ಕ್ಷಮಿಸು ಎಂದರೆ ಸಾಲದು!!
“ಇಷ್ಟು ವರ್ಷದಲ್ಲಿ ಏನ್ ಕಡ್ಡು ಗುಡ್ಡೆ ಹಾಕಿದೆಯಾ…??
ನೆಟ್ಟಗೆ ಒಂದು ಸ್ವಂತ ಮನೆ ಇಲ್ಲ… ಬಾಯಿಗೆ ರುಚಿ ಎನಿಸಿದ್ದು ತಿನ್ನುವ ಯೋಗ ಇಲ್ಲ… ಗೆಳತಿಯರ ಹಾಗೆ ದಿನಕ್ಕೊಂದು ಬಗೆಯ ಉಡುಗೆ ತೊಡುವ ಭಾಗ್ಯವಂತು ಇಲ್ಲವೇ ಇಲ್ಲ… ಬೇಕೆಂದಲ್ಲಿ ಓಡಾಡಲು ಕನಿಷ್ಠ ಒಂದು ಸ್ಕೂಟಿ??? ಕೇಳುವುದೇ ಬೇಡಾ…. ಇನ್ನು, ನಿನಗಂತು ಮಗಳು ಒಬ್ಬಳು ಇದ್ದಾಳೆ ಅವಳ ಜೀವನಕ್ಕೆ ಏನಾದರೂ ಒಂದು ದಾರಿ ಮಾಡಬೇಕು ಅನ್ನೊ ಪರಿಜ್ಞಾನ ಇಲ್ಲ. ನಾನೇ ಹೇಗೊ ನನ್ನ ಮನಸ್ಸಿಗೆ ಇಷ್ಟ ಆಗೊ ಹುಡುಗನನ್ನ ಹುಡುಕಿ ಕರೆದುಕೊಂಡು ಬಂದರೆ, ಅವನನ್ನ ಕಳ್ಳನ ತರ ನೋಡಿ, ದೊಡ್ಡ ಸಿಬಿಐ ಆಫೀಸರ್ ತರ ಪ್ರಶ್ನೆಗಳನ್ನ ಕೇಳಿ, ಅವನಿಗೂ ಅವಮಾನ ಮಾಡಿ ಕಳುಹಿಸಿದೆ…ಒಬ್ಬ ಅಪ್ಪನಾಗಿ ನಿನಗೆ ನಿನ್ನ ಕರ್ತವ್ಯ ಮಾಡುವಷ್ಟು ಶಕ್ತಿ ಇಲ್ಲ ಅಂದ ಮೇಲೆ ನನಗಾದರೂ ನನ್ನ ಜೀವನ ರೂಪಿಸಿಕೊಳ್ಳಲು ಬಿಡು. ದಿನ ಬೆಳಿಗ್ಗೆ ಹೋಗ್ತಿಯಾ, ಸಂಜೆ ಸೂರ್ಯ ಮುಳುಗಿದ ಮೇಲೆ ಬರ್ತಿಯಾ… ಅದೇನು ಮಾಡಿ ಡಬ್ಬಾಗೋಕೆ ಅಂತಾ ಹೋಗೊದು ಬರೋದು ನೀನು…??? ಏನಾದರೂ ಕೇಳಿದರೆ ಕೈ ಕಟ್ಟಬಾಯಿ ಮುಚ್ ಅನ್ನೋ ಹಾಗೆ ನಿಲ್ಲುವುದು ಬೇರೆ!!” ಎಷ್ಟೋ ದಿನಗಳಿಂದ ಹೊಟ್ಟೆಯಲ್ಲಿ ಜ್ವಾಲೆಯಾಗಿ ಸುಡುತ್ತಿದ್ದ ವಿಚಾರಗಳನ್ನು ಇಂದು ಸ್ವಲ್ಪi ತಡವಾಗಿ ಮನೆಗೆ ಬಂದ ಅಪ್ಪನ ಮೇಲೆ ಬೀಸಿದಳು ಮಗಳು.
