆ ಪೂಜೆ - ಜಾತ್ರೆ ಮಾಡುತ್ತಿದ್ದರು. ಒಮ್ಮೆ ಜಾತ್ರೆಯ ಸಮಯದಲ್ಲಿ ದೇವಿಗೆ ಮೈಲಿಗೆಯಾಯಿತು.ಈ ಕಾರಣದಿಂದ ದೇವಿಯು ರಾತೋ ರಾತ್ರಿ ದೊಡ್ಡ ಕಲ್ಲಿನ ರಥವೇರಿ ಅಲ್ಲಿಂದ ಬಿಟ್ಟು ದೂರ ಬಂದು ದೊಡ್ಡ ಬಂಡೆಯನ್ನು ಸೀಳಿ ಉದ್ಭವಮೂರ್ತಿಯಾಗಿ ನೆಲೆಸಿದಳು.ಇದನ್ನು ಹೊಸ ಅಮ್ಮನ ಘಟ್ಟ ಎಂದು ಕರೆಯಲಾಯಿತು.
ದೇವಿ ಜಾಗ ಬದಲಿಸಿ ಬಂದ ಗುರುತಿಗಾಗಿ ದೇವಿಯ ಹೆಜ್ಜೆ ಗುರುತು ಹಾಗೂ ರಥದ ಚಕ್ರದ ಗುರುತು ಇಂದಿಗೂ ಇದೆ. ದೇವಾಲಯದ ಎದುರು ಭಾಗದ ಸ್ವಲ್ಪ ದೂರದಲ್ಲಿ ಪರುಶುರಾಮರ ತಣ್ಣನೆಯ ಸಿಹಿ ನೀರಿನ ಹೊಂಡವಿದೆ,ಹತ್ತಿರದಲ್ಲಿ ಜಮದಗ್ನಿಗಳು ತಪಸ್ಸು ಮಾಡಿದ ಗುಹೆ, ದೇವಿಯ ವಾಹನ ವಾದ ಹುಲಿ ಇರುವ ಗುಹೆ ಎಲ್ಲವೂ ಇದೆ. ಸ್ಥಳೀಯರಿಗೆ ಆಗಾಗ್ಗೆ ಹುಲಿಯ ಘರ್ಜನೆಯು ಕೇಳಿಸುತ್ತದೆಯಂತೆ.
ಇಲ್ಲಿ ಕೆಲವು ವಿಸ್ಮಯಗಳಿವೆ. ದೇವಿ ನೆಲೆಸಿರುವ ಬೃಹತ್ ಬಂಡೆ ಬೆಳೆಯುತ್ತಿದೆ.ಎಂತದೇ ಮಳೆ -ಬಿರುಗಾಳಿ – ಗುಡುಗು- ಸಿಡಿಲು- ಸುಂಟರಗಾಳಿ ಬಂದರು,ಬಂಡೆ ಅಲುಗಾಡಲ್ಲ.ಈ ಬಂಡೆಯ ಮೇಲೆ ಹಾಗೂ ಸಂದುಗೊಂದಿನಲ್ಲಿ ಹೆಜ್ಜೆನುಗಳು ಗೂಡು ಕಟ್ಟಿ ಕೊಂಡಿದೆ.ಒಂದು ಬಂಡೆಯ ಸಂದಿಯಿಂದ ಜೇನಿನ ಹನಿ ತೊಟ್ಟಿಕ್ಕುತ್ತಿದ್ದು ಅದು ದೇವಿಗೆ ಜೇನಿನ ಅಭಿಷೇಕವಾಗುತ್ತಿತ್ತು ಆದುದರಿಂದ ದೇವಿಯು ‘ಜೇನು ಕಲ್ಲಮ್ಮ’ ಎಂದು ಪ್ರಸಿದ್ಧಿಯಾದಳು.ಜೇನುಹುಳ ಅಲ್ಲಿಗೆ ಬರುವ ಭಕ್ತರಿಗೆ ಕಚ್ಚುವುದಿಲ್ಲ.ಹೆಬ್ಬಂಡೆಯನ್ನೆ ಕೊರೆದು ದೇವಾಲಯವನ್ನಾಗಿ ಮಾಡಿದ್ದಾರೆ. ದೇವಾಲಯದ ಸುತ್ನಾಲ್ಕು ದಿಕ್ಕಿಗೂ ಚಪ್ಪರದಂತೆ ಬಂಡೆ ವಿಶಾಲ ವಾಗಿ ಚಾಚಿದೆ.ಈ ಹೆಬ್ಬಂಡೆಯೇ ದೇವಾಲಯದ ಗುಡಿ- ಗೋಡೆ-ಮೇಲ್ಚಾವಣಿ -ಆವರಣದ ಚಪ್ಪರ ಎಲ್ಲವೂ ಆಗಿದೆ.