‘ಚಂಪಾ ಷಷ್ಠಿ’ಯ ಕತೆ :-
ಸರ್ಪ ಸಂಕುಲಗಳ ತವರೂರು ಎಂದೇ ಗುರುತಾಗಿರುವ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ‘ಕುಕ್ಕೆ’ ಎಂಬ ಹಳ್ಳಿ ‘ಸುಬ್ರಮಣ್ಯ’ ನೆಲೆಸಿದ ಪುಣ್ಯಕ್ಷೇತ್ರವು ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ನಮ್ಮ ದೇಶದಲ್ಲಿ ಹಿಂದೂಗಳು ನಾಗಾರಾಧನೆಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆ. ಸರ್ಪನಿಗೆ ಸಂಬಂಧಪಟ್ಟ ದೇವಾಲಯಗಳು ಎಲ್ಲಾ ರಾಜ್ಯಗಳಲ್ಲೂ ಸಾಕಷ್ಟು ಇವೆ. ಕರಾವಳಿಯ ಜನರಿಗೆ ನಾಗಾರಾಧನೆ ವಿಶೇಷ ಆರಾಧನೆಯಾಗಿದೆ. ಅದರಲ್ಲೂ ಕುಕ್ಕೆಸುಬ್ರಹ್ಮಣ್ಯದಲ್ಲಿ ಆಚರಿಸುವ ಚಂಪಾ ‘ಷಷ್ಠಿ’ ವಿಶೇಷ ಮಹತ್ವ ಪಡೆದಿದೆ. ಇದನ್ನು ಸ್ಕಂದ, ಸುಬ್ರಹ್ಮಣ್ಯ ಷಷ್ಠಿ ಅಂತಲೂ ಕರೆಯುತ್ತಾರೆ. ಈ ಚಂಪಾ ಷಷ್ಠಿ ಮಾರ್ಗಶಿರ ಮಾಸದ ಶುಕ್ಲ ಪಕ್ಷದ (ಆರನೇ ದಿನ) ಷಷ್ಠಿ ದಿನ ಬರುತ್ತದೆ. ವಿಶೇಷವಾಗಿ ಊರಿನ ಹೆಸರು ಸೇರಿ ಕುಕ್ಕೆ ಸುಬ್ರಹ್ಮಣ್ಯ ಷಷ್ಠಿ ಅಂತ ಕರೆಯುತ್ತಾರೆ. ಇಂಥ
ಧಾರ್ಮಿಕ ಹಿನ್ನೆಲೆ ಪಡೆದಿರುವ ಚಂಪಾ ಷಷ್ಠಿ ಆಚರಣೆಗೆ ಪೌರಾಣಿಕ ಹಿನ್ನೆಲೆಯು ಇದೆ.