ಮಗಳ ಮೋನಚಾದ ಮಾತು ಅಪ್ಪನಿಗೆ ಹೊಸದಲ್ಲ. ತನ್ನ ಮಗಳು… ತನಗೆ ಅಪ್ಪನ ಸ್ಥಾನ ತಂದು ಕೊಟ್ಟ ದೇವತೆ… ತನ್ನ ತಾಯಿಯ ಪ್ರತಿರೂಪ ಅವಳು, ಎಂದು ಅವಳ ಪ್ರತಿ ಮಾತಿನಲ್ಲಿ ಅರ್ಥವಿದೆ ಎಂಬಂತೆ ಎದೆ ಮುಂದೆ ಕೈಕಟ್ಟಿ ತಲೆ ತಗ್ಗಿಸಿ ಕೇಳುತಿದ್ದ. ಇಂದೇಕೋ ಮನಸ್ಸಿಗೆ ತುಂಬಾ ಘಾಸಿಯಾಯಿತು. ಕಣ್ಣಿಂದ ನೀರು ಜಾರಿತು. ಮಗಳಿಗೆ ಕಾಣದ ಹಾಗೆ ತೋರುಬೇರಳಿನಿಂದ ಹಾರಿಸಿದ.
ಆದರೆ ಮಗಳ ಹರಿತವಾದ ಮಾತು ನಿಲ್ಲಲಿಲ್ಲ. ಬೈಗುಳಗಳ ಮದ್ಯೆದಲ್ಲಿ ಬರುವ ಕೆಮ್ಮು ಲೆಕ್ಕಿಸದೆ ನಾಲಿಗೆ ಹರಿಬಿಟ್ಟಿದ್ದಳು. ಕೊನೆಗೂ ಕೆಮ್ಮು ತಾನೇ ಮುಂದೆ ಹೋಗುವೆ ಎಂಬಂತೆ ಅವಳ ಮಾತು ನಿಲ್ಲಿಸಿತು. ಕೆಮ್ಮಿಸಿ ಸುಸ್ತಾದ ಹುಡುಗಿ ನೆಲಕ್ಕೆ ಉರುಳಿದಳು
***
ಕಣ್ಣು ಬಿಟ್ಟಾಗ ಆಸ್ಪತ್ರೆಯ ಬೆಡ್ ಮೇಲೆ ತಿರುಗಿ ಮಲಗಿದ್ದಳು. ಇನ್ನೊಂದು ಕಡೆ ತಿರುಗಿ ಮಲಗಲು ಪ್ರಯತ್ನಿಸಿದಾಗ ಯಾಕೋ ಬೆನ್ನಿನ ಕೆಳಗೆ ನೋವಾದಂತೆ ಎನಿಸಿತು. ನರ್ಸ್ ಒಬ್ಬರು ಬಂದು ಕೂರಲು ಸಹಾಯ ಮಾಡಿದರು. ಹಾಗೆ ನೀರು ಕೊಟ್ಟು “ಈಗ ಹೇಗಿದಿಯಮ್ಮ??”ಎಂದರು.
“ಪರವಾಗಿಲ್ಲ, ಇಲ್ಲಿ ಯಾಕೆ ಬೆಂಡೇಜ್ ಮಾಡಿದ್ದಾರೆ?? ನನಗ್ಯಾಕೆ ಬೆನ್ನಿನ ಕೆಳಭಾಗದಲ್ಲಿ ನೋವಾಗ್ತಾ ಇದೆ??”
ತನ್ನಪ್ಪನ್ನನ್ನ ಅಪ್ಪ ಎಂದು ಕರೆಯಲು ನಾಚಿಕೆ ಪಡುವ ಮಗಳು “ನಮ್ಮ ಕಡೆಯವರು ಎಲ್ಲಿದ್ದಾರೆ??”ಎಂದು ಕೊನೆಯಲ್ಲಿ ತನ್ನ ಪ್ರಷ್ಣಾವಳಿ ಮುಗಿಸಿದಳು ನರ್ಸ್ ನೋಡುತ್ತಾ.