ದೇವಿಗೆ ನಿತ್ಯವೂ ಪೂಜೆ ನಡೆಯುತ್ತದೆ.ಶುಕ್ರವಾರ -ಮಂಗಳವಾರ ದಿನಗಳಲ್ಲಿ ವಿಶೇಷ ಪೂಜೆ ಇರುತ್ತದೆ. ನವರಾತ್ರಿ ಹತ್ತು ದಿನಗಳು ವಿಜೃಂಭಣೆಯಿಂದ ಪೂಜೆ ನಡೆಯುವುದು.ವಿಶೇಷ ಹಬ್ಬ ಹರಿ ದಿನಗಳಲ್ಲಿ ಪೂಜೆ ಪ್ರಸಾದ ಇರುತ್ತದೆ.ನವರಾತ್ರಿಯಲ್ಲಿ ಅನ್ನ ದಾಸೋಹ ಇರುತ್ತದೆ.ಅಧಿಕ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.ಹೊಸನಗರ ಹಾಗೂ ಶಿವಮೊಗ್ಗ ಸುತ್ತಮುತ್ತ ಹಲವಾರು ಮನೆತನಗಳ ಕುಲದೇವಿ ಆಗಿದ್ದಾಳೆ.ಸಾಗರದ ಸಮೀಪ ಸೊರಬ ತಾಲೂಕಿನ ಚಂದ್ರಗುತ್ತಿಯ ಉಧೋ ಉಧೋ ಎಲ್ಲಮ್ಮನಂತೆ ಅಮ್ಮನ ಘಟ್ಟವೂ ಸಹ ಕಾರಣಿಕ ಕ್ಷೇತ್ರವಾಗಿದೆ. ವರ್ಷಕೊಮ್ಮೆ ಜಾತ್ರೆ ನಡೆಯುತ್ತದೆ.ದೇವಿಗೆ ಅಡಿಕೆ ಮರದ ಹಿಂಗಾರ ಪ್ರಿಯವಂತೆ ಹಾಗೆ ಜೇನು- ಹಾಲು- ತುಪ್ಪ -ಮೊಸರು- ಬೆಣ್ಣೆ ತಾಯಿಗೆ ಬಹಳ ಇಷ್ಟವಂತೆ ಹಾಗಾಗಿ ಭಕ್ತರು ಇವುಗಳನ್ನು ತಂದು ಕೊಡುತ್ತಾರೆ ಹಾಗೆ ಬೆಣ್ಣೆಯನ್ನು ತಂದು ತಾಯಿಯ ಸನ್ನಿಧಿಯಲ್ಲಿರುವ ಬೆಟ್ಟಗಳ ಮೇಲೆ ಬೆಣ್ಣೆಯನ್ನು ಹಚ್ಚುತ್ತಾರೆ.
ದೇವಿಯ ಬಳಿ ಹರಕೆ ಹೊತ್ತುಕೊಂಡರೆ ಫಲಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ದಟ್ಟವಾಗಿದೆ.ಮದುವೆ -ಮಕ್ಕಳು -ಆರೋಗ್ಯ -ಜಾನುವಾರು- ಮನೆ -ತೋಟ ತುಡಿಕೆ ಸೇರಿದಂತೆ ಸಣ್ಣಪುಟ್ಟ ಸಮಸ್ಯೆಗಳನ್ನು ದೇವಿಯಲ್ಲಿ ಬೇಡಿಕೊಂಡು ಹರಕೆ ಕಟ್ಟುತ್ತಾರೆ.ದಡಾರ- ಸಿಡುಬು ಹಾಗೂ ಮಾರಣಾಂತಿಕ ಕಾಯಿಲೆಗಳು ಸಹ ದೇವಿಯ ಅನುಗ್ರಹದಿಂದ ಉಪಶಮನವಾಗಿರುವ ವರದಿ ಇದೆ.ದೂರ ದೂರದಿಂದಲೂ ಭಕ್ತರು ಬರುತ್ತಾರೆ. ದೇವಾಲಯದ ಸುತ್ತಮುತ್ತ ಗುಡ್ಡ ಘಟ್ಟ ಪ್ರದೇಶವಾದುದರಿಂದ ‘ಅಮ್ಮನ ಘಟ್ಟ’ ಎಂದೂ ಕರೆಯುತ್ತಾರೆ.