ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕುಟುಂಬ ಎಂಬ ಪರಮ ಬಂಧನ – ಮಹಾಭಾರತ ಕಥೆ

ಕುಟುಂಬ ಎಂಬ ಪರಮ ಬಂಧನ

ವೀಣಾ ಬನ್ನಂಜೆ

ಒಂದೇ ಕುಟುಂಬದಲ್ಲಿ ಹುಟ್ಟಿದೆವು ಎನ್ನುವುದು ಪೂರ್ವ ಜನ್ಮದ ಸುಕೃತ.

ಈಗ ಒಂದೇ ಮಗು ಎಂಬ ಅನಾಥ ಮಕ್ಕಳಿಗೆ ಕುಟುಂಬ ಇಲ್ಲ.

ಕುಟುಂಬ ಎಂತಹ ದೊಡ್ಡ ಬಲ ಎನ್ನುವುದು ತಿಳಿಯುವುದು ಅಪರೂಪ.

ಕುಟುಂಬ ಬದುಕಿನ ಭಾರೀ ದೊಡ್ಡ ಶಕ್ತಿ.

ಎಂದಿಗೂ ಕಳೆದುಕೊಳ್ಳಬಾರದ ಆಸ್ತಿ.

ಇದನ್ನು ನಡೆದು ತೋರಿದವರು ಪಂಚ ಪಾಂಡವರು.

ಅವರು ಐವರು ಪರಸ್ಪರ ಅನ್ಯೋನ್ಯವಾಗಿ ಇದ್ದ ರೀತಿ ಅನನ್ಯ.
ಭೀಮ ಶ್ರೇಷ್ಠ, ಅರ್ಜುನ ಗರಿಷ್ಠ, ಯುಧಿಷ್ಠಿರ ದೊಡ್ಡವ ಎಂಬ ಯಾವ ಸಣ್ಣ ಭೇದ ಭಾವ ಅವರೊಳಗೆ ಒಬ್ಬರಲ್ಲೂ ಇರಲಿಲ್ಲ.
ಮಲತಾಯಿಯ ಮಕ್ಕಳೆಂದು ನಕುಲ ಸಹದೇವರಿಗೆ ಒಂದು ದಿನ ಅನಿಸಿದ ಮಾತಿಲ್ಲ.
ಆ ತಾಯಿ ಕುಂತಿ ಸಾಕಿದ ಪರಿ ಯಾವ ರೀತಿ ಇರಬೇಕು.? ಈ ಐವರ ಪ್ರೀತಿ ಎಷ್ಟು ದೇವಭಾವವಾಗಿರ ಬೇಕು.?

ಮದುವೆ ಆಗಿ ಬಂದ ಸೊಸೆ ದ್ರೌಪದಿ ಮನೆ ಒಡೆಯಲಿಲ್ಲ. ಅವಳಾದರೂ ಐವರ ಹೆಂಡತಿ ಅದಕ್ಕೆ ಹಾಗೆ ಎನ್ನುವವರಿರ ಬಹುದು. ಅರ್ಜುನನ ಕೈಹಿಡಿದು ಬಂದ ಸುಭದ್ರೆ ಎಂದೂ ಐವರೊಳಗೆ ಒಡಕು ಹುಟ್ಟಿಸಲಿಲ್ಲ. ಪಂಚ ಪಾಂಡವರು ವನವಾಸದಲ್ಲಿದ್ದಾಗ ಉಪಪಾಂಡವರ ಪಾಲನೆ ಪೋಷಣೆಯನ್ನು ಸುಭದ್ರೆ ಅತ್ಯಂತ ಪ್ರೀತಿಯಿಂದ ಮಾಡಿದಳು ಎಂದು ಸ್ವತಃ ಕೃಷ್ಣ ಸತ್ಯಭಾಮೆಯರೇ ಪಾಂಡವರನ್ನು ಕಾಣಲು ಕಾಡಿಗೆ ಬಂದಾಗ ಹೇಳುತ್ತಾರೆ.

ಕುಟುಂಬ ಅಖಂಡವಾಗಿ ಇದ್ದರೆ ಹೊರಗಿನ ಯಾರೂ ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬುದನ್ನು ಪಾಂಡವರು ತೋರಿಸುತ್ತಾರೆ.

ಈ ಕುಟುಂಬ ಎನ್ನುವುದು ಬಹಳ ದೊಡ್ಡ ಮೌಲ್ಯ.
ಅದನ್ನು ಉಳಿಸಿಕೊಳ್ಳುವುದು ಪ್ರತೀ ಕುಟುಂಬದ ಸರ್ವ ಸದಸ್ಯರ ಕರ್ತವ್ಯ.

