ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಧ್ರುವ ನಕ್ಷತ್ರ ದ ಕಥೆ


✨ದ್ರುವ

ಸ್ವಾಯಂಭುವ ಮನುವಿನ ಪುತ್ರರಲ್ಲಿ ಒಬ್ಬ ಉತ್ತಾನಪಾದ, ಶ್ರೇಷ್ಠ ರೀತಿಯಲ್ಲಿ ರಾಜ್ಯವಾಳುತ್ತಿದ್ದ. ಅವನಿಗೆ ಇಬ್ಬರು ಪತ್ನಿಯರು. ಹಿರಿಯಳೂ ಪಟ್ಟ ಮಹಿಷಿಯೂ ಆದ ಸುನೀತಿ, ಕಿರಿಯಳು ಸುರುಚಿ. ಸುನೀತಿಯು ಗುಣಾಢ್ಯಳೂ, ದೈವಭಕ್ತಳೂ ಆಗಿದ್ದಳು. ಆದರೆ ರಾಜನಿಗೆ ಅವಳಲ್ಲಿ ಅಷ್ಟಾಗಿ ಪ್ರೀತಿಯಿರಲಿಲ್ಲ.ಅವಳಿಗೆ ಒಬ್ಬ ಮಗ ಧ್ರುವ. ಕಿರಿಯಳಾದ ಸುರುಚಿ ಸ್ವಾರ್ಥಿ, ಗರ್ವಿಷ್ಠೆ. ಅವಳ ಮಗ ಉತ್ತಮ. ಅವಳ ಪ್ರೇಮಪಾಶದಲ್ಲಿ ಸಿಲುಕಿದ ರಾಜನಿಗೆ ಅವಳನ್ನು ಎದುರು ಹಾಕಿಕೊಳ್ಳುವ ಶಕ್ತಿಯೂ ಇರಲಿಲ್ಲ, ಇಷ್ಟವೂ ಇರಲಿಲ್ಲ.

