ಹುಲಿಗೆಮ್ಮ ದೇವಿ ದೇವಸ್ಥಾನ ಹುಲಿಗಿ ಕೊಪ್ಪಳ…!
ಶ್ರೀ ಹುಲಿಗೆಮ್ಮ ದೇವಿ ಅಥವಾ ಹುಲಿಗೆಮ್ಮ ಎಂದು ಕರೆಯಲಾಗುವ ಈ ದೇವಸ್ಥಾನ ಇರುವುದು ಉತ್ತರ ಕರ್ನಾಟಕದ ಕೊಪ್ಪಳ ತಾಲ್ಲೂಕಿನ, ತುಂಗ ಭದ್ರಾ ನದಿಯ ದಡದ ಮೇಲಿರುವ ಹುಲಿಗಿ ಎನ್ನುವ ಪಟ್ಟಣದಲ್ಲಿ.
ಹುಲಗಿ ಕ್ಷೇತ್ರ ಎಂಟುನೂರು ವರ್ಷಗಳಿಂದಲೂ ಜನರನ್ನು ಸೆಳೆಯುತ್ತಿದೆ. ಈ ಕ್ಷೇತ್ರದ ಪೂರ್ವಕ್ಕೆ ತುಂಗಭದ್ರಾ ಹರಿಯುತ್ತದೆ. ನದಿಯ ದಂಡೆಯಲ್ಲಿ ಶ್ರಿ ಸೋಮೇಶ್ವರ ಲಿಂಗವಿದೆ. ಅಲ್ಲಿಯೂ ವಿಶೇಷ ಪೂಜೆಗಳು ನಡೆಯುತ್ತದೆ.
ಈ ಸ್ಥಳವನ್ನು ’ವ್ಯಾಘ್ರಪುರಿ’ ಎಂಬ ಸಂಸ್ಕೃದಲ್ಲೂ ಕರೆಯುತ್ತಾರೆ. ಇಲ್ಲಿರುವ ಮೂಲ ದೇವರೆಂದರೆ ದುರ್ಗಾ ದೇವಿ ಸ್ವರೂಪಿಯಾದ ಹುಲಿಗೆಮ್ಮ ದೇವಿ ಹಾಗು ಈ ದೇವಸ್ಥಾನದಲ್ಲೇ ಸೋಮನಾಥನ ದೇವಸ್ಥಾನ ಕೂಡ ಇದೆ.
ಈ ದೇವಸ್ಥಾನದಲ್ಲಿ ಈಶ್ವರ ಸೋಮೇಶ್ವರನ ರೂಪದಲ್ಲಿ ನೆಲೆಸಿದ್ದಾನೆ.
ಸುಮಾರು 13 ನೆಯ ಶತಮಾನಕ್ಕೆ ಸೇರಿದ ಈ ದೇವಸ್ಥಾನದಲ್ಲಿ ನಾಗಜೋಗಿ ಹಾಗು ಬಸವಜೋಗಿ ಎಂಬ ಇಬ್ಬರು ಭಕ್ತರ ಆಸೆಗಳನ್ನು ಈಡೇರಿಸಲು ರೇಣುಕಾಂಬ ದೇವಿಯೇ ಹುಲಿಗೆಮ್ಮಳಾಗಿ ನೆಲೆಸಿದ್ದಾಳೆ.
