ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ವಿಸ್ಮಯ ಶಿಖರ ಆಚಾರ್ಯ ಶಂಕರ ಜಯಂತಿ

ವಿಸ್ಮಯ ಶಿಖರ : ಆಚಾರ್ಯ ಶಂಕರ

 ಪರಮಜ್ಞಾನಿ - ಋಷಿ - ಪ್ರಕಾಂಡ ಪಂಡಿತ ಶ್ರೀ ಶಂಕರಾಚಾರ್ಯರು ಭರತ ಭೂಮಿಯಲ್ಲಿ ಜನಿಸಿದ ಮಹಾನ್ ಸಂತ. ಅಂತಹ ದೊಡ್ಡ ವ್ಯಕ್ತಿಯನ್ನು ಜಗತ್ತಿಗೆ ನೀಡಿದ ಭಾರತವು ಮಹಾನ್ ದೇಶ.
            - ಇತಿಹಾಸಕಾರ ವಿಲ್ ಡ್ಯೂರಾಂಟ್ 

   ಭವ್ಯ ಚರಿತ್ರೆ ಹೊಂದಿರುವ ಈ ಭಾರತ  ದೇಶವು ಋಷಿ ಮುನಿಗಳಿಂದಲೂ, ಮಹಾ ಪುರುಷರಿಂದಲೂ, ವೇದ - ಉಪನಿಷತ್  ಗಳಿಂದಲೂ, ಪುರಾಣ - ಪುಣ್ಯ ಕಥೆಗಳಿಂದಲೂ ಮತ್ತು ಯೋಗಿ ಪರಮಹಂಸರಿಂದಲೂ, ಇಡೀ ವಿಶ್ವದಲ್ಲೇ ವಿಶಿಷ್ಟ ದೇಶವೆನಿಸಿದೆ. ಈ ನಾಡಿನಲ್ಲಿ ಜನಿಸಿ, ಈ ಪುಣ್ಯ ಭೂಮಿಯನ್ನು ಬೆಳಗಿಸಿದ ಮಹಾತ್ಮರು ಅಸಂಖ್ಯ. ಈ ದೇಶದ ಹಿರಿಮೆ ಗರಿಮೆ ಹೆಚ್ಚಿಸಿದ ಅವಧೂತರು ಹಲವರು. ಅಂತಹ ತಪಸ್ವಿಗಳಲ್ಲಿ ದೈವಾಂಶ ಸಂಭೂತರು ಮತ್ತು ಐತಿಹಾಸಿಕ ಪುರುಷರು ಆದ ಶ್ರೀ ಆದಿ ಶಂಕರಾಚಾರ್ಯರು ಮುಖ್ಯರು.

