*“ತೃಪ್ತಿ , ಎಲ್ಲಿ ಮಾರಾಟಕ್ಕಿದೆ ?” ತಿಳಿಸುವಿರಾ?*
ಅದೊಂದು ನದಿ ಪಾತ್ರ. ಆ ನದಿಯಲ್ಲಿ ಮೀನೊಂದು ವಾಸಿಸುತ್ತಿತ್ತು. ನದಿಯ ಪಕ್ಕದಲ್ಲಿದ್ದ ಮರದಲ್ಲಿ, ನವಿಲೊಂದು ಮನೆ ಮಾಡಿತ್ತು. ಅವೆರಡರ ಮಧ್ಯೆ ಹೇಗೋ ಎಂತೋ , ಬಹಳ ಗೆಳೆತನವಾಯಿತು. ಗೆಳೆತನ ಬೆಳೆಯುತ್ತ ಹೋದಂತೆ , ಒಬ್ಬರಿಗೊಬ್ಬರು ಜೀವ ಬಿಡಲೂ ಸಿದ್ಧ ಎಂಬಷ್ಟು ಆತ್ಮೀಯವಾದವು. ಹೀಗಿರುವಾಗ, ಒಮ್ಮೆ ಬೇಟೆಗಾರರ ತಂಡವೊಂದು ಅಲ್ಲಿಗೆ ಬಂದಿತು. ಮರದ ಮೇಲೆ ಕುಳಿತು, ನೀರಿನಲ್ಲಿದ್ದ ಮೀನಿನೊಂದಿಗೆ ಹರಟುತ್ತಿದ್ದ ನವಿಲನ್ನು , ಆ ತಂಡದ ಒಬ್ಬ ಆಸಾಮಿ ನೋಡಿಬಿಟ್ಟ . ಅದನ್ನು ಹಿಡಿದು ಕೈಕಾಲು ಕಟ್ಟಿ , ಒಯ್ಯಲು ಅನುವಾದ.
ನೀರಿನಡಿಯಿಂದ ಮೀನು ಇದನ್ನೆಲ್ಲ ನೋಡಿತು. ಮೆಲ್ಲಗೆ , ತಲೆ ಹೊರಗೆ ಹಾಕಿ , ಅಣ್ಣಾ ಬೇಟೆಗಾರನೇ, ಇದುವರೆಗೂ ಯಾರೂ ಕಂಡಿರದ ಅಮೂಲ್ಯವಾದ ಮುತ್ತನ್ನು , ನಾನು ತಂದು ಕೊಡುತ್ತೇನೆ . ನನ್ನ ಗೆಳೆಯನನ್ನು ಬಿಟ್ಟು ಬಿಡು ಎಂದಿತು. ಬೇಟೆಗಾರ ಒಪ್ಪಿದ. ಮೀನು ನೀರಿನಾಳಕ್ಕೆ ಹೋಗಿ ಒಂದು ಮುತ್ತನ್ನು ಕಚ್ಚಿ ತಂದು ಅವನ ಕೈಯ್ಯಲ್ಲಿಟ್ಟಿತು. ಬೇಟೆಗಾರ ನೋಡಿದವನೇ ಕಣ್ಣರಳಿಸಿದ. ಇಂಥ ಸುಂದರ ಮುತ್ತನ್ನು , ಅವನೆಂದೂ ಕಂಡಿರಲಿಲ್ಲ. ಅದರ ಬೆಲೆ ಅಂದಾಜಿಸಿದ. ಅದೇ ಗುಂಗಿನಲ್ಲಿ , ನವಿಲನ್ನು ಬಿಡುಗಡೆಗೊಳಿಸಿದ. ನವಿಲು ಮತ್ತೆ ಮರದ ಮೇಲಕ್ಕೆ ಹಾರಿತು.
