ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕಟೀಲು ಸೀತಾರಾಮ ಕುಮಾರರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ

🌹 ಕಟೀಲು ಸೀತಾರಾಮ ಕುಮಾರರಿಗೆ  ಕರ್ನಾಟಕ ರಾಜ್ಯ ಪ್ರಶಸ್ತಿ . 🌹

       ಯಕ್ಷರಂಗದ ತೆಂಕು – ಬಡಗು ಉಭಯತಿಟ್ಟುಗಳ ಸುಪ್ರಸಿಧ್ಧ ಹಾಸ್ಯ ಕಲಾವಿದ , ಪ್ರಸ್ತುತ ಹಲವಾರು ವರ್ಷಗಳಿಂದ ಹೊಸನಗರ , ಹನುಮಗಿರಿ ಮೇಳದ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ  ಶ್ರೀ ಸೀತಾರಾಮ ಕುಮಾರ್ ಕಟೀಲು ರವರಿಗೆ  ” ಕರ್ನಾಟಕ ರಾಜ್ಯ ಪ್ರಶಸ್ತಿ ”   ಲಭಿಸಿದೆ .ಇದೊಂದು ಅರ್ಹ ಆಯ್ಕೆಯೂ ಹೌದು . ರೂ  ಒಂದು ಲಕ್ಷ  ನಗದು , ಪದಕ , ಫಲಕಗಳನ್ನೊಳಗೊಂಡ
” ಕರ್ನಾಟಕ ರಾಜ್ಯ ಪ್ರಶಸ್ತಿ ” ಯು ಸರಕಾರೀ ಮಟ್ಟದಲ್ಲಿ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾಗಿದೆ . ಸೀತಾರಾಮ್ ರೊಂದಿಗೆ  ಹಿರಿಯ ಯಕ್ಷಗಾನ ಕಲಾವಿದರಾದ ಹಿರಿಯಡ್ಕ ಗೋಪಾಲ್ ರಾವ್ ರವರಿಗೂ ಈ ವರ್ಷದ  ರಾಜ್ಯ ಪ್ರಶಸ್ತಿ ಒಲಿದಿದೆ .ನಾಳೆ ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಪ್ರಶಸ್ತಿ ಪ್ರದಾನ ಆಗಲಿದೆ‌. 63  ವರ್ಷ ಪ್ರಾಯದ ಸೀತಾರಾಮರು 4 ದಶಕಗಳಿಗೂ ಅಧಿಕ ಕಾಲದ  ಯಕ್ಷಗಾನ ತಿರುಗಾಟದ ಅನುಭವ ಹೊಂದಿದ್ದಾರೆ  . ತಮ್ಮ ಪ್ರತಿಭೆಯಿಂದಲೇ
” ಕರ್ನಾಟಕ ರಾಜ್ಯ ಪ್ರಶಸ್ತಿ ” ಗೆ ಆಯ್ಕೆ ಆಗಿರುವ ಸೀತಾರಾಮ ಕುಮಾರ್ ಕಟೀಲು ರವರಿಗೆ ಶುಭಾಶಯ ಕೋರುತ್ತೇನೆ .

