ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಗಣೇಶ ಚತುರ್ಥಿ ಪೂಜೆಯ ಸರಳ ಮಾಹಿತಿ

ಗಣಪತಿ ಪೂಜೆಯ ಸರಳ ಮಾಹಿತಿ..!

ಭಕ್ತ ತಾರಕ ಹೇರಂಭ ಗೌರಿ ಪುತ್ರ ವಿನಾಯಕ ಸತತಂ ಜ್ಞಾನ ಲಾಭಾಯಾ
ಶ್ರೀ ಗಣೇಶಾಯ ನಮೋಸ್ತುತೇ.

ಈ ‘ಗಣೇಶ ಚೌತಿ’ ಹಬ್ಬ ನಮ್ಮ ಹೆಮ್ಮೆಯ ಭಾರತ ದೇಶದಾದ್ಯಂತ ಆಚರಿಸುವ ಸಾರ್ವತ್ರಿಕ ಹಬ್ಬ ಭಾದ್ರಪದ ಮಾಸದ ಚೌತಿಯ ‘ಗಣೇಶ ಹಬ್ಬ’ ಗಣೇಶ ವ್ರತ ಪುಣ್ಯಪ್ರದವಾದ ಪೂಜೆ. ಪುರುಷರು, ಮಹಿಳೆಯರು, ಮಕ್ಕಳು ಪೂಜೆಯನ್ನು ಮಾಡುವರು. ಸಂಪ್ರದಾಯಸ್ಥ ಮನೆಗಳಲ್ಲಿ ಮಣ್ಣಿನ ಗಣಪತಿ ಪ್ರತಿಷ್ಠಾಪನೆ ಮಾಡಿ, ಶಾಸ್ತ್ರೋಕ್ತವಾಗಿ ವಿಧಿ ವಿಧಾನಗಳ ಕ್ರಮದಲ್ಲಿ ಆಚರಿಸುತ್ತಾರೆ. ಉಳಿದಂತೆ ಈ ಹಬ್ಬದ ದಿನ ಪೂಜಿಸುವ ಗಣೇಶ ಮಣ್ಣಿನದು, ಬೆಳ್ಳಿಯದು, ಸಗಣಿ ಚಿಕ್ಕ ಗೋಪುರ ಮಾಡಿ 21 ಅಥವಾ 11, 5, ಗರಿಕೆ ಸಿಗಿಸಿ ಮಾಡುವುದು, ಬೆಟ್ಟಡಿಕೆ ಗಣಪತಿ, ಇನ್ನು ಕೆಲವರು ಅಕ್ಕಿ ಹಿಟ್ಟಿಗೆ ಅರಿಶಿಣ ಹಾಕಿ ನೀರಿನಲ್ಲಿ ಕಲಸಿ ಗಣಪತಿಯನ್ನು ಮಾಡಿ ಪೂಜಿಸುತ್ತಾರೆ. ಇಷ್ಟೆ ಲ್ಲ ವಿಚಾರ ಹೇಳಿದ್ದು, ಮನೆಯಿಂದ ಹೊರಗೆ ಇದ್ದವರು, ಒಬ್ಬರೇ ಇರುವವರು ಹಬ್ಬದ ದಿನ ಇದ್ದಕ್ಕಿದ್ದಂತೆ, ಪೂಜೆ ಮಾಡಬೇಕು ಎಂದು ಮನಸ್ಸಿಗೆ ಬಂದರೆ, ಅವರವರ ಯತಾನು ಶಕ್ತಿ ಗಣೇಶ ನನ್ನು ಭಕ್ತಿಯಿಂದ ಆರಾಧಿಸಬಹುದು.