ಅವಳ ಕೈಗೆ ನಾಲ್ಕು ಭಾಗವಾಗಿ ಮಡಚಿರುವ ಒಂದು ಬಿಳಿ ಹಾಳೆ ಕೊಟ್ಟು ತಲೆ ನೇವರಿಸಿ ಹೊರ ಹೋದರು ನರ್ಸ್.
ತೆರೆದ ಹಾಳೆ ಕೈಯಲ್ಲಿ ಹಿಡಿದಳು
ಮಗಳೆ,
ನನಗೆ ಬರೆಯಲು ಬರಲ್ಲ ಎನ್ನುವುದು ನಿನಗೆ ತಿಳಿದೇ ಇದೆ. ಇಲ್ಲಿ ಒಬ್ಬ ನರ್ಸ್ ಸಹಾಯದಿಂದ ನನ್ನ ಮೊದಲ ಹಾಗೂ ಕೊನೆಯ ಪತ್ರ ಬರೆದಿದ್ದೇನೆ.
ಮಕ್ಕಳಾದರೆ ಸಾಯುತ್ತೇನೆ ಎಂದು ತಿಳಿದಿದ್ದರೂ ಮದುವೆಯಾಗಿ ಹನ್ನೆರಡು ವರುಷಗಳ ನಂತರ ಹಠ ಮಾಡಿ ನಿನ್ನನ್ನಮ್ಮ ನಿನಗೆ ಜನ್ಮಕೊಟ್ಟು ಕಣ್ಮುಚ್ಚಿದಳು. ನನ್ನ ಜೀವಕ್ಕೆ ಜೀವವಾದ ನನ್ನ ಅರ್ದಾoಗಿಣಿ ನನ್ನನ್ನ ಅಗಲಿದ್ದಾಳೆ ಎಂದು ದುಃಖಿಸಲೇ?? ಇಲ್ಲ ಹೊಸ ಜಗತ್ತನ್ನ ಅಚ್ಚರಿ ಎಂಬಂತೆ ಕಾಣುತಿದ್ದ, ಏನು ಅರಿಯದ ಆ ಪುಟ್ಟ ಕಂಗಳುಳ್ಳ ಕಂದಮ್ಮನ ಆಗಮನಕ್ಕೆ ಸಂತೋಷ ಪಡಲೆ ಎಂದು ತಲೆ ಮೇಲೆ ಕೈ ಹೊತ್ತಿದ್ದೆ.
ನನ್ನ ಗುಡಸಲಿಗೆ ಪುಟ್ಟ ದೇವತೆಯಾದ ನೀನು. ಅಂದಿನ ನಿನ್ನ ನಗು ಅಳು ಎಲ್ಲವೂ ನನ್ನ ಹೃದಯದಲ್ಲಿ ಪಡುಯಾಚ್ಚಾಗಿ ಉಳಿದಿವೆ.”ಅಪ್ಪ..” ಎಂದು ನೀನು ನನ್ನನ್ನ ಸಂಭೋದಿಸಿದಾಗ ಕುಣಿದು ಕುಪ್ಪಳಿಸಬೇಕೆಂಬ ಹಬ್ಬವನ್ನುಂಟು ಮಾಡಿತ್ತು ಆ ಕ್ಷಣ. ನಿನಗೆ ಊಟಾ ಮಾಡಿಸುವಾಗ, ನೀನು ತಟ್ಟೆಗೆ ಕೈ ಹಾಕಿ ನನಗೆ ಊಟ ಮಾಡಿಸುತ್ತಿದ್ದೆ. ಆ ಪುಟ್ಟ ಕೈಯಲ್ಲಿ ಬಂದ ಎರಡೇ ಎರಡು ಅನ್ನದ ಕಾಳು ಹೊಟ್ಟೆ ತುಂಬಿಸುತ್ತಿತ್ತು. ನನ್ನ ಮನೆಯ ಭಾಗ್ಯ ಲಕ್ಷ್ಮಿ ನೀನು, ನಿನ್ನನ್ನ ರಾಣಿಯಂತೆ ನೋಡಿಕೊಳ್ಳಬೇಕು ಅಂತೆಲ್ಲಾ ಕನಸು ಕಂಡಿದ್ದೆ. ಹಾಳಾದ ನನ್ನ ಕೆಲಸದಲ್ಲಿ ಆದಾಯ ಸಿಗಲೇ ಇಲ್ಲ. ಬಡತನದಲ್ಲೆ ಬೆಳೆಸುವಂತಾಯಿತು. ಮೊದಲೆಲ್ಲಾ ಅಪ್ಪ ಅಪ್ಪ ಅಂತಾ ನನ್ನ ಹಿಂದೆ ಮುಂದೆ ಇರುತ್ತಿದ್ದ ನೀನು ಅದ್ಯಾಕೋ ಬೆಳೀತಾ ನನ್ನನ್ನ ಮಾತನಾಡಿಸಲು ಹಿಂಜರಿಯುತ್ತಿದೆ. ನನ್ನ ದಿನಚರಿ, ಮಾತು, ನಗು ಯಾವುದೂ ನಿನಗೆ ಸರಿ ಕಾಣುತ್ತಿರಲಿಲ್ಲ.
ಅಹ್… ನಿನ್ನೆ ನೀನು ಕೇಳಿದೆಯಲ್ಲ ಏನು ಕಡಿದು ಗುಡ್ಡೆ ಹಾಕಿದಿಯಾ ಅಂತಾ… ನನ್ನನ್ನ ಕ್ಷಮಿಸಿಬಿಡು ಕಂದಾ ಅಂತಹ ದೊಡ್ಡ ಸಾಧನೆ ನನ್ನಿಂದ ಮಾಡಲು ಆಗಲಿಲ್ಲ. ಮೊದಲೆಲ್ಲ ಶಕ್ತಿ ಇತ್ತು. ಆದರೆ ಮಾಡಲು ಹೋಗೋಕೆ ನೀನಿನ್ನೂ ಚಿಕ್ಕವಳು, ಒಬ್ಬಳೇ ಬಿಟ್ಟು ಹೇಗೆ ಹೋಗಲಿ… ಅದಕ್ಕೆ ನಿನ್ನ ಕಣ್ಣು ಮುಂದೆ ಇದ್ದು ಸಣ್ಣ ಪುಟ್ಟ ಕೆಲಸ ಮಾಡ್ಕೊಂಡು ಹಾಗೆ ಜೀವನ ಸಾಗಿಸಿ ಬಿಟ್ಟೆ.
ಮತ್ತೆ… ಮತ್ತೆ… ಸ್ವಂತ ಮನೆ ಇಲ್ಲ ಅಂದ್ಯಲ್ಲಮ್ಮ ಬೇಸರ ಪಟ್ಟುಕೊಳ್ಳ ಬೇಡ ಮಗಳೆ ಇಂತಹ ಪಾಪಿ ಅಪ್ಪನಿಗೆ ಮಗಳಾಗಿ ಹುಟ್ಟಿದೆಯೆಂದು. ನಮ್ಮ ಪಾಲಿಗೆ ಇದ್ದ ಸ್ವಂತ ಮನೆಯನ್ನ ನಿನ್ನ ಓದಿಗಾಗಿ ಆಡ ಇಟ್ಟಿದ್ದೆ. ಸರಿಯಾದ ಸಮಯಕ್ಕೆ ಬಡ್ಡಿ ತುಂಬದೆ ಮನೆ ಕೈತಪ್ಪಿ ಹೋಯ್ತು ಕಂದ.