ಒಂದು ದಿನ ಉತ್ತಾನಪಾದನು ಸಿಂಹಾಸನದ ಮೇಲೆ ಕುಳಿತು ಸುರುಚಿಯೊಡನೆ ಸರಸ ಸಲ್ಲಾಪದಲ್ಲಿ ತೊಡಗಿದ್ದನು. ಉತ್ತಮನು ಅವನ ತೊಡೆಯಮೇಲೆ ಕುಳಿತಿದ್ದು ರಾಜನಿಂದ ಮುದ್ದು ಮಾಡಿಸಿಕೊಳ್ಳುತ್ತಿದ್ದನು. ಅದೇ ವೇಳೆಗೆ ಸರಿಯಾಗಿ ಧ್ರುವನೂ ಅಲ್ಲಿಗೆ ಬಂದನು. ಆಸೆಯಿಂದ ತಾನೂ ತಂದೆಯ ತೊಡೆಯಮೇಲೆ ಕುಳಿತುಕೊಳ್ಳಲು ಹೋದ. ತಂದೆಯು ಧ್ರುವನ ಬಗೆಗೆ ಅನಾದರ ತೋರಿ ತೊಡೆಯೇರಲು ಅನುವು ಮಾಡಿಕೊಡಲಿಲ್ಲ. ಸಮೀಪದಲ್ಲಿದ್ದ ಸುರುಚಿಯು ಧ್ರುವನನ್ನು ದೂರದೂಡಿ ಗರ್ವದಿಂದ ಹೀಗೆ ಹೇಳಿದಳು: `ಲೋ, ನೀನು ರಾಜನ ತೊಡೆಯೇರಲು ಅರ್ಹನಲ್ಲ, ಏಕೆಂದರೆ ನೀನು ನನ್ನ ಹೊಟ್ಟೆಯಲ್ಲಿ ಹುಟ್ಟಿಲ್ಲ. ಯಾವಳೋ ಅಲ್ಪಳ ಬಸಿರಿನಲ್ಲಿ ಜನಿಸಿ ದುರ್ಲಭವಾದ ಪದವಿಗೆ ಆಶಿಸುವೆಯಲ್ಲ. ಸಿಂಹಾಸನವನ್ನೇರುವ ಅಪೇಕ್ಷೆ ಇದ್ದರೆ ತಪಸ್ಸಿನಿಂದ ಭಗವಂತನನ್ನಾರಾಧಿಸಿ ಮುಂದಿನ ಜನ್ಮದಲ್ಲಿ ನನ್ನ ಮಗನಾಗಿ ಹುಟ್ಟುವಂತೆ ವರವನ್ನು ಪಡೆದುಕೊ ಹೋಗು.” ತಂದೆಯ ನಿರ್ಲಕ್ಷ್ಯ, ಚಿಕ್ಕಮ್ಮನ ಗರ್ವದ ಮಾತುಗಳು, ತನ್ನ ತಾಯಿಯನ್ನು ಅವಹೇಳನ ಮಾಡಿದುದು – ಇವು ಐದು ವರ್ಷದ ಬಾಲಕ ಧ್ರುವನನ್ನು ಕ್ರುದ್ಧನನ್ನಾಗಿಸಿದುವು. ಅತೀವ ದುಃಖದಿಂದ ಅಳುತ್ತ ತನ್ನ ತಾಯಿಯ ಸಮೀಪಬಂದನು. ನಡೆದುದನ್ನೆಲ್ಲಾ ವಿವರಿಸಿದನು. ಅವಳು, ಇವೆಲ್ಲ ತನ್ನ ದೌರ್ಭಾಗ್ಯವೆಂದು, ತನ್ನಲ್ಲಿ ಜನಿಸಿದುದರಿಂದ ಅವನಿಗೆ ಎಲ್ಲ ಅವಮಾನ, ದುಃಖಗಳು ಉಂಟಾದುವೆಂದು ಹೇಳಿದಳು.
ಧ್ರುವನಿಗೆ ಉತ್ತಮನಂತೆ ರಾಜಪೀಠದಲ್ಲಿ ಕುಳಿತುಕೊಳ್ಳುವ ಆಸೆಯಿದ್ದರೆ, ಸುರುಚಿಯು ಹೇಳಿದಂತೆ ಭಗವಂತನನ್ನು ಕುರಿತು ತಪಸ್ಸು ಮಾಡುವುದು ಸರಿಯಾದ ಮಾರ್ಗ ಎಂದು ತಿಳಿಸಿದಳು. ದೃಢಭಕ್ತಿಯಿಂದ ನಾರಾಯಣನನ್ನು ಭಜಿಸಿ, ಅವನ ಅನುಗ್ರಹ ಸಂಪಾದಿಸಲು ಸಲಹೆಯಿತ್ತಳು.