        ರಂಗದಲ್ಲಿ ಪಾದರಸದಂತೆ ಚುರುಕಾಗಿ ನಟಿಸುವ ಈ ವಾಮನ ಯಕ್ಷರಂಗದಲ್ಲಿ ತ್ರಿವಿಕ್ರಮನಂತೆ ಬೆಳೆದವರು . ಯಕ್ಷರಂಗದ  ” ಚಾರ್ಲೀ ಚಾಪ್ಲೀನ್ ” ಎಂಬ ಬಿರುದನ್ನು ಪಡೆದು ಹಾಸ್ಯದಲ್ಲಿ ಸೃಜನಶೀಲತೆಯ ಸೃಷ್ಟಿಗೆ ಕಾರಣನಾಗಿ ಸದಾ ಹೊಸತನ್ನು ಆನ್ವೇಷಿಸುತ್ತಾ  ಹಾಸ್ಯದಲ್ಲಿ  ತನ್ನದೇ ಛಾಪನ್ನು  ಮೂಡಿಸಿದ  ಸೀತಾರಾಮರ ಅಭಿಮಾನಿ ಬಳಗ ಅಪಾರ. ಸೀತಾರಾಮರ ಪ್ರವೇಶವಾದಾಗ ಚಪ್ಪಾಳೆಯ ಸುರಿಮಳೆ ಅವರ ಜನಪ್ರಿಯತೆಗೆ ಸಾಕ್ಷಿ . ವಿಜಯ , ಮಕರಂದ, ಶ್ರೀನಿವಾಸನ ಸಖ, ಪೌಂಡ್ರಕನ ಚಾರ, ಮಾಲಿನಿದೂತ , ರುಕ್ಮಿಣಿಯ ಗುರು , ನಕ್ಷತ್ರಿಕ ,  ನಂದಿಶೆಟ್ಟಿ , ಕಾಶಿಮಾಣಿ , ವೃಧ್ಧಬ್ರಾಹ್ಮಣ , ಮಂತ್ರವಾದಿ , ರಾಕ್ಷಸ ದೂತ , ಅರಬ್ ಕುದುರೆ ವ್ಯಾಪಾರಿ ಮುಂತಾದ ಪಾತ್ರಗಳಲ್ಲಿ ಸೀತಾರಾಮರದು ಹೊಸತನದ ಹಾಸ್ಯ . ಬಣ್ಣಗಾರಿಕೆ , ಸಂಭಾಷಣೆ , ವಾದ ಸಂವಾದಗಳಲ್ಲಿ  ತೋರುವ ಪ್ರತ್ಯುತ್ಪನ್ನಮತಿ , ಸೃಜನಶೀಲತೆಯ ಶುಧ್ಧ ಹಾಸ್ಯ ಸೀತಾರಾಮರನ್ನು ಶ್ರೇಷ್ಟ ಹಾಸ್ಯಗಾರರೆಂದು ಎತ್ತರಕ್ಕೇರಿಸಿದ ಅಂಶಗಳು . ಹಾಸ್ಯ ಪಾತ್ರವನ್ನು ಪ್ರಧಾನ ಪಾತ್ರವನ್ನಾಗಿ ಚಿತ್ರಿಸಿದ ಹಿರಿಮೆ ಸೀತಾರಾಮರದು.
10.10.1955 ರಲ್ಲಿ ಶ್ರೀನಿವಾಸ — ಕಲ್ಯಾಣಿ ದಂಪತಿಗಳ ಸುಪುತ್ರರಾಗಿ ಜನಿಸಿದ ಸೀತಾರಾಮರದು  ಬಡತನದ  ಕುಟುಂಬ. ಯಕ್ಷಗಾನದ ಅತೀವ ಹಂಬಲ ಹೊಂದಿ ಬಾಲ್ಯದಲ್ಲೇ ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಳನ್ನು ನೋಡಿಯೇ ಕಲಿತರು .
