ಭರತ ಹುಣ್ಣಿಮೆ ದಿನ ಸವದತ್ತಿ ಯಲ್ಲಮ್ಮನ ಜಾತ್ರೆ
ಹುಬ್ಬಳ್ಳಿ,
ರಾಜ್ಯದಲ್ಲಿನ ಪ್ರಮುಖ ಸುಕ್ಷೇತ್ರಗಳಲ್ಲೊಂದಾದ ಸವದತ್ತಿ ಯಲ್ಲಮ್ಮನ ಜಾತ್ರೆ ಬನದ ಹುಣ್ಣಿಮೆ ಪ್ರಯುಕ್ತ ವಿಜೃಂಭಣೆಯಿಂದ ಜರುಗಲಿದೆ. ಈ ಹುಣ್ಣಿಮೆಯಿಂದ ಆರಂಭವಾದ ಜಾತ್ರೆ ಮುಂದಿನ ಭಾರತ ಹುಣ್ಣಿಮೆಯವರೆಗೆ ತಿಂಗಳ ಪರ್ಯಂತ ನಡೆಯುವುದು ವಿಶೇಷವಾಗಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದ ಸಪ್ತಕೊಳ್ಳಗಳಲ್ಲಿ ನೆಲೆಸಿರುವ ರೇಣುಕಾ ದೇವಿಯ ಖ್ಯಾತಿ ಅಪಾರವಾದದ್ದು.
ತಲತಲಾಂತರದಿಂದ ಕ್ಷೇತ್ರ ಜಾಗೃತ ಸ್ಥಾನವಾಗಿದೆ. ಸಪ್ತಕೊಳ್ಳ, ಸಪ್ತಗುಡ್ಡ, ಸಪ್ತ ದೇವಸ್ಥಾನ ಹೊಂದಿರುವ ತಾಣವಿದು. ಈ ಕಾರಣಕ್ಕಾಗಿ ಏಳುಕೊಳ್ಳದ ಯಲ್ಲಮ್ಮದೇವಿ ಎನ್ನುವ ಪ್ರತೀತಿ ಇದಕ್ಕಿದೆ. ಸರ್ವ ಮತಗಳ ಭಕ್ತರು ಯಲ್ಲಮ್ಮದೇವಿ ಆರಾಧಕರು. ಇಲ್ಲಿ ಹುಣ್ಣಿಮೆ ದಿನ ಮಾತ್ರ ಜಾತ್ರೆ ಜರುಗಲಿದೆ.
ಪ್ರತಿ ಶುಕ್ರವಾರ, ಮಂಗಳವಾರ ಮತ್ತು ಹುಣ್ಣಿಮೆಗಳಂದು ಜಾತ್ರೆ ನಡೆಯುತ್ತದೆ. ಭಕ್ತರು ದೇವಿ ದರ್ಶನ ಪಡೆಯುವ ಮೊದಲು ಎಣ್ಣೆ ಹೊಂಡಕ್ಕೆ ಹೋಗಿ ಅಲ್ಲಿ ಹರಿಯುವ ನೀರಿನಿಂದ ದೈಹಿಕ ಕ್ರಿಯೆಗಳನ್ನು ಮುಗಿಸಿ ನಂತರ ತೀರ್ಥರೂಪದಲ್ಲಿ ಎಣ್ಣೆ ಹೊಂಡದ ಜಲ ಸೇವಿಸುತ್ತಾರೆ.
ಕ್ಷೇತ್ರ ಮಹಿಮೆ:
ಎಣ್ಣೆಹೊಂಡ ಬತ್ತದೆ ಝರಿಯಾಗಿ ಕಲ್ಲು ಸಂದುಗಳಲ್ಲಿ ಹರಿದು ಬಂದು ಲಕ್ಷಾಂತರ ಭಕ್ತರನ್ನು ಅಚ್ಚರಿಗೊಳಿಸುತ್ತದೆ. ಕ್ರೋಧ, ತಾಳ್ಮೆ, ತಪಃ ಶಕ್ತಿಗಳ ತ್ರೀವೇಣಿ ಸಂಗಮವಾದ ಮಹಾಮುನಿ ಜಮದಗ್ನಿ ಪರಮವೀರ ಪರಶುರಾಮ, ಎಲ್ಲಮ್ಮನ ತೊಂದರೆಗಳಿಗೆ ಸಹಾಯ ಹಸ್ತ ನೀಡಿದ ಮಾತಂಗಿ ಗುಡಿ, ಏಕನಾಥ, ಜೋಗಿನಾಥ ಮತ್ತು ಇವರ ಗುರುಗಳಾದ ಭೋರಕನಾಥರ ದೇವಸ್ಥಾನ ಪರಶುರಾಮನಿಗೆ ಪರಶು ನೀಡಿದ ಗಣಪತಿ ದೇವಸ್ಥಾನ ಮತ್ತು ಮಲ್ಲಿಕಾರ್ಜುನ ದೇವಾಲಯಗಳು ಇಲ್ಲಿದ್ದು, ಚರಿತ್ರೆಗೆ ಆಧಾರವಾಗಿವೆ.
ಬನದ ಹುಣ್ಣಿಮೆಯಂದು ಇಲ್ಲಿ ನಡೆಯುವ ದೇವಿ ಜಾತ್ರೆಗೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಂದ ಅಸಂಖ್ಯ ಭಕ್ತರು ಆಗಮಿಸುತ್ತಾರೆ. ಕ್ಷೇತ್ರದುದ್ದಕ್ಕೂ ಗುಡ್ಡಕ್ಕೆ ಬಂದ ಭಕ್ತರು ದೇವಿಯನ್ನು ಹೊತ್ತು ಜಯ ಘೋಷ ಮಾಡುತ್ತ ಬರುವ ಭಕ್ತರ ದಂಡನ್ನು ಕಾಣಬಹುದು. ಗ್ರಾಮೀಣ ಜನತೆ ತಮ್ಮ ಸಂಪ್ರದಾಯದಂತೆ ಈಗಲೂ ಚಕ್ಕಡಿಗೆ ಹೂಡಿದ ಎತ್ತುಗಳನ್ನೇ ಕಾಣಬಹುದು ಎನ್ನುತ್ತಾರೆ ಮಧುಕರ ಸು. ದೊಡಮನಿ.
ದೇವಿಗೆ ಭಕ್ತರು ಪಂಚ ಭಕ್ಷ್ಯ ಪಕ್ವಾನ್ನದ ನೈವೇದ್ಯ ಮಾಡುತ್ತಾರೆ. ತಾವಿಳಿದ ಸ್ಥಳದಲ್ಲಿ ಮೂರು ಕಲ್ಲುಗಳನ್ನು ಇಟ್ಟು ಒಲೆ ಹೂಡಿ ಹೆಂಗಳೆಯರು ಕಡಬು, ಹೋಳಿಗೆ ಮಾಡುವ ದೃಶ್ಯ ಎಲ್ಲೆಡೆ ಕಂಡು ಬರುತ್ತದೆ.
ವರ್ಷಗಳುರುಳಿದಂತೆ ಈ ಜಾತ್ರೆ ಹೆಚ್ಚು ಜನಪ್ರಿಯತೆ ಪಡೆಯುತ್ತ ದೇವಿ ಯಲ್ಲಮ್ಮ ಎಲ್ಲರ ಅಮ್ಮಳಾಗಿ ಪ್ರಸಿದ್ಧಿ ಗಳಿಸುತ್ತಿದ್ದಾಳೆ.