ವಸುದೇವ – ದೇವಕಿ…!
ಕೃಷ್ಣನ ತಂದೆ ತಾಯಿಯರು ವಸುದೇವ ದೇವಕಿ. ಜಗದೊಡೆಯನಾದ ಪರಮಾತ್ಮನ ತಂದೆ ತಾಯಿಯಾದರೂ, ಸೆರೆ ಮನೆವಾಸ ಅನುಭವಿಸಿದರು.
ಹುಟ್ಟಿದ ಮಕ್ಕಳನ್ನೆಲ್ಲ ಕಳೆದುಕೊಂಡು ಸಂಕಟ ಅನುಭವಿಸಿದರು. ಭಗವಂತ ಶ್ರೀ ಕೃಷ್ಣನೇ ಹುಟ್ಟಿದ ಕ್ಷಣವೇ ಹೆತ್ತ ಕಂದನನ್ನು ಗೋಕುಲದಲ್ಲಿ ಬಿಟ್ಟು ಮಗುವನ್ನು ಎತ್ತಿ ಆಡಿಸುವ ಸೌಭಾಗ್ಯ ಅವರಿಗೆ ಇಲ್ಲವಾಯಿತು. ಹೀಗೆಲ್ಲಾ ಆಗಲು ಕಾರಣ ಅವರ ಪೂರ್ವ ಜನ್ಮದ ಕರ್ಮಫಲ.
ವಸುದೇವ ಮತ್ತು ದೇವಕಿ ಪೂರ್ವ ಜನ್ಮದಲ್ಲಿ ಸಪ್ತರ್ಷಿಗಳಲ್ಲಿ ಒಬ್ಬರಾದ ಕಶ್ಯಪ ಮಹರ್ಷಿ ಮತ್ತು ಅದಿತಿಯರಾಗಿದ್ದರು. ಇವರ ಮಕ್ಕಳು ವರುಣ ಮತ್ತು ಗರುಡ. ವರುಣನು ಸೂರ್ಯನಿಗೆ ಸಾರಥಿಯಾಗಿದ್ದನು ಹಾಗೂ ಬ್ರಹ್ಮನ ಅಷ್ಟದಿಕ್ಪಾಲಕರಲ್ಲಿ ಒಬ್ಬನಾಗಿ ಸಮುದ್ರದ ದೇವತೆಯಾಗಿದ್ದನು. ಒಮ್ಮೆ ಮಗನನ್ನು ನೋಡಬೇಕೆಂಬ ಆಸೆಯಾಗಿ ವರುಣನ ಮನೆಗೆ ಬಂದರು. ಅವನ ಮನೆಯಲ್ಲಿ ಬೇಕಾದಷ್ಟು ಹಸುಗಳಿದ್ದು ಅವು ಅಮೃತದಷ್ಟೇ ಸಿಹಿ ಯಾದ ಹಾಲನ್ನು ಯಥೇಚ್ಛವಾಗಿ ಕೊಡುತ್ತಿದ್ದವು. ಅವುಗಳನ್ನು ಬ್ರಹ್ಮನು ವರುಣನಿಗೆ ಕೊಟ್ಟಿದ್ದನು. ಇದೆಲ್ಲ ತಿಳಿಯದ ಅದಿತಿ ಅಲ್ಲಿರುವ ಗೋ ಸಂಪತ್ತನ್ನು ನೋಡಿ ಮುದ್ದಾದ ಹಸುಗಳ ಮೇಲೆ ಆಸೆಯಾಯಿತು .ಅವಳು ಕಶ್ಯಪರಿಗೆ ಹೇಳಿದಳು ನಾವು ಈ ಹಸುಗಳನ್ನು ನಮ್ಮ ಮನೆಗೆ ತೆಗೆದುಕೊಂಡು ಹೋಗೋಣ ಎಂದು ಅದಕ್ಕೆ ಅವರು ನಮ್ಮ ಮನೆಯಲ್ಲಿ ಬೇಕಾದಷ್ಟು ಗೋ ಸಂಪತ್ತು ಇದೆಯಲ್ಲ ಇದು ಏಕೆ ಎಂದು ಕೇಳಿದಾಗ ಅದಿತಿ ಹೇಳಿದಳು ಇವುಗಳಷ್ಟು ಲಕ್ಷಣವಾದ, ಅಮೃತ ದಂಥ ಹಾಲು ಕೊಡುವ ಹಸುಗಳನ್ನು ನಾನು ನೋಡೇ ಇರಲಿಲ್ಲ. ವರುಣ ಏನು ಬೇರೆ ಅಲ್ಲ ನಮ್ಮ ಸ್ವಂತ ಮಗ ಆದುದರಿಂದ ಅವನನ್ನು ಕೇಳುವುದು ಬೇಡ ಹಸುಗಳನ್ನು ತೆಗೆದುಕೊಂಡು ಹೋಗೋಣ ಎಂದಳು. ಕಶ್ಯಪರಿಗೂ ಅದು ಸರಿ ಎನಿಸಿತು.
ಒಂದು ದಿನ ವರುಣ ಮನೆಯಲ್ಲಿ ಇರಲಿಲ್ಲ. ಅದೇ ದಿನವೇ ಕಶ್ಯಪ ಮತ್ತು ಅದಿತಿಯರು ಅವನ ಮನೆಯಲ್ಲಿದ್ದ ಹಸುಗಳನ್ನೆಲ್ಲ ತೆಗೆದುಕೊಂಡು ತಮ್ಮ ಆಶ್ರಮಕ್ಕೆ ಬಂದರು. ಇತ್ತ ವರುಣ ಮನೆಗೆ ಬಂದು ನೋಡುತ್ತಾನೆ ಗೋವು ಗಳು ಇಲ್ಲದಿರುವದನ್ನು ಕಂಡು ಅವನಿಗೆ ಬೇಸರವಾಗುತ್ತದೆ. ಮತ್ತು ತನ್ನ ತಂದೆ- ತಾಯಿಯರೇ ಅವುಗಳನ್ನು ತೆಗೆದುಕೊಂಡು ಹೋದರೆಂದು ಅವನಿಗೆ ತಿಳಿಯುತ್ತದೆ. ತಂದೆಯ ಹತ್ತಿರ ಬಂದು, ತಂದೆಯೇ ನನ್ನ ಮನೆಯಲ್ಲಿದ್ದ ವಿಶೇಷವಾದ ಗೋ ಸಂಪತ್ತು ನನ್ನದಲ್ಲ ನನಗೆ ಬ್ರಹ್ಮ ದೇವರು ಕೊಟ್ಟಿದ್ದು, ಅವುಗಳು ಇಲ್ಲದೆ ಹೋದರೆ ನನ್ನ ಯಜ್ಞ- ಯಾಗ ಗಳನ್ನು ಮಾಡಲು ಆಗುವುದಿಲ್ಲ ಅವುಗಳನ್ನು ಕೊಟ್ಟು ಬಿಡಿ ಎಂದು ನಮ್ರತೆಯಿಂದ ಕೇಳಿದನು.
ಆದರೆ ಆ ಸುಂದರವಾದ ಗೋ ಸಂಪತ್ತಿನ ಮೋಹಕ್ಕೆ ಒಳಗಾಗಿದ್ದ ಕಶ್ಯಪ ಮುನಿಗಳು ಅವುಗಳನ್ನು ಹಿಂತಿರುಗಿಸಲು ಒಪ್ಪಲಿಲ್ಲ. ವರುಣನು ಇಕ್ಕಟ್ಟಿಗೆ ಸಿಲುಕಿ ಕೊಂಡ ತಂದೆಯೊಡನೆ ಹಠ ಮಾಡಿ ವಾದಿಸುವುದು ಸಾಧ್ಯವಿಲ್ಲ,
ಅವನು ಮಾಡಬೇಕಾದ ಧಾರ್ಮಿಕ ಕಾರ್ಯಗಳನ್ನು ನಿಲ್ಲಿಸುವಂತೆಯೂ ಇಲ್ಲ. ಏನು ಮಾಡುವುದೆಂದು ದಾರಿ ಕಾಣದೆ ಬ್ರಹ್ಮ ದೇವರ ಬಳಿ ಹೋಗಿ ಎಲ್ಲವನ್ನು ಹೇಳಿದ. ಬ್ರಹ್ಮನು ಕಶ್ಯಪರನ್ನು ಕರೆಸಿ, ನಿನ್ನಂತ ಋಷಿಮುನಿಗಳಿಗೆ ಇದು ಯೋಗ್ಯವಾದ ಕೆಲಸವಲ್ಲ ನೀನು ಮಾಡಿದ್ದು ತಪ್ಪು. ಯೋಗ್ಯನಾದ ಋಷಿ ಯಾಗಿರದ ಕಾರಣ ನಿನ್ನನ್ನು ಕ್ಷಮಿಸಲು ಸಾಧ್ಯವಿಲ್ಲ. ಆದ್ದರಿಂದ ನೀನು ಭೂಲೋಕದಲ್ಲಿ ಜನಿಸಿ ಕಣ್ಣೆದುರಿಗೆ ಆಗುವ ಅನ್ಯಾಯಗಳನ್ನೆಲ್ಲ ನೋಡಿ ಏನು ಮಾಡಲಾಗದ ಅಸಹಾಯಕನಾಗಿ ಒದ್ದಾಡುವಂತಾಗು ಎಂದು ಶಾಪ ಕೊಟ್ಟನು. ಆಗ ಕಶ್ಯಪರಿಗೆ ತಮ್ಮ ತಪ್ಪಿನ ಅರಿವಾಗಿ ತಾನು ಮಾಡಿದ್ದು ತಪ್ಪು ಎಂದು ಅರ್ಥವಾಗಿ, ಶಾಪ ವಿಮೋಚನೆಗಾಗಿ ಭಗವಂತನನ್ನು ಧ್ಯಾನ ಮಾಡಿದರು.