” ಏಕಲವ್ಯ ” ನಂತೆ ಗುರುವಿಲ್ಲದೆಯೇ ಯಕ್ಷಗಾನ ಕಲಾವಿದರಾದರು. ಮುಂದಕ್ಕೆ ಉದ್ಯೋಗ ಅರಸಿ ಮುಂಬೈಯತ್ತ ಮುಖ ಹೊರಳಿಸಿದರು . ಮುಂಬೈಯಲ್ಲಿ ದುಡಿಯುತ್ತಾ , ಅಲ್ಲಿಯ ಸಂಘಸಂಸ್ಥೆಗಳಲ್ಲಿ ಯಕ್ಷಗಾನದಲ್ಲಿ ಪಾತ್ರ ಮಾಡತೊಡಗಿದರು. ಮುಂಬೈಯಲ್ಲಿದ್ದ ಸೀತಾರಾಮರನ್ನು ಯಕ್ಷಗಾನ ಮೇಳಕ್ಕೆ ತಂದದ್ದು ದಿ. ಸಿಧ್ಧಕಟ್ಟೆ ಚೆನ್ನಪ್ಪ ಶೆಟ್ಟರು . ಚೆನ್ನಪ್ಪ  ಶೆಟ್ಟರು ಒಮ್ಮೆ  ಮುಂಬೈಯಲ್ಲಿ ಸೀತಾರಾಮರ ವೇಷ ನೋಡಿ ಅವರನ್ನು ತಾನು ತಿರುಗಾಟ ನಡೆಸುತ್ತಿದ್ದ ಕದ್ರಿ ಮೇಳಕ್ಕೆ  ಸೇರಿಸಿದರು. ಸೀತಾರಾಮರು ಮೂಲತಃ ಪುಂಡುವೇಷಧಾರಿಯಾದ ಕಾರಣ ಕದ್ರಿ ಮೇಳದಲ್ಲಿ ಪುಂಡುವೇಷಗಳನ್ನೇ ನಿರ್ವಹಿಸುತ್ತಿದ್ದರು . ಹಾಸ್ಯಗಾರರಾಗಲು ಪ್ರೇರೇಪಿಸಿದವರು ಮಲ್ಪೆ  ವಾಸುದೇವ ಸಾಮಗರು . ಆ ವರ್ಷದ ಕದ್ರಿ ಮೇಳದ
” ಮದ್ರೆಂಗಿ ಮದ್ಮಲ್ ” ತುಳುಪ್ರಸಂಗ . ಸುಪ್ರಸಿಧ್ಧ  ಕಲಾವಿದರಾದ  ವಾಸುದೇವ ಸಾಮಗರ ಉಪ್ಪಣ್ಣ ದೀಕ್ಷಿತರ ಪಾತ್ರ . ಅವರ ಮಗ ಹೆಡ್ಡ ಸ್ವಭಾವದ  ಜನ್ನಮಾಣಿ  ಎಂಬ ಹಾಸ್ಯ ಪಾತ್ರಕ್ಕೆ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ , ಬೇಕೂರು ಕೇಶವ , ಬಜಾಲ್ ಜನಾರ್ಧನ ಮುಂತಾದವರನ್ನು ಬದಲಿಸಿ ಆ ಪಾತ್ರಕ್ಕೆ ಹಾಕಿದರೂ ನಿರೀಕ್ಷೆಯ ಮಟ್ಟಕ್ಕೆ ಬರಲಿಲ್ಲ . ಕೊನೆಗೆ ಸಾಮಗರು ಸೀತರಾಮರಲ್ಲಿರುವ ಹಾಸ್ಯಪ್ರಜ್ಞೆಯನ್ನು ಗುರುತಿಸಿ
” ಸೀತಾರಾಮರಿಂದಲೇ ಮಾಡಿಸುವಾ ” ಅಂದರು. ಸಾಮಗರ ನಿರೀಕ್ಷೆ ಹುಸಿಯಾಗಲಿಲ್ಲ . ಸೀತಾರಾಮರು ಹೆಡ್ಡನಾಗಿ  ಸಹಜ ಅಭಿನಯ , ಮಾತುಗಾರಿಕೆಯಿಂದ ಜನ್ನಮಾಣಿ ಯಶಸ್ವಿಯಾಯಿತು . ಆ ವರ್ಷವಿಡೀ ಜನ್ನಮಾಣಿ ಪಾತ್ರವು ಸೀತಾರಾಮರಿಗೇ ಮೀಸಲಾಯಿತು . ಮುಂದಿನ ವರ್ಷ ಡಿ.ಮನೋಹರ್ ಕುಮಾರರ  ” ಗೆಜ್ಜೆದ ಪೂಜೆ ” ತುಳು ಪ್ರಸಂಗ .