ನೆಮ್ಮದಿ ಇದೆಯೋ ಇಲ್ಲವೋ ಹೇಗೆ ತಿಳಿಯಬೇಕು?
“ಎಲ್ಲಾ ಇದೆ, ಆದರೆ ಏನು ಮಾಡುವುದು
ನೆಮ್ಮದಿ ಮಾತ್ರ ಇಲ್ಲ” ಹಾಗೆಂದರೇನು?
“ನೆಮ್ಮದಿ” ಇದೆಯೋ ಇಲ್ಲವೋ ಹೇಗೆ ತಿಳಿಯಬೇಕು?
ನಾವೆಲ್ಲರೂ ನಮ್ಮ ಜೀವನದಲ್ಲಿ , ಅಮೂಲ್ಯವಾದ ಪ್ರತಿಕ್ಷಣವನ್ನು , ಸಂಭ್ರಮಿಸುವುದನ್ನೇ ಮರೆತಿರುತ್ತೇವೆ. ಯೌವನ, ವಯಸ್ಕ , ಈ ಹಂತಗಳನ್ನು ಆನಂದಿಸದೆ, ದಾಟುತ್ತೇವೆ. ಆಮೇಲೆ ಹಳಹಳಿಸುತ್ತೇವೆ.
ಬಾಲ್ಯದಲ್ಲಿ ಸಣ್ಣಪುಟ್ಟ ವಿಷಯಕ್ಕೂ, ಸಂಭ್ರಮಿಸುತ್ತಿದ್ದವರು, ಬೆಳೆಯುತ್ತಾ ಹೋದಂತೆ, ಆ ಖುಷಿಯನ್ನು ಮೂಲೆಗೆ ತಳ್ಳಿ, ಕೈಕಾಲು ಕಟ್ಟಿ ಕೂರಿಸಿ ಬಿಡುತ್ತೇವೆ.
ಆಗ , ಒಂದು ರೂಪಾಯಿಯ ಮಿಠಾಯಿ / ಪೆಪ್ಪರಮಿಂಟಿಗೂ ಸಂಭ್ರಮಿಸುತ್ತಿದ್ದವರು, ಸಾವಿರಾರು ರೂಪಾಯಿ ಖರ್ಚು ಮಾಡಿ, ಸ್ಟಾರ್ ಹೋಟೆಲಿನಲ್ಲಿ ಉಂಡರೂ , ಈಗ ಖುಷಿ ಪಡುವುದಿಲ್ಲ.
ಮೊದಲ ಬಾರಿ ಸೈಕಲನ್ನು ಬಿದ್ದು ಎದ್ದು ಓಡಿಸಿದ ಖುಷಿ , ಇಂದು ಲಕ್ಷಗಟ್ಟಲೇ ಸುರಿದು ಕೊಂಡ ಕಾರಿನಲ್ಲಿ ಕಾಣುವುದಿಲ್ಲ. ಆಕಾಶದಲ್ಲಿ ಹಾರಾಡುವ ವಿಮಾನ ನೋಡಿ, ಕೈಬೀಸಿ ಟಾಟಾ ಮಾಡುತ್ತಿದ್ದ ಖುಷಿ, ಇಂದು ವಿಮಾನ ದಲ್ಲಿಯೇ ಪ್ರಯಾಣಿಸಿದರೂ ತೃಪ್ತಿ ಇಲ್ಲ.
ಬಾಲ್ಯದ ಮರಕೋತಿ ,ಕುಂಟೆಬಿಲ್ಲೆ , ಕಣ್ಣಾಮುಚ್ಚಾಲೆ, ಲಗೋರಿ ಆಟಗಳು, ಸೈಕಲ್ ತುಳಿಯುವುದನ್ನು ಎದ್ದು , ಬಿದ್ದು , ಕಲಿತದ್ದು , ಪರೀಕ್ಷೆಯಲ್ಲಿ ಒಂದು ಮಾರ್ಕ್ಸ್ ಜಾಸ್ತಿ ತೆಗೆದುಕೊಂಡದ್ದು , ಅದಕ್ಕಾಗಿ ಸಂಭ್ರಮಿಸಿದ್ದು , ಗದ್ದೆ ತೋಟಗಳಲ್ಲಿ ಸುತ್ತಾಡಿದ್ದು , ಹಣ್ಣು ಕದ್ದು ತಿಂದಿದ್ದು , ಶಾಲಾ ಕಾಲೇಜು ಸ್ಪರ್ಧೆಗಳಲ್ಲಿ, ಬಹುಮಾನ, ಪ್ರಶಸ್ತಿ ಗಳಿಸಿದ್ದು , ಜೀವನದ ಸಂಗಾತಿಯೇ ಗೆಳೆಯನಾಗಿದ್ದು , ತೊಟ್ಟಿಲು ಕಟ್ಟಿದ್ದು , ಮಗುವಿನ ನಗುವಿನಲ್ಲಿ ಲೋಕವನ್ನೇ ಮರೆತಿದ್ದು , ಗುರು ಹಿರಿಯರ ಆಶೀರ್ವಾದ ಪಡೆದಿದ್ದು , ಪ್ರೀತಿ ಪಾತ್ರರ ಮೆಚ್ಚುಗೆಯ ಮಾತುಗಳಿಂದ , ಅವರ ಅಪ್ಪುಗೆಯಿಂದ ಅರಳಿದ್ದು , ಎಲ್ಲವೂ ಸಂಭ್ರಮಗಳೇ..ಕೆಲವು ಸಣ್ಣ ಸಂಭ್ರಮಗಳಾದರೆ , ಮತ್ತೊಂದಿಷ್ಟು ದೊಡ್ಡ ಪ್ರಮಾಣದ ಸಂಭ್ರಮಗಳು.