  ವಸುದೇವ ಹಾಗೂ ದೇವಕಿ ಪೂರ್ವ ಜನ್ಮದ ಕರ್ಮದ ಫಲದ ಕಥೆ

ಒಡನೆಯೇ ಧ್ರುವನು ಅರಮನೆಯನ್ನು ತ್ಯಜಿಸಿ ವನಾಭಿಮುಖನಾಗಿ ಹೊರಟನು. ನಾರದನು ಈ ವೃತ್ತಾಂತವನ್ನರಿತು ಧ್ರುವನಲ್ಲಿಗೆ ಬಂದು, “ಮಗೂ ಎಲ್ಲಿಗೆ ಹೋಗುವೆ? ನಿನ್ನ ಸ್ವಜನರೊಂದಿಗೆ ವಿರಸನಾಗಿ ದುಃಖಿತನಾಗಿದ್ದೀಯ ವಿಚಾರವೇನು?” ಎಂದನು. ಧ್ರುವನು ಅರಮನೆಯಲ್ಲಿ ನಡೆದದ್ದನ್ನೆಲ್ಲ ವಿವರಿಸಿ, ತಾನು ತಪಸ್ಸಿಗೆ ತೆರಳುತ್ತಿರುವುದಾಗಿ ತಿಳಿಸಿದನು. ತಪಸ್ಸಿನ ಮಾರ್ಗ ಸುಲಭವಲ್ಲವೆಂದೂ, ಅವನಿನ್ನೂ ಚಿಕ್ಕವನಾಗಿರುವುದರಿಂದ ನಿಷಲವೆಂದೂ, ಭಗವದನುಗ್ರಹ ಕಷ್ಟ ಸಾಧ್ಯವೆಂದೂ ತಿಳಿಸಿ, ತನ್ನ ಪ್ರಯತ್ನ ಬಿಡುವಂತೆ ಧ್ರುವನಿಗೆ ಬುದ್ಧಿವಾದ ನೀಡಿದನು. ಧ್ರುವನು ನಾರದನ ಮಾತುಗಳಿಗಾಗಿ ಅವನಿಗೆ ಕೃತಜ್ಞತೆ ಅರ್ಪಿಸಿ, ತನ್ನ ನಿರ್ಧಾರ ದೃಢವೆಂದೂ, ಅದನ್ನು ಸಾಧಿಸಲು ಸಹಾಯ ಮಾಡಬೇಕೆಂದೂ ಪ್ರಾರ್ಥಿಸಿದನು. ಬಾಲಕ ಧ್ರುವನ ದೃಢ ನಿಶ್ಚಯವನ್ನು ಮೆಚ್ಚಿದ ನಾರದನು ಅವನನ್ನು ಯಮುನಾ ತೀರದಲ್ಲಿನ ಮಧುವನವೆಂಬ ತೋಟಕ್ಕೆ ತೆರಳಬೇಕೆಂದು, ಅಲ್ಲಿ ತ್ರಿಕರಣಶುದ್ಧಿಯಿಂದ ಶ್ರೀಮನ್ನಾರಾಯಣನ ಧ್ಯಾನ ಮಾಡಬೇಕೆಂದು ಹೇಳಿದನು. ಅಲ್ಲದೆ ಭಗವಂತನು ಪ್ರತ್ಯಕ್ಷವಾದಾಗಿನ ಸ್ವರೂಪದ ಬಗ್ಗೆಯೂ ತಿಳಿಯ ಹೇಳಿದನು. ಧ್ರುವನು ನಾರದನಿಗೆ ಪ್ರದಕ್ಷಿಣೆ ನಮಸ್ಕಾರ ಮಾಡಿ ಮಧುವನಕ್ಕೆ ಹೊರಟನು. ದಾರಿಯಲ್ಲಿ ಸಪ್ತರ್ಷಿಗಳು ಬರುತ್ತಿರುವುದನ್ನು ಕಂಡ ಧ್ರುವನು ಅವರ ಪಾದಕ್ಕೆರಗಿ ಆಶೀರ್ವಾದ ಬೇಡಿದನು. ಎಲ್ಲ ವಿಷಯವರಿತ ಋಷಿಗಳು ದ್ವಾದಶ ನಾಮಮಂತ್ರ ಉಪದೇಶಿಸಿ ಯಶಸ್ವಿಯಾಗೆಂದು ಹರಸಿ ತೆರಳಿದರು.
ಮಧುವನ ತಲಪಿದ ಧ್ರುವನು ಉಗ್ರತಪಸ್ಸನ್ನು ಆರಂಭಿಸಿದನು. ಆಹಾರ ನಿಯಂತ್ರಣ ಮಾಡಿ, ಒಂಟಿಕಾಲಿನಲ್ಲಿ ನಿಂತು, ಇಂದ್ರಿಯಗಳನ್ನು ಹಿಡಿತದಲ್ಲಿರಿಸಿಕೊಂಡು, ಹೃದಯದಲ್ಲಿ ಭಗವತ್ಸ್ವರೂಪವನ್ನು ನೆಲೆಗೊಳಿಸಿದನು. ಬಾಹ್ಯ ಪ್ರಪಂಚದ ವ್ಯಾಪಾರ ಅವನಿಗೆ ತಿಳಿಯ- ದಾಯಿತು. ಇವನ ತಪಸ್ಸಿನಿಂದಾದ ಜ್ವಾಲೆ ಮೂರು ಲೋಕಗಳನ್ನಾವರಿಸಿತು. ಇದರಿಂದ ಪೀಡಿತರಾದ ಇಂದ್ರಾದಿ ದೇವತೆಗಳು ಶ್ರೀಮನ್ನಾರಾಯಣನಲ್ಲಿ ಬಂದು ಕಾಪಾಡಬೇಕೆಂದು ಮೊರೆಯಿಟ್ಟರು. ವಿಷ್ಣುವು ಅವರಲ್ಲಿ ಮರುಕಗೊಂಡು ಧ್ರುವನ ತಪಸ್ಸಿನ ಬಗ್ಗೆ ತಿಳಿಸಿ, ಅಭಯ ನೀಡಿದನು. ಅನಂತರ ಭಕ್ತ ಧ್ರುವನನ್ನು ಅನುಗ್ರಹಿಸಲು ಮಧುವನಕ್ಕೆ ಬಂದನು. ಪ್ರತ್ಯಕ್ಷನಾದ ವಿಷ್ಣುವನ್ನು ಕಂಡ ಧ್ರುವನು ಅವನ ಕಾಲುಗಳ ಮೇಲೆ ಬಿದ್ದನು. ಎದ್ದು ನಿಂತು ಭಗವಂತನನ್ನು ಸ್ತುತಿಸಬೇಕೆಂದವನಿಗೆ ಮಾತೇ ಹೊರಡಲಿಲ್ಲ. ಕೈ ಮುಗಿದು ನಿಂತನು. ಅವನ ಮನೋಭಿಪ್ರಾಯವನ್ನರಿತ ಶ್ರೀಹರಿಯು ತನ್ನ ಶಂಖದಿಂದ ಧ್ರುವನ ತಲೆ ನೇವರಿಸಿದನು.