ಅದರಲ್ಲಿ ಬರುವ ಕುಡುಕ ಕಾಳು ಪಾತ್ರದಲ್ಲಿ ಸೀತಾರಾಮರ ಹಾಸ್ಯ ಪ್ರಜ್ಞೆ ಪ್ರಕಟಗೊಂಡಿತು. ಉತ್ತಮ ಸಂಭಾಷಣೆ , ನಟನೆಯಿಂದ ಕಾಳು ಪಾತ್ರ ಪ್ರೇಕ್ಷಕರನ್ನು ರಂಜಿಸಿತು . ನಂತರ ಹಾಸ್ಯ ಪಾತ್ರಗಳಲ್ಲೇ ಮಿಂಚಿ ,  ಮುಂದೆ ಕಾಲಾನುಕ್ರಮದಲ್ಲಿ   ಮೇಳದ ಪ್ರಧಾನ ಹಾಸ್ಯಗಾರರಾದರು . ತೆಂಕು ತಿಟ್ಟಿನಲ್ಲಿ ಮಿಂಚಿದ ಸೀತಾರಾಮರ ಕಲಾ ಬದುಕಿನ ಎರಡನೇ ಅಧ್ಯಾಯ ಬಡಗು ತಿಟ್ಟನ್ನು ಸೇರಲು ಪ್ರೇರೇಪಿಸಿತು .ಬಡಗು ತಿಟ್ಟನ್ನು ಸೇರಲೂ ಚೆನ್ನಪ್ಪ ಶೆಟ್ಟರೇ ಕಾರಣರಾದುದು ಯೋಗಾಯೋಗ ಅನ್ನಬಹುದು . ಶೆಟ್ಟರು ಆ ವರ್ಷ ಬಡಗು ತಿಟ್ಟಿನ ಪೆರ್ಡೂರು ಮೇಳದ ತಿರುಗಾಟದಲ್ಲಿದ್ದರು .ಪೆರ್ಡೂರು ಮೇಳಕ್ಕೆ ಒಬ್ಬ ಹಾಸ್ಯಗಾರರ ಅವಶ್ಯಕತೆ ಬಂತು . ಮೇಳದ ಯಜಮಾನರಾದ ಕರುಣಾಕರ ಶೆಟ್ಟರು , ಚೆನ್ನಪ್ಪ ಶೆಟ್ಟರಲ್ಲಿ ” ನಮಗೆ ಕನ್ನಡ ಚೆನ್ನಾಗಿ ಬಲ್ಲ ಹಾಸ್ಯಗಾರರು ಬೇಕು . ಯಾರಾದೀತು ? ” ಎಂದು ಕೇಳಿದಾಗ ಚೆನ್ನಪ್ಪ ಶೆಟ್ಟರಿಗೆ ಹೊಳೆದದ್ದು ಸೀತಾರಾಮರ ಹೆಸರು . ಅಂತೆಯೇ ಚೆನ್ನಪ್ಪ ಶೆಟ್ಟರ ಮುತುವರ್ಜಿಯಿಂದ ಸೀತಾರಾಮರು  ಪೆರ್ಡೂರು ಮೇಳ ಸೇರಿದರು .ಹೀಗೆ ತೆಂಕು – ಬಡಗು ಎರಡೂ ತಿಟ್ಟುಗಳ ಪ್ರವೇಶಕ್ಕೆ ಚೆನ್ನಪ್ಪ ಶೆಟ್ಟರೇ ಪ್ರೇರಕರಾದರು .ಚೆನ್ನಪ್ಪ ಶೆಟ್ಟರನ್ನು ಸೀತಾರಾಮರು ಗುರುಭಾವದಿಂದ ಕಾಣುತ್ತಿದ್ದರು . ಅವರ ಸೇವೆಯನ್ನೂ ಮಾಡುತ್ತಿದ್ದರು . ಚೆನ್ನಪ್ಪಶೆಟ್ಟರಲ್ಲೇ ಅರ್ಥಗಾರಿಕೆ , ಸಾಹಿತ್ಯ ಅಭ್ಯಾಸ ಮಾಡಿದರು. ಸೀತಾರಾಮರು ” ಏಕಪಾಠಿ ” ಗಳಾದ ಕಾರಣ ಚೆನ್ನಪ್ಪ ಶೆಟ್ಟರು ಕಲಿಸಿ ಕೊಟ್ಟ ಸಂಸ್ಕ್ರತ ಶ್ಲೋಕ , ಪ್ರಕೃತಿವರ್ಣನೆ , ಸೌಂದರ್ಯ ವರ್ಣನೆ , ಸಂವಾದ ಬೆಳೆಸುವ ವಿಧಾನ ಎಲ್ಲವನ್ನೂ ಕರಗತ ಮಾಡಿಕೊಂಡರು . ” ನನ್ನ ಸಾಹಿತ್ಯವನ್ನು ತಿದ್ದಿ ತೀಡಿ ಸಮಪಾಕಗೊಳಿಸಿದವರು ಚೆನ್ನಪ್ಪ ಶೆಟ್ಟರೇ ” ಎಂದು ಅಭಿಮಾನದಿಂದ ನುಡಿಯುವ ಸೀತಾರಾಮರಿಗೆ  ಶೆಟ್ಟರನ್ನು ಕಳಕೊಂಡ ನೋವನ್ನು ಇಂದಿಗೂ ಮರೆಯಲಾಗುತ್ತಿಲ್ಲ. ಶೆಟ್ಟರ ವಿಷಯ ಬಂದಾಗ ಸೀತಾರಾಮರ ಕಣ್ಣಲ್ಲಿ ಇಂದಿಗೂ ಕಣ್ಣೀರು ಬಂದು ವಿಷಣ್ಣವದನರಾಗುವುದನ್ನು ನಾನು ಎಷ್ಟೋ ಸಲ ಕಂಡಿದ್ದೇನೆ. ಹಿರಿಯ , ಕಿರಿಯ ಕಲಾವಿದರೊಂದಿಗೆ ಸ್ನೇಹಿಯಾಗಿಯೇ ವರ್ತಿಸುವ ಸೀತಾರಾಮರು , ತಾವೇ ಕಷ್ಟದಲ್ಲಿದ್ದಾಗಲೂ ಬೇರೆಯವರ ಕಷ್ಟಕ್ಕೆ ಸ್ಪಂದಿಸಿದ ಎಷ್ಟೋ ಉದಾಹರಣೆಗಳಿವೆ . ರಂಗ ಪ್ರವೇಶಿಸುವ ಮೊದಲು ವಿಟ್ಲ ಜೋಷಿ , ಪೆರೋಡಿ , ಮಿಜಾರು ಅಣ್ಣಪ್ಪ ಹಾಗೂ ಬೆಟ್ಟಂಪಾಡಿ ಹಾಸ್ಯಗಾರರನ್ನು ಮನಸ್ಸಿನಲ್ಲೇ ಸ್ಮರಿಸುವ ಸೀತಾರಾಮರು ಯಾವುದೇ ಹಾಸ್ಯಗಾರರನ್ನು ಅನುಕರಿಸದೇ , ತಮ್ಮ ಸ್ವಂತಿಕೆಯನ್ನು ಹಾಸ್ಯರಂಗಕ್ಕೆ ತಂದವರು . ಉತ್ತಮ ಸಾಹಿತ್ಯ ವನ್ನು ಅಭ್ಯಸಿಸಿ ತನ್ನ ಪಾತ್ರಗಳಿಗೆ ಅಳವಡಿಸುವಲ್ಲಿ ಸೀತಾರಾಮರು ಸಿಧ್ಧಹಸ್ತರು . ನಿರರ್ಗಳವಾಗಿ ಶ್ಲೋಕ , ವರ್ಣನೆ, ಹೊಗಳಿಕೆ ಯನ್ನು ಹೇಳುವಲ್ಲಿ ಸೀತಾರಾಮರ ವಿದ್ವತ್ತನ್ನು ಗಮನಿಸಬಹುದು. ಹೊಸನಗರ ಮೇಳದವರ ” ಮಹರ್ಷಿ ಅಗಸ್ತ್ಯ ” ಪ್ರಸಂಗದಲ್ಲಿ ಸೀತಾರಾಮರ ಮಂತ್ರವಾದಿಯ ಪಾತ್ರ . ಅಗಸ್ತ್ಯರಿಗೆ ವಾಮಾಚಾರ ಮಾಡಲು ವಾತಾಪಿ ಇಲ್ವಲರು ಮಂತ್ರವಾದಿಯ ಬಳಿ ಹೋಗುವ ಸನ್ನಿವೇಶ. ಸೀತಾರಾಮರು ಇದಕ್ಕೆ ಬೇಕಾದ ಸಾಮಾಗ್ರಿಯ ವಿವರಗಳನ್ನು  ಪುಂಖಾನುಪುಂಖವಾಗಿ ಹೇಳುವಾಗ ಸಭೆ ಬೆರಗಾಗಿ ನಗುತ್ತಿತ್ತು. ಸುಮಾರು 300 ಕ್ಕೂ ಅಧಿಕ ಸಾಮಾಗ್ರಿಗಳ ಹೆಸರನ್ನು ಓತಪ್ರೋತವಾಗಿ ಹೇಳುತ್ತಿದ್ದಾಗ ಪ್ರೇಕ್ಷಕರು