ಆದರೆ ಮಗಳೆ ದಯವಿಟ್ಟು ಹೊಟ್ಟೆ ಬಟ್ಟೆಗೆ ಕಡಿಮೆ ಮಾಡಿದಿನಿ ಅಂತಾ ಮಾತ್ರ ಹೇಳಬೇಡ ತಾಯಿ. ನನ್ನ ಶಕ್ತಿ ಮೀರಿ ನೀನು ಬೇಕೆಂದಾಗ ಬಟ್ಟೆ, ಪುಸ್ತಕ, ತಿಂಡಿ ಸಾಮಾಗ್ರಿಗಳನ್ನ ತಂದು ಕೊಟ್ಟಿದ್ದೀನಿ. ಒಂದೆರಡು ದಿನ ತಡವಾಗಿ ತಂದು ಕೊಟ್ಟಿರಬಹುದು ಆದರೆ ನಿನ್ನನ್ನ ಒಂದು ದಿನ ಸಹ ಉಪವಾಸ ಮಲಗಲು ಬಿಡಲಿಲ್ಲ.
ನಿನಗೆ ತಿರುಗಾಡಲು ಗಾಡಿ ತಂದು ಕೊಡಲು ಆಗಲಿಲ್ಲ. ನನ್ನ ದೌರ್ಬಾಗ್ಯಕ್ಕೆ ಕಾಲು ನಡಿಗೆ ನನಗೆ ಅಭ್ಯಾಸವಾಗಿ ಹೋಯಿತು. ನನ್ನ ಆದಾಯ ನಿನಗೆ ತಿಳಿದೇ ಇದೆ. ಹಾಗಾಗಿ ನೀನು ಸಹ ಕಾಲುನಡಿಗೆ ಅಭ್ಯಾಸ ಮಾಡಿಕೊಳ್ಳುತ್ತಿಯಾ ಅಂದುಕೊಂಡೆ… ನನ್ನಿಂದ ತಪ್ಪಾಗಿದೆ ಕ್ಷಮಿಸು ಮಗಳೆ🙏.
ನನ್ನ ಮಗಳಿಗೆ ಒಂದು ಶಾಶ್ವತವಾದ ನೆಲೆ ಬೇಕು ಅಂತಾನೆ ಅಲ್ವೇ ನಾನು ಜೀವ ಸವಿಯವರೆಗೂ ದುಡಿಯುತ್ತಿರುವುದು. ಅಂತಹದರಲ್ಲಿ ಬೆಳೆದು ನಿಂತ ಮಗಳನ್ನ ಮರೆಯುತ್ತೇನೆಯೇ ?? ಅಂತಹ ಅವಿವೇಕಿ ಅಲ್ಲ ಕಣಮ್ಮ ಈ ನಿನ್ನ ಅಪ್ಪ. ಬೆಟ್ಟದಷ್ಟು ಆಸೆ, ಕನಸು ನನಗೂ ಇದೆ. ಆದರೆ ಅದನ್ನ ನಿನ್ನ ಮುಂದೆ ತೋರಿಸಿಕೊಳ್ಳಲು
ಅಶಕ್ತನಾದೆ.
ನೀನು ಅವನನ್ನ ಮದುವೆಯಾಗುತ್ತೇನೆ ಎಂದು ನನ್ನ ಮುಂದೆ ನಿಲ್ಲಿಸಿದ್ದಾಗ, ಮೊದಲಿಗೆ ನನ್ನ ಮಗಳು ತನ್ನ ವರನನ್ನ ತಾನೇ ಅರಿಸಿಕೊಳ್ಳುವಷ್ಟು ದೊಡ್ಡವಳಾಗಿದ್ದಾಳೆ ಎಂದು ಹೆಮ್ಮೆ ಪಟ್ಟೆ. ಆದರೆ ಅವನಿಗೆ ಅವಮಾನ ಮಾಡುವ ಉದ್ದೇಶ ನನ್ನಲ್ಲಿರಲಿಲ್ಲಮ್ಮ,ನನಗಂತೂ ನಿನ್ನನ್ನ ರಾಣಿಯಂತೆ ನೋಡಿಕೊಳ್ಳಬೇಕು ಎಂಬ ಕನಸು ಕನಸಾಗೆ ಉಳಿಯಿತು. ಈಗ ಇವನಾದರೂ ನಿನ್ನನ್ನ ರಾಣಿಯಂತೆ ನೋಡಿಕೊಳ್ಳಬಹುದೆ!! ಎಂದು ಪರೀಕ್ಷಿಸಿದೆ.
