🌻ದಿನಕ್ಕೊಂದು ಕಥೆ🌻
ಆಲೋಚಿಸಿ ತೀರ್ಮಾನಿಸಿ ಅಪಾರ ಲಾಭ ಕಟ್ಟಿಟ್ಟಬುತ್ತಿ…
ಸಂನ್ಯಾಸಿಯೊಬ್ಬ ಏಕಾಂಗಿಯಾಗಿ ಧ್ಯಾನಮಾಡಬೇಕೆಂದು ತನ್ನ ಆಶ್ರಮದಿಂದ ದೂರಹೋಗಲು ನಿರ್ಧರಿಸುತ್ತಾನೆ. ಏಕೆಂದರೆ ಆತ ಬಹು ಕೋಪಿಷ್ಟ. ಆಶ್ರಮದಲ್ಲಿ ಆತನ ಧ್ಯಾನಕ್ಕೆ ತೊಂದರೆಯಾಗುತ್ತಿರುತ್ತದೆ. ಯಾರಾದರೂ ಬರುವುದು, ಈತ ಅವರ ಮೇಲೆ ಕೋಪಗೊಳ್ಳುವುದು ನಡೆಯುತ್ತಲೇ ಇರುತ್ತದೆ. ದೋಣಿಯನ್ನೇರಿ ಕೆರೆಯ ನಡುವೆ ನಿಲ್ಲಿಸಿ ಕಣ್ಣುಮುಚ್ಚಿ ಧ್ಯಾನಕ್ಕೆ ತೊಡಗುತ್ತಾನೆ. ಕೆಲವು ಗಂಟೆಗಳು ನಿಶ್ಶಬ್ದವಾಗಿ ಸರಿದುಹೋಗುತ್ತವೆ. ಇದ್ದಕ್ಕಿದ್ದಂತೆ ಇನ್ನೊಂದು ದೋಣಿ ಬಂದು ಸಂನ್ಯಾಸಿಯ ದೋಣಿಗೆ ಡಿಕ್ಕಿಹೊಡೆದ ಅನುಭವವಾಗುತ್ತದೆ. ಕಣ್ಣುಮುಚ್ಚಿದ್ದ ಸಂನ್ಯಾಸಿಗೆ ತನ್ನ ಕೋಪ ಹೆಚ್ಚಾಗುತ್ತಿರುವ ಅನುಭವವಾಗುತ್ತದೆ. ಏಕಾಗ್ರತೆಗೆ ಭಂಗತಂದ ದೋಣಿಯಾತನನ್ನು ಚೆನ್ನಾಗಿ ಬೈದುಬಿಡಬೇಕು ಎಂದುಕೊಳ್ಳುತ್ತ ಸಿಟ್ಟಿನಿಂದ ಕಣ್ಣುಬಿಡುತ್ತಾನೆ. ಆದರೆ, ಎದುರಿನ ದೋಣಿ ಖಾಲಿ ಇರುತ್ತದೆ. ನಾವಿಕನಿಲ್ಲದ ಆ ದೋಣಿ ಹಗ್ಗ ಬಿಚ್ಚಿಹೋಗಿ ತಾನಾಗಿಯೇ ತೇಲುತ್ತ ತೇಲುತ್ತ ಬಂದು ಈ ದೋಣಿಗೆ ಡಿಕ್ಕಿ ಹೊಡೆಯಿತು.