ಮಲಬಾರ್ ಪ್ರಾಂತ್ಯದ, ತ್ರಿಚೂರು ಬಳಿಯ ಕಾಲಟಿ ಎಂಬ ಗ್ರಾಮದಲ್ಲಿ, ಶಿವಗುರು ಮತ್ತು ಆರ್ಯಾಂಭ ಎಂಬ ನಂಬೂದರಿ ಬ್ರಾಹ್ಮಣ ಕುಟುಂಬದಲ್ಲಿ, ವೈಶಾಖ ಶುದ್ಧ ಪಂಚಮಿ, ಆದ್ರ ನಕ್ಷತ್ರದಲ್ಲಿ, ಭಾನುವಾರದಂದು ಶ್ರೀ ಶಂಕರರ ಜನನವಾಯಿತು. ಅವರ ಹುಟ್ಟಿನ ಬಗ್ಗೆ ರೋಮಾಂಚಕ ಸಂಗತಿಗಳಿವೆ. ಮಕ್ಕಳಿಲ್ಲದ ಆರ್ಯಾಂಭ ಮತ್ತು ಶಿವಗುರು ದಂಪತಿಗಳು ಪ್ರಾರ್ಥಿಸಲು, ತ್ರಿಚೂರು ದೇವಸ್ಥಾನದ ಸಾಕ್ಷಾತ್ ಪರಮೇಶ್ವರನೆ ಅವರ ಮಗನಾಗಿ ಹುಟ್ಟಿ ಬರಲು ಒಪ್ಪಿದನಂತೆ. ದೀರ್ಘಾಯುಷಿ ಮೂರ್ಖ ಮಗ ಬೇಕೆ? ಅಥವಾ ಬುದ್ಧಿವಂತನಾದ ಎಂಟು ವರ್ಷದ ಮಗನು ಬೇಕೆ ? ಎಂದು ಪರಶಿವನು ಪ್ರಶ್ನಿಸಿದಾಗ ತಾಯಿ, ಬುದ್ಧಿವಂತ ಮಗನನ್ನು ಆಯ್ಕೆ ಮಾಡಿಕೊಂಡಳಂತೆ. ಆಗ ಹುಟ್ಟಿದ ಮಗನೇ ದೈವಾಂಶಿ ಶಂಕರ. 8 ವರ್ಷ ಮುಗಿಯುವ ಹೊತ್ತಿನಲ್ಲಿ, ನದಿಯಲ್ಲಿ ಸ್ನಾನ ಮಾಡುವಾಗ ಶಂಕರರ ಕಾಲನ್ನು ಮೊಸಳೆ ಒಂದು ಹಿಡಿಯಿತು. ಜೀವ ಉಳಿಸಿಕೊಳ್ಳಲು ತಾನು ಸನ್ಯಾಸ ತೆಗೆದುಕೊಳ್ಳಲೇಬೇಕು, ಎಂದು ಅರಿತುಕೊಂಡ ಬಾಲಕ ಶಂಕರನು ತಾಯಿಯ ಒಪ್ಪಿಗೆ ಪಡೆದು, ಆ ಸಂಕಟದಿಂದ ಪಾರಾಗಿ ಸನ್ಯಾಸಾಶ್ರಮವನ್ನು ಪ್ರವೇಶಿಸಿದರು. ಆ ಕ್ಷಣದಲ್ಲಿ ನದಿ ದಡದಲ್ಲಿ ನಿಂತು ಮಂತ್ರ ಉಚ್ಚರಿಸಿದೊಡನೆ, ಅವರ ಆಯಸ್ಸು ಮತ್ತೆ ಎಂಟು ವರ್ಷ ಹೆಚ್ಚಳವಾಯಿತಂತೆ. ಮುಂದೆ ಈಶ್ವರ ಸಂಭೂತರಾದ ಶಂಕರರು ಭೂಕೈಲಾಸ ಎನಿಸಿದ ವಾರಣಾಸಿಗೆ ಪ್ರಯಾಣ ಬೆಳೆಸಿದರು. ಅಲ್ಲಿ ವಿಷ್ಣು ಸಂಭೂತ ಶ್ರೀ ವ್ಯಾಸ ಮಹರ್ಷಿಗಳೊಡನೆ ಬ್ರಹ್ಮಸೂತ್ರಗಳ ಬಗ್ಗೆ ಎಷ್ಟೋ ದಿನಗಳವರೆಗೆ ವಾಗ್ವಾದ ನಡೆಸಿದರು. ಶಂಕರರ ಅಚಲಭಕ್ತಿ, ತೀಕ್ಷ್ಣ ಬುದ್ಧಿ, ಅನನ್ಯ ಪಾಂಡಿತ್ಯ ಮತ್ತು ಬ್ರಹ್ಮಸೂತ್ರ ಬಗ್ಗೆ ಅವರು ಬರೆದ ಅಪೂರ್ವ ಭಾಷ್ಯಗಳಿಗೆ ಮಾರು ಹೋದ ಮಹರ್ಷಿ ವ್ಯಾಸರು, ಶಂಕರರಿಗೆ ಮತ್ತೆ 16 ವರ್ಷಗಳ ಆಯಸ್ಸನ್ನು ಹೆಚ್ಚಿಸಿದರು ! ಹೀಗಾಗಿ ಶಂಕರರು ಪಡೆದದ್ದು ಮತ್ತು ಬದುಕಿ ಬಾಳಿದ್ದು ಕೇವಲ 32 ವರ್ಷಗಳು.

