ಒಂದು ಒಳ್ಳೆಯ ಆದರ್ಶದ ಕಥೆ
ಒಂದು ಊರಿನಲ್ಲಿ ಒಬ್ಬ ಒಳ್ಳೆಯ ಮಹಿಳೆ,
ಆ ಮಹಿಳೆ ಪ್ರತಿದಿನ ಒಂದು ವ್ರತ ಮಾಡುತ್ತಿದ್ದಳು ,ಅದು ಪ್ರತಿದಿನ ರೊಟ್ಟಿ ಮಾಡಿ ತನ್ನ ಮನೆಯ ಕಿಟಕಿ ಬಳಿ ಇಡುತ್ತಿದ್ದಳು.
ಅವಳ ಬಯಕೆ ಯಾರಾದರೂ ಅತಿಥಿಗಳು ಆ ರೊಟ್ಟಿ ತಿಂದು ತನ್ನ ಮನೆತನಕ್ಕೆ ಶುಭ ಬಯಸಲಿ ಎಂಬುದು ಆಗಿತ್ತು.
ಅವಳ ಸಾತ್ವಿಕ ಬಯಕೆಯಂತೆ
ಆ ರೊಟ್ಟಿಯನ್ನು ಒಬ್ಬ ಸಾಧು ಪ್ರತಿದಿನ ತೆಗೆದುಕೊಂಡು ಒಂದು ಮಾತು ಹೇಳಿ ಹೋಗುತ್ತಿದ್ದ .
ಆ ಮಾತು “ನೀನು ಒಳ್ಳೆಯದನ್ನು ಮಾಡಿದರೆ ನಿನಗೆ ಒಳ್ಳೆಯದು ಆಗುತ್ತದೆ , ನೀನು ಕೆಟ್ಟದ್ದನ್ನು ಮಾಡಿದರೆ ನಿನಗೆ ಕೆಟ್ಟದ್ದು ಆಗುತ್ತದೆ “ ಎಂದು.
ಆ ಮಹಿಳೆಯ ಒಬ್ಬನೇ ಮಗ ಮನೆ ಬಿಟ್ಟು ಓಡಿ ಹೋಗಿದ್ದ . ಅವನು ಬರಲಿ ಎಂದು ಇವಳು ಪ್ರತಿದಿನ ಪರಮಾತ್ಮನಲ್ಲಿ ದುಃಖಿಸಿ ಪ್ರಾರ್ಥನೆ ಮಾಡುತ್ತಿದ್ದಳು.
ಅವಳು ಪ್ರತಿದಿನ ರೊಟ್ಟಿ ಮಾಡಿ ಕೊಡುವ ವ್ರತ ಮಾತ್ರ ಯಾವುದೇ ಕಾರಣಕ್ಕೂ ಬಿಡಲಿಲ್ಲಾ .
ಪ್ರತಿದಿನ ಅದೇ ಸಾಧು ಅದೇ ಮಾತು ಹೇಳಿ ರೊಟ್ಟಿ ತೆಗೆದುಕೊಂಡು ಹೋಗುತ್ತಿದ್ದ.
ಈ ಸಾಧುವಿನ ವರ್ತನೆ ಮತ್ತು ಅವನು ಹೇಳುವ ಮಾತು ಆ ತಾಯಿಗೆ ಇಷ್ಟವಾಗದೇ, ಒಂದು ಅವಳು ನಾನು ಪ್ರತಿದಿನ ಈ ಸಾಧುವಿಗೆ ರೊಟ್ಟಿ ಕೊಟ್ಟರು ನನ್ನ ಮಗ ಮರಳಿ ಬರಲಿಲ್ಲಾ , ಮತ್ತು ಈ ಸಾಧುವೇ ಏನಾದರು ನನ್ನ ಮಗನಿಗೆ ಮಂತ್ರ ಹಾಕಿರಬಹುದೆ ಎಂಬ ನೂರಾರು ಆಲೋಚನೆ ಮಗನನ್ನು ಕಳೆದುಕೊಂಡ ಅವಳಲ್ಲಿ ಬಂದು , ಆ ದಿನ ಅವಳು ಮಾಡುವ ರೊಟ್ಟಿಯಲ್ಲಿ ವಿಷ ಬೆರೆಸಿ ಕಿಟಕಿಯ ಬಳಿ ಇಟ್ಟಳು.
ಸ್ವಲ್ಪ ಸಮಯದ ನಂತರ ಒಂದು ವರ್ಷದಿಂದ ಅತಿ ನಿಸ್ವಾರ್ಥ ಭಾವದಿಂದ ಸೇವೆ ಮಾಡಿದ ಅವಳ ಸಕಾರಾತ್ಮಕ ಮನಸ್ಸು ಹೃದಯ ಅವಳಿಗೆ ಹೇಳಿತು , ನೀನು ಮಾಡಿದ್ದು ತಪ್ಪು ಎಂದು ,ತಕ್ಷಣ ಅವಳು ಆ ವಿಷದ ರೊಟ್ಟಿ ತಂದು ಒಲೆಯಲ್ಲಿ ಹಾಕಿ ಸುಟ್ಟು ಬೇರೆ ಒಳ್ಳೆಯ ರೊಟ್ಟಿ ಮಾಡಿ ಕಿಟಕಿಯ ಬಳಿ ಇಟ್ಟಳು,
ಎಂದಿನಂತೆ ಸಾಧು ಬಂದು ರೊಟ್ಟಿ ತೆಗೆದುಕೊಂಡು ಮತ್ತೆ ಪ್ರತಿದಿನದ ಮಾತನ್ನೇ ಹೇಳಿದ, ನೀನು ಒಳ್ಳೆದಯನ್ನು ಮಾಡಿದರೆ ನಿನಗೆ ಒಳ್ಳೆಯದೇ ಆಗುತ್ತದೆ, ನೀನು ಕೆಟ್ಟದ್ದನ್ನು ಮಾಡಿದರೆ ನಿನಗೆ ಕೆಟ್ಟದ್ದೆ ಆಗುತ್ತದೆ ಎಂದು ಹೇಳಿ ಹೋದನು.
