777 ಚಾರ್ಲಿ ಮತ್ತು ಶ್ವಾನ ಪುರಾಣ
ಇತ್ತೀಚೆಗೆ ಬಂದ " 777 ಚಾರ್ಲಿ " ಎಂಬ ಕನ್ನಡ ಚಲನಚಿತ್ರ ತನ್ನ ವಿಭಿನ್ನತೆಯಿಂದ ತುಂಬಾ ಗಮನ ಸೆಳೆದಿದೆ. ಸಾಂಪ್ರದಾಯಿಕ ಕಥೆಯನ್ನು ಬಿಟ್ಟು ಒಂದು ಸಾಮಾನ್ಯ ನಾಯಿಯನ್ನು ಇಟ್ಟುಕೊಂಡು ಕಥೆ ಹೆಣೆದು, ಚಲನಚಿತ್ರ ಮಾಡಲು ಸಾಧ್ಯವೇ ? ಎಂದು ಸಂಶಯ ವ್ಯಕ್ತಪಡಿಸಿದವರಿಗೆ, ಈ ಚಿತ್ರದ ಯಶಸ್ಸು ದಂಗುಬಡಿಸಿದೆ. ಈ ಚಿತ್ರದ ನಾಯಕ ಮತ್ತು ನಾಯಿ ಇಬ್ಬರು ಅನಾಥರು. ಅವರಿಬ್ಬರ ಸ್ನೇಹ - ಸಂಬಂಧ, ಸರಸ - ವಿರಸ, ನೋವು - ನಲಿವುಗಳ ಚಿತ್ರಣ ಸದಭಿರುಚಿಯ ಚಿತ್ರ ಪ್ರೇಮಿಗಳ ಮತ್ತು ನಾಯಿ ಪ್ರಿಯರ ಗಮನ ಸೆಳೆದದ್ದರಲ್ಲಿ ಆಶ್ಚರ್ಯವಿಲ್ಲ. ಈ ಚಿತ್ರವನ್ನು ನೋಡಿ ತಮ್ಮಲ್ಲಿದ್ದ ನಾಯಿಯನ್ನು ನೆನೆಸಿಕೊಂಡು ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಭಾವುಕರಾಗಿ ಕಣ್ಣೀರು ಸುರಿಸಿದ್ದು ದೊಡ್ಡ ಸುದ್ದಿ ಆಯಿತು. ಆ ಚಿತ್ರದಲ್ಲಿರುವ ನಾಯಿಗೆ ಅದರಿಂದ ಏನು ಲಾಭವಾಯಿತೋ ಗೊತ್ತಿಲ್ಲ. ಆದರೆ ಚಿತ್ರ ನಿರ್ಮಾಪಕರ ಜೇಬು ಉಬ್ಬಿದ್ದು ಸುಳ್ಳಲ್ಲ! ಮುಖ್ಯಮಂತ್ರಿಗಳೇ ನೋಡಿದ ಮೇಲೆ ನಾನು ನೋಡದೆ ಇರಲಾದಿತೇ? ಟಾಕೀಸಿಗೆ ಹೋಗಿ ಸಿನಿಮಾ ನೋಡಿದೆ. ಚಿತ್ರದ ಮೊದಲರ್ಧ ಲವಲವಿಕೆಯಿಂದ ಚೆನ್ನಾಗಿದ್ದರೆ, ಉತ್ತರಾರ್ಧ ನನಗೆ ಅಸಹಜ ಅನ್ನಿಸಿ ಇಷ್ಟವಾಗಲಿಲ್ಲ. ಕೆಲವು ದೃಶ್ಯಗಳನ್ನು ನೋಡಿದರೆ ನಮ್ಮ ಮುಖ್ಯಮಂತ್ರಿಗಳು ಅತ್ತದ್ದು ಸುಳ್ಳಲ್ಲ. ನಾಯಿ ಸಾಕಿದವರಿಗೆ ಅದು ಗೊತ್ತಿರುತ್ತದೆ. ಸತ್ತು ಹೋದ ನಮ್ಮ ಮನೆಯ ನಾಯಿ ನೆನೆಸಿಕೊಂಡರೆ ನಮಗೆ ಈಗಲೂ ದುಃಖವಾಗುತ್ತದೆ. ನಾವು ಕೆಲಸಕ್ಕೆ, ಮಕ್ಕಳು ಶಾಲೆಗೆ ಹೊರಟಾಗ ಅದು ಬೀಳ್ಕೊಡುವ ಪರಿಯೇನು? ವಾಪಸು ಬರುವಾಗ ಸ್ವಾಗತಿಸುವ ಪರಿಯೇನು? ಹಾರುವುದು, ಕುಣಿಯುವುದು, ಓಡುವುದೇನು? ಹುಳು ಹುಪ್ಪಟೆಗಳಿಂದ, ಕಳ್ಳ ಕಾಕರಿಂದ ಮನೆಯನ್ನು ರಕ್ಷಿಸುವುದೇನು ? ಅದು ಕೊಟ್ಟ ಪ್ರೀತಿ ಸೇವೆಯನ್ನು ನೆನೆಸಿಕೊಂಡರೆ ಮನಸು ಭಾರವಾಗುತ್ತದೆ. ಅದರ ರೂಪ , ನಡೆ ನುಡಿ ಮತ್ತೆ ಮತ್ತೆ ನೆನಪಾಗುತ್ತದೆ. ಅದು ಇರುವವರೆಗೂ ನಮ್ಮ ಮನೆಯಿಂದ ಒಂದೇ ಒಂದು ವಸ್ತುವು ಕಳುವಾಗಲಿಲ್ಲ. ಅಪರಿಚಿತರು ಸುಳಿಯಲಿಲ್ಲ ! ಉಳಿದದ್ದು, ಪಳಿದಿದ್ದು, ಬೇಡದ್ದು, ಹಾಕಿದ್ದು ತಿಂದುಕೊಂಡು ಮನೆಯ ಸದಸ್ಯನಂತೆ ಬಾಳಿ ಬದುಕುವ ನಾಯಿಗಳಷ್ಟು ಉಪಯುಕ್ತವಾದ ಪ್ರಾಣಿ ಮತ್ತೊಂದಿಲ್ಲ. ಹೆಚ್ಚು ಕಡಿಮೆ ಮನುಷ್ಯರ ಎಲ್ಲ ಮಾತುಗಳನ್ನು ಅರ್ಥ ಮಾಡಿಕೊಳ್ಳ ಬಲ್ಲ ನಾಯಿಗಳನ್ನು ಸಾಕುವುದು ಸರಳವೇನಲ್ಲ. ಅವುಗಳನ್ನು ಶುಚಿಯಾಗಿ ಇಡುವುದು, ವೈದ್ಯಕೀಯ ತಪಾಸಣೆ ಮಾಡಿಸುವುದು, ಇಂಜೆಕ್ಷನ್ ಕೊಡಿಸುವುದು, ತರಬೇತಿ ನೀಡುವುದು ಮುಂತಾದವುಗಳನ್ನು ನಿರಂತರವಾಗಿ ಮಾಡದಿದ್ದರೆ ಜಾತಿ ನಾಯಿಯಾದರು ಅಷ್ಟೇ, ಕಂತ್ರಿ ನಾಯಿಯಾದರೂ ಅಷ್ಟೇ! ನಾಯಿ ನಾಯಿಯೇ !
