ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶಿರಸಿಯ ಮಾರಿ ಜಾತ್ರೆಯ ಇತಿಹಾಸ

ಶಿರಸಿಯ ಮಾರಿ ಜಾತ್ರೆಯ ಕುರಿತು ಒಂದಿಷ್ಟು…!

ಶಿರಿಯೂರು,ಶಿರೀಷಪುರ ಪ್ರಸ್ತುತದಲ್ಲಿ ಶಿರಸಿ ಎಂದು ಕರೆಯಲ್ಪಡುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರದೇಶದಲ್ಲೀಗ ಮಾರಿಜಾತ್ರೆಯ ಸಂಭ್ರಮ.. ನಿಜ ರಾಜ್ಯದ ಅತ್ಯಂತ ಪ್ರಸಿದ್ಧ ಜಾತ್ರೆ “ಶಿರಸಿ ಜಾತ್ರೆ” .. ಈ ಸಂದರ್ಭದಲ್ಲಿ ಸ್ನೇಹದ ಅಪೇಕ್ಷೆಯ ಮೇರೆಗೆ ಈ ಕುರಿತಾದ ಒಂದಷ್ಟು ವಿಚಾರಗಳು ತಮಗಾಗಿ..
ಶಿರಸಿಗೆ ಒಂದು ಸಾವಿರಕ್ಕೂ ಹೆಚ್ಚು ವರ್ಷಗಳ ಇತುಹಾಸವಿದೆ.ತಮಡಿ ಕಲ್ಲಾಳ ಶಿಲಾ ಶಾಸನದ ಪ್ರಕಾರ ಹಿಂದೆ ಇದು ( ೧೨ ನೇ ಶತಮಾನದಲ್ಲಿ) ಶಿರಿಯೂರು ಎಂದು ಕರೆಯಲ್ಪಡುತ್ತಿತ್ತು..ಆದರೆ ಕ್ರಿ.೧೭ ನೇ ಶತಮಾನದ ಆರಂಭದವರೆಗೂ ಇದೊಂದು ಕುಗ್ರಾಮ,೧೬೦೨ ರಿಂದ ೧೬೧೦ ರ ಮಧ್ಯ ಭಾಗದಲ್ಲಿ ಸೋದೆಯ ಅರಸನಾಗಿದ್ದ ರಾಮಚಂದ್ರ ನಾಯಕನು ಶಿರಸಿಯಲ್ಲಿ ಅಗಲವಾದ ರಸ್ತೆಗಳು,ಕೋಟೆ,ಗಣಪತಿ ದೇವಸ್ಥಾನ ( ದೊಡ್ಡಗಣಪತಿ) ವೀರಭದ್ರ ದೇವಸ್ಥಾನ ( ವೀರಭದ್ರ ಗಲ್ಲಿ) ಜೈನ ಬಸದಿಗಳು,ಕೆರೆಗಳನ್ನೆಲ್ಲ ನಿರ್ಮಿಸಿ ಕುಗ್ರಾಮವಾಗಿದ್ದ ಶಿರೀಷಪುರವನ್ನ ಪಟ್ಟಣವಾಗಿಸಿ ಇದಕ್ಕೆ ತನ್ನ ಪತ್ನಿಯ ಹೆಸರನ್ನೇ ಇಟ್ಟು ಚೆನ್ನಪಟ್ಟಣವೆಂದು ಕರೆದ.ಹೀಗಾಗಿಯೇ ನಾನು ರಾಮಚಂದ್ರ ನಾಯಕನನ್ನು ಶಿರಸಿಯ ಸ್ಥಾಪಕನೆಂದು ಕರೆದದ್ದು ಮತ್ತು ಆತನ‌ಪುತ್ಥಳಿಯೊಂದನ್ನು ಶಿರಸಿಯಲ್ಲಿ ನಿರ್ಮಿಸುವ ಪ್ರಯತ್ನಕ್ಕೆ ಮುಂದಾಗಿರುವುದು..ಮಾರಿಕಾಂಬಾ ದೇವಾಲಯದ ಚರಿತ್ರಯನ್ನ ಅಭ್ಯಸಿಸಿದಾಗ ಜಾನಪದ ಆಕರಗಳು‌ಮಾತ್ರ ಸಹಕಾರಿಯಾಗಿ ಸಿಗುತ್ತದೆ.