ನೆಮ್ಮದಿಯ ಬದುಕಿಗಾಗಿ ಒಂದೆರಡು ಬುದ್ದಿ- ಮಾತು:
ನಿಮಗೆ ಎಲ್ಲರೊಂದಿಗೆ ಸಂಬಂಧಗಳನ್ನು ಸುಮಧುರವಾಗಿ ಉಳಿಸಿಕೊಳ್ಳಬೇಕೆಂಬ ಆಸೆಯಿದೆಯೇ?
- ಒಬ್ಬರ ವಿಚಾರ ಇನ್ನೊಬ್ಬರ ಬಳಿ ಮಾತನಾಡಬೇಡಿ, ಅದರಲ್ಲೂ ನಕಾರಾತ್ಮಕ ಸಂಗತಿಗಳನ್ನು ಅವರ ಅನುಪಸ್ಥಿತಿಯಲ್ಲಿ ಇನ್ನೊಬ್ಬರೊಡನೆ ಚರ್ಚಿಸಲೇಬೇಡಿ.
- ಸಮಸ್ಯೆಗಳಿದ್ದರೆ ನೇರವಾಗಿ ಪ್ರಶ್ನಿಸಿ ಸ್ಪಷ್ಟನೆ ಪಡೆಯಿರಿ, ನಂಬಿಕೆಗೆ ಯೋಗ್ಯರಲ್ಲದವರ ಬಳಿ ಅಸಮಾಧಾನ ತೋಡಿಕೊಳ್ಳಬೇಡಿ.
- ಸ್ನೇಹಿತರ ಬಂಧುಗಳಿಂದ ಅತಿಯಾಗಿ ಏನನ್ನೂ ನಿರೀಕ್ಷಿಸಬೇಡಿ ಹಾಗೂ ಯಾರನ್ನು ಅತಿಯಾಗಿ ಅವಲಂಬಿಸಬೇಡಿ.
- ಹಣಕಾಸಿನ ವ್ಯವಹಾರದ ವಿಚಾರದಲ್ಲಿ ಇಬ್ಬರಿಗೂ ಪಾರದರ್ಶಕತೆಯಿರಲಿ.
- ಮೊದಲು ನಾನೇ ಏಕೆ ಸ್ಪಂದಿಸಬೇಕೆಂಬ ಅಹಂಕಾರ ಇಬ್ಬರಿಗೂ ಬೇಡ.
- ರಾಜಿ ಸಂಧಾನ ಮತ್ತು ಮಾತುಕತೆಗೆ ಸದಾ ಸಿದ್ಧವಾಗಿರಿ.
- ತಂದುಹಾಕುವವರ ಬಗ್ಗೆ ಎಚ್ಚರವಿರಲಿ, ಹೇಳಿದನ್ನೆಲ್ಲಾ ಕೇಳುವ ಹಿತ್ತಾಳೆ ಕಿವಿಯಾಗದಿರಿ, ಸ್ವಂತ ಬುದ್ಧಿ ಇರಲಿ.
- ಎಷ್ಟೇ ಪ್ರೀತಿ ಇದ್ದರೂ ಸ್ನೇಹಿತರಲ್ಲಿ/ ಸಂಬಂಧದಲ್ಲಿ ಉಸಿರುಗಟ್ಟಿಸುವ ಪೊಸೆಸೀವ್ ನೆಸ್ ಬೇಡ.
- ತೀರಾ ಹತ್ತಿರದವರಾದರೂ ಸರಿ ಅವರ ಖಾಸಗಿ ಸಂಗತಿಗಳ ಮೇಲೆ ತೀವ್ರ ನಿಗಾ ಇರಿಸಲು ಹೋಗಬೇಡಿ, ನಿಮ್ಮ ಅತಿಪ್ರೀತಿ ಮತ್ತು ಕಾಳಜಿ ಅವರ ಉಸಿರುಗಟ್ಟಿಸದಿರಲಿ.
- ಗೆಳೆತನ ಅಥವಾ ಸಂಬಂಧ ನಿಮ್ಮನ್ನು ಉನ್ನತಿಗೇರಿಸುತ್ತಿರಲಿ ಬದಲಾಗಿ ಕೆಟ್ಟಚಠ ಅಥವಾ ಕೆಟ್ಟ ಹವ್ಯಾಸಗಳೆಡೆಗೆ ಸೆಳೆಯದಿರಲಿ.
- ಸಮಾನ ಅಭಿರುಚಿಯ ಕೆಲಸಗಳನ್ನು ಹಾಕಿಕೊಳ್ಳಿ ಸಂಬಂಧ ಗಟ್ಟಿಯಾಗಿರುತ್ತದೆ, ಅವರವರ ಕೆಲಸದಲ್ಲಿ ಬ್ಯುಸಿಯಾದಾಗ ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಅದನ್ನು ಗೌರವಿಸಬೇಕು.
- ಪರಸ್ಪರ ಎಷ್ಟೇ ಆತ್ಮೀಯರಾಗಿದ್ದರೂ ಆತ್ಮಗೌರವಕ್ಕೆ ಧಕ್ಕೆ ನೀಡಬೇಡಿ, ಒಂದು ವೇಳೆ ಆ ರೀತಿ ಆಗಿಬಿಟ್ಟರೆ ಮುಲಾಜಿಲ್ಲದೇ ಕ್ಷಮೆ ಕೇಳಿಬಿಡಿ ಮತ್ತು ಕ್ಷಮಿಸಿಬಿಡಿ.
- ಎಷ್ಟೇ ಆತ್ಮೀಯರಾಗಿದ್ದರೂ ಅತಿಯಾದ ಸಲುಗೆ ಎಂದಿಗೂ ಸಲ್ಲದು. ಸಂಬಂಧದಲ್ಲಿ ಒಂದು ಮಿತಿ ರೇಖೆ ಇರಲಿ, ನೀವೂ ಅತಿಯಾದ ಸಲುಗೆ ನೀಡದಿರಿ.
- ಆಗಾಗ ಮುಖತಃ ಭೇಟಿಗೆ ಮಾತುಕತೆಗೆ ಸಿಗುವ ಅವಕಾಶಗಳನ್ನು ಬಳಸಿಕೊಳ್ಳಿ, ಸಂದರ್ಭ ನೋಡಿ ಹೃದಯ ಬಿಚ್ಚಿ ಮಾತನಾಡಿ ಹಗುರವಾಗಿ.
- ಒಬ್ಬರೆದುರುಗಡೆ ಇನ್ನೊಬ್ಬರನ್ನು ಕೀಳಾಗಿ ನೋಡಬೇಡಿ, ಗೆಳೆಯರೆಲ್ಲರನ್ನೂ ಸಮಾನ ಪ್ರೀತಿಯಿಂದಲ್ಲದಿದ್ದರೂ ಸಮಾನ ಗೌರವದಿಂದ ಕಾಣಿ.
- ಸಂಬಂಧಗಳು ಬಹುಪಾಲು ಸಂದರ್ಭದಲ್ಲಿ ಹಾಳಾಗುವುದು ಸ್ವಾರ್ಥದಿಂದ. ಕನಿಷ್ಠ ಬಾಂಧವ್ಯಕ್ಕಾಗಿಯಾದರೂ ಸ್ವಾರ್ಥ ಕಡಿಮೆ ಮಾಡಿಕೊಳ್ಳಿ.
- ಸುಳ್ಳಿನ ಮೇಲೆ ಸಂಬಂಧ ಜೀವಿಸುವುದು ಬೇಡ, ಹಾಗಂತ ಸತ್ಯ ಹರಿಶ್ಚಂದ್ರನ ಅಪರಾವತಾರ ದಂತಾಡುವುದೂ ಒಳಿತೇನಲ್ಲ.