ಹಲವಾರು ವರ್ಷಗಳ ಹಿಂದೆ ಹುಲಗಿ ಎನ್ನುವ ಸ್ಥಳದಲ್ಲಿ ನಾಗಜೋಗಿ ಹಾಗೂ ಬಸವ ಜೋಗಿ ಎನ್ನುವ ಸಹೋದರರಿದ್ದರು. ಇವರು ಸವದತ್ತಿ ಯಲ್ಲಮ್ಮನ ಭಕ್ತರಾಗಿದ್ದರಿಂದ ಪ್ರತಿ ಹುಣ್ಣಿಮೆಗೆ ಸವದತ್ತಿಗೆ ಹೋಗಿ ತಾಯಿಯ ದರ್ಶನ ಪಡೆಯುತ್ತಿದ್ದರು. ಒಮ್ಮೆ ಸವದತ್ತಿಗೆ ಹೋಗುವಾಗ ದಾರಿ ಮಧ್ಯೆ ಜೋರಾಗಿ ಮಳೆ ಸುರಿಯುತ್ತದೆ. ಹಾಗಾಗಿ ಹುಣ್ಣಿಮೆಯ ದಿನ ಸವದತ್ತಿ ಯಲ್ಲಮ್ಮನ ದರ್ಶನ ಭಾಗ್ಯ ಪಡೆಯಲು ಸಾಧ್ಯವಾಗೋದಿಲ್ಲ. ಆಗ ಆ ಸಹೋದರರು ದಾರಿಮಧ್ಯೆಯೇ ಯಲ್ಲಮ್ಮನ ಧ್ಯಾನ ಮಾಡುತ್ತಾರೆ. ಅವರ ಭಕ್ತಿಗೆ ಮೆಚ್ಚಿ ಯಲ್ಲಮ್ಮ ಪ್ರತ್ಯಕ್ಷಳಾಗಿ. ಇನ್ನು ಮುಂದೆ ಸವದತ್ತಿಗೆ ಬರುವುದು ಬೇಡ ನಿಮ್ಮ ಊರಲ್ಲೇ ನೆಲೆಸುವುದಾಗಿ ಅಭಯ ನೀಡುತ್ತಾಳೆ.
ಹೀಗೆ ಹುಲಿಗಿಯಲ್ಲಿ ಹುಲಿಗೆಮ್ಮನಾಗಿ ನೆಲೆಸಿದಳು . ಹಾಗಾಗಿ ಅದು ಹುಲಿಗಿ ಕ್ಷೇತ್ರವಾಗಿದೆ. ಹುಲಿಗೆಮ್ಮನ ದೇವಸ್ಥಾನದ ಮುಂದೆ ಮಾತಂಗಿ, ಪರಶುರಾಮ, ಸುಬ್ರಹ್ಮಣ್ಯ, ಪಾರ್ವತಿ, ಗಣಪತಿ, ನವಗ್ರಹಗಳ ಗುಡಿಗಳಿವೆ.
ದೇವಸ್ಥಾನದಲ್ಲಿ ಇರುವ ಕೆತ್ತನೆಯ ಪ್ರಕಾರ ಈ ದೇವಸ್ಥಾನವನ್ನು ಚತುರ್ವೇದಿ ಭಟ್ಟರಿಗೆ ಒಬ್ಬ ಚಾಲುಕ್ಯ ರಾಜನಾದ ವಿಕ್ರಮಾದಿತ್ಯ VI ಉಡುಗೊರೆಯಾಗಿ ನೀಡಿದ್ದ. ದೇವಸ್ಥಾನದ ಮುಂದೆ 25 ಅಡಿ ಎತ್ತರದ ಧ್ವಜ ಸ್ಥಂಬವಿದ್ದು ಅದರ ಮುಂದೆ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ಪ್ರತಿವರ್ಷವು ಭರತ ಹುಣ್ಣಿಮೆಯ ಒಂಭತ್ತು ದಿನಗಳ ನಂತರ ಇಲ್ಲಿ ದೊಡ್ಡ ಜಾತ್ರೆ ನಡೆಸಲಾಗುತ್ತದೆ.
ಪ್ರತಿ ಮಂಗಳವಾರ ಹಾಗು ಶುಕ್ರವಾರ ದೇವಿಗೆ ವಿಶೇಷ ಪೂಜೆಗಳು ನಡೆಯುವುದರಿಂದ ಅಂದಿನ ದಿನ ಜನ ಸಂದಡಿ ಕೂಡ ಹೆಚ್ಚಾಗಿರುತದೆ.
Huligemma Devi Temple Koppal District
Address: 884V+2R4, Temple Road, Munirabad Rural, Karnataka 583234
Location: https://goo.gl/maps/TPoqQPS8jTa6FEuZ6