ಹೆಣ್ಣು ಹೆತ್ತ ತಂದೆ ಕಣಮ್ಮ ನಾನು ನನ್ನ ಕರ್ತವ್ಯ ಮರೆಯುತೇನಾ,…. ಎಂತಹ ಮಾತಂದೇ ಮಗಳೆ…
ಹೌದು ಸೂರ್ಯ ಹುಟ್ಟೋಕ್ಕಿಂತ ಮೊದಲೇ ಹೋರಡುತ್ತಿದ್ದೆ, ಮುಳುಗಿದ ನಂತರ ಬರುತ್ತಿದ್ದೆ. ಹೊಟ್ಟೆ ಪಾಡಿಗೆ ಏನಾದರೂ ಮಾಡಬೇಕಲ್ಲಮ್ಮ. ಅದರಿಂದ ತಾನೇ ನಿನಗೆ ನನಗೆ ಊಟಾ ತಿಂಡಿ ಎಲ್ಲ ಅದನ್ನ ಹೇಗೆ ಮರೆತೆ ??
ಕ್ಷಮೆ ಇರಲಿ ಮಗಳೆ, ನಿನಗೆ ರಾಜ ವೈಭೋಗ ಕೊಡಲು ನನ್ನಿಂದ ಆಗಲಿಲ್ಲ. ಎರಡು ವರ್ಷದ ಹಿಂದೆ ನಿನಗೆ ಕಾಣಿಸಿಕೊಂಡ ಹೊಟ್ಟೆ ನೋವಿನ ಪರಿಯಾಗಿ ನಿನ್ನ ಎಡಭಾಗದ ಕಿಡ್ನಿ ತೆಗೆಯಬೇಕಾಯಿತು. ನಿನ್ನ ದೇಹದಲ್ಲಿ ಒಂದು ಭಾಗ ತೆಗೆದು ನನ್ನಲ್ಲಿ ಇದ್ದು ಪೂರ್ಣ ಎನಿಸಿಕೊಳ್ಳುವುದರಲ್ಲಿ ಅರ್ಥ ಏನಿದೆ. ಆದ್ದರಿಂದ ನನ್ನ ಒಂದು ಕಿಡ್ನಿನ ನಿನಗೆ ಹಾಕಿಸಿ ನನ್ನ ರಾಜಕುಮಾರಿಯನ್ನು ಪೂರ್ಣಳಾಗಿಸಿದ್ದೇನೆ. ಆ ಹೆಮ್ಮೆ ಇದೆ ನನಗೆ. ಅಪ್ಪನಾಗಿ ನನಗೆ ಇದಕ್ಕಿಂತ ದೊಡ್ಡ ಸಾಧನೆ ಇನ್ನೊಂದಿಲ್ಲ ಆದರೆ ಈ ಅಪ್ಪ ನಿನ್ನ ಜೊತೆ ಕೊನೆಯವರೆಗೂ ಇರಲು ಸಾಧ್ಯವಿಲ್ಲ ಮಗಳೆ. ಈ ಅಪ್ಪನ ಮತ್ತೊಂದು ಕಿಡ್ನಿ ಈಗಾಗಲೇ ಕೆಟ್ಟು ಹೋಗಿ ತೆಗೆದಿದ್ದಾರೆ. ಹಾಳಾದ ಆ ರೋಗ ಈ ರೋಗದಿಂದ ವೈದ್ಯರು ಆಪರೇಷನ್ ನಂತರ ನಾನು ಬದುಕುವುದು ಅನುಮಾನ ಎಂದರು.