- ಅವರ ಒಪ್ಪಿಗೆ ಇಲ್ಲದೇ ಕೌಟುಂಬಿಕ ವಿಚಾರಗಳಿಗೆ ತಲೆ ಹಾಕಬೇಡಿ, ಹಾಗೆಯೇ ಸಹಾಯ ಸಹಕಾರ ಬಯಸಿದಾಗ ಶಕ್ತ್ಯಾನುಸಾರ ನೀಡಿ.
- ಎಂದಿಗೂ ನಿಮ್ಮ ಸಂಪಾದನೆಯ 1/10 ಭಾಗಕ್ಕಿಂತಾ ಜಾಸ್ತಿ ಯಾರಿಗೂ ಸಾಲ ನೀಡಲು ಹೋಗಬೇಡಿ, ಕನಿಷ್ಠ ಪಕ್ಷ ಅದು ವಾಪಾಸು ಬರದಿದ್ದರೂ ನಿಮ್ಮ ನೆಮ್ಮದಿ ಹಾಳಾಗುವುದಿಲ್ಲ.
- ಇರದಿರುವುದನ್ನು ಇರುವಂತೆ ತೋರಿಸುವುದು ಬೇಡ, ಬಿಲ್ಡಪ್ಪುಗಳು, ಜಂಭ ಕೊಚ್ಚಿಕೊಳ್ಳುವುದರಿಂದ ಸಂಬಂಧ ಹೆಚ್ಚು ದಿನ ಉಳಿಯುವುದಿಲ್ಲ. ನೀವು ಹಾಗೆ ಮಾಡಬೇಡಿ ಮತ್ತು ಹಾಗೆ ಮಾಡುವವರನ್ನೂ ಎಂಟರ್ ಟೇನ್ ಮಾಡಬೇಡಿ. ಬಾಂಧವ್ಯ ಗೆಳೆತನ ವಾಸ್ತವದ ಆಧಾರದ ಮೇಲಿರಲಿ.
- ಗೆಳೆಯರಿಂದ ಸರಿಯಾದ ಫೀಡ್ ಬ್ಯಾಕ್ ಪಡೆದುಕೊಳ್ಳಿ, ಸದಾ ಕಾಲ ಹೊಗಳಿಕೆ ಮೆಚ್ಚುಗೆಯನ್ನೇ ನಿರೀಕ್ಷಿಸಬೇಡಿ. ಸತ್ಯವನ್ನು ಸ್ವೀಕರಿಸುವ ಛಾತಿಯಿರಲಿ.
- ಗೆಳೆಯರ ಮೇಲೆ ಗೂಢಾಚಾರಿಕೆ ಮಾಡಬೇಡಿ, 24 ಗಂಟೆ ಏನು ಮಾಡುತ್ತಿದ್ದಾರೆಂದು ತಿಳಿಯಲೇಬೇಕೆಂಬ ಕ್ಯೂರಿಯಾಸಿಟಿ ಇಲ್ಲದಿರಲಿ.
- ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದ ತಕ್ಷಣ ತುಂಬಾ ಕ್ಲೋಸ್ ಆಗಬೇಡಿ, ಫೇಸ್ ಬುಕ್ ಲಿ ಬಿಲ್ಡಪ್ ಕೊಡಲು ಹೋಗಬೇಡಿ. ಸಂಬಂಧ ಗಟ್ಟಿಯಾಗುವವರೆಗೆ ಕಾಯಿರಿ, ಅತೀ ಬೇಗ ಗಟ್ಟಿಯಾದ ಸಂಬಂಧಗಳು ಅತೀ ಬೇಗ ದೂರವಾಗುವುದು ಇದೇ ಕಾರಣಕ್ಕೆ.
- ಗೆಳೆಯರನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳಬೇಡಿ, ನೀವೂ ಹಾಗೆ ಬಳಕೆಯಾಗಬೇಡಿ. ಇಷ್ಟವಿಲ್ಲದ್ದನ್ನು ನೇರವಾಗಿ ನಯವಾಗಿಯೇ ನಿರಾಕರಿಸಿ, ದಾಕ್ಷಿಣ್ಯಕ್ಕೆ ಬಲಿಯಾಗುವುದು ಬೇಡ.
- ಗೆಳೆಯರ ವಸ್ತುಗಳನ್ನು ತೀರಾ ಹತ್ತಿರವಾಗುವ ಮೊದಲೇ ಟೇಕನ್ ಫಾರ್ ಗ್ರಾಂಟೆಡ್ ಮಾಡಿಕೊಳ್ಳಬೇಡಿ. ಬೈಕು ಕಾರುಗಳನ್ನು ಸುಖಾಸುಮನೆ ಕೇಳಬೇಡಿ, ತೀರಾ ಅವಶ್ಯಕತೆ ಇದ್ದಾಗ ಮಾತ್ರ ಪಡೆಯಿರಿ ಮತ್ತು ಅವರಿಗೆ ಅವಶ್ಯಕತೆ ಇದ್ದಾಗ ನೀವೂ ಕೊಡಲು ಸಿದ್ಧವಾಗಿರಿ.
- ಗೆಳೆಯರೆದುರು ಇರೋ ಬರೋ ಎಲ್ಲಾ ಸೀಕ್ರೇಟ್ಸ್ ನ ತೋಡಿಕೊಳ್ಳೋದು ಬೇಡ, ಹಾಗೆಯೇ ಅವರು ನಿಮ್ಮನ್ನು ನಂಬಿ ಹೇಳಿದ ಗುಟ್ಟುಗಳನ್ನೂ ಬಾಯಿತಪ್ಪಿ ಬಿಟ್ಟುಕೊಡಬೇಡಿ. ಬಾಯಿ ಸುಮ್ಮನಿರಲ್ಲ ಅಂದ್ರೆ ಸೀಕ್ರೇಟ್ಸ್ ಗಳನ್ನು ಕೇಳಿಸಿಕೊಳ್ಳಲು ಹೋಗಲೇಬೇಡಿ.
- ಎಷ್ಟೇ ಕ್ಲೋಸ್ ಆದರೂ ನಿಮ್ಮ ಮೊಬೈಲ್ ಮತ್ತು ಪರ್ಸ್ ಅನ್ನು ಯಾರಿಗೂ ಕೊಡಬೇಡಿ, ಇಷ್ಟು ಕ್ಲೋಸಾಗಿದೀವಿ ಮೊಬೈಲ್ ಕೊಡಲ್ವಾ ಅನ್ನೋರನ್ನು ಮೊದಲು ಅನ್ ಫ್ರೆಂಡ್ ಮಾಡಿ ಯಾಕೆಂದರೆ ಕಾಲ ಒಂದೇ ಥರಾ ಇರಲ್ಲ.
- ಗೆಳೆತನವನ್ನು ಶೋ ಆಫ್ ಗೆ ಬಳಸಿಕೊಳ್ಳೋದು ಬೇಡ, ಕಣ್ಣು ಕುಕ್ಕುವಂತೆ ವೈಭವೀಕರಿಸಬೇಡಿ, ಸಾಮಾಜಿಕ ಜಾಲತಾಣಗಳಲ್ಲಿ ಅತಿಯಾಗಿ ಪೋಸ್ ಕೊಡಲು ಹೋಗಬೇಡಿ. ಮಂದಿ ಕಣ್ಣಿಗೆ ಮರ ಮುರಿಯಿತು ಅನ್ನೋ ಗಾದೆ ಸುಳ್ಳಲ್ಲ. ಜನರ ಮುಂದೆ ಮೆರೆಯುವುದು ಬೇಡ.
