ಪಂಚಭೂತ ತತ್ವಗಳ ದಿವ್ಯ ಕ್ಷೇತ್ರಗಳು
ಆಧ್ಯಾತ್ಮಿಕವಾಗಿ ಮಾನವನ ಶರೀರವು ಪಂಚಭೂತ ಅಥವಾ ಐದು ತತ್ವಗಳಿಂದ (ಗಾಳಿ, ನೀರು, ಅಗ್ನಿ, ಆಕಾಶ ಮತ್ತು ಭೂಮಿ) ಮಾಡಲ್ಪಟ್ಟಿದ್ದು ಅದರ ಒಡೆಯನಾದ ಶಿವ ಪರಮಾತ್ಮನಿಗೆ ಸಮರ್ಪಿತವಾದ ಪ್ರತ್ಯೇಕ ದೇವಸ್ಥಾನಗಳನ್ನು ಪಂಚಭೂತ ಸ್ಥಳಗಳೆನ್ನುತ್ತಾರೆ. ಈ ಪಂಚಭೂತ ಸ್ಥಳಗಳಲ್ಲಿ ಐದು ಶಿವಲಿಂಗಗಳಿದ್ದು ಅದರಲ್ಲಿ ನಾಲ್ಕು ಸ್ಥಳಗಳು ತಮಿಳುನಾಡಿನಲ್ಲಿದ್ದು, ಒಂದು ಸ್ಥಳವು ಪ್ರಸ್ತುತ ಆಂಧ್ರ ಪ್ರದೇಶದಲ್ಲಿದೆ.
ಪಂಚಭೂತಂ ಕುರಿತು ಸಂಕ್ಷಿಪ್ತ ಮಾಹಿತಿ ಹಿಂದೂ ತತ್ವದ ಅನುಸಾರ ಜಗತ್ತಿನ ಸಕಲ ಜೀವರಾಶಿಗಳು, ಸೌರವ್ಯೂಹದಲ್ಲಿರುವ ಗ್ರಹಗತಿ ಹಾಗು ಪಂಚ ತತ್ವಗಳಾದ ಗಾಳಿ, ನೀರು, ಅಗ್ನಿ, ಆಕಾಶ ಮತ್ತು ಭೂಮಿಗಳಿಂದ ರಚನೆಯಾಗಿವೆ. ಭೂತವೆಂದರೆ ಸಂಸ್ಕೃತದಲ್ಲಿ ಕಣ ಅಥವಾ ಅಂಶವೆಂದೂ ಮಹಾಭೂತವೆಂದರೆ ಮಹಾನ್ ಕಣ ಅಥವಾ ಅಂಶ ಎಂದಾಗುತ್ತದೆ.
ಪುರಾತನ ಹಿಂದೂ ವೈದ್ಯಶಾಸ್ತ್ರ ಆಯುರ್ವೇದದ ಪ್ರಕಾರ, ಶರೀರ ಹಾಗೂ ಪಂಚಭೂತಗಳ ನಡುವಿನ ಸಮತೋಲನವು ಕೆಲವು ಪ್ರಧಾನ ಅಂಶಗಳಿಂದ ನಿರ್ವಹಿಸಲ್ಪಡುತ್ತದೆ. ಅವುಗಳೆಂದರೆ ಶ್ಲೇಷ್ಮ (ಕಫ), ಪಿತ್ತರಸ (ಪಿತ್ತ), ವಾಯು, ಧಾತು ಹಾಗು ಮಲ (ಕಸ).
ಹಾಗಾದರೆ ಬನ್ನಿ ಒಮ್ಮೆ ಆ ಪವಿತ್ರ ಐದು ಪಂಚಭೂತ ಸ್ಥಳಗಳ ದರುಶನ ಮಾಡಿಕೊಂಡು ಬರೋಣ.
ಏಕಾಂಬರೇಶ್ವರರ್ ದೇವಾಲಯ (ಪೃಥ್ವಿ ಅಥವಾ ಭೂಮಿ)
ತಮಿಳುನಾಡಿನ ಕಾಂಚೀಪುರಂ ಪಟ್ಟಣದಲ್ಲಿರುವ ಈ ಬೃಹತ್ ದೇವಾಲಯವು ಪಂಚಭೂತಗಳಲ್ಲೊಂದಾದ ಭೂಮಿ ಅಥವಾ ಪೃಥ್ವಿಗೆ ಸಮರ್ಪಿತವಾದ ದೇವಾಲಯವಾಗಿದೆ. ಪಟ್ಟಣದ ಉತ್ತರ ದಿಕ್ಕಿನಲ್ಲಿ ನೆಲೆಸಿರುವ ಈ ದೇವಾಲಯವು 59 ಮೀ ಎತ್ತರದ ಗೋಪುರವನ್ನು ಹೊಂದಿದ್ದು, ಭಾರತದಲ್ಲಿರುವ ಎತ್ತರದ ಗೋಪುರ ದೇವಾಲಯಗಳ ಪೈಕಿ ಒಂದೆನಿಸಿದೆ. ಮುಖ್ಯ ಬಸ್ ನಿಲ್ದಾಣದಿಂದ 1.6 ಕಿ.ಮೀ ದೂರದಲ್ಲಿರುವ ಈ ದೇವಾಲಯವನ್ನು ರಾಜಾ ಸ್ಟ್ರೀಟ್ ಮೂಲಕ ಸುಲಭವಾಗಿ ತಲುಪಬಹುದು.
