ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ವಾದಿರಾಜ ಜಯಂತಿ

#ವಾದಿರಾಜ #ಜಯಂತಿ

ವಿಶ್ವತೋಮುಖಿ ವಾದಿರಾಜರು

  • ಡಾ. ಬನ್ನಂಜೆ ಗೋವಿಂದಾಚಾರ್ಯ!

ಶ್ರೀಮಧ್ವಾಚಾರ್ಯರ ಬಳಿಕ ತತ್ವವಾದದ ಪ್ರವರ್ತಕರಾಗಿ ಮೆರೆದು ಭಾರತದ ಭಕ್ತಿಪಂಥದ ಪರಂಪರೆಯಲ್ಲಿ ಎತ್ತರದ ಸ್ಥಾನ ಪಡೆದವರು ಶ್ರೀವಾದಿರಾಜರು. ಪರಮ ಧಾರ್ಮಿಕರಾಗಿ, ಸಾಮಾಜಿಕ ಸುಧಾರಕರಾಗಿ, ಐತಿಹಾಸಿಕ ಸಾಧಕರಾಗಿ ಬದುಕಿದ ಶ್ರೀವಾದಿರಾಜರ ಹೆಸರು ಉಡುಪಿಯ ಅಷ್ಟಮಠಗಳಲ್ಲೊಂದಾದ ಸೋದೆ ಮಠದೊಂದಿಗೇ ಒಂದಾಯಿತು. ಮಹಾನ್‌ಸಂತ ಶ್ರೀ ವಾದಿರಾಜರ ಸಾಧನೆಯನ್ನು ಸ್ಮರಿಸುವ ಲೇಖನವಿದು…

ವರ್ಷಗಳ ಕಾಲ ಈ ನೆಲದಲ್ಲಿ ನಡೆದಾಡಿ (ಕ್ರಿ.ಶ. ೧೪೮೦-೧೬೦೦) ಸ್ವೇಚ್ಛೆಯಿಂದ ದೇವಲೋಕಕ್ಕೆ ನಡೆದ ಮಹಾನ್‌ಯೋಗಿ, ಯೋಗಿಗಳ ರಾಜ ಶ್ರೀವಾದಿರಾಜರು.

ಆಚಾರ್ಯ ಮಧ್ವರಿಗೊಲಿದ ಕಡೆಗೋಲ ಕೃಷ್ಣ ನೆಲೆನಿಂತ ಉಡುಪಿಯ ಇತಿಹಾಸಕ್ಕೆ ಚಿನ್ನದ ಮೆರುಗನ್ನಿತ್ತವರು ಶ್ರೀ ವಾದಿರಾಜರು.

ಸಾಮಾಜಿಕ ಸುಧಾರಣೆಗಳ ಜತೆಗೆ ಅಧ್ಯಾತ್ಮದ ಬದುಕಿಗೊಂದು ಕಲಾತ್ಮಕತೆಯನ್ನಿತ್ತು ಲೌಕಿಕಕ್ಕೆ ಅಲೌಕಿಕದ ಬೆರಗನ್ನಿತ್ತವರು ಶ್ರೀವಾದಿರಾಜರು.

ಕನಕದಾಸರಿಗೊಲಿದು ಕೃಷ್ಣ ಅವರಿಗೆ ದರ್ಶನವಿತ್ತ ಗೋಡೆಯ ಬಿರುಕಿನಲ್ಲೆ ಕಿಂಡಿಯೊಂದನ್ನಿರಿಸಿ, ಅದನ್ನು “ಕನಕನ ಕಿಂಡಿ’ ಎಂದು ಕರೆದು, ಕೃಷ್ಣನ ಮೊದಲ “ಧೂಳಿ ದರ್ಶನ’ ಅದರ ಮೂಲಕವೆ ನಡೆಯಬೇಕು ಎಂಬ ಪದ್ಧತಿಯನ್ನು ಬಳಕೆಗೆ ತಂದು, ಕನಕ ಭಕ್ತಿಗೆ ಉಡುಪಿಯಲ್ಲೊಂದು ಐತಿಹಾಸಿಕ ದಾಖಲೆ ನಿರ್ಮಿಸಿದ ದೂರದರ್ಶಿ ಶ್ರೀವಾದಿರಾಜರು.

ಕನಕದಾಸರು ಕೃಷ್ಣನಿಗೆ ಗೆರಟೆಯಲ್ಲಿ ಅಂಬಲಿ ಅರ್ಪಿಸುತ್ತಿದ್ದರೆಂದು ಕೃಷ್ಣನ ನಿತ್ಯಪೂಜೆಯಲ್ಲಿ ಇಂದಿಗೂ “ಗೆರಟೆ ಗಂಜಿ’ ಸಮರ್ಪಣೆ ನಡೆಯುವಂತೆ ಏರ್ಪಡಿಸಿದ ಇತಿಹಾಸ ಪುರುಷ ಶ್ರೀವಾದಿರಾಜರು.

ವೇದಾಂತ ಸಾಮ್ರಾಜ್ಯದ ಸಂಕೇತವಾದ “ತೀರ್ಥ’ ಪದವನ್ನು ತೊರೆದು ಬರಿದೆ ಬಿಡಿ ಸಂನ್ಯಾಸಿಯಂತೆ “ವಾದಿರಾಜ’ರೆಂದೆ ಕರೆಸಿಕೊಂಡ ಮಹಾನ್‌ವಿರಕ್ತ ಶಿಖಾಮಣಿ ಶ್ರೀವಾದಿರಾಜರು.

ಹೂವಿನಕೆರೆಯಲ್ಲಿ ಅರಳಿ, ಜಗದಗಲಕ್ಕೆ ಕಂಪು ಬೀರಿದ ಬಂಗಾರದ ಹೂವು ಶ್ರೀವಾದಿರಾಜರು.
ದುಷ್ಟರಿಗೆ, ದುರಹಂಕಾರಿಗಳಿಗೆ ನಾಗರಹಾವು ಶ್ರೀವಾದಿರಾಜರು.

ಕನ್ನಡದಲ್ಲಿ ದೇವರ ನಾಮಗಳನ್ನು ಹೊಸೆದು ಮಡಿವಂತಿಕೆಯ ಬಾಯಲ್ಲಿ ಕನ್ನಡದ ಮಂತ್ರ ನುಡಿಸಿದವರು ಶ್ರೀವಾದಿರಾಜರು.

ಪ್ರತಿಯೊಂದು ಪೂಜೆಗೂ, ವೇದಮಂತ್ರಗಳ ಜತೆಗೆ, ಕನ್ನಡದ ಹಾಡುಗಳನ್ನು ಹೊಸೆದು, ಅದಕ್ಕೆ ಒಪ್ಪುವ ರಾಗಗಳನ್ನು ಬೆಸೆದು, ಅದನ್ನು ಹಾಡುವ ಭಾಗವತರ ಪರಂಪರೆಯನ್ನು ಹುಟ್ಟು ಹಾಕಿದವರು ಶ್ರೀವಾದಿರಾಜರು.

ಕೃಷ್ಣನ ಮುಂದೆ ತಾನೆ ಹಾಡುತ್ತ, ನಿರ್ಮಾಲ್ಯದ ತಟ್ಟೆ ತಲೆಯ ಮೇಲಿರಿಸಿ ನಾಟ್ಯವಾಡುವ ಪರಿಯನ್ನು ರೂಢಿಗೆ ತಂದ ಭಕ್ತ ಶಿರೋಮಣಿ ಶ್ರೀವಾದಿರಾಜರು.

ತತ್ವವಾದಿಗಳಿಗೆಲ್ಲ ರಾಜರಾಗಿ ಮೆರೆದವರು ಶ್ರೀವಾದಿರಾಜರು.