ಪೌರಾಣಿಕ ಕಥೆ:- ಕಾರ್ತಿಕೇಯ, ಸ್ಕಂದ, ಕುಮಾರ, ಎಂದು ಕರೆಯುವ ಸುಬ್ರಹ್ಮಣ್ಯ ,ಶಿವ ಪಾರ್ವತಿಯರ ಮಗ. ಬ್ರಹ್ಮನ ಮಾನಸ ಪುತ್ರನಾದ ದಕ್ಷ ಪ್ರಜಾಪತಿಯು ತನ್ನ 13 ಜನ ಹೆಣ್ಣು ಮಕ್ಕಳನ್ನು ‘ಕಶ್ಯಪ’ ಮಹರ್ಷಿಗಳಿಗೆ ಕೊಟ್ಟು ವಿವಾಹ ಮಾಡಿದನು. ಈ 13 ಜನ ಹೆಣ್ಣು ಮಕ್ಕಳಲ್ಲಿ ಕದ್ರು ಮತ್ತು ವಿನುತ ಎಂಬ ಅಕ್ಕತಂಗಿಯರು ಇದ್ದಾರೆ. ಕಶ್ಯಪ ಮಹರ್ಷಿಗಳಿಂದ ಕದ್ರು ಶಕ್ತಿಶಾಲಿ ಯಾದ ಸಾವಿರ ಸರ್ಪ ಮಕ್ಕಳನ್ನು ಪಡೆದಳು. ವಿನುತ ಸಾವಿರ ಮಕ್ಕಳ ಶಕ್ತಿ ಇರುವಂತಹ ಮಕ್ಕಳು ಬೇಕೆಂದು, ಎರಡು ಮೊಟ್ಟೆಗಳನ್ನು ಹೆತ್ತಳು. ಆ ಮೊಟ್ಟೆಗಳು ವರ್ಷಗಳು ದಾಟಿದರೂ ಒಡೆಯದೇ ಇದ್ದಾಗ, ವಿನುತ ಅವಸರದಿಂದ ಒಂದು ಮೊಟ್ಟೆ ಒಡೆದಳು ಅದು ದೇಹದ ಮೇಲ್ಭಾಗ ವನ್ನು ಮಾತ್ರ ಪಡೆದಿತ್ತು. ಆ ಮಗುವಿಗೆ ಸಿಟ್ಟು ಬಂದು, ನಿನ್ನ ಅವಸರದಿಂದ ನಾನು ಈ ರೀತಿ ಅರ್ಧ ದೇಹದಿಂದ ಜನಿಸಲು ನೀನೆ ಕಾರಣ ಎಂದು ತಾಯಿಗೆ, 500 ವರ್ಷಗಳ ಕಾಲ ಬೇರೆಯವರಿಗೆ ದಾಸಿಯಾಗಿ ಸೇವೆ ಮಾಡುವಂತಾಗು ಎಂದು ಶಾಪ ಕೊಟ್ಟನು. ಕೊನೆಗೆ ಪಶ್ಚಾತಾಪವಾಗಿ, ಅಮ್ಮ ಬೇಸರಪಡಬೇಡ ನಿನಗೆ ಇನ್ನೊಬ್ಬ ಶಕ್ತಿಶಾಲಿ ಮಗ ಹುಟ್ಟಿ ಬಂದು ನಿನ್ನ. ಶಾಪವಿಮೋಚನೆ ಮಾಡುತ್ತಾನೆ ಎಂದು ಹೇಳಿ ಆಕಾಶಕ್ಕೆ ಹಾರಿದನು ಅವನೇ ಸೂರ್ಯನ ರಥಕ್ಕೆ ಸಾರಥಿಯಾದ ಅರುಣ.
ಇನ್ನೊಂದು ಮೊಟ್ಟೆ ಒಡೆದು ಬಂದ ಮಗು ಶಕ್ತಿಶಾಲಿಯಾದ ಗರುಡನಾಗಿದ್ದ.