ಅವರ ಪ್ರಾರ್ಥನೆಗೆ ಒಲಿದ ಭಗವಂತನು ಪ್ರತ್ಯಕ್ಷನಾಗಿ, ದಂಪತಿಗಳಾದ ನೀವಿಬ್ಬರೂ ಸೇರಿ ತಪ್ಪು ಮಾಡಿದ್ದೀರಿ ಕರ್ಮ ಫಲವನ್ನು ಅನುಭವಿಸ ಲೇಬೇಕು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಆದರೆ ನೀನು ದೊಡ್ಡ ತಪಸ್ವಿಯಾದ ಕಾರಣ ಭೂಲೋಕದಲ್ಲಿ ನೀನು ಜನಿಸಿದಾಗ, ಮುಂದೆ ದ್ವಾಪರದ ಶ್ರೀ ಕೃಷ್ಣನ ಅವತಾರದಲ್ಲಿ ನಿಮ್ಮ ಮಗನಾಗಿ ನಾನೇ ಜನಿಸಿ ನಿಮ್ಮನ್ನು ಬಂಧನದಿಂದ ಬಿಡುಗಡೆ ಮಾಡುತ್ತೇನೆ ಎಂದು ವರ ಕೊಟ್ಟನು ಈ ವರದಿಂದಾಗಿ ಕಶ್ಯಪ ಅದಿತಿಯರ ಮಗನಾಗಿ ಶ್ರೀ ಕೃಷ್ಣ ಜನಿಸಿದನು. ವಸುದೇವ ದೇವಕಿಯರು ತಮ್ಮ ಕರ್ಮಫಲ ಕಳೆದುಕೊಳ್ಳುವುದಕ್ಕಾಗಿ ದುಷ್ಟ ಕಂಸನ ಕಾರಣದಿಂದ ಸೆರೆಯಲ್ಲಿದ್ದು ನಡೆಯುತ್ತಿದ್ದ ತಪ್ಪುಗಳನ್ನೆಲ್ಲ ಕಣ್ಣಿಂದ ನೋಡುತ್ತಾ ಏನು ಮಾಡಲಾಗದೆ ಕರುಳು ಕಿತ್ತು ಬರುವಂತಹ ಕಷ್ಟಗಳನ್ನು ಸಹಿಸಿಕೊಳ್ಳಬೇಕಾಯಿತು.
ಸಂಬಂಧಿಗಳೇ ಆಗಲಿ ಹೆತ್ತ ಮಕ್ಕಳೇ ಆಗಿರಲಿ ಇನ್ನೊಬ್ಬರ ಸಂಪತ್ತನ್ನು ಅಪಹರಿಸಿದರೆ ಅದರ ಕರ್ಮಫಲವನ್ನು ಅನುಭವಿಸಿಯೇ ಕಳೆದುಕೊಳ್ಳಬೇಕು ಎಂಬುದಕ್ಕೆ ಇದೊಂದು ಉದಾಹರಣೆ ಯಾಗಿದೆ.
ಆದೌ ದೇವಿಕಿ ದೇವಿ ಗರ್ಭ ಜನನಂ ಗೋಪಿ ಗೃಹೇ ವರ್ಧನಂ
ಮಾಯಾ ಪೂತನಿ ಜೀವಿತಾಪಹರಣಂ!
ಗೋವರ್ಧನೋದ್ಧಾರಣಂ ಕಂಸಚ್ಚೇದನ ಕೌರವಾದಿಹನನಂ
ಕುಂತೀಸುತಾಂಪಾಲನಂ ಏತದ್ಭಾಗವತಂ
ಪುರಾಣ ಕಥಿತಂ ಶ್ರೀ ಕೃಷ್ಣ ಲೀಲಾಮೃತಂ!!