ಅವಳು ತನ್ನ ಮಗನನ್ನು ನೆನೆಸಿಕೊಂಡು ಜೋರಾಗಿ ಅತೀವ ದುಃಖದಿಂದ ಅಳುತ್ತಾ ಕುಳಿತಿರುವಾಗ ಮನೆಯ ಬಾಗಿಲು ಬಡೆಯುತ್ತಿರುವ ಶಬ್ದ ಕೇಳಿಸಿ ಬಾಗಿಲು ತೆರೆದು ನೋಡುತ್ತಾಳೆ ,ಆಶ್ಚರ್ಯ ಕಳೆದು ಹೋದ ತನ್ನ ಮಗ ಪ್ರತ್ಯಕ್ಷ ಆಗಿದ್ದಾನೆ,
ಒಂದು ಕಡೆ ಆನಂದ ಮತ್ತೆ ದುಃಖ ,ಕಾರಣ ಅವನು ಸೊರಗಿ ಹೋಗಿದ್ದ ,ಅವನ ಬಟ್ಟೆಗಳು ಹರಿದು ಹೋಗಿದ್ದವು, ಅವನು ಊಟ ಮಾಡದೇ ಎಷ್ಟೋ ದಿನ ಆಗಿತ್ತು ಎಂಬುದನ್ನು ಅವನನ್ನು ನೋಡಿ ತಿಳಿದುಕೊಂಡು ,ಅವನ ತಾಯಿ ಅವನ ಕಥೆ ಕೇಳಲು ಆರಂಭ ಮಾಡಿದಳು.
ಅವನು ತಾನು ಮಾಡಿದ ತಪ್ಪನ್ನು ನೆನೆದು ಬೇಸರದಿಂದ ತನ್ನ ಎಲ್ಲಾ ಕಥೆ ಹೇಳಿ ಕೊನೆಗೆ ಹೇಳಿದ , ಅಮ್ಮಾ ಇಂದು ಬೆಳಿಗ್ಗೆ ನಿನ್ನನ್ನು ನೋಡಲೇಬೇಕು ಎಂಬ ಹಂಬಲದಿಂದ ನಾನು ಓಡಿ ಬರುತ್ತಿರುವಾಗ ಸುಸ್ತಾಗಿ ಬಿದ್ದುಬಿಟ್ಟೆ , 3 ದಿನದಿಂದ ಊಟ ಮಾಡಿರಲಿಲ್ಲಾ. ಆಗ ನಾನು ಬಿದ್ದದ್ದನ್ನು ನೋಡಿದ ಒಬ್ಬ ಸಾಧುಗಳು ನನಗೆ ತಮ್ಮ ಬಳಿ ಇರುವ ರೊಟ್ಟಿ ಕೊಟ್ಟು ನೀರು ಕೊಟ್ಟು ಹೋದರು,
ಹೋಗುತ್ತಾ ಒಂದು ಮಾತು ಹೇಳಿದರು,
“ನೀನು ಬೇರೆಯವರಿಗೆ ಒಳ್ಳೆಯದನ್ನು ಮಾಡಿದರೆ ನಿನಗೆ ಒಳ್ಳೆಯದಾಗುತ್ತದೆ,
ನೀನು ಬೇರೆಯವರಿಗೆ ಕೆಟ್ಟದ್ದನ್ನು ಮಾಡಿದರೆ ನಿನಗೆ ಕೆಟ್ಟದ್ದು ಆಗುತ್ತದೆ.”
ಅವಳಿಗೆ ಅದನ್ನು ಕೇಳಿ ಆಶ್ಚರ್ಯ ಆಯಿತು.
ಆ ಸಾಧು ನಮ್ಮ ಸಾಧುವೆ, ನಾನು ಇಂದು ನನ್ನ ದುಷ್ಟ ಬುದ್ದಿಯ ಮಾತು ಕೇಳಿ ವಿಷದ ರೊಟ್ಟಿ ಕೊಟ್ಟಿದ್ದರೆ ನನ್ನ ಮಗನೆ ಅದನ್ನು ತಿಂದು ಸತ್ತುಹೋಗುತ್ತಿದ್ದನಲ್ಲಾ,
ದೇವರೇ ನಾನು ಪ್ರತಿದಿನ ಒಳ್ಳೆಯ ಭಾವದಿಂದ ಅಭ್ಯಾಸ ಬಲದಿಂದ ಒಳ್ಳೆಯ ರೊಟ್ಟಿ ಕೊಡುವ ಪುಣ್ಯದಿಂದ ನನ್ನ ಮಗನೆ ಬದುಕಿದ ಎಂದು ಆನಂದ ಪಟ್ಟಳು.
ಕಥೆಯ ನೀತಿ :
ಒಳ್ಳೆಯದನ್ನು ಪ್ರತಿದಿನ ಎಷ್ಟೇ ಕಷ್ಟ ಬಂದರು ನಂಬಿಕೆ ಇಟ್ಟು ಮಾಡುತ್ತಾ ಹೋದರೆ , ಆ ಒಳ್ಳೆಯದನ್ನು ಮಾಡುವ ಗುಣವೇ ,ಅಭ್ಯಾಸವೆ ನಮ್ಮನ್ನು ಕೆಟ್ಟದ್ದನ್ನು ಮಾಡುವದರಿಂದ ತಡೆಯುತ್ತದೆ.