ಖೈಪಿಯತ್ತುಗಳೂ ಸಹಕಾರಿಯಾಗಿವೆ.ಈ ಕುರಿತು ಭಿನ್ನ ಅಭಿಪ್ರಾಯಗಳಿವೆ ಮೊದಲನೇಯದಾಗಿ ಕೆಲವು ದಾಖಲೆಗಳು ತಿಳಿಸುವಂತೆ ೧೮ ನೇ ಶತಮಾನದ ಮಧ್ಯಭಾಗದಲ್ಲಿ ಶಿರಸಿಯ ಕೆರೆಯೊಂದರಲ್ಲಿ ದೊರಕಿದ ದೇವಿಯ ಮೂರ್ತಿಯನ್ನು ಆಗಿನ ಆ ಪ್ರದೇಶದ ಅರಸನಾಗಿದ್ದ ಸೋದೆಯ ಸದಾಶಿವರಾಯನಿಗೆ ತೋರಿಸಿ ಇದನ್ನು ಗ್ರಾಮದೇವತೆಯಾಗಿ ಪ್ರತಿಷ್ಠಾಪಿಸಲು ಅನುಮತಿ ಕೋರಿದಾಗ ಆತ ಒಪ್ಪಿ ದೇವಿಯನ್ನು ಪ್ರತಿಷ್ಠಾಪಿಸಿ ಗರ್ಭಗುಡಿಯನ್ನ ನಿರ್ಮಿಸಿದ.ಇನ್ನೊಂದು ದಾಖಲೆಯಾದ ಅಸಾದಿಯ ಜಾನಪದ ಹಾಡುಗಳನ್ನು ಅಭ್ಯಸಿಸಿದರೆ ದೇವಿಯ ಗುಡಿಯ ನಿರ್ಮಾಣಕ್ಕೆ ಅನೇಕರು ಬಂಗಾರದ ವರಾಹಗಳನ್ನು,ತಾಮ್ರದ ದುಗ್ಗಾಣಿಯನ್ನು,ವರಾಹ,ದುಡ್ಡು ಇತ್ಯಾದಿ ಸಹಾಯ ಮಾಡಿರುವ ಮಾಹಿತಿಗಳು ಸಿಗುತ್ತವೆ..ಇಲ್ಲಿ ಇವೆರಡೂ ದಾಖಲೆಗಳೂ ಸತ್ಯವೇ..ಇಷ್ಟಾಗಿ ೧೮೫೦ ರಲ್ಲಿ‌ಕಾರ್ತೀಕೋತ್ಸವದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಟ್ಟಿಗೆ ದೇವಾಲಯ ಸುಟ್ಟು ಹೋಯಿತು,ಆಗ ಭಕ್ತರೆಲ್ಲ ಸೇರಿ ದೇವಾಲಯವನ್ನು ಪುನರ್ನಿಮಿಸಿದರು.ಶಿರಸಿಯ ಸುತ್ತಲ ೪೪ ಗ್ರಾಮದವರು ಆಗ ಉಚಿತವಾಗಿ ಸೇವಾ ಕಾರ್ಯಮಾಡಿದ್ದರಂತೆ!ಸಾವಂತವಾಡಿಯ ಗಾವಡಿಗಳು‌ ಕಟ್ಟಡ ನಿರ್ಮಾಣದಲ್ಲಿ ಶ್ರಮಿಸಿದ್ದರು.ಹೀಗೆ ಕಾಲ ಕ್ರಮೇಣ ದೇವಾಲಯ ಅಭಿವ್ರದ್ಧಿಯಾಗುತ್ತಾ ೧೯೨೫ ರಲ್ಲಿ ದೇವಿಗೆ ಬಂಗಾರದ ಕಿರೀಟವೂ ಆಯಿತು.ಇನ್ನೊಂದು ಅಭಿಮಾನದ ಸಂಗತಿ ಎಂದರೆ ದೇವಾಲಯದ ಧರ್ಮದರ್ಶಿಗಳು ಮತ್ತು ಗಾಂಧೀವಾದಿಗಳಾಗಿದ್ದ ಶ್ರೀ ಶೇಷಗಿರಿ ರಾವ್ ಕೇಶವೈನ್ ಅವರು ದೇವಸ್ಥಾನದಲ್ಲಿ ಆರಂಭದಿಂದ ನಡೆಯುತ್ತಿದ್ದ ಕೋಣ ಬಲಿಯನ್ನ ಗಾಂಧೀಜಿ ಎಂಬ ಅಸ್ತ್ರ ಬಳಸಿ ಉಪಾಯದಿಂದ ನಿಲ್ಲಿಸಿದರು.