ಇಲ್ಲಿನ ಬಂಡೆ ಕಲ್ಲುಗಳಿಂದ ತೊಟ್ಟಿಕ್ಕುವ ನೀರು ಸುತ್ತಮುತ್ತ ಜಾಗ ತಂಪಾಗಿ ನೀರಿನ ಸಲೆ ಹೆಚ್ಚಾಗಿದ್ದು ಹತ್ತಾರು ಹಳ್ಳಿಗಳಿಗೆ ಆಸರೆಯಾಗಿದೆ. ಭಕ್ತರಿಗೆ ಪುಣ್ಯಕ್ಷೇತ್ರವಾದರೆ,ಪ್ರಕೃತಿ ಪ್ರಿಯರಿಗೆ ಅಹ್ಲಾದ ಕೊಡುವ ತಾಣವಾಗಿದೆ,ಯುವ ಚಾರಣಿಗರಿಗೆ ಹುರಿದುಂಬಿಸುವ ಉತ್ಸಾಹದಿಂದ ಹತ್ತಿ ಏರುವ ಬೆಟ್ಟ ಗುಡ್ಡ ಶಿಖರವಾಗಿದೆ. ಅಪರೂಪದ ವಿಸ್ಮಯಗಳಿಂದ ತುಂಬಿದ ಜೇನುಕಲ್ಲಮ್ಮ ದೇವಸ್ಥಾನಕ್ಕೆ ಒಮ್ಮೆ ಭೇಟಿ ಕೊಟ್ಟರೆ ಮತ್ತೊಮ್ಮೆ ಬರುವಂತೆ ಮನ ಸೆಳೆಯುತ್ತದೆ.
ಪ್ರವಾಸಿಗರಿಗೆ ಹತ್ತಿರದಲ್ಲಿ ರಾಮಚಂದ್ರಾಪುರ ಮಠವಿದೆ. ಅಲ್ಲಿನ ಗೋ ಶಾಲೆ ಸುಂದರವಾದ ಮಠ. ಸೀತಾರಾಮಚಂದ್ರ ಹನುಮತ್ಸಮೇತ ಕಣ್ಮನ ತಣಿಸುವ ರಾಮನ ಮೂರ್ತಿ,ಭೋಜನ ಶಾಲೆ, ಸುತ್ತಮುತ್ತ ತೋಟ ಗದ್ದೆ ಹೂ ತೋಟ ಒಂದಕ್ಕಿಂತ ಒಂದು ಅದ್ಭುತ.ಮಠದಲ್ಲಿ ಗುರುಗಳ ಪುರಾಣ ಪುಣ್ಯ ಕಥೆಗಳ ಪ್ರವಚನ ತನ್ನಯರಾಗಿ ಕೇಳಬಹುದು.ಎತ್ತರದ ಗೋಪುರದ ಹೊಸನಗರ ಗಣಪತಿ ದೇವಸ್ಥಾನ,ಸ್ವಲ್ಪ ಈಚೆ ಬಂದರೆ ಸಾಗರ ಕೆಳದಿ ಇಕ್ಕೇರಿ ವರದಹಳ್ಳಿ ಮತ್ತು ಮುಂದೆ ಹೋದರೆ ಜೋಗ ಫಾಲ್ಸ್, ಚೌಡೇಶ್ವರಿ ದೇವಸ್ಥಾನ, ದ್ವಿಮುಖಿ ಚಾಮುಂಡೇಶ್ವರಿ ದೇವಸ್ಥಾನ ನೋಡಬಹುದು ಹಾಗೆ ಹೊಸನಗರದಿಂದ ಆ ಕಡೆ ಹೋದರೆ ಆಗುಂಬೆ ಶೃಂಗೇರಿ ಹೊರನಾಡು ಹೀಗೆ ನೋಡಲು ಬೇಕಾದಷ್ಟು ಮನಸೆಳೆಯುವ ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳಿವೆ.
( ಈಗ ಸ್ವಲ್ಪ ಬದಲಾವಣೆಗಳಾಗಿರಬಹುದು)
ಯಾ ದೇವಿ ಸರ್ವಭೂತೇಷು
ವಿಷ್ಣು ಮಾಯೇತಿ ಶಬ್ದಿತಾ !
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ
ನಮೋ ನಮಃ !!
(ಕೃಪೆ )
🙏🏻🙏🏻🙏🏻