ಹಿಂದೆಲ್ಲ ಮಣ್ಣಿನ ಗಣೇಶನನ್ನು ಮಾಡುವಲ್ಲಿಗೆ, ಮನೆಯಲ್ಲಿ ಇಬ್ಬರು ಹೋಗಿ, ಗಣಪತಿ ಮಾಡಿದವರಿಗೆ ಗೌರವಾರ್ಥವಾಗಿ ಅಕ್ಕಿ ಕಾಯಿ ಎಲೆ ಅಡಿಕೆ ಬಾಳೆ ಹಣ್ಣು ದಕ್ಷಿಣೆ ಸಹಿತ, ಅದರ ಬೆಲೆಯನ್ನು ಕೊಟ್ಟು ತಟ್ಟೆಯಲ್ಲಿ ಗಣೇಶನನ್ನು ಜೋಪಾನ ವಾಗಿಟ್ಟುಕೊಂಡು ಹತ್ತಿರವಿದ್ದರೆ ನಡೆದು ಅಥವಾ ಬಸ್ಸಿನಲ್ಲಿ ಅಥವಾ ಸೈಕಲ್ ನಲ್ಲಿ ತರುತ್ತಿದ್ದರು. ಇನ್ನೇನು ಮನೆ ಹತ್ತಿರ ಬಂತು ಅನ್ನುವಾಗ ಜಾಗಂಟೆ ಬಾರಿ ಸುತ್ತ ಸಂಭ್ರಮದಿಂದ ಬರುವ ಗಣೇಶನಿಗೆ ಅದ್ಧೂರಿಯಾಗಿ ಸ್ವಾಗತಿಸುತ್ತಾ ಗಣೇಶನನ್ನು ತಂದವರ ಕಾಲಿಗೆ ನೀರು ಹಾಕಿ, ಗಣೇಶನಿಗೆ ಅಕ್ಷತೆ ಹಾಕಿ ಕದಲಾರತಿ ಎತ್ತಿ ಒಳಗೆ ಸಡಗರದಿಂದ ತಂದು ಮಂಟಪದಲ್ಲಿ ಕೂರಿಸಿ, ನೈವೇದ್ಯ ತೋರಿಸಿ, ಆರತಿ ಮಾಡುತ್ತಾರೆ.

ಈಗ ಹಿಂದಿನಂತೆ ಮಾಡಲು ಸಾಧ್ಯವಿಲ್ಲ. ಕೆಲವರು ನಾಲ್ಕೈದು ದಿನಗಳ ಮುಂಚೆಯೇ ಅನುಕೂಲವಾದಾಗ ಗಣಪತಿಯನ್ನು ಜೋಪಾನವಾಗಿ ಪ್ಯಾಕ್ ಮಾಡಿಸಿ ತರುತ್ತಾರೆ. ಪ್ಯಾಕ್ ಬಿಚ್ಚಿ ಆರತಿ ಎತ್ತಿ ಒಳಗೆ ತೆಗೆದುಕೊಂಡರೆ ಮತ್ತೆ ಜೋಪಾನ ಮಾಡುವುದು ಕಷ್ಟ. ಪ್ಯಾಕ್ ಬಿಚ್ಚದೆ ಆರತಿ ಮಾಡುವುದಿಲ್ಲ. ಆದ್ದರಿಂದ ಎರಡ್ಮೂರು ದಿನಗಳ ಮೊದಲೇ ತಂದು ಜೋಪಾನವಾಗಿಟ್ಟು ಹಬ್ಬದ ಹಿಂದಿನ ದಿನ ಮನೆಯ ಗಣಪತಿಯನ್ನು ಪ್ಯಾಕ್ ನಿಂದ ಬಿಡಿಸಿ ಅಕ್ಕಿ ಹಾಕಿದ ತಟ್ಟೆಯಲ್ಲಿ ಗಣಪತಿ ಇಟ್ಟುಕೊಂಡು ಮುಂಬಾಗಿಲಿಗೆ ತಂದ ಜಾಗಂಟೆ ಅಥವಾ ಗಂಟೆ ಬಾರಿಸುತ್ತಾ ಬಾಗಿಲ ಬಳಿ ಬಂದಾಗ, ಮನೆಯ ಮಕ್ಕಳು ಕಾಲಿಗೆ ನೀರು ಹಾಕಿ, ಗಣಪತಿಗೆ ಹೂವು ಅಕ್ಷತೆ ಹಾಕಿ ಆರತಿ ಮಾಡಿ ಸಂಭ್ರಮದಿಂದ ಒಳ ಕರೆತಂದು ಮಂಟಪದಲ್ಲಿ ಕೂರಿಸಬೇಕು ( ನಾನು ಮಾಡುವುದು ಹೀಗೆ ( ಗಣಪತಿ ಬಂದ ಕಾಯಿ ಕಡಬು ತಿಂದ ಮಕ್ಕಳಿಗೆಲ್ಲ ಹರಸಿದ)

  ವಿಷ್ಣು ವಿಗ್ರಹ ಲಕ್ಷಣಗಳು ..!