ದೇವಾಲಯಕ್ಕೆ ಹರಿಜನ ಪ್ರವೇಶಕ್ಕೆ ಮುಕ್ತದ್ವಾರ ಮಾಡಿಸಿ ದೇಶಕ್ಕೆ ಮಾದರಿಯಾದರು.ಕೇಶವೈನ್ ರ ಕಾಲದಲ್ಲಿ ಮಾರಿಕಾಂಬಾ ದೇವಾಲಯ ಸ್ವಾತಂತ್ರ್ಯ ಸಮರದ ಕ್ರಾಂತಿಕಾರರ ಕೇಂದ್ರವೂ ಆಗಿತ್ತು! ನಂತರದ ಪ್ರಮುಖ ವಿದ್ಯಮಾನಗಳೆಂದರೆ,೧೯೫೫ ರಲ್ಲಿ ಕಾರವಾರ ಜಿಲ್ಲಾ ನ್ಯಾಯಾಲಯದ ಅಂಕಿತದಲ್ಲಿ ಮೊದಲನೇ ಧರ್ಮದರ್ಶಿ‌ಮಂಡಲ ಅಸ್ತಿತ್ವಕ್ಕೆ ಬಂದಿತು. ಪ್ರತಿ ಐದು ವರ್ಷಗಳಿಗೊಮ್ಮೆ ಆಯ್ಕೆ ಪ್ರಕ್ರಿಯೆ ಇರುತ್ತದೆ.
ಮಾರಿಕಾಂಬೆಗೆ ಸಂಬಂಧಿಸಿ ದಂತಕಥೆಯೊಂದಿದೆ..ಬ್ರಾಹ್ಮಣ ಮಹಿಳೆಯೋರ್ವಳನ್ನ ಕೆಳವರ್ಗದ ಯುವಕನೋರ್ವ ಸುಳ್ಳುಹೇಳಿ ಮೋಸದಿಂದ ವಿವಾಹವಾಗುತ್ತಾನೆ.ವಿವಾಹವಾಗಿ ಕೆಲವು ವರ್ಷಗಳ ಬಳಿಕ ಅವಳಿಗೆ ಈ ವಿಷಯ ತಿಳಿಯಲಾಗಿ ಅವಳು ಕೆಂಡಾಮಂಡಳವಾಗಿ ಅವನನ್ನು ವಧಿಸಲು ಬೆನ್ನಟ್ಟಿ ಬರುತ್ತಾಳೆ,ಆಗ ಅವನು ಮೊದಲು ಕೋಳಿಯ ಶರೀರದಲ್ಲಿ ,ನಂತರ ಕುರಿಯ ಶರೀರದಲ್ಲಿ‌ಆಮೇಲೆ ಕೋಣನ ದೇಹದಲ್ಲಿ ಸೇರಿಕೊಂಡಾಗ ಆ ಕೋಣನನ್ನ ಸಂಹರಿಸುವ ಮೂಲಕ ಅವಳು ಅವನನ್ನು ಬಲಿತೆಗೆದುಕೊಳ್ಳುತ್ತಾಳೆ..ಜಾತ್ರೆಯ ಆಚರಣೆಗೂ ಈ ಕಥೆಗೂ ಸಂಬಂಧವಿದೆ..ಕೋಣ ಬಲಿಯ ಹಿಂದಿನ ಕಾರಣವೂ ಇದೇ ಆಗಿದೆ.ಪ್ರಸ್ತುತದಲ್ಲಿ ಕೋಣ ಬಲಿ‌ನಡೆಯುತ್ತಿಲ್ಲ .೧೯೩೦ ರಿಂದ ಅದು ‌ನಿಂತಿದೆ.ಇಲ್ಲಿ ಆ ಮಹಿಳೆಯೇ ಮಾರಮ್ಮ.ಆ ಕೋಣವೇ ಅವಳ ಪತಿ ಎಂಬ ನಂಬಿಕೆ ನೆಲೆಸಿದೆ..ಉಗ್ರಗೊಂಡ ದೇವಿಯನ್ನ ಶಾಂತಗೊಳಿಸುವ ವಿಧಾನದ ಒಂದು ಭಾಗವೇ ಜಾತ್ರೆಯ ಆಚರಣೆ..ಹೀಗಾಗಿ ಮಾರಮ್ಮಳಿಗೆ ಬ್ರಾಹ್ಮಣೇತರರೇ ಪೂಜೆಮಾಡುವವರಾಗಿದ್ದಾರೆ..
ಇನ್ನು ಮಾರಿ ಜಾತ್ರೆಯ ವಿಧಿವಿಧಾನಗಳ‌ಕುರಿತು ಹೇಳುವುದಾದಲ್ಲಿ ಇಲ್ಲಿ ಬಾಬುದಾರರು ಪ್ರಮುಖ ಪಾತ್ರನಿರ್ವಹಿಸುತ್ತಾರೆ.