  ಅವರ ಕಾಲವನ್ನು ಕ್ರಿಸ್ತಶಕ 788 ರಿಂದ ಕ್ರಿ.ಶ 820 ಎಂದು ಚರಿತ್ರಕಾರರು ನಿರ್ಣಯಿಸಿದ್ದಾರೆ. ಆದರೆ ಕ್ರಿಸ್ತಶಕ 9ನೇ ಶತಮಾನ ಅವರ ಕಾಲ ಎಂಬ ವಾದವೂ ಇದೆ. ಅವರು ಬದುಕಿದ್ದು ಕೇವಲ 32 ವರ್ಷ. ಅಷ್ಟು ಅಲ್ಪ ಆಯಸ್ಸಿನಲ್ಲಿ ಇಡೀ ಭರತ ಖಂಡವನ್ನು ನಾಲ್ಕು ಬಾರಿ ಕಾಲ್ನಡಿಗೆಯಲ್ಲಿ ಸುತ್ತಿ, ಸನಾತನ ಧರ್ಮದ ಉಳಿವಿಗೆ ಮತ್ತು ಹಿಂದೂ ಧರ್ಮದ ಪುನರುತ್ಥಾನಕ್ಕೆ, ಅವರು ಮಾಡಿದ ಕಾರ್ಯ ಪವಾಡ ಸದೃಶವಾಗಿದೆ. ಇಂದಿಗೂ ಆ ಸಾಹಸವನ್ನು ನಂಬಲು ಅಸಾಧ್ಯವಾಗಿದೆ. ಆದರೆ ಅದು ಸತ್ಯ. ಈಶ್ವರನ ಅವತಾರವೆಂದು ನಂಬಲಾದ ಶ್ರೀ ಶಂಕರಾಚಾರ್ಯರು, ಕು ಮತಗಳನ್ನು ಖಂಡಿಸಿ, ಅದ್ವೈತ ಮತವನ್ನು ಸ್ಥಾಪಿಸಿದರು. ಅದ್ವೈತ ಎಂದರೇನು? ದ್ವೈತವಲ್ಲದು; ಒಂದು - ಏಕ ಭಾವವುಳ್ಳದ್ದು ಎಂದರ್ಥ. ಬ್ರಹ್ಮ ಸತ್ಯ - ಜಗತ್ತು ಮಿಥ್ಯ. ಅಂದರೆ ದೇವರು ಮಾತ್ರ ಸತ್ಯ, ಈ ಜಗತ್ತು ಕೇವಲ ಮಾಯೆ ಎಂದು ತಿಳಿಸಿದ್ದಲ್ಲದೆ, ಆತ್ಮ ಪರಮಾತ್ಮಗಳು ಬೇರೆ ಬೇರೆಯಲ್ಲ, ಅದು ಒಂದೇ ಎಂದು ಜಗತ್ತಿಗೆ ಸಾರಿದ ಅದ್ವೈತ ಸಿದ್ದಾಂತ ಸ್ಥಾಪಕರು ಶ್ರೀ ಶಂಕರಾಚಾರ್ಯರು. 

 3ನೇ ವರ್ಷಕ್ಕೆ ತಂದೆಯನ್ನು ಕಳೆದುಕೊಂಡರು. 5ನೇ ವರ್ಷಕ್ಕೆ ಗಾಯಿತ್ರಿ ಉಪದೇಶ ಪಡೆದರು. 8ನೇ ವರ್ಷಕ್ಕೆ ತಾಯಿಯ ಅನುಮತಿಯೊಡನೆ ಸನ್ಯಾಸ ಸ್ವೀಕರಿಸಿದರು. 10ನೇ ವರ್ಷಕ್ಕೆ ನಾಲ್ಕು ವೇದಗಳ ಅಧ್ಯಯನ ಮಾಡಿದರು. 12 ನೇ ವರ್ಷಕ್ಕೆ ಸರ್ವ ಶಾಸ್ತ್ರಗಳಲ್ಲಿ ಪರಿಣಿತರಾಗಿ, 16ನೇ ವರ್ಷಕ್ಕೆ ಬ್ರಹ್ಮಸೂತ್ರಗಳಿಗೆ ಭಾಷ್ಯವನ್ನು ಬರೆದು, 32ನೇ ವರ್ಷಕ್ಕೆ ಈ ಭೂಮಂಡಲದಿಂದ ಕಣ್ಮರೆಯಾದ ಮಹಾನ್ ಚೇತನ ಶ್ರೀ ಶಂಕರರು. ಇವರ ಗುರು ಗೋವಿಂದ ಭಗವತ್ಪಾದರು. ಈ ಗುರುಗಳು ತನ್ನ ಶಿಷ್ಯನಿಗೆ ವೇದಾಂತ - ಉಪನಿಷತ್ತುಗಳನ್ನು ಬೋಧಿಸಿದರು.