ಗಣಪತಿ ಪೂಜೆಗೆ ಬೇಕಾಗುವ ಸಲಕರಣೆ:- ಅನುಕೂಲದ ತಟ್ಟೆಯಲ್ಲಿ ಅರಿಶಿಣ, ಕುಂಕುಮ, ಗಂಧ, ಅಕ್ಷತೆ, ಚಿಲ್ಲರೆ, ಅಡಿಕೆ, ಗಣಪತಿಗೆ ಜನಿವಾರ
(ಬ್ರಹ್ಮಚಾರಿ ಹಾಕುವ ಹಾಗೆ ಮೂರೆಳೆಯ ಒಂದೇ ಜನಿವಾರ) ಪಂಚಪಾತ್ರೆ ಉದ್ಧರಣಿ, ವಿಳ್ಳೇದೆಲೆ ಅಡಿಕೆ ಬಾಳೆಹಣ್ಣು, ಊದಿನಕಡ್ಡಿ, ನೆನೆಸಿದ ಬತ್ತಿ ಮತ್ತೊಂದು ತಟ್ಟೆಯಲ್ಲಿ ಅಗತ್ಯಕ್ಕೆ ಇರಲೆಂದು ಹಣ್ಣವಿಳ್ಳೆದೆಲೆ, ತೆಂಗಿನ ಕಾಯಿಗಳು, ಗಣಪತಿ ನೈವೇದ್ಯಕ್ಕೆ ನೆನೆಸಿದ ಇಡೀ ಕಡಲೆ, ಪಂಚ ಕಜ್ಜಾಯ, ಒಂದು ಬಟ್ಟಲಲ್ಲಿ ಹಾಲು, ತುಪ್ಪ, ಜೇನುತುಪ್ಪ, ಸಕ್ಕರೆ, ಚೂರು ಮೊಸರು, ಬಾಳೆಹಣ್ಣಿನ ಚೂರುಗಳು, ಇಟ್ಟುಕೊಂಡರೆ ಪಂಚಾಮೃತ ವಾಗುತ್ತದೆ. ಮಂಟಪದಲ್ಲಿಟ್ಟ ಗಣಪತಿಗೆ ದೂರಕ್ಕೆ ಪ್ರೋಕ್ಷಣೆ ಮಾಡಿ, ಗಣಪತಿಗೆಂದು ಮಾಡಿದ 21 ಎಳೆ ಗೆಜ್ಜೆ ವಸ್ತ್ರ , ಜನಿವಾರ, ಆಭರಣ ಎಲ್ಲಾ ಅಲಂಕರಿಸಬೇಕು.
ಕೆಳಗೆ ಅಭಿಷೇಕಕ್ಕೆ ಇಟ್ಟ ಬೆಳ್ಳಿ ಗಣಪತಿಗೆ ಅಭಿಷೇಕ ಅಭಿಷೇಕ, ಬಿಡಿ ಗೆಜ್ಜೆ ವಸ್ತ್ರ- ಅಕ್ಷತೆ -ಹೂವು ಅಭಿಷೇಕ ಎಲ್ಲವನ್ನು ಮಾಡಬಹುದು.

