🌻ದಿನಕ್ಕೊಂದು ಕಥೆ🌻
🌹 ಗುಹೆಯೊಂದರ ಕಥೆ 🌹
ಆ ಗುಹೆಗೆ,ಬೆಳಕಿನ ಪರಿಚಯವೇ ಇರಲಿಲ್ಲ. ಅಷ್ಟು ದಟ್ಟ ಕತ್ತಲಿಂದ ತುಂಬಿತ್ತು. ಅದು ಬೆಟ್ಟವೊಂದರ ಆಳದಲ್ಲಿ ಹುದುಗಿತ್ತು. ಒಮ್ಮೆ ಸೂರ್ಯನಿಗೆ ಅದರ ಮೇಲೆ ಕನಿಕರ ಉಂಟಾಯಿತು. ಪ್ರತಿದಿನ ಬಂದು ಆ ಗವಿಯ ಬಾಗಿಲು ತಟ್ಟುತ್ತಿದ್ದ,ಆದರೆ ಗವಿ ಅದನ್ನು ಕಿವಿಗೆ ಹಾಕಿಕೊಳ್ಳುತ್ತಲೇ ಇರಲಿಲ್ಲ.
ಒಂದು ದಿನ ಸೂರ್ಯ, ಬಹಳ ಸಿಟ್ಟಿನಿಂದ ಜೋರಾಗಿ ಬಾಗಿಲು ಬಡಿದು ,ಎಷ್ಟೋ ವರ್ಷಗಳಿಂದ ನಾನು ದಿನಾಬರುತ್ತೇನೆ ,ಅತ್ಯಂತ ಸುಂದರ ,ಬಣ್ಣಗಳ ಬೆಳಕನ್ನು ,ಆಹ್ಲಾದಕರ ಶಾಖವನ್ನು ತರುತ್ತೇನೆ,ನೀನು ನೋಡಿದರೆ ,ಯಾವಾಗಲೂ ಒಳಗೇ ಅವಿತುಕೊಂಡಿರುತ್ತೀಯ,ಅಲ್ಲೇ ಇದ್ದು ಏನು ಮಾಡುತ್ತೀಯಾ ,ಒಂದು ಸಲಕ್ಕಾದರೂ,ಕೇವಲ ಬದಲಾವಣೆಗಾಗಿ ಹೊರಗೆ ಬಂದು ನೋಡು ,ಹೊರಗೆ ಏನೆಲ್ಲಾ ಆಗುತ್ತಿದೆಯೆಂದು .ಎಂದು ಹೇಳಿದ.
ಗವಿಗೆ ಇದನ್ನೆಲ್ಲಾ ನಂಬಲು ಸಾಧ್ಯವಾಗಲಿಲ್ಲ. ಅದು ಎಂದಿಗೂ ,ಬೆಳಕು ,ಬಣ್ಣ ,ಶಾಖ ಇವುಗಳ ಬಗ್ಗೆ ಕೇಳಿದ್ದೇ ಇಲ್ಲ. ಅದು ಎಂದೆಂದೂ ಗಾಢ ಕತ್ತಲಿನಲ್ಲೇ ಇದ್ದದ್ದು. ಅದು ನಕ್ಕು ಹೇಳಿತು,ನನಗೆ ಭರವಸೆ ಇಲ್ಲ, ನೀನು ಯಾರೇ ಆಗಿದ್ದರೂ ನನ್ನನ್ನು ಮೋಸಗೊಳಿಸಲು ಪ್ರಯತ್ನಿಸ ಬೇಡಾ ,ಎಂದಿತು.
ಆದರೆ ಸೂರ್ಯ ಬಿಡಲಿಲ್ಲ, ಅದನ್ನು ಹೊರಬರುವಂತೆ ಒತ್ತಾಯಿಸಿದ.ಇದು ನಿಜವೊ ಸುಳ್ಳೋ ಎಂದು ನೋಡಲು ,ಗುಹೆ ಹೊರಬಂದಿತು,ನಿಜವಾಗಿಯೂ ಅತ್ಯದ್ಬುತವಾಗಿತ್ತು.ಶತ ,ಶತ ಮಾನಗಳಿಂದ ಗುಹೆ ಇದರಿಂದ ವಂಚಿತವಾಗಿತ್ತು.ಅದು ಸೂರ್ಯನಿಗೆ,ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿತು.