ಮಹಾಮೇಧಾವಿಗಳು, ತೀಕ್ಷ್ಣ ಬುದ್ಧಿಯವರು, ಪ್ರಚಂಡ ವಾಗ್ಮಿಗಳು ಆಗಿದ್ದ ಶ್ರೀ ಶಂಕರರು ಭಾರತದ ಪುರಾತನ ಸಂಸ್ಕೃತಿಯ ಆಧಾರ ಸ್ತಂಭಗಳಾದ, ವೇದ ಉಪನಿಷತ್ತುಗಳಿಗೆ ಹೊಸ ಭಾಷ್ಯ ಬರೆದು ಹಿಂದೂ ಧರ್ಮಕ್ಕೆ ಹೊಸ ಹೊಳಪನ್ನು ನೀಡಿದರು. ಅನ್ಯ ಧರ್ಮಗಳ ಬೆಳವಣಿಗೆಯಿಂದ ಹಿಂಜರಿದ, ಹಿಂದೂ ಮತಕ್ಕೆ ಹೊಸ ರಕ್ತವನ್ನು ತುಂಬಿದರು. ಅಧರ್ಮಗಳ ಕರಾಳ ಸಂಸರ್ಗದಿಂದ, ಕಳಹೀನವಾಗಿದ್ದ ವೈದಿಕ ಧರ್ಮದ ಮೇಲೆ ಮುಸುಕಿದ್ದ ಕತ್ತಲೆಯನ್ನು ಸರಿಸಿದರು. ಭಾರತದದ್ಯಾಂತ ಧಾರ್ಮಿಕತೆಯನ್ನು ಪುನರುಜ್ಜೀವನಗೊಳಿಸಲು, ಸತತವಾಗಿ ಯಾತ್ರೆಗಳನ್ನು ಕೈಗೊಂಡರು. ವೈದಿಕ ಧರ್ಮದ ಮಹತ್ವವನ್ನು ನಿರಂತರವಾಗಿ ಸಾರಲು, ಅದರ ಪಾವಿತ್ರ್ಯತೆ ಕಾಪಾಡಲು ದೇಶದ ನಾಲ್ಕು ಮೂಲೆಗಳಲ್ಲಿ, ನಾಲ್ಕು ಮಠಗಳನ್ನು ಸ್ಥಾಪಿಸಿದರು. ಅದರ ಜವಾಬ್ದಾರಿಯನ್ನು ತಮ್ಮ ನೆಚ್ಚಿನ ನಾಲ್ಕು ಶಿಷ್ಯರಿಗೆ ವಹಿಸಿದರು.

ಪೂರ್ವದಲ್ಲಿ - ಮಹೋದದಿ ತೀರ್ಥದ ಪುರಿ ಎಂಬಲ್ಲಿ ಗೋವರ್ಧನ ಪೀಠ ಸ್ಥಾಪಿಸಿ, ಇದರ ಮುಖ್ಯಸ್ಥರಾಗಿ ಶ್ರೀ ಹಸ್ತಮಲಕಾಚಾರ್ಯರನ್ನು ನೇಮಿಸಿದರು. ಇಲ್ಲಿನ ಮುಖ್ಯ ದೇವತೆ ಜಗನ್ನಾಥ. ಋಗ್ವೇದ ಪ್ರಧಾನವಾದ ಈ ಮಠದ ಮಹಾ ವಾಕ್ಯ "ಪ್ರಜ್ಞಾನಾಂ ಬ್ರಹ್ಮಂ."