ಆದರೂ ಅವರು ತನ್ನ ಹೆಸರಿಗೆ ಹೊಸತೊಂದು ಅರ್ಥವನ್ನು ಹೇಳುತ್ತಾರೆ –

ವಾದೀ ಮಧೋ ಯಸ್ಯ ರಾಜಾ
ಸೋಽಹಂ ತಸ್ಯ ಕೃಪಾಬಲಾತ್‌|
ವಾದಿರಾಜೋ ನ ಸ್ವಶಕ್
ವೀಣೇವ ರಣಯಾಮಿ ತತ್‌||

(ಆಚಾರ್ಯ ಮಧ್ವರು ನಿಜವಾದ ವಾದಿಗಳು. ಅವರು ನನಗೆ ರಾಜ. ಅದಕೆಂದೆ ನಾನು ವಾದಿರಾಜ. ಇದು ಅವರ ಕೃಪೆಯ ಬಲ ಹೊರತು ನನ್ನ ಸ್ವಂತ ಸಾಮರ್ಥ್ಯವಲ್ಲ. ಅವರು ವೈಣಿಕ. ನಾನು ಅವರು ನುಡಿಸಿದಂತೆ ನುಡಿವ ವೀಣೆ.)

ವಿದ್ಯಾ ದದಾತಿ ವಿನಯಂ ಎಂಬ ಮಾತಿಗೆ ಬೇರೆ ನಿದರ್ಶನ ಬೇಕೆ? ದೊಡ್ಡವರ ಸೌಜನ್ಯಕ್ಕೆ ಸಾಟಿಯಿಲ್ಲ. ಸಣ್ಣವರು ದೊಡ್ಡಸ್ತಿಕೆಯ ನಾಟಕವಾಡುತ್ತಾರೆ. ದೊಡ್ಡವರು ಸಣ್ಣವರಿಗಿಂತ ಸಣ್ಣವರಾಗಿ, ಮಗುವಿಗಿಂತ ಮಗುವಾಗಿ ನಡೆದುಕೊಳ್ಳುತ್ತಾರೆ. ಈ “ಸಣ್ಣಸ್ತಿಕೆ’ಯೇ ದೊಡ್ಡಸ್ತಿಕೆಯ ದೊಡ್ಡ ಲಕ್ಷಣ.

ಧರ್ಮರಾಜನ ರಾಜಸೂಯದಲ್ಲಿ ಶ್ರೀಕೃಷ್ಣ , ಬಂದ ವಿಪ್ರರ ಕಾಲು ತೊಳೆಯುವ ಕಾಯಕಕ್ಕೆ ನಿಂತನಂತೆ. ಕೃಷ್ಣ ಭಕ್ತರಿಗೆ ಇದೊಂದು ಮಾದರಿ. ವಾದಿರಾಜರು ಇಂತ ಆದರ್ಶದ ಬದುಕನ್ನು ಬದುಕಿದವರು.

ಒಂಭತ್ತು ಶಿಷ್ಯರು

ಆಚಾರ್ಯ ಮಧ್ವರ ಪರಂಪರೆಯನ್ನು ಮುಂದುವರಿಸಿದವರು, ಸಂನ್ಯಾಸಿ ಶಿಷ್ಯರಲ್ಲಿ ಪ್ರಮುಖರಾದವರು ಒಂಭತ್ತು ಮಂದಿ. ನಮಗೆ ಈಗ ದೊರೆತ ಆಧಾರದಂತೆ ಈ ಯತಿಗಳ ಸಂನ್ಯಾಸ ಕ್ರಮ ಹೀಗಿದೆ-

೧. ಶ್ರೀ ಹೃಷಿಕೇಶ ತೀರ್ಥರು
೨. ಶ್ರೀ ಪದ್ಮನಾಭ ತೀರ್ಥರು
೩. ಶ್ರೀ ಜನಾರ್ದನ ತೀರ್ಥರು
೪. ಶ್ರೀ ನರಹರಿ (ನರಸಿಂಹ) ತೀರ್ಥರು
೫. ಶ್ರೀ ಉಪೇಂದ್ರ ತೀರ್ಥರು
೬. ಶ್ರೀ ವಾಮನ ತೀರ್ಥರು
೭. ಶ್ರೀ ವಿಷ್ಣು ತೀರ್ಥರು
೮. ಶ್ರೀ ರಾಮತೀರ್ಥರು
೯. ಶ್ರೀ ಅಧೋಕ್ಷಜ ತೀರ್ಥರು

ಈ ಕೆಳಗಿನ ಪದ್ಯ ಈ ಕ್ರಮಕ್ಕೆ ಪೂರಕವಾಗಿದೆ-

ರಘುಪೌ ಕಾಳಿಯಮಥನೌ
ಸುವಿಠಲೌ ಸೂಕರಂ ನೃಸಿಂಹಂ ಚ |
ಅನ್ಯಂ ವಿಠಲಮಗಣಿತ-
ಮತಿಶಿಷ್ಯೆಃ ಪೂಜಿತಾನ್‌ನಮಾಮಿ ಸದಾ ||

ಆಚಾರ್ಯ ಮಧ್ವರು ತನ್ನ ಒಂಭತ್ತು ಮಂದಿ ಸಂನ್ಯಾಸಿ ಶಿಷ್ಯರಿಗಿತ್ತ, ಆ ಶಿಷ್ಯರು ಪರಂಪರೆಯಿಂದ ಪೂಜಿಸುತ್ತ ಬಂದ ಒಂಭತ್ತು ಭಗವನ್ಮೂರ್ತಿಗಳಿಗೆ ನಮಸ್ಕಾರವಿರಲಿ ಎನ್ನುತ್ತದೆ ಈ ಪದ್ಯ.

ಇದರಂತೆ ಅರ್ಚಾಮೂರ್ತಿಯನ್ನಿತ್ತ ಕ್ರಮ ಹೀಗಿದೆ-

ಶ್ರೀ ಹೃಷಿಕೇಶತೀರ್ಥ ಮತ್ತು ಪದ್ಮನಾಭ ತೀರ್ಥರಿಗೆ ರಘುಪತಿ ರಾಮ.
ಶ್ರೀ ಜನಾರ್ದನ ತೀರ್ಥ ಮತ್ತು ನರಹರಿ ತೀರ್ಥರಿಗೆ ಕಾಳಿಯಮಥನ ಕೃಷ್ಣ.
ಶ್ರೀ ಉಪೇಂದ್ರ ತೀರ್ಥ ಮತ್ತು ವಾಮನ ತೀರ್ಥರಿಗೆ ವಿಟೌಲ ಕೃಷ್ಣ.
ಶ್ರೀ ವಿಷ್ಣು ತೀರ್ಥರಿಗೆ ವರಾಹ.
ಶ್ರೀ ರಾಮತೀರ್ಥರಿಗೆ ನರಸಿಂಹ.
ಕೊನೆಯ ಶಿಷ್ಯ ಶ್ರೀ ಅಧೋಕ್ಷಜ ತೀರ್ಥರಿಗೆ ಪುನಃ ವಿಠಲ ಕೃಷ್ಣ .