ಮರುದಿನ ಬೇಟೆಗಾರ ಪುನಃ ಬಂದ. ಅವನ ಕಣ್ಣುಗಳಲ್ಲಿ ದುರಾಸೆ ಕುಣಿಯುತ್ತಿತ್ತು. ಮೀನಿಗೆ ಕೂಡಲೇ ಗೊತ್ತಾಯಿತು. ಮೀನನ್ನು ನೋಡಿದವನೇ , “ಒಂಟಿ ಮುತ್ತಿಗೆ ಅಷ್ಟೇನೂ ಬೆಲೆ ಇಲ್ಲವಂತೆ, ಜೋಡಿಗೆ ಬೆಲೆ ಎಂದು ಅಕ್ಕಸಾಲಿಗ ಹೇಳಿದ . ಹಾಗಾಗಿ ನೀನು ಇಂಥದೇ ಇನ್ನೊಂದು ಮುತ್ತು ತಂದು ಕೊಟ್ಟರೆ ನಿನ್ನ ಗೆಳೆಯನ ತಂಟೆಗೆ, ನಾನು ಇನ್ನೆಂದೂ ಬರುವುದಿಲ್ಲ , ಮಾತು ಕೊಡುತ್ತೇನೆ” ಎಂದ.
ಜಾಣ ಮೀನು, ತಕ್ಷಣವೇ, ಅಂಥದ್ದೇ ಇನ್ನೊಂದು ಮುತ್ತು ಹುಡುಕಬೇಕಾದರೆ, ನಿನ್ನ ಕೈಲಿರುವುದನ್ನು ನನಗೆ ಕೊಡಬೇಕು . ನಾನು ಅಂಥದ್ದೇ ಹುಡುಕಿ ತರುತ್ತೇನೆ ಎಂದು ಹೇಳಿ, ಬಂಡೆಯ ಮೇಲೆ ಮುತ್ತನ್ನಿಡಲು ಹೇಳಿತು. ಬೇಟೆಗಾರ ಹಾಗೆಯೇ ಮಾಡಿದ. ಮೀನು ಹಾರಿ ಮುತ್ತನ್ನು ಕಚ್ಚಿಕೊಂಡು ನೀರಿನೊಳಗಿಳಿಯಿತು. ಅಲ್ಲಿಂದಲೇ ತಲೆ ಎತ್ತಿ, ಬೇಟೆಗಾರನೇ, ನನ್ನ ಗೆಳೆಯ, ನಿನ್ನ ಕೈಗೆಟುಕದಷ್ಟು ದೂರ ನಿನ್ನೆಯೇ ಹೊರಟು ಹೋಗಿದ್ದಾನೆ. ನೀನು ಮರಳಿ ಬಂದೇ ಬರುತ್ತೀಯ ಎಂದು ನಮಗೆ ತಿಳಿದಿತ್ತು. ನೀವು *ಮನುಷ್ಯರ ಸ್ವಭಾವವೇ ಹೀಗೆ. ತೃಪ್ತಿ ಎಂಬುದು ನಿಮಗಿಲ್ಲ. ಇದಿದ್ದರೆ ಅದು, ಅದಿದ್ದರೆ ಮತ್ತೊಂದು, ಹೀಗೆ ಬೇಕುಗಳ ಸಂತೆಯಲ್ಲಿ ಕಳೆದು ಹೋಗುತ್ತೀರಿ. ಆದ್ದರಿಂದಲೇ ನೀವು ದುಃಖಿಗಳು*.
*ತೃಪ್ತಿಯೇ ಸುಖದ ಮೊದಲ ಹೆಜ್ಜೆ . ಆದರೆ ನಿಮಗದರ ಅರಿವು ಇಲ್ಲವೇ ಇಲ್ಲ*.
ಅತಿಯಾಸೆಯಿಂದ ನಿನಗೆ ಸಿಕ್ಕಿದ್ದನ್ನೂ ಕಳೆದುಕೊಂಡೆ. ಹೋಗು , ಹೊರಟುಹೋಗು ಎನ್ನುತ್ತ ನೀರಿನಲ್ಲಿ ಮುಳುಗಿ ಮಾಯವಾಯಿತು.
ಈ ಕಥೆಯ ಸಾರ ಎಷ್ಟು ಸತ್ಯ ಅಲ್ವಾ ?? ಈ ಕಥೆಗೂ ನಮ್ಮ ಬದುಕಿಗೂ ಬಹಳವೇ ಸಾಮ್ಯತೆ ಇದೆ ಅಲ್ವಾ ?