  • ಜಾತ್ರಾ ಮುಹೂರ್ತ ನಿಶ್ಚಯ.
  ಬಹುಶಃ - ಅಂತ್ಯವಿಲ್ಲದ ಕಥೆ - ಈ ಜೆನ್ ಕಥೆ

ಜಾತ್ರೆಯ ಮುಹೂರ್ತ ನಿಶ್ಚಯಿಸಲು ಪುಷ್ಯಮಾಸದಲ್ಲಿ ಸಭೆ ನಡೆಯುತ್ತದೆ.ಬಾಬುದಾರರು.ಧರ್ಮದರ್ಶಿಗಳು,ಸಾರ್ವಜನಿಕರು,ಊರಿನ ಗಣ್ಯರೆಲ್ಲಾ ಇದಕ್ಕೆ ಉಪಸ್ಥಿತರಿರುತ್ತಾರೆ.ಸಕಲವೂ ಸಾಂಗವಾಗಿ ನಡೆಯಲು ದೇವಿಯನ್ನ ಪ್ರಾರ್ಥಿಸುತ್ತಾರೆ.

  • ಹೊರಬೀಡುಗಳು.

ಜಾತ್ರೆ ಆರಂಭವಾಗುವ ಮೊದಲ ಮೂರು ಮಂಗಳವಾರ ಮತ್ತು ಮಧ್ಯದ ಎರಡು ಶುಕ್ರವಾರ ಅನಾದಿ ಪದ್ದತಿಯಂತೆ ಐದು ಹೊರಬೀಡುಗಳು ನಡೆಯುತ್ತದೆ.ಹೊರಬೀಡುಗಳೆಂದರೆ ರಾತ್ರಿಯ ವೇಳೆ ಗಡಿ ಗದ್ದಿಗೆಗಳ ಬಳಿ‌ಹೋಗಿ ದೇವಿಯ ಸೇವೆಗೆ ಸಂಬಂಧಿಸಿದ ಆಯುಧಗಳು, ವಾದ್ಯ,ಕಹಳೆ,ಹಲಗೆ,ಡೊಳ್ಳು,ದೀವಟಿಗೆ,ಮೊದಲಾದವನ್ನು ಪೂಜಿಸಿ ಪ್ರಾರ್ಥಿಸುವುದು.

