ವಿನಾಯಕನ ಲೋಕ..!
ಸತ್ಯಲೋಕದಲ್ಲಿ ಬ್ರಹ್ಮ, ವೈಕುಂಠದಲ್ಲಿ ಮಹಾವಿಷ್ಣು, ಕೈಲಾಸದಲ್ಲಿ ಮಹೇಶ್ವರ. ಹಾಗಿದ್ದಲ್ಲಿ ವಿಶ್ವಮಾನ್ಯನಾದ ವಿನಾಯಕ ಇರುವ ಲೋಕ ಯಾವುದು?..!!
ಗಣೇಶ ತನ್ನ ಅಪ್ಪ-ಅಮ್ಮನ ಜೊತೆ ಕೈಲಾಸದಲ್ಲೇ ವಿರಾಜಮಾನನಾಗಿರುತ್ತಾನೆ ಎಂಬುದು ಸಾಮಾನ್ಯ ಅಭಿಪ್ರಾಯ. ಆದರೆ ‘ಶ್ರೀ ಗಣೇಶ ಪುರಾಣ’ದ ಉಪಾಸನ ಖಂಡದ 51ನೇ ಅಧ್ಯಾಯದಲ್ಲಿ ಹೇಳಿರುವಂತೆ ಗಣೇಶನಿಗೆ ಪ್ರತ್ಯೇಕ ಲೋಕವಿದೆ. ‘ಸ್ವಾನಂದ ಲೋಕ’ ಎಂದು ಅದರ ಹೆಸರು. ಇದನ್ನು ನಿಜಲೋಕ, ದಿವ್ಯಲೋಕವೆಂದೂ ಕರೆಯುತ್ತಾರೆ.
ಪುರಾಣಗಳಲ್ಲಿ ವರ್ಣಿಸಲ್ಪಟ್ಟಿರುವ ಇತರ ಲೋಕಗಳಿಗಿಂತ ಗಣೇಶ ಲೋಕಕ್ಕೆ ಪ್ರತ್ಯೇಕ ಸ್ಥಾನವಿದೆ. ಈ ಲೋಕ ಐದು ಸಾವಿರ ಯೋಜನಗಳಷ್ಟು ವಿಸ್ತಾರವಾದುದು. ರತ್ನಖಚಿತವಾದ ಸುವರ್ಣಭೂಮಿಯಲ್ಲಿ ಹತ್ತು ದಿಕ್ಕುಗಳನ್ನು ಬೆಳಗುತ್ತ ಸಮಷ್ಟಿ ವೃಷ್ಟಿರೂಪ ಜಗದಾತ್ಮಕವಾಗಿ ವಿನಾಯಕನು ಇಲ್ಲಿ ನೆಲೆಸಿದ್ದಾನೆ.
ಲೋಕದ ತುಂಬೆಲ್ಲ ಇಕ್ಷು ಸಾಗರ (ಕಬ್ಬಿನ ರಸದ ಸಮುದ್ರ). ಅದರ ಮಧ್ಯೆ ಸಾವಿರ ದಳಗಳ ಶ್ವೇತ ಕಮಲದ ಕರ್ಣಿಕೆಯಲ್ಲಿ ರತ್ನಖಚಿತವಾದ ಸುವರ್ಣ ಮಂಚ ಶೋಭಿಸುತ್ತಿದೆ. ಆ ಮಂಚದ ಮೇಲೆ ಬಾಲ ಸ್ವರೂಪಿಯಾಗಿ, ರಕ್ತವರ್ಣದ ಪೀತಾಂಬರವನ್ನು ಧರಿಸಿದ, ಅರ್ಧಚಂದ್ರಕಿರೀಟ, ಮುತ್ತು ಮಣಿ ಮಾಣಿಕ್ಯಾದಿ ಹೊನ್ನಾಭರಣ ಧರಿಸಿದ, ತ್ರಿನೇತ್ರಧಾರಿಯಾದ, ಶಯನಭಂಗಿಯಲ್ಲಿ ಇರುವ (ಯೋಗ ನಿದ್ರಾರೂಢನಾದ) ವಿನಾಯಕ ವಿರಾಜಿಸುತ್ತಿದ್ದಾನೆ.
ಸರ್ವಸಿದ್ಧಿಗಳಿಗೂ ಕಾರಣರಾದ ಸಿದ್ಧಿ-ಬುದ್ಧಿ ದೇವಿಯರು ಗಣಪನ ಪಾದ ಪೂಜಿಸುತ್ತ, ಅಣಿಮಾ-ಗರಿಮಾದೇವಿಯರು ಶ್ವೇತ ಚಾಮರ ಸೇವೆಗೈಯುತ, ಜ್ವಾಲಿನಿ-ತೇಜಿನಿ ದೇವಿಯರಿಬ್ಬರೂ ದೇವದೇವನ ಎರಡೂ ಪಾರ್ಶ್ವಗಳಲ್ಲಿ ಪುಷ್ಪಾರ್ಚನೆಗೈಯುತ್ತ ಛತ್ರಿಯನ್ನು ಹಿಡಿದು ಶೋಭಿಸುತ್ತಿರುತ್ತಾರೆ. ಮಹಿಮಾ-ಪ್ರತಿಮೆಯರಿಗೆ ದೇವನ ದೃಷ್ಟಿ ಗೋಚರವಾಗಿ ಸಮೀಪದಲ್ಲೇ ರತ್ನಖಚಿತ ಸುವರ್ಣ ಜಲಪಾತ್ರೆ ಹಿಡಿದು ನಿಂತಿರುತ್ತಾರೆ.
ಸಾಮವೇದ ಪುರುಷನು ಗಣೇಶನ ಮಹಿಮೆಯನ್ನು ಗುಣಗಾನ ಮಾಡುತ್ತಿರುತ್ತಾನೆ. ಎಲ್ಲ ಶಾಸ್ತ್ರಗಳು, ಇತಿಹಾಸ ಪುರಾಣಗಳು ಮೂರ್ತಿವತ್ತಾಗಿ ಬಂದು ಶ್ರೀ ಗಣೇಶನ ಮಹಿಮೆಯನ್ನು ಕೊಂಡಾಡುತ್ತಿರುತ್ತವೆ. ಈ ಎಲ್ಲ ರಸಮಯ ಸನ್ನೀವೇಶಗಳನ್ನು ಒಳಗೊಂಡ ಸ್ವಾನಂದ ಲೋಕವನ್ನು ನೆನೆಯುವುದೇ ಒಂದು ಅಲೌಕಿಕ ಆನಂದ.