ಪಶ್ಚಿಮದಲ್ಲಿ - ಗೋಮತಿ ನದಿ ದಡದ ದ್ವಾರಕಾದಲ್ಲಿ, ಕಾಳಿಕಾ ಪೀಠ ಸ್ಥಾಪಿಸಿ, ಇದಕ್ಕೆ ಮುಖ್ಯರಾಗಿ ಶ್ರೀ ಪದ್ಮ ಪಾದರನ್ನು ( ಸನಂದನ) ನಿಯಮಿಸಿದರು. ಇಲ್ಲಿನ ಮುಖ್ಯದೇವತೆ ಭದ್ರಕಾಳಿ. ಸಾಮವೇದ ಪ್ರಧಾನವಾದ ಈ ಮಠದ ಮಹಾ ವಾಕ್ಯ "ತತ್ವಮಸಿ".

ಉತ್ತರದಲ್ಲಿ - ಅಲಕಾನಂದ ನದಿಯ ಬಳಿಯ ಬದರಿಯಲ್ಲಿ ಜ್ಯೋತಿರ್ ಮಠ ಸ್ಥಾಪಿಸಿ, ಅದಕ್ಕೆ ಶ್ರೀ ತೋಟಕಾಚಾರ್ಯರನ್ನು (ಗಿರಿ) ಪ್ರಮುಖ ರಾಗಿಸಿದರು. ಇಲ್ಲಿನ ಮುಖ್ಯ ದೇವತೆ ನಾರಾಯಣ. ಅಥರ್ವಣ ವೇದ ಪ್ರಧಾನವಾದ ಈ ಮಠದ ಮಹಾ ವಾಕ್ಯ "ಅಯಾಮಾತ್ಮ ಬ್ರಹ್ಮ".

ದಕ್ಷಿಣದಲ್ಲಿ - ತುಂಗಾ ತೀರದ ಶೃಂಗೇರಿ ಎಂಬಲ್ಲಿ ಶ್ರೀ ಶಾರದಾ ಪೀಠ ಸ್ಥಾಪಿಸಿ, ಅದಕ್ಕೆ ಶ್ರೀ ಸುರೇಶ್ವರಾಚಾರ್ಯರನ್ನು ( ಮಂಡನ ಮಿಶ್ರ ) ಹಿರಿಯರಾಗಿಸಿದರು. ಇಲ್ಲಿನ ಮುಖ್ಯದೇವತೆ ಶಾರದಾ, ಮಲಹಾನಿಕರೇಶ್ವರ. ಯಜುರ್ವೇದ ಪ್ರಧಾನವಾದ ಈ ಮಠದ ಮಹಾ ವಾಕ್ಯ "ಅಹಂ ಬ್ರಹ್ಮಾಸ್ಮಿ".