ಅದು ಹೆತ್ತ ತಂದೆ ತಾಯಿಯರಿಗೆ ಸಲ್ಲಿಸುವ ಪರಮ ಗೌರವ. ಪರಸ್ಪರ ಆನಂದದಿಂದ ಇರಲು ಮಾಡಬೇಕಾದ ಸಹಮತದ ಪೂಜೆ.

ಕುಟುಂಬದ ಮನೋ ವಿಸ್ತಾರ ಎಷ್ಟರವರೆಗೆ ವಿಶಾಲ ಎಂಬುದಕ್ಕೆ ಯುಧಿಷ್ಠಿರನ ವರ್ತನೆ ಒಂದು ಮಾದರಿ. ಚಿತ್ರಸೇನ ದುರ್ಯೋಧನ ಮತ್ತು ಕರ್ಣಾದಿಗಳನ್ನು ಬಂಧಿಸಿದ ಸುದ್ದಿಯನ್ನು ವನವಾಸದಲ್ಲಿದ್ದಾಗ ದುರ್ಯೋಧನನ ದೂತನೇ ಬಂದು ಹೇಳಿದಾಗ ಭೀಮ ‘ಅವರು ಮಾಡಿದ ತಪ್ಪಿಗೆ ತಕ್ಕ ಶಾಸ್ತಿ ಆಯಿತು’ಎಂದು ಭಾವಿಸಿದರೆ, ಅರ್ಜುನನೂ ಸಹಮತಿಸುವ ಅವಸರದಲ್ಲಿ ಇರುತ್ತಾನೆ. ಆದರೆ ಯುಧಿಷ್ಠಿರ ಹೇಳುವ ಮಾತು ಕುಟುಂಬದ ಪ್ರತಿಯೊಬ್ಬರೂ ಮನನ ಮಾಡಿ ಬದುಕಬೇಕು. “ದುರ್ಯೋಧನ ಏನಾದರೂ ನಮ್ಮ ಕುಟುಂಬದವನು. ಅವನನ್ನು ಮೂರನೆಯವನೊಬ್ಬ ಸದೆಬಡಿಯುವಾಗ ಸುಮ್ಮನಿರುವುದು ನಮ್ಮ ಧರ್ಮವಲ್ಲ, ಅವನು ನಮ್ಮ ದೊಡ್ಡಪ್ಪನ ಮಗ ನೀವು ಹೋಗಿ ಅವನನ್ನು ಬಿಡಿಸಿಕೊಂಡು ಬನ್ನಿ” ಎಂದು ಅರ್ಜುನಾದಿಗಳಿಗೆ ಆದೇಶಿಸುತ್ತಾನೆ. ಎಂತಹ ಅಪೂರ್ವ ಒಕ್ಕಟ್ಟು!?ಯಾವ ಮನೋ ವೈಶಾಲ್ಯ.!! ಸಾಮಾನ್ಯ ರಾಗ ದ್ವೇಷದಲ್ಲೇ ಬದುಕುವ ಯಾವ ಬಂಧುವಿಗೂ ಬಹಳ ದೊಡ್ಡ ಪಾಠ.

  ಗಣೇಶನಿಗೆ ವಿಶೇಷವಾಗಿ ಗರಿಕೆಯನ್ನು ಏಕೆ ಅರ್ಪಿಸಲಾಗುತ್ತದೆ …?

ಭೀಮಾದಿಗಳು ಬಿಡಿಸಿಕೊಂಡು ಬಂದರೆ ದುರ್ಯೋಧನ ಯುಧಿಷ್ಠಿರನ ಪಾದಕ್ಕೆ ನಮಿಸಿ ಈ ರೀತಿಯ ಸೋಲಿಗಾಗಿ ಆ ಕಾಡಿನಲ್ಲೇ ಪ್ರಾಯೋಪವೇಶ ಮಾಡುತ್ತಾನೆ. ಆ ಬಳಿಕ ಮತ್ತೆ ಕರ್ಣ ಶಕುನಿಗಳು ಅವನನ್ನು ಮೊದಲಿನ ದ್ವೇಷಕ್ಕೇ ಮರಳಿ ತರುತ್ತಾರೆ ಅನ್ನುವುದು ಪ್ರಾರಬ್ಧ. ಆದರೆ ಕುಟುಂಬದ ಮುಖಕ್ಕೆ ಇದು ಅತ್ಯಪೂರ್ವ ಕನ್ನಡಿ. ಮೂರನೆಯವರು ಕುಟುಂಬ ಒಡೆಯುತ್ತಾರೆ. ಅವರನ್ನೂ ದೂರ ಇರಿಸಬೇಕು ಎಂಬ ಪಾಠವೂ ಇದೆ. ಎಲ್ಲ ಕಾಲಕ್ಕೂ ಶಕುನಿಗಳಿದ್ದಾರೆ. ಕುಟುಂಬ ಒಡೆಯಬಾರದು ಎಂಬ ಎಚ್ಚರ ಉಳ್ಳವನು ಶಕುನಿಯನ್ನು ದೂರ ಇಡಬೇಕು.