ಆ ಸಂನ್ಯಾಸಿಗೆ ಜ್ಞಾನೋದಯವಾಗುತ್ತದೆ. ‘ಕೋಪವೆಂಬುದು ತನ್ನೊಳಗೇ ಇದೆಯೇ ಹೊರತು ಹೊರಗಡೆಯಿಂದ ಬರುವುದಲ್ಲ; ಹೊರಗಡೆಯ ವಸ್ತುವೊಂದು ತಾಕುವುದರಿಂದ ತನ್ನೊಳಗಿರುವ ಕೋಪ ಜಾಗೃತಗೊಳ್ಳುತ್ತದೆ’ ಎಂಬ ಸತ್ಯವನ್ನು ಆತ ಅರಿತುಕೊಳ್ಳುತ್ತಾನೆ. ಆಗಿನಿಂದ ಆತ ಯಾರಾದರೂ ಕಿರಿಕಿರಿಯಾಗುವಂತೆ ವರ್ತಿಸಿದರೆ, ಕೋಪ ಬರುವಂತೆ ನಡೆದುಕೊಂಡರೆ ತನಗೆ ತಾನೇ ಹೇಳಿಕೊಳ್ಳುತ್ತಿದ್ದ- ‘ಅವರೊಂದು ಖಾಲಿ ದೋಣಿಯಂಥವರು, ಕೋಪ ನನ್ನೊಳಗೇ ಇದೆ’ ಅಂತ.
ಇದು ಆ ಸಂನ್ಯಾಸಿಯ ಸಮಸ್ಯೆ ಮಾತ್ರವಲ್ಲ, ನಮ್ಮೆಲ್ಲರ ಸಮಸ್ಯೆ. ನಾವು ತಲ್ಲಣಗೊಳ್ಳುವುದು ಯಾವಾಗ? ಮನಸ್ಸಿಗೆ ಕಿರಿಕಿರಿಯಾದಾಗ. ಆದರೆ ಕಿರಿಕಿರಿ ಮಾಡಿಕೊಳ್ಳುವುದರಿಂದ, ಹತಾಶರಾಗಿ ತಲೆಮೇಲೆ ಕೈಹೊತ್ತು ಕೂರುವುದರಿಂದ ಸಮಸ್ಯೆಯ ಬೆಟ್ಟ ಒಂದಿಂಚೂ ಕರಗುವುದಿಲ್ಲ. ನಾವು ಬಯಸಲಿ ಬಿಡಲಿ ಕೆಲವು ಘಟನೆಗಳು ತಮ್ಮಷ್ಟಕ್ಕೆ ತಾವೇ ನಡೆಯುತ್ತಿರುತ್ತವೆ. ನಮ್ಮ ಕೈಮೀರಿದ ಘಟನೆಗಳು ನಡೆದಾಗ ಅವನ್ನು ಹೇಗೆ ಸ್ವೀಕರಿಸುತ್ತೇವೆ ಎಂಬುದನ್ನಾಧರಿಸಿ ಅದರ ಪರಿಣಾಮದ ತೀವ್ರತೆ ಮತ್ತು ನಮ್ಮ ವ್ಯಕ್ತಿತ್ವ ನಿರ್ಧರಿಸಲ್ಪಡುತ್ತವೆ.
ದಿನನಿತ್ಯದ ಬದುಕಿನಲ್ಲಿ ನಿಮಗೆ ಕೋಪ ಬರಿಸುವ ಸಂಗತಿಗಳು ಯಾವುವು ಎಂದು ಪಟ್ಟಿಮಾಡಿ ನೋಡಿ; ಅವು ನಮ್ಮ ಬಗ್ಗೆ ನಮಗೇ ನಾಚಿಕೆಯಾಗುವಷ್ಟು ಜುಜುಬಿ ಎನ್ನುವಂತಹ ಸಂಗತಿಗಳಾಗಿರುತ್ತವೆ. ಪಲ್ಯಕ್ಕೆ ಕಡಿಮೆಯಾದ ಉಪ್ಪು, ತುಸುವೇ ತಳಹತ್ತಿದ ಅನ್ನ, ಹೊರಡುವ ಸಮಯಕ್ಕೆ ಕೈಗೆ ಸಿಗದ ಕಾಲುಚೀಲ, ಮಕ್ಕಳು ಮಾಡಿದ ತುಂಟತನ, ಕಡಿಮೆ ರನ್ಗೆ ಔಟಾದ ಕೊಹ್ಲಿ, ಕೊಂಚ ತಡವಾಗಿದ್ದಕ್ಕೆ ಸಿಕ್ಕ ಬಾಸ್ ಬೈಗುಳ, ಸಹೋದ್ಯೋಗಿಗೆ ಸಿಕ್ಕ ಹೊಗಳಿಕೆ, ಸೈಡ್ ಕೊಡದ ವಾಹನದ ಡ್ರೈವರ್… ಓಹ್ ಒಂದೇ ಎರಡೇ… ಎಲ್ಲ ಈ ತರಹದ ಸಂಗತಿಗಳೇ. ಇಂಥ ಚಿಕ್ಕಚಿಕ್ಕ ಸಂಗತಿಯೂ ಸಮಸ್ಯೆ ಉಂಟುಮಾಡಲು ಕಾರಣವೇನೆಂದರೆ ನಾವು ತಕ್ಷಣ ಪ್ರತಿಕ್ರಿಯಿಸುತ್ತೇವೆ. ಅಂದರೆ ‘ರಿಯಾಕ್ಟ್’ ಮಾಡುತ್ತೇವೆ.
