ವೈರಾಗ್ಯ..!
……………………………………………………..
ತತ್ವಶಾಸ್ತ್ರದ ಪ್ರಕಾರ ವೈರಾಗ್ಯ ಅಂದರೆ ಅನಪೇಕ್ಷಿತ. ಯಾವದನ್ನು ಅಪೇಕ್ಷಿಸದ ಸ್ವಭಾವ. ಎಲ್ಲಾ ಬಿಟ್ಟು ವಿರಾಗಿಗಳಾಗುವದು ತುಂಬಾ ವಿರಳ. ಉಪ್ಪು ಹುಳಿ ಖಾರದ ರುಚಿ ನೋಡಿದ ಮಾನವರಿಗೆ ಆಸೆ ವ್ಯಾಮೋಹ ಸರ್ವೆಸಾಮಾನ್ಯ. ಸಂಸಾರ ಮಕ್ಕಳು ತಂದೆ ತಾಯಿ ಬಂಧು ಬಳಗದವರಲ್ಲಿ ಮೋಹ ಬಿಡಿಸಲಾರದ ಬಂಧನ. ಏನೂ ಅಪೇಕ್ಷಿಸದ ವೈರಾಗ್ಯ ಬರುವದು ನಿಷ್ಠಾವಂತ ಸನ್ಯಾಸಿಗಳಿಗೆ ಮಾತ್ರ. ಅದು ಅವರ ತಪಸ್ಸಿನಫಲ. ಸದಾ ಅಧ್ಯಾತ್ಮ, ದೇವರ ಧ್ಯಾನದಲ್ಲಿ ಮುಳುಗಿದವರಿಗೆ ವೈರಾಗ್ಯ ಬಹಳ ಸುಲಭ. ಆ ಹಂತ ತಲುಪುವದು ಎಲ್ಲರಿಗೂ ಸಾಧ್ಯವಿಲ್ಲ. ಬುದ್ಧನ ನುಡಿಯಂತೆ ಆಸೆ ದುಃಖಕ್ಕೆ ಕಾರಣ. ಕಂಡದ್ದೆಲ್ಲ ಬೇಕೆಂಬ ಆಸೆ ಇರುವ ಹುಲು ಮಾನವನಿಗೆ ವೈರಾಗ್ಯ ಎಲ್ಲಿಂದಬರಬೇಕು.ಆದರೆ ಸಾಮಾನ್ಯ ಜನರಿಗೂ ವೈರಾಗ್ಯ ಬರುತ್ತೆ. ಅದು ಮೂರು ತರಹ.
ಪ್ರಸವ ವೈರಾಗ್ಯ: ಹೆಣ್ಣುಮಕ್ಕಳಿಗೆ ಪ್ರಸವಕಾಲದ ನೋವು ಸಹಿಸಲಾಗದೆ ಗಂಡ ಮಕ್ಕಳು ಯಾರೂ ಬೇಡ ಅನಿಸಿರುತ್ತದೆ. ಮಗು ಹುಟ್ಟಿದ ಕ್ಷಣವೇ ಮತ್ತೆ ಮೋಹ ಪ್ರಾರಂಭ. ಕ್ಷಣಿಕ ವೈರಾಗ್ಯದ ಅನುಭವ.
ಸ್ಮಶಾನ ವೈರಾಗ್ಯ: ಸ್ಮಶಾನದಲ್ಲಿ ಮನುಷ್ಯನ ಶವ ಸುಡುವುದನ್ನಾಗಲಿ, ಹೂಳುವುದನ್ನಾಗಲಿ ನೋಡಿದಾಗ ಆ ಕ್ಷಣಕ್ಕೆ ಅಯ್ಯೋ ಕೊನೆಗೆ ಹೀಗೆ ಸಾಯುವುದಕ್ಕೆ ಮನೆ ಮಕ್ಕಳು ಹಚ್ಚಿಕೊಂಡು ಕಷ್ಟ ಪಟ್ಟು ದುಡಿಯುವುದು ವ್ಯರ್ಥ ಅನಿಸಿ ಜೀವನದಲ್ಲಿ ವೈರಾಗ್ಯ ಮೂಡುತ್ತದೆ.
ಅಭಾವ ವೈರಾಗ್ಯ: ತಾನು ಆಸೆ ಪಟ್ಟದ್ದು ಕೈಗೆ ಸಿಗಲು ಸಾಧ್ಯವೇ ಇಲ್ಲ ಅನ್ನಿಸಿದಾಗ ಅದು ಬೇಡವೇ ಬೇಡ ತಾನಗಿಷ್ಟವೇ ಇಲ್ಲ ಅನ್ನುವ ಮನುಷ್ಯನ ಸ್ವಭಾವವೇ ಅಭಾವ ವೈರಾಗ್ಯ. ಕೈಗೆಟುಕದ ದ್ರಾಕ್ಷಿ ಬಲು ಹುಳಿ ಅನ್ನುವಂತೆ.
ಅಷ್ಟಿಲ್ಲದೇ ಶ್ರೀ ಪುರಂದರ ದಾಸರು ಹೇಳಿದ್ದಾರೆಯೇ “ಉದರ ವೈರಾಗ್ಯವಿದು ನಮ್ಮ ಪದುಮನಾಭನಲಿ ಲೇಶ ಭಕುತಿ ಇಲ್ಲ ” ಎಂದು.