ಭಾರತ ದೇಶದಲ್ಲಿ ಮಾತ್ರ ಈ ಕುಟುಂಬದ ಬಹಳ ದೊಡ್ಡ ಸಂಪತ್ತು ಇದೆ.

ಅದು ನಶಿಸಿ ಹೋಗುವ ಅವಸ್ಥೆಯಲ್ಲಿ ಇದೆ. ಇರುವ ಕೆಲವೇ ಕುಟುಂಬದವರೂ ತಮ್ಮ ಸಣ್ಣ ಪುಟ್ಟ ರಾಗ ದ್ವೇಷದಲ್ಲೇ ಬಹಳ ಅಮೂಲ್ಯವಾದ ಬಾಂಧವ್ಯವನ್ನು ಕಳೆದು ಕೊಳ್ಳುತ್ತಿದ್ದಾರೆ.

ಅಪ್ಪ ಅಮ್ಮ ಖುಷಿಯಲ್ಲಿ ಇರುವುದು ನಮಗೆ ಆಶೀರ್ವಾದ.

ಅವರು ಖುಷಿಯಲ್ಲಿ ಇರಬೇಕಾದರೆ ಅವರ ಅಷ್ಟೂ ಮಕ್ಕಳು ಕೂಡಿ ನಲಿದಾಡ ಬೇಕು.

ಪರಸ್ಪರ ದ್ವೇಷಿಸುವ ಯಾವ ಒಬ್ಬ ಸದಸ್ಯ ಇದ್ದರೂ ಅಪ್ಪ ಅಮ್ಮನ ಜೀವ ವಿಲವಿಲ ಒದ್ದಾಡುತ್ತದೆ. ಅಪ್ಪ ಅಮ್ಮ ಮನಸಿನಿಂದ ದುಃಖಿತರಿದ್ದರೆ ಯಾವ ಮಗುವಿನ ಬದುಕೂ ಒಳಿತಾಗುವುದಿಲ್ಲ.

ತಂದೆ ತಾಯಿಯನ್ನು ಯಾವ ಪರಿ ಪೂಜಿಸಿ ಗೌರವಿಸಬೇಕು ಎಂಬುದನ್ನು ಪರಮ ಪೂಜ್ಯ ಶ್ರೀ ಕೃಷ್ಣನೇ ಬದುಕಿ ತೋರಿದ್ದಾನೆ. ಅವನು ಕುಟುಂಬದ ಒಳಿತಿಗಾಗಿಯೇ ಅವತಾರ ಎತ್ತಿದವ ಎನ್ನುವಂತೆ ಅವನ ಚರಿತ್ರೆ ಇದೆ.

  ಕೃಷ್ಣ ಸುಧಾಮ ನ ಅವಲಕ್ಕಿ ಹಿಂದಿನ ಕಥೆ

೧.ಯದು ವಂಶದ ಕಂಸ ಅಪ್ಪನನ್ನು ಸೆರೆಯಲ್ಲಿ ಇಟ್ಟದ್ದಕ್ಕೆ ಕೃಷ್ಣ ಕಂಸ ವಧೆ ಮಾಡಿದ. ಕಂಸನ ತಂದೆ ಉಗ್ರಸೇನನನ್ನು ಸೆರೆಮನೆಯಿಂದ ಬಿಡಿಸಿದ. ಅವನ ತಂದೆ ಆಹುಕನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿದ.

೨. ಕುಂತಿ ಕೃಷ್ಣನ ಸೋದರತ್ತೆ, ವಸುದೇವನ ತಂಗಿ. ಅವಳ ಕುಟುಂಬವನ್ನು ಕಾಪಾಡಲು ಅವರೊಂದಿಗೆ ಪರಿಪರಿಯಾಗಿ ನಿಂತ. ಆ ಎಚ್ಚರ ದುರ್ಯೋಧನನಿಗೂ ಕೊಟ್ಟ. ಅಣ್ಣ ತಮ್ಮಂದಿರಲ್ಲಿ ದ್ವೇಷ ಬೇಡ, ಅವರಿಗೆ ಐದು ಗ್ರಾಮ ಕೊಡು ಉಳಿದಿದ್ದು ನೀನೇ ಅನುಭವಿಸು, ರಾಜ ಸಿಂಹಾಸನವನ್ನು ನೀನೇ ಇಟ್ಟುಕೋ ಎಂದ. ಆದರೆ ದ್ವೇಷಕ್ಕೆ ಸೀಮೆಯಿಲ್ಲ. ದುರ್ಯೋಧನನಿಗೆ ತನ್ನ ಹೊರತು ಇನ್ನೊಬ್ಬರು ಈ ನೆಲದ ಮೇಲೆ ಇರಬಾರದು ಎಂಬ ದ್ವೇಷ.

ಕೃಷ್ಣ ಈ ಪಾಂಡವರೆಂಬ ಪರಮಪ್ರೀತಿಯ ಕುಟುಂಬದ ಬೆನ್ನಿಗೆ ನಿಂತ. ಕೂಡಿರುವ ಕುಟುಂಬಕ್ಕೆ ಸದಾ ಭಗವಂತನ ಅನುಗ್ರಹ ಇದೆ ಎಂಬ ಸೂಚನೆಯನ್ನೂ ನೀಡಿದ. ಧನ, ಸೇನೆಯ ಶಕ್ತಿ ಉಳ್ಳ ಕೌರವರು ಗೆಲ್ಲಲಿಲ್ಲ, ಗೆದ್ದದ್ದು ಪರಮ ಬಾಂಧವ್ಯದ ಭಗವಂತನ ಅನುಗ್ರಹ ಪಡೆದ ಪಾಂಡವ ಕುಟುಂಬವೇ.

ನಾವು ಹಣ ಆಸ್ತಿಗಾಗಿ ಕುಟುಂಬವನ್ನು ದೂರ ಮಾಡುವ ಎಲ್ಲರೂ ಕೃಷ್ಣ ತೋರಿದ ಕನ್ನಡಿಯಲ್ಲಿ ಒಮ್ಮೆ ಮುಖ ನೋಡಿ ಕೊಳ್ಳಬೇಕು.

೩.ಹೀಗೆ ಒಂದು ಕುಟುಂಬವನ್ನು ಉಳಿಸಲು ಬಂದಂತೆ ಕಾಣುವ ಕೃಷ್ಣ ತನ್ನ ಕುಟುಂಬದ ವಿಷಯದಲ್ಲಿ ತೋರಿದ ಪ್ರತಿಕ್ರಿಯೆ ಪರಮಾಶ್ಚರ್ಯವಾದುದು. ಯದು ವಂಶದ ಕೃಷ್ಣನ ಮಕ್ಕಳೇ ಮೊದಲಾದ ಎಲ್ಲರೂ ನಾವು ದೊಡ್ಡವರು, ನಮಗೆ ಯಾರೂ ಸಾಟಿಯಿಲ್ಲ, ನಮ್ಮನ್ನು ಯಾರೂ ಕೇಳುವಂತಿಲ್ಲ ಎಂಬ ಮಟ್ಟದ ಅಹಂಕಾರ ತಲುಪಿದ್ದರು. ಕೃಷ್ಣ ಓಹೋ ಇವರು ಈ ನೆಲದಲ್ಲಿ ಇರಬಾರದು ಎಂದು ತೀರ್ಮಾನಿಸಿದ. ಹಾಗೆ ಕೃಷ್ಣನೇ ನೆಪವಾಗಿ, ಯದುವಂಶದ ಎಲ್ಲ ಅಣ್ಣ ತಮ್ಮಂದಿರು ಪರಸ್ಪರ ಕಾದಾಡಿ ಇಡೀ ವಂಶವೇ ಅವನ ಕಣ್ಣ ಮುಂದೆಯೇ ನಿರ್ವಂಶ ಆಯಿತು ಎನ್ನುತ್ತದೆ ವೇದವ್ಯಾಸರ ನಿರೂಪಣೆ