ಗಣಪತಿಗೆ 21 ಎಳೆ ಗೆಜ್ಜೆ ವಸ್ತ್ರದಲ್ಲಿ ಗೆಜ್ಜೆ ಇರಬಾರದು ಬರಿ ಎಳೆ ಮಾತ್ರ ಗಣಪತಿ ಬ್ರಹ್ಮಚಾರಿ ಒಂದೇ ಜನಿವಾರ, ಆಭರಣಂ ಸಮರ್ಪ ಯಾಮಿ ಅನ್ನುವಾಗ ಒಂದು ಸರ ಹಾಕಬಹುದು. ( ಯಾವುದೇ ಇದ್ದರೂ ಸರಿ ಇಲ್ಲದಿದ್ದರೂ ಸರಿ ಎಲ್ಲದಕ್ಕೂ ಹೂವು ಅಕ್ಷತೆ ಸಾಕು ಹೂವಿನ ಅಲಂಕಾರ ಚೆಂದ, ಅನುಕೂಲವಿದ್ದರೆ 21 ಪತ್ರೆ, ಬಿಡಿ ಹೂವು ಸಾಕಷ್ಟು, ಹೂ ಮಾಲೆ, ಗರಿಕೆ ( ದೂರ್ವೆ) ಬಟ್ಟಲ ತುಂಬ ಅಕ್ಷತೆ, ಕೈ ಒರೆಸಲು ವಸ್ತ್ರ, ತೆಂಗಿನಕಾಯಿ ಒಡೆಯಲು ಕಾಯಿ ಕೊಳ ದೊಡ್ಡ ಪಾತ್ರೆ, ಮಧ್ಯದಲ್ಲಿ ನೈವೇದ್ಯ ಮಾಡಿದ ಹಣ್ಣು ಕಡಲೆಗಳನ್ನು ಇಡಲು ಒಂದು ತಟ್ಟೆ, ಗಣಪತಿ ಪೂಜೆ ಮಾಡುಲು ಕುಳಿತ ವರ ಅಕ್ಷತೆ ತುಂಬಿದ ಬಟ್ಟಲು, ಅರ್ಘ್ಯದ ಪಾತ್ರೆ ಇಟ್ಟು ಬಾಕಿಯಂತೆ ಗೆಜ್ಜೆ ವಸ್ತ್ರ, ಕರ್ಪೂರ- ಊದಿನ ಕಡ್ಡಿ- ಮಂಗಳಾರತಿ ಬತ್ತಿ- ನೈವೇದ್ಯ ಪದಾರ್ಥಗಳು ಗಂಟೆ ಎಲ್ಲವನ್ನು ಮಂತ್ರದಲ್ಲಿ ಹೇಳುವಾಗ ಒಂದೊಂದಾಗಿ ಯಾರಾದರೂ ತೆಗೆದು ಕೊಡಬೇಕು (ಕುಂಕುಮ ಹಚ್ಚಿ ಗೆಜ್ಜೆ ವಸ್ತ್ರಗಳನ್ನು ಎರಡೆಳೆ ಬಿಡಿಸಿ
ಸುತ್ತಿ ಇಟ್ಟಿದ್ದರೆ ತಕ್ಷಣ ಏರಿಸಬಹುದು.)

  ಹೃದಯಾಘಾತ - ಪರಿಹಾರ ಆಯುರ್ವೇದದಲ್ಲಿ

ಗಣಪತಿ ನೈವೇದ್ಯಕ್ಕೆ ಭಕ್ಷಗಳನ್ನು ಮಾಡಿದರೆ ಕರಿಯುವ ತಿಂಡಿಗಳನ್ನು ಹಿಂದಿನ ಅಥವಾ ಒಂದು ದಿನ ಮೊದಲೆ ಮಾಡಿರಬೇಕು. ಸ್ಪಷ್ಟವಾಗಿ ಕೇಳುವ ಒಳ್ಳೆಯ ಸಿಡಿ ಅಥವಾ ಕ್ಯಾಸೆಟ್ಗಳನ್ನು ಆಯ್ಕೆ ಮಾಡಿಕೊಂಡಿರಬೇಕು. ಗಣಪತಿ ಪೂಜೆಯನ್ನು ಮನೆಮಂದಿಯೆಲ್ಲ ಭಕ್ತಿಯಿಂದ ಕುಳಿತು ನೋಡಿ, ಕಥೆಯನ್ನು ಕೇಳಬೇಕು, ಸಸೂತ್ರವಾಗಿ ಇಷ್ಟಾಯ್ತು ಅಂದರೆ ಅದೆಷ್ಟು ಸಮಾಧಾನ ನೆಮ್ಮದಿ ಪದಗಳಲ್ಲಿ ಹೇಳಲು ಸಾಧ್ಯವೇ ಇಲ್ಲ. ಪೂಜೆ ಮುಗಿದ ನಂತರ ಗಣಪತಿ ನೈವೇದ್ಯಕ್ಕೆ ಮಾಡಿಟ್ಟ ತಿನಿಸುಗಳನ್ನು ತಿನ್ನುವುದರಲ್ಲಿ ಇರುವ ಸಂತೋಷ ಹೇಳತೀರದು, ಒಂಥರಾ ಸಾರ್ಥಕ ಭಾವ. ಇದಕ್ಕಿಂತ ಹೆಚ್ಚಿನ ಸಮಾಧಾನ ಸಂತೋಷ ನೆಮ್ಮದಿ ಎಲ್ಲಿ ಸಿಗಲು ಸಾಧ್ಯ.