ಮೆಚ್ಚಿ  ಚಪ್ಪಾಳೆ ತಟ್ಟುತ್ತಿದ್ದರು  . ಆದರೆ ಈ ವಿವರಗಳು ಕೇವಲ ಹಾಸ್ಯಕ್ಕಾಗಿ ಹೇಳಿದ್ದಲ್ಲ ವಾಮಾಚಾರ ಗ್ರಂಥಗಳಲ್ಲೇ  ಈ  ಬಗ್ಗೆ ಉಲ್ಲೇಖಿಸಲ್ಪಟ್ಟಿವೆ ಎಂದು ಚೆನ್ನಪ್ಪ ಶೆಟ್ಟರು ನನ್ನಲ್ಲಿ  ತಿಳಿಸಿದ್ದರು. ಶ್ರೀಕೃಷ್ಣನನ್ನು ಸ್ತುತಿಸುವಾಗ ಪಟಪಟನೇ ನೂರಕ್ಕೂ ಹೆಚ್ಚು ಹೆಸರನ್ನು ಹೇಳುವುದು, ಪ್ರಕೃತಿಯನ್ನು ವರ್ಣಿಸುವ ಶ್ಲೋಕ , ಅರಸನಿಗೆ ಬಹುಪರಾಕು ಹೇಳುವ ಬಿರುದುಬಾವಲಿಗಳು ಸೀತಾರಾಮರ ಅರ್ಥಗಾರಿಕೆಯ ಮೆರುಗನ್ನು ಹೆಚ್ಚಿಸಿವೆ. ಸುಮಾರು 28 ವರ್ಷಗಳ ಹಿಂದೆ ಸೀತಾರಾಮರು ಬಡಗು ಮೇಳಕ್ಕೆ ಸೇರಿದ ಪ್ರಾರಂಭದಲ್ಲೇ ಆ ಮೇಳ ಬೆಂಗಳೂರಿಗೆ ತಿರುಗಾಟಕ್ಕೆ  ಹೋಯಿತು. ಬೆಂಗಳೂರಿನಲ್ಲಿ ಆ ಕಾಲದಲ್ಲಿ , ಬಡಗಿಗಿದ್ದಷ್ಟು ಬೇಡಿಕೆ ತೆಂಕಿಗೆ ಇರಲಿಲ್ಲ . ಬಡಗಿನ  ಕಲಾವಿದರಿಗೆ  ಸಂಮಾನ , ನೋಟಿನ ಹಾರ ಎಲ್ಲಾ ದೊರಕುತಿದ್ದ  ಕಾಲವದು. ಆದರೆ ಸೀತಾರಾಮರು ತೆಂಕಿನವರಾದರೂ ಅವರ ಪಾತ್ರ ಕಂಡು ನೋಟಿನ ಹಾರ ಬೀಳತೊಡಗಿದಾಗ ಎಲ್ಲರಿಗೂ ಆಶ್ಚರ್ಯ. ತೆಂಕು ಹಾಸ್ಯ ಕಲಾವಿದರಿಗೆ ಬೆಂಗಳೂರಿನಲ್ಲಿ ನೋಟಿನ ಹಾರ ಹಾಕಿದ ಮೊದಲ ಪ್ರಕರಣವಿದು . ಬಡಗಿನಲ್ಲಿ ಹಲವಾರು ವರ್ಷಗಳ ತಿರುಗಾಟ ನಡೆಸಿದ ಸೀತಾರಾಮರು ಇದೀಗ ಸುಮಾರು 13  ವರ್ಷಗಳಿಂದ ತೆಂಕಿನ ಹೊಸನಗರ , ಪ್ರಸ್ತುತ ಹನುಮಗಿರಿ  ಮೇಳದಲ್ಲಿ ಇನ್ನೋರ್ವ ಸುಪ್ರಸಿದ್ಧ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯರೊಂದಿಗೆ  ಪ್ರಧಾನ ಹಾಸ್ಯಗಾರರಲ್ಲೊಬ್ಬರಾಗಿದ್ದಾರೆ . ಗಲ್ಲಾ ಪೆಟ್ಟಿಗೆಯ ಧೃಷ್ಟಿಯಿಂದ ಪ್ರಮುಖ ಕಲಾವಿದರಾದ ಕಾರಣ ಇತರ ಮೇಳಗಳಲ್ಲೂ ಅತಿಥಿ ಕಲಾವಿದರಾಗಿ ಬೇಡಿಕೆ ಉಳಿಸಿಕೊಂಡಿದ್ದಾರೆ . ” ಶ್ವೇತಕುಮಾರ ಚರಿತ್ರೆ  ” ಪ್ರಸಂಗದಲ್ಲಿ  ಪ್ರೇತದ ಪಾತ್ರ ಮಾಡಿ ಕಂಬ , ಮರದಲ್ಲಿ ತಲೆಕೆಳಗಾಗಿ ನೇತಾಡುವುದು , ” ಶ್ರೀದೇವೀ ಮಹಾತ್ಮೆ ” ಯ ರಕ್ತೇಶ್ವರಿಯ ಪಾತ್ರಿಯಾಗಿ ಹಲ್ಲಿನಿಂದ ಸಿಯಾಳವನ್ನು ಕಚ್ಚಿ , ತೆಂಗಿನ ಕಾಯಿ ರೂಪಕ್ಕೆ ತಂದು ಕೊನೆಗೆ ತನ್ನ ತಲೆಗೆ ಅಥವಾ ಹಣೆಗೆ ಹೊಡೆದು ಸಿಯಾಳ ಕುಡಿಯುವಂಥಹ  ಸಾಹಸ ನೋಡಲೆಂದೇ ಆ ಪ್ರಸಂಗ ಆಡಿಸುವ ಸೇವಾಕರ್ತರು , ಆ ಸನ್ನಿವೇಶ ನೋಡಲೆಂದೇ ಬರುವ ಪ್ರೇಕ್ಷಕ ವರ್ಗ , ಇವೆಲ್ಲಾ ಸೀತಾರಾಮರ ಜನಪ್ರಿಯತೆಗೆ ಸಾಕ್ಷಿ . ಇವೆಲ್ಲಾ ಅಪಾಯಕಾರಿಯೆಂದು ನಾನೆಷ್ಟೋ ಭಾರಿ ಹೇಳಿದರೂ  ” ಕುಡ್ವರೇ ,  ಈ ದೃಶ್ಯ ನೋಡಲೆಂದೇ ಪ್ರೇಕ್ಷಕರು ಬರುವಾಗ, ನಾನು ಮಾಡದಿದ್ದರೆ , ಕಲೆಗೆ ಅನ್ಯಾಯ ಮಾಡಿದಂತಾಗದೇ ” ಎಂದು ಕಲೆಯ ಮೇಲಿನ ತನ್ನ ಬಧ್ಧತೆಯನ್ನು ವ್ಯಕ್ತಪಡಿಸುತ್ತಾರೆ . ಇಂಥಹ ಅಪೂರ್ವ ಕಲಾವಿದರು ಸೀತಾರಾಮ ಕುಮಾರ್ .
ತಮ್ಮ ಪಾತ್ರಗಳ ಕುರಿತು ಯೋಚಿಸಿ, ಯೋಜಿಸಿ  ಆ ಪಾತ್ರಕ್ಕೆ  ಚಿತ್ರಣ  ಕೊಡುವುದು ಸೀತಾರಾಮರ ವೈಶಿಷ್ಟ್ಯ . ತಮ್ಮ ಪಾತ್ರಗಳ ಬಗ್ಗೆ ಉದಾಸೀನ, ಆಲಸ್ಯ ತೋರುವವರೇ ಅಲ್ಲ . ಈ ಕಾರಣಗಳಿಂದ ಸೀತಾರಾಮರು ಪ್ರತ್ಯೇಕವಾಗಿ ಕಾಣಿಸಿಕೊಳ್ಳುತ್ತಾರೆ .48  ವರ್ಷಗಳಿಂದ ಯಕ್ಷರಂಗದ ತಿರುಗಾಟದಲ್ಲಿರುವ ಸೀತಾರಾಮರು ತಾಳಮದ್ದಳೆ ಹಾಗೂ ಶನಿಪೂಜೆಯ ಕೂಟಗಳಲ್ಲೂ ಬೇಡಿಕೆಯ ಕಲಾವಿದರಾಗಿದ್ದಾರೆ . 