 ಆಚಾರ್ಯ ಶಂಕರರು ತುಂಗಾ ತೀರದ ಶೃಂಗೇರಿಗೆ ಬಂದಾಗ, ಅನನ್ಯ ದೃಶ್ಯವೊಂದು ಎದುರಾಯಿತು. ಕಾಳಿಂಗ ಸರ್ಪ ಒಂದು, ಬಿಸಿಲಿನ ಬೇಗೆಯಲ್ಲಿ ಬಳಲುತ್ತಿದ್ದ ಗರ್ಭಿಣಿ ಕಪ್ಪೆ ಒಂದಕ್ಕೆ ನೆರಳನ್ನು ನೀಡಲು ತನ್ನ ಹೆಡೆಯನ್ನು ಚಾಚಿ ನಿಂತಿದೆ! ಈ ದೃಶ್ಯ ಕಂಡ ಶಂಕರರಿಗೆ ತಮ್ಮ ತಪೋಭೂಮಿ ಇದೆ ಎಂದು ನಿರ್ಧರಿಸಿ, ಪ್ರಥಮ ಮಠವನ್ನು ಶೃಂಗೇರಿಯಲ್ಲಿ ಸ್ಥಾಪಿಸಿದರು. ತಮ್ಮಜೀವಿತದ 32 ವರ್ಷಗಳಲ್ಲಿ ಅಮೂಲ್ಯ 12 ವರ್ಷಗಳನ್ನು ಈ ಮಲೆನಾಡಿನ ಶೃಂಗೇರಿಯಲ್ಲಿ ಶಂಕರರು ನೆಲೆಸಿದರೆಂದರೆ, ಈ ನೆಲದ ಮಹತ್ವವನ್ನು ನಾವು ಅರ್ಥಮಾಡಿಕೊಳ್ಳಬಹುದು. ಇಲ್ಲಿನ ಶುದ್ಧ ಸ್ಪಟಿಕದ ಚಂದ್ರಮೌಳೇಶ್ವರ ಲಿಂಗವನ್ನು, ಸಾಕ್ಷಾತ್ ವಿಶ್ವನಾಥನು ಕೈಲಾಸದಿಂದ ತಂದು ಕಾಶಿಯಲ್ಲಿ ಶ್ರೀ ಶಂಕರರಿಗೆ ನೀಡಿದನೆಂದು ಪ್ರತೀತಿಯಿದೆ .ವಿದ್ಯಾದಿ ದೇವತೆಯಾದ ಶ್ರೀ ಶಾರದಮ್ಮನ ಸನ್ನಿಧಾನವಾದ ಶೃಂಗೇರಿ, ಆಧ್ಯಾತ್ಮಿಕ ಜೀವಿಗಳಿಗೆ, ದೈವ ಭಕ್ತರಿಗೆ, ವಿದ್ಯಾರ್ಥಿಗಳಿಗೆ, ಪವಿತ್ರ ಕ್ಷೇತ್ರವಾಗಿದ್ದು ನಿರಂತರ ಆಕರ್ಷಣೆಯನ್ನು ಇಂದಿಗೂ ಉಳಿಸಿಕೊಂಡಿದೆ. ಆದಿ ಶಂಕರರ ಕಾಲದಲ್ಲಿ ಪ್ರಚಲಿತವಿದ್ದ ಆರು ಮತಗಳು, ಶೈವ, ವೈಷ್ಣವ, ಶಾಕ್ತ, ಸೌರ, ಗಾಣಪತ್ಯ ಮತ್ತು ಕಾಪಾಲ. ಅವುಗಳಲ್ಲಿ ಇದ್ದ ವೇದ ಬಾಹಿರ ಅಂಶಗಳನ್ನು, ಧರ್ಮ ಬಾಹಿರ 

ನಡೆಗಳನ್ನು ತೆಗೆದು ಶುದ್ಧೀಕರಿಸಿದರು. ಮತ್ತು ಆ ಮತಗಳಿಗೆ ಪೂಜ್ಯತೆಯನ್ನು, ಗೌರವವನ್ನು ದೊರಕಿಸಿಕೊಟ್ಟರು. ಆ ಕಾರಣದಿಂದ ಶಂಕರರನ್ನು “ಷಣ್ಮತ ಸ್ಥಾಪನಾಚಾರ್ಯ” ಎಂದು ಕರೆಯುತ್ತಾರೆ. ಬ್ರಹ್ಮಸೂತ್ರ, ಭಗವದ್ಗೀತೆ ಮತ್ತು ದಶೋಪನಿಷತ್ತು ಎಂಬುದು ಪ್ರಸ್ತಾನ ತ್ರಯಗಳು. ಅವುಗಳಿಗೆ ಪ್ರಥಮ ಬಾರಿಗೆ ಭಾಷ್ಯ ಬರೆದು “ಭಾಷ್ಯಾಚಾರ್ಯ” ಎಂದು ಹೆಸರು ಗಳಿಸಿದರು.