ಮುಂದೆ ಒಂದು ದಿನ ಅಹಂಕಾರಿಯಾಗಿದ್ದ ಕದ್ರು ತನ್ನ ಸಹೋದರಿ ವಿನುತಳ ಜೊತೆ ಮೋಸದ ಪಂಥ ಕಟ್ಟಿ ತಂಗಿಯನ್ನು ಸೋಲಿಸಿ, ಪಂಥದಂತೆ 500 ವರ್ಷಗಳ ಕಾಲ ತನ್ನ ಚರಣದಾಸಿಯಾಗಿ ಮಾಡಿಕೊಂಡಳು.( ಶಾಪದ ಕಾರಣವೂ ಸೇರಿತ್ತು) ಕದ್ರು ತಾನಾಡಿದ ಕಪಟ ಪಂಥದ ಆಟದ ಸಹಾಯಕ್ಕೆ ತನ್ನ ನೂರು ಮಕ್ಕಳಾದ ಸರ್ಪಗಳನ್ನು ಬಳಸಿಕೊಂಡಳು. ಮೊದ ಮೊದಲು ಸರ್ಪಗಳು ಮೋಸವನ್ನು ನಾವು ಮಾಡುವುದಿಲ್ಲ ಎಂದು ಹೇಳಿದಾಗ, ಅವುಗಳಿಗೆ ಶಾಪ ಕೊಟ್ಟು ಹೆದರಿಸಿ ತನ್ನ ಕೆಲಸ ಮಾಡಿಸಿಕೊಂಡಳು. ಇದು ವಿನುತಾಳ ಮಗ ಗರುಡನಿಗೆ ತಿಳಿಯುತ್ತದೆ. ಆದರೆ ತಾಯಿ ಸಮಾನಳಾದ ಕದ್ರುವನ್ನು ಕೊಲ್ಲದೆ, ಕ್ರೋದದಿಂದ ಅವಳ ಮಕ್ಕಳಾದ ಹಾವುಗಳನ್ನು ತಿನ್ನಲು ಶುರು ಮಾಡಿದ. ಅದು ನೂರಾರು ಸಂಖ್ಯೆಯಲ್ಲಿ, ಕಂಡ ಕಂಡಲ್ಲಿ ಕುಕ್ಕಿ ಕುಕ್ಕಿ ಮುಕ್ಕುತ್ತಿದ್ದ. ಸರ್ಪಗಳು ಗರುಡನಿಂದ ಪ್ರಾಣ ಉಳಿಸುಕೊಳ್ಳುವ ಸಲುವಾಗಿ, ಶೇಷನಾಗ ಪಾತಾಳವನ್ನು ಸೇರಿಕೊಂಡ. ಅನಂತನು ವೈಕುಂಠ ದಲ್ಲಿ ಮಹಾ ವಿಷ್ಣುವಿಗೆ ತಲ್ಪವಾಗುತ್ತಾನೆ. ಇನ್ನು ಉಳಿದ ಹಲವು ನಾಗಗಳೆಲ್ಲ ಶಿವನ ಕೈ ಕಾಲು ಮೈ ಮೇಲೆಲ್ಲಾ ಸುತ್ತಿಕೊಳ್ಳುತ್ತವೆ. ಕಾಳಿ ಎನ್ನುವ ಸರ್ಪ ನಂದಗೋಕುಲದಲ್ಲಿ ಯಮುನಾ ನದಿಯ ಮಡುವಲ್ಲಿ ಅಡಗಿಕೊಳ್ಳುತ್ತದೆ.
ಶಂಖಪಾಲ, ಪದ್ಮನಾಭ, ಕಂಬಲ, ದೃತರಾಷ್ಟ್ರ ಭೂಧರ ಅನಗಾದಿ ಇನ್ನೂ
ಮುಂತಾದ ಸರ್ಪಗಳು ಕಂಡ ಕಂಡಲ್ಲಿ ಅಡಗಿಕೊಳ್ಳುತ್ತವೆ.