  ಶ್ರೀ ಅನಂತೇಶ್ವರ ದೇವಸ್ಥಾನ ಹಿನ್ನಲೆ ಕಥೆ - ಉಡುಪಿ

ಒಂದು ಒಳ್ಳೆಯ ಕುಟುಂಬದ ರಕ್ಷಣೆಗೆ ಸಾರಥಿಯಾಗಿ ನಿಂತ. ಉಪಪಾಂಡವರನ್ನು ಕೊಂದು ಕಟ್ಟಕಡೆಯ ಅಭಿಮನ್ಯುವಿನ ಮಗುವನ್ನು ಗರ್ಭದಲ್ಲಿ ಮುಗಿಸಲು ಬಂದ ಅಶ್ವತ್ಥಾಮನನ್ನು ತನ್ನ ಶಕ್ತಿಯಿಂದ ತಡೆದು ಗರ್ಭದಲ್ಲಿ ರಕ್ಷಣೆ ಕೊಡಿಸಿ ಮುಂದೆ ಪಾಂಡವರ ವಂಶ ನಿರ್ಣಾಮ ಆಗದೆ ಪರೀಕ್ಷಿತನ ಮೂಲಕ ಆ ವಂಶ ಈ ಭಾರತವನ್ನು ಅಳುವಂತೆ ಮಾಡಿದ. ಅದೇ ತನ್ನ ವಂಶ ಅಹಂಕಾರದಿಂದ ಬೀಗಿದಾಗ ನಿರ್ವಂಶ ಮಾಡಿದ.

ಅದಕ್ಕೆ ಶಾಸ್ತ್ರಗಳು, ಮನು ಸ್ಮೃತಿ ಎಲ್ಲರೂ ಕುಟುಂಬ ಒಡೆಯಬೇಡಿ,
ಕುಟುಂಬದ ಸರ್ವ ಸಂಪತ್ತನ್ನು ಹಂಚಿ ಬದುಕಿ, ಸಂಪತ್ತಿನ ಆಶೆ ಅಹಂಕಾರದ ಸೊಕ್ಕಿಗೆ ಕುಟುಂಬ ಒಡೆದವರು ನಿರ್ವಂಶ ಆಗುತ್ತಾರೆ ಎನ್ನುತ್ತಾರೆ.
ಆ ಮಾತನ್ನು ತೋರಿ ಹೋದವ ಶ್ರೀ ಕೃಷ್ಣ. ಸಂಪತ್ತಿನ ಆಶೆಗೆ ಬಿದ್ದು ಕುಟುಂಬ ಒಡೆದ ದುರ್ಯೋಧನ ಅಥವಾ ಧೃತರಾಷ್ಟ್ರ ವಂಶ ನಿರ್ವಂಶ ಆಯಿತು. ಒಳಿತು ಮಾಡಿದ ಪಾಂಡವ ಕುಟುಂಬ ನಿರ್ವಂಶ ಆಗದಂತೆ ಕೃಷ್ಣನೇ ಕಾದ. ತನ್ನ ವಂಶವೇ ಅಹಂಕಾರದಿಂದ ಬೀಗಿದಾಗ ಆ ವಂಶವನ್ನು ನಿರ್ವಂಶ ಮಾಡಿದ. ಕುಟುಂಬ ಹೇಗಿರಬೇಕು ಎಂಬುದನ್ನು ಈ ಮೂರು ಮಾದರಿಗಳ ಮೂಲಕ ತೋರಿಸಿದ.

ಕುಟುಂಬವನ್ನೇ ಬಿಟ್ಟು ವಿರಕ್ತ ಕುಟುಂಬ ಕಟ್ಟಿಕೊಂಡ ನಾನು ಕುಟುಂಬದ ಕುರಿತು ಹೇಳುವುದು ಯಾಕೆ?

ನೀವು ಅಚ್ಚರಿ ಪಡಬಹುದು. ಕುಟುಂಬವನ್ನು ಪೂರ್ತಿಯಾಗಿ ಬಿಟ್ಟು ಅದರ ಹೊರಗೆ ನಿಂತವರು ಮಾತ್ರ ಕುಟುಂಬದ ಒಳಿತು ಏನೆಂದು ತಿಳಿಯಬಲ್ಲರು.

ಅದಕ್ಕೆ ಕುಟುಂಬವನ್ನೇ ಬಿಟ್ಟ ವೇದವ್ಯಾಸರು ಈ ಕುಟುಂಬದ ಕಥೆ ಹೇಳಿದರು.

ಆ ವೇದವ್ಯಾಸರಿಗೆ ನಮಿಸಿ ಕುಟುಂಬಕ್ಕೆ ವಂದಿಸುವೆ.

-ವೀಣಾ ಬನ್ನಂಜೆ.

💐💐💐💐💐💐💐

Leave a Reply

Your email address will not be published. Required fields are marked *

Translate »