ಜನರು ನಮ್ಮನ್ನು ಟೀಕಿಸುವುದನ್ನು ತಡೆಯಲು ಸಾಧ್ಯವೇ? ನೀವು ಏನೂ ಸಾಧನೆ ಮಾಡದಿದ್ದರೆ ‘ದಂಡಪಿಂಡ’ ಎನ್ನುತ್ತಾರೆ. ಏನಾದರೂ ಮಾಡಿದರೆ ‘ಅಯ್ಯೋ ಇದೇನು ಮಹಾ, ಮನಸ್ಸು ಮಾಡಿದರೆ ಇವರಪ್ಪನಂತಹ ಸಾಧನೆ ಮಾಡುತ್ತಿದ್ದೆ’ ಎನ್ನುತ್ತಾರೆ! ಬದುಕೂ ಆಟದ ಹಾಗೆ. ನಾವು ಬಯಸಿದ್ದೇ ಆಗಿಬಿಡುವುದಿಲ್ಲ. ಒಂದು ಒಳ್ಳೆಯ ಇನ್ಸ್ವಿಂಗ್ ಬಾಲ್ ಬರಲಿ ಎಂದು ಬ್ಯಾಟ್ಸ್ಮನ್ ಆಶಿಸುತ್ತಿರುತ್ತಾನೆ. ಬೌಲರ್ ಕೂಡ ಅದನ್ನೇ ಹಾಕುತ್ತಾನೆ. ಆದರೆ ಆ ಕ್ಷಣ ಬೀಸಿದ ಗಾಳಿ, ಚೆಂಡಿನ ದಿಕ್ಕನ್ನೇ ಬದಲಾಯಿಸಿಬಿಡುತ್ತದೆ. ಸಿಕ್ಸರ್ ಹೊಡೆಯುವ ಕನಸಿನಲ್ಲಿದ್ದ ಬ್ಯಾಟ್ಸ್ಮನ್ ಔಟ್ ಆಗಿಬಿಡುತ್ತಾನೆ! ಬ್ಯಾಟ್ಸ್ಮನ್ ಬಯಸಿದ್ದು ಇನ್ಸ್ವಿಂಗ್, ಬೌಲರ್ ಹಾಕಿದ್ದೂ ಅದೇ. ಬ್ಯಾಟ್ಸ್ಮನ್ ಅದನ್ನು ನೋಡಿದ್ದಾನೆ ಕೂಡ! ಆದರೆ 22 ಗಜ ಅಳತೆಯ ಪಿಚ್ ದಾಟಿ ಚೆಂಡು ಬರಬೇಕಾದರೆ ಬೀಸಿದ ಗಾಳಿ ಎಲ್ಲ ಲೆಕ್ಕಾಚಾರಗಳನ್ನೂ ತಲೆಕೆಳಗೆ ಮಾಡಿಬಿಟ್ಟಿತು, ಥೇಟ್ ನಮ್ಮ ಜೀವನದಂತೆ!