  • ರಥ ಕಟ್ಟುವುದು

ನಾಲ್ಕನೇ ಹೊರಬೀಡಿನ ಮರುದಿನ ಬೆಳಿಗ್ಗೆ ರಥ ನಿರ್ಮಿಸಲು‌ಕಟ್ಟಿಗೆ ತರಲು ಮಂಗಳವಾದ್ಯದೊಂದಿಗೆ ಕಾಡಿಗೆ ಹೋಗಿ ಆಯ್ಕೆಯಾದ ‘ ತಾರಿ’ ಮರವನ್ನು ಕಡಿಯುತ್ತಾರೆ.ಮಾರನೇ ದಿನ ಮರವನ್ನು ಮೆರವಣಿಗೆಯಲ್ಲಿ ತಂದು ದೇವಾಲಯದ ಎದುರು ಪೂಜಿಸಲಾಗುತ್ತದೆ.ನಂತರ ಏಳು ದಿನಗಳಲ್ಲಿ ಬಾಬುದಾರ ಆಚಾರಿಗಳು,ಬಡಿಗೇರರು,ಉಪ್ಪಾರರು,ರಥ ಸಿದ್ಧಗೊಳಿಸುತ್ತಾರೆ.

  • ಅಂಕೆ ಹಾಕುವುದು.
  ಹುಲಿಗಿ ಕ್ಷೇತ್ರದ ಮಾಹಿತಿ - ಶ್ರೀ ಹುಲಿಗೆಮ್ಮ ದೇವಿ

ಹೊರಬೀಡಿನ ಮರುದಿನ ಮಾರಿಕೋಣನ ಮೆರವಣಿಗೆ ಮರ್ಕಿ ದೇವಸ್ಥಾನಕ್ಕೆ ಹೋಗಿ ಪೂಜೆಯ ನಂತರ ಗದ್ದುಗೆಗೆ ಸಾಗುತ್ತದೆ.ಅಲ್ಲಿ ಅಸಾದಿಯರು ಮತ್ತು ಮೇತ್ರಿಯರು ರಂಗವಿಧಾನ ನೆರವೇರಿಸುತ್ತಾರೆ ಕೋಣಕ್ಕೆ ಕಂಕಣ ಕಟ್ಟುವುದೇ ಅಂಕೆ ಹಾಕುವುದು.

  • ಮೇಟಿ ದೀಪ

ಜಾತ್ರೆಯ ಗದ್ದುಗೆಯಲ್ಲಿ ನಾಡಿಗ ಬಾಬುದಾರರು ಮಂಗಳಾರತಿ ನಡೆಸಿ ಅದರಿಂದ ಹಣತೆಯೊಂದನ್ನ ಬೆಳಗುತ್ತಾರೆ ಅದು ಜಾತ್ರೆ ಮುಗಿಯುವವರೆಗೂ ಬೆಳಗಬೇಕು ಇದನ್ನು ಮೇಟಿಯವರು‌ನೋಡಿಕೊಳ್ಳಬೇಕು.