- ಫೇಸ್ ಬುಕ್ ವಾಟ್ಸಾಪ್ ಗೆಳೆತನಕ್ಕೆ ಒಂದು ಲಕ್ಷ್ಮಣ ರೇಖೆ ಇರಲಿ ಮೆಸೆಂಜರ್ ನಲ್ಲಿ ಸ್ವರ್ಗಾನೇ ತೋರಿಸಬಹುದು ಆದರೆ ನಿಜವಾದ ಗೆಳೆತನ ನೆಲದಲ್ಲಿ (ವಾಸ್ತವ) ಇರೋದು ಎಂಬುದು ಗೊತ್ತಿರಲಿ. ಸೂಕ್ತ ಸಂದರ್ಭಗಳು ಬಂದಾಗ ನಿಮಗೇ ಅದು ಅರ್ಥವಾಗಲಿದೆ.
- …ಸಂಗ್ರಹ….
- ನಿಮ್ಮನ್ನು ಹೊಗಳುವವರು ಮಾತ್ರ ಮಿತ್ರರು ಟೀಕಿಸುವವರೆಲ್ಲ ಶತ್ರುಗಳೆಂಬ ಭ್ರಮೆ ಬಿಡಿ, ಹೊಗಳುವವರಲ್ಲಿ ಕೆಲವರು ಸ್ವಾರ್ಥಿಗಳೂ ಇರಬಹುದು ಟೀಕಿಸುವವರಲ್ಲೊಬ್ಬ ಶುದ್ಧ ಹೃದಯದ ಮಿತ್ರನಿರಬಹುದು. ಈ ಎರಡಕ್ಕೂ ಸೇರದ ಬಹು ದೊಡ್ಡ ವರ್ಗ ನಿಮ್ಮನ್ನು ಕರೆಕ್ಟಾಗಿ ಜಡ್ಜ್ ಮಾಡತ್ತೆ ಅದಕ್ಕೆ ಜಾಸ್ತಿ ಮಹತ್ವ ಕೊಡಿ.
- ಗೆಳೆಯರ ಗುಂಪಲ್ಲಿದ್ದಾಗ ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ಮಾತನಾಡಿ. ಒಬ್ಬರಿಗೇ ಹೇಳುವುದು, ಒಬ್ಬರೊಡನೇ ಮಾತನಾಡುವುದು ಸರಿಯಲ್ಲ. ಹಾಗಿದ್ದರೆ ನಿಮಗೆ ಗೆಳೆಯರ ಗುಂಪೇಕೆ? ಬೇರೆಯವರಿಗೆ ಸಂಬಂಧಿಸದ, ನಿಮ್ಮಿಬ್ಬರಿಗೇ ಸಂಬಂಧಿಸಿದ ವಿಚಾರಗಳಿಗಿಂತಾ ಜನರಲ್ ಟಾಪಿಕ್ ನಿಮ್ಮದಾಗಿರಲಿ. ಎಲ್ಲರ ಕಡೆಗೂ ನೋಡಿ ಮಾತನಾಡಿ, ಬಾಡಿಲಾಂಗ್ವೇಜ್ ನಲ್ಲಿ ಅದು ವ್ಯಕ್ತವಾಗಲಿ.
- ಸ್ನೇಹಿತರ ಗುಂಪಿನಲ್ಲಿ ನೀವೊಬ್ಬರೇ ಮಾತನಾಡುತ್ತಿರಬೇಡಿ, ನಿಮ್ಮೊಬ್ಬರದೇ ನಡೆಯಬೇಕು ಎಂಬಂತೆ ವರ್ತಿಸದಿರಿ. ನಿಮ್ಮನ್ನು ಅವರೆಲ್ಲರೂ ನಾಯಕನೆಂದು ಒಪ್ಪಿಕೊಳ್ಳುವ ಮೊದಲೇ ಎಲ್ಲರ ಮೇಲೆ ಅಧಿಕಾರ ಚಲಾಯಿಸುವುದು ಬೇಡ…