ಇದರಲ್ಲಿ ವಾಸುಕಿ ಎಂಬ ಸರ್ಪ ಮಾತ್ರ ಗರುಡನ ಭಯದಿಂದ ತುಳುನಾಡಿಗೆ ಓಡಿ ಬರುತ್ತದೆ. ಸಹ್ಯಾದ್ರಿ ತಪ್ಪಲಲ್ಲಿರುವ ‘ಧಾರಾ’ ನದಿಯ ಸಮೀಪ ಇರುವ ‘ಬಿಲದ್ವಾರ’ ಎಂಬ ಗುಹೆಯಲ್ಲಿ ಅಡಗಿಕೊಳ್ಳುತ್ತದೆ. ಆದರೆ ಇದು ಹೇಗೋ ಗರುಡನಿಗೆ ಗೊತ್ತಾಗಿ ಇಲ್ಲಿಗೂ ಬಂದನು. ವಾಸುಕಿಗೂ ಮತ್ತು ಗರುಡನಿಗೂ
ದೊಡ್ಡ ಕಾಳಗ ಆಗುತ್ತದೆ. ಈ ವಿಷಯ ತಿಳಿದ ಇವರಿಬ್ಬರಿಗೂ ತಂದೆಯಾದ ಕಶ್ಯಪನು ಅವಸರದಿಂದ ಬಂದು ಯುದ್ಧವನ್ನು ತಡೆಯುತ್ತಾನೆ. ಗರುಡನಿಗೆ ಹೇಳಿದ, ವಾಸುಕಿ ಶಿವನ ಅನನ್ಯ ಭಕ್ತನು. ಇವನು ಮುಂದೆ ಲೋಕ ಕಲ್ಯಾಣಾ ರ್ಥವಾಗಿ ಹಲವು ಕೆಲಸಗಳು ಇವನಿಂದ ಆಗಬೇಕಿದೆ ಆದುದರಿಂದ ವಾಸುಕಿ ಯನ್ನು ಬಿಡು ಎಂದರು. ಆದರೆ ಗರುಡ ಹೇಳಿದ. ನನಗೆ ತಿನ್ನಲು ಆಹಾರ ಬೇಕು ಏನು ಮಾಡಲಿ ಎಂದು ಕೇಳಿದಾಗ, ಕಶ್ಯಪರು ಹೇಳಿದರು ಇಲ್ಲಿಂದ ದೂರದಲ್ಲಿ ‘ಮನಿಲಾ’ ಎಂಬ ದ್ವೀಪವಿದೆ. ಅಲ್ಲಿರುವ ದುಷ್ಟ ಬೇಡರನ್ನು ಮತ್ತು ಹಾವುಗಳನ್ನು ತಿಂದು ನಿನ್ನ ಹಸಿವನ್ನು ನೀಗಿಸಿ ಕೋ ಎಂದರು.ತಂದೆಯ ಮಾತಿನಂತೆ ಗರುಡ ಅಲ್ಲಿಂದ ಮನಿಲಾ ದ್ವೀಪಕ್ಕೆ ಹೊರಟನು.
ಆದರೆ ವಾಸುಕಿಗೆ ಇನ್ನೂ ಗರುಡನ ಭಯ ಇದ್ದುದರಿಂದ, ತಂದೆಯ ಹತ್ತಿರ ಈ ಭಯಕ್ಕೆ ಏನು ಮಾಡಲಿ ಎಂದು ಕೇಳಿದ. ಇದಕ್ಕೆ ಕಶ್ಯಪರು, ನೀನು ಶಿವನನ್ನು ಕುರಿತು ಕಠಿಣವಾದ ತಪಸ್ಸನ್ನು ಆಚರಿಸು ಎಂದು ವಾಸುಕಿಗೆ ಹೇಳಿದರು. ಶಿವನ ಕುರಿತು ಸಾವಿರಾರು ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿದ ವಾಸುಕಿ ಶಿವನನ್ನು