ಶ್ರೀ ಶಂಕರರು ಕೇವಲ ಸನ್ಯಾಸಿಗಳಲ್ಲ. ಮತ ಸ್ಥಾಪಕರು, ಪ್ರಕಾಂಡ ಪಂಡಿತರು, ಶ್ರೇಷ್ಠವಾಗ್ಮಿಗಳು, ಅಪೂರ್ವವಾದಿಗಳು ಆಗಿದ್ದ ಅವರು, ತತ್ವಶಾಸ್ತ್ರಜ್ಞ, ವಿದ್ವಾಂಸ ಮತ್ತು ಕವಿಯೂ ಆಗಿದ್ದರು. ಕಾರಣೀಕ ಪುರುಷರಾದ ಶಂಕರರಿಂದ ರಚಿತವಾದ ಕೃತಿಗಳು ಹಲವಾರು. ಸಾಧನಾ ಪಂಚಕ, ಪ್ರಶ್ನೋತ್ತರ ಮಾಲಿಕಾ, ಆತ್ಮಭೋದ, ಸರ್ವ ಸಿದ್ಧಾಂತ ಸಾರ ಸಂಗ್ರಹ, ಪಂಚರತ್ನ, ಮೋಹ ಮುದ್ಗರ, ಏಕ ಶ್ಲೋಕಿ, ವಿವೇಕ ಚೂಡಾಮಣಿ, ಮನೀಷಾ ಪಂಚಕ, ತತ್ವೋಪದೇಶ, ಬ್ರಹ್ಮಾನುಚಿಂತನ, ಸರ್ವ ವೇದಾಂತ ಸಾರಸಂಗ್ರಹ ಮುಂತಾದ 38 ಗ್ರಂಥಗಳನ್ನು ರಚಿಸಿ ವೇದಾಂತ ಸಾಧಕರಿಗೆ, ಜ್ಞಾನ ಪಿಪಾಸುಗಳಿಗೆ ದಾರಿದೀಪವಾಗಿದ್ದಾರೆ. ಅದರಲ್ಲೂ ಅವರ "ಭಜಗೋವಿಂದಂ" "ಶಿವ ಪಂಚಾಕ್ಷರಿ" ಮತ್ತು "ಸೌಂದರ್ಯ ಲಹರಿ" ಗಳು ಲೋಕಪ್ರಿಯವಾಗಿದೆ. ಪಂಚಾಯತನ ಪೂಜಾ ಎಂಬ ವಿಶೇಷ ಪೂಜಾ ಪದ್ದತಿಯನ್ನು ಶಂಕರರು ಆಚರಣೆಗೆ ತಂದರು. ಆದಿತ್ಯಂ ಚ, ಗಣೇಶಂ ಚ, ದೇವಿಂ ಚ, ರುದ್ರಂ ಚ, ಕೇಶವಂ - ಪಂಚಾಯತನದ ಪಂಚದೇವರುಗಳು. ಶ್ರೀ ವಿದ್ಯಾರಣ್ಯರು ಬರೆದ "ಮಾಧವಿಯ ಶಂಕರ ವಿಜಯ"ವೆ ಶ್ರೀ ಶಂಕರರ ಜೀವನ ಚರಿತ್ರೆಗಳಲ್ಲಿ ಮುಖ್ಯವಾದ ಗ್ರಂಥ. 

 ಭಾರತದ ಮುಕುಟ ಮಣಿ ಕಾಶ್ಮೀರಕ್ಕೂ ಶ್ರೀ ಶಂಕರರಿಗೂ ವಿಶೇಷವಾದ ನಂಟಿದೆ. ವಿದ್ಯಾದಿ ದೇವತೆ ಶಾರದೆ "ಕಾಶ್ಮೀರ ಪುರವಾಸಿನಿ". ಕಾಶ್ಮೀರದಲ್ಲಿ ಶಂಕರರು ಸರ್ವಜ್ಞ ಪೀಠಾರೋಹಣ ಮಾಡಿದ ಸ್ಥಳವೇ, ಹಿಂದಿನ ಶಾರದಾ ಪೀಠ. ಇದು ಇಂದು ಪಿ.ಓ.ಕೆ - ಅಂದರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇದೆ. ಪ್ರಾಚೀನ ಕಾಲದಲ್ಲಿ ಇದು ಬರೀ ಪೀಠವಷ್ಟೇ ಅಲ್ಲ, ಉನ್ನತ ಶಿಕ್ಷಣ ನೀಡುವ ವಿಶ್ವವಿದ್ಯಾನಿಲಯವಾಗಿತ್ತು. ಇಲ್ಲಿ ವಿದ್ಯಾಭ್ಯಾಸ ಪಡೆಯಲು ದೇಶ ವಿದೇಶಗಳಿಂದಲೂ ವಿದ್ಯಾರ್ಥಿಗಳು ಆಗಮಿಸುತ್ತಿದ್ದರು. ಇದನ್ನು ಆ ಕಾಲದಲ್ಲಿ "ಶಾರದಾ ಗ್ರಾಮ" ಎಂದು ಕರೆಯುತ್ತಿದ್ದರು. ಪಂಡಿತರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಹಾಗೂ ಸಾಕ್ಷಾತ್ ಶಾರದಾಂಬೆ ಕೇಳಿದ ಪ್ರಶ್ನೆಗೆ ಸಮರ್ಪಕವಾಗಿ ಉತ್ತರಿಸಿದ ಶಂಕರರು "ಶಾರದಾ ಪೀಠ" ಎಂಬ ಈ ಸರ್ವಜ್ಞ ಪೀಠವನ್ನು ಅಲಂಕರಿಸಿದರು. ಆದರೆ ಇಂದು ಆ ಸ್ಥಳ ಪಾಳು ಬಿದ್ದಿದೆ. ಅಲ್ಲಿ ಗುಡಿ ಗೋಪುರವಿಲ್ಲ, ಶಾರದಾಂಬೆಯೂ ಇಲ್ಲ. ಕೇವಲ ಶಿಥಿಲವಾದ ಮುರಿದ ಕಟ್ಟಡದ ಅವಶೇಷಗಳಿವೆ. 