ಸೈಟು ಖರೀದಿಸಿದ್ದು , ಮನೆ ಕಟ್ಟಿಸಿದ್ದು , ಹೊಸ ಗಾಡಿ ಕೊಂಡದ್ದು , ಬರಹಗಳನ್ನು ಬರೆದದ್ದು , ಕಥಾಗುಚ್ಛದಲ್ಲಿ ಹಾಕಿದ್ದು , ಪತ್ರಿಕೆಗಳಿಗೆ ಕಳಿಸಿದ್ದು , ಅವು ಮೆಚ್ಚುಗೆ ಗಳಿಸಿದ್ದು , ಎಲ್ಲವೂ ದೊಡ್ಡ ಸಂಭ್ರಮಗಳೇ. ಆ ಕ್ಷಣವನ್ನು ಆನಂದಿಸಲೇ ಬೇಕಾದ್ದು. ಆದರೆ, ನಾವು ಆಗಲೂ, ಅಯ್ಯೋ ಬಿಡಿ, ಇದೇನು ದೊಡ್ಡ ವಿಷಯ ? ನನ್ನ ಆಸೆ ಬೇರೇನೇ ಇತ್ತು , ಎಂದು ನಮ್ಮ ಮೂಗನ್ನು ನಾವೇ ಮುರಿಯುತ್ತೇವೆ.
ಇದಕ್ಕೆಲ್ಲ ಕಾರಣ ಏನು ? ಅತಿಯಾದ ಆಸೆಯೇ, ಅಸೂಯೆಯೇ, ಅತೃಪ್ತಿಯೇ, ಆಮಿಷವೇ , ಬೇಕು ಬೇಕೆಂಬ ಹಾಹಾಕಾರವೇ ? ಅಥವಾ ಇವೆಲ್ಲದರ ಚರ್ವಿತಚರ್ವಣ ಭಾವವೇ ???
ಒಟ್ಟಿನಲ್ಲಿ , ನಮ್ಮೊಳಗಿರುವ ತೃಪ್ತಿಯ ಸೆಲೆಯನ್ನು , ನಾವೇ ಬತ್ತಿಸಿಕೊಂಡು , ಮತ್ತೆಲ್ಲೋ ಅದರ ಹುಡುಕಾಟದಲ್ಲಿ ನಿರತರಾಗಿರುತ್ತೇವೆ. ಅತೃಪ್ತ ಮನಸ್ಸಿಗರಾಗಿ ತೊಳಲಾಡುತ್ತಿರುತ್ತೇವೆ. ತೃಪ್ತಿ , ಎಲ್ಲಿಯಾದರೂ ಮಾರಾಟಕ್ಕಿದೆಯೇ ? ಎಂದು ಅರಸುತ್ತಿರುತ್ತೇವೆ.
ಅದನ್ನೇ ಡಿ ವಿ ಜಿಯವರು ಹೇಳಿದ್ದು ,
ಅವರೆಷ್ಟು ಧನವಂತರ್ , ಇವರೆಷ್ಟು ಬಲವಂತರ್ |
ಅವರೆಷ್ಟು ಯಶವಂತರ್ ಎನುವ ಕರುಬಿನಲಿ ||
ಭವಿಕ ನಿನಗೆಷ್ಟಿಹುದೊ ಮರೆತು ನೀಂ ಕೊರಗುವುದು |ಶಿವನಿಗೆ ಕೃತಜ್ಞತೆಯೆ ? – ಮಂಕುತಿಮ್ಮ ||
ಅನ್ಯರು ಎಷ್ಟು ಹಣವಂತರು ? ಎಷ್ಟು ಬಲವಂತರು ? ಎಷ್ಟು ಕೀರ್ತಿವಂತರು ? ಎಂದು ನಿನ್ನತನ ನೀನರಿಯದೆ ಮಾತ್ಸರ್ಯದಿಂದ ಕೊರಗಬೇಡ. ಅದು ದೇವರಿಗೆ ಎಸಗುವ ಅಪಚಾರವಾದೀತು.