ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ರಥಸಪ್ತಮಿ ಪೂಜೆ ಹಾಗೂ ಆಚರಣೆ

ರಥಸಪ್ತಮಿ ಪೂಜೆ ಹಾಗೂ ಆಚರಣೆ
28 ಜನವರಿ 2023 ಶನಿವಾರ

ಸೂರ್ಯದೇವರ ಹುಟ್ಟಿದ ಹಬ್ಬವನ್ನೂ ರಥಸಪ್ತಮಿ ಎಂದು ಕರೆಯಲಾಗುತ್ತದೆ…

ನಮ್ಮ ಹಿಂದೂ ಸಂಪ್ರದಾಯದಲ್ಲಿ ಮೂವತ್ತು ಮೂರು ಕೋಟಿ ದೇವರುಗಳು ಇದ್ದಾರೆ ಎಂಬ ನಂಬಿಕೆಯಿದೆ ಮತ್ತು ಪ್ರತಿಯೊಂದು ದೇವಾನು ದೇವತೆಗಳಿಗೆ ಒಂದೊಂದು ರೂಪ, ವಾಹನ ಆಯುಧಗಳ ಮೂಲಕ ಗುರುತಿಸುತ್ತೇವೆ.

ಆದರೆ ಸೂರ್ಯ ಮತ್ತು ಚಂದ್ರ ಮಾತ್ರ ಪ್ರತ್ಯಕ್ಷವಾಗಿ ನೋಡಬಹುದಾಗಿದೆ ಮತ್ತು ಅವುಗಳ ಶಕ್ತಿ ಮತ್ತು ಕಾಂತಿಗಳನ್ನು ಅನುಭವಿಸಬಹುದಾಗಿದೆ. ಅಂಥ ಶಕ್ತಿವಂತ ಸೂರ್ಯನನ್ನು ಆರಾಧಿಸುವ ದಿನವೇ ರಥಸಪ್ತಮಿ.

ಸಂಕ್ರಾಂತಿ ಹಬ್ಬ ಕಳೆದು ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ತನ್ನ ಪಥವನ್ನು ಬದಲಿಸುತ್ತಾನೆ. ಇಂದಿನಿಂದ ಹಗಲು ಹೆಚ್ಚಾಗಿ ಸೂರ್ಯ ಮತ್ತಷ್ಟೂ ಪ್ರಖರನಾಗಿ ಪ್ರಜ್ವಲಿಸುತ್ತಾನೆ ಮತ್ತು ಬೇಸಿಗೆಯ ಆರಂಭ ಸೂಚಕವೂ ಹೌದು.

ಆರೋಗ್ಯಂ ಭಾಸ್ಕರಾದಿಚ್ಛೇತ್… ಎಂಬ ಶ್ಲೋಕದಂತೆ ಸೂರ್ಯನಿಂದಾಗಿ ಆರೋಗ್ಯವು ವೃದ್ಧಿಯಾಗುತ್ತದೆ.

ಚಳಿಗಾಲದಲ್ಲಿ ಮುದುಡಿ ಹೋಗಿದ್ದ ಶರೀರ, ರಥಸಪ್ತಮಿಯ ಬಳಿಕ ಸೂರ್ಯನ ಶಾಖದಿಂದಾಗಿ ನವಚೈತನ್ಯ ತುಂಬಿಕೊಳ್ಳುತ್ತದೆ.

ಸೂರ್ಯ ತನ್ನ ಹಳೆಯ ರಥವನ್ನು ಬಿಟ್ಟು ಹೊಸ ರಥ ಏರುತ್ತಾನೆ ಎಂದೂ ಹೇಳುತ್ತಾರೆ. ಕೆಲವರು ಈ ದಿನವನ್ನು ಸೂರ್ಯನ ಜನ್ಮದಿನವೆಂದರೆ, ಇನ್ನೂ ಹಲವರು ಇದನ್ನು ಅಚಲಾ ಸಪ್ತಮಿ ಎಂದೂ ಕರೆಯುತ್ತಾರೆ.