"ಭಾರತ ದೇಶದ ಅತ್ಯಂತ ಮೇಧಾವಿ ಸಂತರಲ್ಲಿ ಆಚಾರ್ಯ ಶಂಕರರು ಅಗ್ರಗಣ್ಯರು. ಅದ್ವೈತ ತತ್ವವನ್ನು ಸರಳವಾಗಿ ತಿಳಿಸಿದ ಅಪೂರ್ವ ಯತಿ" ಎಂದು ಸ್ವಾಮಿ ಶಿವಾನಂದರು ಸ್ತುತಿಸುತ್ತಾರೆ.

"ಜಗತ್ತಿಗೆ ಮಾರ್ಗದರ್ಶನ ಮಾಡುವ ಹಿರಿಮೆ ಹೊಂದಿದ್ದ ಏಕೈಕ ವ್ಯಕ್ತಿ ಮತ್ತು ಸಕಲರಿಂದಲೂ ಗೌರವಿಸಲ್ಪಡುತ್ತಿದ್ದ ಮುನಿಗಳು ಶ್ರೀ ಶಂಕರ" ಎಂದು ಸ್ವಾಮಿ ರಂಗನಾಥನಂದರು ನೆನಪಿಸುತ್ತಾರೆ.

“ಡಿಸ್ಕವರಿ ಆಫ್ ಇಂಡಿಯಾ” ಎಂಬ ಗ್ರಂಥದಲ್ಲಿ “32 ವರ್ಷಗಳ ಜೀವಿತಾವಧಿಯಲ್ಲಿ ತಮ್ಮ ತೀಕ್ಷ್ಣಮತಿ ಮತ್ತು ಗಂಭೀರ ವ್ಯಕ್ತಿತ್ವದಿಂದ ಇಡೀ ಭಾರತವನ್ನು ಪ್ರಭಾವಿಸಿದ ಮತ್ತು ಅದರ ಪ್ರಭೆಯನ್ನು ಜಗತ್ತಿಗೆ ಹರಡಿದ ಮಹಾನ್ ದಾರ್ಶನಿಕ ಮಹಂತ ಶ್ರೀ ಶಂಕರರು” ಎಂದು ಭಾರತದ ಪ್ರಥಮ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರು ಗೌರವಿಸುತ್ತಾರೆ.

ಅಲ್ಪ ಆಯುಷ್ಯದಲ್ಲಿ, ಅನನ್ಯ ಎನಿಸುವ, ಅಸಾಧ್ಯಮಯವಾದ ಕಾರ್ಯ ನಿರ್ವಹಿಸಿ, ಸನಾತನ ಧರ್ಮಕ್ಕೆ, ಈ ಪ್ರಾಚೀನ ದೇಶಕ್ಕೆ ಅಪೂರ್ವ ಕೊಡುಗೆ ನೀಡಿ ಮರೆಯಾದ ಚೇತನ, ಪರಮಹಂಸ ಆದಿ ಶಂಕರರಿಗೆ ಪ್ರಣಾಮಗಳು.

ಸರ್ವರಿಗೂ ಶಂಕರ ಜಯಂತಿಯ ಶುಭಾಶಯ

            - ವಾಸುದೇವ ಬಿ. ಎಸ್, - ಭದ್ರಾವತಿ.
                       ( 9986407256 )

Leave a Reply

Your email address will not be published. Required fields are marked *

Translate »