ಒಲಿಸಿಕೊಂಡನು. ಪ್ರತ್ಯಕ್ಷನಾದ ಶಿವನಿಗೆ, ತನಗಿರುವ ಪ್ರಾಣ ಭಯ ವನ್ನು ಹೋಗಲಾಡಿಸುವಂತೆ ಪ್ರಾರ್ಥಿಸಿದನು. ಪರಮೇಶ್ವರನು ವಾಸುಕಿಗೆ ಆಶೀರ್ವದಿಸುತ್ತಾ, ನಿನಗೆ ಗರುಡನ ಭಯ ಬೇಡ. ಸರ್ಪಗಳ ರಕ್ಷಣೆ ಮಾಡುವ ಸಲುವಾಗಿಯೇ ಮುಂದಿನ ಕಲ್ಪದಲ್ಲಿ ಸುಬ್ರಹ್ಮಣ್ಯ ನಮ್ಮ ಮಗನಾಗಿ ಜನಿಸುತ್ತಾನೆ. ಸುಬ್ರಹ್ಮಣ್ಯನ ಜನನ ಬೇಗ ಆಗಲಿ. ಆ ದಿನ ಬೇಗ ಬೇಗ ಬರಲಿ ಎಂದು ನೀನು ಇಲ್ಲೇ ಕುಳಿತು ತಪಸ್ಸನ್ನು ಆಚರಿಸು ಎಂದನು. ವಾಸುಕಿ ಮತ್ತೆ ಹಲವು ವರ್ಷಗಳ ಕಾಲ ತಪಸ್ಸನ್ನು ಮಾಡಿದನು. ಕಠಿಣ ತಪಸ್ಸಿನ ಫಲವಾಗಿ ಶಿವ ಪಾರ್ವತಿಯರಿಗೆ ,ಸುಬ್ರಹ್ಮಣ್ಯನ ಜನನವಾಗಿ ಅವನು, ರಾಕ್ಷಸ ತಾರಕಾ ಸುರ ನನ್ನು ಸಂಹರಿಸಿ. ತನ್ನ ರಕ್ತ ಸಿಕ್ತ ಆಯುಧವಾದ ‘ವೇಲಾಯುಧ’ವನ್ನು ಸುಬ್ರಹ್ಮಣ್ಯದಲ್ಲಿರುವ ‘ಧಾರ’ ನದಿಯಲ್ಲಿ ತೊಳೆಯುತ್ತಾನೆ. ಅಂದಿನಿಂದಲೇ ‘ಧಾರ’ ನದಿಗೆ ‘ಕುಮಾರಧಾರ’ ನದಿ ಎಂದು ಹೆಸರು ಬಂದಿತು. ಇಷ್ಟೆಲ್ಲ ಘಟನೆಗಳನ್ನು ಕೇಳಿ, ನೋಡಿದ ಇಂದ್ರನು ತನ್ನ ಮಗಳಾದ ದೇವಸೇನೆ ಯೊಂದಿಗೆ ಓಡಿ ಬಂದು ಸುಬ್ರಮಣ್ಯನಿಗೆ ತನ್ನ ಮಗಳನ್ನು ಮದುವೆಯಾಗು ವಂತೆ ಪ್ರಾರ್ಥಿಸಿಕೊಂಡನು. ಸುಬ್ರಹ್ಮಣ್ಯನು( ಸುಬ್ರಮಣ್ಣಿನ ಇನ್ನೊಂದು ಆರು ಮುಖವಳ್ಳ ರೂಪ) ಷಣ್ಮುಖನ ಒಪ್ಪಿಗೆಯನ್ನು ಪಡೆದು ಸಕಲ ದೇವಾನು ದೇವತೆಗಳ ಸಮ್ಮುಖದಲ್ಲಿ ಕುಮಾರಧಾರಾ ನದಿಯ ತಟದಲ್ಲಿಯೇ ಚಂಪಾ ಷಷ್ಟಿಯ ದಿನದ ಶುಭ ಮಹೂರ್ತದಲ್ಲಿ ಇಂದ್ರನ ಮಗಳು ದೇವಸೇನೆ ಯೂಂದಿಗೆ ಸುಬ್ರಹ್ಮಣ್ಯನ ವಿವಾಹ ಸಂಭ್ರಮ ನಡೆಯುತ್ತದೆ.