ಅಕ್ಷಯ ತೃತೀಯದಂತೆಯೇ, ಅಚಲಾ ಸಪ್ತಮಿಯಂದು ದೊರೆಯುವ ಪುಣ್ಯಗಳೂ ಸಹ ಅಚಲವಾಗಿಯೇ ಉಳಿಯುತ್ತವೆ ಎಂಬ ನಂಬಿಕೆಯಿದೆ. ರಥಸಪ್ತಮಿ ಎಂಬ ಹೆಸರಿಗೆ ಕಾರಣ ಈ ವಿಶಿಷ್ಟವಾದ ಸಪ್ತಮಿ ತಿಥಿಯಂದು ರಥವರ ಎಂದು ಕರೆಯಲಾಗುವ ಸೂರ್ಯನು ಆರಾಧಿಸಲಾಗುವುದು.

ಸೂರ್ಯೊದಯ ಸಮಯದಲ್ಲಿ ಸೂರ್ಯನ ಕಿರಣಗಳಿಗೆ ರೋಗಾಣುಗಳನ್ನು ನಾಶ ಪಡಿಸುವ ಶಕ್ತಿಯಿದೆ. ಬೆಳಗಿನ ಈ ಕಿರಣಗಳು ದೇಹಕ್ಕೆ ಚೈತನ್ಯ ನೀಡುವ ಕಾರಣ ಬಹುತೇಕರು ಸೂರ್ಯಸ್ನಾನ ಮಾಡುವ ಪದ್ದತಿಯನ್ನುರೂಢಿಯಲ್ಲಿಟ್ಟು ಕೊಂಡಿದ್ದಾರೆ.
ಪ್ರತೀದಿನ ಬೆಳಗ್ಗೆ ಅಥವಾ ಸಂಜೆಯ ಸೂರ್ಯ ಕಿರಣಗಳಿಗೆ ದೇಹವನ್ನು ಒಡ್ಡಲಾಗದವರು ರಥಸಪ್ತಮಿಯ ದಿನದಂದಾರೂ ಸೂರ್ಯ ಸ್ನಾನ (ಸೂರ್ಯನ ಕಿರಣಗಳಿಗೆ ದೇಹದ ಮೇಲ್ಭಾಗವನ್ನು ಮೈಯೊಡ್ಡುವುದು) ಮಾಡಿದರೆ ದೇಹವೂ ಚೈತನ್ಯದಾಯಕವಾಗುವುದು ಮತ್ತು ಹಲವು ರೋಗ ರುಜಿನಗಳಿಂದ ಗುಣಹೊಂದುತ್ತಾರೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.

  ಸಂವತ್ಸರದ ಐದು ನವರಾತ್ರಿಗಳು

ಇದೇ ಕಾರಣಕ್ಕಾಗಿಯೇ ನವಜಾತ ಶಿಶುಗಳ ಮೈಯ್ಯಿಗೆ ಚೆನ್ನಾಗಿ ಎಣ್ಣೆ ಹಚ್ಚಿ ಮುಂಜಾನೆಯ ಎಳೆಬಿಸಿಲಿನಲ್ಲಿ ಮಲಗಿಸುತ್ತಾರೆ. ಅದೇ ರೀತಿ ಮಕ್ಕಳಿಗೆ ಹುಟ್ಟಿದ ದಿನಗಳಲ್ಲಿ ಬರುವ ಕಾಮಾಲೆ ರೋಗಗಳಿಗೂ ಸೂರ್ಯನ ಕಿರಣ ರಾಮಬಾಣವಾಗಿದೆ. ಸೂರ್ಯನ ಕಿರಣಗಳ ಈ ರೀತಿಯ ಉಪಯುಕ್ತತೆಯನ್ನು ಅರಿತಿರುವ ಕಾರಣದಿಂದಾಗಿಯೇ ಇಂದಿಗೂ ಕೂಡ ನಮ್ಮ ರೈತಾಪಿ ಜನರು ಸೂರ್ಯನ ಉದಯದ ಸಮಯದಲ್ಲಿಯೇ ತಮ್ಮ ಬೇಸಾಯವನ್ನು ಆರಂಭಿಸಿ ಸೂರ್ಯನ ಕಿರಣಗಳು ಪ್ರಖರವಾದಾಗ ಮರಗಳ ನೆರಳಿನಲ್ಲಿ ವಿರಮಿಸಿ ಮತ್ತೆ ಸಂಜೆ ಸೂರ್ಯನ ಕಿರಣಗಳಿಗೆ ಮೈಯ್ಯೊಡ್ಡಿ ಬೆವರು ಸುರಿಸಿ ಕಷ್ಟ ಪಟ್ಟು ದುಡಿಯುವ ಪರಿಣಾಮವಾಗಿಯೇ ಪಟ್ಟಣವಾಸಿಗಳಿಗಿಂತ ಹೆಚ್ಚಾಗಿ ರೋಗರುಜಿನಗಳಿಂದ ಮುಕ್ತರಾಗಿ ಆರೋಗ್ಯವಂತರಾಗಿದ್ದಾರೆ.