ಪುರಾತನ ಕಾಲದಿಂದಲೂ ನಾಯಿ ಮನುಷ್ಯನ ಸಂಗಾತಿ. ನರಿ ಮತ್ತು ತೋಳಗಳ ಜಾತಿಗೆ ಸೇರಿದ ನಾಯಿಗಳು ಅತ್ಯಂತ ನಂಬಿಗಸ್ತ ಪ್ರಾಣಿ. ನಿಯತ್ತಿಗೆ ಹೆಸರಾದ, ಬುದ್ಧಿಶಕ್ತಿಯುಳ್ಳ, ಆಜ್ಞಾಧಾರಕ ಪ್ರಾಣಿಯಾದ ನಾಯಿಗಳು ಆದಿಮಾನವನ ಕಾಲದಿಂದ ಮನುಷ್ಯರ ಅಚ್ಚುಮೆಚ್ಚಿನ ಪ್ರಾಣಿ. ಬೇಟೆಯಾಡಲು, ಪಶುಪಾಲನೆ ಮಾಡಲು, ಮನೆಯನ್ನು ಕಾಯಲು, ಕಳ್ಳ ಕಾಕರಿಂದ ರಕ್ಷಣೆ ಪಡೆಯಲು ನಾಯಿಗಳು ಸಹಾಯಕ. ನಾಯಿಗಳು ಎಂದಿನಿಂದ ಮನುಷ್ಯರ ಸಂಗಾತಿಗಳಾದವು ಎಂಬುದಕ್ಕೆ ಒಂದು ಕಥೆ ಇದೆ. ನಾಯಿಯನ್ನು ಸೃಷ್ಟಿಸಿದ ಬ್ರಹ್ಮನು ಬಲವಾದ ಪ್ರಾಣಿಯ ಸೇವೆ ಮಾಡಿಕೊಂಡಿರು ಎಂದು ಭೂಮಿಗೆ ಕಳಿಸಿದನಂತೆ. ಹೀಗೆ ಭೂಮಿಗೆ ಬಂದ ನಾಯಿ, ಬೃಹತ್ ಗಾತ್ರದ ಆನೆಯನ್ನು ಕಂಡು ಅದರ ಸೇವಕನಾಯಿತು. ಕಾಡಿನ ರಾತ್ರಿಯ ಕತ್ತಲನ್ನು ಕಂಡು ಹೆದರಿದ ನಾಯಿ ಬೊಗಳ ತೊಡಗಿತು. ಆಗ ಆನೆ "ಬೊಗಳಬೇಡ ಇಲ್ಲಿ ಹತ್ತಿರದಲ್ಲೇ ಸಿಂಹವೇನಾದರೂ ಇದ್ದಲ್ಲಿ ಶಬ್ದ ಕೇಳಿ ನಮ್ಮಿಬ್ಬರನ್ನು ಕೊಂದು ಹಾಕುತ್ತದೆ" ಎಂದಿತಂತೆ. ಅದನ್ನು ಕೇಳಿದ ನಾಯಿ ಆನೆಗಿಂತ ಸಿಂಹ ಶಕ್ತಿಯುತ ಪ್ರಾಣಿ ಎಂದು ತಿಳಿದು ಆನೆಯನ್ನು ತೊರೆದು ಸಿಂಹದ ಸೇವಕನಾಯಿತು. ಮತ್ತೆ ರಾತ್ರಿಯಲ್ಲಿ ನಾಯಿಗೆ ಹೆದರಿಕೆಯಾಗಿ ಬೊಗಳ ತೊಡಗಿತು. ಆಗ ಸಿಂಹ "ಬೊಗಳಬೇಡ, ಹತ್ತಿರದಲ್ಲೇ ಬೇಟೆಗಾರ ನಿದ್ದರೆ ಶಬ್ದ ಕೇಳಿ ನಮ್ಮಿಬ್ಬರನ್ನು ಕೊಲ್ಲುತ್ತಾನೆ." ಎಂದಿತು. ಓಹೋ ! ಸಿಂಹಕ್ಕಿಂತ, ಬೇಟೆಗಾರ ಶಕ್ತಿಶಾಲಿ ಎಂದು ತಿಳಿದ ನಾಯಿ ಸಿಂಹವನ್ನು ತೊರೆದು ಬೇಟೆಗಾರನ ಸೇವೆಗೆ ಸೇರಿತು. ರಾತ್ರಿ ಆದೊಡನೆ ಮತ್ತೆ ಹೆದರಿಕೆಯಿಂದ ಯಥಾಪ್ರಕಾರ ಬೊಗಳತೊಡಗಿತು. ಆಗ ಬೇಟೆಗಾರ "ಹೆದರಬೇಡ ನಾನು ಬದುಕಿರುವವರೆಗೂ ನಿನಗೆ ಯಾವುದೇ ತೊಂದರೆ ಆಗದಂತೆ ಕಾಪಾಡುವೆ" ಎಂದು ಅಭಯ ನೀಡಿದನಂತೆ. ಅಂದಿನಿಂದ ಅದು ಮನುಷ್ಯರ ಸಂಗಾತಿಯಾಯಿತಂತೆ.
