ಪೊಳಲಿ ದೇವಸ್ಥಾನ ಜೀರ್ಣೋದ್ಧಾರ
ಆವೊಂದು ಕಾಲದಲ್ಲಿ ವೈಭವದಿಂದ ಮೆರೆದ ದೇವಸ್ಥಾನ. ಪೊಳಲಿ ಸಾವಿರ ಸೀಮೆಗೆ ಸಂಬಂಧಪಟ್ಟ ದೇವಸ್ಥಾನವೂ ಹೌದು.
ಪೊಳಲಿ ದೇವಸ್ಥಾನದ ಕೊಡಿ ಇಳಿದ ನಂತರ ಕೊಡಿ ಏರಿ…..ವಾರದ ಜಾತ್ರೆ.. ಮೂರುದಿನದ ಚೆಂಡು ..ಇತ್ಯಾದಿ ಇತ್ಯಾದಿಗಳಿದ್ದ ದೇವಸ್ಥಾನವಂತೆ.
ಮುಂದೆ..ಕಾಲನ ಹೊಡೆತ..
“ಮಹಾಕಾಲ”ನಿಗೇ ಕಾಲದ ಹೊಡೆತ!!!!
ಕಟ್ಟಿಸಿದವರೂ ಉಳಿಯಲಿಲ್ಲ.. ಪೂಜಿಸಿದವರೂ ಉಳಿಯಲಿಲ್ಲ. ಭಜಿಸಿದವರೂ ಉಳಿಯಲಿಲ್ಲ.ಉಳಿದದ್ದು ಶಿವನೊಬ್ಬನೇ.
ಪೂಜೆ ಪುನಸ್ಕಾರಗಳಿಲ್ಲದೇ…ಕೇಳುವವರಿಲ್ಲದೇ..
ಈ ನಡುವೆ ಸುಮಾರು ತೊಂಬತ್ತೋ ನೂರು ವರ್ಷಗಳ ಹಿಂದೆ ಊರ ಹಿರಿಯರೊಬ್ಬರು., ದೊಡ್ಡ ಜರಿ ಮುಂಡಾಸಿನವರೊಬ್ಬರು , ಈ ಹಾಳುಬಿದ್ದ ಶಿವನಿಗೊಂದು ವ್ಯವಸ್ಥೆ ಮಾಡುವ ಅಂತ ಮುಂದುವರಿಸಿದರಂತೆ.
” ಸರ್ವಲೋಕೈಕನಾಥ”ನಿಗೇ ವ್ಯವಸ್ಥೆ ಮಾಡುತ್ತೇನೆ ಅಂತ ಅಹಂಕಾರದಲ್ಲಿ ಹೊರಟಿದ್ದರೋ ಅಲ್ಲ ನನ್ನಿಂದಾಗಿ ಶಿವ ಅನ್ನುವ ಧಾಷ್ಟ್ರ್ಯದಲ್ಲಿ ಹೊರಟಿದ್ದರೋ…
ಶಿವಾಲಯದ ಒಳಹೊಗ್ಗುವಲ್ಲೇ ಜರಿ ಮುಂಡಾಸಿಗೆ ಬೆಂಕಿ ಹಿಡಿದು “ಈ ಕಾರ್ಯ ನನ್ನ ನಿಲುಕಿನದಲ್ಲ”-ಅಂತ ಹಿಂದುರಿಗಿದ್ದು ಬರಿಯ ಕಥೆ ಅಲ್ಲ… ಸತ್ಯವೇ.
ನಂತರ….
ಅಲ್ಲಿ ಶಿವನಿದ್ದ ಅಂತ ಗೊತ್ತಿದ್ದವರು ಸಂಕ್ರಾಂತಿಗೋ, ಶಿವರಾತ್ರಿಗೋ ಹೋಗಿ, “ನಮ್ಮ ಶಿವನೀತ” ಅಂದೆಣಿಸಿ ತಲೆಗೊಂದು ಹನಿ ನೀರು ಹಾಕಿ ಎರಡೆಸಳು ಬಿಲ್ವಪತ್ರೆ ಹಾಕಿ ಕೈಮುಗಿದರು.
ಗೊತ್ತಿಲ್ಲದವರು ಆತ “ರುದ್ರ” ಬೇಡ ನಮಗವನ ಉಸಾಬರಿ ಅಂತ ದೂರದಿಂದಲೇ ಕೈಮುಗಿದರು.
ನಂತರ ಏನು?