ಆದರೆ ಯೋಚಿಸಿ ತೀರ್ಮಾನ ತೆಗೆದುಕೊಳ್ಳುವುದರಿಂದ ಅನೇಕ ಅವಕಾಶಗಳು ಲಭ್ಯವಾಗುತ್ತವೆ. ಒಮ್ಮೆ ನಾಲ್ಕೈದು ಜಪಾನಿಯರು ಹಸುಗಳನ್ನು ಖರೀದಿಸಲೆಂದು ಅಮೆರಿಕದ ಫಾರ್ಮ್ ಹೌಸ್ ಒಂದಕ್ಕೆ ಹೋದರು. ಮಾರಾಟಗಾರ ಅವರಿಗೆ ಹೇಳಿದ, ‘ನೀವು ಹಸುಗಳನ್ನು ಆಯ್ಕೆಮಾಡಿದರೆ ಒಂದು ಹಸುವಿಗೆ ನೂರು ಡಾಲರ್, ನಾನೇ ಆಯ್ಕೆಮಾಡಿದರೆ ಶೇ. 50 ಕಡಿತ!’. ನಾನೋ ನೀವೋ ಏನು ಮಾಡುತ್ತಿದ್ದಿವಿ? ‘ಅವನು ಹಾಲುಕೊಡದ ಹಸು ಕೊಡ್ತಾನೆ ಬಿಡಪ್ಪ’ ಎಂದು ಕೆಲವರು ನೂರು ಡಾಲರ್ಗೆ ಒಂದರಂತೆ ಹಸುಗಳನ್ನು ಖರೀದಿಸಿದರೆ, ಮತ್ತೆ ಕೆಲವರು ‘ಅಯ್ಯೋ 4 ಲೀಟರ್ ಕಡಿಮೆ ಹಾಲು ಕೊಡಬಹುದು, ಆದರೆ ಅರ್ಧಕ್ಕರ್ಧ ದುಡ್ಡು ಉಳಿಯಿತಲ್ಲ’ ಎಂದು ಐವತ್ತು ಡಾಲರ್ ಆಫರ್ ಒಪ್ಪಿಕೊಳ್ಳುತ್ತಿದ್ದೆವೇನೋ. ಆ ಜಪಾನಿಯರು ಏನು ಮಾಡಿರಬಹುದು? ಯೋಚಿಸಿ ಹೇಳಲೆಂದು ಅವರು ಒಂದು ಗಂಟೆಯ ಸಮಯ ಕೇಳಿದರು. ಒಂದು ಗಂಟೆಯ ನಂತರ ಕೋಣೆಯಿಂದ ಹೊರಬಂದಾಗ ಅಮೆರಿಕನ್ ಕೇಳಿದ, ‘ತೀರ್ಮಾನ ಮಾಡಿದಿರಾ?’. ‘ಹೌದು’ ಇವರೆಂದರು. ‘ಏನು ತೀರ್ವನ? ನಾನು ಆಯ್ಕೆ ಮಾಡುವುದೋ ನೀವೇ ಆರಿಸುತ್ತೀರೋ?’. ಅವರೆಂದರು, ‘ನೀವೇ ಆರಿಸಿ, ನಾವು ಐವತ್ತು ಡಾಲರ್ ಆಫರ್ಗೇ ಹೋಗುತ್ತೇವೆ’. ಅಮೆರಿಕನ್ ವಿಜಯೋತ್ಸಾಹದಲ್ಲಿ ಬೀಗಿದ- ‘ಅಂದಹಾಗೆ ನಿಮಗೆ ಎಷ್ಟು ಹಸುಗಳನ್ನು ಆರಿಸಲಿ’?. ಜಪಾನೀಯರಲ್ಲಿ ಒಬ್ಬ ಟೈ ಸರಿಮಾಡಿಕೊಳ್ಳುತ್ತ ತಣ್ಣಗೆ ಹೇಳಿದ, ‘ಎಲ್ಲವನ್ನೂ ಆಯ್ಕೆ ಮಾಡಿ!’ ಎಂತಹ ಅದ್ಭುತ ನಿರ್ಧಾರ ಅಲ್ಲವೇ? ಇದನ್ನೇ ಯೋಚಿಸಿ ತೀರ್ವನಕ್ಕೆ ಬರುವುದು ಎನ್ನುತ್ತಾರೆ.