ಈ ಒಂಭತ್ತು ಮಂದಿ ಸಂನ್ಯಾಸಿ ಶಿಷ್ಯರಲ್ಲಿ ಶ್ರೀ ಪದ್ಮನಾಭ ತೀರ್ಥರು ಘಟ್ಟದ ಮೇಲೆ ತತ್ವ ಪ್ರಸಾರಕ್ಕೆ ನಿಂತರು. ಉಳಿದ ಎಂಟು ಮಂದಿ ತೌಳವ ಮಂಡಲದಲ್ಲಿ ನೆಲೆ ನಿಂತರು. ಈ ಎಂಟು ಮಂದಿಯಲ್ಲಿ ಜನಾರ್ದನ ತೀರ್ಥರಿಗೆ ನರಹರಿ ತೀರ್ಥರಿಗಿಂತ ಮೊದಲು ಸಂನ್ಯಾಸವಾಗಿದ್ದರೂ ವೇದಾಂತ ಸಾಮ್ರಾಜ್ಯದಲ್ಲಿ ಮೊದಲು ನರಹರಿ ತೀರ್ಥರಿಗೆ ಪಟ್ಟಾಭಿಷೇಕವಾದಂತಿದೆ. ಹೀಗಾಗಿ, ಅಷ್ಟ ಮಠಗಳ ಅನುಕ್ರಮ ಹೀಗಾಯಿತು-

  ಯಜ್ಞ ಎಂದರೇನು?

೧. ಶ್ರೀಹೃಷಿಕೇಶ ತೀರ್ಥರು
೨. ನರಹರಿ (ನರಸಿಂಹ) ತೀರ್ಥರು
೩. ಜನಾರ್ದನ ತೀರ್ಥರು
೪. ಉಪೇಂದ್ರ ತೀರ್ಥರು
೫. ವಾಮನ ತೀರ್ಥರು
೬. ವಿಷ್ಣು ತೀರ್ಥರು
೭. ರಾಮ ತೀರ್ಥರು
೮. ಅಧೋಕ್ಷಜ ತೀರ್ಥರು

ನರಹರಿ ತೀರ್ಥರನ್ನು ನಾರಾಯಣ ಪಂಡಿತರು ಮಧ್ವ ವಿಜಯದಲ್ಲಿ “ನರಸಿಂಹ ಪದಾಧಾರಾಃ’ ಎಂದು ಬಣ್ಣಿಸಿದ್ದರಿಂದ ಮುಂದೆ ಅವರು ನರಸಿಂಹ ತೀರ್ಥರೆಂದೆ ಖ್ಯಾತರಾದರು.

ಈ ನರಹರಿ ತೀರ್ಥರು ಉಡುಪಿಯಲ್ಲಿದ್ದು , ಆಚಾರ್ಯ ಮಧ್ವರ ಮಾರ್ಗದರ್ಶನದಲ್ಲಿ ಯಕ್ಷಗಾನದಿ – ಬಯಲಾಟದ ಕಲಾ ಪ್ರಕಾರವನ್ನು ಬಳಕೆಗೆ ತಂದರು. ಇದೇ ಮುಂದೆ ಆಂಧ್ರದಲ್ಲಿ “ಕೂಚಿಪುಡಿ’ಯಾಗಿ ಬೆಳೆದು ಬಂದು, ಮೂಲತಃ ಆಂಧ್ರದವರಾದ ಶ್ರೀ ನರಹರಿ ತೀರ್ಥರು ಅನಂತರ ಪದ್ಮನಾಭ ತೀರ್ಥರ ಪರಂಪರೆಯನ್ನು ಮುಂದುವರಿಸಿದರು.

ಕೆಳಗಿನ ಪದ್ಯ ಈ ಅನುಕ್ರಮವನ್ನು ನಿರೂಪಿಸುತ್ತದೆ-

ವಂದೇ ಹೃಷೀಕೇಶಮಥೋ ನೃಸಿಂಹಂ
ಜನಾರ್ದನಂ ಚಿಂತಯ ಧೀರುಪೇಂದ್ರಮ್‌|
ಶ್ರೀ ವಾಮನಂ ಸಂಸ್ಮರ ವಿಷ್ಣುಮೇಮಿ
ಶ್ರೀರಾಮಮಂಚೇ-ಹಮಧೋಕ್ಷಜಂ ಚ ||

ಆಚಾರ್ಯರು ಇವರಿಗಿತ್ತ ಅರ್ಚಾಮೂರ್ತಿಗಳಲ್ಲು ಒಂದು ವೈಶಿಷ್ಟವಿದೆ. ಓಂಕಾರದ ನಾಕು ಅಕ್ಷರಗಳಿಗೆ (ಅಕಾರ, ಉಕಾರ, ಮಕಾರ, ನಾದ) ನಾಕು ಭಗವದ್ರೂಪಗಳು: ಕೃಷ್ಣ , ರಾಮ, ನರಸಿಂಹ ಮತ್ತು ವರಾಹ. ಜಯ-ವಿಜಯರ ಶಾಪಮೋಕ್ಷಕ್ಕಾಗಿ ಬಂದ ಭಗವದ್ರೂಪಗಳು. ಇವೇ ಓಂಕಾರೋಪಾಸಕರಾದ ಸಂನ್ಯಾಸಿಗಳಿಗೆ ಮುಖ್ಯ ಉಪಾಸ್ಯರೂಪಗಳು. ಅಕಾರೋಪಾಸಕರಿಗೆ ಕೃಷ್ಣರೂಪ (ಕಾಳಿಯ ಮಥನ ಮತ್ತು ವಿಠಲ), ಉಕಾರೋಪಾಸಕರಿಗೆ ರಾಮ, ಮಕಾರೋಪಾಸಕರಿಗೆ ನರಸಿಂಹ ಮತ್ತು ಓಂಕಾರದ ಉಪಾಸನೆಯಲ್ಲೆ ಸರ್ವೋತ್ಕೃಷ್ಟವಾದ ನಾದದ ಉಪಾಸಕರಿಗೆ ವರಾಹ.

ಹೀಗೆ, ಆಶ್ರಮದ ಅನುಕ್ರಮದಲ್ಲಿ ಆಚಾರ್ಯ ಮಧ್ವರ ಶಿಷ್ಯರಲ್ಲಿ ಮೊದಲಿಗರು ಉಕಾರವೇದ್ಯ ರಾಮೋಪಾಸಕರಾದ ಹೃಷೀಕೇಶ ತೀರ್ಥರು. ಯೋಗ್ಯತೆಯಲ್ಲಿ ಮೊದಲಿಗರು ನಾದವೇದ್ಯ ವರಾಹೋಪಾಸಕರಾದ ವಿಷ್ಣುತೀರ್ಥರು. ಅವರೇ ಶ್ರೀ ಸೋದೇ ಮಠದ ಮೂಲ ಯತಿಗಳು. ಆಚಾರ್ಯರ ತಮ್ಮನಾಗಿ ಜನಿಸಿದ ಮಹಾಭಾಗ್ಯಶಾಲಿಗಳು.

ಅಂದಿನಿಂದ ಸೋದೆ ಮಠದ ಪರಂಪರೆಯ ೨೦ನೆಯ ಯತಿಗಳಾದ ಶ್ರೀವಾದಿರಾಜರ ತನಕ ಶ್ರೀಕೃಷ್ಣನಿಗೆ ಎರಡು ತಿಂಗಳ ಪೂಜಾ ಪದ್ಧತಿ ಬಳಕೆಯಲ್ಲಿತ್ತು. ಶ್ರೀವಾದಿರಾಜರು ಎರಡು ವರ್ಷಗಳ ಪೂಜಾ ಪದ್ಧತಿಯನ್ನು ಆಚರಣೆಗೆ ತಂದು ಪರ್ಯಾಯ ಮಹೋತ್ಸವಕ್ಕೆ ದೇಶವ್ಯಾಪಿ ಮೆರಗು ನೀಡಿದರು.