ಮುಂದೆ ವಾಸುಕಿಯ ಅಪೇಕ್ಷೆಯಂತೆ, ಸುಬ್ರಮಣ್ಯನು ತನ್ನ ಪತ್ನಿ ದೇವಸೇನಾ ಮತ್ತು ವಾಸುಕಿಯ ಜೊತೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನೆಲೆಸಲು ಇಚ್ಛೆ ವ್ಯಕ್ತಪಡಿಸಿದಾಗ, ಸ್ವತಹ ವಿಶ್ವಕರ್ಮನೆ ಮೂರ್ತಿಯನ್ನು ಕಡೆದುಕೊಡುತ್ತಾನೆ. ಎಲ್ಲಾ ದೇವರ ಸಮ್ಮುಖ ದಲ್ಲಿ ಸುಬ್ರಹ್ಮಣ್ಯ ಮೂರ್ತಿಯನ್ನು ಬ್ರಹ್ಮ ದೇವನು ಪ್ರತಿಷ್ಠಾಪನೆ ಮಾಡಿದನು. ಗರುಡನ ಭಯದಿಂದ ಕಠಿಣ ತಪಸ್ಸು ಮಾಡುವ ಮೂಲಕ ಸುಬ್ರಮಣ್ಯನನ್ನು ಧರೆಗಿಳಿಸಿದ ‘ವಾಸುಕಿ’ಯನ್ನು ದೇವತೆಗಳು ಹೊಗಳಿ, ‘ನಾಗಬ್ರಹ್ಮ’ ಎಂಬ ಹೆಸರಿನಿಂದ ತುಳುನಾಡಿನವರು ನಿನ್ನನ್ನು ಆರಾಧಿಸಲಿ ಎಂದು ದೇವಾನು ದೇವತೆಗಳೆಲ್ಲ ವಾಸುಕಿಗೆ ವರಕೊಟ್ಟರು. ಹಾಗೆಯೇ ಗರುಡನ ಆಗಮನ ದೊಂದಿಗೆ ಚಂಪಾಷಷ್ಟಿ ಯ ದಿನ ಜಾತ್ರೆ ನಡೆಯುತ್ತದೆ. ಬಹಳ ದೊಡ್ಡ ಜಾತ್ರೆ. ಈ ದಿನ ಸುಬ್ರಮಣ್ಯ ರಥೋತ್ಸೋವ ಇರುತ್ತದೆ. ಗರುಡ ಬರದೆ ರಥ ಎಳೆಯುವುದಿಲ್ಲ. ಎಲ್ಲೇ ಇದ್ದರೂ ಗರುಡ ರಥ ಎಳೆಯುವ ಸಮಯಕ್ಕೆ ಸರಿಯಾಗಿ ಬಂದು ಆಕಾಶದ ಮೇಲೆ ಹಾರಾಡುತ್ತಾ ಭಕ್ತರ ಕಣ್ಣಿಗೆ ಗೋಚರಿಸುತ್ತಾನೆ. ಆನಂತರವೇ ರಥ ಎಳೆಯುತ್ತಾರೆ. ಸುಬ್ರಹ್ಮಣ್ಯ ನ ಪ್ರಮುಖ ಕ್ಷೇತ್ರಗಳಲ್ಲಿ ರಥೋತ್ಸವವನ್ನುಸ ಗರುಡ ಬಂದು ಹಾರಾಡಿದ್ದು ಕಂಡ ಮೇಲೆ ರಥೋತ್ಸವ ಆರಂಭವಾಗುತ್ತದೆ. ಹಿಂದಿನಿಂದಲೂ ಸಂಪ್ರದಾಯವಾಗಿ ನಡೆದು ಬಂದಿದೆ. ನಾಗನ ಮೇಲಿರುವ ನಂಬಿಕೆ, ನಾಗ ದೋಷದ ಆತಂಕದ ಭಯ, ಜನರ ಶ್ರದ್ಧಾ ಭಕ್ತಿಗೆ ಹೆಚ್ಚು ಒತ್ತು ಕೊಟ್ಟಿದೆ.
