ಮಾನಸಿಕ ಪೂಜೆಯೆಂದರೇನು?
ಇಷ್ಟದೇವತೆಯು ತನ್ನೆದುರು ಪ್ರತ್ಯಕ್ಷ ವಾದಂತೆ ಭಾವಿಸಬೇಕು. ವೈರಾಗ್ಯ, ಭಕ್ತಿ, ನಂಬಿಕೆಯಿರುವವರು ಯಾವ ಸ್ಥಳದಲ್ಲಿದ್ದರೂ ಈ ಮಾನಸ ಪೂಜೆಯನ್ನು ನಿರ್ವಹಿಸಬಹುದು. ಎಲ್ಲಿ ನೋಡಿದರೂ ದೇವತಾಮೂರ್ತಿ ಪ್ರತ್ಯಕ್ಷವಾಗುವವರೆಗೂ ಈ ಪೂಜೆಯನ್ನು ಭಕ್ತಿಶ್ರದ್ಧೆಯಿಂದ ಮಾಡಿ ಪೂಜೆಯು ಸಿದ್ಧಿಸಿದಂತೆ ಊಹಿಸಬೇಕು.
ಮಾನಸಪೂಜೆಯಲ್ಲಿ ಮತ್ತೊಂದು ಪ್ರಕ್ರಿಯೆಯೂ ಸಹಾ ಇದೆ. ಶರೀರವು ಕ್ಷೇತ್ರವೆಂದೂ, ಆತ್ಮವು ಕ್ಷೇತ್ರಜ್ಞನೆಂದೂ ಗೀತೆಯು ತಿಳಿಸುತ್ತದೆ. ನಿರ್ಜನ ಪ್ರದೇಶದಲ್ಲಿ ಇಂದ್ರಿಯಗಳನ್ನು ನಿಗ್ರಹಿಸಿ ಸುಖಾಸನದಲ್ಲಿ ಕುಳಿತು ಧ್ಯಾನಿಸುವುದೇ ಈ ಪೂಜಾವಿಧಾನ.
ಮಾನಸಪೂಜೆಯಲ್ಲಿ ಮಂದಿರ ನಿರ್ಮಾಣದ ಕಾರ್ಯವಿಲ್ಲ. ಹೃದಯದ ಮಧ್ಯದಲ್ಲಿ ಸಹಸ್ರದಳಗಳಿರುವ ತಾವರೆ ಹೂವನ್ನು ಭಾವಿಸಿಕೊಳ್ಳಬೇಕು. ಮನಸ್ಸನ್ನು ಅಂತರ್ಮುಖವಾಗಿಸಿ ಭಕ್ತಿಯನ್ನೇ ಅಭಿಷೇಕ ಜಲವಾಗಿ, ಶಾಂತಿ ಶಮ ದಮಾದಿಗಳನ್ನು ಹೂವುಗಳಾಗಿ, ನಂಬಿಕೆಯನ್ನು ಧೂಪವಾಗಿ, ಸತ್ಯವನ್ನು ದೀಪವಾಗಿ, ಆತ್ಮಸಮರ್ಪಣೆ ಯನ್ನು ನೈವೇದ್ಯವಾಗಿ ಭಾವಿಸಬೇಕು. ಶರೀರಾಂತರ್ಯಾಮಿಯಾದ ಭಗವಂತನನ್ನು ಊಹಿಸಿಕೊಳ್ಳಬೇಕು.
ಹೃದಯ ದಲ್ಲಿ ಭಗವಂತನ ಅಸ್ತಿತ್ವವು ಗೋಚರಿಸುವವರೆಗೂ ನಿಷ್ಠೆ ಮುಂದುವರೆಯಬೇಕು. ಇದು ಸಿದ್ಧಿಸಿದರೆ ಸರ್ವತ್ರಾ ಇಷ್ಟದೇವತೆಯು ಸಾಕ್ಷಾತ್ಕರಿಸುತ್ತದೆ. ಇದರಿಂದ ದುಃಖನಿವೃತ್ತಿ ಆನಂದಪ್ರಾಪ್ತಿಯಾಗುತ್ತದೆ
ಶ್ರೀರಾಮ ಜಯರಾಮ ಜಯಜಯರಾಮ