ಸೋದೆ ಮಠದ ಮೊದಲ ಪರ್ಯಾಯ

ಆದರೆ ಶ್ರೀವಾದಿರಾಜರು ತಾನೇ ಮೊದಲು ಪರ್ಯಾಯ ಪೀಠವನ್ನೇರಲಿಲ್ಲ. ಮೂಲ ಯತಿಗಳ ಜ್ಯೇಷ್ಠತೆಯ ಅನುಕ್ರಮಕ್ಕೆ ಅನುಗುಣವಾಗಿ ಪರ್ಯಾಯ ಕ್ರಮವನ್ನೇರ್ಪಡಿಸಿದರು. ಹೀಗಾಗಿ, ಪರ್ಯಾಯ ಚಕ್ರ ಪ್ರಾರಂಭವಾದದ್ದು ಫ‌ಲಿಮಾರು ಮಠದಿಂದ, ಕ್ರಿ.ಶ. ೧೫೨೨ರಲ್ಲಿ. ಅನಂತರ ಕ್ರಮಶಃ ಆರನೆಯವರಾಗಿ, ಶ್ರೀವಾದಿರಾಜರು ೧೫೩೨ರಲ್ಲಿ ತನ್ನ ಮೊದಲ ಪರ್ಯಾಯ ಮಹೋತ್ಸವವನ್ನಾಚರಿಸಿದರು. ಆಗ ಅವರಿಗೆ ೫೨ರ ಹರಯ.

೧೫೮೦ರಲ್ಲಿ ಅವರ ನಾಲ್ಕನೆಯ ಮತ್ತು ಕೊನೆಯ ಪರ್ಯಾಯ. ಅದು ಅವರ ಶತಮಾನೋತ್ಸವದ ಅಪೂರ್ವ ಪರ್ಯಾಯ ಕೂಡ. ನೂರು ತುಂಬಿದ ವಾದಿರಾಜರು ಕೃಷ್ಣನನ್ನು ಪೂಜಿಸುತ್ತ ಬೇಡಿಕೊಂಡ ಬಗೆ ಅನನ್ಯವಾದದ್ದು-

ಮಧ್ವಪ್ರತಿಷ್ಠಿತಂ ತ್ವಾಂ
ವಿಧ್ವಸ್ತಾಶೇಷಕುಜನಕುಲಮ್‌|
ಮೂಧಾ ಪ್ರಣಮ್ಯ ಯಾಚೇ
ತದ್‌ವಿರಚಯ ಯದ್ಧಿತಂ ಮಮಾದ್ಯ ಹರೇ ||

(ಮಧ್ವರಿಂದ ಪ್ರತಿಷ್ಠೆಗೊಂಡ ನಿನ್ನನ್ನು , ದುರ್ಜನರ ತಳಿಯನ್ನು ನಿಃಶೇಷವಾಗಿ ತರಿದ ನಿನ್ನನ್ನು , ತಲೆಬಾಗಿ ಮಣಿದು ಬೇಡಿಕೊಳ್ಳುತ್ತೇನೆ. ಓ ಶ್ರೀಹರಿಯೆ, ನನಗೆ ಯಾವುದು ಹಿತವೊ ಅದನ್ನು ಕರುಣಿಸು.)

ನಿಷ್ಕಾಮರಾದ ಏಕಾಂತ ಭಕ್ತರು ಭಗವಂತನನ್ನು ಬೇಡುವ ಪರಿ ಇದು. ಇದು ಪ್ರಹ್ಲಾದ ಭಕ್ತಿ. ಭಗವಂತನಿಂದ ಐಹಿಕವಾದ ಏನನ್ನೂ ಬಯಸದ ನಿವ್ಯಾಜ ಭಕ್ತಿ.

ವಾದಿರಾಜರ ಶಿಷ್ಯ ವಾತ್ಸಲ್ಯವೂ ದೊಡ್ಡದು. ೧೫೯೬ರಲ್ಲಿ ಅವರ ೧೧೬ನೆಯ ವಯಸ್ಸಿನಲ್ಲಿ ಬಂದ ಐದನೆಯ ಪರ್ಯಾಯವನ್ನು ಆಗಲೆ ಮುಪ್ಪಿಗೆ ಹತ್ತಿರವಾದ ತನ್ನ ಶಿಷ್ಯನಿಂದ ಮಾಡಿಸಿ ತಾನು ಸೋದೆಯಲ್ಲಿ ನಿಂತರು.

ಲೋಕೋತ್ತರ ಚರಿತರು

ವಾದಿರಾಜರ ವರ್ಣಮಯ ವ್ಯಕ್ತಿತ್ವ ಲೋಕೋತ್ತರವಾದದ್ದು. ಅವರು ಅನನ್ಯ ಸಮಾಜ ಸುಧಾರಕರು. ಅದ್ವಿತೀಯ ವಾಗ್ಮಿಗಳು. ಅದ್ಭುತ ಗ್ರಂಥಕಾರರು. ತುಳುನಾಡಿನ ಯತಿಗಳ ಪರಂಪರೆಯಲ್ಲಿ , ಕನ್ನಡ ಮತ್ತು ತುಳು ಭಾಷೆಗಳಲ್ಲಿ ಹಾಡುಗಳನ್ನು ಹೊಸೆದ ವಾಗ್ಗೇಯಕಾರರು. ವ್ಯಾಸಪಂಥ, ದಾಸಪಂಥ ಎರಡರಲ್ಲು ಆಚಾರ್ಯ ಪುರುಷರಾಗಿ ನಿಂತವರು. ಕನಕದಾಸರಂಥ ಹಿರಿಯ ಚೇತನವನ್ನು ಗುರುತಿಸಿ ಉಡುಪಿಯಲ್ಲಿ ಅವರಿಗೆ ನೆಲೆಯಿತ್ತು ಮನ್ನಣೆಯ ಮಣೆಯನ್ನಿತ್ತವರು.

ಶಾಸ್ತ್ರದಲ್ಲೂ , ಕಾವ್ಯದಲ್ಲೂ ಸವ್ಯಸಾಚಿಗಳಾದ ಅಪೂರ್ವ ಕವಿಮನೀಷಿಗಳು. ತುಳುನಾಡಿನಲ್ಲಿ ಇಬ್ಬರು ಮೊದಲ ಗೃಹಸ್ಥ ಕವಿಗಳು: ಶ್ರೀತ್ರಿವಿಕ್ರಮ ಪಂಡಿತರು ಮತ್ತು ನಾರಾಯಣ ಪಂಡಿತರು. ಇಬ್ಬರು ಮೊದಲ ಸಂನ್ಯಾಸಿ ಕವಿಗಳು ಶ್ರೀ ರಾಜರಾಜೇಶ್ವರರು ಮತ್ತು ಶ್ರೀವಾದಿರಾಜರು. (ಅನಂತರ ಸುಭದ್ರಾಹರಣವೆಂಬ ಮಹಾಕಾವ್ಯವೂ ಸೋದೆ ಮಠದ ಪರಂಪರೆಯಿಂದಲೇ ಬಂತು.)

ವಾದಿರಾಜರ ಕಾವ್ಯ ಶಾಸ್ತ್ರಮಯ ಮತ್ತು ಶಾಸ್ತ್ರ ಕಾವ್ಯಮಯ. ಸಂಸ್ಕೃತದಲ್ಲಿ ಮೊದಲ ಪ್ರವಾಸ ಸಾಹಿತ್ಯ ವೆಂಕಟಾಧ್ವರಿಯ ವಿಶ್ವಗುಣಾದರ್ಶ ಚಂಪೂ. ಎರಡನೆಯದು ಶ್ರೀವಾದಿರಾಜರ ತೀರ್ಥ ಪ್ರಬಂಧ. ಮೇರುಕೃತಿ: ಯುಕ್ತಿಮಲ್ಲಿಕೆ ಅವರ ಯುಕ್ತಿ ಮಲ್ಲಿಕೆ ವೇದಾಂತ ಪ್ರಪಂಚದಲ್ಲೆ ಸಾಟಿಯಿಲ್ಲದ ಮೇರು ಕೃತಿ. ಆದರೂ ಕಾವ್ಯಮಯವಾದ ಸುಂದರ ಪದ್ಯಗಳ ದಿವ್ಯ ಪ್ರಪಂಚ.

  ಸಂಕಷ್ಟಹರ ಚತುರ್ಥಿ

ಅದರ ಹಿರಿಮೆಯನ್ನರಿಯದೆ ಕೀಳು ದರ್ಜೆಯ ಇತರ ಕೃತಿಗಳ ಜತೆಗೆ ಅದನ್ನು ಹೋಲಿಸಿ ನೋಡುವ ಪಂಡಿತಂಮನ್ಯರನ್ನು ಅವರು ಹೀಗೆ ಗೇಲಿಮಾಡುತ್ತಾರೆ-

ತುಲಯಾ ಮಲಯಾದ್ರುತ್ಥ
ಚಂದನೇನೇಂಧನಂ ಖಲಃ |
ಸಮಂ ಸಮಂತಾತ್‌ಕುರುತೇ
ಗ್ರಂಥೌ ಗಂಧಂ ಕರೋತಿ ಕಃ ||

(ಮಲಯಗಿರಿಯಲ್ಲಿ ಬೆಳೆದ ಗಂಧದ ಕೊರಡನ್ನು ಕಟ್ಟಿಗೆಯ ತುಂಡಿನೊಡನೆ ಒಂದೇ ತಟ್ಟೆಯಲ್ಲಿಟ್ಟು ತೂಗುವ ತಿಳಿಗೇಡಿಯಿರಬಹುದು. ಆದರೆ ಕಟ್ಟಿಗೆಯ ತುಂಡಿನಲ್ಲಿ ಕಂಪು ಎಲ್ಲಿಂದ ಬರಬೇಕು?)

ತನ್ನ ಕೃತಿ ಗಂಧದ ಕೊರಡಿನಂತೆ ಕಂಪು ನೀಡುವಂಥದು. ಇತರ ಬರಡು ಗ್ರಂಥಗಳು ಅದರ ಮುಂದೆ ತಲೆಯೆತ್ತಿ ನಿಲ್ಲಬಲ್ಲವೆ ಎಂದು ಕೇಳುವ ಶ್ರೀ ವಾದಿರಾಜರ ಆತ್ಮವಿಶ್ವಾಸದ ಈ ನುಡಿ ಅದ್ಭುತವಾದದ್ದು. ಇದಕ್ಕೆ ವಿರುದ್ಧವಾಗಿ ತನ್ನ ಕೃತಿಯ ಬಗ್ಗೆ ತನಗೆ ಆತ್ಮವಿಶ್ವಾಸವಿಲ್ಲ ಎಂದು ಮಹಾಕವಿ ಕಾಳಿದಾಸ ಅಳುಕುತ್ತಾನೆ: “ಆತ್ಮನ್ಯಪ್ರತ್ಯಯಂ ಚೇತಃ’.

ಒಮ್ಮೆ ವಾದಿರಾಜರು ಯಾತ್ರೆ ಮಾಡುತ್ತ ಒಂದು ರಾಜ್ಯದಲ್ಲಿ ತಂಗಿದರು. ಅಲ್ಲಿಯ ದೊರೆ ಕುಹಕಿಗಳ ಪಿತೂರಿಗೆ ಬಲಿಯಾಗಿ ವಾದಿರಾಜರನ್ನು ಸ್ವಾಗತಿಸಿ ಅರಮನೆಗೆ ಕರೆದು ಸತ್ಕರಿಸಲಿಲ್ಲ. ಆ ದುರ್ದೈವಿ ದೊರೆಯ ಬಗೆಗೆ ವಾದಿರಾಜರ ಚಾಟಿಯೇಟಿನಂಥ ಮಾತು ಮರೆಯಲಾಗದ್ದು –

ತಾರ್ಣೇ ವೌಕಸಿ ಪಾರ್ಣೇವಾ
ತಾಪಸೋ ಭೂಪ ಸೋ-ವಸತ್‌|
ತಿಥೌ ತೇ-ತಿಥಿರೇತದ್ವದ್‌
ವಿದ್ವಾನ್‌ಕ್ವಾಗಣ್ಯಪುಣ್ಯದಃ ||

(ಅಯ್ನಾ ದೊರೆ, ಆ ತಪಸ್ವಿ ಯತಿ ಹುಲ್ಲ ಜೋಪಡಿಯಲ್ಲೋ ಎಲೆಮನೆಯಲ್ಲೋ ಹಾಯಾಗಿ ನೆಲಸಿದನು. ನಿನ್ನ ಅನಾದರದಿಂದ ಅವನಿಗೇನೂ ತೊಂದರೆಯಾಗಲಿಲ್ಲ. ಆದರೆ ಇಂಥ ಪುಣ್ಯತಿಥಿಯಲ್ಲಿ , ಎಣೆಯಿರದಷ್ಟು ಪುಣ್ಯ ಕಟ್ಟಿಕೊಡಬಲ್ಲ ವಿದ್ವಾಂಸರಾದ ಇಂಥ ಅತಿಥಿಯನ್ನು ಸತ್ಕರಿಸುವ ಭಾಗ್ಯ ಇನ್ನೆಲ್ಲಿ ನಿನಗೆ?)

ಕಳೆದುಕೊಂಡೆಯಲ್ಲೋ ಬದುಕಿನಲ್ಲೊಂದು ಅಪೂರ್ವ ಅವಕಾಶವನ್ನು? ಮುಚ್ಚಿಬಿಟ್ಟೆಯಲ್ಲೋ ಶಾಶ್ವತವಾಗಿ ಭಾಗ್ಯದ ಬಾಗಿಲನ್ನು?- ಹೀಗೆ ಹಂಗಿಸುತ್ತಾರೆ ವಾದಿರಾಜರು ಕುರುಡು ಕಾಂಚಾಣದ ಮದದಿಂದ ಕುರುಡಾದ ಮಂದಿಯನ್ನು ! ಅವರ ಈ ಸಾತ್ವಿಕ ಕ್ರೋಧದ ಹಿಂದೆ ಮಡುಗಟ್ಟಿರುವ ಅಪಾರ ಕಾರುಣ್ಯವನ್ನು ಗುರುತಿಸಬೇಕು. ಇದು ತಾಯಿ ಮಕ್ಕಳನ್ನು ಗದರುವ ಧಾಟಿ.

ಶಾಸ್ತ್ರದ ಸವಿಯನ್ನು ಒಮ್ಮೆಲೆ ಸವಿಯಲಾಗದ ಮುಗ್ಧರನ್ನು ವಾದಿರಾಜರು ಹೀಗೆ ಸಂತೈಸುತ್ತಾರೆ-

ಅಧುನಾ ವಿಧುನಾ ರುದ್ಧಂ
ಮಧು ನಾ-ಸೀನ್ಮಧುವ್ರತ |
ಉದಿತೇ ಮುದಿತೇ-ಬೆಜ್ ಸ್ಯಾತ್‌
ಅದಿತೇರ್ವಿದಿತೇ ಸುತೇ ||

(ಎಲೆ ಜೇನರಸುವ ದುಂಬಿಯೆ, ಈಗ ಇರುಳಾಯಿತು. ಚಂದ್ರನಿಂದಾಗಿ ತಾವರೆ ಮುದುಡಿತು. ನಿನಗೀಗ ಜೇನು ಸಿಗಲಿಕ್ಕಿಲ್ಲ. ನಿರಾಶೆ ಬೇಡ. ಅದಿತಿಯ ಹೆಸರಾಂತ ಮಗ, ಆದಿತ್ಯ ಮೂಡಿಬರಲಿದ್ದಾನೆ. ಆಗ ತಾವರೆ ಅರಳುತ್ತದೆ. ಆಗ ನೀನು ಅದರ ಜೇನನ್ನು ಸವಿಯಬಲ್ಲೆ.)

