ಹಿರೇಮಗಳೂರು ಕಣ್ಣನ್ ಒ೦ದು ಸಮಾರ೦ಭದಲ್ಲಿ ತಿಳಿಸಿದ್ದು ಹೀಗೆ
ಗಂಡ ಹೆಂಡತಿ ಎಷ್ಟೇ ವಯಸ್ಸಾದರೂ ಅವರ ಪ್ರೀತಿ ಬೆಳೆಯುತ್ತಲೇ ಹೋಗುತ್ತದೆ !
ಎಂಭತ್ತು ವರುಷದ ಮುದುಕಿ ತೊಂಭತ್ತರ ಗಂಡನಿಗೆ ಹೇಳುತ್ತಾಳೆ :
” ಈ ದಾಂಪತ್ಯಯಾನದಲಿ
ಎನ್ನ ಕೈ ಪಿಡಿದವರು
ಹಿಡಿದ ಕೈ ಬಿಡದವರು
ನೀವಲ್ಲವೇ ನನ್ನ ದೊರೆ ನೀವಲ್ಲವೇ !
ಹಬ್ಬಗಳು ಬಂದಾಗ
ಹೊಸಪಂಚೆ ನಿಮಗಿರಲಿ, ಇರದಿರಲಿ
ನಾ ಹಳೆ ಸೀರೆ ಉಟ್ಟಾಗ
ಬಿಟ್ಟುಬಿಡು ಎಂದವರು
ಸಾಕುಬಿಡು ಎಂದವರು
ಹೊಸಸೀರೆ ಕೊಟ್ಟವರು,
ಮಲ್ಲಿಗೆಯನಿತ್ತವರು,
ನೀವಲ್ಲವೇ ನನ್ನ ದೊರೆ ನೀವಲ್ಲವೇ ?
ಮತ್ತೆ ನಾ ತವರೂರು ಹೊರಟಾಗ
ಬಾಗಿಲಬಳಿ ಬಂದವರು
ಬೇಗ ಬಾ ಎಂದವರು
ನೀವಲ್ಲವೇ ನನ್ನ ದೊರೆ ನೀವಲ್ಲವೇ
ಮತ್ತೆ ಫೋನುಗಳ ಮಾಡುತ್ತ ,
ಮನೆಯೊಳಗೆ ನೀನಿಲ್ಲ
ಬಳೆಗಳ ಸದ್ದಿಲ್ಲ , ಬಾಯಿಗೆ ರುಚಿಯಿಲ್ಲ
ಬೇಗನೆ ಬರುವೆಯಲ್ಲ ಎಂದವರು
ನೀವಲ್ಲವೇ, ನನ್ನ ದೊರೆ ನೀವಲ್ಲವೇ ? ”
ಅದಕ್ಕೆ ಗಂಡ ಹೇಳ್ತಾನೆ !
” ಬೇರಿಲ್ಲದೆ ಮರವೆಲ್ಲಿದೆ
ಮರವಿಲ್ಲದೆ ಹೂವೆಲ್ಲಿದೆ
ಹೂವಿಲ್ಲದೆ ಹಣ್ಣೆಲ್ಲಿದೆ
ನೀನಿಲ್ಲದ ಮನೆ ಯಾರಿಗೆ ಬೇಕಾಗಿದೆ ?
ಎಂತಹ ಹೃದಯಸ್ಪರ್ಶಿ ಮಾತು !….
” ಮನೆಯೊಳಗೆ ಬಂದವಳೇ ,
ಮನೆಯಾಕೆ ಆದವಳೇ,
ಮನದೊಳಗೆ ನಿಂದವಳೇ,
ನೀನಲ್ಲವೇ ನನ್ನರಸಿ ನೀನಲ್ಲವೇ ?
ಬಡತನವೊ ,ಸಿರಿತನವೊ ,
ಕಷ್ಟನಷ್ಟಗಳಲಿ ಎನ್ನ ಜೊತೆ ಬಂದವಳು !
ಜೊತೆಯಾಗಿ ನಿಂದವಳು
ನೀನಲ್ಲವೇ ನನ್ನರಸಿ ನೀನಲ್ಲವೇ ! ”
ಮತ್ತೆ ಕೊನೆಗೆ ಆ ಮುದುಕ ಒಂದು ಮಾತು ಹೇಳುತ್ತಾನೆ !
” ವೃದ್ಧಾಪ್ಯ ಬಂದಾಗ
ಆರೋಗ್ಯ ಹೋದಾಗ ,
ಆದಾಯ ಇರದಾಗ ,
ಹಣವೆಲ್ಲ ಸವೆದಾಗ ,
ಬಂಧುಗಳು ಬರದಾಗ ,
ಮಕ್ಕಳು ಮರೆತಾಗ ,
ನಾ ಒಳಗೊಳಗೆ ಅತ್ತಾಗ ,
ಬಳಿ ಬಂದು ನಿಂದವಳು ,
ಮರುಗದಿರಿ ಅಂದವಳು ,
ಕಣ್ಣೀರ ತಡೆದವಳು ,
ಯಾರಿರಲಿ, ಇರದಿರಲಿ ,
ನಾನಿಲ್ಲವೇ ನಿಮ್ಮ ಜೊತೆ , ಎಂದವಳು ,
ನೀನಲ್ಲವೇ ನನ್ನರಸಿ ನೀನಲ್ಲವೇ !
ಇದು ನಮ್ಮ ಭಾರತೀಯ ಸಂಸ್ಕೃತಿ !