ಪಂಚಕಜ್ಜಾಯ:- ಸಕ್ಕರೆ, ಹುರಿದ ಪುಟಾಣಿ, ಕಡಲೆ ಬೀಜ, ಇದನ್ನು ಪುಡಿ ಮಾಡಿಕೊಂಡು ಇದಕ್ಕೆ ತುರಿದ ಒಣಕೊಬ್ಬರಿ, ತುಪ್ಪದಲ್ಲಿ ಹುರಿದ ಎಳ್ಳು,
ಹಾಕಿ ಕಲೆಸಿದರೆ ರುಚಿಯಾದ ಪಂಚಕಜ್ಜಾಯ.
ಮುದ್ದೆ ಪಂಚಕಜ್ಜಾಯ:- ಗಣಪತಿಗೆ ಮೋದಕದಷ್ಟೇ ಬಹಳ ಪ್ರಿಯವಾದದ್ದು ಮುದ್ದೆ ಪಂಚಕಜ್ಜಾಯ. ಇಡೀ ಕೆಂಪು ಕಡಲೆ, ಇದನ್ನು ತೊಳೆದು ನೆರಳಲ್ಲಿ ಹರಡಿ ಚೆನ್ನಾಗಿ ಆರಿದ ನಂತರ ಸಿಪ್ಪೆ ಒಡೆಯುವಷ್ಟು ಮಧ್ಯಮ ಉರಿಯಲ್ಲಿ ಹುರಿದು, ಆರಿದ ನಂತರ ಸಣ್ಣ ರವೆಯಂತೆ ಪುಡಿ ಮಾಡಿ, ಅಳತೆಗೆ ತಕ್ಕಷ್ಟು ಬೆಲ್ಲ ಪಾಕಕ್ಕೆ ಇಟ್ಟು ಒಂದು ಕುದಿ ಬಂದ ಕೂಡಲೇ ಎರಡು ಮೂರು ಚಮಚ ತುಪ್ಪ, ಹಾಕಿ ಚೆನ್ನಾಗಿ ಗೊಟಾಯಿಸಿ, ಎಳಪಾಕದಲ್ಲಿ ಇರುವಾಗಲೇ ಕೆಳಗೆ ಇಳಿಸಿ ಬೀಸಿದ ಇಡೀ ಕಡಲೆ ಪುಡಿಯನ್ನು ಅದಕ್ಕೆ ಹಾಕಿ ಹೊಂದುಗೂಡುವಂತೆ ಕೈಯಾಡಿಸಬೇಕು. ಉಂಡೆ ಕಟ್ಟುವ ಹದಕ್ಕೆ ಬರುತ್ತದೆ ತುಂಬಾ ಗಟ್ಟಿಯಾಗ ಬಾರದು, ಅದಕ್ಕೆ ಒಣ ಕೊಬ್ಬರಿ ತುರಿ -ಏಲಕ್ಕಿ, ಒಂದು ಚಮಚ ಹುರಿದ ಎಳ್ಳು, ಹಾಕಿ ಎಲ್ಲಾ ಸೇರಿಸಿ ಮುದ್ದು ಗಣೇಶನಿಗೆ ಅರ್ಪಿಸಿ ಸವಿದರೆ ಆಹಾ ಓಹೋ ಅನ್ನದೆ ಇರಲಾರಿರಿ. ಗಣಪತಿಗೆ ಹರಕೆ ಹೊತ್ತವರು ಸಂಕಷ್ಟಿ ಮತ್ತು ಚೌತಿ ದಿನ ನೈವೇದ್ಯಕ್ಕೆ ಮಾಡುತ್ತಾರೆ.