ನಂಬಿಕೆಯಂತೆ, ನಾಗದೇವರಲ್ಲಿ ಬೇಡಿಕೊಂಡವರಿಗೆ ಸಂತಾನ ಪ್ರಾಪ್ತಿ, ಸಂಪತ್ತು, ಆರೋಗ್ಯ ಭಾಗ್ಯ, ಚರ್ಮ ವ್ಯಾದಿ, ವಾಸಿಯಾಗದ ಕಾಯಿಲೆಗಳು, ಮನೆಯಲ್ಲಿ ಬರುವ ತೊಂದರೆ ತೊಡಕುಗಳು, ಗೃಹದೋಷ, ಗ್ರಹಗತಿಗಳ ದೋಷಗಳ ನಿವಾರಣೆ ಇಂಥವುಗಳಿಗೆಲ್ಲ ಸುಬ್ರಹ್ಮಣ್ಯನಲ್ಲಿ ಭಕ್ತಿಯಿಂದ ಬೇಡಿಕೊಂಡರೆ, ಎಲ್ಲಾ ಕಷ್ಟ ಕಾರ್ಪಣ್ಯಗಳು ಪರಿಹಾರವಾಗಿ, ಸಂಪತ್ತು, ಸಮೃದ್ಧಿ, ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಂತೆಯೇ ನಡೆಯುತ್ತಿದೆ. ಸುಬ್ರಮಣ್ಯ ಕ್ಷೇತ್ರಗಳಲ್ಲಿ ಚಂಪಾ ಷಷ್ಟಿಯನ್ನು ವಿಧಿ ವಿಧಾನ ಗಳೊಂದಿಗೆ, ಹಲವು ತರದ ಧಾರ್ಮಿಕ ಆಚರಣೆಗಳು ನಡೆದು, ವಿಜೃಂಭಣೆ ಯಿಂದ ಉತ್ಸವವನ್ನು ಆಚರಿಸುತ್ತಾರೆ.
ಕಾರ್ತಿಕೇಯ ಮಂತ್ರಾ:
ಪೂಜಾ ಮಂತ್ರ!
ದೇವಸೇನಾಪತೇ ಸ್ಕಂದ ಕಾರ್ತಿಕೇಯ ಭವೋದ್ಭವ !
ಕುಮಾರ ಗುಹ ಗಾಂಗೆಯ ಶಕ್ತಿ ಹಸ್ತ ನಮೋಸ್ತುತೆ !!
ಗಾಯತ್ರಿ ಮಂತ್ರ!
ಓಂ ತತ್ಪುರುಷಾಯ ವಿದ್ಮಹೇ
ಮಹಾಸೇನಾಯ ಧೀಮಹಿ
ತನ್ನೋ ಸ್ಕಂದ: ಪ್ರಚೋದಯಾತ್ !!
ಶತ್ರು ವಿನಾಶಕ ಮಂತ್ರ:-
ಓಂ ಶರವಣ ಭವಾಯ ನಮಃ!!
ಜ್ಞಾನ ಶಕ್ತಿ ಧಾರಾ ಸ್ಕಂದ,
ವಲ್ಲೀ ಕಲ್ಯಾಣ ಸುಂದರಾ !
ದೇವಸೇನಾ ಮನಃ ಕಾಂತಾ
ಕಾರ್ತಿಕೇಯ ನಮೋಸ್ತುತೇ!!
ಷಡಾನನಂ ಕುಂಕುಮ ರಕ್ತ ವರ್ಣಂ
ಮಹಾ ಮತಿಂ ದಿವ್ಯ ಮಯೂರ ವಾಹನಂ!
ರುದ್ರಸ್ಯ ಸೂನಂ ಸುರ ಸೈನ್ಯನಾಥಂ
ಗುಹಂ ಸದಾ ಶರಣಮಹಂ ಭಜೇ!!
ಮಯೂರಾಧಿ ರೂಢಂ ಮಹಾ ವಾಕ್ಯ ಗೂಢಂ
ಮನೋಹಾರಿ ದೇಹಂ ಮಹಾಚ್ಚಿತ ಗೇಹಂ !
ಮಹೀ ದೇವ ದೇವಂ ಮಹಾ ವೇದ ಭಾವಂ
ಮಹಾದೇವ ಬಾಲಂ ಭಜೇ ಲೋಕಪಾಲಂ !!
ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.