ಇದು ವಾದಿರಾಜರ ಮಾತಿನ ಮೋಡಿ. ಶಬ್ದಗಳು ಅವರ ಮುಂದೆ ಕುಣಿಯುತ್ತವೆ. ಅವರ ನಾಲಿಗೆಯ ರಂಗಸ್ಥಳದಲ್ಲಿ ವಾಗೆವಿ ನಲಿಯುತ್ತಾಳೆ. ಅರ್ಥಗಳು ನುಡಿಯ ಬೆನ್ನುಹತ್ತುತ್ತವೆ. ಭವಭೂತಿ ನುಡಿದಂತೆ “ವಾಚಮಥೋ-ನುಧಾವತಿ’, ಮಾತೆಲ್ಲ ಜ್ಯೋತಿಯಾಗಿ ಬೆಳಗುತ್ತದೆ.

ಅಧ್ಯಾತ್ಮದ ಸಿರಿ ಸೊಬಗುಳ್ಳ
ಸಾಹಿತ್ಯದ ಬರಿ ಬೆರಗುಳ್ಳ
ವಾದಿರಾಜರ ಮಾತು ರಸಗುಲ್ಲ
ಯೋಗ ಸಿದ್ಧರ ಪ್ರತಿಷ್ಠೆ

ಈ ಸಂದರ್ಭದಲ್ಲಿ ಒಂದು ಸಂಗತಿ ನೆನಪಾಗುತ್ತಿದೆ – ಶ್ರೀಕೃಷ್ಣನ ಸನ್ನಿಧಿಯಲ್ಲಿ ಮುಖ್ಯಪ್ರಾಣನ ಪ್ರತಿಮೆಯನ್ನು ಸ್ಥಾಪಿಸಿದವರು ಶ್ರೀವಾದಿರಾಜರು. ಶಿಥಿಲವಾದ ಅದರ ಗುಡಿಯನ್ನು ಜೀರ್ಣೋದ್ಧಾರಗೊಳಿಸುವ ಎತ್ತುಗಡೆ ನಡೆದಿತ್ತು – ನಾಕು ದಶಕಗಳ ಹಿಂದೆ.

ಅದಕ್ಕಾಗಿ ಮುಖ್ಯಪ್ರಾಣನ ವಿಗ್ರಹವನ್ನು ಸ್ಥಳಾಂತರಗೊಳಿಸಬೇಕು. ಎಲ್ಲ ಯತಿಗಳೂ ಸೇರಿ ಅಷ್ಟಮಂಗಲ ಪ್ರಶ್ನೆಯಿರಿಸಿದರು. ನಾನೂ ಅಲ್ಲಿದ್ದೆ. ಆಗ ಜ್ಯೋತಿಷಿ ಪುದುವಾಳರು ನುಡಿದ ಮಾತು ಈಗಲೂ ನನ್ನ ಕಿವಿಯಲ್ಲಿ ಗುನುಗುತ್ತಿದೆ. “ಇದನ್ನು ಚಲನೆಗೊಳಿಸಿ ಮತ್ತೆ ಪ್ರತಿಷ್ಠೆ ಮಾಡಿದರೆ ಹಿಂದಿನ ಸನ್ನಿಧಾನ ಮತ್ತೆ ಬರದು’.

ಆಗ ಒಂದು ಪ್ರಶ್ನೆ ಬಂತು. ಎಲ್ಲ ಕಡೆಯೂ ಜೀರ್ಣೋದ್ಧಾರ ಮಾಡುವಾಗ ಪ್ರತಿಮೆಯ ಸ್ಥಳಾಂತರ ಸಹಜಕ್ರಿಯೆ ಇಲ್ಲಿ ಮಾತ್ರ ಏಕೆ ಸಲ್ಲದು?

ಅದಕ್ಕೆ ಪುದುವಾಳರು ಶ್ಲೋಕಾಧಾರ ಸಹಿತ ನೀಡಿದ ಉತ್ತರ: “ಇದು ಎಲ್ಲ ವಿಗ್ರಹಗಳಂತಲ್ಲ. ಇದನ್ನು ಸ್ಥಾಪಿಸಿದವರು ಯೋಗ ಸಿದ್ಧರು. ಮತ್ತೆ ಅಂಥದೇ ಸನ್ನಿಧಾನ ಬರಬೇಕಾದರೆ ಪುನಃಪ್ರತಿಷ್ಠೆ ಮಾಡುವವರೂ ಹಾಗೆಯೇ ಯೋಗಸಿದ್ಧರಿರಬೇಕು. ಆದರೆ ಅಂಥ ಯೋಗಸಿದ್ಧರು ಈಗ ಯಾರೂ ಕಾಣಿಸುತ್ತಿಲ್ಲ’.

ಅನಂತರ ಜೀರ್ಣೋದ್ಧಾರದ ಯೋಜನೆಯನ್ನೆ ಕೈಬಿಡಲಾಯಿತು. ಆ ಶಿಥಿಲವಾದ ಹಳೆಯ ಗರ್ಭಗುಡಿಯಲ್ಲೆ ಮುಖ್ಯಪ್ರಾಣ ಪೂಜೆಗೊಳ್ಳುತ್ತಿದ್ದಾನೆ. ಶ್ರೀವಾದಿರಾಜರ ಯೋಗ ಮಹಿಮೆಗೆ ಇದೊಂದು ಅರ್ವಾಚೀನ ಪುರಾವೆ. ಅದಕೆಂದೆ ಭಾವುಕರು ವಾದಿರಾಜರನ್ನು ಗುರುರಾಜರೆಂದು ಕರೆದರು; ಗುರುಸಾರ್ವಭೌಮರೆಂದು ಕೊಂಡಾಡಿದರು.

ವಾದಿರಾಜಯತಿರಾಜರಿಗುಳ್ಳ
ಯೋಗಸಿದ್ಧಿ – ಸಮೃದ್ಧಿಯ ಬಳ್ಳ
ಯಾರಿಗು ಅಳೆವುದಕಳವಲ್ಲ

ವೃಂದಾವನಾಚಾರ್ಯರು

ವಾದಿರಾಜರ ಅನುಗ್ರಹಕ್ಕೆ ಪಾತ್ರರಾದ ಇನ್ನೊಬ್ಬ ಮಹಾನ್‌ಯತಿಗಳು ಸೋದೆಮಠದ ಪರಂಪರೆಯಲ್ಲೆ ಬಂದ ವೃಂದಾವನಾಚಾರ್ಯರು. ಈಗಣ ಯತಿಗಳಿಗಿಂತ ಐದು ತಲೆ ಹಿಂದಿನವರು. ಇವರ ನಿಜನಾಮಧೇಯ ವಿಶ್ವಪ್ರಿಯ ತೀರ್ಥರು. ವಾದಿರಾಜರ ವೃಂದಾವನದ ಮುಂದೆಯೆ ಇವರು ಸ್ವಯಂ ಶಾಸ್ತ್ರಾಧ್ಯಯನ ಮಾಡಿ ಮಹಾನ್‌ವಿದ್ವಾಂಸರಾದರು. ಅದಕ್ಕೆಂದೆ ವೃಂದಾವನಾಚಾರ್ಯರೆಂದೇ ಖ್ಯಾತರಾದರು. ವೃಂದಾವನವೆ ಇವರಿಗೆ ಶಾಸ್ತ್ರರಹಸ್ಯವನ್ನರುಹಿದ ಆಚಾರ್ಯ. ಇವರು ವಾದಿರಾಜರ ಅನುಗ್ರಹದಿಂದ ಯೋಗಸಿದ್ಧರೂ ಆಗಿದ್ದರು.