ಮಗಳ ಮದುವೆ ಮಾಡದೆ, ಅವಳಿಗೆ ಒಂದು ಆಸರೆ ಕೊಡದೆ ನಾನು ಕಣ್ಮುಚ್ಚಿದರೆ, ನೀನು ಹೇಳಿದ ಹಾಗೇ ಅಪ್ಪನ ಕರ್ತವ್ಯ ನಾನು ಮರೆತಂತೆ ಆಗುತ್ತೆ. ಅದಕ್ಕಾಗಿ ಹೇಗೋ ಹೋಗುತ್ತಿದ್ದೇನೆ ನಿನಗೆ ಒಂದಿಷ್ಟು ನೇರವಾಗಲೆಂದು ನನ್ನ ಕಣ್ಣುಗಳನ್ನು ಮಾರಿ ಅದರ ಹಣದಿಂದ ನಮ್ಮ ಸ್ವಂತ ಮನೆಯನ್ನ ಮತ್ತೆ ಖರೀಧಿಸಿ ನಿನ್ನ ಹೆಸರಿಗೆ ಬರೆದಿದ್ದೇನೆ.
ಆಹಾ ಮತ್ತೆ ನಿನ್ನ ಹುಡುಗ ಮತ್ತೆ ಅವರ ಮನೆಯವರ ಬಗ್ಗೆ ವಿಚಾರಿಸಿದ್ದೇನೆ. ನಿನ್ನ ವಾರಗಿತ್ತಿಯ ಬಾಯಿ ದೊಡ್ಡದು. ನಿನಗೆ ಅವರ ಜೊತೆ ಹೊಂದಿಕೊಂಡು ಹೋಗಲು ಕಷ್ಟ ಆಗಬಹುದು. ಹಾಗೊಂದು ವೇಳೆ ಆದಲ್ಲಿ ನೀನು ನಿನ್ನ ಗಂಡನ ಜೊತೆ ಈ ಮನೆಯಲ್ಲೇ ಇದ್ದು ಬಿಡು.
ಹಾಗೆ ಈ ಸುಡುವ ದೇಹಕ್ಕೆ ಯಾವ ಅಂಗಗಳು ಇದ್ದರೇನೂ ಬಿಟ್ಟರೇನು ಅದಿಕ್ಕೆ ಸರಿ ಇದ್ದ ಅಂಗಗಳನ್ನ ಮಾರಿ ಹತ್ತು ಲಕ್ಷ ನಿನ್ನ ಹೆಸರಿನಲ್ಲಿ ಒಂದು ಖಾತೆ ತೆರೆದು ಅದರಲ್ಲಿ ಹಾಕಿದ್ದೇನೆ. ಹಾಗೆ ಇಷ್ಟು ವರ್ಷ ನಿನ್ನ ಮುಂದಿನ ಜೀವನಕ್ಕೆ ಎಂದು ಎರಡೂವರೆ ಲಕ್ಷ ಒಂದು ಗೂಡಿಸಿದ್ದೆ ಅದೆ ನೀನು ಕೇಳಿದಿಯಲ್ಲ ದಿನ “ಬೆಳಿಗ್ಗೆ ಹೋಗ್ತಿಯಾ ಸಂಜೆ ಸೂರ್ಯ ಮುಳುಗಿದ ಮೇಲೆ ಬರ್ತಿಯಾ… ಅದೇನು ಮಾಡಿ ದಬ್ಬಾಗೋಕೆ ಅಂತಾ?” ಇದೆ ಎರಡೂವರೆ ಲಕ್ಷ ದುಡಿಯಲು, ನಿನ್ನಪ್ಪ ಯಾವುದೇ ಕೆಟ್ಟ ದಾರಿ ಹಿಡುದಿರಲಿಲ್ಲಮ್ಮ.
ನಾನು ಹೋದ ಮೇಲೆ, ನನ್ನ ತಂಗಿ ಅವಳ ಮನೆಗೆ ಕರೆದುಕೊಂಡು ಹೋಗ್ತಾಳೆ. ಅವರಿಗೆ ಮದುವೆ ಮಾಡಲು ಕೇಳಿಕೊಂಡಿದ್ದೇನೆ. ಅವರಿಗೆ ಈ ಹಣದ ಸಹಾಯ ಇರುತ್ತೆ. ಅದನ್ನ ಕೊಟ್ಟು ಅವರಿಂದ ಕನ್ಯಾದಾನ ಮಾಡಿಸಿಕೊ ಮಗಳೆ…
ನೀನು ಎದ್ದ ಮೇಲೆ ಅಪ್ಪ.. ಎಂದು ಕರೆಯುವೆ ಆದರೆ ನಾನು ಅಲ್ಲಿರಲಾರೆ ಕಂದ.
ಗಂಡನ ಜೊತೆ ನೂರು ಕಾಲ ಸುಮಂಗಲಿಯಾಗಿ ಬಾಳು ಮಗಳೆ.
ಕೊನೆ ಸಮಯದಲ್ಲಿ ನಿನ್ನ ಮುಖ ಕಾಣಲು ಆಗುತ್ತಿಲ್ಲ ಮಗಳೆ ಕಷಮಿಸಿಬಿಡು ಈ ಪಾಪಿ ಅಪ್ಪನನ್ನು 🙏😔.
ಮಗಳ ಆಕ್ರಂದನ ಮುಗಿಲು ಮುಟ್ಟಿತು. ತನ್ನ ದೇಹದ ನೋವನ್ನ ಮರೆತು ಆಸ್ಪತ್ರೆ ತುಂಬಾ ಹುಡುಕಿದಳು. ಎಲ್ಲಿಯೂ ಅಪ್ಪ ಕಾಣಿತ್ತಿಲ್ಲ ಎಷ್ಟು ಕೂಗಿದರೂ, ಬಡಿದುಕೊಂಡರೂ ಅಪ್ಪ ಕಣ್ಣ ಮುಂದೆ ಬರಲಿಲ್ಲ.
“ಇನ್ನೆಂದೂ ನಿನ್ನ ಬಳಿ ಇಷ್ಟು ಕಠೋರವಾಗಿ ವರ್ತಿಸಲಾರೆ, ದಯವಿಟ್ಟು ನನ್ನ ಮುಂದೆ ಬಾ ಅಪ್ಪ” ಎಂದು ಗೊಗರೆದಳು ಮಗಳು. ಮುಂದೆ ಬಂದ ಶವಕ್ಕೆ ಹೊದಿಸಿದ ಬಟ್ಟೆ ಸೇರಿಸಿದಾಗ ಅಪ್ಪ… ಎಂದು ಚಿರಿದಳು. ತನ್ನ ಅಷ್ಟೊಂದು ಕಠೋರವಾದ ಮಾತು ಕೇಳಿ ಪ್ರಶಾಂತವಾಗಿ ಮಲಗಿರುವ ಅಪ್ಪನನ್ನು ಪರಿಪರಿಯಾಗಿ ಕಣ್ಣು ಬಿಡುವಂತೆ ಕೇಳಿಕೊಂಡಳು. ತನ್ನ ಘೋರಾತಿಘೋರ ತಪ್ಪಿಗೆ ಹೇಗೆ ಕ್ಷಮೆ ಕೇಳಲಿ ಎಂದು ಬಿಕ್ಕುವಾಗ “ನನ್ನ ಅಪ್ಪ ನನಗೆ ದೇವರು ಅಂತಹವರಿಗೆ ಕ್ಷಮಿಸು ಎಂದರೆ ಸಾಲದು!!” ಎಂದು ಗೋಡೆಗೆ ಹಣೆ ಚಚ್ಚಿಕೊಂಡಳು 🙏🙏🙏