ಅರುಣಾಚಲೇಶ್ವರರ್ ದೇವಾಲಯ (ಅಗ್ನಿ)
ತಮಿಳುನಾಡಿನ ತಿರುವಣ್ಣಾಮಲೈ ಪಟ್ಟಣದ ಅಣ್ಣಾಮಲೈ ಬೆಟ್ಟ ಶ್ರೇಣಿಗಳಲ್ಲಿ ನೆಲೆಸಿರುವ ಈ ದೇವಾಲಯವು ಪಂಚಭೂತಗಳಲ್ಲೊಂದಾದ ಅಗ್ನಿ ತತ್ವಕ್ಕೆ ಸಂಬಂಧಿಸಿದ ದೇವಾಲಯವಾಗಿದೆ. ಇಲ್ಲಿರುವ ಶಿವಸ್ವರೂಪಿ ಲಿಂಗವನ್ನು ಅಣ್ಣಮಲಯರ್ ಅಥವಾ ಅರುಣಾಚಲೇಶ್ವರನ ರೂಪದಲ್ಲಿ ಪೂಜಿಸಲಾಗುತ್ತದೆ. 10 ಹೆಕ್ಟೇರ್ ಪ್ರದೇಶದಲ್ಲಿ ಬೃಹತ್ತಾಗಿ ಹರಡಿರುವ ಈ ದೇವಾಲಯ ಸಂಕೀರ್ಣವು ಹಲವು ಎತ್ತರದ ಗೋಪುರಗಳನ್ನು ಹೊಂದಿದ್ದು ಪೂರ್ವಭಾಗದ ಗೋಪುರವು ಅತ್ಯಂತ ಎತ್ತರದ ಗೋಪುರವಾಗಿದೆ. ಇದರ ಎತ್ತರ ಸುಮಾರು 217 ಅಡಿ ಅಥವಾ 66 ಮೀಟರ್ ಗಳಷ್ಟು.
ಪ್ರತಿದಿನ ಆರು ಪೂಜಾ ವಿಧಿ ವಿಧಾನಗಳು ಇಲ್ಲಿ ಜರುಗುತ್ತಿದ್ದು ಬೆಳಿಗ್ಗೆ 5.30 ರಿಂದ ರಾತ್ರಿ 10 ಘಂಟೆಯಯವರೆಗೆ ತೆರೆದಿರುತ್ತದೆ. ತಿರುವಣ್ಣಾಮಲೈ ರೈಲು ನಿಲ್ದಾಣದಿಂದ ಕೇವಲ 1.6 ಕಿ.ಮೀ ಗಳಷ್ಟು ದೂರದಲ್ಲಿರುವ ಈ ದೇವಾಲಯವನ್ನು ಸುಲಭವಾಗಿ ತಲುಪಬಹುದು.
ಜಂಬುಕೇಶ್ವರ ದೇವಾಲಯ (ಜಲ)
ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ಈ ದೇವಾಲಯವು ಜಂಬುಕೇಶ್ವರ ದೇವಾಲಯವೆಂಬ ಹೆಸರಿನಿಂದ ಗುರುತಿಸಲ್ಪಟ್ಟಿದ್ದು ಪಂಚಭೂತಗಳಲ್ಲೊಂದಾದ ನೀರಿಗೆ ಸಮರ್ಪಿತವಾಗಿದೆ. ಈ ದೇವಾಲಯವು ಮತ್ತೊಂದು ಪ್ರಸಿದ್ಧ ಯಾತ್ರಾಕ್ಷೇತ್ರವಾದ ಶ್ರೀ ರಂಗನಾಥಸ್ವಾಮಿ ದೇವಾಲಯವಿರುವ ಶ್ರೀರಂಗಂನ ದ್ವೀಪದಲ್ಲಿ ನೆಲೆಸಿದೆ. ಜಂಬುಕೇಶ್ವರ ದೇವಾಲಯದ ಗರ್ಭಗುಡಿಯ ಕೆಳಗೆ ಎಂದಿಗೂ ಬತ್ತಲಾರದ ಚಿಲುಮೆಯೊಂದಿದ್ದು, ಸುಮಾರು 1800 ವರ್ಷಗಳ ಇತಿಹಾಸವನ್ನು ಈ ದೇವಾಲಯ ಹೊಂದಿದೆ.