ಕ್ರಿಕೆಟ್ನಲ್ಲಿ ಸ್ಲೆಡ್ಜಿಂಗ್ ಎಂಬುದಿದೆ. ಅಂದರೆ ಕೆಟ್ಟಶಬ್ದಗಳನ್ನು ಉಪಯೋಗಿಸಿ ಎದುರಾಳಿ ಬ್ಯಾಟ್ಸ್ಮನ್ಗೆ ಬೈಯುವುದು. ಆತನ ಏಕಾಗ್ರತೆ ಭಂಗವಾಗಿ ಔಟ್ ಆಗಲಿ ಎಂಬುದು ಉದ್ದೇಶ! ಬದುಕಿನಲ್ಲೂ ಹೀಗಾಗುತ್ತದೆ. ಏನು ಮಾಡುವುದು? ಸಚಿನ್ ತೆಂಡುಲ್ಕರ್ ಜೀವನ ಇದಕ್ಕೆ ಉತ್ತರವಾಗಬಲ್ಲದು. ಸಚಿನ್ ವಿಶ್ವಖ್ಯಾತಿಯ ದಾಂಡಿಗನಾಗಲು, ‘ಡೆಮಿಗಾಡ್’ ಎನಿಸಿಕೊಳ್ಳಲು ಕಾರಣವಾದ ಹಲವು ಸಂಗತಿಗಳಲ್ಲೊಂದು ಕೂಲ್ ಆಗಿರುವುದು! ಯಾರು ಏನೇ ಹೇಳಲಿ ತಲೆಕೆಡಿಸಿಕೊಳ್ಳದೆ ಏಕಾಗ್ರತೆಯನ್ನು ಕಳೆದುಕೊಳ್ಳದಿರುವುದು. ಆದರೆ ನಾವು ಸುಮ್ಮನಿರುತ್ತೇವೆಯೇ? ಇಲ್ಲ, ಬದಲು ಕೂಗಾಡುತ್ತೇವೆ. ಹಾಗಂತ ಯಾರು ಏನು ಹೇಳಿದರೂ ಸುಮ್ಮನೆ ಇರಬೇಕೆಂದಲ್ಲ. ತತ್ಕ್ಷಣಕ್ಕೆ ಪ್ರತಿಕ್ರಿಯಿಸಿ ಪರಿಸ್ಥಿತಿಯನ್ನು ಬಿಗಡಾಯಿಸುವುದರ ಬದಲು ಯೋಚಿಸಿ ಪ್ರತಿಕ್ರಿಯಿಸಬಹುದು. ಅದನ್ನು ‘ರೆಸ್ಪಾಂಡಿಂಗ್’ ಎನ್ನುತ್ತೇವೆ.
ಬೆಳಗ್ಗೆ ಕಚೇರಿಗೆ ಹೋಗಲು ತಯಾರಾಗಿರುತ್ತೀರಿ. ಹೊರಡುವಾಗ ನೀರು ತಂದುಕೊಡಲು ಹೇಳುತ್ತೀರಿ. ನಿಮ್ಮ ಹತ್ತಿರ ಬರುವಾಗ ನೀರು ತರುತ್ತಿರುವವರ ಕಾಲು ಮ್ಯಾಟ್ಗೆ ತಾಗಿ ಅವರು ಮುಗ್ಗರಿಸುತ್ತಾರೆ. ನೀರು ನಿಮ್ಮ ಬಟ್ಟೆಯ ಮೇಲೆ ಚೆಲ್ಲುತ್ತದೆ. ಆಗ ನೀವು ಕೂಗಾಡುತ್ತೀರಿ. ಮೂಡ್ ಆಫ್ ಮಾಡಿಕೊಂಡು ಕಚೇರಿಗೆ ಹೋಗುತ್ತೀರಿ. ಅಲ್ಲಿಯೂ ಚಿಕ್ಕಪುಟ್ಟ ವಿಷಯಕ್ಕೆ ಬೇರೆಯವರ ಮೇಲೆ ಸಿಡುಕುತ್ತೀರಿ. ಬೆಳಗಿನ ಘಟನೆ ಮನೆಯಲ್ಲೂ ಕಚೇರಿಯಲ್ಲೂ ಸಂಬಂಧಗಳ ಮೇಲೆ ನೆಗೆಟಿವ್ ಪ್ರಭಾವ ಬೀರುತ್ತದೆ. ಪದೇಪದೇ ಇಂತಹ ಬೇರೆಬೇರೆ ಸಂಗತಿಗಳು ನಡೆಯುತ್ತಿದ್ದರೆ ಕೋಪಿಷ್ಟ ಎನ್ನುವ ಬಿರುದೂ, ಬಿಪಿಯಂತಹ ಕಾಯಿಲೆಗಳೂ ಗ್ಯಾರಂಟಿ. ಅದೇ ನೀರು ಚೆಲ್ಲಿದಾಗ ಎರಡು ಸೆಕೆಂಡ್ ತಡೆದರೆ, ಅವರು ಬೇಕಂತಲೇ ಮಾಡಿದ್ದಲ್ಲ ಎಂದು ನಿಮಗೆ ಗೊತ್ತಾಗುತ್ತದೆ. ಆಗ ನೀವು ‘ಸದ್ಯ ನಿಮಗೆ ಪೆಟ್ಟಾಗಲಿಲ್ಲವಲ್ಲ’ ಎಂದು ಹೇಳಿ ಬಟ್ಟೆ ಬದಲಾಯಿಸಿ ಹೊರಡುತ್ತೀರಿ. ಕಚೇರಿಯಲ್ಲೂ ಅಕಾಸ್ಮಾತ್ ಏನಾದರೂ ಅಹಿತಕರ ಘಟನೆ ನಡೆದರೂ ನಿಮ್ಮ ಸ್ವಭಾವ ಅದನ್ನು ದೊಡ್ಡದಾಗಲು ಬಿಡುವುದಿಲ್ಲ. ಮನೆ, ಕಚೇರಿ ಎರಡೂ ಕಡೆ ನಿಮ್ಮ ಸಂಬಂಧ ಚೆನ್ನಾಗಿರುತ್ತದೆ. ಮತ್ತು ನೀರು ಚೆಲ್ಲಿದವರಿಗೆ ನಿಮ್ಮ ಮೇಲೆ ಎಷ್ಟು ಗೌರವ ಹೆಚ್ಚಾಗಿರುತ್ತದೆ ಎಂದರೆ ಅದನ್ನು ಅವರು ಶಬ್ದಗಳಲ್ಲಿ ವರ್ಣಿಸಲಾರರು. ಸರಿ, ನಿಮ್ಮದು ಯಾವ ದಾರಿ? ಮೊದಲನೆಯದಾ ಅಥವಾ ಎರಡನೆಯದಾ? ಎರಡನೆಯದೇ ಎಂದು ಈಗ ಹೇಳುತ್ತೀರಾದರೂ ನಮ್ಮಲ್ಲಿ ಮೊದಲನೆಯದನ್ನೇ ಮಾಡುವವರು ಶೇ.90 ಮಂದಿ! ನಿಧಾನವಾಗಿ ರೆಸ್ಪಾಂಡ್ ಮಾಡುವ ಈ ಕೆಲಸ ಉಪದೇಶ ಮಾಡಿದಷ್ಟು, ಲೇಖನ ಬರೆದಷ್ಟು ಸುಲಭವಲ್ಲ. ದಿನದಿನವೂ ಪ್ರಜ್ಞಾಪೂರ್ವಕವಾಗಿ ರೂಢಿ ಮಾಡಿಕೊಳ್ಳಬೇಕಾಗುತ್ತದೆ. ಇವತ್ತಿನಿಂದಲೇ ಶುರುವಾಗಲಿ ನಮ್ಮ ಪ್ರಯತ್ನ. ಆಗಬಹುದಲ್ಲ?…
ಮೂಲ : ವಾಟ್ಸಪ್