ಪೌರಾಣಿಕದ ಹಿನ್ನಲೆಯಲ್ಲಿ ರಥಸಪ್ತಮಿಯ ಹಬ್ಬದ ಆಚರಣೆಯನ್ನು ನೋಡುವುದಾದರೇ ಮಾಘಶುದ್ಧ ಸಪ್ತಮಿಯ ಸೂರ್ಯೋದಯ ಕಾಲದಲ್ಲಿ ಸೂರ್ಯಗ್ರಹಣದ ದಿನದಂತೆಯೇ ತಲೆಗೆ ಸ್ನಾನ ಮಾಡಿ, ಅರ್ಘ್ಯ ಪ್ರದಾನ ಮಾಡಿದರೆ ಆರೋಗ್ಯ ಸಂಪತ್ತುಗಳು ಇಮ್ಮುಡಿಯಾಗುತ್ತವೆ ಎಂದು ಹಲವಾರು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

ರಾಮ ರಾವಣರ ಯುದ್ಧದ ಸಂಧರ್ಭದಲ್ಲಿ ಅಗಸ್ತ್ಯ ಮಹರ್ಷಿಗಳ ಉಪದೇಶದಂತೆ ಶ್ರೀ ರಾಮಚಂದ್ರನೂ ಕೂಡ ಆದಿತ್ಯಹೃದಯದ ಮೂಲಕ ಸೂರ್ಯ ಭಗವಾನನ ಉಪಾಸನೆ ಮಾಡಿದ್ದರು ಎಂದು ರಾಮಾಯಣದಲ್ಲಿ ಉಲ್ಲೇಖವಿದೆ.

ದ್ವಾಪರ ಯುಗದಲ್ಲಿ ಪಾಂಡವರ ಅಜ್ಞಾತವಾಸ ವಾಸದ ಸಮಯದಲ್ಲಿ ಶ್ರೀ ಕೃಷ್ಣನು ಅವರಿಗೆ ರಥಸಪ್ತಮಿ ಬಗ್ಗೆ ತಿಳಿಸಿ ದ್ರೌಪದಿಯು ಶ್ರದ್ಧಾಭಕ್ತಿಗಳಿಂದ ಸೂರ್ಯಾರಾಧನೆ ಮಾಡಿದ ಪರಿಣಾಮವಾಗಿಯೇ ಸೂರ್ಯನಿಂದ ಅಕ್ಷಯಪಾತ್ರೆಯನ್ನು ಪಡೆದು ಅಂತಹ ಗೊಂಡಾರಣ್ಯದಲ್ಲಿಯೂ ಪ್ರತೀ ದಿನವು ಮೃಷ್ಟಾನ್ನ ಭೋಜನ ಮಾಡುತ್ತಿದ್ದರು ಎಂದು ಹೇಳುತ್ತದೆ ಪುರಾಣಗಳು.