  ರಾಮರಾಜ್ಯವೇ ಉಳಿದಿರುವ ಏಕೈಕ ರಾಷ್ಟ್ರ ಥಾಯ್ಲೆಂಡ್

ಆಗ ಮಾತು ಹೊರಟಿತು. ಪರಮಾತ್ಮನನ್ನು ಬಹುರೀತಿಯಿಂದ ಹೊಗಳಿದನು. ಸಂತುಷ್ಟನಾದ ಭಗವಂತನು ಧ್ರುವನಿಗೆ ಲೋಕದಲ್ಲಿ ಬೇರೆ ಯಾರೂ ಎಂದೂ ಪಡೆಯದ ಕಾಂತಿಯುತ ವಿಶಿಷ್ಟ ಪದವಿಯನ್ನು ನೀಡಿರುವುದಾಗಿಯೂ, ಎಲ್ಲ ಗ್ರಹ ನಕ್ಷತ್ರಗಳೂ ಈ ಸ್ಥಾನವನ್ನು ಪ್ರದಕ್ಷಿಣೆ ಮಾಡುವುದೆಂದೂ ಹೇಳಿ, ತನ್ನ ರಾಜ್ಯಕ್ಕೆ ಹಿಂದಿರುಗಲು ಧ್ರುವನಿಗೆ ಆದೇಶಿಸಿದನು.
ದೈವ ಸಾಕ್ಷಾತ್ಕಾರ ಹೊಂದಿ ಹಿಂದಿರುಗಿದ ಪುತ್ರನನ್ನು ಉತ್ತಾನಪಾದನು ಪ್ರೀತ್ಯಾದರಗಳಿಂದ ಸ್ವಾಗತಿಸಿ, ಪರಿವಾರದೊಡನೆ ಸಂತೋಷದಿಂದಿದ್ದನು. ಕೆಲ ಕಾಲದ ಅನಂತರ ರಾಜ್ಯವನ್ನು ಧ್ರುವನಿಗೆ ವಹಿಸಿ ತಾನು ವಾನಪ್ರಸ್ಥಾಶ್ರಮವನ್ನು ಸ್ವೀಕರಿಸಿ ಕಾಡಿಗೆ ಹೋದನು. ಉತ್ತಮನು ಒಂದು ದಿನ ಬೇಟೆಯಾಡಲು ಕಾಡಿಗೆ ಹೋಗಿದ್ದು ವನ್ಯಮೃಗಗಳಿಗೆ ಬಲಿಯಾದನು. ಹಿಂದಿರುಗದಿದ್ದ ಮಗನನ್ನು ಅರಸುತ್ತಾ ಸುರುಚಿಯು ಕಾಡಿಗೆ ಹೋದಾಗ ಕಾಳ್ಗಿಚ್ಚಿಗೆ ಸಿಲುಕಿ ಭಸ್ಮವಾದಳು. ಧ್ರುವನು ಅನೇಕ ವರ್ಷ ರಾಜ್ಯಭಾರ ನಿರ್ವಹಿಸಿ ಅನಂತರ ಮೋಕ್ಷ ಹೊಂದಿದನು.

Leave a Reply

Your email address will not be published. Required fields are marked *

Translate »