  ಕುಂಭ ಸಂಕ್ರಾಂತಿ ಮಹತ್ವ

ರಾತ್ರಿ ಗಣೇಶ ಚೌತಿಯ ಶ್ಯಮಂತಕಮಣಿ ಕಥೆಯನ್ನು ಕೇಳಿಬೇಕು (ಚೌತಿ ಹಬ್ಬದ ದಿನ ಚಂದ್ರನನ್ನು ನೋಡಿದ್ದರೆ ಈ ಕಥೆ ಕೇಳುವುದರಿಂದ ಪಾಪ ಪರಿಹಾರ ವಾಗುವುದು). ತುಂಬಾ ಶಾಸ್ತ್ರೋಕ್ತವಾಗಿ ಮಾಡುವವರು ಗಣಪತಿಯನ್ನು ಸಂಜೆ ಅಥವಾ ಮರುದಿನ ವಿಸರ್ಜನೆ ಮಾಡುತ್ತಾರೆ. ಇನ್ನು ಕೆಲವೆಡೆ ಹತ್ತನೆಯ ದಿನ ಅಂದರೆ ಅನಂತ ಚತುರ್ದಶಿ ದಿನದಂದು ಗಣಪತಿ ವಿಸರ್ಜನೆ ಮಾಡುವರು.
ಓದಿ -ಹೇಳಿ- ಕೇಳಿದ ಎಲ್ಲರಿಗೂ ಧನ್ಯವಾದಗಳು.

ಚೌತಿಯ ಗಣೇಶ ನಗು ನಗುತಲಿ ಬಾರೋ
ಬಂದು ಎಲ್ಲರ ಮನೆಯಲ್ಲಿ ಬಂದು ನೆಲೆಸೋ
ನಿನಗೆ ಕೊಡುವರು ಮೋದಕ ಕಡುಬು ತಿನ್ನೋ
ಮನೆ ಮಕ್ಕಳ ಜೊತೆಯಲ್ಲಿ ಕೂಡಿ ನಲಿಯೋ,
ಹಿರಿಯರು ಹೇಳುವ ಭಜನೆಗೆ ಕುಣಿದು ನಲಿಯೋ
ಸವಿ ಸವಿ ಹಬ್ಬದ ಅಡಿಗೆ ಉಂಡು ತಿಂದು ತೇಗೋ
ನಗು ನಗುತಾ ನೀ ಬಾರೋ ನಗುವಿನಲೇ ಎಲ್ಲರ ಸೆಳೆಯೋ.

!! ಶ್ರೀ ಗಣೇಶ ಸ್ತನ !!

ಅಜಂ ನಿರ್ವಿಕಲ್ಪಂ ನಿರಾಕಾರ ಮೇಕಂ
ನಿದಾನಂದಮಾನಂದ ಮದ್ವೈತಪೂರ್ಣ!
ಪರಂ ನಿರ್ಗುಣಂ ನಿರ್ವಿಶೇಷಂ ನಿರೀಹಂ
ಪರಬ್ರಹ್ಮ ರೂಪಂ ಗಣೇಶಂ ಭಜೇಮ!!

ಗುಣಾತೀತಮಾನಂ ಚಿದಾನಂದ ರೂಪಂ
ಚಿದಾಭಾಸಕಂ ಸರ್ವಗಂ ಜ್ಞಾನಗಮ್ಯಂ !
ಮುನಿಧ್ಯೇಯಮಾಕಾಶರೂಪಂ ಪರೇಶಂ
ಪರಬ್ರಹ್ಮ ರೂಪಂ ಗಣೇಶಂ ಭಜೇಮ!!

ಜಗತ್ಕಾರಣಂ ಕಾರಣಜ್ಞಾನರೂಪಂ
ಸುರಾದಿಂ ಸುಖಾದಿಂ ಗುಣೇಶಂ ಗಣೇಶಂ!
ಜಗದ್ಯ್ವಾಪಿನಂ ವಿಶ್ವವಂದಂ ಸುರೇಶಂ
ಪರಬ್ರಹ್ಮ ರೂಪಂ ಗಣೇಶಂ ಭಜೇಮ!!

ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.

Leave a Reply

Your email address will not be published. Required fields are marked *

Translate »