  • ರಥೋತ್ಸವ

ಉತ್ಸವದ ಆರಂಭದಲ್ಲಿ ಮಂಗಳವಾರ ನಸುಕಿನಲ್ಲಿ ಕಲಶಪೂಜೆ ಅನಂತರ ರಥದ ಗೂಡಿನ ಮೇಲೆ ಅದರ ಸ್ಥಾಪನೆ.ಬೇಡರ ಜೋಗತಿತರಿಂದ ಚವರಿ‌ಸೇವೆ.ಮಾರಿದೇವಿಗೆ,ಮತ್ತು ಮರ್ಕಿ ದುರ್ಗಿಯರಿಗೆ ಹೊಸ ಸೀರೆ ಉಡಿಸಿ ಬಂಗಾರದ ಆಭರಣಗಳಿಂದ ಅಲಂಕರಿಸಿ ದೃಷ್ಟಿಯಿಡಲಾಗುವುದು.ನಂತರ ಸಾತ್ವಿಕ ಬಲಿಯ ಅರ್ಪಣೆ.ಮಂಗಳಸೂತ್ರ ಬಂಧನ,ವಿವಾಹವಿಧಿ ,ಕುಂಬಾರಕೇದಾರಗಳಿಂದ ಪೂಜೆ ಇದರ ನಂತರ ಭವ್ಯ ಮೆರವಣಿಗೆ.ರಥ ಬಿಡ್ಕಿಬೈಲಿಗೆ ಪ್ರಯಾಣ.ಮಾರಮ್ಮ ಗದ್ದುಗೆಯಲ್ಲಿ ವಿರಾಜಮಾನ.ಊರಿನ ೩೨ ಗಡಿಗಳಲ್ಲಿ ಬಲಿ ಸಮರ್ಪಣೆ.

  • ಮುಕ್ತಾಯ ವಿಧಿಗಳು.
  ಮಂತ್ರಾಲಯದ ಪಂಚಮುಖಿ ಆಂಜನೇಯ ದೇವಸ್ಥಾನ..!

ಮುಂದಿನ ಬುಧವಾರ ಅಂದರೆ ೮ ನೇ ದಿನ ಜಾತ್ರಾ ಮುಕ್ತಾಯದ ವಿಧಿಗಳು ನಡೆಯುತ್ತವೆ.ನಾಡಿಗ ಬಾಬೂದಾರರಿಂದ ಕೊನೇಯ ಮಂಗಳಾರತಿ.ದೇವಿಯನ್ನು ಗದ್ದಿಗೆಯಿಂದ ಇಳಿಸಿದ ನಂತರ ಅಸಾದಿಯರು ಹುಲುಸು ಪ್ರಸಾದವನ್ನು ಪೂಜಿಸಿ ರೈತರಿಗೆ ವಿತರಿಸುತ್ತಾರೆ.ನಂತರ ರೈತರು ಅದನ್ನು ಬಿತ್ತಿಬರುತ್ತಾರೆ.ನಂತರ ಕಲಶದ ವಿಧಿಗಳು ನಡೆಯುತ್ತದೆ.ನಂತರ ದೇವಿ ರಥದ ಬದಲಿಗೆ ವಿಶೇಷವಾಗಿ ಸಿದ್ದಗೊಳಿಸಿದ ಅಟ್ಟಲಿನಲ್ಲಿ ತೆರಳುತ್ತಾಳೆ.ನಂತರ ಚಪ್ಪರವನ್ನು ಸುಡಲಾಗುತ್ತದೆ.ಇದನ್ನ ಮಾತಂಗಿ ಚಪ್ಪರ ಸುಡುವಿಕೆ ಎನ್ನುತ್ತಾರೆ.ಹೀಗೆ ಇನ್ನೂ ಕೆಲವು ಮುಕ್ತಾಯದ ವಿಧಿಗಳ ನಂತರ ಪುನಃ ದೇವಿ ತನ್ನ ಮೂಲ‌ಸ್ಥಾನದಲ್ಲಿ ವಿರಾಜಮಾನಳಾಗುತ್ತಾಳೆ.

ಹೀಗೆ ನಮ್ಮ ನಡುವಿನ ಅತ್ಯಂತ ವಿಶಿಷ್ಟವಾದ ಜಾನಪದೀಯ ಆಚರಣೆಯಾದ ಜಾತ್ರೆ ಮುಕ್ತಾಯ ಕಾಣುತ್ತದೆ.‌…..

  • ಲಕ್ಷ್ಮೀಶ್ ಸೋಂದಾ

Leave a Reply

Your email address will not be published. Required fields are marked *

Translate »