ನಾಯಿಯನ್ನು ಪ್ರೀತಿಸಿದಷ್ಟು ಮನುಷ್ಯ ಮತ್ತೆ ಯಾವ ಪ್ರಾಣಿಯನ್ನು ಪ್ರೀತಿಸಲಾರ. ಅದಕ್ಕೆ ಕಾರಣ ಅದರ ನಿರ್ವಾಜ್ಯ ಪ್ರೀತಿ. ನಾವು ನೀಡುವ ಒಂದು ಪಾಲು ಪ್ರೀತಿಗೆ ಅದು ಹತ್ತು ಪಾಲು ಪ್ರೀತಿಯನ್ನು ತೋರಿಸುತ್ತದೆ. ನೀವು ಒಂದು ಬಾರಿ ಅವಕ್ಕೆ ಪ್ರೀತಿ ತೋರಿಸಿದರೆ ಅವು ಸಾಯುವವರೆಗೂ ತಮ್ಮ ಪ್ರೀತಿ, ವಿಶ್ವಾಸ, ಪ್ರಾಮಾಣಿಕತೆಯನ್ನು ವ್ಯಕ್ತಪಡಿಸುತ್ತವೆ. ಅತ್ಯಂತ ವೇಗವಾಗಿ ಓಡುವ ಈ ಪ್ರಾಣಿಯ ಮೂಗು ಮನುಷ್ಯರ ಮೂಗಿಗಿಂತ 10,000 ಪಟ್ಟು ಹೆಚ್ಚಾಗಿ ಅಘ್ರಾಣಿಸುವ ಶಕ್ತಿಯನ್ನು ಹೊಂದಿದೆ. ಬರಿಯ ವಾಸನೆಯಿಂದಲೇ ಅದೃಶ್ಯ ಕಳ್ಳರನ್ನು, ಅಗೋಚರ ಸ್ಫೋಟಕಗಳನ್ನು, ಕಣ್ಮರೆಯ ಬೇಟೆಗಳನ್ನು ಪತ್ತೆ ಮಾಡಬಲ್ಲವು. ಹಾಗಾಗಿ ಅವುಗಳನ್ನು ಮಿಲಿಟರಿಯಲ್ಲಿ, ಪೊಲೀಸ್ ಇಲಾಖೆಯಲ್ಲಿ ಮತ್ತು ಬೇಟೆಗಾರರು ತರಬೇತಿ ನೀಡಿ ಬಳಸುತ್ತಾರೆ. ಅವಕ್ಕಾಗಿ ಪ್ರತ್ಯೇಕ ಇಲಾಖೆಗಳಿವೆ. ಅವುಗಳ ತಳಿಗಳನ್ನು, ವಿವಿಧ ಜಾತಿಗಳನ್ನು, ಗುಣ ವಿಶೇಷ ಗಳನ್ನು ವಿವರಿಸಲು ದೊಡ್ಡ ಗ್ರಂಥಗಳನ್ನು ಬರೆಯಬೇಕಾದೀತು ! ಪ್ರಪಂಚದೆಲ್ಲೆಡೆ ಅದನ್ನು ಸಾಕುವ ಮತ್ತು ಪ್ರೀತಿಸುವ ಜನರಿದ್ದಾರೆ. ಕೆಲವರಂತೂ ತಮ್ಮೊಂದಿಗೆ ಊಟ ಮಾಡಿಸಿ, ತಮ್ಮ ಹಾಸಿಗೆಯಲ್ಲಿ ಮಲಗಿಸಿಕೊಳ್ಳುವವರೂ ಇದ್ದಾರೆ! ಅದೃಷ್ಟವಿದ್ದರೆ ಅರಮನೆ ವಾಸ, ಇಲ್ಲದಿದ್ದರೆ ಬೂದಿ ಗುಂಡಿಯೇ ನಿವಾಸ.