ಅದೇ ರೀತಿ ಯಶೋವರ್ಮನೆಂಬ ರಾಜನಿಗೆ ಜನಿಸಿದ ಮಗುವು ಹುಟ್ಟಿನಿಂದಲೇ ಖಾಯಿಲೆಗೆ ತುತ್ತಾಗಿ, ಕುಲಪುರೋಹಿತರನ್ನು ಈ ಕುರಿತು ವಿಚಾರಿಸಲು, ಸಂಚಿತಕರ್ಮದಿಂದ ಬಂದಿರುವ ಈ ರೋಗವು ರಥಸಪ್ತಮಿ ವ್ರತ ಆಚರಿಸಿದರೆ ಪರಿಹಾರವಾಗುತ್ತದೆ ಎಂಬುದಾಗಿ ಸೂಚಿಸಿದರು. ಅದೇ ಪ್ರಕಾರವಾಗಿ ರಥಸಪ್ತಮಿಯಂದು ಸೂರ್ಯಾರಾಧನೆ ಮಾಡಿದ ಪರಿಣಾಮವಾಗಿ ಮಗುವು ಆಯುರಾರೋಗ್ಯವಂತನಾದ ಎಂದು ಮತ್ತೊಂದು ದೃಷ್ಟಂತ ಹೇಳುತ್ತದೆ.

ರಥ ಸಪ್ತಮಿಯ ಆಚರಣೆ

ರಥಸಪ್ತಮಿಯ ದಿನದಂದು ಆಬಾಲವೃದ್ಧರಾಗಿ ಸೂರ್ಯೋದಯಕ್ಕಿಂತಲೂ ಮುಂಚೆಯೇ ಎದ್ದು ಮನೆಯನ್ನೆಲ್ಲ ಶುಚಿಗೊಳಿಸಿ ಹೆಂಗಳೆಯರು ಮನೆಯ ಮುಂದೆ ಸೆಗಣಿಸಾರಿಸಿ ಚೆಂದದ ದೊಡ್ಡ ದೊಡ್ಡ ರಂಗೋಲಿ ಇಟ್ಟು, ಸ್ನಾನದ ಸಮಯದಲ್ಲಿ ತಲೆಯ ನೆತ್ತಿಯ ಮೇಲೊಂದು, ಎರಡು ಭುಜಗಳು, ಎರಡು ಪಾದಗಳು, ಹೃದಯ ಕಳಶ ಮತ್ತು ನಾಭಿ ಮೇಲೆ ಒಟ್ಟು 7 ಎಕ್ಕದ ಎಲೆಯನ್ನು ಇಟ್ಟುಕೊಂಡು ಸ್ನಾನ ಮಾಡುವುದು ಸಂಪ್ರದಾಯವಾಗಿದೆ.

ಸೂರ್ಯದೇವನನ್ನು ಎಕ್ಕದ ಎಲೆಗಳಿಂದ ಪೂಜಿಸುವುದರಿಂದ, ಎಕ್ಕದ ಎಲೆಗಳನ್ನು ಬಳಸುತ್ತಾರೆ. ಈ ರೀತಿಯಾಗಿ ಏಳು ಎಕ್ಕದೆಲೆಯ ಸ್ನಾನ ಮಾಡುವುದರಿಂದ ಏಳೇಳು ಜನ್ಮದ ಪಾಪಗಳು ನಾಶವಾಗುತ್ತವೆ ಎಂಬ ನಂಬಿಕೆ ಇದೆಯಲ್ಲದೇ ಎಕ್ಕದೆಲೆಯಿಂದ ಮೈಯ್ಯುಜ್ಜಿಕೊಂಡು ಸ್ನಾನ ಮಾಡಿದರೆ, ಸಾಧಾರಣವಾಗಿ ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ, ಚರ್ಮರೋಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು, ರೋಗಗಳನ್ನು ನಿವಾರಿಸುವ ಸಾಮರ್ಥ್ಯವಿದೆ ಎಂದು ಆಯುರ್ವೇದದಲ್ಲಿ ತಿಳಿಸಲಾಗಿದೆ. ಸ್ನಾನದ ನಂತರ ಸೂರ್ಯದೇವರನ್ನು ಪೂಜಿಸಬೇಕು.
ರಥಸಪ್ತಮಿಯಂದು ಶುಭದ ಸಂಕೇತವಾಗಿ ಮನೆಗಳಲ್ಲಿ ಹಾಲನ್ನು ಉಕ್ಕಿಸುವ ಸಂಪ್ರದಾಯವೂ ಇದೆ. ವಿಜಯದಶಮಿಯಂತೆಯೇ ಈ ದಿನವೂ ಮಾಡುವ ಕೆಲಸಗಳಲ್ಲವೂ ಶುಭಪ್ರದವಾಗುತ್ತದೆ ಎನ್ನುವ ನಂಬಿಕೆ ಇರುವ ಕಾರಣ, ಈ ದಿನ ಅನೇಕ ಶುಭ ಕಾರ್ಯಗಳನ್ನು ಮಾಡುತ್ತಾರೆ.