ಇಲ್ಲಿನ ಶಿವಸ್ವರೂಪಿ ಲಿಂಗವನ್ನು ಅಪ್ಪು ಲಿಂಗಂ ಅಥವಾ ನೀರಿನ ಲಿಂಗ ಎಂದು ಕರೆಯಲಾಗುತ್ತದೆ. ಈ ಜಂಬುಕೇಶ್ವರ ಅಖಿಲಾಂಡೇಶ್ವರಿ ದೇವಾಲಯವು ಪಟ್ಟಣದ ಬಸ್ ನಿಲ್ದಾಣದಿಂದ ಕೇವಲ 1 ಕಿ.ಮೀ ದೂರದಲ್ಲಿದ್ದು ಸುಲಭವಾಗಿ ತಲುಪಬಹುದಾಗಿದೆ.
ತಿಳ್ಳೈ ನಟರಾಜ ದೇವಾಲಯ (ಆಕಾಶ)
ತಮಿಳುನಾಡಿನ ಪೂರ್ವ ಮಧ್ಯ ಭಾಗದ ಚಿದಂಬರಂ ಪಟ್ಟಣದಲ್ಲಿರುವ ಈ ದೇವಾಲಯವು ಪಂಚಭೂತಗಳಲ್ಲೊಂದಾದ ಆಕಾಶಕ್ಕೆ ಸಮರ್ಪಿತವಾದುದಾಗಿದೆ. ಇಲ್ಲಿನ ಶಿವಸ್ವರೂಪಿ ಲಿಂಗವನ್ನು ತಿಳ್ಳೈ ನಟರಾಜನ ರೂಪದಲ್ಲಿ ಪೂಜಿಸಲಾಗುತ್ತದೆ. ವೈದಿಕ ಬ್ರಾಹ್ಮಣರಾದ ದಿಕ್ಷೀತರ್ ರಿಂದ ಈ ದೇವಸ್ಥಾನವು ನಿರ್ವಹಿಸಲ್ಪಡುತ್ತದೆ. ಇವರನ್ನು ಪತಂಜಲಿಯವರು ದೇವಾಲಯದ ವಿಧಿವತ್ತಾದ ನಿರ್ವಹಣೆಗಾಗಿ ಕೈಲಾಸ ಪರ್ವತದಿಂದ ಕರೆತಂದಿದ್ದರು ಎನ್ನಲಾಗಿದೆ.
ಈ ದೇವಾಲಯವು ಚಿದಂಬರಂ ಬಸ್ಸು ನಿಲ್ದಾಣದಿಂದ 1 ಕಿ.ಮೀ ದೂರದಲ್ಲಿ ನೆಲೆಸಿದ್ದು ಪಟ್ಟಣದ ಯಾವುದೇ ಭಾಗದಿಂದ ಸುಲಭವಾಗಿ ತಲುಪಬಹುದಾಗಿದೆ.
ಶ್ರೀಕಾಳಹಸ್ತಿ ದೇವಾಲಯ (ವಾಯು)
ಪ್ರಸ್ತುತ ಆಂಧ್ರಪ್ರದೇಶ ರಾಜ್ಯದ ಶ್ರೀಕಾಳಹಸ್ತಿ ಯಲ್ಲಿರುವ ಈ ದೇವಾಲಯವು ಪಂಚಭೂತಗಳಲ್ಲೊಂದಾದ ವಾಯುವಿಗೆ ಸಂಬಂಧಿಸಿದುದಾಗಿದೆ. ಶಿವಸ್ವರೂಪಿಯಾದ ವಾಯುಲಿಂಗಂ ಅನ್ನು ಈ ದೇವಾಲಯದಲ್ಲಿ ಪೂಜಿಸಲಾಗುತ್ತದೆ. ಈ ಸ್ಥಳವು ಮತ್ತೊಂದು ವಿಶ್ವವಿಖ್ಯಾತ ತಾಣವಾದ ತಿರುಪತಿಯಿಂದ ಈಶಾನ್ಯ ಭಾಗಕ್ಕೆ ಕೇವಲ 36 ಕಿ.ಮೀ ದೂರದಲ್ಲಿ ನೆಲೆಸಿದೆ. ಶ್ರೀಕಾಳಹಸ್ತಿ ರೈಲು ನಿಲ್ದಾಣದಿಂದ 2.6 ಕಿ.ಮೀ ದೂರದಲ್ಲಿ ನೆಲೆಸಿರುವ ಈ ದೇವಾಲಯವನ್ನು ಸುಲಭವಾಗಿ ತಲುಪಬಹುದಾಗಿದೆ.