*ನಾವೆಲ್ಲರೂ ನಮ್ಮ ಜೀವನದಲ್ಲಿ , ಅಮೂಲ್ಯವಾದ ಪ್ರತಿಕ್ಷಣವನ್ನು , ಸಂಭ್ರಮಿಸುವುದನ್ನೇ ಮರೆತಿರುತ್ತೇವೆ. ಯೌವನ, ವಯಸ್ಕ, ಈ ಹಂತಗಳನ್ನು ಆನಂದಿಸದೆ, ದಾಟುತ್ತೇವೆ. ಆಮೇಲೆ ಹಳಹಳಿಸುತ್ತೇವೆ.*
ಬಾಲ್ಯದಲ್ಲಿ ಸಣ್ಣಪುಟ್ಟ ವಿಷಯಕ್ಕೂ, ಸಂಭ್ರಮಿಸುತ್ತಿದ್ದವರು, ಬೆಳೆಯುತ್ತಾ ಹೋದಂತೆ, ಆ ಖುಷಿಯನ್ನು ಮೂಲೆಗೆ ತಳ್ಳಿ, ಕೈಕಾಲು ಕಟ್ಟಿ ಕೂರಿಸಿ ಬಿಡುತ್ತೇವೆ.
ಆಗ , ಒಂದು ರೂಪಾಯಿಯ ಮಿಠಾಯಿ / ಪೆಪ್ಪರಮಿಂಟಿಗೂ ಸಂಭ್ರಮಿಸುತ್ತಿದ್ದವರು, ಸಾವಿರಾರು ರೂಪಾಯಿ ಖರ್ಚು ಮಾಡಿ, ಸ್ಟಾರ್ ಹೋಟೆಲಿನಲ್ಲಿ ಉಂಡರೂ , ಈಗ ಖುಷಿ ಪಡುವುದಿಲ್ಲ.
ಮೊದಲ ಬಾರಿ ಸೈಕಲನ್ನು ಬಿದ್ದು ಎದ್ದು ಓಡಿಸಿದ ಖುಷಿ , ಇಂದು ಲಕ್ಷಗಟ್ಟಲೇ ಸುರಿದು ಕೊಂಡ ಕಾರಿನಲ್ಲಿ ಕಾಣುವುದಿಲ್ಲ. ಆಕಾಶದಲ್ಲಿ ಹಾರಾಡುವ ವಿಮಾನ ನೋಡಿ, ಕೈಬೀಸಿ ಟಾಟಾ ಮಾಡುತ್ತಿದ್ದ ಖುಷಿ, ಇಂದು ವಿಮಾನ ದಲ್ಲಿಯೇ ಪ್ರಯಾಣಿಸಿದರೂ ತೃಪ್ತಿ ಇಲ್ಲ.
ಬಾಲ್ಯದ ಮರಕೋತಿ ,ಕುಂಟೆಬಿಲ್ಲೆ , ಕಣ್ಣಾಮುಚ್ಚಾಲೆ, ಲಗೋರಿ ಆಟಗಳು, ಸೈಕಲ್ ತುಳಿಯುವುದನ್ನು ಎದ್ದು , ಬಿದ್ದು , ಕಲಿತದ್ದು , ಪರೀಕ್ಷೆಯಲ್ಲಿ ಒಂದು ಮಾರ್ಕ್ಸ್ ಜಾಸ್ತಿ ತೆಗೆದುಕೊಂಡದ್ದು , ಅದಕ್ಕಾಗಿ ಸಂಭ್ರಮಿಸಿದ್ದು , ಗದ್ದೆ ತೋಟಗಳಲ್ಲಿ ಸುತ್ತಾಡಿದ್ದು , ಹಣ್ಣು ಕದ್ದು ತಿಂದಿದ್ದು , ಶಾಲಾ ಕಾಲೇಜು ಸ್ಪರ್ಧೆಗಳಲ್ಲಿ, ಬಹುಮಾನ, ಪ್ರಶಸ್ತಿ ಗಳಿಸಿದ್ದು , ಜೀವನದ ಸಂಗಾತಿಯೇ ಗೆಳೆಯನಾಗಿದ್ದು , ತೊಟ್ಟಿಲು ಕಟ್ಟಿದ್ದು , ಮಗುವಿನ ನಗುವಿನಲ್ಲಿ ಲೋಕವನ್ನೇ ಮರೆತಿದ್ದು , ಗುರು ಹಿರಿಯರ ಆಶೀರ್ವಾದ ಪಡೆದಿದ್ದು , ಪ್ರೀತಿ ಪಾತ್ರರ ಮೆಚ್ಚುಗೆಯ ಮಾತುಗಳಿಂದ , ಅವರ ಅಪ್ಪುಗೆಯಿಂದ ಅರಳಿದ್ದು , ಎಲ್ಲವೂ ಸಂಭ್ರಮಗಳೇ.. ಕೆಲವು ಸಣ್ಣ ಸಂಭ್ರಮಗಳಾದರೆ , ಮತ್ತೊಂದಿಷ್ಟು ದೊಡ್ಡ ಪ್ರಮಾಣದ ಸಂಭ್ರಮಗಳು.
ಸೈಟು ಖರೀದಿಸಿದ್ದು , ಮನೆ ಕಟ್ಟಿಸಿದ್ದು , ಹೊಸ ಗಾಡಿ ಕೊಂಡದ್ದು , ಬರಹಗಳನ್ನು ಬರೆದದ್ದು , ಕಥಾಗುಚ್ಛದಲ್ಲಿ ಹಾಕಿದ್ದು , ಪತ್ರಿಕೆಗಳಿಗೆ ಕಳಿಸಿದ್ದು , ಅವು ಮೆಚ್ಚುಗೆ ಗಳಿಸಿದ್ದು , ಎಲ್ಲವೂ ದೊಡ್ಡ ಸಂಭ್ರಮಗಳೇ. ಆ ಕ್ಷಣವನ್ನು ಆನಂದಿಸಲೇ ಬೇಕಾದ್ದು. ಆದರೆ, ನಾವು ಆಗಲೂ, ಅಯ್ಯೋ ಬಿಡಿ, ಇದೇನು ದೊಡ್ಡ ವಿಷಯ ? ನನ್ನ ಆಸೆ ಬೇರೇನೇ ಇತ್ತು , ಎಂದು ನಮ್ಮ ಮೂಗನ್ನು ನಾವೇ ಮುರಿಯುತ್ತೇವೆ.
*ಇದಕ್ಕೆಲ್ಲ ಕಾರಣ ಏನು ?*
*ಅತಿಯಾದ ಆಸೆಯೇ, ಅಸೂಯೆಯೇ, ಅತೃಪ್ತಿಯೇ, ಆಮಿಷವೇ, ಬೇಕು ಬೇಕೆಂಬ ಹಾಹಾಕಾರವೇ ? ಅಥವಾ ಇವೆಲ್ಲದರ ಚರ್ವಿತಚರ್ವಣ ಭಾವವೇ ???*
ಒಟ್ಟಿನಲ್ಲಿ , *ನಮ್ಮೊಳಗಿರುವ ತೃಪ್ತಿಯ ಸೆಲೆಯನ್ನು , ನಾವೇ ಬತ್ತಿಸಿಕೊಂಡು , ಮತ್ತೆಲ್ಲೋ ಅದರ ಹುಡುಕಾಟದಲ್ಲಿ ನಿರತರಾಗಿರುತ್ತೇವೆ. ಅತೃಪ್ತ ಮನಸ್ಸಿಗರಾಗಿ ತೊಳಲಾಡುತ್ತಿರುತ್ತೇವೆ. ತೃಪ್ತಿ , ಎಲ್ಲಿಯಾದರೂ ಮಾರಾಟಕ್ಕಿದೆಯೇ ? ಎಂದು ಅರಸುತ್ತಿರುತ್ತೇವೆ.*
ಅದನ್ನೇ
*ಡಿ ವಿ ಜಿಯವರು ಹೇಳಿದ್ದು ,*
ಅವರೆಷ್ಟು ಧನವಂತರ್ , ಇವರೆಷ್ಟು ಬಲವಂತರ್ |
ಅವರೆಷ್ಟು ಯಶವಂತರ್ ಎನುವ ಕರುಬಿನಲಿ ||
ಭವಿಕ ನಿನಗೆಷ್ಟಿಹುದೊ ಮರೆತು ನೀಂ ಕೊರಗುವುದು |ಶಿವನಿಗೆ ಕೃತಜ್ಞತೆಯೆ ? – ಮಂಕುತಿಮ್ಮ ||
*ಅನ್ಯರು ಎಷ್ಟು ಹಣವಂತರು ? ಎಷ್ಟು ಬಲವಂತರು ? ಎಷ್ಟು ಕೀರ್ತಿವಂತರು ?* ಎಂದು
*ನಿನ್ನತನ ನೀನರಿಯದೆ ಮಾತ್ಸರ್ಯದಿಂದ ಕೊರಗಬೇಡ.*
*ಅದು ದೇವರಿಗೆ ಎಸಗುವ ಅಪಚಾರವಾದೀತು*.
💐🙏🙏🙏💐