ಈಗ ಗುಹೆ ಹೇಳಿತು, ನಾನೇನೊ ನಿನ್ನ ಮಾತು ಕೇಳಿ ,ಹೊರಗೆ ಬಂದೆ,ಈಗ ನೀನು ನನ್ನ ಗಾಢವಾದ ಅಂಧಕಾರವನ್ನು ನೋಡುವಿಯಂತೆ,ಇದೂವರೆಗೂ ನೀನು ಕೂಡಾ ಅದನ್ನು ನೋಡಿಲ್ಲಾ,ಆದರೆ ನಿನಗೆ ಕೊಡಲು ,ಅಂಧಕಾರವನ್ನು ಬಿಟ್ಟು ನನ್ನ ಬಳಿ ಏನಿಲ್ಲಾ ,ನಾನು ಬೆಳಕನ್ನು ಸವಿದಂತೆ,ನೀನೂ ಅಂಧಕಾರವನ್ನು ಸವಿದು ನೋಡು ಬಾ ಎಂದು ಕರೆಯಿತು.
ಸೂರ್ಯ ಒಳಗೆ ಬಂದ ಅಲ್ಲಿ ಕತ್ತಲೆಯೇ ಇರಲಿಲ್ಲ. ಗವಿಗೆ ನಂಬಲಾಗಲಿಲ್ಲ.ಅರೆ,ಇದೇನಾಯಿತು,ಇಷ್ಟು ಹೊತ್ತು ಇದ್ದದ್ದು,ಅದೂ ಶತ ಶತ ಮಾನದಿಂದ ಇದ್ದದ್ದು,ಈಗ ಎಲ್ಲಿ ಹೋಯಿತು, ಗವಿಗೆ ನಂಬಲಾಗಲಿಲ್ಲ.
ಸೂರ್ಯ ನಕ್ಕು ಹೇಳಿದ,ನಾವಿಬ್ಬರೂ ಒಟ್ಟಿಗೆ ಇರಲಾರೆವು,ನಾನು ಇದ್ದಾಗ ಕತ್ತಲೆ ಇರಲಾರದು. ಕತ್ತಲು ನನ್ನ ಅನುಪಸ್ಥಿತಿ.
ಇದೇ ರೀತಿಯಲ್ಲಿ, ಮನುಷ್ಯ,ಪರಮಾತ್ಮ ಒಟ್ಟಿಗೆ ಇರಲಾಗವುದಿಲ್ಲ. ,ಯಾವಾಗ ನಾನು ಇರುತ್ತದೋ ಆಗ ಅಲ್ಲಿ ಪರಮಾತ್ಮನಿರುವುದಿಲ್ಲ.ಪರಮಾತ್ಮನಿದ್ದಾಗ ನಾನುವಿಗೆ ಅವಕಾಶವೇ ಇರುವುದಿಲ್ಲ.
ಮನುಷ್ಯನಲ್ಲಿ ಯಾವಾಗ ನಾನು ಎಂಬ ಅಹಂಕಾರ ಕಳೆದು ಹೋಗುವುದೋ,ಆಗ ಅಲ್ಲಿ ಪರಮಾತ್ಮನನ್ನು ಬಿಟ್ಟು ಬೇರೇನೂ ಇರುವುದಿಲ್ಲ. ಆಗ ಅವನೂ ಪರಮಾತ್ಮನೇ ಆಗುತ್ತಾನೆ. ಹೇಗೆ ಸೂರ್ಯನ ಆಗಮನವಾದಾಗ ಅಂಧಕಾರ ಇರಲು ಸಾಧ್ಯವಿಲ್ಲವೊ, ಅದೇ ರೀತಿಯಲ್ಲಿ.
ವಂದನೆಗಳೊಂದಿಗೆ,