2016 ರಲ್ಲಿ ತಮ್ಮ 60 ನೇ ವರ್ಷದ  ಹುಟ್ಟುಹಬ್ಬದ  ಆಚರಣೆಯನ್ನು  ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಸಹಕಾರದೊಂದಿಗೆ , ಹನುಮಗಿರಿ  ಮೇಳದ ಮಹಾಪೋಷಕರಾದ ಶ್ರೀ ಶಾಮ್ ಭಟ್ ರ ಶುಭಾಶೀರ್ವಾದದೊಂದಿಗೆ  ” ವಿಶಿಷ್ಟ ಕಾರ್ಯಕ್ರಮ ” ದ ಮೂಲಕ ಆಚರಿಸಿ ತಮ್ಮ 60  ವರ್ಷಗಳ ಜೀವನದಲ್ಲಿ ತನ್ನ ಉನ್ನತಿಗೆ ಕಾರಣರಾದ , ತಮ್ಮ ಮಡದಿಗೆ 5  ಬಾರಿ ಮೆದುಳಿನ ಶಸ್ತ್ರಕ್ರಿಯೆಯಾದ ಸಂದರ್ಭದಲ್ಲಿ ನೆರವಾದ , ಮನೆಕಟ್ಟುವಾಗ ಸಹಕರಿಸಿದ , ತನ್ನ ಕಷ್ಟಕಾಲದಲ್ಲಿ ಹೆಗಲೆಣೆಯಾದ
” 60  ಆಢ್ಯ ಮಹನೀಯರನ್ನು ” ಗುರುತಿಸಿ ಗಣ್ಯರ ಸಮಕ್ಷದಲ್ಲಿ ಸಂಮಾನ , ಗೌರವಾರ್ಪಣೆ ಹಾಗೂ ಅಭಿನಂದಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದುದು ಸದಾ ನೆನಪಲ್ಲಿ ಉಳಿಯುವಂಥಹದು ( ಆ 60 ಜನರಲ್ಲಿ ನಾನೂ ಓರ್ವನಾಗಿದ್ದೆ ) . ಸಂಮಾನ ಪಡೆಯಬೇಕಾದ ಕಲಾವಿದರೋರ್ವರು, ಇತರರನ್ನು ಸಂಮಾನಿಸುವ ಅಪರೂಪದ ಕಾರ್ಯಕ್ರಮ ಇದಾಗಿತ್ತು .ಕರ್ನಾಟಕ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿರುವ ಈ ಸಂದರ್ಭದಲ್ಲಿ ಸೀತಾರಾಮ ಕುಮಾರ್ ರನ್ನು ಭೇಟಿಯಾದಾಗ ರಾಜ್ಯ ಪ್ರಶಸ್ತಿಗೆ ಆಯ್ಕೆಯಾದುದಕ್ಕೆ ಸಂತಸ ವ್ಯಕ್ತ ಪಡಿಸಿ ,
” ಮೇಳದ ಪೋಷಕರಾದ ಶ್ರೀ ಟಿ.ಶಾಮ್ ಭಟ್ , ಮೂಡಬಿದಿರೆಯ ಮಾಜಿ ಶಾಸಕರು  ಹಾಗೂ ಕರ್ನಾಟಕ ಸರಕಾರದ ಮಾಜಿ ಸಚಿವರಾದ  ಶ್ರೀ ಕೆ.ಅಭಯಚಂದ್ರ , ಗೋಪಾಲಕೃಷ್ಣ  ಬಜ್ಪೆ ಮೊದಲಾದ ಯಕ್ಷಗಾನ ಅಭಿಮಾನಿಗಳ ಸಹಕಾರಕ್ಕೆ ಸದಾ ಋಣಿ ” ಎಂದು ತಿಳಿಸಿದರು . ಕಟೀಲುರವರಿಗೆ ಮಗದೊಮ್ಮೆ ಅಭಿನಂದನೆಗಳು .

  ಕರ್ನಾಟಕ ರಾಜ್ಯದ ರಾಜ್ಯಭಾರ - ಪ್ರಜಾಕೀಯ

       ಎಂ. ಶಾಂತರಾಮ ಕುಡ್ವ

ಮೂಡಬಿದಿರೆ

Leave a Reply

Your email address will not be published. Required fields are marked *

Translate »