ಪುರಾಣ ಮತ್ತು ಇತಿಹಾಸಗಳಲ್ಲಿ ನಾಯಿಗಳ ಉಲ್ಲೇಖ ಹೇರಳವಾಗಿದೆ. ಮನುಷ್ಯರಿಗೆ ಹೇಗೋ ಹಾಗೆ ದೇವರಿಗೂ ನಾಯಿ ಎಂದರೆ ಅಚ್ಚುಮೆಚ್ಚು! ಇಂದ್ರ, ಯಮ, ಮತ್ತು ಧರ್ಮರಾಯ ಮುಂತಾದವರಿಗೆ ಅವು ಸಂಗಾತಿಯಾಗಿದ್ದವು. ತ್ರಿಮೂರ್ತಿ ರೂಪನಾದ ದತ್ತಾತ್ರೇಯನ ಬಳಿ ನಾಲ್ಕು ನಾಯಿಗಳಿವೆ. ಅವು ಧರ್ಮ ಸ್ವರೂಪವೆಂದೂ, ನಾಲ್ಕು ವೇದಗಳ ರಕ್ಷಣೆ ಮಾಡುತ್ತವೆ ಎಂದು ಹೇಳುತ್ತಾರೆ. ಶಿವನು ಭೈರವ ರೂಪದಲ್ಲಿರುವಾಗ ನಾಯಿ ಅವನ ಸಹಚರನಾಗಿರುತ್ತದೆ. ಸತ್ತವರನ್ನು ಎಳೆದೊಯ್ಯುವಾಗ ಯಮಧರ್ಮನಿಗೆ ಸಹಾಯಕರು ಎರಡು ನಾಯಿಗಳಂತೆ. ದ್ವಾಪರ ಯುಗದ ಅಂತ್ಯದಲ್ಲಿ, ಕುರುಕುಲ ನಾಶವಾಗಿ ಸರ್ವರೂ ಹತರಾಗಿ, ಧರ್ಮರಾಯನೊಬ್ಬನೆ ಉಳಿದ. ಅವನು ಸ್ವರ್ಗಾರೋಹಣ ಮಾಡುವ ಸಂದರ್ಭದಲ್ಲಿ ಅವನ ಜೊತೆಗೆ ಉಳಿದಿದ್ದು ಒಂದು ನಾಯಿ ಮಾತ್ರ. ತನ್ನನ್ನು ಹಿಂಬಾಲಿಸಿ ಬಂದ ನಾಯಿಗೆ ಸ್ವರ್ಗಕ್ಕೆ ಪ್ರವೇಶ ನಿರಾಕರಿಸಿದ್ದರಿಂದ ನನ್ನ ನಾಯಿಗೆ ಪ್ರವೇಶವಿಲ್ಲದ ಸ್ವರ್ಗ ನನಗೂ ಬೇಡ ಎಂದನಂತೆ.! ಸ್ವರ್ಗದ ಒಳಗೆ ಹೋಗಲು ನಿರಾಕರಿಸಿದನಂತೆ. ವಿಶ್ವಾಸ, ಪ್ರೀತಿ, ನಿಷ್ಠೆ, ಪ್ರಾಮಾಣಿಕತೆಗಳಿಗೆ ಪ್ರತೀಕವಾದ ನಾಯಿಗಳ ಮಹತ್ವ ತಿಳಿಸಿ, ಇಂದ್ರನ ಒಪ್ಪಿಗೆ ಪಡೆದು ಅದರೊಂದಿಗೆ ಸ್ವರ್ಗವನ್ನು ಪ್ರವೇಶಿಸಿದನಂತೆ. ಇದು ಆ ನಿಸ್ವಾರ್ಥ ಪ್ರಾಣಿಗೆ ಸಂದ ಗೌರವ. ಧೈರ್ಯ ಮತ್ತು ಸಾಹಸಗಳಿಗೆ ಹೆಸರಾದ ನಾಯಿಗಳು ತನ್ನ ಒಡೆಯರನ್ನು ಕಾಪಾಡಲು ಜೀವವನ್ನು ತೆತ್ತ ಪ್ರಸಂಗಗಳು ಸಾವಿರಾರು. ಬೇಟೆಯಾಡುವಾಗ ಕಾಡು ಹಂದಿಯಿಂದ ತನ್ನ ಜೀವವನ್ನು ಕಾಪಾಡಿ ಬಲಿಯಾಗಿ ಹೋದ ತನ್ನ ನಾಯಿಗಾಗಿ ಪಲ್ಲವ ಗೌಂಡ ಎಂಬುವನು ಯಲಹಂಕದಲ್ಲಿ ವೀರಗಲ್ಲನ್ನು ನೆಡಿಸಿದ್ದಾನೆ. ದೃಷ್ಟ ಸೂಕರ ಒಂದರಿಂದ ತನ್ನ ಯಜಮಾನನ ಜೀವ ಕಾಪಾಡಿ, ಸತ್ತುಹೋದ "ಕಾಳಿ" ಎಂಬ ನಾಯಿಯೊಂದರ ತ್ಯಾಗವನ್ನು ಮದ್ದೂರು ಬಳಿಯ ಆತಕೂರು ಶಾಸನವು ವರ್ಣಿಸುತ್ತದೆ. ಹೀಗೆ ವಿಷ ಜಂತುಗಳಿಂದ, ಕ್ರೂರ ಪ್ರಾಣಿಗಳಿಂದ ತಮ್ಮ ಒಡೆಯರನ್ನು ಕಾಪಾಡುವ ನಾಯಿಗಳ ಇತಿಹಾಸ ಅಸಂಖ್ಯ .
ಅತಿ ಹೆಚ್ಚಾಗಿ ಪ್ರೀತಿಸಲ್ಪಡುವ ನಾಯಿಗಳು, ಅತಿ ಅಸಡ್ಡೆಗೂ ಒಳಗಾದ ಪ್ರಾಣಿಗಳು. ಕುರ್ರೋ, ಕುರೋ ಎಂದು ಕರೆಯಲ್ಪಡುವ ನಾಯಿಗಳು, ಹಚಾ ಹಚಾ ಎಂದು ಓಡಿಸಲ್ಪಡುತ್ತವೆ ! ಅದಕ್ಕೆ ಕಾರಣ ತರತಮ ಜ್ಞಾನವಿಲ್ಲದೆ ಅವುಗಳು ಸೇವಿಸುವ ಆಹಾರ. ಆದ್ದರಿಂದ ಕೆಲವರು ಅವುಗಳನ್ನು ಮನೆಯ ಹೊಸಲೊಳಗೆ ಬಿಡುವುದಿಲ್ಲ. ದುಷ್ಟ ಬುದ್ಧಿಯವರನ್ನು "ನಾಯಿ" ಎಂದು ಗೌರವದಿಂದ ಕರೆಯುವುದುಂಟು ! "ನಾಯಿ ಪಾಡು" "ನಾಯಿ ಬುದ್ಧಿ" "ಹುಚ್ಚು ನಾಯಿ" ಮುಂತಾದ ಪದಗಳು ಅವುಗಳ ಇನ್ನೊಂದು ಮುಖವನ್ನು ತಿಳಿಸುತ್ತವೆ. ಮನುಷ್ಯರ ಹಾಗೆ ಮೂಳೆ ಎಸೆದರೆ ಬಾಲವಲ್ಲಾಡಿಸುವ, ಬಿಸ್ಕೆಟ್ ಎಸೆದರೆ ಪಕ್ಷಾಂತರ ಮಾಡುವ ನಾಯಿಗಳು ಇವೆ ! ಸುಮಾರು 10 ರಿಂದ 14 ವರ್ಷ ಬದುಕುವ ನಾಯಿಗಳು, ಅಪರೂಪಕ್ಕೆ 20 ವರ್ಷ ಬದುಕಿದ ದಾಖಲೆ ಇದೆ. ನಾಯಿಗೆ ಹುಚ್ಚು ಹಿಡಿದರೆ ಅದರ ಅಂತ್ಯವಾದ ಹಾಗೆ. ಅಂತಹ ನಾಯಿ ಅತ್ಯಂತ ಅಪಾಯಕರ. ಅವು ಕಚ್ಚಿದರೆ ಹಿಂದೆ ಪರಿಣಾಮಕಾರಿ ಮದ್ದು ಇರಲಿಲ್ಲ. ಲೂಯಿ ಪ್ಯಾಶ್ಚರ್ ಕಂಡುಹಿಡಿದ ರೆಬಿಸ್ ವ್ಯಾಕ್ಸಿನ್ ನಾಯಿ ಕಡಿತಕ್ಕೆ ವರದಾನವಾಗಿದೆ.
"ಗ್ರಾಮಸಿಂಹ" ಎಂದು ವ್ಯಂಗ್ಯವಾಗಿ ಕರೆಯಲ್ಪಡುವ ನಾಯಿಗಳಿಗೆ ಶುನಕ, ಕುರ್ಕ ಮತ್ತು ಶ್ವಾನ ಎಂಬ ಹೆಸರಿವೆ. ನಾಯಿಗಳ ಬಗ್ಗೆ ಇರುವ ನಂಬಿಕೆಗಳು, ಅಪನಂಬಿಕೆಗಳು, ಊಹಾಪೋಹಗಳು, ಮೂಢನಂಬಿಕೆಗಳು ನೂರಾರು. "ನಾಯಿ ನಾರಾಯಣನಂತೆ, ಆದ್ದರಿಂದ ಅದನ್ನು ಒದೆಯಬಾರದು" "ನಾಯಿ ಊಳಿಟ್ಟರೆ ಕೆಟ್ಟ ಸುದ್ದಿ ಕೇಳ ಬೇಕಾಗುತ್ತದೆ" "ಪ್ರವಾಸ ಹೊರಟಾಗ ನಾಯಿ ಅಡ್ಡ ಬಂದರೆ ಅದೃಷ್ಟ" "ತಾಯಿಯನ್ನು ಒದ್ದವರು ನಾಯಿಯಾಗಿ ಹುಟ್ಟುತ್ತಾರೆ" "ನಾಯಿಗಳ ಕಣ್ಣಿಗೆ ರಾತ್ರಿ ದೆವ್ವಗಳು ಕಾಣಿಸುತ್ತವೆ". "ಕೆಟ್ಟ ಧ್ವನಿಯಲ್ಲಿ ಕೂಗಿದರೆ ಯಾರಾದರೂ ಸಾಯುತ್ತಾರೆ" "ಒಂದೇ ಸಮನೆ ಬೊಗಳಿದರೆ ಏನೋ ಕೆಡುಕು ಸಂಭವಿಸುತ್ತದೆ" ಹೀಗೆ ಹತ್ತಾರು ನಂಬಿಕೆಗಳಿವೆ. ಅವುಗಳು ಸತ್ಯವೋ ಸುಳ್ಳೋ ದೇವರೇಬಲ್ಲ. ಆದರೆ ಅಂತಹ ನಂಬಿಕೆಗಳಿರುವುದು ನಿಜ. ನಾಯಿಗಳ ಸ್ವಾಮಿನಿಷ್ಠೆ ಅಸದಳ. ಸತ್ತ ತನ್ನ ಯಜಮಾನನ ಸಮಾಧಿಗೆ ಪ್ರತಿದಿನ ಭೇಟಿ ಕೊಟ್ಟ ನಾಯಿಗಳಿವೆ. ಕಣ್ಮರೆಯಾದ ತನ್ನ ಒಡೆಯ ಬರುವನೆಂದು ಅವನಿಗಾಗಿ ರೈಲ್ವೆ ನಿಲ್ದಾಣದಲ್ಲಿ ವರ್ಷಗಟ್ಟಲೆ ಕಾದ ನಾಯಿಯ ಕಥೆಯನ್ನು ನಾವು ಕೇಳಿದ್ದೇವೆ. ಲಕ್ಷ ಜನರ ನಡುವೆ ತನ್ನವರನ್ನು ಕ್ಷಣಮಾತ್ರದಲ್ಲಿ ಗುರುತಿಸುವ ನಾಯಿಗಳ ಬುದ್ಧಿಶಕ್ತಿಗೆ, ಮಾನವ ಪ್ರೇಮಕ್ಕೆ ಸರಿಸಾಟಿ ಇಲ್ಲ.
ಕೊನೆಯದಾಗಿ ಹೀನ ಮಾನವರನ್ನು ನಾಯಿಗೆ ಹೋಲಿಸಿ ಕನಕದಾಸರು ರಚಿಸಿದ ಕೀರ್ತನೆ ಬಲು ಪ್ರಸಿದ್ಧವಾಗಿದೆ.
“ಡೊಂಕು ಬಾಲದ ನಾಯಕರೇ ನೀವೇನ್ ಊಟವ ಮಾಡಿದಿರಿ ? ಕಣಕ ಕುಟ್ಟೋ ಅಲ್ಲಿಗೆ ಹೋಗಿ ಹಣಿಕಿ ಇಣುಕಿ ನೋಡುವಿರಿ, ಕಣಕ ಕುಟ್ಟೋ ಒನಕೆಲಿ ಹೊಡೆದರೆ ಕುಯ್ ಕುಯ್ ರಾಗವ ಹಾಡುವಿರಿ.
ಹುಗ್ಗಿ ಮಾಡೋ ಅಲ್ಲಿಗೆ ಹೋಗಿ, ತಗ್ಗಿ ಬಗ್ಗಿ ನೋಡುವಿರಿ. ಹುಗ್ಗಿ ಮಾಡೋ ಸೌಟಲ್ಲಿ ಹೊಡೆದರೆ ಕುಯ್ ಕುಯ್ ರಾಗವ ಪಾಡುವಿರಿ.
ಹಿರಿಯ ಹಾದಿಲಿ ಓಡುವಿರಿ, ಕರಿಯ ಬೂದಿಲಿ ಹೊರಳುವಿರಿ. ಸಿರಿ ಕಾಗಿನೆಲೆಯಾದಿ ಕೇಶವನ ಸ್ಮರಿಸಿದವರ ಗತಿ ತೋರುವಿರಿ.”
777 ಚಾರ್ಲಿ ಎಂಬ ಸಿನಿಮಾದ ದೆಸೆಯಿಂದ ಎಷ್ಟೆಲ್ಲಾ "ನಾಯಿ ನೆನಪುಗಳು" ಹೊರಬಂದವು. ನಾಯಿಗಳಿಗೆ ಸಾವೆಲ್ಲಿ? ನಾಯಿ ವ್ಯಥೆಗಳಿಗೆ ಅಂತ್ಯವೆಲ್ಲಿ ? ನಾಯಿ ಕತೆಗಳಿಗೆ ಕೊನೆಯೆಲ್ಲಿ ?
- ವಾಸುದೇವ. ಬಿ. ಎಸ್
( 9986407256 )