ಅವರ ಶಿಷ್ಯರೊಬ್ಬರು ಅವರ ಜೀವನ ಚರಿತ್ರೆಯನ್ನು ಬರೆದಿದ್ದಾರೆ: ವಿಶ್ವಪ್ರಿಯತೀರ್ಥವಿಲಾಸ. ಅವರ ಬದುಕಿನ ಅನೇಕ ಪವಾಡಗಳನ್ನು ಅದರಲ್ಲಿ ದಾಖಲಿಸಿದ್ದಾರೆ.

  ಗಣೇಶನಿಗೆ ವಿಶೇಷವಾಗಿ ಗರಿಕೆಯನ್ನು ಏಕೆ ಅರ್ಪಿಸಲಾಗುತ್ತದೆ …?

ವೃಂದಾವನಾಚಾರ್ಯರು ಕೊಚ್ಚಿಯ ರಾಜಮನೆತನದವರ ಜತೆ ವಾದ ಮಾಡಿ ವಿಜಯ ಪತಾಕೆ ಹಾರಿಸಿದರು ಇವರ ಪಾಂಡಿತ್ಯದಿಂದ. ಅದಕ್ಕಿಂತ ಹೆಚ್ಚಾಗಿ ಇವರ ಯೋಗಸಿದ್ಧಿಯಿಂದ ಪ್ರಭಾವಿತರಾದ ಆ ರಾಜಮನೆತನದವರು ಇವರಿಂದ ಮಾಧ್ವ ದೀಕ್ಷೆ ಪಡೆದರು. ಆದರೆ, ಆ ಸಂಪರ್ಕ ಮುಂದುವರಿಯಲಿಲ್ಲ ಎನ್ನುವುದು ದುರ್ದೈವದ ಸಂಗತಿ.

ವಿಶ್ವೋತ್ತಮರು

ಈಗಣ ಯತಿಗಳ ಸಾಕ್ಷಾದ್‌ಗುರುಗಳಾದ ಶ್ರೀ ವಿಶ್ವೋತ್ತಮ ತೀರ್ಥರು ಸಾತ್ವಿಕತೆಯ ಸಾಕಾರಮೂರ್ತಿಯಾಗಿದ್ದರು. ನನ್ನ ವೈಯಕ್ತಿಕ ಅನುಭವವೊಂದನ್ನು ಇಲ್ಲಿ ಉಲ್ಲೇಖೀಸಬೇಕು.

ಒಂದು ಪ್ರಸಂಗದಲ್ಲಿ , ವಿಶ್ವೋತ್ತಮ ತೀರ್ಥರ ನಿಲುವಿಗೆ ವಿರುದ್ಧವಾಗಿ ನಾನು ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದೆ. ನನ್ನ ನಿಲುವಿಗೆ ಕೋರ್ಟಿನಲ್ಲಿ ಜಯ ಸಿಕ್ಕಿತು. ಅನಂತರ ಬಹಳ ಕಾಲ ನಾನು ವಿಶ್ವೋತ್ತಮರನ್ನು ಭೇಟಿಯಾಗಲಿಲ್ಲ – ನನ್ನ ನಿಲುವಿನಿಂದ ಅವರಿಗೆ ನೋವಾಗಿರಬಹುದು ಎಂದು ಭಾವಿಸಿ.

ಒಮ್ಮೆ ಅವರಿಂದಲೇ ಅನಿರೀಕ್ಷಿತವಾಗಿ ಕರೆ ಬಂತು. “ತಕ್ಷಣ ಭೇಟಿಯಾಗಬೇಕು’ ಎಂದು ಹೇಳಿ ಕಳಿಸಿದರು. ನಾನು ಮಠಕ್ಕೆ ಹೋದೆ. ಅವರು ಕೇಳಿದ ಮೊದಲ ಪ್ರಶ್ನೆ: “ಏಕೆ ಮಠಕ್ಕೆ ಬರುವುದನ್ನು ಬಿಟ್ಟಿರಿ? ನಿಮ್ಮಂಥ ವಿದ್ವಾಂಸರು ದೂರ ನಿಂತರೆ ಈ ಮಠಗಳು ಇರುವುದಕ್ಕೆ ಏನರ್ಥ?’

ವಿಸ್ಮಿತನಾಗಿ ನಾನೆಂದೆ : “ಸ್ವಾಮಿ, ತಮ್ಮ ನಿಲುವಿಗೆ ವಿರುದ್ಧವಾಗಿ ನಾನು ಸಾಕ್ಷಿ ಹೇಳಿದ್ದೆ. ಅದರಿಂದ ತಮಗೆ ನೋವಾಗಿರಬಹುದು ಎಂದು ದೂರ ನಿಂತೆ, ಅಷ್ಟೆ’.

ಅದಕ್ಕೆ ಅವರ ಪ್ರತಿಕ್ರಿಯೆ ಅದ್ಭುತವಾಗಿತು : “ನನಗೆ ನೋವಾಗಲಿಲ್ಲ. ನಿಮ್ಮ ನಿಲುವು ಇಷ್ಟವಾಯಿತು. ಮುಖಕ್ಕೆ ತಕ್ಕ ಮಾತನಾಡುವ ವಿದ್ವಾಂಸರು ಬೇಕಾದಷ್ಟು ಮಂದಿ ಇದ್ದಾರೆ. ಯಾರ ದಾಕ್ಷಿಣ್ಯಕ್ಕೂ ಬಲಿಯಾಗದೆ ಸತ್ಯವನ್ನು ನಿಷ್ಠುರವಾಗಿ ಹೇಳುವ ನಿಮ್ಮಂಥ ವಿದ್ವಾಂಸರೆ ನನಗೆ ಇಷ್ಟ’. ವಾದಿರಾಜರ ಪೂರ್ಣಾನುಗ್ರಹಕ್ಕೆ ಪಾತ್ರರಾದ ಅವರಂಥವರು ಮಾತ್ರವೆ ಇಂಥ ಮಾತನ್ನಾಡಬಲ್ಲರು. ಅವರು ನಿಜವಾಗಿ ವಿಶ್ವೋತ್ತಮರು.

ಸಮಾಜಮುಖೀ ವಾದಿರಾಜರು

ಹೀಗೆ ತಲೆಮಾರಿನುದ್ದಕ್ಕೆ ತನ್ನ ತಪಃ ಪ್ರಭಾವವನ್ನು ಬೀರಿದ ಮಹಾಮಹಿಮರು ಶ್ರೀವಾದಿರಾಜರು. ಕೊನೆಯದಾಗಿ ಅವರ ಸಮಾಜ ಸುಧಾರಣೆಯ ಕೆಲವು ಪ್ರಮುಖ ಅಂಶಗಳನ್ನು ಇಲ್ಲಿ ನೆನೆಯಬೇಕು. ವಿಶ್ವತೋಮುಖೀಯಾದ ವಾದಿರಾಜರು ಸಮಾಜಮುಖೀಯಾದ ಬಗೆ, ಸಮಾಜದ ಸಾಮರಸ್ಯಕ್ಕೆ ಅವರು ನೀಡಿದ ಕೊಡುಗೆ ಅನನ್ಯ.