ಹಾಗೆಯೇ ಇದ್ದ ಶಿವ. ಹೇಗಿದ್ದರೇನು? ಶಿವನಿಗೊಂದು ಹೇಗಿದ್ದರೂ ಲೆಕ್ಕವೇ? ಅವನಿಗೆ ಮಳೆಯೂ ಒಂದೇ ಬಿಸಿಲೂ ಒಂದೇ..ಊರೂ ಒಂದೇ..ಸುಡುಗಾಡೂ ಒಂದೇ.. ನಿರ್ಮೋಹಿಗೆ ನಿಷ್ಕಳಂಕನಿಗೆ ಯಾವುದರ ಬಯಕೆ? ಯಾವುದರ ವ್ಯತ್ಯಾಸ?
ಶಿವ “ಅನಾಥ” ನಾದ ಅಂತ ಪಾಪಪ್ರಜ್ಞೆ ಕಾಡಿದ್ದು ನಮಗೆ. ಮನುಷ್ಯರಿಗೆ..
“ವಿಶ್ವ ನಾಥ” ವಿಶ್ವವೇ ಮನೆಯಾಗಿರುವವ, ವಿಶ್ವವೇ ತಾನೇ ಆಗಿರುವವ, ಸ್ರಷ್ಟಿ,ನಿಯತಿ, ಲಯ ತಾನೇ ಆಗಿರುವವ ಅನಾಥ ಅಂತ ಆಗುವುದುಂಟೇ?
ಹಾಗಿದ್ದರೂ…,
ಶಿವ , ಸರ್ವವ್ಯಾಪಿ ಆಗಿದ್ದರೂ, ಸರ್ವ ಲೋಕ ಸರ್ವ ಬ್ರಹ್ಮಾಂಡಕ್ಕೆ ಒಡೆಯನಾಗಿದ್ದರೂ, ಅಲ್ಲ ಅವುಗಳೆಲ್ಲಾ ಅವನೇ ಆಗಿದ್ದರೂ,,
ನಮ್ಮ ಎಣಿಕೆಗೆ ಸಿಕ್ಕಿದ್ದು, ನಿಲುಕಿಗೆ ನಿಲುಕಿದ್ದು ಕಂಡ,ಕಾಣಿಸಿದ ಲಿಂಗರೂಪವೇ ಅಲ್ಲವಾ?
ಕಂಡಿದ್ದೇವೆ. ಗುಡಿ ಇದ್ದನ್ನೂ ಕಂಡಿದ್ದೇವೆ. ವೈಭವದಿಂದ ಮೆರೆದದ್ದನ್ನೂ ಕೇಳಿದ್ದೇವೆ.
ಹಾಗೆಯೇ ಬಿಡಲಾದೀತೇ ಶಿವನ?
ಬುದ್ದಿ ಕೊಟ್ಟು ಮುನ್ನಡೆಸಿ, ನಿಮಿತ್ತ ಮಾತ್ರದ ತಿಳಿವಿನಲ್ಲಿ ನಡೆಸುವವ ಅವನೇ ಆದರೂ, ಮನುಷ್ಯರ ಇಚ್ಛಾಶಕ್ತಿ, ಸೇರುವಿಕೆ ಬೇಕಲ್ಲ? ಅದಕ್ಕೊಂದು ಮುನ್ನಡೆಸುವವರು ಅಂತ ಬೇಕಲ್ಲ?….
ಹಾಗೆ…
ಶ್ರೀ Ranganath Bhat ಹಾಗೂ ಶ್ರೀ Harikrishna Bhat ಮುಂದಾಳತ್ವದಲ್ಲಿ, ಊರ ಪರವೂರ ಭಕ್ತಾಭಿಮಾನಿಗಳೆಲ್ಲಾ ಸೇರಿ ಸಂಕಲ್ಪ ಮಾಡಿ ಸೋಮವಾರ, ಸನ್ನಿಧಾನದಲ್ಲಿ, ಗಣಹೋಮ ಮ್ರತ್ಯುಂಜಯ ಹೋಮ, ಆಶ್ಲೇಷಾ ಬಲಿ ಪೂಜೆ , ಮುಷ್ಟಿ ಕಾಣಿಕೆಗಳ ಸಂಭ್ರಮ.
ದೇವತಾಕಾರ್ಯ ನಿರ್ವಿಘ್ನವಾಗಿ ನೆರವೇರಲಿ, ಸಕಲ ಭಕ್ತಜನರ ಆಶಯದಂತೆ ವೈಭವೋಪೇತ ಶಿವಾಲಯ ನಿರ್ಮಾಣವಾಗಿ, ಹಿಂದಿನ ವೈಭವ ಮರಳಿ ಬರಲಿ ಅಂತ ಶ್ರೀ ಸನ್ನಿಧಾನದ “ಶ್ರೀ ಗಂಧಾಡಿ ಸೋಮನಾಥೇಶ್ವರ”ನಲ್ಲಿ ಪ್ರಾರ್ಥನೆ…🙏