ಮಾಘಮಾಸದಲ್ಲಿ ಅದರಲ್ಲೂ ರಥಸಪ್ತಮಿಯಂದು ಸೂರ್ಯೋದಯದ ಸಮಯದಲ್ಲಿ ನದಿ, ಸಾಗರ, ಸರೋವರಗಳಲ್ಲಿ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯ ನೀಡಿದಲ್ಲಿ ಪೂರ್ವ ಜನ್ಮದ ಪಾಪಗಳು ಮತ್ತು ಈ ಜನ್ಮದ ಕರ್ಮಗಳು ಪರಿಹಾರವಾಗುತ್ತವೆ

ದೇಶಾದ್ಯಂತ ದೇವಾಲಯಗಳಲ್ಲಿ ರಥಸಪ್ತಮಿಯಂದು ವಿಶೇಷ ಪೂಜೆ ಹೋಮ ಹವನಾದಿಗಳನ್ನು ಮಾಡುತ್ತಾರೆ. ಈ ಸಂದರ್ಭದಲ್ಲಿ ಸೂರ್ಯನಿಗೆ ಪ್ರಿಯವಾದ ರವೆಯ ಪಾಯಸವನ್ನು ನೈವೇದ್ಯ ಮಾಡಿ ಭಕ್ತಾದಿಗಳಿಗೆ ಹಂಚುತ್ತಾರೆ.

ಒರಿಸ್ಸಾದ ಕೊನಾರ್ಕದ ಸೂರ್ಯನ ದೇವಸ್ಥಾನ, ಗಯಾದ ದಕ್ಷಿಣಾರ್ಕ ದೇವಸ್ಥಾನ, ರಾಜಸ್ಥಾನದ ರಾನಕ್ಪುರ, ಗುಜರಾತಿನ ಮೊಥೇರಾ, ಮಧ್ಯಪ್ರದೇಶದ ಉನಾವು, ಅಸ್ಸಾಮಿನ ಗೋಲ್ಪರ, ಆಂಧ್ರಪ್ರದೇಶದ ಅರಸವಲ್ಲಿ, ತಮಿಳುನಾಡಿನ ಕುಂಭಕೋಣಂ ಮತ್ತು ಬೆಂಗಳೂರಿನ ದೊಮ್ಮಲೂರಿನಲ್ಲಿರುವ ಸೂರ್ಯನಾರಾಯಣನ ದೇವಸ್ಥಾನಗಳಿಗೆ ರಥಸಪ್ತಮಿಯಂದು ವಿಶೇಷವಾಗಿ ಪೂಜೆ ನಡೆಯುತ್ತವೆ.

ಈ ದಿನ ಸಾಮೂಹಿಕವಾಗಿ ಅಥವಾ ವೈಯಕ್ತಿಕವಾಗಿ 108 ಸೂರ್ಯ ನಮಸ್ಕಾರಗಳು ಹಾಕುವುದು ಆರೋಗ್ಯ ಕ್ಕೆ ತುಂಬಾ ಒಳ್ಳೆಯದು.