ಸ್ವರ್ಣಕಾರರಾದ ದೈವಜ್ಞ ಬ್ರಾಹ್ಮಣರು ವಾದಿರಾಜರ ತಪಃಶಕ್ತಿಯಿಂದ ಪ್ರಭಾವಿತರಾಗಿ ಅವರ ಶಿಷ್ಯರಾದರು. ಇಡಿಯ ದೈವಜ್ಞ ಬ್ರಾಹ್ಮಣ ಜನಾಂಗ ವಾದಿರಾಜರ ಅನನ್ಯ ಅನುಯಾಯಿಗಳಾದರು. ವಾದಿರಾಜರು ಅವರಿಗೆ ಮಾಧ್ವ ದೀಕ್ಷೆ ನೀಡಿದರು. ಇದು ಆ ಕಾಲದಲ್ಲಿ ಘಟಿಸಿದ ಒಂದು ಮಹಣ್ತೀದ ಸಂಗತಿ. ಇಡಿಯ ಒಂದು ಜನಾಂಗವನ್ನು ಮಾಧ್ವ ಸಂಪ್ರದಾಯದ ತೆಕ್ಕೆಗೆ ಒಳಪಡಿಸಿದ್ದು ಒಂದು ದೈವೀ ಘಟನೆ.

ಹಾಗೆಯೆ ಕೋಟೇಶ್ವರದ ಬ್ರಾಹ್ಮಣರು. ಅವರೂ ಮೂಲತಃ ಕೋಟದ ಸ್ಮಾರ್ತ ಪರಂಪರೆಗೆ ಸೇರಿದವರು. ಕೋಟದವರಂತೆ ತಮಗೂ ಗುರುಮಠವಿಲ್ಲ ಎಂದು ನಂಬಿ ಬದುಕಿದವರು. ಇಡಿಯ ಗ್ರಾಮಕ್ಕೆ ಗ್ರಾಮವೆ ಈ ನಂಬಿಕೆಗೆ ವಿರುದ್ಧವಾಗಿ ಸಿಡಿದೆದ್ದಿತು. ತಮಗೊಬ್ಬ ಮಾರ್ಗದರ್ಶಕ ಗುರು ಬೇಕು ಎಂದು ನಿರ್ಧರಿಸಿತು. ಪರಿಣಾಮವಾಗಿ ಕೋಟೇಶ್ವರದ ಸಮಗ್ರ ಮಂದಿ ಸ್ಮಾರ್ತ ಸಂಪ್ರದಾಯವನ್ನು ತೊರೆದು, ವಾದಿರಾಜರ ವ್ಯಕ್ತಿತ್ವದಿಂದ ಪ್ರಭಾವಿತರಾಗಿ ವಾದಿರಾಜರ ಶಿಷ್ಯರಾಗಿ ಮಾಧ್ವ ದೀಕ್ಷೆಯನ್ನು ಪಡೆದರು.

ವಾದಿರಾಜ ಗುಳ್ಳ

ಮಟ್ಟಿಯ ಬ್ರಾಹ್ಮಣರದು ಇನ್ನೊಂದೇ ಕಥೆ. ಯಾವುದೋ ಕ್ಷುದ್ರ ಕಾರಣಕ್ಕಾಗಿ ಪರಿಸರದ ಬ್ರಾಹ್ಮಣ ವರ್ಗ ಅವರನ್ನು ದೂರ ಇಟ್ಟಿತ್ತು.

ಗುಂಪನ್ನು ಒಡೆದು, ಜಗಳ ಮುಂದುವರಿಸಿ ಖುಶಿಪಡುವ ಕ್ಷುದ್ರ ಬುದ್ಧಿಯ ಮಂದಿಯನ್ನು ಸಮಾಜದಲ್ಲಿ ನಾವಿಂದೂ ನೋಡಬಹುದು. ಇಂಥವರು ಮಠಗಳಲ್ಲೂ ಸೇರಿಕೊಂಡು ತಮ್ಮ ಕೊಳಕು ಬುದ್ಧಿಯಿಂದ ಮಠದ ಪರಿಸರವನ್ನೂ ಕೆಡಿಸಿಬಿಡುತ್ತಾರೆ. ಪ್ರೀತಿಯ ಸಾಮರಸ್ಯವನ್ನು ಹಂಚಬೇಕಾದ ಮಠಗಳು ಇಂಥವರಿಂದ ಜಗಳದ ಕೇಂದ್ರಗಳಾಗಿ ಬಿಡುತ್ತವೆ. ಒಡಕಿನ ಬೀಜವನ್ನು ಬಿತ್ತುವ ಹೊಲಸು ಹೊಲಗಳಾಗಿ ಬಿಡುತ್ತವೆ.

ವಾದಿರಾಜರು ಇಂಥ ಕೊಳಕು ರಾಜಕೀಯ, ಮಠದ ಹತ್ತಿರ ಸುಳಿಯದಂತೆ ನೋಡಿಕೊಂಡರು. ಅವರು ಸಾಮರಸ್ಯದ ಸಂದೇಶವನ್ನು ಸಾರಿದರು. ಒಡೆದ ಬಗೆಯನ್ನು , ಮನೆಯನ್ನು ಒಂದುಗೂಡಿಸುವ ಹರಿಕಾರರಾದರು. ಅದಕೆಂದೆ ಅವರು ಮಟ್ಟಿಯ ಬ್ರಾಹ್ಮಣರನ್ನು ಮಡಿವಂತರ ತೆಕ್ಕೆಗೆ ಸೇರಿಸಿದರು. ಅಚ್ಚರಿಯೆಂದರೆ, ಆ ಕಾಲದಲ್ಲಿ ಅಭೋಜ್ಯವೆಂದು ನಂಬಲಾಗಿದ್ದ ಗುಳ್ಳದ ಬೀಜವನ್ನು ಅವರಿಗಿತ್ತು ಅದನ್ನು ಬೆಳೆಸುವಂತೆ ಪ್ರೋತ್ಸಾಹಿಸಿದರು. ಅವರು ಬೆಳೆದ ಗುಳ್ಳದ ರುಚಿಯಾದ ಹುಳಿಯನ್ನು ಶ್ರೀಕೃಷ್ಣನಿಗೆ ಸಮರ್ಪಿಸಿದರು. ಅಭೋಜ್ಯವಾಗಿದ್ದ ಗುಳ್ಳ (ಸಂಸ್ಕೃತದ ವೃಂತಾಕ) ವಾದಿರಾಜರಿಂದ ಭೋಜ್ಯವಾಯಿತು. ಪರ್ಯಾಯದ ಅಡುಗೆಯ ಅವಿಭಾಜ್ಯ ಅಂಗವಾಯಿತು. ಪಂಡಿತರು, ಧರ್ಮಶಾಸ್ತ್ರದಲ್ಲಿ ಹೊಸ ಅಮೆಂಡ್‌ಮೆಂಟ್‌ ಸೇರಿಸಿದರು. “ಬದನೆ ನಿಷಿದ್ಧವಾದರೂ ವಾದಿರಾಜ ಗುಳ್ಳ ತಿನ್ನಬಹುದು. ಏಕೆಂದರೆ ವಾದಿರಾಜರು ತನ್ನ ತಪೋಬಲದಿಂದ ಅದನ್ನು ಪಾವನಗೊಳಿಸಿದ್ದಾರೆ’.

ಮಟ್ಟಿಯ ಬ್ರಾಹ್ಮಣರು ಗೆದ್ದರು. ಮಟ್ಟಿಯ ಗುಳ್ಳವೂ ಗೆದ್ದಿತು. ವಾದಿರಾಜರ ಮನೋಬಲ-ತಪೋಬಲ ಎರಡೂ ಅನನ್ಯವಾದದ್ದು. ಸಂಪ್ರದಾಯವಾದಿಗಳ ಜತೆ ನವ್ಯ ಕವಿಗಳೂ ಹಾಡಿದರು –

ತಿನ್ನಬೇಡಿ ಗುಳ್ಳ
ತಿಂದರೆ ವಾದಿರಾಜಗುಳ್ಳ

Leave a Reply

Your email address will not be published. Required fields are marked *

Translate »