ಸೂರ್ಯ ನಮಸ್ಕಾರ ಮಂತ್ರಗಳು

● ಓಂ ಮಿತ್ರಾಯ ನಮಃ
● ಓಂ ರವಯೇ ನಮಃ
● ಓಂ ಸೂರ್ಯಾಯ ನಮಃ
● ಓಂ ಭಾನವೇ ನಮಃ
● ಓಂ ಖಗಾಯ ನಮಃ
● ಓಂ ಪೂಷ್ಣೇ ನಮಃ
● ಓಂ ಹಿರಣ್ಯಗರ್ಭಾಯ ನಮಃ
● ಓಂ ಮರೀಚ್ಯೇ ನಮಃ
● ಓಂ ಆದಿತ್ಯಾಯ ನಮಃ
● ಓಂ ಸವಿತ್ರೇ ನಮಃ
● ಓಂ ಅರ್ಕಾಯ ನಮಃ
● ಓಂ ಭಾಸ್ಕರಾಯ ನಮಃ
● ಓಂ ಶ್ರೀ ಸವಿತೃ ಸೂರ್ಯ ನಾರಾಯಣಾಯ ನಮಃ

  ಭಕ್ತ ಶಿರೋಮಣಿ ಸಂಕಟಮೋಚನ ಹನುಮಂತನ ವಿವಿಧ ಗುಣವೈಶಿಷ್ಟ್ಯಗಳು !

ಶ್ಲೋಕ
ಆದಿತ್ಯಸ್ಯ ನಮಸ್ಕಾರಾನ್ ಯೇ ಕುರ್ವಂತಿ ದಿನೆ ದಿನೇ |
ಆಯುಃ ಪ್ರಜ್ಞಾಂ ಬಲಂವೀರ್ಯಂ ತೇಜಸ್ತೇಷಾಂಚ ಜಾಯತೇ ||

ಈ ದಿನ ವಿಶೇಷವಾಗಿ ಸೂರ್ಯ ದೇವರಿಗೆ ಸಜ್ಜಿಗೆ ಪಾಯಸ ಅಥವಾ ಕ್ಷೀರ ಪಾಯಸ ಮಾಡಿ ಹಂಚಬೇಕು..

                *ದಾನಗಳು*

● ಬ್ರಾಹ್ಮಣ ರಿಗೆ ಯಥಾಶಕ್ತಿ ಕ್ಷೀರ (ಹಾಲು) ದಾನ, ನೂತನ ವಸ್ತ್ರದಾನ, ಧವಸಧಾನ್ಯ ಮುಂತಾದವುಗಳನ್ನು ದಾನ ಮಾಡಬೇಕು.
● ಅಂಗವಿಕಲರಿಗೆ ಹಣ್ಣುಗಳನ್ನು ದಾನ ಮಾಡಿ…

ಸಪ್ತಾಶ್ವ ರಥಮಾರೂಢಂ ಪ್ರಚಂಡಂ ಕಶ್ಯಪಾತ್ಮಜಂ|
ಶ್ವೇತಪದ್ಮಧರಂ‌ ದೇವಂ ತಂ ಸೂರ್ಯಂ ಪ್ರಣಮಾಮ್ಯಹಂ||

ಇಂದು ದೃಗ್ಗಣಿತದ ಪ್ರಕಾರ ನಮಗೆ ರಥಸಪ್ತಮಿ, ವಿಟಮಿನ್ ಡಿ ಅನ್ನು ಉಚಿತವಾಗಿ ಹೇರಳವಾಗಿ ನೀಡಿ ನಮ್ಮ ಆರೋಗ್ಯ ಕಾಯುವ ಶ್ರೀಸೂರ್ಯದೇವನನ್ನು ಮನಸಾ ಸ್ಮರಿಸಿ ಪ್ರಾರ್ಥಿಸೋಣ…🙏🙏🚩

Leave a Reply

Your email address will not be published. Required fields are marked *

Translate »